Showing posts with label ಮಧುರ ನನವು. Show all posts
Showing posts with label ಮಧುರ ನನವು. Show all posts

Wednesday, June 27, 2012

ಅಂಕೇಗೌಡ್ರ ಅಂಗಳದಲಿ..


ಅಂಕೇಗೌಡ್ರ ಅಂಗಳದಲಿ..

--------------------------
"ಮಾನವ ನಾಗಿ ಹುಟ್ಟಿದ್ಮೇಲೆ ಏನೇನ್ ಕಂಡಿ ಸಾಯೋತಂಕಾ ಸಂಸಾರದಲ್ಲಿ ಗಂಡಾಗುಂಡಿ.."
ಈಗ ಯಾರಾದರೂ ಮೇಲಿನಂತೆ ಕುಹಕ ಆಡಿದ್ರೆ ನಾ ಅಂಕೇಗೌಡ್ರನ್ನು ಕಂಡೆ ಅಂತ ಅಂದೇನು...!
ಕೆಲ ವ್ಯಕ್ತಿಗಳನ್ನು ಭೇಟಿಯಾದಾಗ , ಅವರ ಸಾಧನೆ ಕಣ್ಣಾರೆ ಕಂಡಾಗ ನಾವು ಬೆತ್ತಲಾದ ಅನುಭವ ವಾಗುತ್ತದೆ.
ನಮ್ಮ ಇಷ್ಟ ದೈವದ ಎದುರು ಕೈ ಮುಗಿದು ನಿಂತಾಗ ಉಂಟಾಗುವ ಭಾವ ಬೇರೆ.. ನಮ್ಮ ಹಾಗೆ ರಕ್ತಮಾಂಸ
ತುಂಬಿಕೊಂಡರೂ, ನಮಗಿಂತ ಒಂದು ಹಿಡಿ ತೂಕ ಛಲ, ಸಾಧಿಸುವ ಹಂಬಲ ಜಾಸ್ತಿ ತುಂಬಿಕೊಂಡವರನ್ನು
ಭೇಟಿಯಾದಾಗಲೂ ಈ ಭಾವ ಮೂಡುತ್ತದೆ... ಹೆಗಡೇಜಿ ಅಂಕೇಗೌಡ್ರ ಬಗ್ಗೆ ಪ್ರಸ್ತಾಪಿಸಿದಾಗ ಮೊದಲಿಗೆ
ಮನದಲ್ಲಿ ಮೂಡಿದ್ದು ಓರ್ವ ಸಾಧಾರಣ ಮನುಷ್ಯನ ಚಿತ್ರಣ, ಪುಸ್ತಕ ಸಂಗ್ರಹಕಾರ ಅನ್ನುವುದು. ಅಲ್ಪಸ್ವಲ್ಪ
ಉದಾಸೀನತೆಯಿಂದಲೇ ನಾ ಅವರನ್ನು ಭೇಟಿಯಾಗಲು ತಯಾರುಮಾಡಿಕೊಂಡೆ. ಅಂಕೇಗೌಡ್ರು ನೋಡಲು
ತೀರ ಸಾದಾ ವ್ಯಕ್ತಿ..ಇಷ್ಟೇಲ್ಲ ಸಾಧಿಸಿದರೂ ಸಮುದ್ರದ ಅಲೆ ಮುಂದೆ ನಿಂತ ವಿರಾಗಿಯ ಹಾಗೆ ಕಾಣುತ್ತಾರೆ..
ನಾ ಎಷ್ಟು ಕೊಟ್ಟೇನು..ನಿನ್ನ ಉಡಿಗೆ ಎಂಬ ವಿನೀತಭಾವ ಅವರಲ್ಲಿತ್ತು...ಅದು ನಿಜವೇ ನಾವೆಲ್ಲ ಸಮುದ್ರಕ್ಕೆ
ನಮ್ಮ ಬೊಗಸೆಯೊಳಗಿನ ನೀರು ಕೊಟ್ಟು ಏನೋ ದೊಡ್ಡ ದಾನಿಗಳಂತೆ ಪೋಸು ಕೊಟ್ಟವರು..!!
ಪುಸ್ತಕ ಸಂಗ್ರಹಣೆ ಈಗಿನ ಕಾಲದಲ್ಲಿ ಒಂಥರಾ ಹುಚ್ಚು ಹವ್ಯಾಸ.ಅದರಲ್ಲೂ ನವು ಕನ್ನಡದವ್ರು ಪುಸ್ತಕ ಕೊಂಡು
ಓದೋದು ಅಂದರೆ ಅದೊಂದು ದುಂದುವೆಚ್ಚ ಅಂತನೇ ತಿಳಿದವ್ರು..(ನಾನೂನು ಹಾಗೆಯೇ ಬಿಡ್ರಿ),ಇಂಥಾ ವಿಪರೀತ
ಸ್ಥಿತಿಯಲ್ಲಿ ಓರ್ವ ವ್ಯಕ್ತಿ ತನ್ನ ದುಡಿಮೆಯ ಬಹುಭಾಗ ಪುಸ್ತಕ ಸಂಗ್ರಹಣೆಗೆ ಮೀಸಲಿಟ್ಟುದುದು, ಆ ಹಂಬಲ ಪೂರೈಸಲು
ಆಸ್ತಿ ಮಾರಿದ್ದು,ಇವೆಲ್ಲ ವಿಚಿತ್ರ ಅನಿಸುತ್ತದೆ. ಆದ್ರೆ ಅಂಕೇಗೌಡ್ರು ಅಂತಹ ವಿಶಿಷ್ಟ ವ್ಯಕ್ತಿಗಳ ಸಾಲಿಗೆ ಸೇರುತ್ತಾರೆ.
ಅವರ ಪುಸ್ತಕ ಸಂಗ್ರಹಣೆಯಲ್ಲಿ ಏನುಂಟು ಏನಿಲ್ಲ..ಆಡು ಮುಟ್ಟದ ಸೊಪ್ಪಿಲ್ಲ ಅನ್ನುವುದಾದರೆ..ಅಂಕೇಗೌಡ್ರಬಳಿ
ಇರದ ಪುಸ್ತಕ ಇರಲಿಕ್ಕಿಲ್ಲ. ಬರೀ ಕನ್ನಡ ಮಾತ್ರವಲ್ಲ ಇಂಗ್ಲೀಷು, ಜರ್ಮನ್ ಭಾಷೇವು ಇದ್ವು. ಲೈಫ್ ಮ್ಯಾಗಜೀನು,
ಎನಸೈಕ್ಲೋಪಿಡಿಯ ಒಂದೇ ಎರಡೇ ..ನಾವು ಹುಟ್ಟುವ ಮೊದಲಿನ ಪುಸ್ತಕ/ಮ್ಯಾಗಜೀನ್ ಹಿಡಿದು ತೀರ ಇತ್ತೀಚೆಗಿನ
ಸಂಚಿಕೆ ಅಲ್ಲಿ ಕಂಡವು...


ಅವರ ಕೆಲಸ ಸುಲಭವಲ್ಲ. ಇನ್ನೂ ಪುಸ್ತಕಗಳ ಪಟ್ಟಿ ತಯಾರಿಸಿ ಒಪ್ಪವಾಗಿ ಜೋಡಿಸುವ ಕಾರ್ಯ ತುರ್ತಾಗಿ ಆಗಬೇಕಿದೆ
ಯಾವುದೋ ಸಂಸ್ಥೆ ಈ ಕೆಲಸ ಕೈಗೆತ್ತಿಕೊಂಡು ಸುರು ಮಾಡಿದೆ..ಆದರೆ ಕಾಲುಭಾಗದ ಪ್ರಗತಿನೂ ಇಲ್ಲ. ಮುಖ್ಯವಾಗಿ
ಈ ಕಾರ್ಯಕ್ಕೆ ಸಹಾಯಬೇಕು ಅಲ್ಲಿಯ ಲೋಕಲ್ ಧುರೀಣರು, ಎಂಎಲ್ಲೇಗಳು ಇಂಥಾ ಅಪರೂಪದ ಕೆಲಸಕ್ಕೆ ಮುಂದಾಗಬೆಕು
ಲೈಬ್ರರಿ ಸೈನ್ಸ ಓದುವ ವಿದ್ಯಾರ್ಥಿಗಳಿಗೆ ಇಲ್ಲಿಯ ಪುಸ್ತಕದ ಇಂಡೆಕ್ಸಿಂಗ್ ಕೆಲಸ ಪ್ರೊಜೆಕ್ಟ ಅಂತ ಕೊಡಬಹುದು.
ಬೆಂಗಳೂರು, ಮೈಸೂರಲ್ಲಿ ಅನೇಕ NGO ಇವೆ ಅವು ಈ ದೇಗುಲಕ್ಕೆ ಭೇಟಿಕೊಟ್ಟು ಇಲ್ಲಿಯ ಅಗತ್ಯ ಪೂರೈಸಬಹುದು.
ಅಂಕೇಗೌಡ್ರಿಗೆ ಬೆಂಬಲ ಬೇಕಾಗಿದೆ..ಅರಿತು ದುಡಿಯುವ ಕೈಗಳು ಬೇಕಾಗಿವೆ. ನಮ್ಮ ಕನ್ನಡ ವಿಶ್ವವಿದ್ಯಾಲಯದವರು,
ಸಾಹಿತ್ಯ ಪರಿಷತನವರು ಈ ಜಾಗೆಗೆ ಅವಶ್ಯವಾಗಿ ಭೇಟಿಕೊಡಬೇಕು. ಅಂಕೇಗೌಡ್ರು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ
ಇಂತಹ ಅಪರೂಪದ ವ್ಯಕ್ತಿ, ಅವರು ಸಂಗ್ರಹಿಸಿದ ಪುಸ್ತಕ ಭಂಡಾರ ನಮ್ಮ ನಡುವೆ ಇರುವುದೇ ಪುಣ್ಯ,










ಈ ರತ್ಣವನ್ನು ಪರಿಚಯಿಸಿದ ಬಾಲು ಸರ್ ಅವರಿಗೆ ಅನಂತ ಕೋಟಿ ವಂದನೆಗಳು.

Tuesday, June 28, 2011

ಜೋ ಜೋ ಲಾಲಿ..










ಈ ಜೀವಜಾತ್ರೆಯಲ್ಲಿ ನಾವು ನಿಜವಾಗಲೂ ಕಳೆದುಕೊಂಡಿದ್ದಂದರೆ ನಮ್ಮ ಬಾಲ್ಯ.
ಅದೆಂದೂ ಮರಳಿ ಬರಲಾರದು. ಬಾಲ್ಯದಲ್ಲಿ ಅನೇಕ ಸಂಗತಿಗಳು, ಗೆಳೆಯರ ಸಂಗ, ಆಟ ಅಮ್ಮನ
ಕೈತುತ್ತು ಅಕ್ಕರೆ. ಇವುಗಳಿಗೆ ಕಲಶವಿಟ್ಟಂತೆ ಅಮ್ಮ ಹಾಡುತ್ತಿದ್ದ ಲಾಲಿಹಾಡುಗಳು...!!
ನಿಜ ನಮ್ಮ ಮಲಗಿಸಲು ಅಮ್ಮ ಗುನುಗುತ್ತಿದ್ದ ಹಾಡಿನಲ್ಲಿ ಅದೆಂಥ ಇಂಪಿತ್ತು..ಹಾಗೆಯೇ ಒಂಥರಾ
ಸಮ್ಮೋಹನ ಆವರಿಸಿ ನಿದ್ದೆ ಕಣ್ಣು ತುಂಬಿಕೊಳ್ಳುತ್ತಿತ್ತು. ಅವಳ ಮಮತೆಯ ಮುಂದೆ ನಮ್ಮ ನೂರು ತಪ್ಪು
ಮಾಫ..! ಹೆತ್ತಮ್ಮಳ ಅಕ್ಕರೆ ಬಿಂಬಿಸಲು ಪದಗಳಿವೆಯೇ ಲಾಲಿ ಹಾಡು ನಮ್ಮ ಸಂಸ್ಕೃತಿಯ ಬಹು ಮುಖ್ಯ
ಅಂಗ. ಹೊರದೇಶದಲ್ಲಿ ಅದರಲ್ಲೂ ಪಾಶ್ಚಾತ್ಯರಲ್ಲಿ ಈ ಮಾರ್ದವತೆ ಇದೆಯೇ ನಾ ಅರಿಯೆ.
ನಮ್ಮ ಸಿನೆಮಾಗಳಲ್ಲಿ ಮಗು ಮಲಗಿಸುವಾಗ ನಾಯಕಿ ಅಥವಾ ಮತ್ತಾರೋ ಹಾಡಿಗೆ ದನಿಯಾಗಿದ್ದಾರೆ
ಕೆಲವೊಮ್ಮೆ ಪರಿಸ್ಥಿತಿಗೆ ಅನುಗುಣವಾಗಿ ನಾಯಕ ಸಹ ಲಾಲಿ ಹಾಡಿದ್ದಾನೆ..
ಈ ಹಾಡು ಸುಂದರ ಮಾತ್ರವಲ್ಲ ರಾತ್ರಿಯ ನೀರವತೆಯಲ್ಲಿ ಈ ಹಾಡು ಕೇಳಿದೆವಾದರೆ ಮುನಿಸಿಕೊಂಡ
ನಿದ್ದೆ ನಮ್ಮ ಅಪ್ಪುವುದರಲ್ಲಿ ಸಂಶಯ ವಿಲ್ಲ. ಅನೇಕ ಗೀತಕಾರರು ಈ ಹಾಡುಗಳ ಸಾಹಿತ್ಯದಲ್ಲಿ
ಅಂತಃಕರಣ ಉಣ್ಣಿಸಿದ್ದಾರೆ ಹಾಡಿದ ಗಾಯಕ/ಗಾಯಕಿಯರು ಅಮೃತ ಹರಿಸಿದ್ದಾರೆ ಅಂತೆಯೇ ಈ ಹಾಡುಗಳು
ಎಂದೆಂದೂ ಮರೆಯಲಾಗದುವು ಅವು ಅಮರ ಯಾಕೆಂದರೆ ತಾಯಿ ಎಂದಿಗೂ ಅಮರ ಅಲ್ಲವೇ..
ಈಗಲೂ ವಿವಿಧಭಾರತಿಯಲ್ಲಿ ಈ ಹಾಡು ತೇಲಿಬರುತ್ತದೆ. ಸೈಗಲ್ ನ ದನಿ ಮಾರ್ದವತೆ ಸೆಳೆಯುತ್ತದೆ..
"ಸೋ ಜಾ ರಾಜಕುಮಾರಿ ಸೋಜಾ..." ಅವನ ವಿಶಿಷ್ಟ ಕಂಠದಲ್ಲಿ ಈ ಹಾಡು ಇಂದಿಗೂ ಅಮರ.
ತಾಯಿ ಹೆಂಗಸು..ಹಾಗೆಯೇ ಲತಾಳ ದನಿ ನೂರೆಂಟು ತಾಯಿಯರಿಗೆ ದನಿಯಾಗಿದೆ. ಲಾಲಿಹಾಡು ಅವಳು
ಅನೇಕ ಹಾಡಿರಬಹುದು...ಎಷ್ಟೋಜನ ಮಕ್ಕಳು ರೇಡಿಯೋದಲ್ಲೋ,ರಿಕಾರ್ಡಿನಲ್ಲೋ ಅವಳ ಇಂಪಾದ ದನಿ
ಕೇಳಿ ನಿದ್ದೆಗೆ ಜಾರಿರಬಹುದು..ಅವಳ ಅಸಂಖ್ಯಾತ ಮುತ್ತುಗಳಲ್ಲಿ ಎರಡು ಲಾಲಿ ಹಾಡು ಆರಿಸಿರುವೆ--
"ಧೀರೆ ಸೆ ಆ ಜಾ ರೆ ಅಖಿಯನ್ ಮೆ ನಿಂದಿಯಾ ಆ ಜಾ " (ಚಿತ್ರ --ಅಲಬೇಲಾ--ಸಂಗೀತ ಚಿತಲಕರ್ ದು)
"ಆಜಾರಿ ಆಜಾ ನಿಂದಿಯಾ ತೂ ಆ.."(ಚಿತ್ರ-- ದೋ ಬಿಘಾ ಜಮೀನ್ -- ಸಂಗೀತ ಸಲೀಲ್ ದಾ).
ಗುಡಿಯಲಿರುವ ದೇವರಿಗೂ ಈ ಲಾಲಿಹಾಡು ಪ್ರಿಯ. ಸಾಮಾನ್ಯವಾಗಿ ದೇವರಿಗೆ ಕಾಕಡಾರತಿ, ಮಂಗಳಾರತಿ
ಮತ್ತು ಶೇಜಾರತಿ ಅಥವಾ ಶೈಯ್ಯಾರತಿ ಹೀಗೆ ಮೂರುವಿಧ ಆರತಿ ವಿಧಾನಗಳು. ದೇವರಿಗೂ ನಿದ್ದೆ ಬೇಕು
ಅನ್ನುವುದು ಒಂದು ಸುಂದರ ಭಾವ. ಮರಾಠಿಯಲ್ಲಿ ಅದರಲ್ಲೂ ಪ್ರಸಿದ್ಧ ದೇವರಿಗೆ ಈ ರೀತಿ ಶೈಯ್ಯಾರತಿ ಹಾಡಿ
ಮಲಗಿಸುವ ಪರಂಪರೆ ಇದೆ..ಅರ್ಚಕ ಶೇಜಾರತಿ ಹಾಡಿ ಗರ್ಭಗುಡಿ ಬಾಗಿಲು ಹಾಕಿದರೆಂದರೆ ದೇವರಿಗೆ ಅಂದು
ಸಲ್ಲುವ ಎಲ್ಲ ಸೇವೆ ಸಮಾಪ್ತ ಅಂತ ಲೆಕ್ಕ. ಶಿವಾಜಿ ಗುರು ರಾಮದಾಸ್ ಬರೆದ ಹಾಡಿನಿಂದ ಈಗಿನ ಸಿನೇಮಾ
ಹಾಡಿನವರೆಗೂ ಮರಾಠಿಯಲ್ಲಿ ಲಾಲಿಹಾಡು ಇವೆ..ದೇವರಿಗೆ ಹಾಡಿದ ಕೆಲವು ಶೈಯ್ಯಾರತಿಗಳು..
"ಬಾಳಾ ಜೋ ಜೋರೆ ರಘುರಾಯಾ ದಶರಥ ನಂದನ..."
"ನವಖಳಾಂಚ ಪಲ್ಲಂಗ ಶಾಂತೇ ಶೋಭತೋ ಭರಾ ಮಾತೆ ಶಯನ ಕರಾ..."(ದುರ್ಗಾದೇವಿ ಶೈಯ್ಯಾರತಿ)
ಮರಾಠಿಗರ ಪ್ರಭಾವದಿಂದ ನಮ್ಮಲ್ಲೂ ಅನೇಕ ಶೇಜಾರತಿಗಳಿವೆ ಮುಖ್ಯವಾಗಿ ದತ್ತಾತ್ರೇಯನನ್ನು ಕುರಿತು..
"ನರಸಿಂಹ ಸರಸ್ವತಿ ಧರಿಸಿ ಮನದಲಿಪ್ರೀತಿ ಭರದಿ ಬೆಳಗುವೆ ಶೈಯ್ಯಾರತಿ ಸ್ವೀಕರಿಸು ಯತಿಪತಿ..".
ಸಿನೇಮಾ ಹಾಡುಗಳ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಕನ್ನಡ ಹಿಂದಿ ಹಾಗೂ ಮರಾಠಿ ಹೀಗೆ ತಾಯಿಯ
ಲಾಲಿಗೆ ಭಾಷೆಯ ಬಂಧವಿಲ್ಲ.
೧)"ಲಲ್ಲಾ ಲಲ್ಲಾ ಲೋರಿ ದೂಧ್ ಕಿ ಕಟೋರಿ ದೂಧ ಮೆ ಬತಾಶಾ..." (ಮುಕೇಶ್)
೨) "ರಾಮ್ ಕರೆ ಐಸಾ ಹೋ ಜಾಯೆ ಮೇರಿ ನಿಂದಿಯಾ ತುಝೆ ಮಿಲ್ ಜಾಯೇ " (ಮುಕೇಶ್)
೩) "ಮೈ ಗಾವೂ ತುಮ್ ಸೋ ಜಾವೋ " (ರಫಿ)
೪) "ಆ ಜಾರಿ ಆ ನಿಂದಿಯಾ ತೂ ಆ " (ಕಿಶೋರ್)
೫) " ನಿಂಬೋಣೀಚಾ ಜಾಡಾ ಮಾಗೆ ಚಂದ್ರ ಝೋಪಲಾಗ ಬಾಯಿ.." (ಸುಮನ್ ಕಲ್ಯಾಣಪುರ್)
೬) " ಜೋ ಜೋ ಲಾಲಿ ನಾ ಹಾಡುವೆ ಚಿನ್ನ ನಿನ್ನ ಮುದ್ದಾಡುವೆ.."( ಜೇಸುದಾಸ್)
೭) "ಮಲಗು ಮಲಗು ಚಾರುಲತೆ ನಿನಗೂ ನೆರಳಿದೆ.."(ಎಸ್ ಪಿ ಬಿ)
೮) "ತುಸು ಮೆಲ್ಲ ಬೀಸು ಗಾಳಿಯೇ ಈ ಲಾಲಿ ಸುವ್ವಾಲಿ ಕಂದ ಕೇಳಲಿ"(ಚಿತ್ರ)
೯) "ಪವಡಿಸು ಪರಮಾತ್ಮ ಶ್ರೀ ವೆಂಕಟೇಶ..."(ಎಸ್ ಪಿ ಬಿ)
೧೦) "ಸುರಮಯಿ ಅಖಿಯೊಂಮೆ ನನ್ಹಾ ಮುನಾಃ ಸಪನಾ ದೇ ಜಾರೆ..(ಜೇಸುದಾಸ್ )
೧೧) 'ವಟಪತ್ರ ಶಾಲಕಿ ಭೂಮಾತ ಲಾಲಿ....(ಪಿ. ಸುಶೀಲ)
ಇದೆಲ್ಲವುಗಳಿಗೆ ಕಲಶ ಇಟ್ಟಹಾಗೆ ನಮ್ಮ ಕೆ ಎಸ್ ನ್ ಬರೆದ "ಅತ್ತಿತ್ತ ನೋಡದಿರು..
ಅತ್ತು ಹೊರಳಾಡದಿರು ನಿದ್ದೆ ಬರುವಳು ಹೊದ್ದು ಮಲಗು ಮಗುವೆ..."
ಈ ಹಾಡು ಮೂಲಗಾಯಕಿ ಸುಲೋಚನ ದನಿಯಲ್ಲಿತ್ತು. ಅದರ ಲಿಂಕ್ ಗಾಗಿ ಬಹಳ
ಕಷ್ಟ ಪಟ್ಟೆ ಸಿಗಲಿಲ್ಲ..
ಇನ್ನು ಅನೇಕ ಹಾಡುಗಳಿರಬಹುದು ನೆನಪಾದದ್ದು ಬರೆದಿರುವೆ. ಲಾಲಿ ಹಾಡು, ಅಮ್ಮ , ಹಿತವಾದ
ನಿದ್ದೆ ಎಲ್ಲ ಕಳಕೊಂಡು ಬಾಳುವ ಈ ಭಂಡ ಬಾಳು ಯಾಕಾಗಿ..??

Sunday, May 22, 2011

ದೆವ್ವಗಳ ಹಾಡುಗಳು...!!




ಈ ಶೀರ್ಷಿಕೆ ಓದಿ ಆಶ್ಚರ್ಯಗೊಳ್ಳಬಹುದು ಆದರೆಇದು ವಾಸ್ತವ ಹೌದು ನಮ್ಮ ಸಿನೇಮಾಗಳಲ್ಲಿ ಬಹಳ

ಹಿಂದಿನಿಂದಲೂ ದೆವ್ವ ಹಾಡುತ್ತಿವೆ..ಹಾಗೂ ಆ ಹಾಡು ಹಿಟ್ ಸಹ ಆಗಿವೆ. ಇಲ್ಲಿ ಸಿನೇಮಾಜನ ಅವುಗಳಿಗೆ

ದೆವ್ವ ಅನ್ನುವ ಬದಲು ಅತೃಪ್ತ ಆತ್ಮ ಅಂತ ಕರೆದರು. ಈ ಹಾಡುಗಳ ವಿಶೇಷತೆ ಅನೇಕ ಇವೆ..

ಕೃತಕವಾಗಿ ಹಾಕಿದ ಸೆಟ್ಟು.., ಬಿಳಿಸೀರೆ ಧರಿಸಿದ ನಾಯಕಿ ,ಆ ನೀರವತೆಯಲ್ಲೂ ಸುಶ್ರಾವ್ಯವಾಗಿ ಕೇಳಿಬರುವ

ಹಿನ್ನೆಲೆ ಸಂಗೀತ, ಭಯ ಬೆವರು ಹೀಗೆ ಹತ್ತು ಹಲವು ಭಾವ ಮುಖದಲ್ಲಿ ತೋರುವ ನಾಯಕ. ಹೀಗೆ ಈ

ಹಾಡುಗಳಿಗೆ ಒಂದು ಫಾರ್ಮುಲಾ ಇತ್ತು. ಹಾಗೂ ಆ ಫಾರ್ಮುಲಾ ಯಶಸ್ವಿಯೂ ಆಗಿತ್ತು. ನಮ್ಮ ಭಾರತೀಯ

ಯಾವ ಭಾಷೆಯ ಚಿತ್ರವನ್ನೇ ತಗೊಂಡರೂ ಅಲ್ಲಿ ಈ ಬಗೆಯ ಹಾಡು ಇದ್ದೇ ಇರುತ್ತವೆ.


ರಾತ್ರಿವೇಳೆ ಯಾಕಾಗಿ ಈ ಹಾಡು ಅವುಗಳ ಉದ್ದೇಶ ಏನು ? ಮುಖ್ಯವಾಗಿ ನಾಯಕನಿಗೆ ದಿಗಿಲು ಹುಟ್ಟಿಸುವುದು

ನಾಯಕ ಟಾರ್ಚು ಹಿಡಿದುಕೊಂಡು ಹಾಡಿನ ಜಾಡು ಬೆಂಬತ್ತಿ ಬಿಳಿಸೀರೆ ಧರಿಸಿದ ಮೋಹಿನಿಯನ್ನು ಬೆನ್ನತ್ತುತ್ತಾನೆ.

ರಹಸ್ಯ ಭೇದಿಸದೆ ದಿಗಿಲುಗೊಳ್ಳುತ್ತಾನೆ. ಚಿತ್ರ ವೀಕ್ಷಿಸುತ್ತಿದ್ದ ಪ್ರೇಕ್ಷಕನೂ ನಾಯಕನ ಜೊತೆಗೂಡುತ್ತಾನೆ.

ಈ ಅತೃಪ್ತ ಆತ್ಮ ಅವುಗಳ ಮೇಲೆ ಚಿತ್ರಿತವಾದ ಹಾಡು ಹಿಟ್ ಅಂತ ಮೊದಲೇ ಹೇಳಿರುವೆ. ಇನ್ನೊಂದು ವಿಶೇಷ

ಅಂದರೆ ಹೆಚ್ಚಿನವುಗಳು ಲತಾ ಹಾಡಿದ್ದು. ಸುಮಾರು ಅರವತ್ತು ವರ್ಷಗಳ ಹಿಂದೆ ತೆರೆಕಂಡ "ಮೆಹಲ್" ಚಿತ್ರದ

"ಆಯೇಗಾ ಆಯೇಗಾ ಆನೇವಾಲಾ ಆಯೇಗಾ.."ಹಾಡು. ಲತಾಳ ದನಿ ತೀರ ಎಳಸು ಅನಿಸುತ್ತದೆ ಈ ಹಾಡಿನಲ್ಲಿ.

ಮಧುಬಾಲಾಳ ಮಾದಕ ಚೆಲುವು, ಅಶೋಕ್ ಕುಮಾರನ ದಿಗಿಲು ತುಂಬಿದ ಮುಖ ಒಟ್ಟಿನಲ್ಲಿ ಈ ಹಾಡು ಒಂಥರಾ

ಟ್ರೆಂಡ್ ಸೆಟರ್. ಹಾಡಿನ ಸಾಲು ಸಹ ಎಷ್ಟು ಚಂದ..."ತರಸಿ ಹುಯಿ ಜವಾನಿ ಮಂಜಿಲ್ ಕೋ ಢುಂಡತಿಹೈ

ಮಾಜಿ ಬಗೈರ್ ನೈಯ್ಯಾ ಸಾಹಿಲ್ ಕೊ ಢುಂಡತಿಹೈ.."



ಅನೇಕ ಹಾಡಿವೆ. ಒಂದು ವಿಶೇಷದ್ದು. ಮುಬಾರಕ್ ಬೇಗಂ ಎನ್ನುವ ಗಾಯಕಿ ಹಾಡಿದ್ದು--"ಹಮಾರಿ ಯಾದ್ ಆಯೇಗಿ"

ಚಿತ್ರದ್ದು. "ಕಭಿ ತನಹಾಯಿಮೆ ಯೂಂ ಹಮಾರಿ ಯಾದ್ ಆಯೇಗಿ..." ಮುಬಾರಕ್ ಬೇಗಂಳದ್ದು ಒಂಥರಾ ಶೀರು ದನಿ.

ಈ ಹಾಡಿಗೆ ಅವಳು ಜೀವತುಂಬಿದ್ದಳು. ಇದು ಒಂಥರಾ ಸೇಡಿನ ಹಾಡೇ..ಸಾಲು ಗಮನಿಸಿ.."ಯೇ ಬಿಜಲಿ ರಾಖ

ಕರಜಾಯೇಗಿ ತೇರೆ ಪ್ಯಾರ್ ಕಿ ದುನಿಯಾ ನ ತೂ ಜೀ ಸಕೇಗಾ ಔರ್ ನ ತುಜಕೊ ಮೌತ್ ಆಯೇಗಿ..".



ಹೇಮಂತ ಕುಮಾರ್ ಆರ್ಥರ್ ಕಾನನ್ ಡಾಯಲ್ ನ ಕಾದಂಬರಿ ಆಧರಿಸಿ ಒಂದು ಚಿತ್ರ ತೆಗೆದ--"ಬೀಸ್ ಸಾಲ್ ಬಾದ್".

ಈ ಚಿತ್ರದ ಥೀಮ್ ಸಾಂಗ್ "ಕಹಿ ದೀಪ್ ಜಲೆ ಕಹಿ ದಿಲ್ ಜರಾದೇಖಲೆ ಆ ಕರ್ ಪರವಾನೆ.."ಲತಾಳ ಅಧ್ಭುತ ಹಾಡು ಇದು.

ಅವಳ ದನಿಗೆ ಮಾರುಹೋಗಿ ಆ ದನಿ ಬಂದ ದಿಕ್ಕಿಗೆ ಹೋಗಿಬಿಡಬೇಕು ..ಅಂಥಾ ಸಮ್ಮೋಹಕ ಹಾಡು ಇದು.

ಈ ಚಿತ್ರದ ಯಶಸ್ಸಿನ ನಂತರ ಹೇಮಂತ್ ದಾ ಮತ್ತೆರಡು ಚಿತ್ರ ತೆಗೆದ-- "ಕೋಹರಾ" ಹಾಗೂ "ಬಿನ್ ಬಾದಲ್ ಬರಸಾತ್'.

ಕೋಹರಾ ಚಿತ್ರದ ಲತಾಳ ದನಿಯ "ಜುಂ ಜುಂ ಢಲತಿ ರಾತ್ .." ಹಾಡು ಕೇಳಿದರೆ ರೋಮಾಂಚನ ಆಗುವುದು ನಿಜ.

ಲತಾ ಮದನ್ ಮೋಹನ್ ಸಂಗೀತದಲ್ಲಿ ಹಾಡಿದ "ನೈನಾ ಬರಸೆ ರಿಮಝಿಮ್ ನೈನಾ ಬರಸೆ.." ಹಾಡು ಚಿತ್ರದ ಜೀವಾಳ.

ಅಂತೆಯೇ "ತು ಜಹಾಂ ಜಹಾಂ ಚಲೇಗಾ ಮೇರಾ ಸಾಯಾ ಸಾಥ್ ಹೋಗಾ.." ಹಾಡು ಆ ಸಿನೇಮಾಗಳಿಗೆ ಒಂದು

ಮೆರುಗು ಕೊಟ್ಟಿದ್ದವು. ಕೊಲೆ ಯಾರು ಮಾಡಿದ್ದು, ಕೊಲೆಗಾರ ಯಾರು ಎಂದು ನಾಯಕ ಮನೋಜ್ ಕುಮಾರ್

ತಲೆಕೆಡಿಸಿಕೊಳ್ಳುತ್ತಿರುವಾಗ ಶೂನ್ಯದಿಂದ ತೇಲಿ ಬರುವ ಹಾಡು "ಗುಮನಾಮ್ ಹೈ ಕೋಯಿ ಬದನಾಮ್ ಹೈ ಕೋಯಿ.."

ಪ್ರೇಕ್ಷಕನಲ್ಲಿ ನಡುಕ ಹುಟ್ಟಿಸುತ್ತದೆ. ಲತಾಳ ಕಂಠಸಿರಿ ಕೇಳಿಯೇ ಅನುಭವಿಸಬೇಕು..!


ಕೇವಲ ನಾಯಕಿ ಮಾತ್ರ ಹೀಗೆ ಅತೃಪ್ತಳಲ್ಲ. ಪ್ರೇಯಸಿಯನ್ನು ಪಡೆಯದ ನೋವಿನಲ್ಲಿಯೇ ಸಾಯುವ ನಾಯಕ ಅವನ

ತೃಷೆ ಹಾಡಾಗಿ ಮಾರ್ಪಟ್ಟು ನಾಯಕಿಯನ್ನು ಕರೆಯುತ್ತದೆ.." ಆ ಜಾ ತುಜ್ ಕೊ ಪುಕಾರೆ ಆ ಜಾ ಮೈ ತೋ ಮಿಟಾ ಹುಂ

ತೇರಿ ಚಾಹ್ ಮೇ.."
ರಫಿಯ ಈ ಹಾಡು ನೀಲಕಮಲ್ ಚಿತ್ರದ್ದು. ಹಾಗೆಯೇ ಕಿಶೋರ್ ಹಾಡಿದ "ಮೇರೆ ಮೆಹಬೂಬ್

ಕಯಾಮತ್ ಹೋಗಿ ಆಜ್ ರುಸವಾ ತೇರಿ ಗಲಿಯೊಂಮೆ ಮೊಹಬ್ಬತ್ ಹೋಗಿ...."
. ಕಿಶೋರ್ ಆ ಅತೃಪ್ತ ಆತ್ಮದ ನೋವಿಗೆ

ದನಿಯಾಗಿದ್ದ.

ಕನ್ನಡದಲ್ಲೂ ಇಂತಹ ಹಾಡುಗಳಿವೆ. ನನಗೆ ನೆನಪಿಗೆ ಬರುವುದು ಮೂರು ಹಾಡುಗಳು--

"ದೇವರಕಣ್ಣು" ಚಿತ್ರದ್ದು ಪಿ. ಸುಶೀಲಾ ಹಾಡಿದ ಹಾಡು "ಓ ಇನಿಯಾ ನೀ ಎಲ್ಲಿರುವೆ ನಿನಗಾಗಿ ನಾ ಕಾದಿರುವೆ..."

ಹಾಗೆಯೇ ಶಂಕರನಾಗ್ ನಿರ್ದೇಶನದಲ್ಲಿನ "ಜನ್ಮಜನ್ಮದ ಅನುಬಂಧ" ಚಿತ್ರದ ಎಸ್. ಜಾನಕಿ ಹಾಡಿದ

"ತಂಗಾಳಿಯಲ್ಲಿ ನಾನು ತೇಲಿ ಬಂದೆ ನಿನ್ನನ್ನು ಪ್ರೀತಿಯಿಂದ ಸೇರಲೆಂದೆ...". ಇನ್ನೊಂದು ಹಾಡಿದೆ ಅದೂ ಕೂಡ

ಜಾನಕಿ ಅವರೇ ಹಾಡಿದ್ದು "ಈ ಗುಲಾಬಿಯು ನಿನಗಾಗಿ ಅದು ಚೆಲ್ಲುವ ಪರಿಮಳ ನಿನಗಾಗಿ..." , ಇದು "ಮುಳ್ಳಿನಗುಲಾಬಿ"

ಚಿತ್ರದ್ದು.

ಇನ್ನೂ ಅನೇಕ ಹಾಡುಗಳಿರಬಹುದು. ನಾ ಮರೆತಿರಬಹುದು.

ಈ ಬಗೆಯ ಹಾಡುಗಳಿಗೆ ಅದರದೇ ಆದ ಛಂದ ಇದೆ ಲಾಲಿತ್ಯ ಇದೆ. ಅಂತೆಯೇ ಅವು ಅಮರ ಗೀತೆಗಳಾಗಿವೆ.

Friday, March 4, 2011

ದಾಸ್ತಾನ್-ಎ-ಶಾಮ್ ...





















ಸಂಧ್ಯಾಕಾಲ --ಮುಸ್ಸಂಜೆ--ನಮ್ಮ ಧಾರವಾಡದ ಕಡೆ ಹೇಳೂದಾದ್ರೆ ಮೂರುಸಂಜಿ. ಈ ಘಳಿಗೆ ಅಥವಾ ಸಮಯ
ಒಂಥರಾ ಸಂಧಿಕಾಲದ್ದು. ಹಗಲು ರಾತ್ರಿಗೆ ಕೈ ಕುಲುಕಲು ಈ ಸಮಯ ಸೇತುವೆ ಆಗುತ್ತದೆ. ಇದನ್ನು ದಾಟಿಯೇ
ಅವರ ಮಿಲನವಾಗುತ್ತದೆ.ಅಂದರೆ ಸಾಯಂಕಾಲ ಬಹು ಮುಖ್ಯಕಾಲ. ಇಂತಹ ಸಾಯಂಕಾಲ ನಮ್ಮ ಅನೇಕ ಗೀತೆಗಳಿಗೆ ಹಾಡುಗಳಿಗೆ ವೇದಿಕೆಯಾಗಿದೆ.
ನನಗೆ ನನ್ನ ಬಾಲ್ಯದ ನೆನಪು. ಸಂಜೆ ಆಗುತ್ತಿದ್ದಂತೆ ಆಟ ಮುಗಿಸಿ ಕೈ ಕಾಲು ತೊಳೆದು ಅವ್ವ ದೇವರ ಮುಂದೆ ದೀಪ
ಹಚ್ಚುವಾಗ ಕೈ ಮುಗಿದು "ಶುಭಂಕರೋತಿ ಕಲ್ಯಾಣಂ..." ಹೇಳುವುದು ರೂಢಿ. ಮುಂದೆ ಅಭ್ಯಾಸದ ಸಮಯ. ಹಳ್ಳಿಕಡೆ  ಹೊಲಕ್ಕೆ ಹೋಗಿದ್ದ  ದನಕರುಗಳು ,ರೈತರು ವಾಪಸ್ ಮನೆಗೆ ಬರುವ ಸಮಯ.
 ಗೋಧೂಳಿ ಅಂತ ಹಿರಿಯರು ಭಾಳ  ಸೊಗಸಾಗಿ ಹೆಸರು ಇಟ್ಟಾರ.
 ಈಗ ದಿನಾ ಬದಲಾಗ್ಯವ. ದುಡಿಯೋ ಧಾವಂತದಾಗ ಅನೇಕ ಹಗಲು ಒಮ್ಮೆಲೆ ರಾತ್ರಿ  ಆಗಿಹೋದ್ವು.
 ನಡುವ ಬರುವ ಸಂಜೆ ತನ್ನ ಇರುವು ಸಾರದೇ ಹಾಗೆಯೇ ಕರಗಿ ಹೋತು. ನನ್ನಂಥ ಬಿಎಮ್ ಟಿಸಿ ಪಯಣಿಗರ ಕತಿ ಅಂತು ಕೇಳಬ್ಯಾಡ್ರಿ. ಡ್ರೈವರ್ ಬಸ್ಸಿನ್ಯಾಗಿನ ದೀಪ ಹಚ್ಚಿದಾಗ ಗೊತ್ತಾಗ್ತದ ಸಾಯಂಕಾಲ ಆತು ಅಂತ
ಮನಿ ಮುಟ್ಟಿದಾಗ ಸಂಜೆ ಆಗಲೇ ರಾತ್ರಿಯ ತೆಕ್ಕೆಯಲ್ಲಿ ಕರಗಿ ಹೋಗಿರತದ. ಇರಲಿ ವಾಸ್ತವದ ಕಹಿ ಇದ್ದಿದ್ದ. ಸ್ವಲ್ಪ
ಕಲ್ಪನಾ ಲೋಕಕ್ಕೆ ಹೋಗೋಣು. ಸಂಜೆ ನಮ್ಮ ಅನೇಕ ಗೀತೆಗಳಿಗೆ ವೇದಿಕೆ ಅಂತ ಮೊದಲೇ ಹೇಳಿದೆ...
ಅನೇಕ ಸಿನೇಮಾ ದಾಗ ನಾಯಕ ಮೂರುಸಂಜಿನ್ಯಾಗ ತನ್ನ ಗೆಳತಿಯನ್ನು ನೆನೆಯೋದು...ಹಳೇ ಸಿನೆಮ ಆದ್ರೆ
ಸ್ಟುಡಿಯೋ ದ ಕೃತಕ ಸೆಟ್ ನಲ್ಲಿ ಓಡಾಡುತ್ತ ಹಲಬುತ್ತಿರುತ್ತಾನೆ. ಹೊಸ ಸಿನೇಮಾದಾಗೂ ಬದಲಾಗಿಲ್ಲ. ಅವಳಿಲ್ಲದೆ
ಬಂದ " ಈ ಸಂಜೆ ಯಾಕಾಗಿದೆ..." ಅನ್ನುವ ಮೂಲಭೂತ ಪ್ರಶ್ನೆ ಎತ್ತುತ್ತಾನೆ.

ಈ ಸಂಜೆ ಬರೇ ಸಿನೇಮಾ ಹಾಡಿಗೆ ಸ್ಫೂರ್ತಿ ಅಲ್ಲ , ಅನೇಕ ಕವಿಗಳು ಈ ಸಾಯಂಕಾಲದ ಬೇಗೆಗಳಿಗೆ ದನಿಯಾಗಿದ್ದಾರೆ.ಪ್ರಕೃರ್ತಿ ವರ್ಣನಾ ಮಾಡುವುದರ ಜೊತೆಗೆ ಅನೇಕ ಭಾವಗಳಿಗೆ ಕನ್ನಡಿ ಹಿಡಿದಿದ್ದಾರೆ.
ವರಕವಿಯ
 "ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ ಆಗ ಸಂಜಿ ಆಗಿತ್ತ..".
 ಎಂಥಾ ಸೊಗಸಾದ ಚಿತ್ರ  ಕೆಂಪಡರಿದ ಆಕಾಶ "ನಂಜ" ಹಿಡಿದವರಂಗ ಕಾಣಸ್ತದ.
 ರಾಷ್ಟ್ರಕವಿ ಹಿಂದಿಲ್ಲ. ತಮ್ಮ ನೆಚ್ಚಿನ ಕವಿಶೈಲದಲ್ಲಿ ಕುಳಿತು
ಸಂಜೆ ಸೊಬಗು ಅನುಭವಿಸುತ್ತ ಹೇಳಿದ ಮಾತು
.."ಪಶ್ಚಿಮ ಗಿರಿಶಿಖರದಲಿ ಸಂಧ್ಯೆಯ ರವಿ;
 ನಿರ್ಜನ ಕವಿಶೈಲದೊಳಬ್ಬನೆ ಕವಿ;
 ಮಲೆನಾಡಿನ ಬುವಿ ಮೇಲರುಣಚ್ಛವಿ;
ವಸಂತ ಸಂಧ್ಯಾ ಸುವರ್ಣ ಶ್ರಾಂತಿ ಅನಂತ ಶಾಂತಿ".

 ನಮ್ಮ ಇನ್ನೊಬ್ಬ ಹೆಮ್ಮೆಯ ರಾಷ್ಟ್ರಕವಿ ಸಂಜೆಯ ಸೊಬಗನ್ನು ಹೇಳುವ ಪರಿಯೇ ವಿಶಿಷ್ಟ. ಸಾಯಂಕಾಲದ
ತಳಮಳ ವನ್ನು ಶಕುಂತಲೆಯ ಒಳಗುಗಿಗೆ ತಳುಕು ಹಾಕಿ
"ಸಂಜೆ ಬಾನಿನಂಚಿನಲ್ಲಿ ಬಿದ್ದ ಬಿದಿಗೆ ಚಂದಿರ.."   ಎಂದು ಹೇಳುತ್ತಾರೆ. ತಮ್ಮ ಇನ್ನೊಂದು ಕವಿತೆಯಲ್ಲಿ
" ಶ್ರೀ ಹರಿಪಾದ ಅಪೂರ್ವ ಪಕ್ಷಿಯ ಹಾಗೆತೋರಿರಲು
 ದಟ್ಟ ಪೊದೆಗಳ ನಡುವೆ ,
 ಕೂಡಲೇ ಹೂಡಿ ಬಿಲ್ಲಿಗೆಬಾಣ ಬಿಟ್ಟನು ಗುರಿಗೆ,
  ತಾಗಿದ್ದೆ ತಡ ಛಿಲ್ಲೆಂದು ಚಿಮ್ಮಿತು ರಕ್ತ..ಕೆಂಪಾಯಿತು
  ನೀಲಿಯ ಗಗನ".

 ಅದೆಂತಹ ಅದ್ಭುತ ಕಲ್ಪನೆ. ಜಯಂತ ಕಾಯಕಿಣಿ ತಮ್ಮ "ಈಗ" ಅನ್ನುವ ಕವಿತೆಯಲ್ಲಿ ಮುಂಬಯಿ ಮಹಾನಗರಿಯ
ಚಿತ್ರಣ ಅದೆಷ್ಟು ಸೊಗಸಾಗಿ ನೀಡಿದ್ದಾರೆ. ಈ ಕವಿತೆಯ ಕೊನೆಯ ಸಾಲು..
"ಅಲ್ಲಿ ಕಾಮಾಟಿಪುರದಲ್ಲಿ
ಹದಿನೇಳರ ಬಾಲೆಯ ಹೊಟ್ಟೆಗೆ ಅವರು ಒದೆಯುತ್ತಾರೆ
ಬಿಡಿಸಿಕೊಳ್ಳಲು ನಾವಾರೂ ಅಲ್ಲಿಲ್ಲ..".

ಸಂಜೆ ವಾಸ್ತವ ವೇನು. ಬರೀ ಪ್ರಕೃರ್ತಿ ಬಣ್ಣ ಬದಲಾಯಿಸುವುದಲ್ಲ. ಬಿರುಬಿಸಿಲಲಿ ಬೆಂದ ಭುವಿ ಅರೆಗಳಿಗೆ ಕನಸಿನಲ್ಲಿ
ಮೈಮರೆಯುವ ಸಮಯ. ಮರಾಠಿ ಕವಿಗಳೂ ಈ ಸಂಜೆಯ ವರ್ಣನೆ ಹೀಗೆ ಮಾಡಿದ್ದಾರೆ..
"ಸಾಂಜ್ ಹೀ ಗೋಕುಳಿ ಸಾವಲಿ ಸಾವಲಿ..
ಸಾವಳ್ಯಾಚಿ ಜಣು ಸಾವಲಿ.."(ಸುರೇಶ್ ಭಟ್)

"ರಂಗಾಚ್ಯಾ ಹಾ ಉಘಡೂನಿ ಪಂಖಾ ಸಾಂಜ್ ಕುಣಿ ಹಾ ಕೇಲಿ.."(ಮಂಗೇಶ್ ಪಾಡ್ ಗಾಂವಕರ್)
"ಯಾ ಚಿಮಣ್ಯಾಂನೋ ಪರತ ಫಿರಾರೆ ಘರಾ ಕಡೆ ಆಪುಲ್ಯಾ.."(ಗದಿಮಾ).

ಸಿನೇಮಾ ಹಾಡಿಗಂತೂ ಈ ಸಾಯಂಕಾಲದ ವ್ಯಾಳ್ಯಾ ಒಂಥರಾ ಹೇಳಿಮಾಡಿಸಿದಂಗ. ನಾಯಕ ಮಹಾಶಯ ಅವಳನ್ನು ನೆನೆಯುತ್ತ ತೋಟದಲ್ಲೋ, ಸಮುದ್ರ ದಂಡೆಯಲ್ಲೋ ಅಥವ ಮನೆ ಮಾಳಿಗಿ ಮ್ಯಾಲೋ ಕೂತು ಹಾಡು
ಹೇಳತಾನ. ಹಿಂದಿ ಸಿನೇಮಾದಾಗ ಈ "ಶಾಮ್-ಎ-ಗಮ್" ಹಾಡುಗಳಿಗೆ ಲೆಕ್ಕವಿಲ್ಲ. ಬಹಳಷ್ಟು ಹಾಡು ವಿರಹುದುರಿ
ಹೆಚ್ಚಿಗೆ ಮಾಡುವಂತಹವು. ಶಾಮ್ ಅಥವಾ ಸಂಜೆ ಈ ಶಬ್ದ ಹಾಡಿನಲ್ಲಿ ನುಸುಳದಿದ್ದರೂ ಆ ಹಾಡು ಆನಾಯಕನ
ವೇದನೆ ಒಂಥರಾ ದುಃಖದ ಮಾಹೌಲ್ ನಿರ್ಮಿಸುತ್ತಿತ್ತು. ಕೆಲವೊಮ್ಮೆ ಸಂಜೆ ತುಂಟ ಗೀತೆಗಳಿಗೂ ವೇದಿಕೆಯಾಗಿದೆ..
ಈ ತುಂಟ ಗೀತೆಯ ಕ್ಲಾಸಿಕ್ ಉದಾಹರಣೆ ಗೀತಾಬಾಲಿ ಹಾಗೂ ಭಗವನ್ ಮೇಲೆ ಚಿತ್ರಿತವಾದ..
"ಶಾಮ್ ಢಲೆ ಮೇರೆ ಖಿಡಕಿ ತಲೆ ತುಮ್ ಸೀಟಿ ಬಜಾನಾ ಛೋಡದೋ....". ಈ ಹಾಡು ಎಂದೂ ಮರೆಯಲಾರದ್ದು.

ನಾ ಮೊದಲೇ ಹೇಳಿದಂತೆ ಹಾಡುಗಳು ಅನೇಕವಿವೆ. ಎಲ್ಲದರ ಪಟ್ಟಿ ಇಲ್ಲಿ ಬರೆಯುವುದು ಅಪ್ರಸ್ತುತ, ನನಗೆ ತೀರ
ಸೇರಿದ ಐದಾರು ಹಾಡು ಅವುಗಳ ಪಟ್ಟಿ ಕೊಟ್ಟಿರುವೆ....
೧) ಶಾಮೆ ಗಮ್ ಕಿ ಕಸಮ್ ಆಜ್ ಗಮಗೀನ್ ಹಮ್ (ತಲತ್ )
೨) ಫಿರ್ ವಹಿ ಶಾಮ್ ವಹಿ ಗಮ್ ವಹಿ ತನಹಾತಿ ಹೈ....(ತಲತ್)
೩) ಹುಯಿ ಶಾಮ್ ಉನಕಾ ಖಯಾಲ್ ಆ ಗಯಾ.. ಉಸೀ ಜಿಂದಗಿ ಕಾ ಸವಾಲ್ ಆ ಗಯಾ...(ರಫಿ)
೪) ಯೇ ಶಾಮ್ ಕಿ ತನಹಾಯಿಯಾಂ ಐಸೆ ಮೆ ತೇರಾ ಗಮ್ (ಲತಾ)
೫) ಕಹಿ ದೂರ್ ಜಬ್ ದಿನ್ ಢಲ್ ಜಾಯೇ(ಮುಕೇಶ್)
೬) ಖಾಲಿ ಹಾತ್ ಶಾಮ್ ಆಯಿ ಹೈ ಖಾಲಿ ಹಾತ್ ಜಾಯೇಗಿ..(ಆಶಾ).

ಈ ಲೇಖನದ ನಾ ಮೆಚ್ಚಿದ ಶಾಮ್ ಕುರಿತಾದ್ ಹಾಡು ಹಾಕಿರುವೆ....

Saturday, November 27, 2010

ಕುವೆಂಪು ಅಡ್ಡಾಡಿದ ಕುಪ್ಪಳಿಯಲ್ಲಿ...




ದಿ.೨೧ ರಿಂದ ೨೩ ರ ವರೆಗೆ ಕುಪ್ಪಳಿಯಲಿ ನಡೆದ ಕಥಾಕಮ್ಮಟದಲ್ಲಿ ಭಾಗವಹಿಸುವ
ಸದವಕಾಶ ಬಂದಿತ್ತು. ನನ್ನ ತಮ್ಮ ಚಾರುದತ್ತ ಈಗಾಗಲೇ ಇಂತಹ ಕಮ್ಮಟಗಳಲ್ಲಿ ಪಾಲ್ಗೊಂಡವ..ಮೊದಲೇ ಕಿವಿ ಮಾತು ಹೇಳಿದ್ದ ತೀರ ದೊಡ್ಡ ನಿರೀಕ್ಷೆ ಇಟ್ಟುಕೊಂಡು ಹೋಗಬೇಡ ಅಂತ. ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ಹೋಗುವ
ಬಸ್ಸು ಕುಪ್ಪಳಿಕ್ರಾಸ್ ಗೆ ನನ್ನ ಇಳಿಸಿದಾಗ ಗಂಟೆ ಮುಂಜಾನೆಯ ಒಂಬತ್ತಾಗಿತ್ತು. ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ, ಕುವೆಂಪು ಪ್ರತಿಷ್ಠಾನ, ಕುವೆಂಪು ಅಧ್ಯಯನ ಕೇಂದ್ರ ಕನ್ನಡ ವಿ.ವಿ ಹೀಗೆ ಮೂರು ಸಂಸ್ಥೆಗಳು  ಈ ಕಮ್ಮಟ
ಆಯೋಜಿಸಿದ್ದವು. ಹಾಗೂ ಇದು ಅವರ ಯಶಸ್ವಿ ಮೂರನೇ ವರ್ಷದ ಆಯೋಜನೆ.  ಊಟ ,ತಿಂಡಿ ಗಾಗಿ ತೀರ್ಥಹಳ್ಳಿಯಿಂದ ಬಂದ ಭಟ್ಟರು ಎಲ್ಲ ಶಿಬಿರಾರ್ಥಿಗಳ ತೂಕ ಎರಡು-ಮೂರುದಿನಗಳಲ್ಲಿ ಒಂದೆರಡು ಕೆಜಿ ಹೆಚ್ಚಿಗೆಯಾಗುವಂತೆ ನೋಡಿಕೊಂಡ್ರು....!

ನಮಗೆ ಓದಲು ಹಾಗೂ ನಮಗನಿಸಿದ ಟಿಪ್ಪಣಿ ಬರೆಯಲು ಮೊದಲೇ ಆಯ್ದ ಕತೆಗಳನ್ನು ಕಳಿಸಿಕೊಡಲಾಗಿತ್ತು.
  ಕೇವಲ ಮುವ್ವತ್ತು ಜನರಿಗೆ ಅವಕಾಶ ಅಂತ ಹೇಳಿದ ಆಯೋಜಕರು ಅವಕಾಶ ಕಲ್ಪಿಸಿದ್ದು ಸುಮಾರು ಐವ್ವತ್ತು ಜನರಿಗೆ. ನನ್ನಂತೆ ಪತ್ರಿಕೆ ಓದಿ ಅರ್ಜಿ ಹಾಕಿ
ಬಂದವರು ಕೇವಲ ಏಳೆಂಟು ಜನ ಉಳಿದೆಲ್ಲವರೂ ಆಹ್ವಾನಿತರು. ಅಂದರೆ ಕಾರ್ಯದರ್ಶಿಗಳ ಸ್ನೇಹಿತರು, ಅವರ ಶ್ರೀಮತಿಯರು  ಹೀಗೆ. ಬಹುಪಾಲು ಜನ ಅಧ್ಯಾಪಕರು. ಕತೆಗಳನ್ನು ಚರ್ಚೆ ನಡೆಯುವಾಗಲೇ ಓದುತ್ತಿದ್ದ ಮಹನೀಯರು. ಶಿಬಿರದ ನಿರ್ದೇಶಕರು  ಡಾ. ಕೆ ವಿ ನಾರಾಯಣ ಅವರು ಅವರ ಹೆಂಡತಿ (ದೋಪ್ದಿ ಕತೆಯ ಅನುವಾದಕಿ)ನೂ ಭಾಗವಹಿಸಿದ್ರು. ಉದ್ಘಾಟನೆ ಇತ್ಯಾದಿ ಮುಗಿದು ಶಿಬಿರದ ಆಶಯ ನಾರಾಯಣ ಅವರು ಹೇಳಿದ್ರು.
ಅವರ ಭಾಷೆ ತೂಕದ್ದು  ಬಳಸಿದ ಪದಗಳು ನನ್ನ ತಲೆಮೇಲಿಂದಲೇ ಹಾರಿಹೋದದ್ದೇ ಹೆಚ್ಚು. ನಾನು ಅರಿಕೆ ಮಾಡಿಕೊಂಡೆ..ಸಾದಾ ಸೀದಾ ಭಾಷೆ ಬಳಸಿ ಲೆಕ್ಕ ಪತ್ರ ಬರೆಯುವ/ನೋಡುವ ನನ್ನಂತಹದವರಿಗೆ ಇದು ಅರ್ಥ ಆಗೊಲ್ಲ ಅಂತ. ಬಹುಷ: ನಾರಾಯಣ ಅವರಿಗೆ ಇದು ಅಪಥ್ಯವಾಗಿತ್ತು..ಕಮ್ಮಟ ಮುಗಿಯುವವರೆಗೂ ಶೀತಲಸಮರ
ನಡೆದೇ ಇತ್ತು ನಮ್ಮಿಬ್ಬರ ನಡುವೆ. ನಾರಾಯಣ ಅವರೇ ಕತೆ ಆರಿಸಿದ್ದು ಆ ಕತೆಗಳ ಥೀಮ್ ಹೆಣ್ಣುತನ.ಇದನ್ನು ಬರೆದವರು ಲೇಖಕಿಯರು ಮಾತ್ರಅಲ್ಲ ಪುರುಷರು ಸಹ. ನಮ್ಮನ್ನು ಐದು ಆರು ಜನರ ಗುಂಪಾಗಿ ವಿಂಗಡಿಸಲಾಗುತ್ತಿತ್ತು. ಸುಮಾರು ಅರ್ಧಗಂಟೆ ನಮ್ಮನಮ್ಮಲ್ಲಿ ಚರ್ಚೆ ಮಾಡಿಕೊಂಡು ನಮ್ಮಲ್ಲಿಯೇ ಒಬ್ಬರು ಟಿಪ್ಪಣಿ
ಮಾಡಿಕೊಂಡು ನಮ್ಮ ಗುಂಪಿನ ನಿಲುವು ಕತೆಗಳ ಬಗ್ಗೆ ಹೇಳಬೇಕಾಗುತ್ತಿತ್ತು.ಪೂರಕವಾಗಿ ಉಳಿದವರು ಪ್ರಶ್ನೆ ಕೇಳುತ್ತಿದ್ದರು ಹಲವೊಮ್ಮೆ ನಾರಾಯಣ್ ಅವರೂ ಸಹ ಪ್ರಶ್ನೆಗಳ ಬಾಣ ಬಿಡುತ್ತಿದ್ದರು.ಪ್ರತಿಬಾರಿ ಚರ್ಚೆಗೆ  ಎರಡು ಕತೆ ಕೊಡಲಾಗುತ್ತಿತ್ತು. ನಮ್ಮ ಕನ್ನಡದ ಹೆಸರಾಂತರು ಬರೆದ ಕತೆಗಳು..ನಾ ಓದಿದಾಗ ನನಗನ್ನಿಸಿದ ಭಾವ ಬೇರೆ
ಆದರೆ ಗುಂಪಿನಲ್ಲಿ ಚರ್ಚಿಸಿದಾಗ ಅದು ಹೊಂದುವ ರೂಪವೇ ಬೇರೆ  ಈ ಮಾರ್ಪಾಟು ಅಚ್ಚರಿ ಗೊಳಿಸಿತ್ತು. ಆದರೆ
ಕಥೆಗಳನ್ನು ಮಥಿಸಿ ಮಥಿಸಿ ನೋಡಿದಾಗ ಸಿಗುವ ಆನಂದನೇ ಬೇರೆ...!

ನಾವು ಚರ್ಚಿಸಿದ ಕೆಲವು ಕತೆಗಳು ಹೀಗಿವೆ...

ಮೇಲೂರಿನ ಲಕ್ಷಮ್ಮ.....    ಮಾಸ್ತಿ
ಕರುಳ ಕತ್ತರಿ.......           ಶ್ಯಾಮಲಾ ಬೆಳಗಾಂವಕರ
ಹೊರಟು ಹೋದವನು---   ಡಾ. ವೀಣಾ ಶಾಂತೇಶ್ವರ್
ದೋಪ್ದಿ     -------         ಮೂಲ: ಮಹಾಶ್ವೇತಾ ದೇವಿ
ಕತೆಯಾದಳು ಹುಡುಗಿ--    ಯಶವಂತ  ಚಿತ್ತಾಲ
ದೇವರ ಹೂ------         ಡಾ. ಬೆಸಗರಹಳ್ಳಿ ರಾಮಣ್ಣ
ಶಕುಂತಲೆಯೊಂದಿಗೆ
ಕಳೆದ ಅಪರಾಹ್ನ-------   ವೈದೇಹಿ
ನಾಕನೇ  ನೀರು--           ನಾಗವೇಣಿ

ಕೊನೆಯ ಕತೆಯ ಲೇಖಕಿಯೂ ನಮ್ಮ ಜೊತೆಗಿದ್ರು.ನಮಗೆ ಮೂಡಿಬಂದ ಸಂದೇಹ ಅನುಮಾನ ಪ್ರಶ್ನೆಗಳಿಗೆ ಉತ್ತರಿಸಿದರು. ಹೀಗೆ ಬರೆದವರ ಜೊತೆ ಮುಖಾಮುಖಿ ಯಾಗುವುದು ಹೊಸ ಖುಷಿ ಕೊಟ್ಟಿತು.  ನಾಗವೇಣಿ ತಾವು
ಬೆಳೆದು ಬಂದ ಹಿನ್ನೆಲೆ ಮತ್ತು ಈಗಿನ ದಕ್ಷಿಣಕನ್ನಡ ಜಿಲ್ಲೆಯ ಪರಿಸ್ಥಿತಿ ಹೀಗೆ ವಿವರವಾಗಿ ಚರ್ಚಿಸಿದರು.ಕಮ್ಮಟದ
ಎರಡನೇ ದಿನ ಖ್ಯಾತ ಲೇಖಕ ಕುಂವಿ ಬಂದು ತಮ್ಮ ಅನುಭವ ಹಂಚಿಕೊಂಡಿದ್ದು ವಿಶೇಷವಾಗಿತ್ತು.ನಿರರ್ಗಳವಾಗಿ
ಮಾತಾಡೋ ಕುಂವಿ ಮಾತು ಕೇಳೋದು ಸೊಬಗು.

ಕೇವಲ ಧನಾತ್ಮಕ ಅಂಶ ಮಾತ್ರ ಹೇಳೋದಿಲ್ಲ.ಕಮ್ಮಟದಲ್ಲಿ ಹಲವಾರು ನ್ಯೂನತೆಗಳಿದ್ದವು.ಮುಖ್ಯವಾಗಿ ಅಭ್ಯರ್ಥಿಗಳ ಕೊರತೆ.ನಾ ಉಲ್ಲೇಖಿಸಿದ ಹಾಗೆ ಏಳೆಂಟು ಜನ ಅರ್ಜಿ ಗುಜರಾಯಿಸಿದವರು ಉಳಿದೆಲ್ಲ ಆಹ್ವಾನಿತರು.
ಹೀಗೆ ಬಂದವರು ತಾವೇ ಹೇಳಿಕೊಂಡಹಾಗೆ ಸಾಹಿತ್ಯದಲ್ಲಿ ಆಸಕ್ತಿಇದ್ದವರಲ್ಲ. ಸ್ನೇಹ ಪ್ರೀತಿಗೆ ಒತ್ತಾಯದಿಂದ ಮೂರುದಿನ ಚೇಂಜ್ ಅಂತ ಬಂದವ್ರು. ಕೆಲವರು ಕಾಲೇಜಿನ ಪ್ರೊಫೆಸರ್ರು. ಇನ್ನು ಚರ್ಚೆ ಏಕಮುಖವಾಗಿತ್ತು. ಯಾವಾಗ ಚರ್ಚೆಗೆ ತಳಹದಿಯಾಗಿ ಜಾತಿ ಮತ ಇರುತ್ತದೆಯೋ ಅಲ್ಲಿ ಅರ್ಥಪೂರ್ಣ ಚರ್ಚೆಯಾಗಲು ಸಾಧ್ಯವಿಲ್ಲ.
ಮೇಲಾಗಿ ನಾರಾಯಣ್ ಅವರು ಈಗಿನ ತಲೆಮಾರಿನ ವಸುಧೇಂದ್ರ,ಬೆಳಗೆರೆ,ಸುಮಂಗಲಾ ಮುಂತಾದವರ ಕೃತಿಗಳನ್ನು  ಸೀರಿಯಸ್ ಓದಿಗೆ ತಕ್ಕುದಲ್ಲ ಎಂದು ಅಪ್ಪಣೆ ಕೊಡಿಸಿದರು...! ಇನ್ನು ಭೈರಪ್ಪ ವೈಯುಕ್ತಿಕವಾಗಿ ಉದ್ಧಾರವಾದ್ರು.ನನ್ನ ಪರಿಸ್ಥಿತಿ ಅಭಿಮನ್ಯವಂತಾಗಿತ್ತು. ಕಾದಾಡುವುದು ವ್ಯರ್ಥ ಅಂತ ತಿಳಿದು ಮೌನಕ್ಕೆ ಶರಣಾಗಿದ್ದೆ.
ಓತಪ್ರೋತವಾಗಿ ದಲಿತ,ಸ್ತ್ರೀವಾದ, ಶೋಷಣೆ ಹೀಗೆ ಮಾತು ಹರಿದಿತ್ತು.ಅದು ಕಂಠ ಶೋಷಣೆಯೋ ಅಥವಾ ನನ್ನ
ಕರ್ಣಶೋಷಣೆಯೋ ಗೊತ್ತಾಗಲಿಲ್ಲ.

ಮೇಲಿನ ಎಲ್ಲ ಓರೆ ಕೋರೆಗಳ ನಡುವೆ ನಾ ಮೂರುದಿನ ಹಿತ ಅನುಭವಿಸಿದೆ. ಸುತ್ತ ಚಾಚಿದ ಹಸಿರು, ಆಹ್ಲಾದಕರ ಗಾಳಿ ವಾಹನಗಳ ಹೊಲಸಿಲ್ಲದೆ ನಳನಳಿಸುವ ರಸ್ತೆಗಳು. ಕುವೆಂಪು ಅಡ್ಡಾಡಿದ ದಾರಿ ಅವರ ಸಮಾಧಿ ಇರುವ
ಕವಿಶೈಲ. ಅಲ್ಲಿ ನಾವೆಲ್ಲ ಹಾಡುಹಾಡಿದ ಹುಣ್ಣಿಮೆಯರಾತ್ರಿ...ಮರುದಿನದ ಸೂರ್ಯೋದಯ. ಕುವೆಂಪು ಬಳಸೋ ಎಲ್ಲ ವಸ್ತುಗಳನ್ನು  ಜತನದಿಂದ ಕಾಪಾಡಿ ನೋಡುಗರಿಗೆ ಬೇರೆ ಲೋಕ ಪರಿಚಯಿಸೋ ಕವಿಮನೆ."ಬಾ ಫಾಲ್ಗುಣ ರವಿ...ದರ್ಶನಕೆ" ಬರೆದ ನವಿಲ್ ಗುಡ್ಡದ ಸೊಬಗು..,"ದೇವರು ರುಜು ಮಾಡಿದ" ಬರೆದ ಚಿಬ್ಬಲಗುಡ್ಡೆಯ ತುಂಗೆಯ
ಮನಮೋಹಕ ದೃಶ್ಯ...ಕಣ್ಣುತುಂಬ ತುಂಬಿಕೊಂಡು ನಲಿದೆ.

ಅಲ್ಲೆಲ್ಲೋ ದನಿಮೊಳಗುತ್ತಿತ್ತು..."ನೂರು ಮತದ ಹೊಟ್ಟ ತೂರಿ...ಎಲ್ಲ ತತ್ವದೆಲ್ಲೆ ಮೀರಿ...". ಅವರ ನೆಲದಲ್ಲಿ
ನೆರಳಬುಡದಲ್ಲಿ ಇದ್ದರೇನು..ಜಾತಿ ಪಂಥ ಹೀಗೆ ಭ್ರಾಂತಿಯ ಗೋಡೆ ಕಟ್ಟಿಕೊಂಡು..ಕಮ್ಮಟದ ನೆವದಲ್ಲಿ  ವಿಷಕಾರುತ
ಕುವೆಂಪು ಅವರ ನಿಜ ತತ್ವ ಅರಿಯದೇ ಇರುವ ದನಿಯೂ ಇತ್ತು.    

Saturday, November 13, 2010

ಎಂದೂ ಮರೆಯದ ಹಾಡು---೭



ಈ ಲೇಖನದ ಸರಣಿ ಬಹಳ ದಿನಗಳಿಂದ ಖಾಲಿ ಇತ್ತು.ಬಹುಷಃ ವಿಶೇಷವಾದ ಗೀತೆಗೆ ಕಾಯುತ್ತಿತ್ತೇನೋ... ಈ ಸಲ ನಾನು ಆರಿಸಿದ ಹಾಡು "ದೇವರ್ " ಚಿತ್ರದ್ದು.ಇದು ೧೯೬೬ ರಲ್ಲಿ ಬಂದಿದ್ದು. ಈ ಚಿತ್ರಕ್ಕೆ
ರೋಶನ್ ಸಂಗೀತವಿತ್ತು. ಹಿಂದಿ ಚಿತ್ರರಂಗದಲ್ಲಿ ಮದನಮೋಹನ್ ನಂತರ ಗಜಲ ಸಂಯೋಜಿಸಿದವರಲ್ಲಿ  ರೋಶನ್
ಹೆಸರು ಸಹ ಮೇಲ್ಪಂಕ್ತಿಯದು.ಈ ಹಾಡು ಮುಕೇಶ್ ಹಾಡಿದ್ದು. ಮುಕೇಶ್ ನೋವಿನ ಭಾವಗಳಿಗೆ ದನಿಯಾದವ.ಈ ಹಾಡಿನಲ್ಲಿ ನೋವಿನ ಜೊತೆಜೊತೆಗೆ ಒಂದು ತೆರನಾದ ಸಾತ್ವಿಕ ಆಕ್ರೋಶ ಇದೆ. ಈ ಗೀತೆಯ ಭಾವನೆಗಳ ಏರಿಳಿತಕ್ಕೆ
ಮುಕೇಶ್ ದನಿ ಮುಕುಟಪ್ರಾಯವಾಗಿದೆ.ಬಹುಷಃ ಹಿಂದಿ ಚಿತ್ರರಂಗದಲ್ಲಿ ಮುಕೇಶ್ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಂಡವರಲ್ಲಿ ರೋಶನ್ ಒಂದು ಕೈ ಮೇಲೆ ಅಂತ ಹೇಳಬಹುದು.ಈ ಹಾಡು ಬರೆದಿದ್ದು ಆನಂದ ಬಕ್ಷಿ. ಈ ಅಪ್ರತಿಮ ಗೀತಕಾರನ ಬಗ್ಗೆ ಒಂದೆರಡು ಸಾಲು..

ಆನಂದ್ ಬಕ್ಷಿ ಹುಟ್ಟಿದ್ದು ೨೧/೦೭/೧೯೩೦ ರಲ್ಲಿ..ರಾವಲ್ಪಿಂಡಿಯಲ್ಲಿ.  ಸ್ವಾತಂತ್ರ್ಯಪೂರ್ವದಲ್ಲಿ ನೇವಿಯಲ್ಲಿದ್ದ.ಬಟವಾರಾ
ನಂತರ ಅವರ ಕುಟುಂಬ ಭಾರತಕ್ಕೆ ಬಂತು.ಇಲ್ಲಿ ಸೈನ್ಯದಲ್ಲಿ ಕೆಲಸಕ್ಕೆ ಸೇರಿದ.ಬರೆಯುವ ,ಹಾಡುವ ಖಯಾಲಿ ಬಕ್ಷಿಗೆ. ೧೯೫೬ ರಲ್ಲಿ ಸುಮಾರು ಅರವತ್ತು ಗೀತೆಗಳ ಜೊತೆಗೆ ಮುಂಬಯಿಗೆ ಬಂದಿಳಿದ. ಸಂಘರ್ಷ ಫಲ ನೀಡಲಿಲ್ಲ
ಹಲವು ರಾತ್ರಿ ದಾದರ್ ಸ್ಟೇಶನ್ ನ ವೇಟಿಂಗ್ ರೂಮ್ ಗಳಲ್ಲಿ ಕಳೆದ.ಒಂದೆರಡು ಚಿತ್ರಗಳಿಗೆ ಹಾಡು ಬರೆಯುವ ಅವಕಾಶ ಸಿಕ್ಕಿತಾದರೂ ಅವು ಜನರ ನಾಲಿಗೆ ಮೇಲೆ ನೆಲೆಯೂರಲಿಲ್ಲ. ೧೯೬೫ ರಲ್ಲಿ ಎರಡು ಚಿತ್ರಗಳು--
"ಹಿಮಾಲಯ್ ಕಿ ಗೋದ್ ಮೇ",","ಜಬ್ ಜಬ್ ಫೂಲ್ ಖಿಲೆ " ಹಿಟ್ ಆದವು.ಹಾಡು ಮನೆಮಾತಾದವು.ಆನಂದಬಕ್ಷಿ
ಹಿಂತಿರುಗಿ ನೋಡಲಿಲ್ಲ. ಸುಮಾರು ೩೫೦೦ ಹಾಡು ಬರೆದ ಬಕ್ಷಿ ಹಿಂದಿಸಿನೇಮಾದ ಹೊಳೆಯುವ ನಕ್ಷತ್ರ.

ನಾ ಆರಿಸಿದ ಗೀತೆ ಅವರ ಪ್ರತಿಭೆಗೊಂದು ಉದಾಹರಣೆ. ಚರ್ವಿತಚರ್ವಣ ಅನ್ನಬಹುದಾದ ಸನ್ನಿವೇಶ. ನಾಯಕನಿಗೆ
ಮೋಸ ಆಗಿರುತ್ತದೆ.ತನ್ನ ದುಃಖ ತೋಡಿಕೊಳ್ಳಲು ಅವನಿಗೆ ಹಾಡೊಂದೇ ದಾರಿ.ಸರಿ ಹಾಡುತ್ತಾನೆ ತನ್ನೆದೆಯ ನೋವು ಹೊರಹಾಕುತ್ತಾನೆ. ಗೀತಕಾರ ಇಂತಹ ಮಾಮೂಲಿ ಸನ್ನಿವೇಶದಲ್ಲೂ ತನ್ನ ಪ್ರತಿಭೆ ತೋರಿಸಬೇಕು. ಆ ನೋವು ತಾನೇ ಅನುಭವಿಸಿದ ಹಾಗೆ ಬರೆಯಬೇಕು.ಬಕ್ಷಿ ಬರೆದ ಅಮರ ಗೀತೆಯಲ್ಲಿ ಇದೊಂದು.
www.mouthshut.com ದ ಸಮೀಕ್ಷೆ ಪ್ರಕಾರ ೨೦ ಸದಾಕಾಲದ ನೋವಿನ ದುಃಖದ ಹಾಡುಗಳಲಿ ಇದೂ ಒಂದು.
ಹಾಡಿನ ಪೂರ್ಣ ಪಾಠ ಕೊಟ್ಟಿರುವೆ. ಅಲ್ಪ ನಾದ ನಾನು ಈ ಗಜಲಿನ ಭಾವಾನುವಾದ ಸಹ ಮಾಡಿರುವೆ.
ನೋಡಿ ಓದಿ ತಿಳಿಸಿ ಹೇಗಿದೆ ಅಂತ....

ಮೊದಲು ಮೂಲ ಗೀತೆ.....

बहारोंने मॆरा चमन लूटकर खिजा को ये इलझाम क्युं दे दिया
किसीने चलॊ दुश्मनी की मगर इसे दोस्ति नाम क्युं  दे दिया

मै समझा नहिं ऐ मेरे हमनशिं सजा ये मीली है मुझे किसलिये
के साकीं ने लब से मेरे छीनकर किसि और को जाम क्युं दे दिया

मुझे क्या पता था कभि इश्क मे रकीबों कॊ कासिद बनाते नहीं
खता हॊ गई ए कासिद मेरे तेरे हाथ पैगाम क्युं दे दिया..

खुदाया यहां तेरे इनसाफ के बहुत मैने भी चर्चें सुने है मगर
सजा कि जगह एक खतावार कॊ भला तूने ईनाम क्युं दे दिया..


ನನ್ನ ಪ್ರಯತ್ನ  ಹೀಗಿದೆ.....

ನಾ ಬೊಗಸೆಯೊಡ್ಡಿದಾಗ ಮುಳ್ಳುಗಳನೇ ಸುರಿದ  ಆ ಚೈತ್ರ...
ಅಮಾಯಕ ಶಿಶಿರನ ಮೇಲೇಕೆ ಗೂಬೆ ಕೂರಿಸಿದ.

ನನ್ನಜೊತೆ ಹಗೆಸಾಧಿಸಿ ಕುಹಕಮಾಡಿದನು ಸಖ  ಆದರೆ
ಆ ನಾಟಕಕೆ.. ಗೆಳೆತನದ ಹೆಸರೇಕೆ  ಹೇಳಿದ..

ನನ್ನಾವ ತಪ್ಪಿಗೆ ಈ ಪರಿ ಶಿಕ್ಷೆ ವಿಧಿಸಿತು ವಿಧಿ ಗೊತ್ತಾಗಲೇ  ಇಲ್ಲ
ಮಧುಬಟ್ಟಲನು ನನ್ನಿಂದ ಕಸಿದು ಅದನು ನಿನಗೇಕೆ ಕುಡಿಸಿದ..

ನನಗರಿವಾಗಲೇ ಇಲ್ಲ ಪ್ರೀತಿಯಲಿ.. ಸಖನೂ ದಾಯಾದಿಯಾಗುವನೆಂದು
ತಪ್ಪಾಯಿತು ..ನೋಡಿ ಸಖನ ಕೈ ತುಂಬ ಇದೆ ಕಲೆ ನನ್ನದೇ ರಕ್ತದ...

ದೇವ ನಿನ್ನ ನ್ಯಾಯಪರತೆಯ ಬಗ್ಗೆ ನಾ  ಹಲವರಿಂದ ಕೇಳಿದ್ದೆ...
ನೋಡೀಗ ವಂಚಕನ ಕೊರಳಲಿ ಹೂಮಾಲೆ ರಾರಾಜಿಸುದುದ...

ಆನಂದ್ ಬಕ್ಷಿ ತನ್ನ ಗಜಲ್ ದಲ್ಲಿ "ರಕೀಬ್ " ಹಾಗೂ "ಕಾಸಿದ್" ಎಂಬ ಶಬ್ದಗಳನ್ನು  ಬಳಸಿಕೊಂಡಿದ್ದಾರೆ.
ನನಗೆ ಅವುಗಳ ಅರ್ಥ ಗೊತ್ತಿರಲಿಲ್ಲ. ಕೊನೆಗೆ "ಬಜ್" ನಲ್ಲಿ ಪ್ರಶ್ನೆ ಮುಂದಿಟ್ಟಾಗ ಶ್ರೀಯುತ ಗೋರೆ, ಆಜಾದ್ ಹಾಗೂ
ಸುರೇಶ್ ಹೆಗಡೆ ಯವರು ನೆರವಾದರು, ಅವರ ಸಹಾಯಕ್ಕೆ ವಂದನೆ ಹೇಳುವೆ.


  

Saturday, October 2, 2010

ಮೇರೆ ಯಾರ್ ಶಬ್ಬಾ ಖೈರ್...


ಸ್ವಲ್ಪ ದಿನಗಳ ಬಿಡುವಿನ ನಂತರ ನನ್ನ ಬ್ಲಾಗಿನಲ್ಲಿ ಮತ್ತೆ ಆ ಹಳೆಯ ದಿನಗಳ ಬಗ್ಗೆ ಹೇಳುತ್ತಿರುವೆ. ಹಿಂದಿ ಸಿನೇಮಾದ ಸುವರ್ಣ ಯುಗವದು ಅಲ್ಲಿ ಪೈಪೋಟಿ ಇತ್ತು ಆದರೆ ಕಾಲೆಳೆಯುವ ಹೊಲಸುತನ ಇರಲಿಲ್ಲ.
ಹಾಡು ಹುಟ್ಟುತ್ತಿದ್ದವು ಜನರ ನಾಲಿಗೆ ಮೇಲೆ ನಲಿದಾಡುತ್ತಿದ್ದವು ಆ ಹಾಡು ಆ ಸಂಗೀತ ಇಂದೂ ಇತಿಹಾಸದಲ್ಲಿ
ಸ್ಥಾಯಿಯಾಗಿವೆ ಅಂದರೆ ಅದರ ಹಿಂದಿನ ಪರಿಶ್ರಮದ ಫಲವೇ ಸರಿ. ಅನೇಕ ಹೊಳೆಯುವ ತಾರೆಗಳ ನಡುವೆ
ನಾ ಇಲ್ಲಿ ಹೇಳಹೊರಟಿದ್ದು ಹಸರತ್ ಜೈಪುರಿ ಬಗ್ಗೆ. ಹಿಂದಿ ಸಿನೇಮಾದ ಇತಿಹಾಸ ಗಮನಿಸಿದರೆ ಒಂದು ಕಾಂಬಿನೇಶನ್
ಗಮನ ಸೆಳೆಯುತ್ತದೆ ಅದೇ ರಾಜ್ ಕಪೂರ್---ಶಂಕರ್-ಜೈಕಿಶನ್--ಶೈಲೇಂದ್ರ--ಹಸರತ್ . ಈ ಒಂದು ಪ್ರತಿಭಾಚತುಷ್ಟಯ ೧೯೪೯ ರಿಂದ ೧೯೭೧ ರ ವರೆಗೆ ಬೇರ್ಪಡದೆ ಇತ್ತು. ಈ ಸಂಗಮದಲ್ಲಿ ಅಮೃತಬಿಂದು
ರೂಪದಲ್ಲಿ ಚಿತ್ರ ರಸಿಕರಿಗೆ ಹಾಡುದೊರೆತವು. ಸದಾ ಹಸಿರಾಗಿರುವ ಮನ ಆವರಿಸುವ ಹಾಡುಗಳು.

ಹಸರತ್ ನ ಮೂಲಹೆಸರು ಇಕಬಾಲ್ ಹುಸೇನ್ . ಜೈಪೂರದ ವಾಸಿ. ತನ್ನ ತಾತನಿಂದ ಉರ್ದು,ಪರ್ಸಿಯಾ ಭಾಷೆ ಕಲಿತುಕೊಂಡ. ೧೯೪೯ ಕ್ಕೆ ಮುಂಬೈಗೆ ಬಂದಿಳಿದ ಸುರುವಾತು ಮಾಡಿದ್ದು ಕಂಡಕ್ಟರ್ ಆಗಿ. ಶಾಯರಿ ಮಾಡುತ್ತಿದ್ದ ಒಂದು ಮುಶಾಯರಾದಲ್ಲಿ ಇವನ ಗಜಲ್ ಕೇಳಿದ ಪೃಥ್ವಿರಾಜ್ ಕಪೂರ್ ತನ್ನ ಮಗ
ರಾಜಕಪೂರ್ ನಿಗೆ ಪರಿಚಯಿಸುತ್ತಾನೆ.ರಾಜಕಪೂರ್ ಆ ದಿನಗಳಲ್ಲಿ ಬರಸಾತ್ ಎಂಬ ಚಿತ್ರದ ತಯಾರಿಯಲ್ಲಿದ್ದ.
ಹಸರತ್ ಆ ಚಿತ್ರಕ್ಕೆ "ಜಿಯಾ ಬೇಕರಾರ್ ಹೈ..."," ಛೋಡ್ ಗಯೆ ಬಾಲಮ್ " ಎಂಬ ಹಾಡು ಬರೆದ.
ಆರ್ ಕೆ ಬ್ಯಾನರ್ ಹಿಟ್ ಆತು ಅಂತೆಯೇ ಆ ಚಿತ್ರಕೆ ಸಂಗೀತ ನೀಡಿದ ಶಂಕರ್ ಜೈಕಿಶನ್ ,ಹಾಗೂ ಮತ್ತೊಬ್ಬ
ಗೀತಕಾರ ಶೈಲೇಂದ್ರ ಹಾಗೂ ಹಸರತ್. ಈ ಜೋಡಿ ಮನೆಮಾತಾಯಿತು.೧೯೭೧ ರವರೆಗೆ ಈ ಕಾಂಬಿನೇಶನ್
ಮೆರೆಯಿತು. ಜೈಕಿಶನ್ ನ ಸಾವು, ಆರ್ ಕೆ ಬ್ಯಾನರಿನ "ಮೇರಾ ನಾಮ್ ಜೋಕರ್ ","ಕಲ್ ಆಜ್ ಔರ್ ಕಲ್"
ಚಿತ್ರಗಳ ಸೋಲು ಜೋಡಿ ಮುರಿಯಲು ಕಾರಣವಾದವು.

ಸ್ವಭಾವದಿಂದ ಹಸರತ್ ರೋಮಾಂಟಿಕ್ ಮನುಷ್ಯ. ತನ್ನ ಹರೆಯದ ದಿನಗಳಲ್ಲಿ ನೆರೆಯಲ್ಲಿಯ
ರಾಧಾ ಎನ್ನುವ ಹುಡುಗಿಗೆ ಪ್ರೇಮ ಪತ್ರ ಬರೆದಿದ್ದ.ಅದು ಕವಿತೆಯ ರೂಪದಲ್ಲಿತ್ತು. ಮುಂದೆ ಆ ಕವಿತೆ ಸಂಗಮ್ ಚಿತ್ರದ "ಮೇರಾ ಪ್ರೇಮ ಪತ್ರ ಪಢಕರ್ ಕೆ ತುಮ್ ನಾರಾಜ್ ನ ಹೋನ" ಅಮರ ಗೀತೆಯಾಯಿತು. ಅಂತೆಯೇ
ಹೊಸ ಶಬ್ದ ಪ್ರಯೋಗದಲ್ಲಿಯೂ ಹಸರತ್ ಎತ್ತಿದ ಕೈ. ಈ ಲೇಖನದ ತಲೆಬರಹವೂ ಅವನ ಇಂತಹ ಪ್ರಯೋಗ.
ಗುಡ್ ನೈಟ್ ಶಬ್ದ "ಶಬ್ಬಾ ಖೈರ್" ರೂಪತಾಳಿದೆ. ಸಸುರಾಲ್ ಚಿತ್ರದ "ತೇರಿ ಪ್ಯಾರಿ ಪ್ಯಾರಿ ಸೂರತ್ ಕೊ.." ಈ
ಹಾಡಿನಲ್ಲಿ "ಚಷ್ಮೆ ಬದ್ದೂರ್.." ಎನ್ನುವ ಪದ ಬಳಸಿದ. ಆರಜೂ ಚಿತ್ರದ "ಐ ನರ್ಗಿಸೆ ಮಸ್ತಾನಾ..." ಹಾಡು ಸಹ
ಹೀಗೆಯೆ ಪದ ಪ್ರಯೋಗದ್ದು. ಆದರೆ ಹಸರತ್ ಬರೆದ ಹಾಡೂ ಸೆನ್ಸಾರ್ ಸುಳಿಗೆ ಸಿಕ್ಕಿತ್ತು ಅದು ಆದದ್ದು ಹೀಗೆ...
"ಜಿಸ್ ದೇಶ್ ಮೆ ಗಂಗಾ ಬೆಹತಿ ಹೈ" ಚಿತ್ರ. ರಸಿಕ ರಾಜಕಪೂರ್ ಗೆ ಪದ್ಮಿನಿಯನ್ನು ವಿಶೇಷವಾಗಿ ತೋರಿಸುವ
ಹಂಬಲ. ನೀರಿನಲ್ಲಿ ಮೀನಿನಂತೆ ಬಳಕುತ್ತ ಅವಳು ಪರದೆಯ ಮೇಲೆ "ಹೊಯ್ ಮೈನೆ ಪ್ಯಾರ್ ಕಿಯಾ " ಅಂದಾಗ
ಆಗಿನ ಹುಡುಗರ ಎದೆ ಹಾರಿದ್ದವು.ಇದೇ ಹಾಡಿನ ಒಂದು ಸಾಲು "ಧಿರೆ ಧಿರೆ ಆಖಿರ್ ಬಂದ್ ಕಲಿ ಮುಸ್ಕಾಯಿ.." ಈ
ಸಾಲಿಗೆ ಸೆನ್ಸಾರ್ ಆಕ್ಷೇಪ ಎತ್ತಿತು. ಹಸರತ್ ಆ ಸಾಲನ್ನು " ಮನ್ ಕಿ ಕಲಿ ಮುಸ್ಕಾಯಿ.." ಅಂತ ಬದಲಾಯಿಸಿ ಬರೆದ.
ಇತರೇ ಸಂಗೀತಗಾರರ ಜತೆಗೂ ಹಸರತ್ ಕೆಲಸಮಾಡಿದ್ದ. ಅದು ರಾಮಲಾಲ್ ಇರಬಹುದು.
ಅಥವಾ ಸಚಿನ್ ದೇವ್ ಬರ್ಮನ್ ಇರಬಹುದು..ಇವರ ಜೊತೆಗೂ ಹಿಟ್ ಹಾಡು ನೀಡಿದ್ದ. ಸೆಹರಾ ಚಿತ್ರದ
"ಪಂಖ್ ಹೋತಿ ತೋ ಉಡ್ ಆತಿರೆ..." ರಾಮಲಾಲ್ ಸಂಗೀತದ್ದು. ತೇರೆ ಘರ್ ಕೆ ಸಾಮನೆ ಯಲ್ಲಿ ದಾದಾ ಬರ್ಮನ್
ಜೊತೆ ಕೆಲಸ ಮಾಡಿದ್ದ. ಈ ಚಿತ್ರದ ಎಲ್ಲ ಹಾಡುಗಳೂ ಹಿಟ್ ಆಗಿದ್ದವು. ರೋಮಾನ್ಸ ಈ ಚಿತ್ರದ ಜೀವಾಳ..ರಫಿ ಹಾಡಿದ " ದಿಲ್ ಕಾ ಭವರ್ ಕರೆ ಪುಕಾರ್...", " ತು ಕಹಾ ಯೇ ಬತಾ ಇಸ್ ನಶೀಲಿ ರಾತ್ ಮೆ..". ಹಾಡಿನಲ್ಲಿ
ಅಮೃತಧಾರೆ ಇತ್ತು.

ಹಸರತ್ ಬರೆದ ಹಾಡುಗಳ ಪಟ್ಟಿ ದೊಡ್ಡದಿದೆ...ಹೆಕ್ಕಿ ಮುತ್ತುಗಳನ್ನು ಮಾತ್ರ ಆರಿಸಿರುವೆ..


೧) ಎಹಸಾನ್ ತೇರಾ ಹೋಗಾ ಮುಝ ಪರ್ ----ಚಿತ್ರ--ಜಂಗಲಿ

೨) ಆಂಸೂ ಭರಿ ಹೈ ಯೇ ಜೀವನ್ ಕೆ ರಾಹೆ---ಚಿತ್ರ-- ಪರ್ವರಿಷ್

೩) ಬೇದರ್ದಿ ಬಾಲಮಾ ತುಜಕೋ ಮೇರಾ ಮನ್ --ಚಿತ್ರ-- ಆರಜೂ

೪) ದಿಲ್ ಕೆ ಝರೋಕೆ ತುಜ್ ಕೊ ಬಿಠಾಕರ್ --ಚಿತ್ರ--ಬ್ರಹ್ಮಚಾರಿ

೫) ಮುಝಕೊ ಅಪನೆ ಗಲೆ ಲಗಾಲೋ ಐ ಮೇರೆ ---ಚಿತ್ರ--ಹಮ್ರಾಹಿ

೬) ತೇರಾ ಮೇರಾ ಪ್ಯಾರ್ ಅಮರ್ ಫಿರ್ ಕ್ಯೂಂ--ಚಿತ್ರ-- ಅಸಲಿ ನಕಲಿ

೭) ಮೇರಿ ಮೊಹಬ್ಬತ್ ಜವಾಂ ರಹೇಗಿ...ಚಿತ್ರ---ಜವಾ ಮೊಹಬ್ಬತ್

೮) ತುಮನೆ ಕಿಸಿಕೆ ಜಾನ್ ಕೊ ಜಾತೆಹುಯೆದೇಖಾಹೈ---ಚಿತ್ರ--ರಾಜಕುಮಾರ್

೯) ಜಾನೆ ಕಹಾಂ ಗಯೇ ವೊ ದಿನ್ ===ಚಿತ್ರ--ಮೇರಾ ನಾಮ್ ಜೋಕರ್

೧೦) ಸುನ್ ಸಾಯಿಬಾ ಸುನ್ ಪ್ಯಾರ್ ಕಿ ಧುನ್ --ಚಿತ್ರ--ರಾಮ್ ತೇರಿ ಗಂಗಾ ಮೈಲಿ


ಮೇಲಿನ ಪಟ್ಟಿಯಲ್ಲಿ "ಬಹಾರೋ ಫೂಲ್ ಬರಸಾವೊ","ಜಿಂದಗಿ ಎಕ್ ಸಫರ್ ಹೈ ಸುಹಾನಾ" ಸೇರಿಸಿಲ್ಲ,ಈ ಎರಡೂ
ಗೀತೆಗಳಿಗೆ ಹಸರತ್ ಗೆ ಫಿಲ್ಮ ಫೇರ್ ಪ್ರಶಸ್ತಿ ಸಿಕ್ಕಿತ್ತು. ಹಸರತ್ ಗೀತೆಗಳಲ್ಲಿ ಪ್ರೀತಿ ಇತ್ತು ಜೀವದ ಒರತೆ ಇತ್ತು
ರೋಮಾನ್ಸ ಇತ್ತು. ಶಾಯರಿ ದೃಷ್ಟಿಯಿಂದಾಗಲಿ,ಸಂದೇಶ ರೂಪದಲ್ಲಾಗಲಿ ಅವನ ಹಾಡು ಗಣನೆಗೆ ಬರಲಿಕ್ಕಿಲ್ಲ
ಆದರೆ ಯಶಸ್ಸಿನಲ್ಲಿ ಅವನ ಹಾಡು ಸದಾ ಮುಂದು.ವ್ಯವಹಾರದಲ್ಲೂ ಹಸರತ್ ಚುರುಕು. ಅಂತ್ಯಕಾಲದಲ್ಲಿ ನೆರವಿಗೆ
ಗೋಗರೆಯಬೇಕಾಗಲಿಲ್ಲ ಅವನಿಗೆ. ೧೯೯೯ ರಲ್ಲಿ ಹಸರತ್ ಇಲ್ಲವಾದ.

ಹಿಂದಿ ಸಿನೇಮಾದ ಅಸಂಖ್ಯ ತಾರೆಗಳಲ್ಲಿ ಹಸರತ್ ಒಬ್ಬ. ಮುಖ್ಯ ಎಂದರೆ ಕಾಲನ ಗತಿಗೆ ಈ ತಾರೆಯ ಹೊಳಪು
ಕುಂದಿಲ್ಲ.

Wednesday, July 21, 2010

ಬುತ್ತಿಗಂಟು

ಈ ಮಳೆ ಅದ ನೋಡರಿ ನನ್ನಂತಹವರಿಗೆ ನೆನಪಿನ ಬುತ್ತಿಗಂಟು ಬಿಚ್ಚಿಸೋ ವಸ್ತು. ಈ ಬೆಂಗಳೂರಾಗ ಇದ್ದು
ಒದ್ದಾಡಿಕೊತ ಆ ಮಳಿದಿನಗಳ ನೆನಪು ಮಾಡಿಕೊಳ್ಳುವುದು ಕಠಿಣ ಅದ. ಒಂದು ಮಳಿ ಬಂದ್ರ ಸಾಕು ಇಲ್ಲಿ ಮಂದಿ ಸ್ವೆಟರ್ರು,
ಮಫ್ಲರ್ರು ಹಾಕಿಕೊಂಡು ಅಡ್ಡಾಡತಾರ. ಮಳಿಯಾಗ ನೆನೆಯೋದು ಸಣ್ಣಾವರಿದ್ದಾಗ ಖುಷಿ ತರುವ ಸಂಗತಿ. ಆದ್ರ ನನ್ನ
ಬಾಲ್ಯದಾಗ ಆ ಸುಖಾನೂ ನಾ ಅನುಭವಿಸಿಲ್ಲ. ನನ್ನ ತಂದೆ ತೋರುತ್ತಿದ್ದ ಕಾಳಜಿಯ ಪ್ರಭಾವ ಅದು.ಅಂಗಳದಾಗ ಧೋ ಅಂತ
ಸುರಿಯೋ ಮಳಿ..ಅದರ ಸೊಗಸು ಅನುಭವಮಾಡೂದು ಬರೇ ನೋಡುವುದರಿಂದ...ಕಿಟಕಿಯೊಳಗ ಕೂತು ಮಳಿ ಅಂಗಳ
ತೊಳಿಯುವುದನ್ನ ಬೆರಗುಗಣ್ಣಿಲೆ ನೋಡುವ ಭಾಗ್ಯ ಮಾತ್ರ ನಂದು...! ಅಂಗಳದಾಗ ಹರನಾಳಿಗಿಲೆ ಸುರಿದ ನೀರು ..ಆ ನೆಲ
ಸೂಸುವ ವಾಸನಿ ಇನ್ನು ನೆನಪದ. ಮೊದಲನೆ ಮಳಿಗ್ರ್ ಮಾಳಿಗಿ ಮ್ಯಾಲಿನ ರಾಡಿ ಎಲ್ಲ ಕರಗಿ ಹರನಾಳಿಗಿಯಿಂದ ಸ್ವಲ್ಪಹೊತ್ತು
ಕೆಂಪು ನೀರು ಸುರೀಬೇಕು...ಆಮ್ಯಾಲ ಮಳಿ ಜೋರಾದ ಮ್ಯಾಲ ಹರನಾಳಿಗಿ ಮುಖ ತುಂಬಿ ನೀರು ಕಕ್ಕಬೇಕು. ಅಂಗಳದಾಗ
ತುಳಸಿಕಟ್ಟಿ ಹತ್ರ ಇದ್ದ ಮೋರಿ ಅದಕ್ಕ ಅಡ್ಡ ಆಗಿ ಯಾವಾಗಲೂ ಕಲ್ಲು ಆನಿಸಿರುತ್ತಿತ್ತು. ಮಳಿಬಂದಾಗ ಆನಿಸಿದ ಅಡ್ಡಕಲ್ಲು ಸರಿಸಿ
ನೀರು ಹರದುಹೋಗಲಿಕ್ಕೆ ಮೋಕಳಿಕಿ ಮಾಡಬೇಕು. ದೊಡ್ಡೊರು ಛತ್ರಿ ತಗೊಂಡು ಹೋಗಿ ಕಲ್ಲು ಸರಿಸಿ ಬರತಿದ್ರು...
ಯಾವಾಗರೆ ನನ್ನ ಪಾಳಿನೂ ಬರತಿತ್ತು ಧೋ ಅಂತ ಸುರಿಯೋ ಮಳಿಯಾಗ ಹೋಗಿ ಕಲ್ಲು ಸರಿಸಿ ಬರೋ ಖುಷಿ ಏನ ಹೇಳಲಿ..
ತೋಯಿಸಿಕೊಂಡು ಬಂದಿದ್ದಕ್ಕ ಮನ್ಯಾಗ ಬೈಸಿಕೊಳ್ಳುವುದು ಇತ್ತು..! ನಮ್ಮ ಅಪ್ಪ ವಿಪರೀತ ಕಾಳಜಿ ಮಾಡತಿದ್ದ ಸ್ವಲ್ಪ ಮಾಡ
ಹಾಕ್ತು ಅಂತ ಅಂದ್ರ ನಾ ಛತ್ರಿ ತಗೊಂಡು ಹೋಗಬೇಕು ಇದು ಅವನ ಹಟ. ಆವಾಗೆಲ್ಲ ಈಗಿನ ಬಟನ್ ಒತ್ತಿದ್ರ ತಕ್ಕೊಳ್ಳೊ ಛತ್ರಿ ಬಂದಿರಲಿಲ್ಲ. ಹಳೇ ಕಾಲದ ನನಗಿಂತಲೂ ಉದ್ದ ಇದ್ದ ಛತ್ರಿ ಹಿಡಕೊಂಡು ಅಡ್ಡಾಡೂದು ನನಗ ಅಪಮಾನ ಅನಿಸತಿತ್ತು.
ಮುಂದಿನ ಬಾಗಿಲಿಂದ ಅಪ್ಪನ ಒತ್ತಾಯಕ್ಕೆ ಮಣಿದು ಛತ್ರಿ ಹಿಡಕೊಂಡು ಹೋದ್ರು...ಹಿತ್ತಲಬಾಗಿಲಿನಿಂದ ಒಳಹೋಗಿ ಮತ್ತ
ಆ ಛತ್ರಿ ಬಾಗಿಲಸಂದಿಗೆ ಇಡತಿದ್ದೆ. ಎಷ್ಟೋಸಲ ಮಳ್ಯಾಗ ತೊಯಿಸಿಕೊಂಡು ಬಂದು ಅಪ್ಪನ ಕಡೆ ಹೊಡತ ತಿಂದಿದ್ದು ಅದ.
ಆದ್ರ ಛತ್ರಿ ಹಿಡಕೊಂಡು ಹೋಗೂದು ಇನ್ನೂ ನನಗ ಸೇರುವುದಿಲ್ಲ.

ನಮ್ಮ ವಾಡೆ ದುರ್ಗದಬೈಲಿಗೆ ಭಾಳ ಹತ್ರ. ಈ ಮಳಿಗಾಲದಾಗ ಸಾಲು ಸಾಲು ಹಬ್ಬ ಬರತಾವ.
ಮಣ್ಣೆತ್ತಿನ ಅಮಾಸಿ, ನಾಗ ಪಂಚಮಿ ಮತ್ತ ಕ್ರಿಷ್ಣಾಷ್ಟಮಿ.. . ಮನ್ಯಾಗ ಬಸವಣ್ಣ ತಯಾರು ಮಾಡಲಿಕ್ಕೆ ಮಣ್ಣು ಸಿಗತಿರಲಿಲ್ಲ
ಅಥವಾ ಅಂಥಾ ಕೌಶಲ್ಯನೂ ನಮ್ಮೊಳಗ ಇದ್ದಿರಲಿಲ್ಲ....ದುರ್ಗದಬೈಲಿನ್ಯಾಗ ಮಣ್ಣಿಲೆ ಮಾಡಿದ್ದ ಬಸವಣ್ಣ--ಅವಕ್ಕ ಅಂದವಾಗಿ
ಬಣ್ಣ ಹಚ್ಚಿರತಿದ್ರು. ಅವನ್ನ ತಗೊಂಡು ಬರುವ ಕೆಲಸ ನಮ್ಮದು. ದುರ್ಗದಬೈಲಿನ ತುಂಬ ಸಂಪಿಗೆ , ಮಲ್ಲಿಗೆ ,ಸೇವಂತಿಗೆ ಹೂಗಳ
ವಾಸನಿ...ಅದರ ಜೋಡಿ ಗುಲಬಿಯ ಘಮ. ಪೇರಲ ಹಣ್ಣಿನ ವಾಸನೆ ಒಂಥರಾ ಸುಗಂಧವಲಯ ಅಲ್ಲಿರತಿತ್ತು. ಅದರಲ್ಲೂ ಶ್ರಾವಣ ಮಾಸ ಸುರು ಇಟ್ರ ಬರುವ ಡೇರೆ ಹೂವು --ಅವು ಬೇರೆ ಬೇರೆ ಬಣ್ಣದಾಗ ಬರತಿದ್ವು. ಈ ಸುಗಂಧವಲಯದಲ್ಲಿ ನಾವು
ಆನಂದ ಅನುಭವಿಸುತ್ತಿದ್ದೆವು ಡೌಲಿನಿಂದ ಬಸವಣ್ಣ, ನಾಗಪ್ಪರ ಮಣ್ಣಿನ ಪ್ರತಿಮೆ ಹೊತ್ತು ಮನೆಗೆ ತರುತ್ತಿದ್ದೆವು.

ಲೆಮಿಂಗ್ಟನ್ ಹೈಸ್ಕೂಲು. ಸುಮಾರು ಐದಕ್ಕೆ ಸಾಲೆ ಬಿಡುತ್ತಿತ್ತು. ಮಳೆ ಬರುವ ಸೂಚನೆ ಇದ್ರೆ ಅದು ಬೇಗನೆ ಬಿಡೋದು.ಆಗ ಮೋಹನಟಾಕೀಸಿನ ಎದುರು ಒಂದು ದೊಡ್ಡ ಗಟಾರಿತ್ತು. ಮಳೆ ಸುರಿದು ನಿಂತರೂ ಅದರಲ್ಲಿ ನೀರು ಇನ್ನೂ
ಹರಿಯುತ್ತಲೇ ಇರುತ್ತಿತ್ತು. ಆ ನೀರ ಹರಿವು ನೋಡುತ್ತ ಇಳಿಜಾರು ಇಳಿದು ಮನೆ ಸೇರುವ ಸೊಗಸು. ಆ ಮಳಿ ಬಂದು ಹೋದ
ಮ್ಯಾಲ ಆಗುವ ಬದಲಾವಣೆ ಮುಖ್ಯವಾಗಿ ನೆಲದಿಂದ ಹೊಮ್ಮುವ ಕಮ್ಮನೆ ವಾಸನಿ. ಈಗ ಅದು ಅನುಭವಿಸಲಿಕ್ಕೂ ಸಾಧ್ಯಇಲ್ಲ
ಮೋಹನ ಟಾಕೀಸಿನ ಎದುರು ಅದೇ ಗಟಾರಿನ ಮೇಲೆ ಸಾಲು ಸಾಲು ಅಂಗಡಿಗಳು..ನಮ್ಮ ಆ ಹಳೆ ನೆನಪುಗಳ ಗೋರಿ ಮೇಲೆ
ಎದ್ದು ನಿಂತಹಂಗ. ಏನು ಮಾಡೋದು ಆ ನೆನಪು ಮಾತ್ರ ಈಗ ನನ್ನ ಆಸ್ತಿ..!

Sunday, March 14, 2010

ಸದಾ ಕಾಡುವ ಹಾದು----೬



" ಯಾ ದಿಲ್ ಕಿ ಸುನೊ ದುನಿಯಾವಾಲೊಂ....."
ಈ ಹಾಡು ನನ್ನನ್ನು ಯಾವಾಗಲೂ ಕಾಡುತ್ತದೆ ಕಾರಣ ಇದೇ ಅಂತ ಹೇಳೋ ಹಾಗಿಲ್ಲ ಹಲವುಸಂಗತಿಗಳಿವೆ ಒಂದು ಉತ್ತಮ ಚಿತ್ರ---ಅನುಪಮಾ----ಹೆಸರಿಗೆ ತಕ್ಕಂತೆ ಉಪಮೆ ಮೀರಿದ್ದು. ಮನ ಕಲಕುವ
ಸಾಹಿತ್ಯ---ಕೈಫಿ ಅಜ್ಮಿ ದು----ಆಳ ಆದರೆ ಅಷ್ಟೇ ನಿರ್ವಿಕಾರವಾದ ದನಿಯ ಒಡೆಯ ಹೇಮಂತಕುಮಾರ್ ಗಾಯನ---
ಕುಂದಣವಿಟ್ಟಂತೆ ಹೇಮಂತದಾ ನದೇ ಸಂಗೀತ.

ಹೃಷಿಕೇಶ್ ಮುಖರ್ಜಿ ಹಿಂದಿಚಿತ್ರರಂಗದ ಸಂವೇದನಾಶೀಲ ನಿರ್ದೇಶಕ. ಹೆಣ್ಣು ಹಾಗೂ ಅವಳ ಭಾವ
ಲೋಕ ಅವರು ಚಿತ್ರಿಸಿದ ರೀತಿ ಅನನ್ಯ. ಅದು ಅನಾಡಿ ಚಿತ್ರದ ಮಿಸೆಸ್ ಡೀಸಾ ಆಗಿರಬಹುದು, ಅಥವಾ ಅನುಪಮ ಚಿತ್ರದ ಅನುಪಮಾಳ ಪಾತ್ರ ಆಗಿರಬಹುದು ಹೃಶಿದಾನ ಕುಸುರಿತನ ಹೊಳೆಯುತ್ತದೆ. ಸಂವೇದನೆ ಅವನ ಚಿತ್ರದ ಜೀವಾಳ ಆಗಿದ್ವು
೭೦ ರ ದಶಕದಲ್ಲಿ ಕಾಮೆಡಿ ಚಿತ್ರದತ್ತ ಅದ್ಯಾಕೆ ಹೊರಳಿದರೋ ಗೊತ್ತಿಲ್ಲ. ಅನುಪಮ ಒಂದು ನಿಷ್ಪಾಪ ಹುಡುಗಿಯ ಕತೆ ಅವಳನ್ನು
ಹೆತ್ತು ಅವಳ ತಾಯಿ ಪ್ರಾಣಬಿಡುತ್ತಾಳೆ. ಹೆಂಡತಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅಪ್ಪನಿಗೆ ಮಗಳನ್ನು ಕಂಡರೆ ಆಗೊಲ್ಲ...ಒಂಥರಾ
ಮುರುಟಿಕೊಂಡೇ ಬೆಳೆಯುತ್ತಾಳೆ ಅವಳ ಬಾಳಲ್ಲಿ ಯುವಕನ ಪ್ರವೇಶ ಅವಳ ನೋವಿಗೆ ಅವ ಸ್ಪಂದಿಸುತ್ತಾನೆ. ಕಪ್ಪು ಬಿಳುಪು ಚಿತ್ರ
ಆದರೂ ಮನದ ತುಂಬ ಅನೇಕ ಬಣ್ಣಗಳ ಚಿತ್ತಾರ ಬಿಡಿಸುತ್ತದೆ ಈ ಚಿತ್ರ. ಮುಖ್ಯಪಾತ್ರಗಳಲ್ಲಿ ಶರ್ಮಿಲಾ ಹಾಗೂ ಧರ್ಮೇಂದ್ರ
ಇದ್ದರು . ಧರಮ್ ಮಾಡಿದ ಚಿತ್ರಗಳಲ್ಲಿ ಅನುಪಮಾ ಪಾತ್ರದ ಬಗ್ಗೆ ಅವನಿಗೆ ಸ್ವತಃ ಅಭಿಮಾನವಿದೆ ಅವ ನೀಡಿದ ಸಂದರ್ಶನಗಳಲ್ಲಿ ಈ ಬಗ್ಗೆ ಅವನೇ ಹೇಳಿಕೊಂಡಿದ್ದಾನೆ...
ಇನ್ನು ಹಾಡಿನ ಬಗ್ಗೆ...ಈ ಹಾಡಿನ ತುಂಬ ಪ್ರಶ್ನೆಗಳಿವೆ ಉತ್ತರ ಬಯಸುತ್ತವೆ ಆದರೆ ಅವು ಒಂಥರಾ ನಿರುತ್ತರ ಪ್ರಶ್ನೆಗಳು. ಇಲ್ಲಿ
ಪ್ರತಿಭಟನೆ ಇದೆ ಸುತ್ತಲಿನ ಅನ್ಯಾಯದ ಬಗ್ಗೆ ಜಿಗುಪ್ಸೆ ಇದೆ ಆದರೆ ಹಾಡಿನಲ್ಲಿ ಆಕ್ರೋಶದ ಸುಳಿವಿಲ್ಲ ಬದಲು ತಣ್ಣಗೆಕೊರೆಯುವ
ಮಂಜುಗಡ್ಡೆ ಇದೆ ಇದು ನಮ್ಮ ಅಂತರಾಳವನ್ನು ಕೆದಕುತ್ತದೆ ...ಸಂಗೀತ ಸಂಯೋಜನೆಯೂ ಹಾಗೆ.. ಅದನ್ನು ಮೀರಿದ ನಿರಾಕಾರ ಹಾಗೂ ನಿರ್ವಿಕಾರದ ಧ್ವನಿ ಹೇಮಂತ್ ದಾನದು.ಈ ಹಾಡು ಅವನೊಬ್ಬನೇ ಹಾಡಬಹುದಾಗಿತ್ತು ಇದರಲ್ಲಡಗಿದ ನೋವಿಗೆ ಅವನ ಶೀತಲದನಿಯೇ ನ್ಯಾಯ ಕೊಟ್ಟಿತ್ತು ಅಂದರೆ ತಪ್ಪಲ್ಲ.
या दिल कि सुनॊ दुनियावालॊं
या मुझ्को अभी चुप रेहने दो
मै गम को खुशि कैसे केहदुं
जो केहते है उनको केहने दो...
ಸುತ್ತಲಿನ ಬಣ್ಣದ ಭ್ರಮೆಯ ಬದುಕಿನ ಬಗೆ ನೋಡಿ ನಾವೆಲ್ಲ ಖುಷಿಯಾಗಿದ್ದೇವೆ ಅಂತ ಅಂದುಕೊಂಡು ಜೀವನ ಸಾಗಿಸುತ್ತೇವೆ
ಮುಖವಾಡ ಹಾಕಿ ನಲಿಯುತ್ತೇವೆ..ಈ ಬದುಕಿನ ನಾಟಕದಲ್ಲಿ ಪಾತ್ರ ವಹಿಸುತ್ತೇವೆ...ಆದರೆ ನಿಜಕ್ಕೂ ನಾವು ಖುಷಿಯಾಗಿದ್ದೇವೆಯೇ ನಾವು ವಾಸ್ತವವನ್ನು ಕವಿ ಒಪ್ಪಿಕೊಂಡ ರೀತಿ ಒಪ್ಪಿಕೊಂಡಿಲ್ಲವೇಕೆ...?

ये फूल चमन मे कैसा खिला
मालि की नजर मे प्यार नही
हसते हुये क्याक्या देखलिया
अब बेहते है आंसु..बेहने दो....
ಹೂ ಮತ್ತು ಮಾಲಿ ನಡುವೆ ಪ್ರೀತಿ ಇರಬೇಕು ಹೂ ಅರಳಿ ನಗುವುದರ ಹಿಂದೆ ಮಾಲಿಯ ಪರಿಶ್ರಮಇದೆ ಆದರೆಕೆಲವು ಹೂ ಗಳು
ಆ ಪ್ರೀತಿಯಿಂದ ವಂಚಿತರಾಗಿಯೂ ಇವೆ.ಸುತ್ತಲಿನ ಜಗತ್ತನ್ನು ನಕ್ಕು ನೋಡಿ ಸಾಕಾಗಿ ಕವಿಯಕಣ್ಣಲ್ಲಿ ನೀರಿದೆ ಅದರಬಗ್ಗೆ ಅವನಿಗೆ
ನಿರ್ಲಿಪ್ತತೆಯೂ ಇದೆ....
एक खाब खुशि का दॆ खा नहि
देखा जॊ वो भूल गये..
मांगा हुवा तुम दे न सके..
जो तुमने दिया वो सेहने दो...
ಮೇಲಿನ ಸಾಲಿನಲ್ಲಿ ಅಡಗಿರುವ ನೋವು ಗಮನಿಸಿ. ಖುಷಿಯ ಕನಸು ಇಲ್ಲ ಹಾಗೆಯೇ ಆ ದೇವರ ಬಗ್ಗೆ ದೂರು ಇದೆ ಕೇಳಿದ್ದನ್ನು
ಕೊಡಲಾರದವ ಕೊಟ್ಟಿದ್ದನ್ನು ಸೈರಿಸುವ ಸಹನೆ ಕೊಡಲಿ.... ಈ ಸಾಲು ಎಲ್ಲಾ ಕಾಲಕ್ಕೂ ಪ್ರಸ್ತುತ ಅಲ್ಲವೆ....
क्या दर्द किसि का लॆगा कोइ...
इतना तो किसिमे दर्द नहि...
बेहते है आंसु और बहे..
अब झूठि तसल्लि रेहने दो..
ಇದಕ್ಕಿಂತ ನಿಷ್ಟುರಮಾತು ಇರಲಿಕ್ಕಿಲ್ಲ. ಮಂದಿಯ ದುಃಖವನ್ನು ಹಂಚಿಕೊಳ್ಳುವವರಿಲ್ಲ ಕಣ್ಣೀರು ಹರೆದರೆ ಒಣ ಸಮಾಧಾನದಿಂದ
ಏನೂ ಸಾಧ್ಯ ಇಲ್ಲ.

ಕ್ಕೈಫಿ ಆಜ್ಮಿ ಎಡಪಂಥೀಯ ನಿಲುವು ಹೊಂದಿದ್ದ. ಸಮಾಜ ಅದರ ಧೋರಣೆಯಬಗ್ಗೆಯೂ ಅವನಲ್ಲಿ ದ್ವೇಷ ಇತ್ತು.ಹಿಂದಿ ಚಿತ್ರರಂಗದಲ್ಲಿ ಸಿಕ್ಕ ಅಲ್ಪ ಅವಕಾಶದಲ್ಲಿಯೇ ಅವ ಮಿಂಚಿದ್ದ, ನೆನಪಿನಲ್ಲಿ ಉಳಿಯುವ ಹಾಡು ಕೊಟ್ಟಿದ್ದ. ಇದೇ ಅನುಪಮಾ ಚಿತ್ರದ
ಲತಾ ಹಾಡಿದ" ಕುಛ್ ದಿಲ್ ನೆ ಕಹಾ" ದ ಈ ಸಾಲು ಗಮನಿಸಿ.."कलियों से भी कोइ पूछता रॊति है या हसति है..."
ಹೇಮಂತಕುಮಾರ್ ಅಪರೂಪದ ಹಾಡು ನೀಡಿದ್ದಾನೆ. ದಾದಾ ಬರ್ಮನ್ ಇವನ ನಿರ್ಲಿಪ್ತ ದನಿಯ ಉಪಯೋಗ ಚೆನ್ನಾಗಿ ಮಾಡಿಕೊಂಡಿದ್ದ. ಹೇಮಂತ್ ದಾನದು ಅಪರೂಪದ ಧ್ವನಿ.

Sunday, February 14, 2010

ಸೋಲಾ ಬರಸ್ ಕಿ ಬಾಲಿ ಉಮರ್ ಕೊ ಸಲಾಮ್ ..


ಇದೇನು ನಾ ಯಯಾತಿತಾದೆನೆ ಅಂದುಕೊಬೇಡಿ ..ಹಾಗೆ ನೋಡಿದ್ರೆ ನಮ್ಮೆಲ್ಲರ ಮನದಲ್ಲಿ
ಆ ಹಂಬಲ ಇದ್ದೇ ಇದೆ ನನ್ನಂತಹ ಭಂಡರು ಅದನ್ನು ನಾಚಿಕೆಯಿಲ್ಲದೆ ಹೊರಹಾಕುತ್ತೇವೆ ಇನ್ನುಳಿದವರು ಆ ಚಪಲಗಳಿಗೆ ವೈರಾಗ್ಯದ
ಮುಸುಕು ಹಾಕಿರುತ್ತಾರೆ.ಸಾಹಿರ್ ಬರೆದ ಹಾಡಿನ ಸಾಲೊಂದಿದೆ " ಯೇ ಭೋಗ್ ಭಿ ಏಕ್ ತಪಸ್ಯಾ ಹೈ ತುಮ್ ತ್ಯಾಗ್ ಕೆ ಮಾರೆ
ಕ್ಯಾ ಜಾನೋ ..." ನಿಜ ಅಲ್ಲವೇ ಭೋಗವನ್ನೇ ಒಂದು ತಪಸ್ಸಾಗಿ ಸಿದ್ಧಿಸಿಕೊಂಡರೆ ಹೇಗೆ.... ಯಯಾತಿ ಮಾಡಿದ್ದು ಇದನ್ನೇ.

ಮೇಲಿನ ಪೀಠಿಕೆ ಯಾಕೆ ಅಂದ್ರೆ ನನ್ನ ಹಾಗೂ ಅಂಜಲಿಯ ದಾಂಪತ್ಯಕ್ಕೀಗ ಹದಿನಾರರ
ಹರೆಯ. ಹದಿನಾರು ಈ ವಯಸ್ಸು ಅನೇಕ ಆಸೆಗಳ ,ಬಣ್ಣಗಳ ಕನಸು ಕೊಡುವ ವಯಸ್ಸು ..ಆ ವಯಸ್ಸು ಮುಟ್ಟಿದವರಿಗೆ.....!
ಕಪ್ಪು ಕೂದಲ ನಡುವೆ ಅಲ್ಲಲ್ಲಿ ಇಣುಕೋ ಬಿಳಿಗೂದಲಿಗೆ ಡೈ ಹಚ್ಚುತ್ತ.., ಬಿಎಮ್ ಟಿಸಿಯಲ್ಲಿ ಜೋತಾಡುತ್ತಲೇ ಈ ಬೆಂಗಳೂರಿನಲ್ಲಿ ಸೈಟಿನ ಬಗ್ಗೆ ಕನಸಿಸುತ್ತ ಅಥವಾ ಮಗಳ ಅಭ್ಯಾಸದ ಬಗ್ಗೆ ತಲೆ ಚಚ್ಚಿಕೊಳ್ಳುತ್ತಲೋ, ಮತ್ತೆ ಎಲ್ಲೋ ನೋಡಿದ
ಬಳೆ ಪ್ಯಾಟರ್ನ ಬಗ್ಗೆ ತಲೆ ಕೆಡಿಸಿಕೊಳ್ಳುತ್ತ ದಿನ ಕಳೆಯೋ ನಮ್ಮಂಥವರಿಗೂ ಹದಿನಾರು ತುಂಬಿದೆ ... ಹೌದು ಈ ನಿಟ್ಟಿನಲ್ಲಿ
ಹೊಸ ಜಾಡು ಹಿಡಿಯಬೇಕಾಗಿದೆ..ಮತ್ತೆ ಬಾಳಿನ ಕ್ಯಾನವಾಸನಲ್ಲಿ ಬಣ್ಣ ತುಂಬಬೇಕಾಗಿದೆ.... ಈ ಹದಿನಾರರ ಹರೆಯಕ್ಕೆ
ಹೊಸಾ ಅರ್ಥ ಕೊಡಬೇಕಾಗಿದೆ. ಸಿಟ್ಟು ಸೆಡವು ಮೂಲೆಯ ಟ್ರಂಕಿನಲ್ಲಿ ಮುಚ್ಚಿಟ್ಟು ಮನೆ ಬಾಗಿಲಿಗೆ ಹೊಸ ಆಸೆಗಳ ತೋರಣ
ಕಟ್ಟುವುದಿದೆ. ಎಷ್ಟೊಂದು ಕೆಲಸಗಳಿವೆ.....
ಜಗಜಿತ್ ಸಿಂಗ್- ಚಿತ್ರಾ ಸಿಂಗ್ ಹಾಡಿದ ಗಜಲಿನ ಸಾಲು ಹೀಗಿದೆ....

उस मॊड से शुरू करॆ फिर से ए जिंदगि..
हर शय जहां हसीन थि हम तुम थे अजनबि...

ನಿಮ್ಮ ಹಾರೈಕೆ ಇದ್ದೇ ಇದೆ ಅಲ್ಲವೇ....
೧೫/೦೨/೨೦೧೦....

Saturday, January 23, 2010

ಕೆಹನೆ ಕೊ ತೊ ದುನಿಯಾಂಮೆ ಮೈಖಾನೆ ಹಜಾರೊಂಹೈ...


ಮೇಲಿನ ಹಾಡಿನ ಸಾಲು ಉಮ್ರಾವ್ ಜಾನ್ ಚಿತ್ರದ್ದು. ಬರೆದವರು ಶಹರ್ಯಾರ್ ಅದರ ಸಂಗೀತ ಖಯ್ಯಾಮ್ ಅವರದು. ಹಿಂದಿ ಸಿನೇಮಾ ಕಂಡ ಅತ್ಯಂತ ಸಂವೇದನಾಶೀಲ ಸಂಗೀತ ನಿರ್ದೇಶಕ.ಮೇಲಿನ ಶೇರ್ ನ ಭಾವಾರ್ಥ ಹೀಗಿದೆ
ಜಗತ್ತಿನಲ್ಲಿ ಅನೇಕ ಮಧುಶಾಲೆಗಳು ಸುರೆ ಕುಡಿಸುತ್ತವೆ ಆದರೆ ನಾವು ಕಣ್ಣಿಂದಲೇ ಕುಡಿಸುತ್ತೇವೆ. ಖಯ್ಯಾಮರ ಜೀವನಶೈಲಿಯೂ
ಸ್ವಲ್ಪ ಇದೇ ತರಹದ್ದು ಅನೇಕ ಸಮಕಾಲೀನ ಸಂಗೀತ ನಿರ್ದೇಶಕರು, ಕೆಲ ದಿಗ್ಗಜರಿದ್ದರು ಆದರೆ ಅವರ ನಡುವೆಯೂ ಖಯ್ಯಾಮ
ಸಂಯೋಜಿಸಿದ ಹಾಡುಗಳು ಹೊಳೆದವು ಬೆಳೆದವು ಜನಾನುರಾಗಿಯಾದವು. ಆ ಗೀತೆಗಳಲ್ಲಿ ಒಂದು ವಿಶಿಷ್ಟವಾದ ಸೆಳೆತ ಇತ್ತು
ಇದು ಅವರದೇ ಎಂದು ಕೂಗಿ ಹೇಳುವ ಶೈಲಿ. ಮಾಡಿದ್ದು ಕೆಲವೇ ಚಿತ್ರಗಳು ಆದರೆ ಅವುಗಳ ಹಾಡು ಎಂದೂ ಮರೆಯಲಾರದ್ದು.
ದೂರ ಗುಡ್ದದಲ್ಲಿ ಹುಟ್ಟಿದ ನದಿ ಬಂಡೆಗಲ್ಲು ಬಳಸಿ ಹರಿವ ನದಿಯ ಕಲರವ , ಹಲವೊಮ್ಮೆ ರಾತ್ರಿ ಸುಳಿಯುವ ತಂಗಾಳಿಯ ತಂಪು
ಹೀಗೆ ಖಯ್ಯಾಮ್ ಸಂಯೋಜನೆಗಳು ಅಪರೂಪದ್ದು.

ಲಾಹೋರ್ ನಲ್ಲಿ ಜಿ. ಎ.ಚಿಸ್ತಿ ಅನ್ನುವವರ ಬಳಿ ಸಂಗೀತ ಕಲಿಯಲು ಸೇರಿಕೊಂಡ ಖಯ್ಯಾಮರಿಗೆ ಓದುವುದಕ್ಕಿಂತ ಸಂಗೀತದ ಗೀಳು.ಚಿಸ್ತಿ ಅವರಿಗೆಅಸಿಸ್ಟೆಂಟ್ ಆಗಿ ಕೆಲಸ ಎರಡನೇ ಮಹಾಯುದ್ಧದಲ್ಲಿ ಸೇವೆ ನಂತರ ಸೇರಿದ್ದು
ಬಾಂಬೆ.ಕೆಲದಿನಗಳ ನಂತರ ಸಂಗೀತ ಸಂಯೋಜನೆಯ ಅವಕಾಶ .ಮೊದಲು ಗಮನ ಸೆಳೆದ ಚಿತ್ರ "ಫಿರ್ ಸುಬಹ ಹೋಗಿ"
ಚಿತ್ರ ವಿಶಿಷ್ಟ ಅನ್ನಿಸೋ ಹಾಡು "ಆಸಮಾನ್ ಪೆಹೈ ಖುದಾ ಔರ್ ಜಮೀನ್ ಪರ್ ಹಮ್" ಹಾಗೂ ಮುಕೇಶ್ ,ಆಶಾ ಹಾಡಿದ
ಆಶಾಭವನೆ ಸದಾ ಬಿಂಬಿಸುವ "ವೊ ಸುಬಹ ಕಭಿ ತೊ ಆಯೇಗಿ...". ಖಯ್ಯಾಮ ಹೆಸರುವಾಸಿಯಾದರು. ಮುಂದೆ ಬಂದ
"ಶೋಲಾ ಔರ್ ಶಬನಮ್ " ನ ಕೈಫಿ ಆಜಮಿ ಬರೆದ ರಫಿ ಹಾಡಿದ "ಜಾನೆ ಕ್ಯಾ ಢುಂಢತಿ ರೆಹತಿ ಹೈ ಯೇ ಆಂಖೆ ಮುಝಮೆ..".
ಮೇಲೆ ಉಲ್ಲೇಖಿಸಿದ ಹಾಡು ಚಿತ್ರಸಾಹಿತ್ಯದಲ್ಲಿ ಅಪರೂಪದ್ದು.ಸಿನೇಮಾಹಾಡುಗಳ ಸಾಹಿತ್ಯ ಈ ಮಟ್ಟ ಸಹ ತಲುಪುತ್ತೆ ಅನ್ನೋದು ಬಹಳ ಜನರಿಗೆ ಆಶ್ಚರ್ಯ ತಂದಿತ್ತು. ರಫಿಯ ಶಾಂತ ಸ್ವರ ಎಲ್ಲ ಹಿಡಿದಿಟ್ಟುಕೊಂಡ ಸುಲಲಿತ ಸಂಗೀತ ಸಂಯೋಜನೆ. ಖಯ್ಯಾಮ ಹೆಸರು ಸ್ಥಾಯಿಯಾಯಿತು.

ಖಯ್ಯಾಮ ಅವರಿಗೆ ಸಾಹಿತ್ಯದ ಪ್ರೀತಿ ಅಪಾರ ಗೀತೆಯ ಸಾಹಿತ್ಯಕ್ಕೆ ಸಂಯೋಜನೆ ಚ್ಯುತಿ ತರುತ್ತಿರಲಿಲ್ಲ
ಬದಲು ಪೂರಕವಾಗಿರುತ್ತಿತ್ತು. ಅನೇಕ ಯಶಸ್ವಿ ಗೀತಕಾರರ ಜೊತೆ ಖಯ್ಯಾಮ್ ಕೆಲಸ ಮಾಡಿದ್ದಾರೆ ಸಾಹಿರ್, ಕೈಫಿ,ಮಜರೂಹ,
ನಕ್ಷಲಾಲ್ ಪುರಿ , ಶೆಹರ್ ಯಾರ್ ಹೀಗೆ ಅನೇಕ ಕವಿಗಳ ಜೊತೆಗೆ ಖಯ್ಯಾಮ್ ಜುಗಲಬಂದಿ ಮಾಡಿದ್ದರು.ಕವಿಗಳನ್ನು ಗೌರವಿಸುತ್ತಿದ್ದ ಖಯ್ಯಾಮ್ ಗೀತೆಗಳಿಗೆ ಜೀವ ತುಂಬುತ್ತಿದ್ದರು.

ಖಯ್ಯಾಮ್ ಅನೇಕ ಗಾಯಕರ ಜೊತೆಗೆ ಕೆಲಸ ಮಾಡಿದ್ರು.ಅವರ ಸಂಯೋಜನೆಯಲ್ಲಿ ತಲತ್,ರಫಿ,ಮುಕೇಶ್ ಹಾಗೂ ಕಿಶೋರ್ ಮಿಂದೆದ್ದಿದ್ದಾರೆ. ಹೊಸ ಗಾಯಕರಿಗೂ ಖಯ್ಯಾಮ ಪ್ರೋತ್ಸಾಹ ಕೊಟ್ಟಿದ್ರು ನಿತಿನ್ ಮುಕೇಶ್ , ತಲತ್ ಅಜೀಜ್ ಹಾಗೂ ಭುಪಿಂದರ್ ಹೀಗೆ. ಖಯ್ಯಾಮ್ ಹೆಂಡತಿ ಜಗಜೀತ್ ಕೌರ್ ಒಳ್ಳೆ ಹಾಡುಗಾರ್ತಿ
ಅವರು ಹಾಡಿದ ಶಗುನ್ ಚಿತ್ರದ "ತುಮ್ ಅಪನಾ ರಂಜೋಗಮ್ ...." ಹೃದಯಕ್ಕೆ ಹತ್ತಿರವಾದದ್ದು.ಇದೇ ಚಿತ್ರದ ರಫಿ ಹಾಗೂ
ಸುಮನ್ ಹಾಡಿದ "ಪರಬತೊಂಕೆ ಪೇಡೊಂಪರ್ ಶಾಮ್ ಕ ಬಸೇರಾ ಹೈ..." ಸಂಜೆಯರಂಗಿನ ಮಧುರ ಅನುಭೂತಿ ಈ ಹಾಡಿನಲ್ಲಿದೆ.ಇನ್ನು ಲತಾ ಜೊತೆ ಖಯ್ಯಾಮ ರ ಸಾಂಗತ್ಯ ಹಾಲು ಜೇನಿನಷ್ಟೇ ಮಧುರ.. ಸುಮ್ಮನೆ ಈ ಕೆಳಗಿನ ಹಾಡುಗಳ
ಮೇಲೆ ಕಣ್ಣು ಹಾಯಿಸಿ....
೧) ಬಹಾರೊಂ ಮೇರಾ ಜೀವನ್ ಭಿ ಸವಾರೊ....(ಆಖ್ರಿ ಖತ್..)
೨)ಮೇರೆ ಘರ್ ಆಯಿ ಏಕ್ ನನ್ಹಿ ಪರಿ....(ಕಭಿ ಕಭಿ)
೩)ಅಪನೆ ಆಪ್ ರಾತೊಂಕೊ ಚಿಲಮನೆ ಸರಕತೆ ಹೈ..( ಶಂಕರ್ ಹುಸೇನ್ )
೪) ಆ ಜಾರೆ ಆಜಾರೆವೋ ಮೇರೆ ದಿಲ್ಬರ್ ಆಜಾ...(ನೂರಿ)
೫) ಯೇ ಮುಲಾಕಾತ್ ಏಕ್ ಬಹಾನಾ ಹೈ....(ಖಾನದಾನ್)
೬) ನ ಜಾನೆಕ್ಯಾ ಹುವಾ ಖಿಲಾ ಗುಲಾಬ್ ಕಿ ತರಹ ಬದನ್...(ದರ್ದ)
೭) ದಿಖಾಯಿ ದಿಯೇ ಯೂಂ ಕೆ ಬೇಖುದ್ ಕಿಯಾ...(ಬಾಜಾರ್)
೮) ಚಾಂದನಿ ರಾತ್ ಮೆ ಏಕ್ ಬಾರ್ ತುಝೆ ದೇಖಾ ಹೈ...( ದಿಲೇ ನಾದಾನ್..)
೯) ಐ ದಿಲೇ ನಾದಾನ್ ....( ರಝಿಯಾ ಸುಲ್ತಾನ್ ..)

ಆಶಾ ದನಿಯಲ್ಲಿ ಉಮ್ರಾವ್ ಜಾನ್ ಹಾಡು ಹಾಡಿಸಲು ಖಯ್ಯಾಮ್ ಮುಂದಾದಾಗ ಅದೊಂದು ಐತಿಹಾಸಿಕ ಬ್ಲಂಡರ್ ಎಂದೇ ಹೇಳಲಾಯಿತು ಆದರೆ ಖಯ್ಯಾಮ ಸಂಗೀತ ಆಶಾ ಹಾಡು ಇಂದಿಗೂ ಉಮ್ರಾವ್ ಜಾನ್ ಸಂಗೀತ ಕ್ಲಾಸಿಕ್ ಅನಿಸಿಕೊಳ್ಳುತ್ತದೆ.
ಖಯ್ಯಾಮ್ ರಫಿಯ ದನಿಯಲ್ಲಿ ಗಾಲಿಬ್ ಗಜಲು ಹಾಗೂ ಮಧುಕರ್ ರಾಜಸ್ಥಾನಿ ಬರೆದ ಹಾಡುಗಳಿಗೂ ಸಂಗೀತ ನೀಡಿದರು.
" ಪಾಂವ ಪಡೂ ತೋರೆ ಶಾಮ್ ಬ್ರಿಜ ಮೆ ಲೌಟ ಚಲೋ..."
" ಗಜಬ್ ಕಿಯಾ ತೇರೇ ವಾದೆಪೆ ಜೋ ಐತಬಾರ್ ಕಿಯಾ..." ಪ್ರಮುಖ ಹಾಡುಗಳು.ಇವು ನಾನ್ ಫಿಲ್ಮಿ ಆದ್ರೂ ಇವುಗಳ
ಜನಪ್ರಿಯತೆಗೆ ಅಡ್ಡಿಯಾಗಿಲ್ಲ.

ತಗೊಂಡ ಕೆಲಸ ಶ್ರದ್ಧೆಯಿಂದ ಮಾಡಿ ಹಾಡು ನೆನಪಿನಲ್ಲಿ ಉಳಿಯುವ ಮಹತ್ತರ ಕೆಲಸ ಖಯ್ಯಾಮ್ ಮಾಡಿದ್ದಾರೆ. ಯಾವ ಪ್ರಲೋಭನೆಗೂ ಒಳಗಾಗದೆ ತಾನು ನಂಬಿಕೊಂಡು ಬಂದ ಸಂಗೀತವನ್ನೇ ಆರಾಧಿಸಿದರು. ಮಾಡಿರೋ ಚಿತ್ರ ಕಮ್ಮಿ ಆದರೆ
ಗುಣಮಟ್ಟದಲ್ಲಿ ಕೊರತೆ ಇಲ್ಲ.

ಸಹೃದಯರಲ್ಲಿ ವಿನಂತಿ ಇದು ನನ್ನ ಐವ್ವತ್ತನೆಯ "ಅಂಬೋಣ.." ಪ್ರೋತ್ಸಾಹ ಹೀಗೆ ಮುಂದುವರೆಯಲಿ

Thursday, November 19, 2009

ಮಾಯಿ ರಿ ಮೈ ಕಾಸೆ ಕಹುಂ ಪೀಡ್ ಅಪನಿ ಜಿಯಾಕಿ

ಹಿಂದಿ ಚಿತ್ರರಂಗದ ಎರಡು ಅಜರಾಮರ ನಕ್ಷತ್ರಗಳು----ಲತಾ ಹಾಗೂ ನೌಶಾದ್. ಈ ಇಬ್ಬರೂ
ಮಹೋನ್ನತ ವ್ಯಕ್ತಿಗಳು ಒಬ್ಬ ನತದೃಷ್ಟ ತಾರೆ ಬಗ್ಗೆ ಹೀಗೆನ್ನುತ್ತಾರೆ...

ನೌಶಾದ : ನನ್ನ ಎಲ್ಲ ಕಂಪೋಸಿಷನ್ ಕೊಡುವೆ ಈ ಗಜಲ್ ಕೊಡಿ...( ನೌಶಾದ್ ಹೇಳತಿರೋದು "ಆಪ್ ಕಿ ನಜರೊನೆ ಸಮಝಾ ಪ್ಯಾರ್ ಕೆ ಕಾಬಿಲ್" ಈ ಗಜಲಿನ ಬಗ್ಗೆ)

ಲತಾ : ಕೆಲವೊಂದು ವ್ಯಕ್ತಿಗಳ ಕುಂಡಲಿ ತೆರೆದುಕೊಳ್ಳುವುದೇ ಅವರು ಸತ್ತ ಬಳಿಕ.


ಮೇಲೆ ಹೇಳಿದ ಇಬ್ಬರೂ ಒಬ್ಬ ವ್ಯಕ್ತಿಯ ಬಗ್ಗೆ ಹೇಳುತ್ತಿದ್ದಾರೆ ತೀರ ವ್ಯತಿರಿಕ್ತ ಅನ್ನೋ ಹೇಳಿಕೆಗಳು..! ನಿಜ ಮದನ್ ಮೋಹನ್
ನಸೀಬು ಇದ್ದದ್ದೇ ಹಾಗೆ. ಪ್ರತಿಭಾಶಾಲಿ ತನ್ನದೇ ಶೈಲಿಯಲ್ಲಿ ಅಮರ ಗೀತೆ ನೀಡಿದಾತ ವ್ಯಾಪಾರಿಕರಣ ಅವನಿಗೆ ಎಂದೂ ಆಗಿಬರುತ್ತಿರಲಿಲ್ಲ.ಹಾಗೆಂದು ಸ್ಫರ್ಧೆಗೆ ಎಂದೂ ಆತ ಹೆದರಲಿಲ್ಲ. ಸಂಗೀತದ ಬಗ್ಗೆ ಅವನಿಗೆ ಒಲವಿತ್ತು ಆ ಒಲವನ್ನು ಜೀವನವಿಡಿ
ಲೋಕಕ್ಕೆ ಹಂಚಿದ ಅತ. ಅದೊಂದು ತಪಸ್ಸು ಎಂದು ಆತ ಭಾವಿಸಿದ್ದ. ಅದರ ಸೆಳೆತವೇ ಅವನಿಗೆ ಸೈನ್ಯದ ಗಡಸು ಮಾಯಮಾಡಿ ಸಂಗೀತದ ಮಾರ್ದವತೆಗೆ ಎಳೆದಿತ್ತು. ಸೈನ್ಯದ ಸೇವೆ ಮುಗಿಸಿಬಂದವ ಆಕಾಶವಾಣಿಯಲ್ಲಿ ಕೆಲಸ ಗಿಟ್ಟಿಸಿದ.
ಆಗ ಅಲಿಅಕ್ಬರ್ ಖಾನ್ , ಬೇಗಮ್ ಅಕ್ತರ್ ಮುಂತಾದವರ ಜೊತೆ ಕೆಲಸ ಮಾಡಿದ. ಮದನ್ ಮೋಹನ್ ತಂದೆ ಫಿಲ್ಮಿಸ್ತಾನ ಸ್ಟುಡಿಯೋದ ಪಾರ್ಟನರ್. ಅದಾಗ್ಯು ಮದನಮೋಹನ್ ಶುರುವಾತಿನಲ್ಲಿ ಎಸ್ ಡಿ ಬರ್ಮನ್ ಬಳಿ ಸಹಾಯಕನಾಗಿ ದುಡಿದ.
೧೯೫೦ ರಲ್ಲಿ ಆಂಖೆ ಚಿತ್ರ ಅವನ ಮೊದಲ ಚಿತ್ರ.ಪೂರ್ವ ಒಪ್ಪಂದದಂತೆ ಲತಾ ಆ ಚಿತ್ರದಲ್ಲಿ ಹಾಡಲಾಗಲಿಲ್ಲ.
ಮುಂದೆ ಅದಾ ಎಂಬ ಚಿತ್ರ. ಲತಾ ಬಳಿ ಮದನಮೋಹನ್ ರಾಖಿ ತಗೊಂಡು ಹೋದ. ಲತಾ ಕಟ್ಟಿದಳು. ಒಂದು ಸುಮಧುರ
ಬಾಂಧವ್ಯ ಬೆಸೆಯಿತು ಆ ರಾಖಿ . ಇಡೀ ಲೋಕ ಮುಂದೆ ಇವರಿಬ್ಬರ ಜುಗಲ್ ಬಂದಿಯ ರಸದೂಟ ಉಂಡು ತೇಗಿತು.
ಮದನಮೋಹನ್ ಕಂಪೋಸಿಷನ್ ಲತಾ ಧ್ವನಿ ಎಲ್ಲರ ಮನೆ ಮಾತಾಯಿತು... ಮದನಮೋಹನ್ ನ ವಾಪರಿಸದೆ ಇದ್ದ ಟ್ಯೂನ್
ಮೇಲೆ ಯಶ್ ಚೋಪ್ರಾ ೨೦೦೪ ರಲ್ಲಿ "ವೀರ್ ಜರಾ" ತೆಗೆದ. ಲತಾ ಆ ಚಿತ್ರದಲ್ಲೂ ಹಾಡಿದಳು ಹಾಗೂ ತಮ್ಮಿಬ್ಬರ ಬಾಂಧವ್ಯ
ಸಾವಿನಿಂದ ಸಮಾಪ್ತಿಯಾಗೋಲ್ಲ ಎಂದು ನಿರೂಪಿಸಿದಳು...!

ಮದನಮೋಹನ್--ಲತಾ ಈ ಜುಗಲಬಂದಿಯಿಂದ ಹೊಮ್ಮಿದ ಹಾಡುಗಳೆಂದರೆ ಅವು ಮಾಧುರ್ಯತೆಗೆ, ಇಂಪಿಗೆ ಹಾಗೂ
ಒಟ್ಟಾರೆ ಚಿತ್ರಸಂಗೀತಕ್ಕೆ ಹೊಸ ಆಯಾಮ ಕೊಟ್ಟಂತಹವು. "ಗಜಲೊಂಕಾ ಶಹಜಾದಾ" ಎಂದು ಅವಳು ಅವನನ್ನು ಕರೆದಳು.
ಅನೇಕ ದಿಗ್ಗಜ ಸಂಗೀತ ನಿರ್ದೇಶಕರಜೊತೆ ಒಂದಿಲ್ಲೊಂದು ಸಲ ಮನಸ್ತಾಪ ಲತಾಗಿತ್ತು ಆದರೆ ಮದನಮೋಹನ್ ಜೊತೆ ಮಾತ್ರ ಎಂದೂ ಹಾಗಾಗಲಿಲ್ಲ. ಮುಖ್ಯವಾಗಿ ಒಬ್ಬರನ್ನೊಬ್ಬರು ಬಹಳ ಚೆನ್ನಾಗಿ ಅರ್ಥಮಾಡಿಕೊಂಡಿದ್ದರು.ಬೇರೆಯವರಿಗೆ ಕ್ಲಿಷ್ಟವಾಗಿ ತೋರುವ ಸಂಯೋಜನೆ ಲತಾ ಕಂಠಸಿರಿಯಲ್ಲಿ ಸರಾಗವಾಗುತ್ತಿತ್ತು ಇತ್ತ ತನ್ನ ಪರಿಶ್ರಮ ಲತಾದನಿಯಲ್ಲಿ ಎರಕ
ಹೊಯ್ದಾಗಲೆ ಅದು ಪೂರ್ಣತೆ ಹೊಂದಿತು ಇದು ಮದನಮೋಹನ್ ಭಾವ. ಈ ಭಾವ ಲಯದ ಮಿಶ್ರಣದಲ್ಲಿ ಅಮೃತವಲ್ಲದೆ
ಮತ್ತೇನು ಉಕ್ಕಲು ಸಾಧ್ಯ....ಅಮೃತದ ಬಿಂದುಗಳು ಹೀಗಿವೆ......
" ಮೇರಿ ವೀಣಾ ತುಮ್ ಬಿನ ರೋಯೆ....."
" ಯೂಂ ಹಸರತೊಂಕೆ ದಾಗ್ ಮೊಹಬ್ಬತ್ ಮೆ ಧೊಲಿಯೆ...."
" ಆಪ್ ಕಿ ನಜರೊಂನೆ ಸಮಝಾ ಪ್ಯಾರ್ ಕೆ ಕಾಬಿಲ್ ಮುಝೆ..."
" ವೊ ಭೂಲಿ ದಾಸ್ತಾನ್ ಫಿರ್ ಯಾದ್ ಆ ಗಯಿ...."
" ಜರಾಸೀ ಆಹಟ್ ಹೋತಿಹೈ...."
" ಬೇತಾಬ್ ದಿಲ್ ಕಿ ತಮನ್ನಾ ಯಹೀ ಹೈ...."
" ರುಕೆ ಸೆ ಕದಮ್ ರುಕ್ ಕೆ ಬಾರ್ ಬಾರ್ ಚಲೆ..."
"ನೈನೊಮೆ ಬದರಾ ಛಾಯೆ...."
" ನೈನಾ ಬರಸೆ ರಿಮ್ ಝಿಮ್...."
" ಬೈಯ್ಯಾ ನ ಧರೊ ಓ ಬಲಮಾ..."
ಕೆಲವು ಬಿಂದುಗಳು ಬಿಟ್ಟುಹೋಗಿರಬಹುದು... ಅಮೃತದ ಸವಿ ಅಪಾರ ಅಲ್ಲವೆ....!

ಮದನಮೋಹನ್ ಕಂಪೋಸಿಷನ್ ಅಂದರೆ ಸಾಹಿತ್ಯ ಉತ್ತುಂಗದಲ್ಲಿರುತ್ತಿತ್ತು.ಅವನ ವಾದ್ಯಗೋಷ್ಟಿ ಅಥವಾ ಅವನ ಟ್ಯೂನ್ ಎಂದೂ ಸಾಹಿತ್ಯ ನುಂಗುತ್ತಿರಲಿಲ್ಲ. ಅನೇಕ ಹೆಸರುವಾಸಿ ಗೀತಕಾರರ ಜೊತೆ ಕೆಲಸ ಮಾಡಿದ್ದ. ರಾಜೇಂದ್ರ ಕ್ರಿಷನ್,ರಾಜಾಮೆಹಂದಿಅಲಿಖಾನ್, ಸಾಹಿರ್, ಮಜರೂಹ, ಕೈಫಿ ಅಜ್ಮಿ ಹೀಗೆ ಅಗಿನ ಪ್ರತಿಭನ್ವಿತರಜೊತೆ ಕೆಲಸ ಮಾಡಿದ್ದ ಅವರಿಂದ
ಅಮರ ಗೀತೆಗಳನ್ನು ಬರೆಸಿದ್ದ.

ಮದನಮೋಹನ್ ಗಾಯಕರಲ್ಲಿ ಭೇದಭಾವ ಮಾಡುತ್ತಿರಲಿಲ್ಲ. ರಫಿ ಅವನ ಹೆಚ್ಚಿನ ಹಾಡು ಹಾಡಿದ್ದರೂ ಕೆಲಹಾಡುಗಳಿಗೆ
ಇವನೇ ಗಾಯಕನಾಗಬೇಕು ಇದು ಮದನಮೋಹನ್ ಹಟವಾಗಿತ್ತು.೧೯೬೪ರ ಜಹಾಂಆರಾ ಇದಕ್ಕೆ ಉದಾಹರಣೆ ತಲತ್ ಕಡೆಯಿಂದ ಹಾಡು ಹಾಡಿಸಿದ ಚಿತ್ರ ಸೋತಿತಾದರೂ ತಲತ್ ಹಾಡು ಮನೆಮಾತಾಗಿದ್ದವು. ಮನ್ನಾಡೆ ಜೀವನದ ಉತ್ತಮಹಾಡು
"ಕೌನ್ ಆಯಾ ಮೇರೆ ಮನ್ ಕೆ ದ್ವಾರೆ.." ಮದನಮೋಹನ್ ಕಂಪೋಸಿಶನ್.ಹೊಸಗಾಯಕರಿಗೂ ಅವ ಉತ್ತೇಜನ ಕೊಟ್ಟಿದ್ದ.
ಭುಪಿಂದರ್ ಬೆಳಕಿಗೆ ಬಂದಿದ್ದು ಇವನ ಗರಡಿಯಲ್ಲಿಯೇ.

ದೇವಆನಂದನ ಅಣ್ಣ ಚೇತನ್ ಆನಂದ. ಇವನ ಚಿತ್ರಗಳಿಗೆ ಮದನಮೋಹನ್ ಕಾಯಂ ಸಂಗೀತಗಾರ--
ಹಕೀಕತ್, ಹಸ್ತೆ ಜಖಂ, ಹಿಂದುಸ್ತಾನ್ ಕಿ ಕಸಂ, ಹೀರ್ ರಾಂಝಾ..ಹೀಗೆ ಒಂದಕ್ಕಿಂತ ಒಂದು ಸೂಪರ್ ಚಿತ್ರಗಳು ಕೆಲವು ಚಿತ್ರ
ಸೋತರೂ ಸಂಗೀತ ಎಂದೂ ಸೋತಿರಲಿಲ್ಲ.

ರಫಿ ಹಾಗೂ ಮದನಮೋಹನ್ ಹಾಲು ಸಕ್ಕರೆ ಇದ್ದಂತಿದ್ದರು.ರಫಿಯ ಕಂಠದ ಆಳ ವಿಸ್ತಾರ ಮದನಮೋಹನ್ ಚೆನ್ನಾಗಿ ಉಪಯೋಗಿಸಿಕೊಂಡಿದ್ದ. ಹೊಸ ಪ್ರಯೋಗ ಮಾಡಲು ರಫಿ ಅವನಿಗೆ ನೆರವಾಗಿದ್ದ. ಕೆಲವು ಉದಾಹರಣೆ ---
"ಸಾವನ್ ಕೆ ಮಹೀನೆ ಮೆ ಏಕ್ ಆಗ್ ಸಿ ಸೀನೆಮೆ...(ಶರಾಬಿ)"
" ಮೈ ಏ ಸೋಚಕರ್ ಉಸ್ಕೆ ದರ್ ಸೆ ಉಠಾಥಾ...(ಹಕೀಕತ್)"
" ತುಮ್ ಸೆ ಕಹುಂ ಏಕ್ ಬಾತ್ ಪರೊಂಸೆ ಹಲ್ಕಿ ಹಲ್ಕಿ...(ದಸ್ತಕ್)"
" ತುಮ್ ಜೊ ಮಿಲ್ ಗಯೇ ಹೋ ತೋ ಏ ಲಗತಾ ಹೈ....(ಹಸ್ತೆ ಜಖಂ)"
"ತುಮಾಃರಿ ಜುಲ್ಫ್ ಕೆ ಸಾಯೆ ಮೆ ಶಾಮ್ ಕರಲೂಂಗಾ....."

ಇಷ್ಟೆಲ್ಲ ಅಮರಗೀತೆಗಳ ರೂವಾರಿ ಸಂತೋಷದಿಂದ ಇದ್ದನಾ ತನ್ನ ಸಾಧನೆಬಗ್ಗೆ ಅವನಿಗೆ ತೃಪ್ತಿ ಯಿತ್ತೇ ಅಥವಾ ಫಿಲ್ಮಿದುನಿಯಾ ಅವನ ಟ್ಯಾಲೆಂಟಿಗೆ ನ್ಯಾಯ ಒದಗಿಸಿತ್ತೇ ಮೇಲಿನ ಎಲ್ಲ ಪ್ರಶ್ನೆಗಳಿಗೆ ನಕಾರವೇ ಉತ್ತರ...! ಯಾಕೆ ಹೀಗೆ
ಇದು ಉತ್ತರ ಇರಲಾರದ ಪ್ರಶ್ನೆ.ಮದನಮೋಹನ್ ತನ್ನ ಹಿಂಜರಿತಕ್ಕೆ ತಾನೇ ಕಾರಣನಾಗಿದ್ದನೇ ಈ ಪ್ರಶ್ನೆಗೆ ಉತ್ತರ ತಕ್ಕಮಟ್ಟಿಗೆ ಹೌದೆಂದೇ ಹೇಳಬೇಕಾಗುತ್ತದೆ. ಹಾಗಿದ್ದರೆ ಅವನ ದೌರ್ಬಲ್ಯ ಏನಿತ್ತು ಉತ್ತರದಲ್ಲಿ ಗೂಢಾರ್ಥವಿದೆ...!
ತನ್ನ ನಿಲುವುಗಳಜೊತೆ ಆತ ಎಂದೂ ರಾಜಿಮಾಡ್ಕೊಳ್ಳಿಲ್ಲ ಲೋಕಕ್ಕೆ ಬೇಕಾದಹಾಗೆ ತನ್ನ ಶೈಲಿ ಬದಲಿಸಿಕೊಳ್ಳಲಿಲ್ಲ.
ಇನ್ನೂ ವಿಷದವಾಗಿ ಹೇಳಬಕಂದ್ರೆ ಶಮ್ಮಿ ಯ ಕುಣಿತಕೆ ರಫಿ "ಯಾಹೂ......" ಎಂದ ಶಂಕರ್ ಜೈಕಿಶನ್ ನವಸಂಗೀತದ ಸರದಾರರೆನಿದರು ಲೋಕ ಉಘೆ ಉಘೆ ಅಂತು .ಆದ್ರೆ ಅದೇ ರಫಿ ಮದನ್ ಮೋಹನ ಕಡೆ ಬಂದು " ಆಪ್ ಕೆ ಪೆಹಲೂ ಮೆ ಆಕರ್ ರೋದಿಯೆ ದಾಸ್ತಾನೆ ಗಮ್ ಸುನಾಕರ್ ರೋ ದಿಯೆ.."ಹಾಡಿದ್ದ ಬದುಕಿನ ವಿಪರ್ಯಾಸ ಇದೇ ಇರಬೇಕು...!

ಮದನಮೋಹನ್ ನ ಪ್ರತಿಸ್ಫರ್ಧಿಗಳು ಅನೇಕರಿದ್ದರು.ಹಿಂದಿಚಿತ್ರರಂಗದಲ್ಲಿ ಆಯಾ ಬ್ಯಾನರುಗಳಿಗೆ,ಚಿತ್ರನಟರಿಗೆ ಅವರವರೇ ಆದ
ಕಾಯಂ ಸಂಗೀತಗಾರರಿದ್ದರು ಉದಾಹರಣೆಗೆ---ರಾಜಕಪೂರ್--ಶಂಕರ್ಜೈಕಿಶನ್--ದೇವ್ ಆನಂದ---ಎಸ್ ಡಿ ಬರ್ಮನ್ ಹೀಗೆ. ಆದರೆ ಮದನ್ ಮೋಹನ್ ಲಾಬಿ ಯಲ್ಲಿ ವಿಶ್ವಾಸಇಟ್ಟವನಲ್ಲ ಬದಲುಕಾಯಕ ನಂಬಿದವ. ತನಗೆಒಪ್ಪಿಸಿದ ಕೆಲಸ ನಾಲ್ಕು
ಜನ ಮೆಚ್ಚುವಂತೆ ಮಾಡುತ್ತಿದ್ದ. ಆದರೆ ಈ ದೊಡ್ಡತನವೂ ಅನೇಕ ಸಲ ತೊಡಕಾಗುತ್ತದೆ ಮದನಮೋಹನ್ ವಿಷಯದಲ್ಲೂ ಹೀಗೆ
ಆಯಿತು. ಭಾರತೀಯ ಚಿತ್ರರಂಗ ಫಿಲ್ಮಫೇರ್ ಪ್ರಶಸ್ತಿ ಆಸ್ಕರ್ ಪ್ರಶಸ್ತಿಗೆ ಸಮಾನ ಅಂತ ಭಾವಿಸುತ್ತದೆ. ಈ ಒಂದು ಗರಿಮೆ ಸಂಪಾದಿಸಲು ಅನೇಕ ಜನ ಕಲಾವಿದರು, ತಂತ್ರಜ್ನರು ತುಡಿಯುತ್ತಾರೆ. ಮದನಮೋಹನ್ ಗೂ ಆಸೆ ಇತ್ತು ಫಿಲ್ಮಫೇರ್ ದಕ್ಕಲಿ ಎಂದು. ಅವನ ೨೫ ವರ್ಷದ ಕರಿಯರ್ರಲ್ಲಿ ಎರಡು ಬಾರಿ ಆತ ಪ್ರಶಸ್ತಿಗೆ ನಾಮಿನೇಟ್ ಆಗಿದ್ದ. ಅದರಲ್ಲೂ ೧೯೬೪ ರಲ್ಲಿ
"ವೊ ಕೌನ್ ಥಿ" ಗೆ ಗ್ಯಾರಂಟಿ ಎಂದುಕೊಂಡಿದ್ದ. ಕಾಂಪಿಟೇಶನ್ ಇದ್ದಿದ್ದು ಸಂಗಮ್ , ದೋಸ್ತಿ ಚಿತ್ರಗಳು. ಎಲ್ಲರ ನಿರೀಕ್ಷೆ ತಲೆಕೆಳಗಾಗಿಸಿ ದೋಸ್ತಿ ಚಿತ್ರಕ್ಕೆ ಪ್ರಶಸ್ತಿ ಬಂತು. ಹೊಸಜೋಡಿ ಲಕ್ಷ್ಮಿ-ಪ್ಯಾರೆ ಬೀಗಿದರು. ಆದರೆ ಪ್ರಶಸ್ತಿಯಹಿಂದೆ ಕಾಣದ ಕೈಗಳು ಆಟ ಆಡಿದ್ದವು. ಸ್ವತಃ ಪ್ಯಾರೆಲಾಲ್ ಒಂದು ಸಂದರ್ಶನದಲ್ಲಿ ತಮಗೆ ದೋಸ್ತಿ ಚಿತ್ರಕ್ಕೆ ಪ್ರಶಸ್ತಿ ಲಭಿಸಿದ ಪರಿ ಹೇಳ್ತಾನೆ
http://www.hamaraforums.com/index.php?showtopic=46854 ಈ ಲಿಂಕು ಕತೆ ಬಿಚ್ಚಿಡುತ್ತದೆ.

೧೯೭೦ ಈ ವರ್ಷ ಮದನಮೋಹನ್ ಗೆ ಗುರುತು ತಂದ ವರ್ಷ. ಅವನ ದಸ್ತಕ್ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿತು. ಅದರಲ್ಲಿ ರಫಿ
ಹಾಗೂ ಲತಾ ಹಾಡಿದ ಮನೆಮಾತಾದವು.ಸಂವೇದನಾಶೀಲ ಚಿತ್ರ ದಸ್ತಕ್ ಅದಕ್ಕೆ ಆತ್ಮ ಆಗಿದ್ದು ಮದನಮೋಹನ್ ಸಂಗೀತ.
ಮುಂದೆ ಕೆಲವು ಉತ್ತಮ ಚಿತ್ರಗಳಿಗೆ ಅವ ಸಂಗೀತ ನೀಡಿದ ---ಹಸ್ತೆ ಜಖಂ, ಬಾವರ್ಚಿ, ಕೋಶಿಶ್ , ಹೀರ್ ರಾಂಝಾ,ಪರವಾನಾ ಹೀಗೆ
ಎಲ್ಲ ಚಿತ್ರಗಳಿಗೆ ಮದನಮೋಹನ್ ಸಂಗೀತ ಜೀವಾಳ ಆಗಿತ್ತು.ಆದರೂ ಲೋಕದ ಅಸಡ್ಡೆ ,ತನ್ನ ಪ್ರತಿಭೆಗೆ ಸಿಗದ ಮನ್ನಣೆ ಅವನನ್ನು ಸದಾ ಕಾಡಿಸುತ್ತಿತ್ತು.ಮೊದಲೇ ಇದ್ದ ಕುಡಿತದ ಚಟ ವಿಪರೀತ ಆಯಿತು. ೧೪-೦೭-೧೯೭೫ ಕೊನೆಗೆ ಅದಕ್ಕೆ ಬಲಿಯಾದ. ದುರ್ದೈವ ಅಂದ್ರೆ ಇದೇ ಇರಬೇಕು. ಅವನ ಕೊನೆ ಸಿನೇಮಾಗಳೆರಡೂ ಯಶಸ್ವಿಯಾದವು--ಮೌಸಮ್ ಹಾಗೂ ಲೈಲಾ ಮಜ್ನೂ--.ಮೌಸಮ್ ನಲ್ಲಿ ಭುಪಿಂದರ್ ಹಾಡಿದ "ದಿಲ್ ಢುಂಡತಾ ಹೈ..." ಬಹುಷಃ ಮದನಮೋಹನ್ ನ ಅತ್ಯುತ್ತಮ
ರಚನೆಗಳಲ್ಲಿ ಒಂದು ಅನಬಹುದು. ಇನ್ನು ಲತಾ ಹಾಡಿದ ಲೈಲಾ ಮಜ್ನೂ ದ "ಹುಸ್ನ ಹಾಜಿರ್ ಹೈ ಮೊಹಬ್ಬತ್ ಕಿ ಸಜಾ ಪಾನೆಕೊ" ಯಾರು ಮರೆಯಲು ಸಾಧ್ಯ..

ಮದನಮೋಹನ್ ಸದಾ ಹಸಿರಾಗಿರುತ್ತಾನೆ. ಭಾರತೀಯ ಚಿತ್ರರಂಗ ಪ್ರತಿಭಾವಂತರಿಗೆ ಸರಿಯಾದ ಪ್ರೋತ್ಸಾಹ ಎಂದೂ ನೀಡಿಲ್ಲ. ಈ ಕೊರಗು ಅನೇಕರಿಗೆ ಇದೆ ಅದೆಷ್ಟೋ "ಮದನಮೋಹನ್"ರು ಇನ್ನೂ ಇರಬಹುದು ನಿಟ್ಟುಸಿರು ಬಿಡುತ್ತಿರಬಹುದು.
ಅವರಿಗೆ ಸಾಂತ್ವನವಿದೆ.
ಕೊನೆಗೆ ಅವ ಕಂಪೋಸಿದ ಈ ಹಾಡು ನೋಡಿ ಪ್ರಶ್ನೆ ಕೇಳಿದ್ದಾನೆ ಯಾರಲ್ಲಾದರು ಉತ್ತರ ಇದೆಯೆ...
"ಜೋ ಹಮನೆ ದಾಸ್ತಾಂ ಅಪನಿ ಸುನಾಯಿ
ಆಪ್ ಕ್ಯೂಂ ರೋಯೆ...
ತಬಾಹಿ ತೊ ಹಮಾರೆ ದಿಲ್ ಪೆ ಆಯಿ
ಆಪ್ ಕ್ಯೂಂ ರೋಯೆ....."

Friday, October 23, 2009

ಕುಛ ತೊ ಲೋಗ್ ಕಹೆಂಗೆ....

ಹಿಂದಿ ಸಿನೇಮದ ಇತಿಹಾಸ ಗಮನಿಸಿದರೆ ಗಾಯಕರಾಗಿ ರಫಿ,ಮುಕೇಶ್ ಹಾಗೂ ಮನ್ನಾಡೆ ಛಾಪು ಒತ್ತಿದ್ದಾರೆ ಪೀಳಿಗೆಯಿಂದ ಪೀಳಿಗೆ ಇವರು ಹಾಡಿದ ಹಾಡು ಗುನುಗುತ್ತ ಬಂದಿದ್ದಾರೆ. ಒಂದರ್ಥದಲ್ಲಿ ಈ ಗಾಯಕರು ಯುಗಪ್ರವರ್ತಕರು ಈ ಮಹಾನ್ ಸಾಧಕರ ನಡುವೆ ಆಗೊಮ್ಮೆ ಈಗೊಮ್ಮೆ ಮಿನುಗುತ್ತಿದ್ದ ದನಿಯೂ ಇತ್ತು ಅದೇ ಕಿಶೋರ್
ಕುಮಾರ್ ನದು. ಶಾಸ್ತ್ರೀಯ ಸಂಗೀತದ ಅಧ್ಯಯನ ಮಾಡಿಲ್ಲ ಅನ್ನೋ ಕೊರಗು ಕಿಶೋರ್ ಗಿತ್ತು ಅದಕ್ಕಾಗಿಯೇ ಕೆಲ ಪಂಡಿತ
ಅನಿಸಿಕೊಂಡ ಸಂಗೀತ ನಿರ್ದೇಶಕರ ಬಳಿ ಕಿಶೋರ್ ಹಾಡಲು ಆಗಲೇ ಇಲ್ಲ. ಅದು ನೌಶಾದ್ ಆಗಿರಬಹುದು ,ರೋಶನ್ ಇರಬಹುದು ಅಥವಾ ಮದನ್ ಮೋಹನ್ ಆಗಿರಬಹುದು ಕಿಶೋರ್ ಬಗ್ಗೆ ಅವರಿಗೆ ಒಲವಿರಲಿಲ್ಲ.ಅಥವಾ ಅವರು ಕಂಪೋಜಿಸಿದ
ಲಾಲಿತ್ಯದ ಹಾಡುಗಳಿಗೆ ಕಿಶೋರ್ ದನಿ ಹೊಂದುತ್ತಿರಲಿಲ್ಲ.ಒಟ್ಟಿನಲ್ಲಿ ಮೇಲೆ ಉಲ್ಲೇಖಿಸಿದ ತ್ರಿಮೂರ್ತಿಗಳ ನಡುವೆ ಪೋಷಣೆ ಇಲ್ಲದೆ ಕಿಶೋರ್ ಮುರಟಿಹೋಗಬೇಕಾಗಿತ್ತು ಆದರೆ ಹಾಗಾಗಲಿಲ್ಲ.ತನ್ನಲ್ಲಿರೋ ನ್ಯೂನತೆ ಬೇರೆ ರೀತಿಯಿಂದ ಕಿಶೋರ್ ಕಮಿಮಾಡಿಕೊಂಡ.ಅವನ ನೆರವಿಗೆ ಬಂದಿದ್ದು " ಯೋಡಲ್ಯೂಯು...".
ಆಸ್ಟ್ರಿಯಾ, ಸ್ವಿಸ್ ದೇಶದ ರಾಕ್ ಬ್ಯಾಂಡ್ ನಲ್ಲಿ "ಯೋಡಲೆ.." ಪ್ರಚಲಿತವಿತ್ತು ಮೂಲತಃ ಆಲ್ಪ್ಸ ಪರ್ವತಾರೋಹಿಗಳು ಸಂವಹನಕಲೆಯಾಗಿ ಅದು ಬಳಕೆ ಮಾಡಿಕೊಳ್ಳುತ್ತಿದ್ದರು. ಕಿಶೋರ್ ಗೆ ಈ ಕಲೆ ಬಗ್ಗೆ ಹೇಳಿದವ ಅವನ
ಸೋದರ ಅನೂಪ್ ಕುಮಾರ್. ಕೇಳಿದ ಕಿಶೋರ್ ಗೆ ಅದರ ಗುಂಗು ಹಿಡಿಯಿತು. ದಿನಪ್ರತಿ ಅದರಬಗ್ಗೆ ಅಭ್ಯಸಿಸಿದ. ಗುರುವಾಗಿ
ದೊರೆತವ ಎಸ್.ಡಿ ಬರ್ಮನ್. ಕಿಶೋರನ ಗಾಡ್ ಫಾದರ್ ಈತ. ನವಕೇತನ್ ಬ್ಯಾನರಿನ ಕಾಯಂ ಸಂಗೀತಗಾರ ಬರ್ಮನ್.
ಬರ್ಮನ್ ಕಿಶೋರ್ ಪ್ರತಿಭೆಗೆ ನೀರೆರೆದು ಬೆಳೆಸಿದ. ಕಿಶೊರ್ ಹಾಡಿದ ಹಾಡು ಅಂದರೆ ಅದೊಂದು "happy go" ಹಾಡು
ಎನ್ನೋದು ಪ್ರತೀತಿ. ಸರಳವಾಗಿ,ಸುಲಲಿತ ದನಿ ಅವನದು ಬರ್ಮನ್ ಅರಿವಿಲ್ಲದೆ ಮಹಾನ್ ಗಾಯಕನ ಜನ್ಮಕ್ಕೆ ಕಾರಣಕರ್ತನಾಗಿದ್ದ. ಬರ್ಮನ್ --ಕಿಶೋರ್ ಜುಗಲ್ ಬಂದಿ ಮೋಡಿ ಮಾಡಿತು...ಜನರ ನಾಲಿಗೆಮೇಲೆ ಹಾಡು ಕುಣಿಯಲಾರಂಭಿಸಿದವು....
" ಹಮ್ ಹೈ ರಾಹಿ ಪ್ಯಾರ್ ಕೆ ಹಮ್ ಸೆ ಕುಛ್ ನ ಬೋಲಿಯೆ..."
"ಏಕ್ ಲಡಕಿ ಭೀಗಿ ಭಾಗಿಸಿ..."
" ಮಾನಾ ಜನಾಬ್ ನೆ ಪುಕಾರಾ ನಹಿಂ...."
" ಹಾಲ್ ಕೈಸಾ ಹೈ ಜನಾಬ್ ಕಾ..."
" ಗಾತಾ ರಹೆ ಮೇರಾ ದಿಲ್..."
" ಏ ದಿಲ್ ನ ಹೋತ ಆವಾರಾ...."
ಮೇಲಿನ ಬಹುತೇಕ ಹಾಡು ದೇವಾನಂದನ ಮೇಲೆ ಚಿತ್ರಿತವಾಗಿದ್ದವು.ಈ ಅವಧಿಯಲ್ಲಿ ಬರ್ಮನ್ ಬಿಟ್ಟರೆ ಕಿಶೋರ್ ಇನ್ನೂ ಕೆಲವರ ಬಳಿ ಹಾಡಿದ. ಸಲಿಲ್ ಚೌಧರಿ,ಶಂಕರ್ ಜೈಕಿಶನ್ ,ರವಿ ಹೀಗೆ. "ಸಿಎಟಿ ಕ್ಯಾಟ್ ಕ್ಯಾಟ್ ಮಾನೆ ಬಿಲ್ಲಿ....", " ಜಿವನ್ ಕೆ
ಸಫರ್ ಮೆ ರಾಹಿ ಮಿಲತೆ ಹೈ..."," ಜರೂರತ ಹೈ ಏಕ್ ಶ್ರೀಮತಿಕಿ..." ಈ ಹಾಡುಗಳು ಹಿಟ್ ಅನಿಸಿಕೊಂಡವು.ಈ ನಡುವೆ
ಕಿಶೋರ‍್ ತಾನೇ ನಿರ್ಮಿಸಿದ "ಝುಮರೂ..." ,"ದೂರ್ ಗಗನ್ ಕಿ ಛಾಂವ್ ಮೆ" ದಲ್ಲೂ ಹಾಡಿದ. ಆ ಹಾಡುಹಿಟ್ ಅನಿಸಿಕೊಂಡವು, "ಯೋಡಲೆ ವೂ " ದ ಪ್ರಯೋಗ ಝುಮರು ವಿನ ಟೈಟಲ್ ಸಾಂಗನಲ್ಲಿತ್ತು . ಈ ಹಾಡುಗಳೆಲ್ಲ ಹಿಟ್
ಆದರೂ ಫಿಲ್ಮಿಜನ ಕಿಶೋರನನ್ನು ಒಪ್ಪಿಕೊಂಡಿರಲಿಲ್ಲ. ರಫಿಯ ನಕ್ಷತ್ರ ಹೊಳೆಯುತ್ತಿದ್ದ ದಿನಗಳು. ಶಮ್ಮಿ, ರಾಜೇಂದ್ರಕುಮಾರ್
ಚಿತ್ರಗಳು ಹಿಟ್ ಆಗಲು ರಫಿಯ ದನಿಯೂ ಕಾರಣ.ಅದು ರಫಿರಾಜ್ಯ ಅಲ್ಲಿ ಬೇರೆಯವರು ಸುಳಿಯಲು ಅವಕಾಶ ಇರಲಿಲ್ಲ.
ರಾಯಲ್ಟಿ ವಿಷಯದಲ್ಲಿ ಲತಾ ಜೊತೆ ಮನಸ್ತಾಪ ಆದಾಗ ಸುಮನ್ ಕಲ್ಯಾಣಪೂರಕರ್ ಜೊತೆ ರಫಿ ಹಾಡಿದ ಆ ಹಾಡುಗಳೂ ಹಿಟ್ ಆದವು. ಹೀಗಿದ್ದ ರಫಿ ಸಾಮ್ರಾಜ್ಯ ಅಲ್ಲಾಡಿದ್ದು ಮಾತ್ರ ಸ್ಥಿತ್ಯಂತರದ ಜ್ವಲಂತ ಉದಾಹರಣೆ..!

ನಾಸಿರ್ ಹುಸೇನ್ ಹಿಟ್ ಮೇಲೆ ಹಿಟ್ ಚಿತ್ರ ತೆಗೆಯುವ ಫ್ಯಾಕ್ಟರಿ ಇಟ್ಟಿದ್ದ. ಅ ಫ್ಯಾಕ್ಟರಿಯಿಂದ ಒಂದು ಚಿತ್ರ ಬಂದಿತ್ತು ಅದು
"ಪ್ಯಾರ್ ಕಾ ಮೌಸಮ್ " . ಪಂಚಮ್ ಅದರ ಸಂಗೀತನಿರ್ದೇಶಕ ಶಶಿಕಪೂರ್ ನಾಯಕ ಭರತಭೂಷಣ್ ಅವನ ತಂದೆ ಪಾತ್ರ. ಒಂದು ಹಾಡು ಮೊದಲು ತಂದೆ ಹಾಡುತ್ತಾನೆ ಮುಂದೆ ಆ ಹಾಡು ಎರಡು ಬಾರಿ ನಾಯಕನಮೇಲೆ ಚಿತ್ರಿಕರಣ. ತಂದೆಯ ಹಾಡು ಕಿಶೋರ್ ಪಾಲಿಗೆ ಬಂತು
ಆ ಹಾಡು "ತುಮ್ ಬಿನ್ ಜಾವೂ ಕಹಾಂ..." .ಕಿಶೋರ್ ದನಿಯಲ್ಲಿ " ಆ ಹಾಹಾ ವು ವೂ..." ಹೀಗೆ ಯೋಡಲೆ ಯೂ ಮಿಳಿತವಾಗಿತ್ತು. ಹಾಡು ಹಿಟ್ ಆತು ರಫಿ ಹಾಡಿದ ಶಶಿಕಪೂರ್ ಮೇಲೆ ಚಿತ್ರಿತವಾದ ಅದೇ ಹಾಡು ಕಿಶೋರ್ ಹಾಡಿನ ಮುಂದೆ
ಸಪ್ಪೆ ಅನಿಸಿತು. ರಫಿ ಕಟ್ಟಿದ ಕೋಟೆ ಅಲ್ಲಾಡಿತು. ಮುಂದೆ ಇತಿಹಾಸ ಬದಲಿಸಿದ "ಆರಾಧನಾ" ಬಂತು ಯುವಜನರ ನಾಲಿಗೆ
ಮೇಲೆ " ಮೇರೆ ಸಪನೊಂಕಿ ರಾನಿ ..", "ರೂಪ್ ತೇರಾ ಮಸ್ತಾನಾ..." ನಲಿದಾಡಿದವು.ಕಿಶೋರ್ ಕುಮಾರ್ ದೊಡ್ಡ ರೀತಿಯಿಂದ
ದಾಖಲಾಗಿದ್ದ. ರಾಜೇಶ ಖನ್ನ. , ಪಂಚಮ್ ರ ಬೆಂಬಲ. ರಾಜೇಶ್ ಖನ್ನಾಗೆ ಸೂಪರ್ ಸ್ಟಾರ್ ಪಟ್ಟ ಕಿಶೋರ್ ಸ್ವಲ್ಪ ಕಾಲದಲ್ಲಿಯೇ ನಂಬರ್ ಒನ್ ಸ್ಥಾನ ಅಲಂಕರಿಸಿದ. ಈ ಜೋಡಿಯ ಹಾಡುಗಳು ಎಂತಹವು ಒಂದೊಂದು ಮುತ್ತು...
" ಚಿಂಗಾರಿ ಕೋಯಿ ಭಡಕೆ....."
" ಮೈ ಶಾಯರ್ ಬದನಾಮ್ ...."
" ಏ ಮೇರೆ ದಿಲ್ ಕೆ ಚೈನ್..."
" ಮೇರೆ ನಯನಾ ಸಾವನ್ ಭಾದೊ...."
" ಯೇ ಲಾಲ್ ರಂಗ್ ಕಬ್ ಮುಝೆ ಛೋಡೆಗಾ....".

ರಾಜೇಶ ಖನ್ನಾ ನಂತರ ಬಂದ ಅಮಿತಾಬ್, ರಿಷಿ ಹೀಗೆ ಆ ಕಾಲದ ನಾಯಕರಿಗೆಲ್ಲ ಕಿಶೋರ್ ಹಾಡಿದ. ಜನರು ಅವನ ಹಾಡಿಗೆ ಮರುಳಾಗಿದ್ದರು. ಜನಪ್ರಿಯತೆಯ ಉತ್ತುಂಗ ನೋಡಿದ ಕಿಶೋರ್. ಆ ವರೆಗೂ ಅವನನ್ನು ತೆಗಳಿದ ಫಿಲ್ಮಿ ಜನ
ಪ್ರತಿಭೆ ಹೊಗಳುತ್ತಿದ್ದರು. ಆದರೂ ಕೆಲ ಹಟಮಾರಿಗಳಿದ್ದರು.ಮದನ್ ಮೋಹನ್ ರಿಷಿ ಅಭಿನಯದ "ಲೈಲಾ ಮಜನು" ಚಿತ್ರದ
ಸಂಗೀತ ನಿರ್ದೇಶನ ಮಾಡುತ್ತಿದ್ದ. ನಿರ್ದೇಶಕನಿಗೆ ಕಿಶೋರ ದನಿಯಲ್ಲಿ ಹಾಡಿಸುವ ಇರಾದೆ ಆದರೆ ಮದನ್ ಮೋಹನ್ ಒಪ್ಪಲಿಲ್ಲ
ಕೊನೆಗೆ ಮದನ್ ಮೋಹನ್ ಹಟ ಗೆದ್ದಿತು . ರಫಿ ಆ ಹಾಡು ಹಾಡಿದ.ಆ ಹಾಡು " ಬರ್ಬಾದೆ ಮೊಹಬ್ಬತ ಕಾ...". ಕಿಶೋರ ಮಾತ್ರ ಇಂತಹ ಘಟನೆಗಳಿಂದ ವಿಚಲಿತನಾಗಲಿಲ್ಲ. ಹಿಟ್ ಮೇಲೆ ಹಿಟ್ ಹಾಡು ಕೊಡುತ್ತಲೇ ಸಾಗಿದ.

ಅವನೇ ಹಾಡಿದ ಹಾಡು "ಕುಛ ತೊ ಲೋಗ್ ಕಹೆಂಗೆ ಲೋಗೊಂ ಕಾ ಕಾಮ ಹೈ ಕೆಹನಾ.." ಹಾಡು ಅವನ ನಿಲುವು
ಹೇಳುತ್ತದೆ. ಅದೇನೆ ಟೀಕೆ ಇರಬಹುದು ಕಿಶೋರ್ ಸ್ವಪ್ರತಿಭೆಯಿಂದ ಬೆಳಗಿದವ. ಚಿತ್ರ ಇತಿಹಾಸದಲ್ಲಿ ಹೆಸರು ಸ್ಥಾಯಿಯಾಗಿ
ನಿಲುವಂತೆ ಮಾಡಿದ.....


ವಿ.ಸೂ.
------
ಈ ಲೇಖನ ಸಾಂಗತ್ಯದಲ್ಲೂ ಬಂದಿದೆ....

Tuesday, September 22, 2009

ಆಶಾಗೆ ೭೬ ಅಂತೆ.....!

ಮೊನ್ನೆ ಟಿವಿಯಲ್ಲಿ ಆಶಾ ಮಾತನಾಡುತ್ತಿದ್ದಳು. ಒಳಗು ಬಿಚ್ಚಿಡಬಹುದು ಎಂದು ಕಾದಿದ್ದೆ ನಿರಾಸೆಯಾಯಿತು. ಅವಳು ಅನುಭವಿಸಿದ್ದು ಅವಳು ಮಾತ್ರ ಹೇಳಬೇಕು.ಬೇರೆ ಯಾರೇ ಹೇಳಿದರೂ
ಅದು ಗಾಸಿಪ್ ಅನಿಸಿಕೊಳ್ಳುತ್ತೆ. ಆಶಾ ಏನೂ ಬದಲಾಗಿಲ್ಲ ಇದು ಅಂದೇ ರಾತ್ರಿ ನಿರೂಪಿತವಾಯಿತು.
ಝೀ ಟಿವಿಯ ಲಿಟಲ್ ಚಾಂಪ್ ಕಾರ್ಯಕ್ರಮ ಅವಳು ಮುಖ್ಯ ಜಡ್ಜ ಆಗಿದ್ದಳು. ಶ್ರೇಯಸಿ ಎನ್ನೋ ಹನ್ನೆರಡು
ವರುಷದ ಹುಡುಗಿ ಆಶಾ ಹಾಡಿದ " ಪ್ಯಾರ್ ಕರನೆವಾಲೆ ಪ್ಯಾರ್ ಕರತೆ ಹೈ ಶಾನ್ ಸೆ ...." ಅಂದಾಗ
ಎಲ್ಲರಿಗಿಂತ ಮೊದಲು ಎದ್ದು ನಿಂತು ಚಪ್ಪಾಳೆ ಹೊಡೆದಳು...!

ಆಶಾಳ ಈ ಗುಣವೇ ಅವಳ ದೌರ್ಬಲ್ಯ ಆಗಿತ್ತೇ ? ಇತಿಹಾಸ ಸಾಕ್ಷಿ ಹೇಳುತ್ತದೆ ಆಶಾಳಿಂದ ಅನೇಕ
ಗೀತೆಗಳು ಕಸಿಯಲ್ಪಟ್ಟಿವೆ ಎಂದು, ಪ್ರಮುಖ ಉದಾಹರಣೆ "ಏ ಮೇರೆ ವತನ್ ಕೆ ಲೋಗೋ..." ಹಾಡು.ಸಂಗೀತ ನಿರ್ದೇಶಕ
ಸಿ. ರಾಮಚಂದ್ರ ಆಶಾಳನ್ನು ಹಾಡಲು ಆಯ್ಕೆ ಮಾಡಿದ್ದ. ರೆಕಾರಡಿಂಗ್ ವೇಳೆ ಲತಾನೂ ಸ್ಟುಡಿಯೋದಲ್ಲಿದ್ದಳು. ಆಶಾಗೆ ಇರಿಸು ಮುರಿಸು
ನಿಜವಾಗಿ ಲತಾನೇ ಈ ಹಾಡು ಹಾಡಬೇಕಾಗಿತ್ತು ಆದರೆ ಸಿ.ರಾಮಚಂದ್ರ ಗೆ ಅದು ಇಷ್ಟ ಇರಲಿಲ್ಲ. ಅಳುಕುತ್ತ ಆಶಾ ಹಾಡಲು
ಮೊದಲಿಟ್ಟಳು. ಹಾಡು ಮುಂದುವರೆಸುವುದು ಅವಳಿಗಾಗಲಿಲ್ಲ. ಹೊರಗಡೆ ಅಕ್ಕ ಕುಳಿತಿದ್ದಾಳೆ..ತನ್ನ ಜೀವನದ ಮಹತ್ತರ ಗೀತೆ ಇದು
ಅದರೆ ಲತಾಳ ಮುಖದಿಂದ ಹೊಮ್ಮಿದ ಭಾವ ಆಶಾಳಿಗೆ ಅಧೀರ ಮಾಡಿತು. ಹಾಡು ನಿಲ್ಲಿಸಿ ಹೊರಬಂದಳು.. ಸಿ. ರಾಮಚಂದ್ರನಿಗೆ
ದಿಗಿಲು...ಆಶಾ ಸೌಮ್ಯವಾಗಿ ಹೇಳಿದ್ಲು.." ಮಿ ಹೀ ಗಾಣ ಮಃಣೂ ತಾಯಿಲಾ ಅವಡತ್ ನಾಹಿ.....". ಯಾಕೆ ಅವಳು ಹಾಗೆ ಮಾಡಿದ್ಲು ಇದು
ಅವಳೇ ಹೇಳಬೇಕು. ಸಿ.ರಾಮಚಂದ್ರ ತನ್ನ ಆತ್ಮಚರಿತ್ರೆಯಲ್ಲಿ ಈ ಪ್ರಸಂಗ ದಾಖಲಿಸಿದ್ದಾನೆ.

ಹಿಂದಿ ಸಿನೇಮಾದ ಹಾಡಿನ ಇತಿಹಾಸ ಗಮನಿಸಿದರೆ ಅದು ಲತಾ ಹಾಗೂ ಆಶಾ ನಡುವೆಯೇ
ಸುತ್ತುತ್ತದೆ. ಅದಾವ ಮಹಾರಾಯ ಆಶಾ ಬರಿ ಚೆಲ್ಲು ಚೆಲ್ಲು , ಕುಣಿತದ ಹಾಡಿಗೆ ಹೊಂದುತ್ತಾಳೆ ಎಂದು ನಿರ್ಧರಿಸಿದ್ದನೋ ಗೊತ್ತಿಲ್ಲ,
ನಿಯಮದಂತೆ ಇದನ್ನು ಪಾಲಿಸಲಾಗುತ್ತಿತ್ತು. ಈ ನಿಯಮ ಮೊದಲು ಮುರಿದವ ಎಸ್. ಡಿ ಬರ್ಮನ್. ಬಂದಿನಿ ಚಿತ್ರದ
" ಅಬ್ ಕೆ ಬರಸ್ ಭೇಜ ಭೈಯಾಕೊ ಬಾಬುಲ್..." ಹಾಡಿಗೆ ಆಶಾ ಆತ್ಮವನ್ನೇ ಧಾರೆ ಎರೆದಿದ್ದಳು. ಆದರೇನು ನಶೀಬು ಬದಲಾಗಲಿಲ್ಲ.
ಆಶಾ ಗೆ ಹಾಡು ಸಿಗುವುದೇ ಅಪರೂಪ ಸಿಕ್ಕ ಹಾಡುಗಳಿಗೆ ಸರ್ವಸ್ವ ಕೊಡುತ್ತಿದ್ದಳು. ಹಾಡು ಒಂದೊಂದು ಮುತ್ತಿನಂತೆ.....
" ಕಾಲಿ ಘಟಾ ಛಾಯೆ ಮೋರಾ ಜಿಯಾ ಘಬರಾಯೆ....."
" ಆಯಿಯೇ ಮೆಹರಬಾ ಬೈಟಿಯೇ ಜಾನೆ ಜಾ...."
" ಶೋಖ್ ನಜರ್ ಕಿ ಬಿಜಲಿಯಾಂ......"
" ಸಾಕಿಯಾ ಆಜ್ ಮುಝೆ ನೀಂದ ನಹಿ ಆಯೇಗಿ..."
" ಯೇ ಹೈ ರೇಶಮಿ ಜುಲ್ಫೋಂಕಾ ಅಂಧೇರಾ ನ ಘಬರಾಯಿಯೇ...."

ಪಂಚಮ್ ಅವಳ ಜೀವನದಲ್ಲಿ ಬಂದ. ಇವಳ ದನಿಗೆ ಹೊಸ ಆಯಾಮ ನೀಡಿದ. ದನಿಯ ಏರಿಳಿತ ಆಸ್ತಿ ಅನಿಸುವಂತೆ ಮಾಡಿದ. ಸ್ವತಃ ಆಶಾ ದಂಗಾದಳು. ಈ ಜೋಡಿ ಹೊಸ ಪ್ರಯೋಗಗಳಿಗೆ ನಾಂದಿ ಹಾಡಿತು.
ತೀಸರಿ ಮಂಜಿಲ್ ನಿಂದ ಶುರುವಾಗಿದ್ದು ಇಜಾಜತ್ ವರೆಗೆ ನಿರಂತರವಾಗಿ ಪ್ರವಹಿಸಿತು. ಮುತ್ತುಗಳು ಬೇಜಾನ್
ಇವೆ ಕೆಲ ಸ್ಯಾಂಪಲ್ ಗಳು ಹೀಗಿವೆ....

" ಆಆಜಾ ಆಆಜಾ ಮೈ ಹೂಂ ಪ್ಯಾರ ತೇರಾ..."
" ಪಿಯಾತೂ ಅಬ್ ತೊ ಆಜಾ...."
" ಆಜ್ ಕಿ ರಾತ್ ಕೋಯಿ ಆನೆ ಕೊ ಹೈ ರೆ ಬಾಬಾರೆ...."
" ಚುರಾಲಿಯಾ ನೆ ಹೈ ತುಮನೆ ಜೋ ದಿಲ್ ಕೊ...."
" ಕತರಾ ಕತರಾ ಬೆಹತಾ ಹೈ...."

ಹೆಲೆನ್ , ಬಿಂದು ,ಪದ್ಮಾಖನ್ನ ಅನೇಕ ಡಾನ್ಸರಗಳ ಮೇಲೆ ಚಿತ್ರಿತವಾದ ಎಲ್ಲ ಹಾಡುಗಳಿಗೂ ಆಶಾಳ ಹಿನ್ನೆಲೆ
ದನಿ ಜೀವಾಳವಾಗಿತ್ತು.. ಈ ಪರಂಪರೆ ಮುರಿದವ ಖಯ್ಯಾಮ್. ರೇಖಾ ಉಮ್ರಾವ್ ಜಾನ್ ಆಗಿ ನಟಿಸುತ್ತಾಳೆ
ಎಂದಾಗ ಚಿತ್ರೋದ್ಯಮ ಹುಬ್ಬೇರಿಸಿತ್ತು. ಖಯ್ಯಾಮ್ ಆ ಚಿತ್ರದ ಹಾಡುಗಳನ್ನು ಆಶಾಳಿಂದ ಹಾಡಿಸುತ್ತಾನೆ ಅಂದಾಗ ಉದ್ಯಮದ ಮಂದಿ ದಂಗಾದರು. ಖಯ್ಯಾಮ್ ಉಮ್ರಾವ್ ಜಾನ್ ಬಗೆಗಿನ ಪುಸ್ತಕ ಆಶಾಗೆ ಓದಲು
ಕೊಟ್ಟ. ಉಮ್ರಾವ್ ಜಾನ್ ಬಗ್ಗೆ ತಿಳಿದುಕೊಳ್ಳಲು ಅದು ನೆರವಾಯಿತು.ಅಭಿನಯಕ್ಕೆ ರೇಖಾ ರಾಷ್ಟ್ರೀಯ ಪ್ರಶಸ್ತಿ
ಪಡೆದರೆ ಆಶಾ " ದಿಲ್ ಚೀಜ್ ಕ್ಯಾ ಹೈ ಆಪ್ ಮೇರಿ ಜಾನ್ ಲಿಜೀಯೆ..." ಗೆ ಮೊದಲಬಾರಿ ರಾಷ್ಟ್ರಪ್ರಶಸ್ತಿ
ಗಳಿಸಿಕೊಂಡಳು.

ಆಶಾಗೆ ಒಂದು ಗುಣ ದೈವದತ್ತವಾಗಿ ಬಂದಿದೆ. ಬದಲಾವಣೆಗೆ ಬಹಳ ಬೇಗ ಹೊಂದಿಕೊಳ್ಳುತ್ತಾಳೆ. ಇಲ್ಲವಾದರೆ ೬೨ರ ಹರೆಯದಲ್ಲಿ ಮಾದಕವಾಗಿ..." ತನಹಾ ತನಹಾ ಯಹಾಂಪೇ ಜೀನಾ ಏ ಕೋಯಿ ಬಾತ್ ಹೈ..." ಅನಲಾಗುತ್ತಿತ್ತೇ...? ಅಲ್ಬಮ್ ನಲ್ಲೂ ಹಾಡಿ ಪರಾಕ್ರಮ ಮೆರೆದಳು. "ಜಾನಮ್ ಸಮಝಾಕರೋ.." ಒಂದು ಕಾಲದ ಹಿಟ್ ಅಲ್ಬಮ್.

ಆಶಾ ಒಂದು ಶಮಾ ಇದ್ದಂತೆ.ಅನೇಕ ಯುಗ ಉರುಳಿವೆ ಆದರೂ ಅದು ಬೆಳಗುತ್ತಲೇ ಇದೆ
ಅವಳೇ ಹಾಡಿದ ಸಾಲು ಹೀಗಿದೆ....
"ಇಕ್ ಶಮ್ಮೆ ಪರೋಜಾಂಕೊ ಆಂಧಿಸೆ ಡರಾತೆ ಹೋ....
ಇಸ್ ಶಮ್ಮೆ ಪರೋಂಜಾಕೆ ಪರವಾನೆ ಹಜಾರೋಂ ಹೈ..."









-----------------------------------------------------

Sunday, August 30, 2009

ಸದಾ ಕಾಡುವ ಹಾಡು-----೪:

ಮನ್ನಾಡೆ ಹಾಡಿದ ಹಾಡುಗಳು ಹಿಂದಿಚಿತ್ರರಂಗದ ಇತಿಹಾಸದಲ್ಲಿ ಕಾಯಂ ಸ್ಥಾನ ಪಡೆದುಕೊಂಡಿವೆ...ರಫಿ,ಮುಕೇಶ ಹಾಗೂ ಕಿಶೋರ್ ಈ ತ್ರಿಮೂರ್ತಿಗಳ ನಡುವೆ ಮನ್ನಾಡೆ ಹಾಡಿದ ಹಾಡುಗಳು ವಿಶಿಷ್ಟ ಛಾಪು ಉಳಿಸಿವೆ...ದುರಂತ ಅಂದ್ರೆ ಮನ್ನಾಡೆ
ಹಾಡಿದ ಹೆಚ್ಚು ಹಾಡುಗಳು ಹಿರೋನ ಮೇಲೆ ಚಿತ್ರಿತವಾದುವಲ್ಲ...ಅವನ ಜನಪ್ರಿಯತೆ ಇದರಿಂದ ಕುಂದು ಆಗಿರಲಿಲ್ಲ. ಮುಖ್ಯವಾಗಿ
ಕೆಲ ಸಂಗೀತ ನಿರ್ದೇಶಕರು ಮನ್ನಾಡೆ ತಮ್ಮ ಹಾಡು ಹಾಡಿದರೆ ಕೃತಾರ್ಥರಾಗುತ್ತಿದ್ದರು. ಅದು ಎಸ್ ಡಿ ಬರ್ಮನ್ ನಿಂದ ಆರ್ ಡಿ ಬರ್ಮನ್ ವರೆಗೂ ವ್ಯಾಪಿಸಿತ್ತು. ಮನ್ನಾಡೆನ ಹೆಚ್ಚಿನ ಹಾಡು ಅಶೋಕಕುಮಾರ್, ಡೇವಿಡ್ , ಬಲರಾಜ್ ಸಹಾನಿ, ಮೆಹಮೂದ್ ಹಾಗೂ ಆಘಾ ಇವರ ಮೇಲೆ ಚಿತ್ರಿತವಾಗಿತ್ತು. ಪ್ರತಿ ಹಾಡಿಗೂ ಮನ್ನಾಡೆ ತನ್ನ ಆತ್ಮವನ್ನೇ ಧಾರೆಯುತ್ತಿದ್ದ.

ಪ್ರಸ್ತುತ ಆಯ್ದುಕೊಂಡ ಹಾಡು ಸೀಮಾ ಚಿತ್ರದ್ದು...ಶೈಲೇಂದ್ರ ಬರೆದದ್ದು ಶಂಕರ್ ಜೈಕಿಶನ್ ಸಂಗೀತ. ಇದು
ಪ್ರಾರ್ಥನೆ ಗೀತೆ.... ಶೈಲೇಂದ್ರ ಚಿತ್ರರಂಗದ ಅತ್ಯಂತ ಜನಪ್ರೀಯ ಗೀತಕಾರ. ಆರ್ ಕೆ ಬ್ಯಾನರ್ ನ ಕಾಯಂ ರತ್ನ. ಅವನಿಗೆ
ಒಂದು ವಿಶೇಷ ಕಲೆಯಿತ್ತು ..ತೀರ ಸರಳ ಭಾಷೆಯಲ್ಲಿ ಅತ್ಯಂತ ಗಹನವಾದ ವಿಚಾರ ಹೇಳುತ್ತಿದ್ದ...ಹಾಡಿನ ಸಾಲು ನೋಡಿಯೇ
ಇದು ಶೈಲೇಂದ್ರ ಬರೆದದ್ದು ಎಂದು ಗುರ್ತಿಸಬಹುದಾಗಿತ್ತು...ಉದಾಹರಣೆಗೆ......
"ಸಜನ್ ರೆ ಝೂಠ ಮತ್ ಬೋಲೋ....ಜಹಾಂ ಹಾಥಿ ಹೈ ನ ಘೋಡಾ ಹೈ ವಹಾಂ ಪೈದಲ್ ಹಿ ಜಾನಾ ಹೈ...."
" ದಿಲ್ ಕಾ ಹಾಲ್ಸುನೆ ದಿಲವಾಲ......ಆಂಧಿಯೊ ಮೆ ಜಲಿ ಜೀವನ್ ಬಾತಿ ಭೂಖ್ ನೆ ಹೈ ಬಡೆ ಪ್ಯಾರ್ ಸೆ ಪಾಲಾ...."
" ಯಾದ್ ನ ಜಾಯೆ ಜಿನಕೆ ದಿಲೊಂಸೆ....ದಿನ್ ಜೋ ಪಖೆರು ಹೋತೆ ಪಿಂಜಡೆ ಮೈ ರಖಲೆತಾ....."
ಎಷ್ಟು ಸರಳ ಶಬ್ದಗಳು ಆದರೆ ಹೊರಡಿಸುವ ಅರ್ಥಎಷ್ಟು ವಿಶಾಲ್....!

ಸೀಮಾ ಚಿತ್ರದ ಈ ಹಾಡು ಪ್ರಾರ್ಥನೆ ಗೀತೆ ಆದರೂ ಇಲ್ಲಿ ಕವಿ ಒಂದು ಬೇರೆ ಅಂದಾಜಿನಲ್ಲಿ ಮೊರೆ ಇಟ್ಟಿದ್ದಾನೆ.. ದೇವರು ಸರ್ವ ಶಕ್ತ ಮಾನವ ಸಂಕಟ ಬಂದಾಗ ಅವನಿಗೆ ಮೊರೆ ಇಡುತ್ತಾನೆ.. ಈ ಬೇಡಿಕೆಯಲ್ಲಿ ಭಾವ
ವಿಹ್ವಲತೆ ಇಲ್ಲ...ಆಕ್ರೋಶ ಇಲ್ಲ. ಒಂದು ಸಮರ್ಪಣಾ ಭಾವವಿದೆ ನೀನೆ ಎಲ್ಲ ನಾ ಏನೂ ಅಲ್ಲ ಇದನ್ನು ಹೇಳುತ್ತಲೆ ಕವಿ
ದೇವರಿಗೆ ತೀರ ಆತ್ಮೀಯವಾಗಿ ಮೊರೆ ಇಡುತ್ತಾನೆ.. ಈ ಸಾಲು ಗಮನಿಸಿ......
" ಇಧರ್ ಝೂಮತಿ ಗಾಯೇ ಜಿಂದಗಿ ಉಧರ್ ಹೈ ಮೌತ್ ಖಡಿ ಕೋಯಿಕ್ಯಾ ಜಾನೇ ಕಹಾಂ ಹೈ ಸೀಮಾ ಉಲಝನ್
ಆನ್ ಪಡಿ...ಕಾನೊಂಮೆ ಜರಾ ಕೆಹದೆ ಕೆ ಆಯೆ ಕೌನ್ ದಿಶಾಸೆ ಹಮ್..." ದೇವ ನನ್ನ ಮೊರೆ ಮುಟ್ಟಿಸಲು ಯಾವದಿಕ್ಕಿನಿಂದ
ನಿನ್ನೆಡೆ ಬರಲಿ ಕಿವಿಯಲ್ಲಿ ಹೇಳು...ಇದು ಆತ್ಮೀಯ ಸಂವಾದದ ಪರಿ. ಮಾನವ ಎಷ್ಟು ದುರ್ಬಲ ಅನ್ನೋದನ್ನು ಕವಿ ಹೇಳುವ
ಪರಿ ನೋಡಿ...." ಘಾಯಲ ಮನ್ ಕೆ ಪಾಗಲ ಪಂಚಿ ಉಡನೆಕೋ ಬೇಕರಾರ್ ಪಂಖ ಹೈ ಕೋಮಲ್ ಆಂಖ ಹೈ ಧುಂಧಲಿ
ಜಾನಾ ಹೈ ಸಾಗರ್ ಪಾರ್ ಅಬ ತೂ ಹಿ ಸಮಝಾ ರಾಹ್ ಭೂಲೆ ಥೆ ಕಹಾ ಸೆ ಹಮ್..." ಎಷ್ಟು ಮನಮುಟ್ಟುವ ಸಾಲುಗಳು...!
ಆದ್ರ ಭಾವ ಈ ಹಾಡಿನ ತುಂಬ ವ್ಯಾಪಿಸಿದೆ. ಹಾಡಿನ ಪಲ್ಲವಿ...."ತೂ ಪ್ಯಾರ್ ಕಾ ಸಾಗರ್ ಹೈ ತೇರಿ ಎಕ್ ಬೂಂದ್ ಕಿ ಪ್ಯಾಸೆ ಹಮ್ ..." ಹೌದು ದೇವನ ಕರುಣಸಾಗರದಲ್ಲಿ ಒಂದು ಹನಿಗಾಗಿ ಮಾನವ ಇಂದಿಗೂ ಎಂದಿಗೂ ಹಪಾಪಿಸುತ್ತಲೇ ಇದ್ದಾನೆ....!

ಈ ಹಾಡಿಗೆ ಮುಪ್ಪು ಇಲ್ಲ ಹಾಗೆಯೇ ಆ ಕಾಲದ ಎಲ್ಲ ಹಾಡುಗಳಿಗೂ ...!

Sunday, August 23, 2009

ಅಶೀ ಪಾಖರೆ ಏತಿ ಆಣಿ ಎಕ್ ಸ್ಮೃತಿ ಠೇವೂನಿ ಜಾತಿ...

"ಅಶೀ ಪಾಖರೆ ಏತಿ ಆಣಿ ಎಕ್ ಸ್ಮೃತಿ ಠೇವೂನಿ ಜಾತಿ ...ದೋನ ದಿಸಾಂಚಿ ರಂಗತ ಸಂಗತ ದೋನ ದಿಸಾಂಚಿ ನಾತಿ...." ( ಆ ಹಕ್ಕಿ ಚುಂಚಿನಲ್ಲಿ ತಂದು ಇರಿಸಿದ ಕಡ್ಡಿ ಒಂದು ನೆನಪು ಇಟ್ಟು ಹೋದ ಹಾಗೆ ಎರಡು ದಿನಗಳ
ಈ ಒಡನಾಟ ಎರಡು ದಿನಗಳ ಸಂಬಂಧ...----ಮೂಲ ಮರಾಠಿ ಹಾಡು ಮಂಗೇಶ್ ಪಾಡಗಾಂವಕರ್ ಅವರದು---ಎಂದಿನಂತೆ
ನನ್ನದು ಕೆಟ್ಟ ಅನುವಾದ...!) ಎಂಥಾ ಸಾಲುಗಳು ಆದರೆ ಆ ಕವಿಯ ನಿರ್ಲಿಪ್ತತೆ ನನಗೇಕೆ ಸಿದ್ದಿಸಿಲ್ಲ ಯಾಕೆ ನಾನು ವರ್ತಮಾನ ಮರೆತು ಮತ್ತೆ ಮತ್ತೆ ಅತೀತಕ್ಕೆ ಸಾಗುತ್ತೇನೆ...ಯಾಕೆ ವಾಸ್ತವ ಸೇರುವುದಿಲ್ಲ ...! ಮಗಳು ಕುಣಿಯುತ್ತಿದ್ದಾಳೆ
ಗಣಪತಿ ಮನೆಗೆ ಬಂದಿದ್ದಾನೆ...ಕಾರ್ಟೂನ್ ನಲ್ಲಿ "ಮೈ ಫ್ರೆಂಡ್ ಗಣೇಶಾ..." ಇದೆ .ಅವಳಿಗೆ ಅವಳದೇ ಆದ ಖುಷಿಇವೆ.
ಹೆಂಡತಿಗೂ ಸಡಗರ ..ಸ್ವರ್ಣಗೌರಿ ಪೂಜೆ , ತಯಾರಿ ಮಾಡಲಿರುವ ಅಡಿಗೆ ಅವಳದೇ ಆದ ಹಳವಂಡಗಳು...ಇಬ್ಬರ ನಡುವೆ
ನಾನು ಹೀಗೆ ಕೀಲಿಮಣೆ ಕುಟ್ಟುತ್ತ ಅರೆಬರೆ ಜೀವ ಪರದೆ ಮುಂದೆ ಅಯಾಚಿತವಾಗಿ ಸುತ್ತುತ್ತದೆ ನೆನಪಿನ ರೀಲು...!

ಶ್ರಾವಣ ಬರಲು ಇನ್ನೂ ಹದಿನೈದು ದಿನ ಇರುವಾಗಲೇ ಬರುತ್ತಿದ್ದಳು ಆ ಮುದುಕಿ ಬುಟ್ಟಿತುಂಬ ಮಣ್ಣಿನ
ಗಡಿಗೆಗಳು----ತಂಬಿಗೆ ಆಕಾರದ್ದು--. ಅವುಗಳ ಮೇಲೆ ಅಮ್ಮ ಸುಣ್ಣದಿಂದ ಚುಕ್ಕೆ ಕೂಡಿಸಿ ಚಿತ್ರ ಬರೆಯುತ್ತಿದ್ದಳು.ಸ್ತ್ರೀ ಚಿತ್ರ
ದೇವರು ಅದು ನಮಗೆ ತಿಳಿಹೇಳಲಾಗುತ್ತಿತ್ತು. ಗಡಿಗೆಗೆ ಮಣ್ಣಿನ ಮುಚ್ಚಳಬೇರೆ..ಅದಕ್ಕೂ ಅಲಂಕಾರ. ಜೋಡು ಗೌರಿ ನಮ್ಮ
ಮನೆಯಲ್ಲಿ ದೇವರ ಮಾಡದ ಮೇಲಿನ ಖಾನೆ ಸುಣ್ಣ ಬಳಿದುಕೊಂಡು ಲಕಲಕಿಸುತ್ತಿತ್ತು. ಅದರ ಮೇಲೆ ಬರೆದ ಶ್ರೀಕಾರ.
ಶುಕ್ರವಾರ ಗೌರಿ ಕೂತಳೆಂದರೆ ಆ ಖಾನೆಗೆ ದೈವೀ ಕಳೆ ಬರುತ್ತಿತ್ತು. ಕೇದಿಗೆ, ಡೇರೆ,ಮಲ್ಲಿಗೆ, ಗುಲಾಬಿ ಹೂಗಳು ಎಡವಿ ಬಿದ್ರೆ ದುರ್ಗದ ಬೈಲು ಮುಂಜಾನೆಯ ತಾಜಾ ಹೂಗಳು.. ಗೌರಿ ಮುಂದೆ ನೈವೇದ್ಯಕ್ಕೆ ಇಡುವ ಪ್ಯಾರಲ ಹಣ್ಣು.. ಆ ಖಾನೆ ಹೂ ಹಣ್ಣಿನ
ವಾಸನೆಯಿಂದ ಘಮಘಮಿಸುತ್ತಿತ್ತು. ನೈವೇದ್ಯಕ್ಕೆ ಹೋಳಿಗೆ ಅವ್ವ ಮಾಡಿದ ಹೋಳಿಗೆ, ಕಟ್ಟಿನ ಸಾರು ಆ ರುಚಿಗೆ ಎಲ್ಲಿ ಉಪಮೆ? ಶನಿವಾರವೂ ಗೌರಿಗೆ ನೈವೇದ್ಯ ಸ್ವಲ್ಪ ಭಿನ್ನ --ಕಟ್ಟಂಬಲಿ,ನುಚ್ಚು,ಪುಂಡಿ ಪಲ್ಯ ! ಈ ಅಡಿಗೆ ನಾಲ್ಕು ಶುಕ್ರ ಹಾಗೂ ಶನಿವಾರ ಪುನರಾವರ್ತನೆ ಯಗುತ್ತಿತು..ನಡುವೆ ನುಸುಳಿ ಬರುವ ನಾಗಪಂಚಮಿ, ಕೃಷ್ಣಾಷ್ಟಮಿ ಆ ದಿನಗಳಲ್ಲಿ ಕೇಶರಿಬಾತು...
ರುಚಿಕರ ಭೋಜನ ಶ್ರಾವಣಮಾಸದ ಮಜಾನೆ ಮಜಾ...! ರಾತ್ರಿ ಊಟಕ್ಕೆ ಕುಳಿತಾಗ ಅವ್ವ ನೆನಪು ಮಾಡಬೇಕು ಕಾಕಾನಿಗೆ.
ಮರುದಿನ ನಾನು ಹಾಗೂ ಕಾಕಾ (ನಮ್ಮ ತಂದೆಗೆ ಕಾಕಾ ಅಂತ ಕರೆಯುತ್ತಿದ್ದೆ) ಕಿಲ್ಲೆದಲ್ಲಿರುವ ವಝೆ ಅವರ ಮನೆಗೆ ಹೋಗುತ್ತಿದ್ದೆವು. ಹುಟ್ಟಾ ಮೂಕ --ವಝೆ ಅವರು--ಸುಂದರವಾಗಿ ಗಣಪತಿ ತಯಾರಿಸುತ್ತಿದ್ದರು. ಕಾಕಾ ಚೌಕಾಶಿ ಮಾಡದೇ ತರುತ್ತಿರಲಿಲ್ಲ ವಝೆ ಅವರ ಪಕ್ಕದ ಮನೆಯವರು ಅವರಿಗೆ ವ್ಯಾಪಾರದಲ್ಲಿ ನೆರವಾಗುತ್ತಿದ್ದರು. ಇನ್ನು ನಮ್ಮ ಮನೆಯಲ್ಲಿ ಗಣಪತಿ
ಮಾಡ ತಯಾರಾಗುತ್ತಿತ್ತು. ಸುಣ್ಣ ಬಳಿದುಕೊಂಡು --! ತೃತೀಯಾದ ದಿನ ಸ್ವರ್ಣಗೌರಿ ಬಹಳ ಹಿಂದೆ ವೆಂಕಣ್ಣ ಭಟ್ರು ಪೂಜೆಗೆ
ಬರುತ್ತಿದ್ದರು. ವಾಡೆಯಲ್ಲಿ ಒಟ್ಟು ಐದು ಮನೆ ಎಲ್ಲರೂ ಪ್ರತ್ಯೇಕ ಪೂಜೆ ಒಮ್ಮೊಮ್ಮೆ ತಿಥಿ ಲೋಪವಾಗಿ ಸ್ವರ್ಣಗೌರಿ, ಗಣಪತಿ
ಹಬ್ಬ ಕೂಡಿಯೇ ಬರುತ್ತಿದ್ದವು.ಆಗ ವೆಂಕಣ್ಣ ಭಟ್ರಿಗೆ ಡಿಮಾಂಡೋ ಡಿಮಾಂಡು....! ನಾವು ದೇಸಾಯರು ಅವಸರ ಜಾಸ್ತಿ
ಮತ್ತು ಟೈಮ್ ಟೇಬಲ್ ಪಾಲಿಸಾವ್ರು ಹೆಚ್ಚು ಕಮ್ಮಿ ಸರಿ ಬರುತ್ತಿರಲಿಲ್ಲ ಹೀಗಾಗಿ ಭಟ್ಟರ ಜೋಡಿ ಜಟಾಪಟಿ ಆಗಾಗ ಆಗುತಿತ್ತು..!
ವೆಂಕಣ್ಣ ಭಟ್ಟರಿಗೆ ವಯಸ್ಸಾದಾಗ ರಂಗದ ಮೇಲೆ ಬಂದವರು ಶಾಮಭಟ್ಟ ಗುರ್ಲಹೊಸೂರ್ ಅವರು ಇವರಿಗೊಂದು
ವಿಶೇಷ ಗುಣ ಇತ್ತು ಅದೆಂದರೆ ಅನುಕೂಲ ಸಿಂಧು ಅವಶ್ಯಕತೆಗೆ ತಕ್ಕಂತೆ ಮಂತ್ರ ಹಿಗ್ಗಿಸಿ ಕುಗ್ಗಿಸುತ್ತಿದ್ದರು. ದೇಸಾಯರು
ನಾವು ಗಣಪನಿಗೆ ಸ್ವತಃ ಪೂಜೆ ಮಾಡುತ್ತಿರಲಿಲ್ಲ ಶಾಮಭಟ್ರೇ ಮಡಿಯಿಂದ ಪೂಜೆ ಮಾಡುತ್ತಿದ್ದರು ಇದು ಚತುರ್ಥಿ ಹಾಗೂ
ಗಣಪತಿ ಕಳಿಸುವ ದಿನದ ಉತ್ತರ ಪೂಜೆ ಸೇರಿ ಅವರಿಗೆ ಕಂಟ್ರಾಕ್ಟು...ಇನ್ನು ಗಣಪತಿ ಕಳಿಸೋ ದಿನ. ನಮ್ಮದು ಮೂರುಪೂಜಿ
ಅಂದ್ರ ಜೇಷ್ಠಾಗೌರಿ ಪೂಜಾ ಶ್ರಾವಣದ ಮೊದಲ ಶುಕ್ರವಾರ ಕುಳಿತ ಗೌರಿಗೆ ಜೋಡಿಯಾಗಿ ಅಷ್ಟಮಿಯಂದು ಮತ್ತೊಬ್ಬ ಗೌರಿ
ಬರುತ್ತಿದ್ದಳು.ಒಟ್ಟು ನಾಲ್ಕು ಗೌರಿ ದೇವರ ಮನೆ ಮಾಡ ಭರ್ತಿ ಯಾಗುತ್ತಿತ್ತು. ಕೇದಿಗೆ, ಸಂಪಿಗೆ ಹೂ ವಾಸನೆ. ಅವ್ವ ಅಷ್ಟಮಿಗೆ
ಅಂತ ವಿಶೇಷ ಭಕ್ಷ್ಯ ತಯಾರಿಸುತ್ತಿದ್ದಳು---ಚಕ್ಕಲಿ,ಅಂಬೊಡಿ,ಸಕ್ರಿ ಹೋಳಿಗಿ, ಕರ್ಚಿಕಾಯಿ,ಉಂಡಿ , ಮೋದಕ, ಮಸಾಲಿ ಕಡಬು,ಪುಠಾಣಿ ಹೋಳಿಗಿ ಹೀಗೆ ನೈವೇದ್ಯದ ಎಲೆಗಳು --೮ --ಅಡಿಗೆ ಮನೆ ತುಂಬಿ ಹೋಗುತ್ತಿತ್ತು. ಅದೊಂದು ಕಾಲ
ಮಾಡಲಿಕ್ಕೆ ಆರ್ಥಿಕ ಅನುಕೂಲ ಅಷ್ಟಕ್ಕಷ್ಟೇ ಆದರೆ ಅವ್ವನ ಉಮೇದಿಗೆ ಎಣೆ ಎಲ್ಲಿ..?

ಗಣಪತಿ ಹಬ್ಬಕ್ಕೆ ಇನ್ನೊಂದು ವಿಶೇಷ ಅಂದ್ರ ನಮ್ಮ ಭಾವಿ. ಸುತ್ತಮುತ್ತಲ ಎಲ್ಲೂ ಭಾವಿ ಇರಲಿಲ್ಲ ಇದ್ರೂ ಕೆಲವ್ರು
ಗಣಪತಿ ಕಳಸಲಿಕ್ಕೆ ಅನುಮತಿ ಕೊಡ್ತಿರಲಿಲ್ಲ. ನಮ್ಮ ಭಾವಿ ಅನುಕೂಲ ಇತ್ತು. ನಮ್ಮ ಓಣಿ ಮಂದಿ ಅಷ್ಟ ಅಲ್ಲ ಹಿಂದಿನ ಓಣಿಯವ್ರು, ಕಿಲ್ಲೆದಾವ್ರು , ದಾಜೀಬಾನ್ ಪೇಟ್ ಮಂದಿ ಸಹ ನಮ್ಮದ ಭಾವಿ ಆಶ್ರಯಿಸತಿದ್ರು. ಮೊದಲೆ ದಿನದಿಂದನ ಸುರು
ಆದ್ರ ಮುಗಿಲು ಮುಟ್ಟತಿದ್ದುದು ಐದನೇ ದಿನ.ನಾ ಕಲಿತ ಸಾಲಿ ಕನ್ನಡ ಎರಡನೆ ನಂಬರ್ ನಮ್ಮದ ಓಣ್ಯಾಗ ಇತ್ತು ಆ ಶಾಲ್ಯಾಗ
ಗಣಪತಿ ಇಡೂ ಪದ್ಧತಿ .ಐದನೇ ದಿನಾ ಕಳಸಲಿಕ್ಕೆ ಮೊದಲು ಅವರ ಬರತಿದ್ರು ನಾಲ್ಕು ಗಂಟೆಗೆಲ್ಲ ಗೇಟಿನ ಹೊರಗೆ ಪಟಾಕಿ ಸದ್ದು ಶುರು ಅದು ಸುಮಾರು ರಾತ್ರಿ ೧೨ ರ ವರೆಗೂ ಮುಂದುವರೀತಿತ್ತು. ಕಳಸಲಿಕ್ಕೆ ಬರಾವ್ರು ಬರೇ ಕೈಯ್ಯಲ್ಲಿ ಹೋಗತಿದ್ದಿಲ್ಲ
ಮೊಸರು ಅವಲಕ್ಕಿ, ಸೇವು ಖಾರ ಹಾಕಿದ ಚುರುಮುರಿ ಬೊಗಸೆ ತುಂಬಿ,ಕಿಸೆ ತುಂಬಿ ತುಳುಕುತ್ತಿತ್ತು.

ಈ ಹಬ್ಬ ಹರಿದಿನ ಹೀಗೆ ಸುಮ್ಮನೆ ಬರೂದಿಲ್ಲ ಜೋಡಿ ನೆನಪಿನ ಎಳೆ ತರುತ್ತದೆ...
ಮತ್ತದೇ ಹಾಡು ನೆನಪಾಗುತ್ತದೆ " ಅಶಿ ಪಾಖರೆ ಏತಿ..." ಹೌದೆ ಅದು ಬರೀ ಎರಡು ದಿನದ ಸಂಬಂಧವೇ ಅಲ್ಲ ಏಳು
ಜನ್ಮದ್ದು ಅಥವ ಜನ್ಮಾಂತರದ್ದು .ಅದೇ ಕವಿ ಮತ್ತೊಂದು ಗೀತೆಯಲ್ಲಿ ಹೇಳುತ್ತಾರೆ " ಹ್ಯಾ ಜನ್ಮಾವರ ಹ್ಯಾ ಜಗಣ್ಯಾವರ
ಶತದಾ ಪ್ರೇಮ್ ಕರಾವೆ...." ಹೌದು ನೆನಪು ಹೀಗೆ ಅದು ಅಳಿಯೋದೇ ಇಲ್ಲ..!

Wednesday, July 22, 2009

ಗಾನ ಗಂಗೆಯ ಜತೆ.....



ಎರಡು ವರ್ಷದ ಹಿಂದಿನ ದಸರಾ ನಾ ಎಂದೂ ಮರೆಯದ ದಿನ ಆ ದಿನ ಸಾಕ್ಷಾತ್ ಗಾನಸರಸ್ವತಿ
ಜೊತೆ ಕಾಲ ಕಳೆಯುವ ಅವಕಾಶ ಸಿಕ್ಕಿತ್ತು. ವಿಷಯ ಹೀಗಿತ್ತು -----ನನ್ನ ಭಾವ
ಡಾ. ಗೋವಿಂದ ಜಾಲೀಹಾಳ ಇವರು "ಜಾ.ಗೋ" ಎಂಬ ಕಾವ್ಯನಾಮದಿಂದ ಅನೇಕ ರಚನೆ ಮಾಡಿದ್ದಾರೆ
೩ ಕವನಸಂಕಲನ ಹೊರತಂದಿದ್ದಾರೆ.ವಿಶೇಷ ಅಂದರೆ ಭಾರತೀಯ ಶಾಸ್ತ್ರೀಯ ಸಂಗೀತಗಾರರು ಹಾಗೂ
ಅವರುಗಳ ಸಂಗೀತ-ಶೈಲಿಗಳನ್ನು ಕುರಿತು ೧೬ ಕವಿತೆಗಳನ್ನು "ಸಂಗೀತಕವಿತಾಕುಸುಮಮಾಲಾ" ಎಂಬ
ಶೀರ್ಷಿಕೆಯಡಿಯಲ್ಲಿ ಬರೆದಿದ್ದಾರೆ ಇದು "ಗೋವಾ ದರ್ಪಣ" ದಲ್ಲಿ ಪ್ರಕಟವೂ ಆಗಿತ್ತು.
ಗಂಗೂಬಾಯಿ ಹಾನಗಲ್ ಮೇಲೆ ಬರೆದ ಕವಿತೆ ಅವರಿಗೆ ನೀಡಿ ಅವರ ಆಶೀರ್ವಾದ ಪಡೆಯುವ ಇರಾದೆ
ಅವರಿಗಿತ್ತು. ಆದರೆ ಅನಾರೋಗ್ಯದ ಕಾರಣ ಅವರು ಬರಲಾಗಲಿಲ್ಲ ಹೀಗಾಗಿ ಮಗ ಮಿಲಿಂದ,ನಾನು ಹಾಗೂ ಆ ವೇಳೆ ಅಲ್ಲಿಯೇಇದ್ದ ನನ್ನ ಹೆಂಡತಿ,ಮಗಳು "ಗಂಗಾ ಲಹರಿ"ಗೆ ಕಾಲಿಟ್ಟೆವು.
ಅಲ್ಲಿದ್ದರು ಗಾನಸರಸ್ವತಿ ತೀರ ಸರಳವಾದ ನಡೆನುಡಿ,ಮಾತು ...ಹಾಗೆನೋಡಿದರೆ ಹುಬ್ಬಳ್ಳಿಯ ಹಳೆ ತಲೆಮಾರು
ಎಲ್ಲ ಅವರಿಗೆ ಪರಿಚಿತ ನನ್ನ ತಂದೆ,ದೊಡ್ಡಪ್ಪ ಮುಂತಾದವರ ನೆನಪು ತೆಗೆದು ಮಾತಾಡಿದರು. ನನ್ನ ಮಗಳ
ಹೆಸರು ಕೇಳಿದರು ಸುನಿಧಿ ಎಂದರೆ " ಹಾಡ್ ಹಾಡ್ತೀಯೇನು ಕಲಿತೀ ಏನ..." ಎಂದು ಕೇಳಿದರು. ಬನ್ನಿ ಕೊಟ್ಟು
ನಮಸ್ಕರಿಸಿದಾಗ ಅಪ್ಯಾಯತೆಯಿಂದ ಹರಸಿದರು....

ಪಂಡಿತಾ ಗಂಗೂಬಾಯಿ ಹಾನಗಲ್
-------------------------------
ಶಾರೀರದ ವಜ್ರದುಂಡಿಯ ಕಲ್ಲ ಕಡೆ-ಕಡೆದು
ಶಾಸ್ತ್ರೀಯ ಶುದ್ಧ ಸಂಗೀತದ ಅಂತರ್ಗಂಗೆಯ
ಪ್ರವಹಿಸಿದ ಸಂಗೀತ-ಭಗೀರಥಿ ! ಹೊಂಗೆಯ
ಮರದಡಿಯ ತಂಪು,ಮಾಮರಕಾಸರೆ ಪಡೆದು
ಹಾರಿಬಂದು ಹಾಡಿದ ಕೋಗಿಲೆಯ ಧ್ವನಿಯಿಂಪು,
ಕಾದ ಕಬ್ಬಿಣ ಶಲಾಕೆಯ ನಿಗಿ-ನಿಗಿ ಕೆಂಪು,
ನಿಖರ ತಾಕತ್ತು ,ಪ್ರಖರ ಪ್ರಹಾರ ಹೊಡೆದು
ಚಕಿತಗೊಳಿಪ ಗತ್ತು ಇವುಗಳೆಲ್ಲ ಮೇಳವಿಸಿದ
ಸಂಗೀತಸರಸತಿಯ ಹೆಮ್ಮೆಯ ನಾಸಿಕ ಧರಿಸಿದ
ಸಿಂಗಾರದ ಮುತ್ತಿನ ನತ್ತು ! ಕಂನಾಡು ಪಡೆದು
ನಾಡಿಗಿಡೀ ನೀಡಿದ ಕಿರಾನಾ-ಸಂಪತ್ತು ,
ತಾಯಿ ಅಂಬೂಬಾಯಿ ಹುಲಗೂರ ಗುರುದತ್ತು




ರಚನೆ: ಜಾ.ಗೋ
(ಡಾ.ಗೋವಿಂದ ಜಾಲೀಹಾಳ)

ಮೇಲಿನ ಕವನ ಗಂಗಾಮಾಯಿಗೆ ಓದಿ ತೋರಿಸುವ ಸೌಭಾಗ್ಯ ನನ್ನದಾಗಿತ್ತು. ಸುಮಾರು ಒಂದು-ಒಂದೂವರಿ
ತಾಸು ಅವರೊಡನೆ ಕಳೆದೆವು. ಅವರ ಮ್ಯುಸಿಯಂ ಒಂದು ಅಪರೂಪ ಅದ ನೋಡುವಾಗ ನಮ್ಮ ಭಾರತದೇಶದ
ಸಂಗೀತ ಪರಂಪರೆಯ ಭವ್ಯತೆ ಗೋಚರವಾಗುತ್ತದೆ. ಆ ಶರಧಿಯಲ್ಲಿ ನಾವು ತೃಣ ಸಮಾನರು. ಅಲ್ಲಿಯ ಭಾವಚಿತ್ರಗಳು, ಸಂಗೀತ ಉಪಕರಣಗಳು ಭವ್ಯ ಇತಿಹಾಸದ ಕುರುಹುಗಳಾಗಿ ಪ್ರಜ್ವಲಿಸಿವೆ.ನಿಜವೇ ತಾನೇ
ಸಂಗೀತ ನಮ್ಮ ದೇಶದಲ್ಲಿ ಎಲ್ಲ ಮತ ,ಪ್ರಾಂತ ,ಜಾತಿ ಮೀರಿ ಪ್ರಜ್ವಲಿಸುತ್ತಿರುವ ನಕ್ಷತ್ರ...ತಲೆ ಮಾರಿಂದ ಹೊಸ
ಪೀಳಿಗೆಗೆ ಈ ಅಮೃತವಾಹಿನಿ ಹರಿದು ಬರುತ್ತಲೇ ಇದೆ...

Saturday, July 11, 2009

ಪ್ರೇಮ ನಿವೇದನೆಯ ಪರಿ..

ಕೆಲವು ಹಾಡುಗಳು ಬಹಳ ಆತ್ಮೀಯವಾಗುತ್ತವೆ ನಾನು ಹೇಳಹೊರಟಿರುವುದು ಹಳೆಯ ಹಾಡುಗಳ ಬಗ್ಗೆ... ಇಲ್ಲಿ ವಿಶೇಶವೆಂದರೆ

ನಾಯಕಿಯರು ಮುಂದಾಗಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ....ಹೌದು ನಮ್ಮ ಬಹಳಷ್ಟು ನಿರ್ದೇಶಕರು ಹೆಣ್ಣು ಗಂಡಿನಿಂದ
ಚುಡಾಯಿಸುವ ಗೀತೆಗಳನ್ನೇ ಬರೆಸಿದ್ದಾರೆ ಹಾಗೂ ಅದೇ ಸರಿ ಎಂದು ನಂಬಿದ್ದರೂ ಕೂಡ...ಆದರೆ ಮಿಂಚುಳ್ಳಿಯಂತೆ ಈ ಕೆಳಗಿನ
ಗೀತೆಗಳು ಸ್ವಲ್ಪ ಭಿನ್ನ ವಾಗಿವೆ ಈ ಹಾಡುಗಳಲ್ಲಿ ತುಂಟತನವಿದೆ, ಆಹ್ವಾನವಿದೆ..ಆದರೂ ಒಂಥರಾ ಆತ್ಮೀಯತೆ ಇದೆ...

೧) " ಸಿಟ್ಟ್ಯಾಕೋ ಸಿಡಕ್ಯಾಕೋ ನನ್ ಜಾಣ...." ಎಲ್ ಆರ್ ಈಶ್ವರಿ ಹಾಡಿದ ಈ ಹಾಡು ಎಂದಿಗೂ ಹಸಿರಾಗಿದೆ. ನಾಯಕಿ ಇಲ್ಲಿ
ನಾಯಕನಿಗೆ ಮುಕ್ತವಾಗಿ ಆಹ್ವಾನ ನೀಡುತ್ತಾಳೆ... ಒಟ್ಟಾಗಿ ಇರುವ ಎಂದು. ಬಹುಶ ಕನ್ನಡದ ಮೊದಲ bold ಹಾಡು
ಇದು ಆಗಿರಲು ಸಾಕು. ಆದರೆ ನನಗೆ ಈ ಗೀತೆಯ ಬಗ್ಗೆ ಹೆಚ್ಚು ಗೊತ್ತಿಲ್ಲ ಯಾರು ಬರೆದವ್ರು, ಯಾವ ಚಿತ್ರದ್ದು ಇತ್ಯಾದಿ.

೨) "ನಿಲ್ಲಯ್ಯೋ ನಿಲ್ಲೊ ಓ ಕೆಂಚು ಮೀಸ್ಯೋನೆ..." ಮಂಜುಳಾ ಆಗ top ನಲ್ಲಿದ್ದರು... ಬಜಾರಿ ಪಾತ್ರ ಮಾಡುವುದರಲ್ಲಿ
ಎತ್ಟಿದ ಕ್ಯೆ . ನಾಯಕನ ಬೆನ್ನು ಹತ್ತಿ ತನಗೆ ಅವನ ಮೇಲೆ ಮನಸ್ಸಾಗಿರುವದನ್ನು ಹೇಳುತ್ತ ತಾನು ಪಟ್ಟ ಪಾಡು ಹೇಳುತ್ತಾಳೆ..
"ಗುಡ್ಡ ಬೆಟ್ಟ ಹತ್ತಿ ಬಂದೆ ಹಳ್ಳ ಕೊಳ್ಳ ದಾಟಿ ಬಂದೆ " ಉದಯಶಂಕರ ಈ ಹಾಡು ಬರೆದಾಗ ಅವರ ಮನದಲ್ಲಿ ಏನಿತ್ತೋ
ಗೊತ್ತಿಲ್ಲ. ಆದರೆ ಹಾಡು ಅದ್ಬುತ ವಾಗಿ ಮೂಡಿ ಬಂದಿದೆ. "ಬದುಕು ಬಂಗಾರವಾಯಿತು" ನಮ್ಮ ಹುಬ್ಬಳ್ಳಿ ಹಿರಿಯರು ತೆಗೆದ
ಚಿತ್ರ. ರಂಗರಾವ್ ಸಂಗೀತ ಇಂಪಾಗಿತ್ತು.ಜಾನಕಿ ಹಾಡು ಒಂಥರಾ ಟ್ರೆಂಡಸೆಟರ್ ಇದ್ದ ಹಾಗಿತ್ತು..

೩) " ಮುತ್ತು ಮಳೆಗಾಗಿ ಹೊತ್ತು ಕಾದಿದೆ...." ವಾಣಿ ಜಯರಾಂ ಹಾಡಿದ ತುಂಟ ಹಾಡು. ಇಲ್ಲಿ ನಾಯಕಿ ಶಹರದವಳು.
ಅವಳ ಆಹ್ವಾನ ಎಂಥದು ನೋಡ್ರಿ " ಕೆನ್ನೆ ಕೆಂಪಗಾಗಿ ತಂಪು ಕೋರಿದೆ ". ಗೀತಪ್ರಿಯ ಬರೆದ ರಸಿಕ ಗೀತೆ ಇದು.
ವಿಜಯ್ ಭಾಸ್ಕರ ಸಂಗೀತ ಸೊಗಸಾಗಿದೆ. "ಬೆಳುವಲದ ಮಡಿಲಲ್ಲಿ " ಒಂದು ಅಪರೂಪದ ಚಿತ್ರ - black&white-
ಸಿನೇಮಾ.ಹುಬ್ಬಳ್ಳಿ ಹುಡುಗಿ ಶಾಂತಲಾ ದುಂಡುಗಲ್ಲದ ಚಂದ್ರಶೇಖರ(ಆ ಕಾಲದ...!) ಛೇಡಿಸುವ ಈ ಹಾಡು ಸೊಗಸಾಗಿತ್ತು.

೪) " ಏ ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ ದನಿಯಲಿ ವಿನೂತನ ಜೀವ ಭಾವ ನೀ ತಂದೆ "
ಎಂತಹ ಸೊಗಸಾದ ಕಲ್ಪನೆ ನಾಯಕಿಯ ಎದೆಯಲ್ಲಿ ಕೋಗಿಲೆ ಇದೆ ಪ್ರೇಮ ಅದಕೆ ಹೊಸ ಭಾಶೆ ಬರೆದಿದೆ.
ಒಂದು ಸಾಮಾನ್ಯ ಸನ್ನಿವೇಶ ಆದರೇನು ಉದಯ್ ಶಂಕರ್ ಎನ್ನುವ ಮಾಂತ್ರಿಕ ಹೊಸ ದಿಕ್ಕು ತೋರಿಸಿದರು.
ಜಾನಕಿ ಹಾಡಿದ ಒಂದು ಸುಂದರ ಗೀತೆ ಇದು. ರಾಜನ್ ನಾಗೇಂದ್ರ ರ ಸಂಯೋಜನೆಯಲ್ಲಿ ಮೂಡಿದ ಹಾಡು
ಅಜರಾಮರ. ಅಣ್ಣಾವ್ರ ಸಿಡುಕು ಮುಖ , ಲಕ್ಷ್ಮಿಯ "ಅದಾ" ಎರಡರ ಮಿಲಾಪ ಹೇಗಿತ್ತು ಗೊತ್ತಾ?

೫) "ನಿನ್ನಾ ರೂಪು ಎದೆಯ ಕಲಕಿ ಕಣ್ಣು ಮಿಂದಾಗ..." ಗ್ರಾಮೀಣ ಸೊಗಡಿನ ಚಿತ್ರ "ಪರಸಂಗದ ಗೆಂಡೆತಿಮ್ಮ". ಸನ್ನಿವೇಶ
ನಾಜೂಕಿನದ್ದು. ವಿವಾಹಿತ ಮಹಿಳೆ ಪರಪುರುಷನನ್ನು ಮೋಹಿಸಿರುತ್ತಾಳೆ ಆದರೆ ಹಾಡಿನಲ್ಲಿ ಎಲ್ಲೂ ಅಶ್ಲೀಲತೆ ಇಲ್ಲ
ಇದ್ದದ್ದು ಕಾವ್ಯದ ಕುಸುರಿ ಕೆಲಸ. " ಆಸೆ ಗಂಧ ಹರಡೈತೆ " ಎನ್ನುವ ಸಾಲು ನೀಡುವ ಪುಳಕದ ಮಜಾ ಹೇಗಿದೆ.
ದೊಡ್ದ ರಂಗೇಗೌಡರು ಗ್ರಾಮೀಣ ಹಿನ್ನೆಲೆಯವರು. ತಮ್ಮ ಅನುಭವ ಧಾರೆ ಎರೆದಿದ್ದಾರೆ.
ಜಾನಕಿಯವರೇ ಸ್ವತ ಹೇಳಿದ್ದಾರೆ ಅವರು ಹಾಡಿದ ಉತ್ತಮ ಗೀತೆಗಳಲ್ಲಿ ಇದು ಒಂದು ಎಂದು. ನಿಜವೇ ರೀಟಾ ಅಂಚನ್ ಎಂತಹ
ಸೌಂದರ್ಯವತಿ...ಮಾನು ಅವರ ಕಳ್ಳ ನಗು ನೆನಪಿದೆಯೇ.....?

೬) " ಕಣ್ಣೀನ ಚೂರಿಯಲಿರುವಾ ಮರೆ ಮಾಡಿ ಬೆರಳಲಿ ಕರೆವಾ ...ಇವನ ದಿಗರೇನ ಕುದರಿ ಚದರೇನ...." ಅಪ್ಪಟ ದೇಶಿ ಹಾಡು
ಕಂಚಿನ ಕಂಠದ ಸುಶೀಲಾರ ಈ ಹಾಡು ಅದೆಷ್ಟು ಛಂದ.ಹಳ್ಳೀ ಹೆಣ್ಣಮಗಳು ನಿರ್ಭಿಡೆ ಸ್ವಭಾವದವಳು. ತನಗನಿಸಿದ್ದು ನೇರವಾಗಿ ಹೇಳುವವಳು ಗೆಳೆಯ ಬೇಲಿ ಜಿಗ್ಯಾವ ಅದೂ ಅಕಿಗೆ ಗೊತ್ತು ಆದರೂ ಅವನ ಬಗ್ಗೆ ಕೌತುಕ ಅದ. "ಹತ್ತ್ಯಾನ ಹಾರುವ
ಕುದುರಿ ಹಾರ್ಯಾನ ಹಿತ್ತಲ ಬೇಲಿ ಇವನ ಮ್ಯಾಲ ಕೂತಾವ ಪಿರತಿ ಹಗಲಿ ರಾತ್ರಿ ನನಗಿವನ ಭ್ರಾಂತಿ..." ಒಂಥರಾ ತೆರೆದ ಪುಸ್ತಕ ಅವಳ ಮನಸ್ಸು...ಓದಿದವರಿಗೆ ಮಾತ್ರ ತಿಳೀತದ ಅದರ ಸೊಗಸು...!

Wednesday, July 8, 2009

ಸದಾ ಕಾಡುವ ಹಾಡು---3

ಹಿಂದಿ ಸಿನೇಮಾ ಇರುವವರೆಗೂ ಕೆಲ ಹಾಡು ಸದಾ ಗುನುಗುನಿಸಲ್ಪಡುತ್ತವೆ...ಬಹುಷಃ ಸೂರ್ಯ ಚಂದ್ರ ಇರುವವರೆಗೂ ಅಂತ ಹೇಳಬಹುದೇನೋ ಈ ಹಾಡುಗಳಲ್ಲಿ ಒಂದು ಅದ್ಭುತ ರೀತಿಯ ಶಬ್ದಗಳ ಚಾಲಾಕಿತನ ಇದೆ
ಈ ಸಾಲು ಗಮನಿಸಿ "ಖಾಲಿ ಹಾಥ ಶಾಮ್ ಆಯಿ ಹೈ ಖಾಲಿ ಹಾಥ ಜಾಯೇಗಿ ..", " ಅಪನಾ ಕಿನಾರಾ ನದಿಯಾಕಿ ಧಾರಾ ಹೈ..", " ಪಾನಿ ಪಾನಿರೆ ನೈನೊಂಮೆ ಭರ್ ಜಾ ನಿಂದೇ ಖಾಲಿ ಕರ್ ಜಾ...".ಮೇಲಿನ ಸಾಲುಗಳಲ್ಲಿ ಕವಿ ತನ್ನ ಪ್ರತಿಭೆ ಪ್ರದರ್ಶಿಸಿದ್ದು ಮಾತ್ರವಲ್ಲ ಬದಲು ಶಬ್ದಗಳ ಬಲೆ ನೇಯ್ದಿದ್ದಾನೆ ಆ ಬಲೆಯಲ್ಲಿ ಬಿದ್ದು ಒದ್ದಾಡುವ ನಾವು ನಿಧಾನವಾಗಿ ಅವನ
ಪ್ರಭಾವ ವಲಯಕ್ಕೆ ಸಿಗುತ್ತೇವೆ ಆ ಕಲೆಗಾರನ ಕುಸುರಿ ಕೆಲಸಕ್ಕೆ ಮಾರು ಹೋಗುತ್ತೇವೆ.... ಮೇಲಿನ ಎಲ್ಲ ಹಾಡು ಬರೆದವರು
ಗುಲ್ಜಾರ್ . ಹಿಂದಿ ಸಿನೆಮಾ ಕಂಡ ಪ್ರತಿಭೆಯ ಖನಿ ಈತ. ಈತ ಬರೀ ಹಾಡು ಸಂಭಾಷಣೆ ಗೆ ಮಾತ್ರ ಸೀಮಿತವಾಗಲಿಲ್ಲ ಬದಲು ತೀರ ಸಂವೇದನೆಯ ಸಿನೇಮಾ ತೆಗೆದ ವಾಹ್ ಎನಿಸಿಕೊಂಡ. ಒಮ್ಮೆ ಕಣ್ಣು ಹಾಯಿಸುವ....."ಪರಿಚಯ್ ","ಕೋಶಿಶ್ ", " ಖುಷಬೂ","ಮಾಚಿಸ್ " ," ಇಜಾಜತ್" ಎಂತೆಂತಹ ಸಿನೇಮಾಗಳು...ನಾನು "ಮೌಸಮ್" ಉಲ್ಲೇಖಿಸುವದನ್ನು ಮರೆತೆ.
ಗುಲ್ಜಾರ್ ಸಂವೇದನಶೀಲ ಕಥೆಗಾರ ಕೂಡ. ನಾನು ಇಲ್ಲಿ ಹೇಳಹೊರಟಿರುವುದು ಒಂದು ಹಾಡಿನ ಬಗ್ಗೆ ಪೀಠಿಕೆ ಉದ್ದ ಅನಿಸಿತೇ ಆದರೆ ಹಾಡಿನ ಸೂಕ್ಷ್ಮತೆ ಅನುಭವಿಸಬೇಕಾದರೆ ಕರ್ತನ ಗುಣಗಾನ ಮಾಡಲೇ ಬೇಕಲ್ಲ.

ಶೇಖರ್ ಕಪೂರ್ ನಿರ್ದೇಶಿಸಿದ ಎರಡನೇ ಚಿತ್ರ ಮಾಸೂಮ್. ಅವು ನನ್ನ ಪಿಯುಸಿ ದಿನಗಳು ಊರಲ್ಲೆಲ್ಲ ಚಿತ್ರದ ಪೋಸ್ಟರು ಹಾಲುಗಲ್ಲದ ಜುಗಲ್ ಹಂಸರಾಜ್ ರಾರ‍ಾಜಿಸುತ್ತಿದ್ದ. ಹಾಡು ಬರೆದವರು ಗುಲ್ಜಾರ್ ಆರ್ ಡಿ ಸಂಗೀತ ಒಂದೊಂದು ಹಾಡು ಅದ್ಭುತ..ಯಾವ ಹಾಡು ಹೆಸರಿಸಬೇಕು. ಎದೆಗೆ ತಟ್ಟಿದ ಇಂದಿಗೂ ಕಾಡುವ ಹಾಡು "ತುಜ್ ಸೆ ನಾರಾಜ್ ನಹಿ ಜಿಂದಗಿ ಹೈರಾನ್ ಹೂಂ ಮೈ ತೇರೆ ಮಾಸೂಮ್ ಸವಾಲೊಂಸೆ ಪರೇಶಾನ ಹೂಂ ಮೈ...".ನಿಜವೇ ನಾವೆಲ್ಲ
ಅಂದುಕೊಳ್ಳೊಲ್ಲವೇ ಛೆ ಈ ಹಾಳು ಜೀವನ .ಹಾಡೂ ಅದೇ ಹೇಳುತ್ತೆ ಆದರೆ ಹೇಳುವ ಧಾಟಿ ಅದೆಷ್ಟು ಕಲಾತ್ಮಕ.....!
ಕೆಲವರಲ್ಲಿ ಪ್ರತಿಭೆ ಧಂಡಿಯಾಗಿರುತ್ತದೆ ಇಲ್ಲ ವಾದರೆ ಇಂತಹ ಸಾಲು ಹುಟ್ಟಲು ಸಾಧ್ಯವೇ ಇಲ್ಲ..." ಜೀನೆ ಕೆ ಲಿಯೇ ಸೋಚಾಹಿ ನಹಿ ದರ್ದ್ ಸಂಭಾಲನೆ ಹೋಂಗೆ ಮುಸ್ಕುರಾಯೆ ತೋ ಮುಸ್ಕುರಾನೆಕಿ ಕರ್ಜ ಉತಾರನೆ ಹೋಂಗೆ ಮುಸ್ಕುರಾವೂಂ ಕಭಿ ತೊ ಲಗತಾ ಹೈ ಜೈಸೆ ಹೋಟೋಂಪೆ ಕರ್ಜ ರಖಾ ಹೈ..."ಅದೆಂತಹ ಅದ್ಭುತ ಕಲ್ಪನೆ ಎಲ್ಲ ಧರ್ಮಗ್ರಂಥಗಳೂ ಹೇಳತಾವ ಪುಣ್ಯ, ಕರ್ಮ, ನಾಳಿನ ಅನಿಶ್ಚಿತತೆ. ಆದರೆ ಸಾಮಾನ್ಯ ಮನುಷ್ಯ ನೋಡಿ ದಂಗು ಹೊಡೆದಿದ್ದಾನೆ..ಅವನಿಂದು ನಗುತ್ತಿದ್ದಾನೆ, ಖುಷಿಯಾಗಿದ್ದಾನೆ ಆದರೆ ನಾಳೆ ಪರಿಸ್ಥಿತಿ ಬಿಗಡಾಯಿಸಿದಾಗ ತಳಮಳ ಗೊಳ್ಳುತ್ತಾನೆ. ಜೀವನ ಪ್ರಶ್ನೆ ಕೇಳುತ್ತಲೇ ಇದೆ ಉತ್ತರ ಹೇಳಲಾಗುತ್ತಿಲ್ಲ ನಿನ್ನೆ ಮನಃಪೂರ್ತಿ ನಕ್ಕಿದ್ದಕ್ಕೆ ಇಂದು ಬಡ್ಡಿ ಕೀಳುತ್ತಿದೆ ಈಗ ನಕ್ಕರೂ ಅದೊಂದು ನಾಳೆ ತಾ ತೀರಿಸಬೇಕಾಗಿರುವ ಸಾಲ ಎಂಬುದು ಗೊತ್ತಾದಾಗ ನಗಲು ಮನಸ್ಸೆಲ್ಲಿ ಬರುತ್ತದೆ.....?

ಎರಡನೇ ನುಡಿ ಈ ಹಾಲಿನ ಹೈ ಲೈಟ ಅಂತ ಹೇಳಬೇಕು...ಕವಿ ಹೊರಳಿದ್ದಾನೆ ನಗುವುದರ ಬಗ್ಗೆ
ಹೇಳುತ್ತ ಕಣ್ಣೀರಿನ ಬಗ್ಗೆ ಹೇಳುತ್ತಾನೆ... ಸಾಲು ಗಮನಿಸಿ .....

आज अगर भर आइ है
बूंदे बरस जायेगि
कल क्या पता जिनके लिये
आंखे तरस जायेगि
जाने कहां गुम हुवा कहां खॊया
एक आंसू छुपाके रखा था
ಕಣ್ಣೀರು ಎಲ್ಲ ಕಾಲದಲ್ಲು ಸಿಗಲಾರವು ಅಥವ ನಾವು ಅಳಬೇಕೆಂದುಕೊಂಡಾಗ ಅವು ಸುರಿಯಲಾರದೇ ಹೋಗಬಹುದು ಅವನ್ನು ಜತನದಿಂದ ಕಾಯ್ದುಕೋಬೇಕಾಗಿದೆ...ಇದೊಂಥರಾ ವಿಚಿತ್ರ ಕಲ್ಪನ ಹೀಗಾಗಬಹುದೇ ಕವಿ ಉತ್ಪ್ರೇಕ್ಷೆ ಮಾಡತಿದ್ದಾನೆಯೇ ಗೊತ್ತಿಲ್ಲ. ಆದರೆ ಶಬ್ದಗಳು ಸೃಷ್ಟಿಸುವ ಅದ್ಭುತ ಕುಸುರಿಗಾರಿಕೆ ಇದೆ ಅಲ್ಲ ಅದಕ್ಕೆ ಉಘೆ ಉಘೆ ಅನ್ನದೇ ವಿಧಿಯಿಲ್ಲ. ಈ ಗೀತೆ ಗೀಳಾಗಿ ಕಾಡುವುದು ಶಬ್ದಗಳ ಕಲೆಗಾರಿಕೆಯಿಂದ ಮಾತ್ರ. ಚಿತ್ರದ ಸನ್ನಿವೇಶಕ್ಕೆ ಈ ಹಾಡು ಅನುರೂಪ ವಾಗಿತ್ತು ಅಥವಾ ಈ ಹಾಡು ಸನ್ನಿವೇಶ ಮೀರಿ ಎಲ್ಲ ಸಂವೇದನಾಶೀಲ ಮನಸ್ಸುಗಳು ಸದಾ ಗುನುಗಲು ಆಶಿಸುವ ಹಾಡು.... ಮರೆಯದ ಅಥವಾ ಮರೆಯಲು ಸಾಧ್ಯವೇ ಇಲ್ಲದ ಸದಾ ಕಾಡುವ ಈ ಹಾಡು....!