Tuesday, September 22, 2009

ಆಶಾಗೆ ೭೬ ಅಂತೆ.....!

ಮೊನ್ನೆ ಟಿವಿಯಲ್ಲಿ ಆಶಾ ಮಾತನಾಡುತ್ತಿದ್ದಳು. ಒಳಗು ಬಿಚ್ಚಿಡಬಹುದು ಎಂದು ಕಾದಿದ್ದೆ ನಿರಾಸೆಯಾಯಿತು. ಅವಳು ಅನುಭವಿಸಿದ್ದು ಅವಳು ಮಾತ್ರ ಹೇಳಬೇಕು.ಬೇರೆ ಯಾರೇ ಹೇಳಿದರೂ
ಅದು ಗಾಸಿಪ್ ಅನಿಸಿಕೊಳ್ಳುತ್ತೆ. ಆಶಾ ಏನೂ ಬದಲಾಗಿಲ್ಲ ಇದು ಅಂದೇ ರಾತ್ರಿ ನಿರೂಪಿತವಾಯಿತು.
ಝೀ ಟಿವಿಯ ಲಿಟಲ್ ಚಾಂಪ್ ಕಾರ್ಯಕ್ರಮ ಅವಳು ಮುಖ್ಯ ಜಡ್ಜ ಆಗಿದ್ದಳು. ಶ್ರೇಯಸಿ ಎನ್ನೋ ಹನ್ನೆರಡು
ವರುಷದ ಹುಡುಗಿ ಆಶಾ ಹಾಡಿದ " ಪ್ಯಾರ್ ಕರನೆವಾಲೆ ಪ್ಯಾರ್ ಕರತೆ ಹೈ ಶಾನ್ ಸೆ ...." ಅಂದಾಗ
ಎಲ್ಲರಿಗಿಂತ ಮೊದಲು ಎದ್ದು ನಿಂತು ಚಪ್ಪಾಳೆ ಹೊಡೆದಳು...!

ಆಶಾಳ ಈ ಗುಣವೇ ಅವಳ ದೌರ್ಬಲ್ಯ ಆಗಿತ್ತೇ ? ಇತಿಹಾಸ ಸಾಕ್ಷಿ ಹೇಳುತ್ತದೆ ಆಶಾಳಿಂದ ಅನೇಕ
ಗೀತೆಗಳು ಕಸಿಯಲ್ಪಟ್ಟಿವೆ ಎಂದು, ಪ್ರಮುಖ ಉದಾಹರಣೆ "ಏ ಮೇರೆ ವತನ್ ಕೆ ಲೋಗೋ..." ಹಾಡು.ಸಂಗೀತ ನಿರ್ದೇಶಕ
ಸಿ. ರಾಮಚಂದ್ರ ಆಶಾಳನ್ನು ಹಾಡಲು ಆಯ್ಕೆ ಮಾಡಿದ್ದ. ರೆಕಾರಡಿಂಗ್ ವೇಳೆ ಲತಾನೂ ಸ್ಟುಡಿಯೋದಲ್ಲಿದ್ದಳು. ಆಶಾಗೆ ಇರಿಸು ಮುರಿಸು
ನಿಜವಾಗಿ ಲತಾನೇ ಈ ಹಾಡು ಹಾಡಬೇಕಾಗಿತ್ತು ಆದರೆ ಸಿ.ರಾಮಚಂದ್ರ ಗೆ ಅದು ಇಷ್ಟ ಇರಲಿಲ್ಲ. ಅಳುಕುತ್ತ ಆಶಾ ಹಾಡಲು
ಮೊದಲಿಟ್ಟಳು. ಹಾಡು ಮುಂದುವರೆಸುವುದು ಅವಳಿಗಾಗಲಿಲ್ಲ. ಹೊರಗಡೆ ಅಕ್ಕ ಕುಳಿತಿದ್ದಾಳೆ..ತನ್ನ ಜೀವನದ ಮಹತ್ತರ ಗೀತೆ ಇದು
ಅದರೆ ಲತಾಳ ಮುಖದಿಂದ ಹೊಮ್ಮಿದ ಭಾವ ಆಶಾಳಿಗೆ ಅಧೀರ ಮಾಡಿತು. ಹಾಡು ನಿಲ್ಲಿಸಿ ಹೊರಬಂದಳು.. ಸಿ. ರಾಮಚಂದ್ರನಿಗೆ
ದಿಗಿಲು...ಆಶಾ ಸೌಮ್ಯವಾಗಿ ಹೇಳಿದ್ಲು.." ಮಿ ಹೀ ಗಾಣ ಮಃಣೂ ತಾಯಿಲಾ ಅವಡತ್ ನಾಹಿ.....". ಯಾಕೆ ಅವಳು ಹಾಗೆ ಮಾಡಿದ್ಲು ಇದು
ಅವಳೇ ಹೇಳಬೇಕು. ಸಿ.ರಾಮಚಂದ್ರ ತನ್ನ ಆತ್ಮಚರಿತ್ರೆಯಲ್ಲಿ ಈ ಪ್ರಸಂಗ ದಾಖಲಿಸಿದ್ದಾನೆ.

ಹಿಂದಿ ಸಿನೇಮಾದ ಹಾಡಿನ ಇತಿಹಾಸ ಗಮನಿಸಿದರೆ ಅದು ಲತಾ ಹಾಗೂ ಆಶಾ ನಡುವೆಯೇ
ಸುತ್ತುತ್ತದೆ. ಅದಾವ ಮಹಾರಾಯ ಆಶಾ ಬರಿ ಚೆಲ್ಲು ಚೆಲ್ಲು , ಕುಣಿತದ ಹಾಡಿಗೆ ಹೊಂದುತ್ತಾಳೆ ಎಂದು ನಿರ್ಧರಿಸಿದ್ದನೋ ಗೊತ್ತಿಲ್ಲ,
ನಿಯಮದಂತೆ ಇದನ್ನು ಪಾಲಿಸಲಾಗುತ್ತಿತ್ತು. ಈ ನಿಯಮ ಮೊದಲು ಮುರಿದವ ಎಸ್. ಡಿ ಬರ್ಮನ್. ಬಂದಿನಿ ಚಿತ್ರದ
" ಅಬ್ ಕೆ ಬರಸ್ ಭೇಜ ಭೈಯಾಕೊ ಬಾಬುಲ್..." ಹಾಡಿಗೆ ಆಶಾ ಆತ್ಮವನ್ನೇ ಧಾರೆ ಎರೆದಿದ್ದಳು. ಆದರೇನು ನಶೀಬು ಬದಲಾಗಲಿಲ್ಲ.
ಆಶಾ ಗೆ ಹಾಡು ಸಿಗುವುದೇ ಅಪರೂಪ ಸಿಕ್ಕ ಹಾಡುಗಳಿಗೆ ಸರ್ವಸ್ವ ಕೊಡುತ್ತಿದ್ದಳು. ಹಾಡು ಒಂದೊಂದು ಮುತ್ತಿನಂತೆ.....
" ಕಾಲಿ ಘಟಾ ಛಾಯೆ ಮೋರಾ ಜಿಯಾ ಘಬರಾಯೆ....."
" ಆಯಿಯೇ ಮೆಹರಬಾ ಬೈಟಿಯೇ ಜಾನೆ ಜಾ...."
" ಶೋಖ್ ನಜರ್ ಕಿ ಬಿಜಲಿಯಾಂ......"
" ಸಾಕಿಯಾ ಆಜ್ ಮುಝೆ ನೀಂದ ನಹಿ ಆಯೇಗಿ..."
" ಯೇ ಹೈ ರೇಶಮಿ ಜುಲ್ಫೋಂಕಾ ಅಂಧೇರಾ ನ ಘಬರಾಯಿಯೇ...."

ಪಂಚಮ್ ಅವಳ ಜೀವನದಲ್ಲಿ ಬಂದ. ಇವಳ ದನಿಗೆ ಹೊಸ ಆಯಾಮ ನೀಡಿದ. ದನಿಯ ಏರಿಳಿತ ಆಸ್ತಿ ಅನಿಸುವಂತೆ ಮಾಡಿದ. ಸ್ವತಃ ಆಶಾ ದಂಗಾದಳು. ಈ ಜೋಡಿ ಹೊಸ ಪ್ರಯೋಗಗಳಿಗೆ ನಾಂದಿ ಹಾಡಿತು.
ತೀಸರಿ ಮಂಜಿಲ್ ನಿಂದ ಶುರುವಾಗಿದ್ದು ಇಜಾಜತ್ ವರೆಗೆ ನಿರಂತರವಾಗಿ ಪ್ರವಹಿಸಿತು. ಮುತ್ತುಗಳು ಬೇಜಾನ್
ಇವೆ ಕೆಲ ಸ್ಯಾಂಪಲ್ ಗಳು ಹೀಗಿವೆ....

" ಆಆಜಾ ಆಆಜಾ ಮೈ ಹೂಂ ಪ್ಯಾರ ತೇರಾ..."
" ಪಿಯಾತೂ ಅಬ್ ತೊ ಆಜಾ...."
" ಆಜ್ ಕಿ ರಾತ್ ಕೋಯಿ ಆನೆ ಕೊ ಹೈ ರೆ ಬಾಬಾರೆ...."
" ಚುರಾಲಿಯಾ ನೆ ಹೈ ತುಮನೆ ಜೋ ದಿಲ್ ಕೊ...."
" ಕತರಾ ಕತರಾ ಬೆಹತಾ ಹೈ...."

ಹೆಲೆನ್ , ಬಿಂದು ,ಪದ್ಮಾಖನ್ನ ಅನೇಕ ಡಾನ್ಸರಗಳ ಮೇಲೆ ಚಿತ್ರಿತವಾದ ಎಲ್ಲ ಹಾಡುಗಳಿಗೂ ಆಶಾಳ ಹಿನ್ನೆಲೆ
ದನಿ ಜೀವಾಳವಾಗಿತ್ತು.. ಈ ಪರಂಪರೆ ಮುರಿದವ ಖಯ್ಯಾಮ್. ರೇಖಾ ಉಮ್ರಾವ್ ಜಾನ್ ಆಗಿ ನಟಿಸುತ್ತಾಳೆ
ಎಂದಾಗ ಚಿತ್ರೋದ್ಯಮ ಹುಬ್ಬೇರಿಸಿತ್ತು. ಖಯ್ಯಾಮ್ ಆ ಚಿತ್ರದ ಹಾಡುಗಳನ್ನು ಆಶಾಳಿಂದ ಹಾಡಿಸುತ್ತಾನೆ ಅಂದಾಗ ಉದ್ಯಮದ ಮಂದಿ ದಂಗಾದರು. ಖಯ್ಯಾಮ್ ಉಮ್ರಾವ್ ಜಾನ್ ಬಗೆಗಿನ ಪುಸ್ತಕ ಆಶಾಗೆ ಓದಲು
ಕೊಟ್ಟ. ಉಮ್ರಾವ್ ಜಾನ್ ಬಗ್ಗೆ ತಿಳಿದುಕೊಳ್ಳಲು ಅದು ನೆರವಾಯಿತು.ಅಭಿನಯಕ್ಕೆ ರೇಖಾ ರಾಷ್ಟ್ರೀಯ ಪ್ರಶಸ್ತಿ
ಪಡೆದರೆ ಆಶಾ " ದಿಲ್ ಚೀಜ್ ಕ್ಯಾ ಹೈ ಆಪ್ ಮೇರಿ ಜಾನ್ ಲಿಜೀಯೆ..." ಗೆ ಮೊದಲಬಾರಿ ರಾಷ್ಟ್ರಪ್ರಶಸ್ತಿ
ಗಳಿಸಿಕೊಂಡಳು.

ಆಶಾಗೆ ಒಂದು ಗುಣ ದೈವದತ್ತವಾಗಿ ಬಂದಿದೆ. ಬದಲಾವಣೆಗೆ ಬಹಳ ಬೇಗ ಹೊಂದಿಕೊಳ್ಳುತ್ತಾಳೆ. ಇಲ್ಲವಾದರೆ ೬೨ರ ಹರೆಯದಲ್ಲಿ ಮಾದಕವಾಗಿ..." ತನಹಾ ತನಹಾ ಯಹಾಂಪೇ ಜೀನಾ ಏ ಕೋಯಿ ಬಾತ್ ಹೈ..." ಅನಲಾಗುತ್ತಿತ್ತೇ...? ಅಲ್ಬಮ್ ನಲ್ಲೂ ಹಾಡಿ ಪರಾಕ್ರಮ ಮೆರೆದಳು. "ಜಾನಮ್ ಸಮಝಾಕರೋ.." ಒಂದು ಕಾಲದ ಹಿಟ್ ಅಲ್ಬಮ್.

ಆಶಾ ಒಂದು ಶಮಾ ಇದ್ದಂತೆ.ಅನೇಕ ಯುಗ ಉರುಳಿವೆ ಆದರೂ ಅದು ಬೆಳಗುತ್ತಲೇ ಇದೆ
ಅವಳೇ ಹಾಡಿದ ಸಾಲು ಹೀಗಿದೆ....
"ಇಕ್ ಶಮ್ಮೆ ಪರೋಜಾಂಕೊ ಆಂಧಿಸೆ ಡರಾತೆ ಹೋ....
ಇಸ್ ಶಮ್ಮೆ ಪರೋಂಜಾಕೆ ಪರವಾನೆ ಹಜಾರೋಂ ಹೈ..."









-----------------------------------------------------

16 comments:

  1. ಲತಾಳ ದನಿ violinದಂತೆ. ಆಶಾಳ ದನಿ ಸಾರಂಗಿಯಂತೆ.
    ಆಶಾಳ "ದೀವಾನಾ ಮಸತಾನಾ ಹುಆ ದಿಲ್" ಮಧುರತೆಯ ಪರಾಕಾಷ್ಠೆ ಎನ್ನಬಹುದು. ಆಶಾ sad songsನಲ್ಲೂ ಹೆಚ್ಚುಗಾರಿಕೆ ತೋರಿದ್ದಾಳೆ. ಉದಾ:ಚೈನಸೆ ಹಮಕೊ ಕಭೀ...

    ಆಶಾ ಲತಾಳ ನೆರಳಿನಂತೆ ಇರಬೇಕಾದಂತಹ ಪ್ರಸಂಗವು ನಮ್ಮ ದುರ್ದೈವ ಎನ್ನಬೇಕು.

    ReplyDelete
  2. ದೇಸಾಯಿ ಸರ್,

    ಆಶಾ ಬೋಂಸ್ಲೆಯವರ ಬಗ್ಗೆ ತುಂಬ ಚೆನ್ನಾದ ಮಾಹಿತಿಯನ್ನು ಕೊಟ್ಟಿದ್ದೀರಿ...ಅವರ ಹಾಡುಗಳೆಂದರೆ ನನಗೂ ತುಂಬಾ ಇಷ್ಟ....

    ReplyDelete
  3. ಆಶಾ ಭೋಂಸ್ಲೆ ಯವರ ಸುಮಧುರ ಕ೦ಠದಲ್ಲಿ ಮೂಡಿಬ೦ದ ಹಳೆಯ ಹಿ೦ದಿ ಹಾಡುಗಳ ನೆನಪುಗಳ ಮೆರವಣಿಗೆ ಮನಸಿನ೦ಗದಲ್ಲಿ ಹೊರಟಿತು, ನಿಮ್ಮ ಲೇಖನ ಓದಿ. ಚೆನ್ನಾಗಿದೆ.

    ReplyDelete
  4. ದೇಸಾಯರೇ, ನನ್ನ ಕಾಮೆ೦ಟಿನಲ್ಲಿ "ಮನಸಿನಂಗ" ಎ೦ದಿರುವುದನ್ನು "ಮನಸಿನ೦ಗಳ" ಎ೦ದು ಓದಿಕೊಳ್ಳಿ

    ReplyDelete
  5. ಸರ್, ನಿಮ್ಮ ಬರಹದಿಂದ ಮತ್ತೊಮ್ಮೆ ಆಶಾ ಭೋಂಸ್ಲೆ ಅವರ ಚೆಂದ ಚೆಂದ ಹಾಡುಗಳನ್ನ ಮೆಲಕು ಹಾಕುವಂಗಾತು..ಥ್ಯಾಂಕ್ಸ್ ರೀ ಸರ್. ಕೆಲವರ ನಸೀಬ ಹಂಗ್ ಇರ್ತದ, ಅವ್ರು ಏನ ಮಾಡಿದ್ರೂ ಜನರಿಗೆ ಬ್ಯಾರ್ಯಾನ ಅನಸ್ತಿರ್ತದ.ಅಂಥಾ ಮಂದ್ಯಾಗ ಆಶಾ ಸಹ ಒಬ್ರು.

    ReplyDelete
  6. ತುಂಬಾ ಚೆನ್ನಾಗಿ ಬರೆದಿದ್ದೀರ. ಆಶಾಳ ಹಾಡುಗಳನ್ನು ನೆನಪಿಸಿದ್ದಕ್ಕೆ ತುಂಬಾ ಧನ್ಯವಾದಗಳು.

    ReplyDelete
  7. ಕಾಕಾ ಆಶಾಳ ಮಧುರ ಹಾಡು ನೆನಪು ಮಾಡಿದ್ರಿ ..ಅಕಿದು ಇನ್ನೊಂದು ಹಾಡು ಅದ ಅದರ ಬಗ್ಗೆ ಹೆಚ್ಚಿಗೆ ಅಂದ್ರ ಯಾರು ಬರದ್ರು,
    ಕಂಪೋಸ್ ಮಾಡಿದವರು ಗೊತ್ತಿಲ್ಲ ಆ ಹಾಡು.."ಢಲ್ತಿ ಜಾಯೇ ಚುನರಿಯಾ ಹಮಾರಿ ಓ ರಾಮ್ ಪೀ ಸೆ ಮಿಲ್ ಕೆ ಬೆಹಕನೆಕಿ ದಿನ ಆಯೇ ಹೈ..." ನಿಮಗ ಇದರ ಬಗ್ಗೆ ಗೊತ್ತದ ಏನು

    ReplyDelete
  8. ಶಿವು ಮೆಚ್ಚಿ ಪ್ರೋತ್ಸಾಹ ನೀಡಿದ್ದಕ್ಕೆ ಧನ್ಯವಾದಗಳು....

    ReplyDelete
  9. ಪರಾಂಜಪೆ ಸರ್ ಆ ಮೆರವಣಿಗೆ ಎಂದೂ ನಿಲ್ಲದಿರಲಿ ಇದೇ ಹಾರೈಕೆ ಏನಂತೀರಿ

    ReplyDelete
  10. ಮೇಡಂ ಆಗಾಗ ಬರ್ರಿ ಒಪ್ಪಿದ್ರ ಹೊಗಳ್ರೀ ತಪ್ಪಿದ್ರ ತೆಗಳ್ರೀ ಅಭಿಪ್ರಾಯಕ್ಕ ಧನ್ಯವಾದಗಳು...

    ReplyDelete
  11. ಗೋಪಾಲ್ ಅಭಿಪ್ರಾಯಕ್ಕೆ ಧನ್ಯವಾದಗಳು...

    ReplyDelete
  12. ಆಶಾ ಅವರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದ. ಓದುವ ವಯಸ್ಸಿನಲ್ಲಿ ಅವರ ಹಾಡುಗಳನ್ನು ಕೇಳುತ್ತಿದ್ದೆ. ಆದರೆ ಈಗ ಹಿಂದಿ ಹಾಡುಗಳು ಕೇಳುವುದು ಕಡಿಮೆ. ಅವರ ಇತಿಹಾಸ ನನಗೆ ಅಷ್ಟು ತಿಳಿಯದು. ಜೀವನದಲ್ಲಿ ಬರೀ ಹೋವುಗಳನ್ನೇ ಕಂಡರೆ ಅದರ ನೆನಪುಗಳು ಮಾಸಬಹುದು. ಆಲ್ಲಲ್ಲಿ ಮುಳ್ಳುಗಳೂ ಇದ್ದರೆ, ಹೋವುಗಳಿಗೆ ಇನ್ನೂ ಹೆಚ್ಚು ಶೋಭೆ ಆಲ್ಲವೇ?

    ReplyDelete
  13. ಉತ್ತಮ ಲೇಖನ ಸರ್!! :-)

    ನೀವು ಹೇಳಿದ ಹಾಗೆ ಆಶಾ ಭೋಂಸ್ಲೆ ಅವರನ್ನು ಒಂದು ಶೈಲಿಯ ಅಥವಾ ಒಂದೇ genre ಯ ಹಾಡುಗಳಿಗೆ ಸೀಮಿತವಾಗಿಸಿಬಿಟ್ಟಿದ್ದು ನಿಜಕ್ಕೂ ದುರಾದೃಷ್ಟದ ವಿಷಯ. ಹೀಗಾಗಿ ಲತಾ ದೀದಿ ಕೂಡ ಸಾಫ್ಟ್-ರೋಮ್ಯಾಂಟಿಕ್-ಪ್ಯಾಥೋ ಮುಂತಾದ ಶೈಲಿಗಳಿಗೆ ಬ್ರಾಂಡ್ ಆಗಿಬಿಟ್ಟರು. ’ಮಸ್ತೀ ಭರೆ’ ಹಾಡುಗಳನ್ನು ಹಾಡುವ ಅವಕಾಶ ಲತಾ ದೀದಿಗೆ ಸಿಗಲೇ ಇಲ್ಲ. ಆಗೊಮ್ಮೆ ಈಗೊಮ್ಮೆ ಇಂತಕಾಂ ಮುಂತಾದ ಚಿತ್ರಗಳಲ್ಲಿ ’ಕೈಸೆ ರಹೂಂ ಚುಪ್ ಕೀ ಮೈನೆ ಪೀ ಹೀ ಕ್ಯಾ ಹೈ, ಹೋಶ್ ಅಭೀ ತಕ್ ಹೈ ಬಾಕಿ’ ಮುಂತಾದ ಹಾಡುಗಳನ್ನು ಹಾಡುತ್ತ ತಮ್ಮ ಸಂಪೂರ್ಣ ರೇಂಜ್ ನ್ನು ತೋರಿಸಿಕೊಟ್ಟವರು ಲತಾ ದೀದಿ.

    ಏನೇ ಇರಲಿ, ಈ ಸಹೋದರಿಯರು ಜಗತ್ತು ಕಂಡ ಎರಡು ಅನರ್ಘ್ಯ ರತ್ನಗಳು. ಅಂದ ಹಾಗೆ ನಾಳೆ (28/09) ಲತಾ ದೀದಿಯವರ ಎಂಬತ್ತನೇ ಹುಟ್ಟುಹಬ್ಬ. ಅವರೂ ದೀರ್ಘಾಯುಷಿಯಾಗಲಿ ಎಂಬ ಹಾರೈಕೆ..

    ಒಂದು ಉತ್ತಮ ಲೇಖನಕ್ಕಾಗಿ ಮನಸಾರೆ ಧನ್ಯವಾದಗಳು :-)

    ReplyDelete
  14. ರಾಜೀವ್ ನಿಮ್ಮ ಅಭಿಪ್ರಾಯ ಸರಿ ಮುಳ್ಳೂ ಹೂ ಗಿಡಕ್ಕೆ ಭೂಷಣವೇ...

    ReplyDelete
  15. ಅವಿನಾಶ್ ಆಶಾ ಹಾಗೂ ಲತಾರ ಬಾಂಧವ್ಯ ನಿಜಕ್ಕೂ ಹೇಗಿದೆಯೋ ಗೊತ್ತಿಲ್ಲ. ಈಗ ಇಬ್ಬರೂ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಅನಿಸುತ್ತೆ
    ಇಂದಿನ ಹಾಡು ಅವರು ಹಾಡಲೂ ಲಾಯಕ್ಕಿಲ್ಲ ಇದು ಅವರೇ ತಗೊಂಡ ನಿರ್ಧಾರ. ನೀವು ಹೇಳೋ ಹಾಗೆ ಹಾಡುಗಳನ್ನು ಬ್ರಾಂಡ ಮಾಡಿದ್ರು ಇದು ಪೂರ್ವಾಗ್ರಹಪೀಡಿತವೂ ನಿಜ.

    ReplyDelete
  16. nice beautiful melody songs of Ashas -are rechewed. Thanks for the article

    ReplyDelete