Friday, October 23, 2009

ಕುಛ ತೊ ಲೋಗ್ ಕಹೆಂಗೆ....

ಹಿಂದಿ ಸಿನೇಮದ ಇತಿಹಾಸ ಗಮನಿಸಿದರೆ ಗಾಯಕರಾಗಿ ರಫಿ,ಮುಕೇಶ್ ಹಾಗೂ ಮನ್ನಾಡೆ ಛಾಪು ಒತ್ತಿದ್ದಾರೆ ಪೀಳಿಗೆಯಿಂದ ಪೀಳಿಗೆ ಇವರು ಹಾಡಿದ ಹಾಡು ಗುನುಗುತ್ತ ಬಂದಿದ್ದಾರೆ. ಒಂದರ್ಥದಲ್ಲಿ ಈ ಗಾಯಕರು ಯುಗಪ್ರವರ್ತಕರು ಈ ಮಹಾನ್ ಸಾಧಕರ ನಡುವೆ ಆಗೊಮ್ಮೆ ಈಗೊಮ್ಮೆ ಮಿನುಗುತ್ತಿದ್ದ ದನಿಯೂ ಇತ್ತು ಅದೇ ಕಿಶೋರ್
ಕುಮಾರ್ ನದು. ಶಾಸ್ತ್ರೀಯ ಸಂಗೀತದ ಅಧ್ಯಯನ ಮಾಡಿಲ್ಲ ಅನ್ನೋ ಕೊರಗು ಕಿಶೋರ್ ಗಿತ್ತು ಅದಕ್ಕಾಗಿಯೇ ಕೆಲ ಪಂಡಿತ
ಅನಿಸಿಕೊಂಡ ಸಂಗೀತ ನಿರ್ದೇಶಕರ ಬಳಿ ಕಿಶೋರ್ ಹಾಡಲು ಆಗಲೇ ಇಲ್ಲ. ಅದು ನೌಶಾದ್ ಆಗಿರಬಹುದು ,ರೋಶನ್ ಇರಬಹುದು ಅಥವಾ ಮದನ್ ಮೋಹನ್ ಆಗಿರಬಹುದು ಕಿಶೋರ್ ಬಗ್ಗೆ ಅವರಿಗೆ ಒಲವಿರಲಿಲ್ಲ.ಅಥವಾ ಅವರು ಕಂಪೋಜಿಸಿದ
ಲಾಲಿತ್ಯದ ಹಾಡುಗಳಿಗೆ ಕಿಶೋರ್ ದನಿ ಹೊಂದುತ್ತಿರಲಿಲ್ಲ.ಒಟ್ಟಿನಲ್ಲಿ ಮೇಲೆ ಉಲ್ಲೇಖಿಸಿದ ತ್ರಿಮೂರ್ತಿಗಳ ನಡುವೆ ಪೋಷಣೆ ಇಲ್ಲದೆ ಕಿಶೋರ್ ಮುರಟಿಹೋಗಬೇಕಾಗಿತ್ತು ಆದರೆ ಹಾಗಾಗಲಿಲ್ಲ.ತನ್ನಲ್ಲಿರೋ ನ್ಯೂನತೆ ಬೇರೆ ರೀತಿಯಿಂದ ಕಿಶೋರ್ ಕಮಿಮಾಡಿಕೊಂಡ.ಅವನ ನೆರವಿಗೆ ಬಂದಿದ್ದು " ಯೋಡಲ್ಯೂಯು...".
ಆಸ್ಟ್ರಿಯಾ, ಸ್ವಿಸ್ ದೇಶದ ರಾಕ್ ಬ್ಯಾಂಡ್ ನಲ್ಲಿ "ಯೋಡಲೆ.." ಪ್ರಚಲಿತವಿತ್ತು ಮೂಲತಃ ಆಲ್ಪ್ಸ ಪರ್ವತಾರೋಹಿಗಳು ಸಂವಹನಕಲೆಯಾಗಿ ಅದು ಬಳಕೆ ಮಾಡಿಕೊಳ್ಳುತ್ತಿದ್ದರು. ಕಿಶೋರ್ ಗೆ ಈ ಕಲೆ ಬಗ್ಗೆ ಹೇಳಿದವ ಅವನ
ಸೋದರ ಅನೂಪ್ ಕುಮಾರ್. ಕೇಳಿದ ಕಿಶೋರ್ ಗೆ ಅದರ ಗುಂಗು ಹಿಡಿಯಿತು. ದಿನಪ್ರತಿ ಅದರಬಗ್ಗೆ ಅಭ್ಯಸಿಸಿದ. ಗುರುವಾಗಿ
ದೊರೆತವ ಎಸ್.ಡಿ ಬರ್ಮನ್. ಕಿಶೋರನ ಗಾಡ್ ಫಾದರ್ ಈತ. ನವಕೇತನ್ ಬ್ಯಾನರಿನ ಕಾಯಂ ಸಂಗೀತಗಾರ ಬರ್ಮನ್.
ಬರ್ಮನ್ ಕಿಶೋರ್ ಪ್ರತಿಭೆಗೆ ನೀರೆರೆದು ಬೆಳೆಸಿದ. ಕಿಶೊರ್ ಹಾಡಿದ ಹಾಡು ಅಂದರೆ ಅದೊಂದು "happy go" ಹಾಡು
ಎನ್ನೋದು ಪ್ರತೀತಿ. ಸರಳವಾಗಿ,ಸುಲಲಿತ ದನಿ ಅವನದು ಬರ್ಮನ್ ಅರಿವಿಲ್ಲದೆ ಮಹಾನ್ ಗಾಯಕನ ಜನ್ಮಕ್ಕೆ ಕಾರಣಕರ್ತನಾಗಿದ್ದ. ಬರ್ಮನ್ --ಕಿಶೋರ್ ಜುಗಲ್ ಬಂದಿ ಮೋಡಿ ಮಾಡಿತು...ಜನರ ನಾಲಿಗೆಮೇಲೆ ಹಾಡು ಕುಣಿಯಲಾರಂಭಿಸಿದವು....
" ಹಮ್ ಹೈ ರಾಹಿ ಪ್ಯಾರ್ ಕೆ ಹಮ್ ಸೆ ಕುಛ್ ನ ಬೋಲಿಯೆ..."
"ಏಕ್ ಲಡಕಿ ಭೀಗಿ ಭಾಗಿಸಿ..."
" ಮಾನಾ ಜನಾಬ್ ನೆ ಪುಕಾರಾ ನಹಿಂ...."
" ಹಾಲ್ ಕೈಸಾ ಹೈ ಜನಾಬ್ ಕಾ..."
" ಗಾತಾ ರಹೆ ಮೇರಾ ದಿಲ್..."
" ಏ ದಿಲ್ ನ ಹೋತ ಆವಾರಾ...."
ಮೇಲಿನ ಬಹುತೇಕ ಹಾಡು ದೇವಾನಂದನ ಮೇಲೆ ಚಿತ್ರಿತವಾಗಿದ್ದವು.ಈ ಅವಧಿಯಲ್ಲಿ ಬರ್ಮನ್ ಬಿಟ್ಟರೆ ಕಿಶೋರ್ ಇನ್ನೂ ಕೆಲವರ ಬಳಿ ಹಾಡಿದ. ಸಲಿಲ್ ಚೌಧರಿ,ಶಂಕರ್ ಜೈಕಿಶನ್ ,ರವಿ ಹೀಗೆ. "ಸಿಎಟಿ ಕ್ಯಾಟ್ ಕ್ಯಾಟ್ ಮಾನೆ ಬಿಲ್ಲಿ....", " ಜಿವನ್ ಕೆ
ಸಫರ್ ಮೆ ರಾಹಿ ಮಿಲತೆ ಹೈ..."," ಜರೂರತ ಹೈ ಏಕ್ ಶ್ರೀಮತಿಕಿ..." ಈ ಹಾಡುಗಳು ಹಿಟ್ ಅನಿಸಿಕೊಂಡವು.ಈ ನಡುವೆ
ಕಿಶೋರ‍್ ತಾನೇ ನಿರ್ಮಿಸಿದ "ಝುಮರೂ..." ,"ದೂರ್ ಗಗನ್ ಕಿ ಛಾಂವ್ ಮೆ" ದಲ್ಲೂ ಹಾಡಿದ. ಆ ಹಾಡುಹಿಟ್ ಅನಿಸಿಕೊಂಡವು, "ಯೋಡಲೆ ವೂ " ದ ಪ್ರಯೋಗ ಝುಮರು ವಿನ ಟೈಟಲ್ ಸಾಂಗನಲ್ಲಿತ್ತು . ಈ ಹಾಡುಗಳೆಲ್ಲ ಹಿಟ್
ಆದರೂ ಫಿಲ್ಮಿಜನ ಕಿಶೋರನನ್ನು ಒಪ್ಪಿಕೊಂಡಿರಲಿಲ್ಲ. ರಫಿಯ ನಕ್ಷತ್ರ ಹೊಳೆಯುತ್ತಿದ್ದ ದಿನಗಳು. ಶಮ್ಮಿ, ರಾಜೇಂದ್ರಕುಮಾರ್
ಚಿತ್ರಗಳು ಹಿಟ್ ಆಗಲು ರಫಿಯ ದನಿಯೂ ಕಾರಣ.ಅದು ರಫಿರಾಜ್ಯ ಅಲ್ಲಿ ಬೇರೆಯವರು ಸುಳಿಯಲು ಅವಕಾಶ ಇರಲಿಲ್ಲ.
ರಾಯಲ್ಟಿ ವಿಷಯದಲ್ಲಿ ಲತಾ ಜೊತೆ ಮನಸ್ತಾಪ ಆದಾಗ ಸುಮನ್ ಕಲ್ಯಾಣಪೂರಕರ್ ಜೊತೆ ರಫಿ ಹಾಡಿದ ಆ ಹಾಡುಗಳೂ ಹಿಟ್ ಆದವು. ಹೀಗಿದ್ದ ರಫಿ ಸಾಮ್ರಾಜ್ಯ ಅಲ್ಲಾಡಿದ್ದು ಮಾತ್ರ ಸ್ಥಿತ್ಯಂತರದ ಜ್ವಲಂತ ಉದಾಹರಣೆ..!

ನಾಸಿರ್ ಹುಸೇನ್ ಹಿಟ್ ಮೇಲೆ ಹಿಟ್ ಚಿತ್ರ ತೆಗೆಯುವ ಫ್ಯಾಕ್ಟರಿ ಇಟ್ಟಿದ್ದ. ಅ ಫ್ಯಾಕ್ಟರಿಯಿಂದ ಒಂದು ಚಿತ್ರ ಬಂದಿತ್ತು ಅದು
"ಪ್ಯಾರ್ ಕಾ ಮೌಸಮ್ " . ಪಂಚಮ್ ಅದರ ಸಂಗೀತನಿರ್ದೇಶಕ ಶಶಿಕಪೂರ್ ನಾಯಕ ಭರತಭೂಷಣ್ ಅವನ ತಂದೆ ಪಾತ್ರ. ಒಂದು ಹಾಡು ಮೊದಲು ತಂದೆ ಹಾಡುತ್ತಾನೆ ಮುಂದೆ ಆ ಹಾಡು ಎರಡು ಬಾರಿ ನಾಯಕನಮೇಲೆ ಚಿತ್ರಿಕರಣ. ತಂದೆಯ ಹಾಡು ಕಿಶೋರ್ ಪಾಲಿಗೆ ಬಂತು
ಆ ಹಾಡು "ತುಮ್ ಬಿನ್ ಜಾವೂ ಕಹಾಂ..." .ಕಿಶೋರ್ ದನಿಯಲ್ಲಿ " ಆ ಹಾಹಾ ವು ವೂ..." ಹೀಗೆ ಯೋಡಲೆ ಯೂ ಮಿಳಿತವಾಗಿತ್ತು. ಹಾಡು ಹಿಟ್ ಆತು ರಫಿ ಹಾಡಿದ ಶಶಿಕಪೂರ್ ಮೇಲೆ ಚಿತ್ರಿತವಾದ ಅದೇ ಹಾಡು ಕಿಶೋರ್ ಹಾಡಿನ ಮುಂದೆ
ಸಪ್ಪೆ ಅನಿಸಿತು. ರಫಿ ಕಟ್ಟಿದ ಕೋಟೆ ಅಲ್ಲಾಡಿತು. ಮುಂದೆ ಇತಿಹಾಸ ಬದಲಿಸಿದ "ಆರಾಧನಾ" ಬಂತು ಯುವಜನರ ನಾಲಿಗೆ
ಮೇಲೆ " ಮೇರೆ ಸಪನೊಂಕಿ ರಾನಿ ..", "ರೂಪ್ ತೇರಾ ಮಸ್ತಾನಾ..." ನಲಿದಾಡಿದವು.ಕಿಶೋರ್ ಕುಮಾರ್ ದೊಡ್ಡ ರೀತಿಯಿಂದ
ದಾಖಲಾಗಿದ್ದ. ರಾಜೇಶ ಖನ್ನ. , ಪಂಚಮ್ ರ ಬೆಂಬಲ. ರಾಜೇಶ್ ಖನ್ನಾಗೆ ಸೂಪರ್ ಸ್ಟಾರ್ ಪಟ್ಟ ಕಿಶೋರ್ ಸ್ವಲ್ಪ ಕಾಲದಲ್ಲಿಯೇ ನಂಬರ್ ಒನ್ ಸ್ಥಾನ ಅಲಂಕರಿಸಿದ. ಈ ಜೋಡಿಯ ಹಾಡುಗಳು ಎಂತಹವು ಒಂದೊಂದು ಮುತ್ತು...
" ಚಿಂಗಾರಿ ಕೋಯಿ ಭಡಕೆ....."
" ಮೈ ಶಾಯರ್ ಬದನಾಮ್ ...."
" ಏ ಮೇರೆ ದಿಲ್ ಕೆ ಚೈನ್..."
" ಮೇರೆ ನಯನಾ ಸಾವನ್ ಭಾದೊ...."
" ಯೇ ಲಾಲ್ ರಂಗ್ ಕಬ್ ಮುಝೆ ಛೋಡೆಗಾ....".

ರಾಜೇಶ ಖನ್ನಾ ನಂತರ ಬಂದ ಅಮಿತಾಬ್, ರಿಷಿ ಹೀಗೆ ಆ ಕಾಲದ ನಾಯಕರಿಗೆಲ್ಲ ಕಿಶೋರ್ ಹಾಡಿದ. ಜನರು ಅವನ ಹಾಡಿಗೆ ಮರುಳಾಗಿದ್ದರು. ಜನಪ್ರಿಯತೆಯ ಉತ್ತುಂಗ ನೋಡಿದ ಕಿಶೋರ್. ಆ ವರೆಗೂ ಅವನನ್ನು ತೆಗಳಿದ ಫಿಲ್ಮಿ ಜನ
ಪ್ರತಿಭೆ ಹೊಗಳುತ್ತಿದ್ದರು. ಆದರೂ ಕೆಲ ಹಟಮಾರಿಗಳಿದ್ದರು.ಮದನ್ ಮೋಹನ್ ರಿಷಿ ಅಭಿನಯದ "ಲೈಲಾ ಮಜನು" ಚಿತ್ರದ
ಸಂಗೀತ ನಿರ್ದೇಶನ ಮಾಡುತ್ತಿದ್ದ. ನಿರ್ದೇಶಕನಿಗೆ ಕಿಶೋರ ದನಿಯಲ್ಲಿ ಹಾಡಿಸುವ ಇರಾದೆ ಆದರೆ ಮದನ್ ಮೋಹನ್ ಒಪ್ಪಲಿಲ್ಲ
ಕೊನೆಗೆ ಮದನ್ ಮೋಹನ್ ಹಟ ಗೆದ್ದಿತು . ರಫಿ ಆ ಹಾಡು ಹಾಡಿದ.ಆ ಹಾಡು " ಬರ್ಬಾದೆ ಮೊಹಬ್ಬತ ಕಾ...". ಕಿಶೋರ ಮಾತ್ರ ಇಂತಹ ಘಟನೆಗಳಿಂದ ವಿಚಲಿತನಾಗಲಿಲ್ಲ. ಹಿಟ್ ಮೇಲೆ ಹಿಟ್ ಹಾಡು ಕೊಡುತ್ತಲೇ ಸಾಗಿದ.

ಅವನೇ ಹಾಡಿದ ಹಾಡು "ಕುಛ ತೊ ಲೋಗ್ ಕಹೆಂಗೆ ಲೋಗೊಂ ಕಾ ಕಾಮ ಹೈ ಕೆಹನಾ.." ಹಾಡು ಅವನ ನಿಲುವು
ಹೇಳುತ್ತದೆ. ಅದೇನೆ ಟೀಕೆ ಇರಬಹುದು ಕಿಶೋರ್ ಸ್ವಪ್ರತಿಭೆಯಿಂದ ಬೆಳಗಿದವ. ಚಿತ್ರ ಇತಿಹಾಸದಲ್ಲಿ ಹೆಸರು ಸ್ಥಾಯಿಯಾಗಿ
ನಿಲುವಂತೆ ಮಾಡಿದ.....


ವಿ.ಸೂ.
------
ಈ ಲೇಖನ ಸಾಂಗತ್ಯದಲ್ಲೂ ಬಂದಿದೆ....

9 comments:

  1. "ತುಮ್ ಬಿನ ಜಾವೂ ಕಹಾಂ.." ಹಾಡಿನ ಮೂಲಕ ಕಿಶೋರ ತನ್ನ deep voiceದ ಮುಂದೆ ರಫಿ ಏನೂ ಅಲ್ಲ ಎನ್ನುವದನ್ನು ಸಾಬೀತು ಮಾಡಿ ತೋರಿಸಿದ. ಆದರೆ ಕೆಲವೊಂದು low profile ಹಾಡುಗಳಲ್ಲಿ ರಫಿ ಸಹ ಮಿಂಚಿದ್ದಾನೆ. ಉದಾಹರಣೆಗೆ "ದಿನ ಢಲ ಜಾಯೆ.." ಮತ್ತೂ "ಕಭಿ ನ ಕಭಿ, ಕಹೀಂ ನ ಕಹೀಂ..."ಗಳನ್ನು ನೋಡಬಹುದು.
    ಕಿಶೋರನ humorous ಹಾಡುಗಳನ್ನು ಹಾಡಲು ಯಾರಿಗೂ ಸಾಧ್ಯವಿಲ್ಲ!

    ReplyDelete
  2. ದೇಸಾಯಿಯವರೆ...

    ನಾನಂತೂ ಕಿಶೋರ್ ಅಭಿಮಾನಿ...
    ನನ್ನ ಬಳಿ ಅವನ ದೊಡ್ಡ ಸಂಗ್ರಹವೆ ಇದೆ...

    ನನಗೆ ಬೇಸರವಾದಗ... ಮುಖೇಶ್ ಮತ್ತು ಕಿಶೋರ್ ಜಾಡುಗಳನ್ನು ಬಹಳವಾಗಿ ಕೇಳುತ್ತೇನೆ...

    ಕಿಶೋರ್ ಹಾಡುವಾಗ ಅದರ ಭಾವದೊಳಗೆ ಹೊಕ್ಕು ಹಾಡುತ್ತಾನೆ...
    ಅದು ದುಃಖವಾಗಲಿ.., ಸಂತೋಷವಾಗಲಿ...
    ಆ ಹಾಡುಗಳನ್ನು ಕೇಳಿದಾಗ ಹಾಡಿನ ಭಾವ ನಮ್ಮನ್ನು ಗಾಢವಾಗಿ ಆವರಿಸಿ ಬಿಡುತ್ತದೆ....

    ಇದು ಕಿಶೋರ್ ಹೆಗ್ಗಳಿಕೆ...

    ಮತ್ತೆ ನಿಮ್ಮ ಬತ್ತಳಿಕೆಯಿಂದ ಹಳೆಯ ಹಾಡುಗಳ ಲೇಖನ ಬಂದದ್ದು ಖುಷಿಯಾಯಿತು...

    ನೀವು ಹೆಸರಿಸಿದ ಹಾಡುಗಳನ್ನು ಈಗಲೇ ಕೇಳುವ ಮನಸಾಯಿತು...

    ಧನ್ಯವಾದಗಳು ಉಮೇಶ್ ಜೀ....

    ReplyDelete
  3. ದೇಸಾಯ್ ಸರ್,

    ಕಿಶೋರ್, ಮುಖೇಶ್ ಮತ್ತು ರಫಿಯವರ ಹಾಡುಗಳನ್ನು ನಾನು ತುಂಬಾ ಕೇಳುತ್ತೇನೆ. ಒಬ್ಬೊಬ್ಬರದು ಒಂದೊಂದು ತರಹ ಶೈಲಿ. ನೀವು ಬರೆದಿದ್ದು ಓದಿದ ಮೇಲೆ ಮತ್ತೊಮ್ಮೆ ಎಲ್ಲವನ್ನು ಕೇಳಬೇಕೆನಿಸಿದೆ...ಧನ್ಯವಾದಗಳು.

    ReplyDelete
  4. ಕಿಶೋರ್ ಅವರ ಹಾಡೂಗಳೆಂದರೆ ನನಗೂ ಅಚ್ಚುಮೆಚ್ಚು. ಅದರಲ್ಲೂ "ಕುಛತೋ.." ಹಾಡು ನನ್ನ ಮೆಚ್ಚಿನ ಹಾಡುಗಳಲ್ಲೊಂದು. ಆದರೆ ರಫಿಯವರೂ ತಮ್ಮದೇ ಆದ ಛಾಪನ್ನು ಒತ್ತಿದ್ದಾರೆ. ಅವರ ಹಾಡುಗಳಲ್ಲಿರುವ ಒಂದು ತರನಾದ ವಿಷಾದ, ನೋವು ಎಂತಹವರ ಮನವನ್ನೂ ತಟ್ಟದಿರದು.

    ಸಂತಸದ ಗಾಯನಕ್ಕೆ ಕಿಶೋರ್
    ವಿರಹ/ಶೋಕಭರಿತ ಗಾನಗಳಿಗೆ ರಫಿ - ಎನ್ನಬಹುದೇನೋ ಅಲ್ಲವೇ?

    ReplyDelete
  5. ಕಾಕಾ ಅನಿಸಿಕೆಗೆ ಧನ್ಯವಾದಗಳು. ಒಬ್ಬೊಬ್ಬರದು ಒಂದು ಶೈಲಿ ಇರ್ತದ ಖರೆ ಆದ್ರ ಕಿಶೋರ್ ಪ್ರತಿಭಾ ಇದ್ದೂ ಅವಕಾಶ ವಂಚಿತ
    ಆಗಿದ್ದ. ನೀವು ಹೇಳಿದ ಹಾಡು ರಫಿ ಹಾಡಿದ್ದು ನನಗೂ ಸೇರ್ತಾವ.ಮುಂದ ಹಿಂಗ ನಿಮ್ಮ ಪ್ರೋತ್ಸಾಹ ಇರಲಿ.

    ReplyDelete
  6. ಹೆಗಡೇಜಿ ಅನಿಸಿಕೆಗೆ ಧನ್ಯವಾದಗಳು. ನಿಮಗೆ ಕಿಶೋರ್ ಮೆಚ್ಚಿನ ಗಾಯಕ ಅಂತ ಕೇಳಿ ಖುಷಿಆತು. ಆದರೆ ರಫಿ ನನ್ನ all time favourite
    ಆದರೂ ಈ ಲೇಖನ ಇತಿಹಾಸದಲ್ಲಿ ಕಿಶೋರ್ ಗಾದ ಅನ್ಯಾಯ ವನ್ನು ಬಿಂಬಿಸುವ ನನ್ನ ಪ್ರಯತ್ನಅಷ್ಟೇ.
    ಪ್ರೋತ್ಸಾಹ ಹೀಗೆ ಮುಂದುವರಿಯಲಿ.

    ReplyDelete
  7. ಶಿವು ಅವು ಈಗಿನ ಹಾಡುಗಳಂತಲ್ಲ ಕೇಳಿದಾಗ ಮನಸ್ಸಿಗೆ ನಾಟೋದೆ ಇಲ್ಲ ನಾಟದ್ದು ಅದು ಹೇಗೆ ನೆನಪಿನಲ್ಲಿ ಉಳಿಯುತ್ತವೆ...? ಆದರೆ ಹಳೆ
    ಹಾಡು ನಮ್ಮ ಅಂತಃಕರಣ ಕಲಕುತ್ತವೆ....

    ReplyDelete
  8. ತೇಜಸ್ವಿನಿ ಮೇಡಂ ಸುಸ್ವಾಗತ.ನನಗನಿಸುತ್ತೆ ಈ ವರ್ಗೀಕರಣ ಸರಿಯಲ್ಲ. ಇಬ್ಬರೂ ಪರಿಪೂರ್ಣ ಹಾಡುಗಾರರು ಹಾಡಿನ ಭಾವಕ್ಕೆ ಅನುಗುಣವಾಗಿ
    ಹಾಡುತ್ತಿದ್ದರು.. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

    ReplyDelete
  9. ಉಮೇಶ್ ಸರ್ ನಿಮಗ ಎಷ್ಟ ಹಾಡರ ಬರ್ತಾವ ಅಂತೀನಿ!! ಅದೂ ಎಲ್ಲಾ ಗಾಯಕ, ಗಾಯಕಿಯರದೂ ಪೂರ್ತಿ ಮಾಹಿತಿ ಸಹಿತ ಲೇಖನಾ ಬರೀತೀರಿ. ಓದಾಕ ಭಾರಿ ಖುಷಿ ಆಗ್ತದ. ನಿಮ್ಮ ಲೇಖನಾ ಓದಿದ ಮ್ಯಾಲ ಹಾಡಿನ ಗುಂಗಿನಿಂದ ಪಟಕ್ಕನ ಹೊರಗ್ ಬರಾಕ್ ಆಗೂದs ಇಲ್ಲಬಿಡ್ರಿ! ಮಸ್ತ್ ಮಸ್ತ್!

    ReplyDelete