Saturday, November 27, 2010
ಕುವೆಂಪು ಅಡ್ಡಾಡಿದ ಕುಪ್ಪಳಿಯಲ್ಲಿ...
ದಿ.೨೧ ರಿಂದ ೨೩ ರ ವರೆಗೆ ಕುಪ್ಪಳಿಯಲಿ ನಡೆದ ಕಥಾಕಮ್ಮಟದಲ್ಲಿ ಭಾಗವಹಿಸುವ
ಸದವಕಾಶ ಬಂದಿತ್ತು. ನನ್ನ ತಮ್ಮ ಚಾರುದತ್ತ ಈಗಾಗಲೇ ಇಂತಹ ಕಮ್ಮಟಗಳಲ್ಲಿ ಪಾಲ್ಗೊಂಡವ..ಮೊದಲೇ ಕಿವಿ ಮಾತು ಹೇಳಿದ್ದ ತೀರ ದೊಡ್ಡ ನಿರೀಕ್ಷೆ ಇಟ್ಟುಕೊಂಡು ಹೋಗಬೇಡ ಅಂತ. ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ಹೋಗುವ
ಬಸ್ಸು ಕುಪ್ಪಳಿಕ್ರಾಸ್ ಗೆ ನನ್ನ ಇಳಿಸಿದಾಗ ಗಂಟೆ ಮುಂಜಾನೆಯ ಒಂಬತ್ತಾಗಿತ್ತು. ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ, ಕುವೆಂಪು ಪ್ರತಿಷ್ಠಾನ, ಕುವೆಂಪು ಅಧ್ಯಯನ ಕೇಂದ್ರ ಕನ್ನಡ ವಿ.ವಿ ಹೀಗೆ ಮೂರು ಸಂಸ್ಥೆಗಳು ಈ ಕಮ್ಮಟ
ಆಯೋಜಿಸಿದ್ದವು. ಹಾಗೂ ಇದು ಅವರ ಯಶಸ್ವಿ ಮೂರನೇ ವರ್ಷದ ಆಯೋಜನೆ. ಊಟ ,ತಿಂಡಿ ಗಾಗಿ ತೀರ್ಥಹಳ್ಳಿಯಿಂದ ಬಂದ ಭಟ್ಟರು ಎಲ್ಲ ಶಿಬಿರಾರ್ಥಿಗಳ ತೂಕ ಎರಡು-ಮೂರುದಿನಗಳಲ್ಲಿ ಒಂದೆರಡು ಕೆಜಿ ಹೆಚ್ಚಿಗೆಯಾಗುವಂತೆ ನೋಡಿಕೊಂಡ್ರು....!
ನಮಗೆ ಓದಲು ಹಾಗೂ ನಮಗನಿಸಿದ ಟಿಪ್ಪಣಿ ಬರೆಯಲು ಮೊದಲೇ ಆಯ್ದ ಕತೆಗಳನ್ನು ಕಳಿಸಿಕೊಡಲಾಗಿತ್ತು.
ಕೇವಲ ಮುವ್ವತ್ತು ಜನರಿಗೆ ಅವಕಾಶ ಅಂತ ಹೇಳಿದ ಆಯೋಜಕರು ಅವಕಾಶ ಕಲ್ಪಿಸಿದ್ದು ಸುಮಾರು ಐವ್ವತ್ತು ಜನರಿಗೆ. ನನ್ನಂತೆ ಪತ್ರಿಕೆ ಓದಿ ಅರ್ಜಿ ಹಾಕಿ
ಬಂದವರು ಕೇವಲ ಏಳೆಂಟು ಜನ ಉಳಿದೆಲ್ಲವರೂ ಆಹ್ವಾನಿತರು. ಅಂದರೆ ಕಾರ್ಯದರ್ಶಿಗಳ ಸ್ನೇಹಿತರು, ಅವರ ಶ್ರೀಮತಿಯರು ಹೀಗೆ. ಬಹುಪಾಲು ಜನ ಅಧ್ಯಾಪಕರು. ಕತೆಗಳನ್ನು ಚರ್ಚೆ ನಡೆಯುವಾಗಲೇ ಓದುತ್ತಿದ್ದ ಮಹನೀಯರು. ಶಿಬಿರದ ನಿರ್ದೇಶಕರು ಡಾ. ಕೆ ವಿ ನಾರಾಯಣ ಅವರು ಅವರ ಹೆಂಡತಿ (ದೋಪ್ದಿ ಕತೆಯ ಅನುವಾದಕಿ)ನೂ ಭಾಗವಹಿಸಿದ್ರು. ಉದ್ಘಾಟನೆ ಇತ್ಯಾದಿ ಮುಗಿದು ಶಿಬಿರದ ಆಶಯ ನಾರಾಯಣ ಅವರು ಹೇಳಿದ್ರು.
ಅವರ ಭಾಷೆ ತೂಕದ್ದು ಬಳಸಿದ ಪದಗಳು ನನ್ನ ತಲೆಮೇಲಿಂದಲೇ ಹಾರಿಹೋದದ್ದೇ ಹೆಚ್ಚು. ನಾನು ಅರಿಕೆ ಮಾಡಿಕೊಂಡೆ..ಸಾದಾ ಸೀದಾ ಭಾಷೆ ಬಳಸಿ ಲೆಕ್ಕ ಪತ್ರ ಬರೆಯುವ/ನೋಡುವ ನನ್ನಂತಹದವರಿಗೆ ಇದು ಅರ್ಥ ಆಗೊಲ್ಲ ಅಂತ. ಬಹುಷ: ನಾರಾಯಣ ಅವರಿಗೆ ಇದು ಅಪಥ್ಯವಾಗಿತ್ತು..ಕಮ್ಮಟ ಮುಗಿಯುವವರೆಗೂ ಶೀತಲಸಮರ
ನಡೆದೇ ಇತ್ತು ನಮ್ಮಿಬ್ಬರ ನಡುವೆ. ನಾರಾಯಣ ಅವರೇ ಕತೆ ಆರಿಸಿದ್ದು ಆ ಕತೆಗಳ ಥೀಮ್ ಹೆಣ್ಣುತನ.ಇದನ್ನು ಬರೆದವರು ಲೇಖಕಿಯರು ಮಾತ್ರಅಲ್ಲ ಪುರುಷರು ಸಹ. ನಮ್ಮನ್ನು ಐದು ಆರು ಜನರ ಗುಂಪಾಗಿ ವಿಂಗಡಿಸಲಾಗುತ್ತಿತ್ತು. ಸುಮಾರು ಅರ್ಧಗಂಟೆ ನಮ್ಮನಮ್ಮಲ್ಲಿ ಚರ್ಚೆ ಮಾಡಿಕೊಂಡು ನಮ್ಮಲ್ಲಿಯೇ ಒಬ್ಬರು ಟಿಪ್ಪಣಿ
ಮಾಡಿಕೊಂಡು ನಮ್ಮ ಗುಂಪಿನ ನಿಲುವು ಕತೆಗಳ ಬಗ್ಗೆ ಹೇಳಬೇಕಾಗುತ್ತಿತ್ತು.ಪೂರಕವಾಗಿ ಉಳಿದವರು ಪ್ರಶ್ನೆ ಕೇಳುತ್ತಿದ್ದರು ಹಲವೊಮ್ಮೆ ನಾರಾಯಣ್ ಅವರೂ ಸಹ ಪ್ರಶ್ನೆಗಳ ಬಾಣ ಬಿಡುತ್ತಿದ್ದರು.ಪ್ರತಿಬಾರಿ ಚರ್ಚೆಗೆ ಎರಡು ಕತೆ ಕೊಡಲಾಗುತ್ತಿತ್ತು. ನಮ್ಮ ಕನ್ನಡದ ಹೆಸರಾಂತರು ಬರೆದ ಕತೆಗಳು..ನಾ ಓದಿದಾಗ ನನಗನ್ನಿಸಿದ ಭಾವ ಬೇರೆ
ಆದರೆ ಗುಂಪಿನಲ್ಲಿ ಚರ್ಚಿಸಿದಾಗ ಅದು ಹೊಂದುವ ರೂಪವೇ ಬೇರೆ ಈ ಮಾರ್ಪಾಟು ಅಚ್ಚರಿ ಗೊಳಿಸಿತ್ತು. ಆದರೆ
ಕಥೆಗಳನ್ನು ಮಥಿಸಿ ಮಥಿಸಿ ನೋಡಿದಾಗ ಸಿಗುವ ಆನಂದನೇ ಬೇರೆ...!
ನಾವು ಚರ್ಚಿಸಿದ ಕೆಲವು ಕತೆಗಳು ಹೀಗಿವೆ...
ಮೇಲೂರಿನ ಲಕ್ಷಮ್ಮ..... ಮಾಸ್ತಿ
ಕರುಳ ಕತ್ತರಿ....... ಶ್ಯಾಮಲಾ ಬೆಳಗಾಂವಕರ
ಹೊರಟು ಹೋದವನು--- ಡಾ. ವೀಣಾ ಶಾಂತೇಶ್ವರ್
ದೋಪ್ದಿ ------- ಮೂಲ: ಮಹಾಶ್ವೇತಾ ದೇವಿ
ಕತೆಯಾದಳು ಹುಡುಗಿ-- ಯಶವಂತ ಚಿತ್ತಾಲ
ದೇವರ ಹೂ------ ಡಾ. ಬೆಸಗರಹಳ್ಳಿ ರಾಮಣ್ಣ
ಶಕುಂತಲೆಯೊಂದಿಗೆ
ಕಳೆದ ಅಪರಾಹ್ನ------- ವೈದೇಹಿ
ನಾಕನೇ ನೀರು-- ನಾಗವೇಣಿ
ಕೊನೆಯ ಕತೆಯ ಲೇಖಕಿಯೂ ನಮ್ಮ ಜೊತೆಗಿದ್ರು.ನಮಗೆ ಮೂಡಿಬಂದ ಸಂದೇಹ ಅನುಮಾನ ಪ್ರಶ್ನೆಗಳಿಗೆ ಉತ್ತರಿಸಿದರು. ಹೀಗೆ ಬರೆದವರ ಜೊತೆ ಮುಖಾಮುಖಿ ಯಾಗುವುದು ಹೊಸ ಖುಷಿ ಕೊಟ್ಟಿತು. ನಾಗವೇಣಿ ತಾವು
ಬೆಳೆದು ಬಂದ ಹಿನ್ನೆಲೆ ಮತ್ತು ಈಗಿನ ದಕ್ಷಿಣಕನ್ನಡ ಜಿಲ್ಲೆಯ ಪರಿಸ್ಥಿತಿ ಹೀಗೆ ವಿವರವಾಗಿ ಚರ್ಚಿಸಿದರು.ಕಮ್ಮಟದ
ಎರಡನೇ ದಿನ ಖ್ಯಾತ ಲೇಖಕ ಕುಂವಿ ಬಂದು ತಮ್ಮ ಅನುಭವ ಹಂಚಿಕೊಂಡಿದ್ದು ವಿಶೇಷವಾಗಿತ್ತು.ನಿರರ್ಗಳವಾಗಿ
ಮಾತಾಡೋ ಕುಂವಿ ಮಾತು ಕೇಳೋದು ಸೊಬಗು.
ಕೇವಲ ಧನಾತ್ಮಕ ಅಂಶ ಮಾತ್ರ ಹೇಳೋದಿಲ್ಲ.ಕಮ್ಮಟದಲ್ಲಿ ಹಲವಾರು ನ್ಯೂನತೆಗಳಿದ್ದವು.ಮುಖ್ಯವಾಗಿ ಅಭ್ಯರ್ಥಿಗಳ ಕೊರತೆ.ನಾ ಉಲ್ಲೇಖಿಸಿದ ಹಾಗೆ ಏಳೆಂಟು ಜನ ಅರ್ಜಿ ಗುಜರಾಯಿಸಿದವರು ಉಳಿದೆಲ್ಲ ಆಹ್ವಾನಿತರು.
ಹೀಗೆ ಬಂದವರು ತಾವೇ ಹೇಳಿಕೊಂಡಹಾಗೆ ಸಾಹಿತ್ಯದಲ್ಲಿ ಆಸಕ್ತಿಇದ್ದವರಲ್ಲ. ಸ್ನೇಹ ಪ್ರೀತಿಗೆ ಒತ್ತಾಯದಿಂದ ಮೂರುದಿನ ಚೇಂಜ್ ಅಂತ ಬಂದವ್ರು. ಕೆಲವರು ಕಾಲೇಜಿನ ಪ್ರೊಫೆಸರ್ರು. ಇನ್ನು ಚರ್ಚೆ ಏಕಮುಖವಾಗಿತ್ತು. ಯಾವಾಗ ಚರ್ಚೆಗೆ ತಳಹದಿಯಾಗಿ ಜಾತಿ ಮತ ಇರುತ್ತದೆಯೋ ಅಲ್ಲಿ ಅರ್ಥಪೂರ್ಣ ಚರ್ಚೆಯಾಗಲು ಸಾಧ್ಯವಿಲ್ಲ.
ಮೇಲಾಗಿ ನಾರಾಯಣ್ ಅವರು ಈಗಿನ ತಲೆಮಾರಿನ ವಸುಧೇಂದ್ರ,ಬೆಳಗೆರೆ,ಸುಮಂಗಲಾ ಮುಂತಾದವರ ಕೃತಿಗಳನ್ನು ಸೀರಿಯಸ್ ಓದಿಗೆ ತಕ್ಕುದಲ್ಲ ಎಂದು ಅಪ್ಪಣೆ ಕೊಡಿಸಿದರು...! ಇನ್ನು ಭೈರಪ್ಪ ವೈಯುಕ್ತಿಕವಾಗಿ ಉದ್ಧಾರವಾದ್ರು.ನನ್ನ ಪರಿಸ್ಥಿತಿ ಅಭಿಮನ್ಯವಂತಾಗಿತ್ತು. ಕಾದಾಡುವುದು ವ್ಯರ್ಥ ಅಂತ ತಿಳಿದು ಮೌನಕ್ಕೆ ಶರಣಾಗಿದ್ದೆ.
ಓತಪ್ರೋತವಾಗಿ ದಲಿತ,ಸ್ತ್ರೀವಾದ, ಶೋಷಣೆ ಹೀಗೆ ಮಾತು ಹರಿದಿತ್ತು.ಅದು ಕಂಠ ಶೋಷಣೆಯೋ ಅಥವಾ ನನ್ನ
ಕರ್ಣಶೋಷಣೆಯೋ ಗೊತ್ತಾಗಲಿಲ್ಲ.
ಮೇಲಿನ ಎಲ್ಲ ಓರೆ ಕೋರೆಗಳ ನಡುವೆ ನಾ ಮೂರುದಿನ ಹಿತ ಅನುಭವಿಸಿದೆ. ಸುತ್ತ ಚಾಚಿದ ಹಸಿರು, ಆಹ್ಲಾದಕರ ಗಾಳಿ ವಾಹನಗಳ ಹೊಲಸಿಲ್ಲದೆ ನಳನಳಿಸುವ ರಸ್ತೆಗಳು. ಕುವೆಂಪು ಅಡ್ಡಾಡಿದ ದಾರಿ ಅವರ ಸಮಾಧಿ ಇರುವ
ಕವಿಶೈಲ. ಅಲ್ಲಿ ನಾವೆಲ್ಲ ಹಾಡುಹಾಡಿದ ಹುಣ್ಣಿಮೆಯರಾತ್ರಿ...ಮರುದಿನದ ಸೂರ್ಯೋದಯ. ಕುವೆಂಪು ಬಳಸೋ ಎಲ್ಲ ವಸ್ತುಗಳನ್ನು ಜತನದಿಂದ ಕಾಪಾಡಿ ನೋಡುಗರಿಗೆ ಬೇರೆ ಲೋಕ ಪರಿಚಯಿಸೋ ಕವಿಮನೆ."ಬಾ ಫಾಲ್ಗುಣ ರವಿ...ದರ್ಶನಕೆ" ಬರೆದ ನವಿಲ್ ಗುಡ್ಡದ ಸೊಬಗು..,"ದೇವರು ರುಜು ಮಾಡಿದ" ಬರೆದ ಚಿಬ್ಬಲಗುಡ್ಡೆಯ ತುಂಗೆಯ
ಮನಮೋಹಕ ದೃಶ್ಯ...ಕಣ್ಣುತುಂಬ ತುಂಬಿಕೊಂಡು ನಲಿದೆ.
ಅಲ್ಲೆಲ್ಲೋ ದನಿಮೊಳಗುತ್ತಿತ್ತು..."ನೂರು ಮತದ ಹೊಟ್ಟ ತೂರಿ...ಎಲ್ಲ ತತ್ವದೆಲ್ಲೆ ಮೀರಿ...". ಅವರ ನೆಲದಲ್ಲಿ
ನೆರಳಬುಡದಲ್ಲಿ ಇದ್ದರೇನು..ಜಾತಿ ಪಂಥ ಹೀಗೆ ಭ್ರಾಂತಿಯ ಗೋಡೆ ಕಟ್ಟಿಕೊಂಡು..ಕಮ್ಮಟದ ನೆವದಲ್ಲಿ ವಿಷಕಾರುತ
ಕುವೆಂಪು ಅವರ ನಿಜ ತತ್ವ ಅರಿಯದೇ ಇರುವ ದನಿಯೂ ಇತ್ತು.
Subscribe to:
Post Comments (Atom)
This comment has been removed by the author.
ReplyDeleteದೇಸಾಯಿ ಸಾಹೇಬರೇ, ಸರಕಾರದಲ್ಲಿರುವ ಜನಗಳೇ ಜಾತೀ ರಾಜಕೀಯ ಮಾಡಿ ಕುವೆಂಪುವಿಗೆ ಮಾತ್ರ ಆದ್ಯತೆ ಕೊಟ್ಟರು, ಕವಿಶೈಲವಿದ್ದಂತೇ ಬೇಂದ್ರೆಗಾಗಲೀ, ಕಾರಂತರಿಗಾಗಲೀ, ಡೀವೀಜಿಗಾಗಲೀ ಎಲ್ಲಾದರೂ ಸ್ಮಾರಕಗಳನ್ನು ನಿರೀಕ್ಷಿಸಿಬಹುದೇ? ಇಲ್ಲವೇ ಇಲ್ಲ. ಇನ್ನು ಹಳ್ಳಿಗಳಲ್ಲಿ ನಡೆಸುವ ಇಂತಹ ಕಥಾಕಮ್ಮಟಗಳೆಲ್ಲ ಸಮರ್ಪಕವಾಗಿ ನಡೆಯುವುದು ಕಮ್ಮಿ. ನೀವೇ ಹೇಳಿದಹಾಗೇ ’ಜಸ್ಟ್ ಫಾರ್ ಏ ಚೇಂಜ್ ’ ಎಂದುಕೊಂಡು ಹೆಂಡತಿ-ಮಕ್ಕಳ ಸಮೇತ ಪಾಲ್ಗೊಳ್ಳುವವರು ಜಾಸ್ತಿ. [ಈ ವಿಷಯದಲ್ಲಿ ಕೆಲವೊಂದು ಅಪವಾದಗಳಿರಬಹುದು] ಯಾವಾಗ ಸ್ವಜನ ಪಕ್ಷಪಾತ, ರಾಜಕೀಯ ಕಾಲಿಡುತ್ತದೋ ಆಗ ಸರಸ್ವತಿ ನೋಯುತ್ತಾಳೆ ! ಸಾರಸ್ವತ ಲೋಕದಲ್ಲಿ ಇದು ಒಳ್ಳೆಯ ಬೆಳವಣಿಗೆಯಲ್ಲ, ಹಿಂದೆ ಇರಲಿಲ್ಲ-ಈಗೀಗ ಆರಂಭವಾಗಿದೆ. ನದಿ/ಋಷಿ/ಸ್ತ್ರೀ ಮೂಲವನ್ನು ಹೇಗೆ ಕೇಳಬಾರದು ಎಂಬ ಶಾಸ್ತ್ರವಿದೆಯೋ ಅದರಂತೇ ಕವಿ/ಸಾಹತಿಗಳ ಮೂಲವನ್ನೂ ಕೇಳದೇ ಅವರನ್ನು ಗೌರವಿಸುವ ಕಾಲ ಬರಬೇಕಾಗಿದೆ. ಅದು ಬರುತ್ತದೋ ಬಿಡುತ್ತದೋ ಪ್ರಶ್ನೆ ಬೇರೆ. ಆದರೆ ಈಗಿರುವ ಸ್ಥಿತಿಯಲ್ಲಿ ಇರುವುದು ಬೇಡ, ಸಾಹಿತ್ಯಾಸಕ್ತರು ಯಾವುದೇ ಪೂರ್ವಾಗ್ರಹಪೀಡಿತರಾಗದೇ ಪಾಂಡಿತ್ಯಕ್ಕೆ ಗೌರವ ಕೊಡಲಿ ಎಂಬುದು ನನ್ನ ಇರಾದೆ, ನಮಸ್ಕಾರ.
ReplyDeleteದೇಸಾಯರ,
ReplyDeleteಕಟುಸತ್ಯವನ್ನು ನಿಷ್ಠುರವಾಗಿ ಹೇಳಿದ್ದೀರಿ. ಇದಕ್ಕಾಗಿ ನಿಮಗೆ ಅಭಿನಂದನೆಗಳು.
ಕಮ್ಮಟ ಹೇಗೇ ಇದ್ದರೂ, ಕವಿಶೈಲದಲ್ಲಿ ಮೂರು ದಿನ ಕಳೆದದ್ದೇ ಭಾಗ್ಯವೆನ್ನಬೇಕು!
ದೇಸಾಯಿಯವರೆ...
ReplyDeleteಜಾತಿ ಪದ್ಧತಿ ನಮ್ಮ ದೇಶಕ್ಕಂಟಿದ ಮಹಾ ಹೆಮ್ಮಾರಿ ರೋಗ..
ಹಾಗಾಗಿ "ಜಾತ್ಯಾತೀತ" ದೇಶ ಮಾಡಿಕೊಂಡು ಜಾತಿಗಾಗಿ ಬಡಿದಾಡುತ್ತಿದ್ದೇವೆ..
ಆದರೂ ಸಾಹಿತಿಗಳ..
ಸಾಹಿತ್ಯ ಕಮ್ಮಟದಲ್ಲಿ ಭಾಗವಹಿಸಿದ ನಿಮ್ಮ ಅನುಭವನ್ನು ಚೆನ್ನಾಗಿ ಬರೆದಿರುವಿರಿ..
ವಂದನೆಗಳು..
ದೇಸಾಯಿಯವರೆ,
ReplyDeleteನಿಮ್ಮ ಅನುಭವ ಲೇಖನ ಅನೇಕ ವಿಚಾರಗಳನ್ನು ತಿಳಿಸಿತು.ಧನ್ಯವಾದಗಳು.
ನನಗೂ ಒಮ್ಮೆ ಕವಿಶೈಲ ನೋಡಬೇಕು ಅನ್ನೊ ಆಸೆ ಅದ ರೀ ಸರ್. ಯಾವಾಗ್ ಕೂಡಿ ಬರ್ತದೋ ಆ ಕಾಲ..... ಇಷ್ಟ ಅನಿಷ್ಟ ವಯಕ್ತಿಕ ಆದ್ರೂ ಅದರ ಹೊರತಾಗಿ ಒಂದ್ ಚರ್ಚಾಕೂಟದಾಗ ಖುಲ್ಲಾ ಮನಸಿಂದ ವಿಚಾರ ಮಾಡಿ ಚರ್ಚಾ ಮಾಡೂದ್ ಬಿಟ್ಟು, ಈ ಮಂದಿ ಯಾಕ್ ಸರಳ ಇರದ ಒಣ ಹಮ್ಮ್ ಬೆಳಸ್ಕೊಂಡು ಬಾವ್ಯಾಗಿನ ಕಪ್ಪಿ ಆಕ್ಕಾರೋ ದೇವ್ರಿಗೇ ಪ್ರೀತಿ!!
ReplyDeleteದೇಸಾಯರೇ..
ReplyDeleteಸುನಾತ್ ಕಾಕಾರ ಮಾತು ನನಗೆ ಒಪ್ಪಿಗೆ..
ನಮ್ಮೂರಿನ ಹತ್ತಿರದಲ್ಲೆ ಇದೆ ತೀರ್ಥಹಳ್ಳಿ..
ಅಲ್ಲಿಗೆ ಸಮೀಪ ಕವಿಶೈಲ..
ಒಮ್ಮೆಯಾದರೂ ಹೋಗ್ಲಿಕ್ಕೆ ಆಗ್ಲಿಲ್ಲ ನೋಡಿ.ನೀವಲ್ಲಿ ಇದ್ದು ಬ೦ದ್ರಲ್ಲ ಓದಿ ನಮಗೂ ಸ೦ತೋಶವಾಯ್ತು.
ದೇಸಾಯ್ ಸರ್;ಸುಂದರ ಲೇಖನ.ಇಷ್ಟವಾಯಿತು.ವಿಶ್ವ ಪಥ,ಮನುಜ ಮತ ಎಂದವರ ಬೀಡಿನಲ್ಲಿ ಜಾತಿಯ ಚರ್ಚೆ!ಎಂತಹ ವಿಪರ್ಯಾಸ ಅಲ್ಲವೇ!
ReplyDelete"ನಾರಾಯಣ್ ಅವರು ಈಗಿನ ತಲೆಮಾರಿನ ವಸುಧೇಂದ್ರ,ಬೆಳಗೆರೆ,ಸುಮಂಗಲಾ ಮುಂತಾದವರ ಕೃತಿಗಳನ್ನು ಸೀರಿಯಸ್ ಓದಿಗೆ ತಕ್ಕುದಲ್ಲ ಎಂದು ಅಪ್ಪಣೆ ಕೊಡಿಸಿದರು...!"
ReplyDeleteಇದು ಯಾಕೆ, ಏನು ಎತ್ತ ಅ೦ತ ಗೊತ್ತಾಗಲಿಲ್ಲ. ಸೀರಿಯಸ್ ಓದು ಎ೦ದರೇನು? Ambulanceನಲ್ಲಿ ಕುಳಿತು ಓದುವುದೇ? (ಮನೆಯಲ್ಲಿ ಯಾರಿಗಾದ್ರೂ ಸೀರಿಯಸ್ ಆದ್ರೆ ambulance ತರಿಸ್ತಾರಲ್ಲ)ತಳಹದಿ ಇಲ್ಲದೆ ಹೀಗೆಲ್ಲಾ loose comments ಮಾಡುವುವುದು ಪ್ರೌಢರಿಗೆ ಶೋಭಾಯಮಾನವನ್ನು ತರುವುದೇ? ಛೀ, ಛೀ!
ನೀವು "ಕವಿಶೈಲಕ್ಕೆ ಹೋಗ್ತಾ ಇದೀನಿ" ಅ೦ದಾಗ ಖುಷಿ ಪಟ್ಟವ ನಾನು. ನನಗೆ ಆ ಪರಿಸರ ಹೊಸದಲ್ಲ, ನಾನು ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳ ಎಲ್ಲ ಭಾಗಗಳಲ್ಲಿ ಓಡಾಡಿದವನು. ಇತ್ತೀಚಿನ ದಿನಗಳಲ್ಲಿ ಕವಿ-ಸಾಹಿತಿಗಳ ಹೆಸರಲ್ಲಿ ಗು೦ಪುಗಾರಿಕೆ, ಒಬ್ಬರ ಮೇಲೆ ಇನ್ನೊಬ್ಬರು ಕೆಸರೆರಚುವುದು, ತಾವು ಬರೆದಿದ್ದು ಓದಲು ಯೋಗ್ಯವಾಗಿಲ್ಲದೆ ಇದ್ದರೂ ಬೇರೆಯವರದು ಓದಬೇಕಾದ ಕೃತಿ ಅಲ್ಲ ಅ೦ತ ಫರ್ಮಾನು ಮ೦ಡಿಸುವುದು, ಇವೆಲ್ಲಾ ಆರೋಗ್ಯಕರ ಬೆಳವಣಿಗೆ ಅಲ್ಲ. ವಿ.ಅರ್.ಭಟ್ಟರು ಹೇಳಿದ೦ತೆ, ಬೇ೦ದ್ರೆ, ಕಾರ೦ತ, ಡಿವಿಜಿ ಯವರಿಗೆ ಇ೦ತಹ ಸ್ಮಾರಕಗಳ ಭಾಗ್ಯ ದಕ್ಕಲಿಲ್ಲ. ನೀವು ಕಥಾಕಮ್ಮಟದ ಅನುಭವವನ್ನು ಯಥಾವತ್ ಅರುಹಿದ್ದೀರಿ. ನಿಮಗೆ ಕಮ್ಮಟದಿ೦ದ ಪ್ರಯೋಜನ ವಾಯಿತೋ ಇಲ್ಲವೋ ನಾ ಕಾಣೆ, ಆದರೆ ಹೊಸತೊ೦ದು ಅನುಭವ ದಕ್ಕಿತಲ್ಲ. ಹಸಿರು ಪರಿಸರದಲ್ಲಿ ಓಡಾಡುವ ಅವಕಾಶ ಸಿಕ್ಕಿತಲ್ಲ. ಅದಕ್ಕೆ ಖುಷಿ ಪಡಬೇಕು.
ReplyDeleteಭಟ್ ಸರ್ ನಿಮ್ಮ ನೆಚ್ಚಿನ ಪ್ರತಿಕ್ರಿಯೆಗೆ ಧನ್ಯವಾದಗಳು.ನಮ್ಮ ಹಿರಿಯ ಕವಿಗಳಾದ ಬೇಂದ್ರೆ,ಕಾರಂತ ,ಡಿವಿಜಿ ಹಾಗೂ ಕುವೆಂಪು ಸದಾ ಸ್ಮರಣೀಯರು.ಅವರನ್ನು ಜಾತಿ ಆಧಾರದಮೇಲೆ ವರ್ಗೀಕರಿಸಿ ಅವರು ಆ ಜಾತಿಗೆ ಸೇರಿದವರು ಹೀಗಾಗಿ ಅವರಿಗೆ ಸ್ಮಾರಕ ಸಿಕ್ತು,ಮ್ಯುಸಿಯಂ ಸಿಕ್ತು ಇತ್ಯಾದಿ ವಾದ ಸರಿಯಲ್ಲ. ಸ್ಮಾರಕ ನೆವಮಾತ್ರ.ನಮ್ಮಗಳ ಎದೆಯಲ್ಲಿ ಅವರ ನೆನಪು ಚಿರಸ್ಥಾಯಿ ಏನಂತೀರಿ...
ReplyDeleteThis comment has been removed by the author.
ReplyDeleteನಿಜ ಕಾಕಾ ಆ ಜಾಗಾ ಆ ಹಸಿರು ಭಾಳ ಛಂದ ಅನಿಸ್ತು...
ReplyDeleteಹೆಗಡೇಜಿ ನಿಮ್ಮ ಮಾತು ನಿಜ.ಅನಿಸಿಕೆಗೆ ಧನ್ಯವಾದಗಳು...
ReplyDeleteಮನಮುಕ್ತ ಅವರಿಗೆ ಧನ್ಯವಾದಗಳು....
ReplyDeleteದೇಸಾಯ್ ಸರ್,
ReplyDeleteನೀವು ಕುಪ್ಪಳ್ಳಿಗೆ ಕಮ್ಮಟಕ್ಕೆ ಹೋಗುತ್ತಿದ್ದೇನೆ ಎಂದಾಗಲೇ ನನಗೂ ಕುತೂಹಲ ಕೆರಳಿತ್ತು. ಅಲ್ಲಿನ ವಾತಾವರಣ, ಕಾರ್ಯಕ್ರಮದ ವಿವರ ಅದಕ್ಕೆ ತಕ್ಕಂತೆ ಫೋಟೊಗಳು, ಇತ್ಯಾದಿಗಳನ್ನು ಸರಳವಾಗಿ ಬರೆದು ನಮಗೆ ಕಾರ್ಯಕ್ರಮದ ಬಗ್ಗೆ ಪರಿಚಯಿಸಿದ್ದೀರಿ..ಅದಕ್ಕಾಗಿ ಧನ್ಯವಾದಗಳು.