Friday, December 10, 2010

ಅನಿಕೇತನ

ಈ ಮೇಲಿನ ನನ್ನ ಕತೆ ೩೧/೧೦/೨೦೦೨ ರ ಸುಧಾದಲ್ಲಿ ಪ್ರಕಟವಾಗಿತ್ತು. ಈಗ ಬ್ಲಾಗಿಗೆ ಹಾಕುತ್ತಿರುವೆ
 ಎಂದಿನಂತೆ ಓದಿ ತಪ್ಪು ಒಪ್ಪು ತಿಳಿಸಿ. 
 
                   -------------------------------------------------------------
                                            ಅನಿಕೇತನ..
                                      +++++++++++

                 ಈ ಬದುಕು ಅನಿರೀಕ್ಷಿತಗಳನ್ನು ಬೊಧಿಸುವ ಪಾಠಶಾಲೆ. ನಮಗೆ ಇಷ್ಟವಿರಲಿ ಇಲ್ಲದಿರಲಿ ನಾವು ಕಲಿಯಲೇಬೇಕು.ಜೀವನ ಅನುಕ್ಷಣ ಪಾಠ ಕಲಿಸುತ್ತಿರುತ್ತದೆ.

                  ಲೀಲಾ ವೈನಿಯ ಜೀವನವೂ ಇದೇ ಅನಿರೀಕ್ಷಿತದ ಸುಳಿಗೆ ಸಿಕ್ಕಿತ್ತು.ಅರಳಿ ನಗುತ್ತಿದ್ದ ಹೂವೊಂದು
ಬಿರುಗಾಳಿಗೆ ಸಿಕ್ಕಿ ನಜ್ಜುಗಜ್ಜಾದ ಹಾಗೆ ಆಗಿತ್ತು.
                                     -------------

ಹಾಗೆ ನೋಡಿದರೆ ಲೀಲಾವೈನಿಯವರದು ಸುಖಿಸಂಸಾರ.ಗಂಡ ಸರಕಾರಿ ಅಧಿಕಾರಿ ನಿವೃತ್ತಿಗೆ ತೀರ ಹತ್ತಿರದಲ್ಲಿದ್ದಾರೆ.
ಒಬ್ಬನೇ ಮಗ ಅಮೇರಿಕಾದಲ್ಲಿ ಸೆಟಲಾಗಿದ್ದಾನೆ.ಮಗಳು ಮುಂಬೈಯಲ್ಲಿ ವಿದೇಶಿ ಬ್ಯಾಂಕಿನಲ್ಲಿ ಅಧಿಕಾರಿ.ಮಕ್ಕಳಿಬ್ಬರ
ಭೇಟಿ ಅಪರೂಪ ಎನ್ನುವ ಕೊರಗು ವೈನಿಗಿದೆ. ಆದರೆ ಮಕ್ಕಳು ತಮ್ಮ ಬದುಕು ರೂಪಿಸಿಕೊಂಡ ಬಗ್ಗೆ ಹೆಮ್ಮೆಯೂ ಇದೆ.

ಮೆಟ್ರಿಕ್ ಮುಗಿಸಿದ ಕೂಡಲೇ ಮದುವೆಯಾದ ಲೀಲಾ ವೈನಿ ಸಂಸಾರಕ್ಕೆ ಒಗ್ಗಿಕೊಂಡಿದ್ದರು.ಗಂಡನಿಗೆ ವರ್ಗವಾದಾಗಲೆಲ್ಲ ಹೊಸ ಜಾಗದಲ್ಲಿ ಸಂಸಾರ ಹೂಡುತ್ತಿದ್ದರು.ಮಕ್ಕಳಿಬ್ಬರನ್ನು ಹಾಸ್ಟೆಲ್ನಲ್ಲಿ ಇರಿಸಿ  ಒದಿಸಿದ್ದರು.
ಲೀಲಾ ವೈನಿ ಬಿಡುವಿನವೇಳೆ ಎಲ್ಲ ಅವರು ತಾಯಿಯಿಂದ ಕಲಿತ ಹೆಣಿಕೆ,ಹೊಲಿಗೆಯಲ್ಲಿ ಕಳೆಯುತ್ತಿದ್ದರು.ಅವರ
ಮನೆಯ ಪ್ರತಿ ವಸ್ತುವಿನಲ್ಲೂ ಅವರ ಕೌಶಲ್ಯದ ರುಜುಇತ್ತು. ಟೇಬಲಕ್ಲಾತ್ ಆಗಿರಲಿ , ಸ್ಟೆಬಿಲೈಜರ್ ಮೇಲಿನಹೊದಿಕೆಯಗಿರಲಿ ಅವರ ಕೈಚಳಕಕ್ಕೆ ಕನ್ನಡಿ ಹಿಡಿದಿದ್ದವು.ಅಂತೆಯೇ ಅವರು ತಮ್ಮ ಕಲಿಕೆ ಬೇರೆಯವರಿಗೆ
ಉಪಯೋಗವಾಗಲಿ ಎಂದು ಬಯಸಿದ್ದರು. ಈ ನಿಟ್ಟಿನಲ್ಲಿ ನನ್ನ ಅವರ ಪರಿಚಯವಾಗಿದ್ದು.

ನಾನು ಪಕ್ಕಾ ಗೃಹಿಣಿ.ನಮ್ಮಅಪಾರ್ಟಮೆಂಟಿನಲ್ಲಿ ನನ್ನ ಹಾಗೆ ಮನೆಯಲಿರುವುವರ ಸಂಖ್ಯೆ ಕಡಿಮೆ.ಬಹಳಷ್ಟು ಜನ
ಕೆಲಸಕ್ಕೆ ಹೋಗುತ್ತಾರೆ.ಹೀಗಾಗಿ ಮಧ್ಯಾಹ್ನವಿಡೀ ಅಪಾರ್ಟಮೆಂಟು ಖಾಲಿ ಖಾಲಿ.ಇವರು ಮಾರ್ಕೆಟಿಂಗ್ ಕೆಲಸದಲ್ಲಿದ್ರು..ಹೀಗಾಘಿ ಸದಾ ಟೂರ್ ಮೇಲೆ ಇರುತ್ತಿದ್ದರು.ಅತ್ತೆಯವರಿಗೆ ವೇಳೆ ಕಳೆಯಲು ಟಿವಿ, ನಿದ್ದೆ ಗಳಿದ್ದವು.
ಮಗ ರೋಷನ್ ಶಾಲೆ ಆಟಗಳಲ್ಲಿ ಬಿಜಿ ಇದ್ದ.ನನಗೆ ಏಕಾಕಿತನ ಬಾಧಿಸುತ್ತಿತ್ತು.ಏನಾದರೂ ಮಾಡಬೇಕು ಎಂಬ
ತುಡಿತವಿತ್ತು.

ಬಹುಷಃ ಈ ತುಡಿತವೇ ನನ್ನನ್ನು ಲೀಲಾವೈನಿ ಅವರೆಡೆಗೆ ಸೆಳೆಯಿತು.ಅಪಾರ್ಟಮೆಂಟಿನಲ್ಲಿ ಸದಾ ಏನಾದರೂ ಸಮಾರಂಭ.ಅದು ಲಕ್ಷ್ಮಿ ಸೋಬಾನ ಇರಬಹುದು..ಚೈತ್ರದ ಗೌರಿಯ ಹೂ ವೀಳ್ಯವೇ ಇರಬಹುದು. ಅವುಗಳಲ್ಲಿ
ಲೀಲಾವೈನಿ ಮಿಂಚುತ್ತಿದ್ದರು.ಮೊದಲನೆ ಫ್ಲೋರಿನ ಕುಲಕರ್ಣಿ ಅವರ ಮಗಳ ಮದುವೆಯ ಸುರಗಿ ಸಾಮಾನುಗಳು
ವೈನಿ ಅವರ ಕಲೆಯ ಪ್ರತಿಬಿಂಬವಾಗಿದ್ದವು. ಮದುವೆಮನೆಯಲ್ಲಿ ಅದೊಂದು ಆಕರ್ಷಣೆಯ ವಿಷಯವಾಗಿತ್ತು.

ಅವರ ಈ ಜಾಣ್ಮೆ ನಾನೂ ಕಲಿಯಬೇಕು ಎಂದು ಆಳುಕಿನಿಂದಲೇ ಅವರ ಬಳಿ ಹೋದೆ. ಅವರು ಮನಃಪೂರ್ವಕವಾಗಿ
ಸ್ವಾಗತಿಸಿದರು.ಅವರೊಡನೆ ನನ್ನ ಗೆಳೆತನ ಬಲಿಯಿತು.ನನ್ನ ನೀರಸ ಹಗಲುಗಳಿಗೆ,ಸಂಜೆಗಳಿಗೆ ಹೊಸ ಅರ್ಥದೊರೆತಂತಾಯಿತು.ಅವರ ಬಳಿ ಕೆಲ ಹೊಸರುಚಿ ಕಲಿತೆ.ಮಾಡಿ ತೋರಿಸಿ ಮನೆಮಂದಿಯಿಂದ ಶಾಭಾಸಗಿರಿ
ಪಡೆದೆ.ನಮ್ಮಿಬ್ಬರ ನದುವೆ ವಯಸ್ಸಿನ ಅಂತರ ಬಹಳವಿತ್ತು ಆದರೆ ಅದಕ್ಕೂ ಮೀರಿ ಮುಕ್ತತೆ ಇತ್ತು.ಅವರು ತಮ್ಮ ಗಂಡನ ಬಗ್ಗೆ ಮಕ್ಕಳ ಬಗ್ಗೆ ಹರಟುತ್ತಿದ್ದರು.ನಾನೂ ಇತರರ ಮುಂದೆ ಹೇಳಿಕೊಳ್ಳಲಾಗದ ಸಮಸ್ಯೆಗಳನ್ನು ಅವರ ಬಳಿ
ಚರ್ಚಿಸುತ್ತಿದ್ದೆ ಸಮಾಧಾನಕರ ಉತ್ತರ ಪಡೆಯುತ್ತಿದ್ದೆ.

                                    ----------------
ಆದರೆ ಈಗ ಅವರ ಜೀವನದಲ್ಲಿ ಬಂದೊದಗಿದ ಸಮಸ್ಯೆ ತೀರ ಖಾಸಗಿ.ಜೀವನ ಅವರನ್ನು ಇಷ್ಟು ಕಠಿಣ ಪರೀಕ್ಷೆಗೆ ಗುರಿ ಮಾಡುತ್ತೆ ಎಂದು ಅವರು ಅಂದುಕೊಂಡಿರಲಾರರು.ಆದರೆ ದಾರಿಗುಂಟ ಸಾಗುವಾಗ ತಿರುವಿನಲ್ಲಿ ಧುತ್ತನೆ
ಸಮಸ್ಯೆಯ ರೂಪದಲ್ಲಿಎದುರಾಗುವುದು ಬದುಕಿನ ವಿಸ್ಮಯಗಳಲ್ಲೊಂದು.

ಲೀಲಾವೈನಿಯವರ ಹಾಲಿನಂತಹ ಸಂಸಾರದಲ್ಲಿ ಹುಳಿ ಹಿಂಡಲೆಂದೇ ಆ ಸಂಜೆ ಬಂದಂತಿತ್ತು. ಸಾಯಂಕಾಲ ದೀಪ
ಹಚ್ಚಿ ಬಂದವರಿಗೆ ಕಂಡಿದ್ದ ಆ ಹುಡುಗ. ಇನ್ನೂ ಎಳೆವಯಸ್ಸು. ಮುಖದಲ್ಲಿ ರೋಷದ ಕಿಡಿ. ಆದರೆ ವೈನಿಗೆ ಆಶ್ಚರ್ಯವಾಗಿದ್ದು ಅವನ ಮುಖ ತಮ್ಮ ಯಜಮಾನರಿಗೆ ಹೋಲುತ್ತಿತ್ತು ಎಂಬುದು. ಅವನು ಕೇಳಿದ ಪ್ರಶ್ನೆ ಸಿಟ್ಟಿನಿಂದ
ಕೂಡಿತ್ತು. ಅವರ ಯಜಮಾನರನ್ನು ಏಕವಚನದಲ್ಲಿ ಕರೆದಿದ್ದ.ಇವರು ಉತ್ತರಿಸಬೇಕು ಎಂಬಲ್ಲಿ ಸರಿಯಾಗಿ ಯಜಮಾನರು ಬಂದಿದ್ದರು.ಹುಡುಗನನ್ನು ಬಲವಂತವಾಗಿ ರೂಮಿಗೆ ಕರೆದೊಯ್ದರು.ಏನಾಗುತ್ತಿದೆ ಎಂಬುದು ಅರಿವಿಲ್ಲದೆ ವೈನಿ ಅವಾಕ್ಕಾಗಿದ್ದರು.ಆ ಹುಡುಗನ ಮುಖದ ರೋಷ ಯಾವುದೋ ಕೆಟ್ಟ ಸೂಚನೆ ಕೊಡುತ್ತಿತ್ತು.

ಬಹಳ ಹೊತ್ತು ರೂಮಿನ ಬಾಗಿಲು ಹಾಹಿಯೇ ಇತ್ತು. ಒಳಗೆ ವಾಗ್ವಾದ ನಡೆದಿತ್ತು.ಹುಡುಗನ ದನಿಯ ಅಬ್ಬರಕ್ಕೆ ಹೋಲಿಸಿದರೆ ಯಜಮಾನರ ದನಿ ಸಣ್ಣದಿತ್ತು. ದೈನ್ಯತೆಯಿಂದ ಕೂಡಿತ್ತು.ಸುಮಾರು ಹೊತ್ತಿನ ನಂತರ ಬಾಗಿಲು ತೆರೆದು ಇಬ್ಬರೂ ಹೊರಬಂದರು.ಯಜಮಾನರು ತಮಗೆ ಹೊತ್ತಾಗುವುದಾಗಿ ಊಟ ಮಾಡಿಬಿಡಲು ಹೇಳಿ ಹೊರಟು
ಹೋದರು.ಹುಡುಗನ ಜೊತೆಗೆ.ವೈನಿಗೆ ತಲೆಬುಡ ಅರ್ಥವಾಗಲಿಲ್ಲ.ಶೂನ್ಯ ದಿಟ್ಟಿಸುತ್ತ ಎಷ್ಟೋ ಹೊತ್ತು ಕುಳಿತರು.
ಅವರ ಗಂಡ ಮರಳಿದಾಗ ಹನ್ನೊಂದು ಮೀರಿತ್ತು.ಮುಖ ಬಳಲಿದಂತೆ..ಬಿಳಿಚಿಕೊಂಡಿತ್ತು.ಏನಾಗಿದೆ ಎಂದು ಕೇಳುವ
ಪ್ರಶ್ನೆ ನಾಲಿಗೆಯಮೇಲೆ ಇದ್ದರೂ ವೈನಿ ಸಂಭಾಳಿಸಿಕೊಂಡರು.

ಎಲ್ಲ ಕೆಲಸ ಮುಗಿಸಿ ರೂಮಿಗೆ ಹೋದಾಗ ಕಂಡಿದ್ದು ಸಿಗರೇಟು ಸುಡುತ್ತಿದ್ದ ಯಜಮಾನರನ್ನು. ಹತ್ತಿರ ಹೋಗಿ ಮೃದುವಾಗಿ ಅವರ ಬೆನ್ನ ಮೇಲೆ ಕೈ ಆಡಿಸಿದರು.ಪ್ರತಿಕ್ರಿಯೆ ಎಂಬಂತೆ ಇವರ ಮಡಿಲಲ್ಲಿ ಮುಖ ಹುದುಗಿಸಿದ ಯಜಮಾನರು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು. ಎಂದೂ ಅತ್ತಿರದ ತಮ್ಮ ಗಂಡ ಹೀಗೆ ಅಳುತ್ತಿರುವುದನ್ನು ನೋಡಿದ
ಲೀಲಾ ವೈನಿ ಸಾವಧಾನವಾಗಿ ವಿಷಯವೇನೆಂದು ವಿಚಾರಿಸಿದರು.

ಕತೆಯ ಸಾರಾಂಶ ಇಷ್ಟೆ...ಅವರ ಗಂಡನಿಗೆ ನರ್ಸೊಬ್ಬಳ ಪರಿಚಯವಾಯಿತು. ಒಡನಾಟ ಪ್ರೇಮಕ್ಕೆ ತಿರುಗಿತು.ಅವಳನ್ನು ಬಿಟ್ಟಿರಲಾದಷ್ಟು ಸೆಳೆತ ಉಂಟಾಯಿತು.ತಮ್ಮ ಸಂಸಾರ, ತಮ್ಮ ಮಕ್ಕಳು ನಂಬಿದ ಹೆಂಡತಿ
ಕೊನೆಗೆ ತಮ್ಮ ಹುದ್ದೆಯ ಗೌರವ ಹೀಗೆ ಯಾವುದೂ ಅವರಿಗೆ ಅಡ್ಡಿ ಅನಿಸಲಿಲ್ಲ. ಆ ಹೆಂಗಸಿನ ಮೋಹವೇ ಅಂತಹುದು.ಅವಳಿಗೊಂದು ಮನೆ ಮಾಡಿದರು,ಅವಳಿಂದ ಮಗಳು,ಮಗ ಹುಟ್ಟಿದರು.ಅನಧಿಕೃತವಾಗಿ ಎರಡನೇ ಸಂಸಾರ ನಡೆಸಿದರು.ಆದರೆ ತಮ್ಮ ಈ ವ್ಯವಹಾರದ ಸುಳಿವು ಯಾರಿಗೂ ಗೊತ್ತಾಗದ ಹಾಗೆ ಜಾಣ್ಮೆ ವಹಿಸಿದ್ದರು.
ಅವಳಿಂದ ಪಡೆದ ಮಕ್ಕಳ ಓದು,ಖರ್ಚು ಎಲ್ಲ ನಿಯತ್ತಾಗಿ ನಿಭಾಯಿಸುತ್ತಿದ್ದರು.ತಮ್ಮ ವರ್ತನೆ ಬಗ್ಗೆ ಯಾವ ಸುಳಿವೂ
ಯಾರಿಗೂ ತಿಳಿಯಗೊಡದ್ದರಿಂದ ನಿರಾತಂಕವಾಗಿದ್ದರು.ಆದರೆ ಕಾಲ ಅವರ ಮುಂದೆ ಕನ್ನಡಿ ಹಿಡಿದಿತ್ತು.ಮಗಳು ಕಾಲೇಜು ಓದುವಾಗ ಯಾವುದೋ ಹುಡುಗನನ್ನು ಪ್ರೇಮಿಸಿದ್ದಾಳೆ..ತರಾತುರಿಯಲ್ಲಿ ಲಗ್ನ ಮಾಡಲೇಬೇಕಗಿದೆ.ಅದುವರೆಗೂ ನೇಪಥ್ಯದಲ್ಲಿದ್ದವರು ಈಗ ರಂಗಕ್ಕೆ ಬರಲೇ ಬೇಕಾಗಿದೆ.ಅವರಿಗೆ ಮನಸ್ಸಿಲ್ಲದಿದ್ದರೂ
ಪ್ರವೇಶ ಮಾಡಲೇ ಬೇಕು ಆ ನಿಟ್ಟಿನಲ್ಲಿಯೇ ಮಗ ಅವರನ್ನು ಭೇಟಿಯಾಗಲು ಬಂದಿದ್ದ.

ಕತೆ ಕೇಳಿದ ಲೀಲಾ ವೈನಿ ವಿಹ್ವಲರಾದರು.ಒಂದರೆಕ್ಷಣ ಆ ದುರಂತವೆಲ್ಲ ಬೇರೆ ಯಾರದೋ ಜೀವನದಲ್ಲಿ ನಡೆದಿದೆ ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವ ಭ್ರಮೆಯಲ್ಲಿದ್ದರು.ಆ ಭ್ರಮೆಯ ಪೊರೆ ವಾಸ್ತವದ ಶಾಖಕ್ಕೆ ಸಿಕ್ಕಿ ನಲುಗಿತ್ತು.ತನ್ನನ್ನು ಕ್ಷಮಿಸು ಎಂದು ಕೇಳಿಕೊಳ್ಳುತ್ತಿರುವ ಗಂಡ ಇವರೊಡನೆ ಇಷ್ಟು ದಿನ ಸಂಸಾರ ಮಾಡಿರುವೆ
ಅದೇನೋ ಅಚಾತುರ್ಯ ಆಗಿ ಹೋಗಿದೆ ಈಗ ಅದೆಲ್ಲ ಕೆದಕುವುದು ಬೇಡ ಅವರು ನನಗೆ ಏನೂ ಕಮಿ ಮಾಡಿಲ್ಲವಲ್ಲ
ಮನಸ್ಸು ಹುಚ್ಚು ಹೊಳೆಯಾಗಿತ್ತು.ತಮ್ಮ ತೊಳಲಾಟ ನನ್ನೊಂದಿಗೆ ತೋಡಿಕೊಂಡರು.ಅಂತೆಯೇ ಬಾಂಬೆಯಿಂದ
ತಮ್ಮ ಮಗಳನ್ನು ಫೋನು ಮಾಡಿ ಕರೆಯಿಸಿಕೊಂಡರು.

ಲೀಲಾ ವೈನಿಯವರ ಸಮಸ್ಯೆ ತೀರ ವೈಯುಕ್ತಿಕವಾದದ್ದು. ಪತ್ರಿಕೆಗಳ ಕೌನ್ಸೆಲಿಂಗ್ ವಿಭಾಗದಲ್ಲಿ ಪತ್ರ ಬರೆದು ಸಮಾಧಾನ ತಂದುಕೊಳ್ಳುವಂತಹುದ್ದಲ್ಲ.ಇದು ನಂಬಿಕೆಯ ಪ್ರಶ್ನೆ.ನಂಬಿಕೊಂಡು ಬಂದ ಆದರ್ಶಗಳ ಪ್ರಶ್ನೆ.ಅವರ
ಬಳಿ ಆಯ್ಕೆ ಇದೆಯೇ ಇದು ನನ್ನ ಪ್ರಶ್ನೆಯಗಿತ್ತು.ಗಂಡ-ಹೆಂಡತಿ ನಡುವೆ ವಿಶ್ವಾಸ ಮುಖ್ಯ ಯಾರಾದರೂ ಜೋಲಿತಪ್ಪಿದರೆ ಇನ್ನೊಬ್ಬರು ಹಿಡಿದು ಸಂಭಾಳಿಸಬೇಕು.ಇದು ಪಾಲಿಸುತ್ತ ಬಂದ ಅಂತರ್ಗತ ಒಪ್ಪಂದ.ಆದರೆ ಜೋಲಿ ತಪ್ಪುವವರು ಬಹಳಷ್ಟು ಸಾರಿ ಗಂಡಸರೇ ಆಗಿರುತ್ತಾರೆ.ಹೆಣ್ಣು ಯಾವಾಗಲೂ ಸಂಭಾಳಿಸುತ್ತಾಳೆ ಎಲ್ಲ ಕ್ಷಮಿಸುತ್ತಾಳೆ. ಇದು ಕಟು ವಾಸ್ತವ. ಈ ವಿರೋಧಭಾಸ ಏಕೆ..? ಬಹುಶಃ ಲೀಲಾವೈನಿಯವರಿಗೂ ಈ ಪ್ರಶ್ನೆ ಕಾಡುತ್ತಿರಬೇಕು.

ಅವರ ಮಗಳು ಬಂದವಳು  ಮೂರು ದಿನ ಇದ್ದು ಹೋದಳು. ಒಮ್ಮೆ ಅವಳನ್ನು ಭೇಟಿಯಾಗಿದ್ದೆ.ಅವಳ ಅಭಿಪ್ರಾಯದಲ್ಲಿ
ಆಗಿರುವ ತಪ್ಪು ಕ್ಷಮಿಸುವುದು ಹಳೆಯದೆಲ್ಲ ಮರೆಯುವುದು. ತಂದೆಗೆ ಪಶ್ಚಾತ್ತಾಪವಾಗಿದೆ ಜೀವನಕ್ಕೆ ಇನ್ನೊಂದು ಚಾನ್ಸು ಕೊಟ್ಟು ನೋಡುವುದು. ವಾದಸರಣಿ ನಿಖರವಾಗಿತ್ತು.ಜೀವನವನ್ನು ಪ್ರಾಕ್ಟಿಕಲ್ ಆಗಿ ನೋಡಬೇಕು ಇದು ಅವಳ ಅಭಿಮತ.ವೈನಿಯ ಮುಖ ಕಳೆಗುಂದಿತ್ತು. ಚಟುವಟಿಕೆಗಳಿಗೆ ಯಾಂತ್ರಿಕತೆಮೆತ್ತಿದಂತಿದ್ದವು. ನಾನು ಅವರ ನೋವು ಮರೆಸಲು ಅವರೊಡನೆ ಬೇರೆ ಬೇರೆ ವಿಷಯ ಚರ್ಚಿಸುತ್ತಿದ್ದೆ.

ಅಪಾರ್ಟಮೆಂಟಿನಲ್ಲಿ ಸುದ್ದಿ ಹಬ್ಬಿತ್ತು. ಗುಸುಗುಸು ಮಾತು ನನಗೂ ಕೇಳುತ್ತಿದ್ದವು. ವೈನಿಯ ಶುಷ್ಕ ಮುಗುಳ್ನಗೆ ನನ್ನೆಲ್ಲ ಪ್ರಯತ್ನಗಳಿಗೆ ತಣ್ಣೀರೆರಚುತ್ತಿತ್ತು. ಅವರ ಯಜಮಾನರನ್ನು ಕಂಡು ಮಾತನಾಡಿದೆ ನನಗೆಲ್ಲ ಗೊತ್ತು ಎನ್ನುವ
ವಿಷಯ ಅವರಲ್ಲಿ ಅಚ್ಚರಿ ತರಲಿಲ್ಲ. ತಮ್ಮ ಹೆಂಡತಿಯನ್ನು ಹೊಗಳಿದರು. ಒಂದಷ್ಟು ದಿನ ಬೇರೆ ಕಡೆಇಬ್ಬರೇ ಹೋಗುವುದಾಗಿ ಟೂರ್ ಹೋಗಲು ಪ್ಲಾನ್ ಮಾಡಿರುವುದಾಗಿ ಹೇಳಿದರು.

ನಮ್ಮ ಬಳಗದವರ ಮದುವೆ ಹಾಸನದಲ್ಲಿತ್ತು. ಇವರೂ ರಜೆ ಹಾಕಿದ್ದರು. ಮದುವೆ ಮುಗಿಸಿ ಮೈಸೂರು, ಬೇಲೂರು ಹಳೇಬೀಡು ಎಲ್ಲ ಸುತ್ತಾಡಿದೆವು. ಒಂದು ವಾರದ ಕಾರ್ಯಕ್ರಮ ಅದು. ವೈನಿಯವರ ಚಿಂತೆತುಂಬಿದ ಮುಖ ಆಗಾಗ
ನೆನಪಾಗುತ್ತಲೇ ಇತ್ತು.

ಹುಬ್ಬಳ್ಳಿಗೆ ಬಂದು ಅದಾಗಲೇ ಎರಡು ದಿನಗಳಾಗಿದ್ದವು. ವೈನಿ ದರ್ಶನ ಆಗಿರಲಿಲ್ಲ. ಅವರ ಪಕ್ಕದ ಮನೆಯವರಿಗೂ ಗೊತ್ತಿರಲಿಲ್ಲ. ಊರಿಗೆ ಹೋಗುವ ಹಿಂದಿನ ದಿನದ ನಮ್ಮ ಭೇಟಿಯಲ್ಲಿ ಮಾತಿನಲ್ಲಿ ಅನೇಕ ವಿಷಯಗಳು ಸುಳಿದಿದ್ದವು.
ಅಂದು ಪೇಪರ್ ನಲ್ಲಿ ಬಂದ ಆತ್ಮಹತ್ಯೆಯ ಪ್ರಕರಣವೂ ಸೇರಿತ್ತು.ಅವರು ಕಾಣದಿದ್ದುದು ಅನೇಕ ಕಳವಳಗಳಿಗೆ ಕಾರಣ ಆಗಿತ್ತು.
ಮಧ್ಯಾಹ್ನದ ಹೊತ್ತು ಬಾಗಿಲು ಬಡಿದಾಗ ತೆಗೆದಾಗ ಕಂಡಿದ್ದು ಲೀಲಾ ವೈನಿ ಅವರ ಯಜಮಾನರು.ಬಹಳ ಬಳಲಿದಂತಿದ್ದರು ಮುಖದ ಮೇಲೆ ಸುಮಾರು ವಾರದ ಗಡ್ಡವಿತ್ತು.ಒಳಗೆ ಕರೆದು ಪಾನಕ ಕೊಟ್ಟೆ.ಅವರ ಪ್ರಶ್ನೆ ತೀರ
ಅನಿರೀಕ್ಷಿತವಾಗಿತ್ತು.
"ಇಕಿ ನಿಮಗ ತಾ ಎಲ್ಲಿ ಹೋಗ್ತೇನಿ ಅಂತ ಹೇಳಿದ್ಲೇನು...?"
"ಅಂದ್ರ ಅವ್ರು ಮನ್ಯಾಗಿಲ್ಲ..ನಾ ಬಾಂಬೆಗೆ ಹೋಗ್ಯಾರ ಅಂತ ತಿಳದಿದ್ದೆ..."ನನ್ನ ದನಿಯಲ್ಲಿ ಗಾಬರಿ ಇತ್ತು.
"ಇಲ್ಲ ಮಗಳಿಗೆ ಫೋನು ಮಾಡಿದ್ದೆ ಅಲಿ ಇಲ್ಲ ಅಕಿ ತವರುಮನಿ ಅಂದ್ರ ಅಕಿ ಅಣ್ಣ ಇದ್ದಾನ ಅಲ್ಲೂ ಹೋಗಿಲ್ಲ. ಎಲ್ಲಿ ಹೋಗ್ಯಾಳ ತಿಳೀವಲ್ದು.. ನೀವು ಇಷ್ಟು ಕ್ಲೋಸ್ ಇದ್ರಿ ನಿಮಗ ಹೇಳಿರಬಹುದು ಅಂದ್ಕೊಂಡಿದ್ದೆ.."

ಪರಿಸ್ಥಿತಿಯ ಸೂಕ್ಮ್ಷತೆ ಅರಿವಾಯಿತು.ಹೀಗೆ ಒಮ್ಮಿಂದೊಮ್ಮೆಲೆ ಯಾರಿಗೂ ಹೇಳದೇ ಹೋಗಿದ್ದಾರೆ,ಹದಿನೈದು ದಿನಗಳಿಂದ ಒದ್ದಾಡಿದ್ದಾರೆ.ಅವರಿಗೆ ಅದೇ ದಾರಿ ಸರಿ ಅನ್ನಿಸಿತೇ ಓಹ್ ದೇವರೆ ಹಾಗಾಗದಿರಲಿ....!
" ನೀವು ಪೋಲಿಸ್ ಕಂಪ್ಲೇಟ್ ಕೊಟ್ಟೀರೇನು.." ನನ್ನ ದನಿ ಕಂಪಿಸುತ್ತಿತ್ತು. ತಲೆ ಆಡಿಸಿದ ಅವರು ನುಡಿದರು.
"ಎಲ್ಲಾ ನನ್ನ ತಪ್ಪು ಖರೆ ಆದ್ರ ನನಗ ತಿದ್ದಿಕೊಳ್ಳಲಿಕ್ಕ ಅವಕಾಶ ಬೇಕಾಗಿತ್ತು.ಇಕಿ ಹಿಂಗ ಮಾಡ್ತಾಳ ಅಂತ ನಾ
ಅಂದಕೊಂಡಿರಲಿಲ್ಲ..ಮಕ್ಕಳ ಮುಂದ, ಸರೀಕರ ಮುಂದ ನಮ್ಮ ಬದುಕು ಅಸ್ವಸ್ಥ ಆತು ದೇವರು ನನಗ ಛಲೋ
ಶಿಕ್ಷಾ ಕೊಟ್ಟಾನ.." ಅವರು ಅಳುವುದನ್ನು ನಾನು ನೋಡಿರಲಿಲ್ಲ.ಪಶ್ಚಾತ್ತಾಪದ ಬೆಂಕಿ ಅವರನ್ನು ಸುಡುತ್ತಿತ್ತು.ಸಮಾಧಾನ ಹೇಳಿ ಅವರಿಗೆ ಕಳಿಸಿಕೊಟ್ಟೆ.

ತಲೆ ಗೊಂದಲದ ಗೂಡಾಗಿತ್ತು.ವೈನಿ ಹಿಂಗ್ಯಾಕ ಮಾಡಿದ್ರು.ಏನು ಸಾಧಿಸಿದ್ರು  ಜೀವನ ಒಡ್ಡಿದ ಈ ಸವಾಲು ಎದುರಿಸದೇ ಪಲಾಯನ ಮಾಡಿದ್ರು.ನಿಜ ಅವರ ಗಂಡ ತಪ್ಪು ಮಾಡಿದ್ದಾರೆ ರಹಸ್ಯ ಒಮ್ಮೆಲೆ ಸ್ಫೋಟವಾಗಿ ತೊಡಕಾಗಿದೆ.ಆದರೆ ಈ ವಯಸ್ಸಿನಲ್ಲಿ ಹೊಸ ಬಾಳು ನಡೆಸುವ ಚೈತನ್ಯ ಅವರಲ್ಲಿದೆಯೇ?ಅದರ ಬದಲು ತಪ್ಪು
ಮಾಡಿದ ಗಂಡನನ್ನು ಕ್ಷಮಿಸಿ ಗೋಜಲಾಗಿದ್ದ ತಮ್ಮ ಸಂಸಾರ ತಿದ್ದಿ ತೀಡಿ ಎಲ್ಲ ಮರೆತು ಇರುವಷ್ಟು ದಿನ ನಗು ನಗುತ್ತ ಬಾಳಿದರಾಯಿತು. ಅದು ಬಿಟ್ಟು ಈ ಹೆಜ್ಜೆ ಇಡುವ ಧೈರ್ಯ ಅವರಲ್ಲಿ ಹೇಗೆ ಬಂತು ಹಾಗೊಂದು ವೇಳೆ ಜೀವ
ಕಳಕೊಂಡು ಅವರು ಸಾಧಿಸಿದ್ದಾದರೂ ಏನು ಎಲ್ಲ ಹಾಗೇ ಇರುತ್ತದೆ ಎನೂ ಬದಲಾಗುವುದೇ ಇಲ್ಲ  ಸಾವು ಸಮಸ್ಯೆಗೆ
ಪರಿಹಾರ  ಆಗಲಾರದು....

ನನ್ನೆಲ್ಲ ತೊಳಲಾಟಗಳಿಗೆ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ವೈನಿ ಬರೆದ ಪತ್ರ ಬಂದಿತ್ತು. ನಡುಗುವ ಕೈ ಗಳಿಂದ
ಒಡೆದು ಓದಿದೆ...
                                          **********

"ಪ್ರೀತಿಯ ಶಕು,
 ನೀ ಕಾಳಜಿ ಮಾಡ್ತಿರಬಹುದು..ವೈನಿ ಎಲ್ಲಿ ಅಂತ. ನಾ ಈಗೆಲ್ಲಿದ್ದೀನಿ ಅನ್ನುವುದು ಅಷ್ಟು ಮುಖ್ಯ ಅಲ್ಲ ಆದ್ರ ನಾ ಏನ
ಮಾಡಲಿಕ್ಕೆ ಹತ್ತೇನಿ ಅದು ಮುಖ್ಯ. ನಾ ಈಗ ಒಂದು ಸಾಲಿಯೊಳಗ ಇದ್ದೇನಿ..ಇಲ್ಲಿ ಮಕ್ಕಳಿದ್ದಾರೆ  ಬುದ್ಧಿಮಾಂದ್ಯರ
ಸಾಲಿ ಇದು ಅವರ ಸೇವಾ ಮಾಡ್ಕೊತ ನನಗ ಗೊತ್ತಿದ್ದುದು ಅವರಿಗೆ ಕಲಸುತ್ತ ಆರಾಮ ಇದ್ದೇನಿ.

ನನಗ ಇದು ಯಾಕ ಬೇಕಾಗಿತ್ತು ..ನೀ ಕೇಳಬಹುದು.ಅಥವಾ ಇದರಿಂದ ನಾ ಏನು ಸಾಧಿಸಿದಂಗಾತು ಅಂತ ಅನ್ನಬಹುದು.ಹೇಳು ನಾ ಇದುವರೆಗೂ ಏನು ಸಾಧಿಸಿದೆ..ಮದವಿ, ಸಂಸಾರ ಮಕ್ಕಳು ನನಗೂ ಬೇಕಆನಿಸಿದ್ವು.
ಅನುಭವಿಸಿದೆ. ಮಜಾನೂ ಬಂತು.ಮಕ್ಕಳ ಹೇಲು ಉಚ್ಚಿ ಬಳಿಯುವಾಗ,ಮೊಮ್ಮಕ್ಕಳು ತೊಡಿಮ್ಯಾಲ ಆಡುವಾಗ
ನಾ ಎಷ್ಟು ಪುಣ್ಯ ಮಾಡೇನಿ ಅಂತ ಅನಿಸತಿತ್ತು.ಒಂಥರಾ ಭ್ರಮಾದಾಗ ನಾ ಇದ್ದೆ.ಇವರ ಭಾನಗಡಿ ಹೊರಗ
ಬಿದ್ದಿದ್ದಾಲ್ಲಂದ್ರ ನಾ ಇನ್ನೂ ಹಂಗ ಇರತಿದ್ದೆ, ಅದೇನೋ ಅಂತಾರಲ್ಲ ಆದದ್ದೆಲ್ಲ ಛಲೋದಕ್ಕ ಅಂತ.

ಖರೇ ಹೇಳತಿನಿ ಇವರ ಮ್ಯಾಲ ನನಗ ಸಿಟ್ಟು ಬಂದಿತ್ತು.ಅದೇನು ಹೆಣ್ಮಕ್ಕಳಿಗೆ ಸಹಜವಾದ ಹೊಟ್ಟಿಕಿಚ್ಚೋ ಗೊತ್ತಿಲ್ಲ
ನನ್ನಲ್ಲಿ ಇಲ್ಲದ್ದು ಅವಳಲ್ಲೇನು ಕಂಡ್ರಿ ಅಂತ. ಹೊಟ್ಟಿಕಿಚ್ಚಿಗೆ ವಯಸ್ಸು ಬೇಕಾಗುವುದಿಲ್ಲ.ನನಗ ಕೆಟ್ಟ ಅನಿಸಿದ್ದು ಅದಕ್ಕಲ್ಲ
ಅವರ ಕೆಲಸಾ ಸಮರ್ಥನ ಮಾಡಿಕೊಂಡ್ರಲ್ಲ ಅದು ಏನೂ ಆಗೇ ಇಲ್ಲ ಅನ್ನವರಹಂಗ ನನ್ನ ಜತಿ ಇದ್ರು.ಮಾಡಿದ ಅಡಿಗಿ ಉಂಡ್ರು.ಮಕ್ಕಳ ಜತಿ ಆಡಿದ್ರು.ಒಳಗೊಳಗ ನಗ್ತಿರಬೇಕು ನೋಡು ನಾ ಹೆಂಗ ಮಜಾ ಮಾಡೇನಿ ಇವರಿಗೆ ಅಂತ. ನಾಕೇಳಿದೆ ಯಾಕ ಮೊದಲ ಹೇಳಲಿಲ್ಲ ಅಂತ. ತಮ್ಮ ಗೌರವ,ಸಂಸಾರ ಅಂತ ಏನೆನೋ ನೆವ ಹೇಳಿದ್ರು.

ಖರೆ ಶಕು, ಗಂಡಸರಿಗೆ ಅಂತ ನ್ಯಾಯ ಬ್ಯಾರೆನ ಇರತದ.ನಾ ಕೇಳಿದೆ ನಿಮ್ಮ ಜಗಾದಾಗ ನ ಇದ್ರ ಅಂತ. ಅವರದು
ಒಂದೇ ಪ್ರಲಾಪ ತಪ್ಪು ಆಗೇದ ಕ್ಷಮಾ ಮಾಡು ಅಂತ.ನೋವು ಆಗಿದ್ದು ನನಗ ಇವರ ಬಗ್ಗೆ ಇಟ್ಟಿದ್ದ ವಿಶ್ವಾಸ,ಅಂತಃಕರಣ ಎಲ್ಲಾ ಹೋದವು ಇನ್ನೊಬ್ಬಾಕಿ ಜತಿ ಸಂಬಂಧ ಬೆಳಿಸಿದ್ರು ಅಂತ ಮಾತ್ರ ಅಲ್ಲ ಬದಲು ನಾ
ತಪ್ಪ ಮಾಡತಿದೀನಿ ಅನ್ನುವ ಕಳಕಳಿನೂ ಇವರಿಗೆ ಇಲ್ಲ.ತಾವು ಆತ್ಮ ವಂಚನ ಮಾಡಿಕೊಂಡ್ರು ನಂಗೂ ಮೋಸ ಮಾಡಿದ್ರು  ಏನೂ ಆಗೇ ಇಲ್ಲ ಅನ್ನವರಹಂಗ ಇರತಿದ್ರು.

ವಿಶ್ವಾಸ ಮುಖ್ಯ ಇರತದ ಸಂಸಾರದಾಗ...ಯಾರು ಆತ್ಮವಂಚನ ಮಾಡಿಕೊಂಡು ಬದಕ್ತಾರ ಅಂತಹವರು ಉದ್ಧಾರ
ಆಗೂದಿಲ್ಲ.ಇನ್ನು ಮಕ್ಕಳು ನನಗ ಉಪದೇಶ ಮಾಡಿದ್ರು  ಆಗಿದ್ದು ಎಲ್ಲಾ ಮರತು ಇರು ಅಂತಹೊಂದಿಕೊಂಡು ಹೋಗು ಅಂತ.ಬಹುಷಃ ನಿನಗೂ ಹಂಗಅನಿಸಿರಬಹುದು. ನಿಮ್ಮಜಗತ್ತಿನ್ಯಾಗ ದಿವಸಾ ಇಂಥಾವು ನಡೀತಿರಬಹುದು
ನನ್ನ ನೋವು ನಿಮ್ಮ ಅನುಭವಕ್ಕ ಸಿಗಲಾರದು.ನಾನೂ ವಿಚಾರ ಮಾಡಿದೆ ನಾ ಅರೆ ಕಲತಾಕಿ ಅಲ್ಲ ಆದಿದ್ದು ಆಗಿ ಹೋತು.ಈಗ ಸರಿಪಡಸಲಿಕ್ಕೆ ಸಾಧ್ಯಇಲ್ಲ.ಇವರನ್ನು ಈ ವಯಸ್ಸಿನ್ಯಾಗ ಬಿಟ್ಟಿರುವುದು ಹುಚ್ಚಾಟ ಆದೀತು....

ಆದ್ರ ಸುದ್ದಿ ಎಲ್ಲಾ ಗೊತ್ತಾದ ಮ್ಯಾಲ ನಾ ಏನ ಮಾಡಿದ್ರೂ ಕೃತಕ ಅನಸ್ತಿತ್ತು.ಇವರು ತೋರಿಸುವ ವಿಶೇಷ ಕಾಳಜಿ
ಅಸಹ್ಯ ತರತಿತ್ತು.ನೂರಾ ಎಂಟು ವಿಚಾರಗಳು ಪ್ರಲೋಭನೆಗಳು.. ನನ್ನ ಒಳಗಿನ ದನಿ ಸುಮ್ಮನಾಗಲೇ ಇಲ್ಲ
ಒಳಗಿಂದ ಚೀರಿ ಚೀರಿ ಹೇಳತಿತ್ತು ನಾ ಅದಕ್ಕೆ ಓಗೊಟ್ಟೆ. ಪೇಪರದಾಗ ನಾನಿರುವ ಸಂಸ್ಥಾದ ಬಗ್ಗೆ ಇತ್ತು. ವಿಳಾಸಇತ್ತು.ನೇರವಾಗಿ ಬಂದು ನಾ ಹಿಂಗ ಮಾಡಬೇಕಂತೀನಿ ಅಂದೆ..ಮೊದಮೊದಲು ಹುಚ್ಚು ಹಿಡಿದಂಗಾಗಿತ್ತು.
ಈಗ ಎಲ್ಲಾ ರೂಢಿ ಆತು.ಇದೇ ನನ್ನ ಖರೇ ಜೀವನಾ ಅನಿಸೇದ ಇಷ್ಟು ದಿನ ನಾ ಬ್ಯಾರೆಯವರ ಸಲುವಾಗಿ ಬದುಕಿದೆ
ನನಗ ಬೇಕನಿಸಿದ್ದದ್ದು ಈಗ ಸುರು ಮಾಡೇನಿ..
ನಾ ಹೆಚ್ಚಿಗಿ ಕಲತಾಕಿ ಅಲ್ಲ ಪತ್ರ ಬರದು ರೂಢಾನೂ ಇಲ್ಲ ತಪ್ಪಾಗಿದ್ರ ಸುಧಾರಿಸ್ಕೊ..
ನಿನ್ನ
ಲೀಲಾವೈನಿ.

                                    ***********
ಮೊದಲ ಸಲ ಓದಿದಾಗ ಎಲ್ಲ ಗೋಜಲು ಗೋಜಲು..ಎರಡನೇ ಸಲ ಅಂತರಂಗಕ್ಕ ನಾಟ್ತು.ನಾವ್ಯಾರೂ ಅವರನ್ನ
ಸರಿಯಾಗಿ ಅರ್ಥ ಮಾಡಿಕೊಳ್ಳಲೇ ಇಲ್ಲ ಉಪದೇಶ ಕೊಟ್ವಿ ನೋವುಗಳಿಗೆ ಸ್ಪಂದಿಸಲೇ ಇಲ್ಲ.ಖರೆ ಈ ಸಂಸಾರದ
ವ್ಯೂಹದಾಗ ಬಿದ್ದು ಸಾಧಿಸುವುದು ಬಹಳ ಕಠಿಣ.ಲೀಲಾ ವೈನಿ ಈ ಕೂಪದಿಂದ ಹೊರಬಂದು ಹೊರಜಗತ್ತು ನೋಡುತ್ತಿದ್ದಾರೆ ಅವರನ್ನು ಅಭಿನಂದಿಸಬೇಕೋ ಅಥವ ಅವರ ಈ ನಿರ್ಣಯ ತರ್ಕಕ್ಕೆ ಬಿಡಬೇಕೋ ಗೊತ್ತಾಗಲಿಲ್ಲ.
                                    ************                   

14 comments:

  1. ಒಳ್ಳೆಯ ಕಥೆ . ವೈನಿ ತೆಗೆದುಕೊಂಡ ನಿರ್ಧಾರ ಸೂಕ್ತವಾಗಿದೆ .

    ReplyDelete
  2. ದೇಸಾಯರೇ..ಸಾರಿ ಉಮೇಶರೇ...ಕಥೆ ಓದಿದೆ..ಧಾಟಿ ಛಂದ್ ಅದ...ಮತ್ತ ಇನ್ನೊಮ್ಮಿ ಓದ್ತೀನ್ರೀ..ಖರೆ ಅಂದ್ರ ಸರ್ಯಾಗ್ ಓದಿಲ್ಲ...ಹಹಹ

    ReplyDelete
  3. ದೇಸಾಯರ,
    ಹೆಣ್ಣಿನ ಮನಸ್ಸಿನೊಳಗ ಪರಕಾಯಪ್ರವೇಶ ಮಾಡಿ, ಕಥಿ ಬರದೀರಿ. ಅದಕ್ಕಂತ, ಇದು ಕಥಿ ಅಂತ ಅನಸೂದ ಇಲ್ಲಾ;ಖರೇ ನಡದ ಘಟನಾ ಅಂತ ಅನಸ್ತದ. ಎಲ್ಲಿಯೂ ದೀರ್ಘಗೊಳಸದ, ಎಲ್ಲಾ ಭಾವಗಳನ್ನು ಸೆರೆ ಹಿಡದೀರಿ. ಉತ್ತಮ ಶೈಲಿ, ಉತ್ತಮ ಭಾಷಾ....ಉತ್ತಮ ಕಥಿ ಆಗೇದ.
    (ಕಥಿ ಬರಿಯೂದನ್ನ ಯಾಕ ನಿಲ್ಲಿಸಿಬಿಟ್ಟೀರಿ ಈಗ?)

    ReplyDelete
  4. ನಿಮ್ಮ ಈ ಕಥೆ ನನಗೆ ತುಂಬಾ ಇಷ್ಟವಾಯಿತು. ಲೀಲಾ ವೈನಿಯಂತಹ ಅದೆಷ್ಟೋ ಹೆಂಗಸರು ಇನ್ನೂ ಹೆಣಗಾಡುತ್ತಲೇ ಇದ್ದಾರೆ.. ಹೆಣವಾಗುತ್ತಲೇ ಇದ್ದಾರೆ. ಕೆಲವರು ಮಾತ್ರ ಹೊರ ಬಿದ್ದು ತಮ್ಮ ಬದುಕನ್ನು ರೂಪಿಸಿಕೊಳ್ಳಲು ಯಶಸ್ವಿಯಾಗುತ್ತಾರೆ. ಕತೆಯ ಅಂತ್ಯ ಸಮರ್ಪಕವಾಗಿದೆ.

    ReplyDelete
  5. ಕತೆ ಚೆನ್ನಾಗಿದೆ ಸರ್....ವೈನಿ ತೆಗೆದು ಕೊಂದ ನಿರ್ಧಾರ ಇಷ್ಟಾ ಆಯಿತು...

    ReplyDelete
  6. Hello sir,
    As a story its really good.
    I just want to put a thought . . . .

    When things go wrong in someone's life-- very commonly we say "Give a chance" because its necessary to respond in optimistic way since it gives strength to move forward and face the obstacles , we never say "Give up".

    Till the day "Leela vaini" enjoyed the fragrance of togetherness with him (for sure he cheated her) n she never harmed by him physically r mentally. so she could give a chance to him, ofcourse no spouse can accept this-- on which storyline based upon, but some times unhealthy things will come into life we have to accept( in polished version). being away from a person is not only the solution to make life still more beautiful. If 'Leela vaini' desperately wanted to go away from him, she was not suppose to keep her husband in blind, if so what is the difference ? and she came long way with him . . . 'Leela vaini' become teacher well and good, as i think it could be better if she told it to her husband.

    we are not suppose to fire the bridge which served for many years.
    As i wanted to say Leela vaini's decision is "Not correct in all the ways".
    (Since i am a bachelor purely its my thought)

    ReplyDelete
  7. ಸುಮ ಅವರೆ ಪ್ರತಿಕ್ರಿಯೆಗೆ ಧನ್ಯೊಸ್ಮಿ..

    ReplyDelete
  8. ಆಜಾದ್ ಭಾಯಿ ಓದಿ ಪ್ರತಿಕ್ರಿಯಾ ಹಾಕಬಹುದಾಗಿತ್ತೇನೋ....

    ReplyDelete
  9. ಕಾಕಾ ನೀವು ಮೆಚ್ಚಿದ್ದಕ್ಕ ಧನ್ಯವಾದಗಳು.ನಾ ಕತೆ ಬರೆಯುವುದು ನಿಲ್ಲಿಸಿಲ್ಲ ಈಗೂ ಬರೀತೇನಿ ಆದ್ರ ಈ ಬ್ಲಾಗ್ ದಾಗ
    ಹಾಕೂದು,ಕನ್ನಡ ಟೈಪು ಮಾಡೋದು ಇವಕ್ಕ ವ್ಯಾಳ್ಯಾ ಹಿಡೀತದ. ನೋಡೋಣ ಇನ್ನೂ ಒಂದು ಕತಿ ಹಾಕಾವಿದ್ದೇನಿ..

    ReplyDelete
  10. ತೇಜಸ್ವಿನಿ ಅವರಿಗೆ ಮೆಚ್ಚಿಗೆ ತಿಳಿಸಿದ್ದಕ್ಕೆ ಧನ್ಯವಾದಗಳು

    ReplyDelete
  11. ಅಪರೂಪಕ್ಕೆ ಬಂದು ಕಾಂಮೆಂಟು ಹಾಕಿದ ಜೋಯಿಸರಿಗೆ ಧನ್ಯವಾದಗಳು

    ReplyDelete
  12. nagaraj i think u had a valid point and i concede to it. i am a writer and i will influence my charectors and their decisions ok.sometimes our inner beliefs,emotions get stronger and overpower us.but when faith is betrayed its hard to live in same roof and pretend nothing has happened.ok i wanted to show woman in a different way thats all i can say.
    thanks for sharing opinion. i welcome the same.

    ReplyDelete
  13. ಉಮೇಶ್ ಸರ್,

    ಕತೆ ತುಂಬಾ ಚೆನ್ನಾಗಿ ಬರೆದಿದ್ದೀರಿ. ಆಕೆಯ ನಿರ್ಧಾರ ನಿಜಕ್ಕೂ ಒಳ್ಳೆಯದು.ಓದಿಸಿಕೊಂಡು ಹೋಗುವುದಲ್ಲದೇ ಮನಸ್ಪರ್ಶಿಯಾಗಿಯೂ ಇದೆ.

    ReplyDelete