ತೀರ್ಥಯಾತ್ರೆ ಅಥವಾ ಪುಣ್ಯಕ್ಷೇತ್ರಕ್ಕೆ ಹೋಗುವುದು ಕಮಿಯಾಗಿಲ್ಲ. ಆದರೆ ಪುಣ್ಯಕ್ಷೇತ್ರಗಳಲ್ಲಿ ಬದಲಾವಣೆಯಾಗಿದೆಯೆ
ಇವು ನಮ್ಮ ನಂಬಿಕೆಗಳನ್ನು ಶ್ರದ್ಧೆಗಳನ್ನು ಇನ್ನೂ ಜಾಸ್ತಿ ಮಾಡಿವೆಯೇ ಅಥವಾ ಅಲ್ಲಿರುವ ಅನಾಚಾರ, ಅವ್ಯವಸ್ಥೆ.ಪೂಜಾರಿಗಳ ಹೊಟ್ಟೆಬಾಕತನ ಇವು ಮುಂದಿನ ಪೀಳಿಗೆಗಳು ಈ ಪುಣ್ಯಕ್ಷೇತ್ರಗಳತ್ತ ಮುಖಮಾಡುವುದನ್ನೇ ನಿಲ್ಲಿಸುವವೇ
ಇವೇ ಮುಂತಾದ ಪ್ರಶ್ನೆಗಳು ಹಿಂದೆಯೂ ಕಾಡಿದ್ದವು. ಮೊನ್ನೆ ಮಧುರೈ, ಕನ್ಯಾಕುಮಾರಿ,ರಾಮೇಶ್ವರ ಸುತ್ತಿದಾಗಲೂ
ಮತ್ತೆ ಮತ್ತೆ ಕಾಡಿವೆ.
ನಾನು ಅನೇಕ ದೇವಸ್ಥಾನ (ನಮ್ಮ ಕರ್ನಾಟಕ ಹಾಗೂ ಮಹಾರಾಷ್ಟ್ರ)ಗಳನ್ನು ಸಂದರ್ಶಿಸಿರುವೆ. ದೇವಸ್ಥಾನ ಅವುಗಳ
ಪರಿಸರ ಅಲ್ಲಿಯ ವಾತಾವರಣ ಭೇಟಿಯ ಮೊದಲು ಅನೇಕ ನಿರೀಕ್ಷೆಗಳನ್ನು ಹುಟ್ಟು ಹಾಕುತ್ತದೆ. ಖಂಡಿತವಾಗಿ ಅಲ್ಲಿ
ಹೋಗುವುದರಿಂದ ಪುಣ್ಯಕಮಾಯಿಯ ಸ್ವಾರ್ಥ ಇಲ್ಲ ಹಾಗಂತ ಕುಟುಂಬಸಮೇತ ಹೋಗುವುದಾದರೆ ಈ ಸ್ಥಳಗಳು
ಪ್ರಶಸ್ತ ಅನಿಸುತ್ತವೆ. ದೇವರು ಆ ಪುಣ್ಯಕ್ಷೇತ್ರಗಳಲ್ಲಿ ನಿಜಕ್ಕೂ ಇದ್ದಾನೆಯೇ ಇದ್ದರೆ ಅದೇಃಗೆ ಕಣ್ಣುಮುಚ್ಚಿಕೊಂಡಿದ್ದಾನೆ..
ಎರಡು ಸೆಕೆಂಡು ಕೈ ಮುಗಿದು ನಿಲ್ಲಲು ಬಿಡದೆ ರಟ್ಟೆಗೆ ಕೈ ಹಾಕಿ ಎಳೆಯುವ "ಸೇವಾ ನಿರತ"ರನ್ನು ನೋಡಿ...!
ಜನರು ದುಡ್ಡುಖರ್ಚು ಮಾಡಿಕೊಂಡು ಬರುವುದು ದರುಶನಕ್ಕೆ..ಕೈ ಮುಗಿದು ಕಣ್ಣಲ್ಲಿ ಒಂದರೆಕ್ಷಣವಾದರೂ ಪ್ರತಿಮೆ
ಕಣ್ಣುತುಂಬಿಕೊಳ್ಳಲು. ಆದರೆ ಅಲ್ಲಿಯ ಜನರಿಗಾಗಲಿ,ಪೂಜಾರಿಗಳಿಗಾಗಲಿ ಇದರ ಅರಿವೇ ಇಲ್ಲ. ಆ ದೇವಸ್ಥಾನ ತಮ್ಮ ಜಾಗೀರು ಎಂದು ಅವರು ತಿಳಿದಿರುವಂತಿದೆ. ಉದಾಹರಣೆಕೊಡುವುದಾದರೆ ತಿರುಪತಿಯಿಂದ ಹಿಡಿದು
ಉಡುಪಿ ವರೆಗೂ ಕೊಡಬಹುದು. ಹಲವು ದೇವಸ್ಥಾನಗಳಲ್ಲಿ ನಾವು ಕೊಡುವ ಹೂ,ಮಾಲೆ ಇತ್ಯಾದಿ ದೇವರಿಗೆ
ಸೇರದೆ ಮತ್ತೆ "ರಿ ಸೈಕಲ್" ಆಗಿ ಹೊರಗಿನ ಅಂಗಡಿಯಲ್ಲಿ ಮಾರಾಟಕ್ಕೆ ಹಾಜರಾಗುತ್ತವೆ. ಇದು ಯಾವುದಕ್ಕಾಗಿ
ಎಂಬುದು ಬಿಡಿಸಿ ಹೇಳಬೇಕಾಗಿಲ್ಲ.
೨೪/೧೨/೨೦೧೦ ರಿಂದ ೨೮/೧೨/೨೦೧೦ ರ ವರೆಗೆ ನಾನು ಹಾಗೂ ಹೆಂಡತಿ,ಮಗಳು ಮಧುರೈ,ಕನ್ಯಾಕುಮಾರಿ,
ರಾಮೇಶ್ವರ ಹೀಗೆ ಸುತ್ತಾಡಿಬಂದೆವು. ಮಧುರೈಯ ಮೀನಾಕ್ಷಿ, ಕನ್ಯಾಕುಮಾರಿಯ "ಕುಮಾರಿಅಮ್ಮನ್", ರಾಮೇಶ್ವರದ ರಾಮನಾಥ ಎಲ್ಲ ಪ್ರಸಿದ್ಧರೇ. ಆದರೆಸುತ್ತಲಿನ ಅನ್ಯಾಯ ಅಕ್ರಮ ನೋಡಿ ನೋಡಿ ಕುರುಡಾಗಿದ್ದಾರೆ..!
ಇನ್ನೊಂದು ವಿಚಿತ್ರ ಸಂಪ್ರದಾಯ ಗಮನಿಸಿದೆ. ಅದೆಂದರೆ ಅಯ್ಯಪ್ಪ ಮಾಲಾಧಾರಿಗಳಿಗೆ ನೀಡುವ ವಿಶೇಷ ಸವಲತ್ತು.
ಅವರನ್ನು ಸ್ಪೆಶಲ್ ಆಗಿ ನೋಡಿಕೊಳ್ಳಲಾಗುತ್ತಿತ್ತು.ಅವರು ಕ್ಯೂ ಹಚ್ಚದಿದ್ದರೂ ಪರವಾಗಿಲ್ಲ,ದೇವರ ಮುಂದೆ ಅವರಿಗೆ ಜಾಸ್ತಿಹೊತ್ತು ನಿಲ್ಲಲು ಅವಕಾಶ ಹೀಗೆ... ಈ ಮಾಲಾಧಾರಿಗಳು ಮಾಲೆ ಧರಿಸಿದಾಗ ಹೇಗೆ ಮಾಲೆ ತಗೆದಮೇಲೆ ಹೇಗೆ ಇದು ಎಲ್ಲರಿಗೂ ಗೊತ್ತಿರುವ ಮಾತು. ಕನ್ಯಾಕುಮಾರಿಯಲ್ಲಿ ನಮ್ಮ ಟ್ಯಾಕ್ಸಿ ಡ್ರೈವರ್ ಹೇಳುತ್ತಿದ್ದ ಅಯ್ಯಪ್ಪ
ಮಾಲಾಧಾರಿಗಳಿಂದ ಹೇರಳ ಆದಾಯವಿದೆ ದೇವಸ್ಥಾನಗಳಿಗೆ..ದಾನ ಧರ್ಮ ಮಾಡುತ್ತಾರೆ ಇತ್ಯಾದಿ...ಹೀಗಾಗಿ ಅವರಿಗೆ ವಿಶೇಷ ಸವಲತ್ತು ಅಂತ ಇರಬಹುದೇನೋ....!
ಮಧುರೈ ಅಲ್ಲಿಯ ರಸ್ತೆ ಅದರ ಮೇಲಿನ ಧೂಳು ನೋಡಿ ರೇಜಿಗೆಯಾತು.ಕಸ ಗುಡಿಸಲು ಹಳೆಕಾಲದ ಕಸಬರಿಗೆ ಬಳಸಲಾಗುತ್ತಿತ್ತು. ಅಲ್ಲಿಯ ಚಹಾ ಅಂಗಡಿ ಅದನ್ನು ಮಾಡುವ ವಿಧಾನ ವಿಶಿಷ್ಟವಾದದ್ದು. ಇನ್ನೊಂದು ಮುಖ್ಯವಿಶಯ
ಅಂದರೆ ರಾತ್ರಿ ವೇಳೆ ಅಂದರೆ ಮಧ್ಯರಾತ್ರಿ ನಂತರವೂ ಸಿಟಿಬಸ್ ಸೇವೆ ಇತ್ತು. ಹಾಗೂ ನಮ್ಮ ಕರ್ನಾಟಕಕ್ಕೆ ಹೋಲಿಸಿದರೆ ರೇಟೂ ಕಮ್ಮಿ. ಬೆಂಗಳೂರು ಈ ನಿಟ್ಟಿನಲ್ಲಿ ತೀರ ಹಿಂದೆ ಬಿದ್ದಿದೆ ಅನಿಸಿತು.ಅಲ್ಲಿ ಸಿಗುವ ಇಡ್ಲಿ,ವಡೆ, ದೋಸೆ ಅವುಗಳ ರುಚಿ ಅಪರೂಪದ್ದು. ಮೀನಾಕ್ಷಿ ದೇಗುಲ ಪುರಾತನದ್ದು..ಸುತ್ತಲೂ ಆಧುನಿಕತೆ ಆಕ್ರಮಿಸಿಕೊಂಡಿದೆ.
ಮಧುರೈ ತಮಿಳುನಾಡಿನ ಎರಡನೇ ದೊಡ್ಡ ನಗರ ಅಂತೆ. ಆದರೆ ಸ್ವಚ್ಛತೆ ಇಲ್ಲ, ಇನ್ನೊಂದು ನಿರಾಶೆ ಕಾದಿತ್ತು..
ಗಾಂಧಿಮ್ಯುಸಿಯಂ ಬಂದಾಗಿತ್ತು ಕಾರಣ ಕ್ರಿಸಮಸ್ ಆದರೆಅದೇ ಆವರಣದ ತಮಿಳುನಾಡು ಮ್ಯುಸಿಯಂ ತೆರೆದಿತ್ತು
ನಾನು ಕೇಳಿದೆ ಅದೇಕೆ ತಮಿಳಿಗರಿಗೆ ಕ್ರಿಸಮಸ್ ಇಲ್ವಾ ಅಂತ. ಅದನ್ನು ನೋಡಲು ಐದು ರೂಪಾಯಿ ಶುಲ್ಕಬೇರೆ..
ಆದರೆ ಅದಕ್ಕೆ ರಸೀತಿ ಇಲ್ಲ..ಆ ದುಡ್ಡು ಎಲ್ಲಿ ಹೋಗುತ್ತೆ ಅಂತ ಹೇಳುವ ಕಾರಣ ಇಲ್ಲ. ಊರನ್ನು ಇಬ್ಭಾಗಿಸಿ ಹರಿಯುವ "ವಾಯಿಗೈ" ನದಿ...ನದಿ ಸುತ್ತಲೂ ವ್ಯಾಪಿಸಿದ ಜೋಪಡಿಗಳು, ಕೊಳಚೆಗಳು ಇಡೀ ಊರಿಗೆ ತಮ್ಮ
ಸುವಾಸನೆ ಹರಡುತ್ತಿದ್ದವು.
ಕನ್ಯಾಕುಮಾರಿ ಭಾಳ ಕೇಳಿದ್ದೆ ಊರು ಚಿಕ್ಕದು ಸಮುದ್ರದ ದಂಡೆ ಸುತ್ತ ವ್ಯಾಪಿಸಿರುವ ಹೊಟೆಲ್ಗಳು, ವಸತಿ ಪ್ರದೇಶಗಳು. ವಿವೇಕಾನಂದ ಸ್ಮಾರಕ ಅದರ ಸೊಗಸು ವರ್ಣನೆಗೆ ಮೀರಿದ್ದು. ಅಲ್ಲಿಯ ಪ್ರಶಾಂತತೆ ಸುತ್ತಲಿನ ಸಮುದ್ರದ ಮೊರೆತಕ್ಕೆ ಮರುಳಾಗಿ ತರುಣ ಸನ್ಯಾಸಿ ತಪಗೈದಿದ್ದು. ಆದರೆ ಈಗ ಅದೊಂದು ಪ್ರವಾಸಿ ಆಕರ್ಷಣೆ..
ತಲುಪಲು ಫೆರ್ರಿಯ ಸವಲತ್ತು. ಅದಕ್ಕೆ ಸ್ವಲ್ಪ ದೂರದಲ್ಲಿಯೇ ಇರುವ ಹೊಸದಾಗಿ ಸ್ಥಾಪಿತವಾಗಿರುವ ತಿರುವಳ್ಳವರ್
ಮೂರ್ತಿ..ಎತ್ತರ ೧೬೩ ಅಡಿ ಆಕಾರದಲ್ಲಿ ವಿವೇಕಾನಂದ ಸ್ಮಾರಕಕ್ಕಿಂತ ಎತ್ತರದ್ದು. ತಮಿಳರ ಹಿರಿಮೆ ಮತ್ತೊಮ್ಮೆ
ಮೆರೆಸುವ ಅವಕಾಶ. ವಿವೇಕಾನಂದ ಸಂತ ತಿರುವಳ್ಳವರ್ ಕವಿ . ಯಾರು ಮೇಲು ಇದು ತಲೆಯಲ್ಲಿ ಹುಳಬಿಡೋ
ವಿಚಾರ.ತಮಿಳರು ದಾರಿ ತೋರಿದ್ದಾರೆ. ಕನ್ಯಾಕುಮಾರಿಯ ಪ್ರತಿಮೆಯ ತುಂಬ ಬಳಿದ ಅರಿಷಿಣ. ಹೊಳೆಯುವ ಮೂಗುತಿ ಕಾಣಲಿಲ್ಲ.ಕೇಳಲು ನಾವಿಕರಿಗೆ ಅದರ ಪ್ರಭೆಯಿಂದ ವ್ಯತಿರಿಕ್ತ ಪರಿಣಾಮ ಆಗಿದ್ದಕ್ಕೆ ಮೂಗುತಿ ತೆರೆದು ಆ ದಿಕ್ಕನ್ನು ಗೋಡೆಯಿಂದ ಮುಚ್ಚಿದ್ದಾಗಿ ಹೇಳಿದರು. ಅಲ್ಲಿಯ ಸೂರ್ಯಾಸ್ತ ಹಾಗೂ ಮರುದಿನದ ಸೂರ್ಯೋದಯ ಅಪರೂಪ. ಒಂದೇ ಊರಲ್ಲಿ ಎರಡೂ ನೋಡುವ ಭಾಗ್ಯ ಬೇರೆ ಎಲ್ಲಿಯಾದ್ರೂ ಇದೆಯೇ
ರಾಮೇಶ್ವರಕ್ಕೆ ಹೋಗುವಾಗಲೇ ಎದಿರಾದದ್ದು ದೈತ್ಯ "ಪಾಂಬನ್ ಸೇತುವೆ" .ರಾಮ ನಿಜಕ್ಕೂ ಸೇತುವೆ ಕಟ್ಟಿದ್ದನೋ
ಇಲ್ಲವೋ ಗೊತ್ತಿಲ್ಲ. ಆದರೆ ಇದು ಮಾನವ ನಿರ್ಮಿತವಾದದ್ದು. ಅವನ ಅಸೀಮ ಜಾಣತನಕ್ಕೆ ನಿದರ್ಶನವದು. ಗುಡಿಯ
ಎದಿರೇ ಸಮುದ್ರ...ಬಹುಷಃ ನಾ ಇದುವರೆಗೂ ನೋಡಿದ ಸಮುದ್ರ ತೀರದಲ್ಲಿ ಇದರಷ್ಟು ಹೊಲಸು ಮತ್ತಾವುದಿರಲಿಲ್ಲ.
ದೊಡ್ಡ ಗುಡಿ ಅಲ್ಲಿಯವರು ಹೇಳುವ ಹಾಗೆ ಎಕರೆ ಗಟ್ಟಲೇ ವಿಸ್ತೀರ್ಣ. ಅಲ್ಲಿ ಸುಮಾರು ೨೭ ಕುಂಡ/ಭಾವಿ ಅವುಗಳ ಸ್ನಾನ ಮಾಡಿಸಲು ಬಕೆಟ್ ಹಿಡಿದು ಕಾದುನಿಂತ ಪೂಜಾರಿಗಳು. ಒದ್ದೆಯಲ್ಲಿಯೇ ಭಾವಿ ಭಾವಿ ಸುತ್ತಿ ಅಂತೂ ದರ್ಶನದ ವೇಳೆ ಮುಗಿಯುವುದರಲ್ಲಿಯೇ ಸೀತೆ ಪೂಜಿಸಿದ ಈಶ್ವರನನ್ನು ನೋಡಿದೆ. ಹೊರಗಡೆ ರಾಮ ಯುದ್ಧಕ್ಕೆ ಹೋಗುವ ಮೊದಲು ಪ್ರಾರ್ಥಿಸಿದ ಲಿಂಗವೂ ಇದೆ. ಹಾಗೆ ಊರ ಹೊರಗೆ ಸೀತಾ ಕುಂಡ, ತೇಲುವ ಕಲ್ಲುಗಳ ಗುಡಿ, ರಾಮಪಾದ ಹೀಗೆ ಹತ್ತು ಹಲವಿವೆ. ನಂಬಿದವರಿಗೆ ಪರಮಾನ್ನ.
ಇದು ಪ್ರವಾಸ ಕಥನ ಅನ್ನಲೋ ಅಥವಾ ಆ ದಿನಗಳಲ್ಲಿ ನನ್ನಲ್ಲಿ ಎದ್ದ ತಾಕಲಾಟಗಳ ಪದರೂಪ ಅನ್ನಲೋ ತಿಳಿಯುತ್ತಿಲ್ಲ. ಇದು ನಿಮ್ಮ ಮುಂದಿದೆ. ಓದಿ ತಪ್ಪು ಒಪ್ಪು ತಿಳಿಸಿ...
ನಮಸ್ಕಾರ ದೇಸಾಯಿ ಅವರಿಗೆ, ನಾನು ಸುಮಾರು ೪ ವರ್ಷಗಳ ಕೆಳಗೆ ನೀವು ಹೋಗಿ ಬಂದ ಊರುಗಳಿಗೆ ಪ್ರವಾಸ ಹೋಗಿದ್ದೆವು
ReplyDeleteಅಲ್ಲಿ ನಾನು ನೋಡಿದ ಆಶ್ಚರ್ಯ ಅಂದರೆ ಮದುವೆ ಮಾಡಿಕೊಳ್ಳೋ ಗಂಡು ಹೆಣ್ಣು ಗಳ ದೊಡ್ಡ ಫ್ಲೆಕ್ಷ್ ವನ್ನು ಊರಮುಂದೆ ಹಾಕಿ
ಜಯಲಲಿತಾ ಅವರೋ ಇಲ್ಲ ಕರುಣಾನಿಧಿ ಯವರೊ ಆಶೀರ್ವಾದ ಮಾಡುತ್ತಿರೋ ರೀತಿಯಲ್ಲಿ ಪೋಸ್ ಕೊಟ್ಟು ನಮಗೆ ಈ ಮಹಾನ್
ನಾಯಕರ ಆಶೀರ್ವಾದ ವಿದೆ ಅಂತ ತೋರ್ಪದಿಸಿಕೊಳ್ಳುತ್ತಿದ್ದರು .. ಅದನ್ನೆಲ್ಲ ನೋಡಿ ಒಂಥರಾ ಹೆಸಿಗೆಯಾಗ್ಬಿತ್ತಿತ್ತು .ಆ ಪ್ರವಾಸದಲ್ಲಿ ಹಿಡಿಸಿದ್ದು ಅಂದ್ರೆ
ಕನ್ಯಾಕುಮಾರಿ ಒಂದೇ. ನಿಮ್ಮ ಪ್ರವಾಸ ಕಥನ ಓದಿ ನನಗೆ ಜ್ಞಾಪಕ ಬಂತು ...
ದೇಸಾಯರ,
ReplyDeleteಇಂತಹ ದೇವಸ್ಥಾನಗಳಿಗೆ ಹೋಗಿ ಬಂದ ಮೇಲೆ, ದೇವರಲ್ಲಿ ಇರುವ ಚೂರುಪಾರು ಭಕ್ತಿಯೂ ಸಹ ಓಡಿ ಹೋಗುತ್ತದೆ. ಅಲ್ಲಿ ಹರಡಿದ ಹೊಲಸಿನಿಂದ ರೋಗರುಜಿನಗಳು ಬರದಿದ್ದರೆ ಅದೇ ನಮ್ಮ ಪುಣ್ಯ. ತಮಿಳರ ತಿರುವಳ್ಳವರ್ ರಾಜಕೀಯಕ್ಕೆ ಬೆರಗಾದೆ!
ದೇಸಾಯಿ ಸರ್,
ReplyDeleteನನಗೂ ಕೂಡಾ ಒಂತಹ ಹಲವು ಅನುಭವಗಳಾಗಿವೆ, ನನಗೆ ಮಾತರವಲ್ಲ ಎಲ್ಲರಿಗೂ ಆಗಿದೆ ಎಂದು ನನ್ನ ಅನಿಸಿಕೆ. ಇಂತಹ ಪರಿಸ್ಥಿತಿಯಲ್ಲಿ ನಗೆ ಭಕ್ತಿಭಾವ ಹುಟ್ಟುವುದು ಕಾಕತಾಳೀಯವೇ ಸರಿ!
ಮಾಹಿತಿಗೆ ಧನ್ಯವಾದಗಳು.
ದೇಸಾಯಿ ಸರ್,
ReplyDeleteಮದುರೈ..ಇತ್ಯಾದಿ ದೇವಸ್ಥಾನಗಳಿಗೆ ಹೋಗಿದ್ದೇನೆ. ನೀವು ಹೇಳಿದಂತೆ ಅಲ್ಲಿನ ದೇವಸ್ಥಾನಗಳಲ್ಲಿ ದೇವರಿದ್ದಾನೋ ಇಲ್ಲವೋ ಆದ್ರೆ ದೇವರ ಹೆಸರಲ್ಲಿ ಕಾಡುವ ಪೂಜಾರಿಗಳು ಬಿಕ್ಷುಕರು..ಇತ್ಯಾದಿಗಳ ಕಾಟ ತಾಳಲಾರೆವು.
ಮೂರು ತಿಂಗಳ ಹಿಂದೆ ಕಾಳಹಸ್ತಿಗೆ ಪೂಜೆಗೆಂದು ಹೋದಾಗ ಅಲ್ಲಿರುವ ಸೆಕ್ಯುರಿಟಿ ನಾವ್ಯಾರೋ ವಿ ಐ ಪಿಗಳು ಅಂದುಕೊಂಡು ಇಡೀ ದೇವಸ್ಥಾನವನ್ನು ಹತ್ತೇ ನಿಮಿಷದಲ್ಲಿ ಸುತ್ತಿಸಿಬಿಟ್ಟ. ಗರ್ಭಗುಡಿಯಲ್ಲಿ ನಮಗೆ ವಿಶೇಷ ದರ್ಶನ. ಹೊರಗೆ ಬಂದು ಮೇಲೆ ನಮ್ಮಿಂದ ಇನ್ನೂರು ರೂಪಾಯಿ ಕೊಡು ಎಂದು ಪಟ್ಟು ಹಿಡಿದ. ಏಕೆಂದು ಕೇಳಿದರೆ ನಿಮಗೆ ಸ್ಪೆಷಲ್ ದರ್ಶನ ಮಾಡಿಸಿದ್ದಕ್ಕೆ ಅಂದ. ನಿಜಕ್ಕೂ ಅದು ನಮ್ಮಿಬ್ಬರಿಗೂ ಇಷ್ಟವಿರಲಿಲ್ಲ. ಏಕೆಂದರೆ ನಾವು ಯಾವುದೇ ಜಾಗಕ್ಕೆ, ದೇವಸ್ಥಾನ, ಇತ್ಯಾದಿ ಸ್ಥಳಗಳಿಗೆ ಹೋದರೂ ಅದರ ಇಂಚಿಂಚು ಜಾಗವನ್ನು ನೋಡಿ ಆನಂದಿಸುವ ನಮ್ಮದು. ಅದರ ಅವಕಾಶ ತಪ್ಪಿದ್ದಕ್ಕೆ ನಮಗೆ ಬೇಸರವಾಗಿ ಅವನಿಗೆ ಬೈದೆವು. ಕೊನೆಗೆ ಕೊಟ್ಟಷ್ಟು ಪಡೆದು ಹೋದ. ಮತ್ತೆ ನಾವು ಸಂಜೆ ದೇವಸ್ಥಾನದ ಎಲ್ಲವನ್ನು ನಿದಾನವಾಗಿ ನೋಡಿ ಯಾರ ಕಾಟವೂ ಇಲ್ಲದೇ ನೋಡಿ ಆನಂದಿಸಿದೆವು. ಇದು ನಮಗಾದ ಅನುಭವ.
ದೇಸಾಯಿಗಳೇ..
ReplyDeleteನಮ್ಮ ಜನ ಕೈಮುಗಿಯೋದು ಬಿಡಲ್ಲ.., ಈ ಗಲೀಜಾಗೋದು ತಪ್ಪಲ್ಲ.. ಇದು ಸದಾಕಾಲ ಇದ್ದದ್ದೇ..
ನಮಗೆ, ನಿಮಗೆ ಅನ್ನಿಸುತ್ತಿರುವಂತೆ, ಪ್ರತೀ ಪೀಳಿಗೆಯ ಜನಕ್ಕೂ, ಭವಿಷ್ಯದ ಪೀಳಿಗೆಯ ಬಗ್ಗೆ, ಈ ಭಾವನೆ ಬಂದೇ ಬಂದಿರುತ್ತೆ, ಅನ್ನೋದು ಅನಿಸಿಕೆ. ಆದರೆ, ಅದು ರೂಪಾಂತರ ಹೊಂದುತ್ತೆ ವಿನಃ ಪೂರ್ಣ ಬದಲಾಗದು, ಅನ್ನೋದು ನಾ ಕಂಡ ಸತ್ಯ..
ನಿಮ್ಮೊಲವಿನ,
ಸತ್ಯ.. :-)
ದೇಸಾಯಿ ಸರ್ ನಮಸ್ತೆ,
ReplyDeleteಇಷ್ಟ ದಿನ ಊರಿಗ್ ಹೋಗಿದ್ದೆ, ಅದಕ್ಕ ಬ್ಲಾಗಿನ ಕಡಿ ಬರ್ಲಿಲ್ಲ.
ಹೌದು ಸರ್, ನೀವು ಕೇಳಿದ್ದು ಖರೆ ಅದ, ನಾವು ಯಾಕ್ ಗುಡಿಗ್ ಹೋಗಬೇಕು..?
ನನಗ ವಯಕ್ತಿಕವಾಗಿ ದೇವರಲ್ಲಿ ನಂಬಿಕಿ ಅದ.. ಆದ್ರ ನಾ ಗುಡಿಗಳಿಗ್ ಹೋಗುದು ಬಾಳ್ ಕಡಿಮಿ.
ನನಗ ಮೊದಲ ಬ್ಯಾಸರ ತರ್ಸೋ ವಿಷಯ, 'ಹೋಟೆಲ್ನಾಗ್ ಯಾವ್ ಊಟಕ್ಕ್ ಎಷ್ಟು ರೊಕ್ಕ ಅಂತ ಬೋರ್ಡ್ ಹಾಕಿರ್ತಾರಲ್ಲ, ಅಂತ ಬೋರ್ಡ್ ಗುಡಿಯೋಲಾಗ್ ನೋಡಿದಾಗ."
ಇಂತಹ ಪೂಜಕ್ಕ ಇಷ್ಟು, ಇನ್ತಿದ್ದಕ್ಕ ಇಷ್ಟು.. ಮನಿಗೆ ಪ್ರಸಾದ್ ಕಳ್ಸಾಕ್ ಇಷ್ಟು.. 'ಸ್ಪೆಷಲ್ ದರ್ಶನ್ ' ..??
ಎಷ್ಟೋ ಸಲ ಮನಸಿಗ ತ್ರಾಸ ಆಗ್ಯದ..!
ಮತ್ತ, ಹಣಿ ಮ್ಯಾಲ ಕುಂಕುಮ ಹಚ್ಚಿ, "ದಕ್ಷಿಣ..? ಅಂತ ಕೈ ಇಡತಾರಲ್ಲ..? ಆವಾಗ ತಡ್ಕೊಳೋದು ಹ್ಯಾಂಗ..?
ಮತ್ತ ಅಲ್ಲಿ ಇರು ವ್ಯವಸ್ತದ ಮಾತಾಡೋದು ತಪ್ಪ. ಚ್ಹೊಲೋ ಇರಬೇಕು ಅಂದ್ರ 'ವಿ.ಐ.ಪಿ.' ರೊಕ್ಕ ಕೊಡಬೇಕು..?
ತಪ್ಪು ನಮ್ಮ ಮಂದಿದು ಐತಿ.. ತಮ್ಮ ದೊಡ್ದಸ್ತನಿಕಿ ತೋರ್ಸಾಕ ಇವರು ಪಿಶವಿ ತುಂಬಿ ರೊಕ್ಕ ಕೊಡೋರು, ಅದೇ ಮೊದಲ ದೊಡ್ಡ ತಪ್ಪು.
ಪೂಜಾರಿಗಳ ತಲಿ ಕೆಡೋದು ಅಲ್ಲೇ ಅಂತ. ನನ್ನ ಅನಿಸಿಕಿ. ಮತ್ತ ತಮ್ಮ ದೊಡ್ಡ ಫೋಟೋ ಮಾಡಿ ಊರ ಮೂಲ ಮುಲ್ಯಾಗ ಹಚ್ಕೊಂಡು ಮೆರಿಯೋರು.
ಆ ರೋಕ್ಕನ ಎಷ್ಟರ ಮಟ್ಟಿಗಿ ಒಳ್ಳೆ ಕೆಲಸಕ್ಕ ಹಾಕ್ತಾರೋ ಅನ್ನೋದು ದೊಡ್ಡ ಪ್ರಶ್ನೆ.
ದೇವರಿಗ ಹೊಂಟಿವಿ ಅಂತ ಒಂದು ಗಾಡಿ ಬಾಡಿಗಿ ಮಾಡಿ ನಾಕು ಮಂದಿ ಹೋಗುದು ಫ್ಯಾಶನ್ ಆಗ್ಯದ..
ಗಾಡಿ ಡಿಕ್ಕ್ಯಾಗ ಕೇಸ್ ಬೀರ್ ಬಾಟಲು ತೊಗೊಂಡು ದೇವರಿಗ ಹೋಗುದು..!?
ಅವರು ದೇವರಿಗ್ ಹೋಗ್ತಾರೋ, ಮಜಾ ಮಾಡಕ್ಕ ಹೋಗ್ತಾರೋ..?
ಒಂದಂತು ಖರೆ,
ಭವಿಷ್ಯದ ಪೀಳಿಗೆಗ ನಾವು ಹೀಂಗೆ ಅಂತ ಹೇಳೋದು ಕಷ್ಟ ಅದ..!
ಎಲ್ಲಾ ನೀವು ಮಾಡಿದ್ದೆ, ನೀವುಗಳೇ ಮಾಡ್ಕೊಂಡು ಬಂದಿರೋದು..! ಅದಕ್ಕ ನಾವೇನ್ ಮಾಡಬೇಕು ಅಂತ ಕೇಳಿದ್ರ.!.?
ಉತ್ತರ ಕೊಡೋದು ಕಷ್ಟ ಕಷ್ಟ..!!
ಸರ್, ನನಗ ಭಾಳ್ ಗೊಂದಲ ಅದ..
ಚೆನಾಗಿದೆ, ತೀರ್ಥಕ್ಷೇತ್ರಗಳೆಲ್ಲಾ ಹೀಗೇ ಮಲಿನವಾಗುತ್ತಿವೆ, ಅದಕ್ಕೆ ನಮ್ಮ ಜನರ ’ಕೊಡುಗೆ’ಯೂ ಅಪಾರ, ಆದರೂ ಕಾಲಕಾಲಕ್ಕೂ ಜನರನ್ನು ಆಕರ್ಷಿಸುವ ಶಕ್ತಿ ಆ ಕ್ಷೇತ್ರಗಳಿಗಿರುತ್ತದೆ. ಯುವಜನಾಂಗ ಪುಣ್ಯಸಂಪಾದನೆಗೆಂದು ಅಲ್ಲದಿದ್ದರೂ ಸುಮ್ನೇ ನೋಡಲಾದರೂ ಹೋಗುತ್ತಾರೆ!
ReplyDelete