Wednesday, July 21, 2010

ಬುತ್ತಿಗಂಟು

ಈ ಮಳೆ ಅದ ನೋಡರಿ ನನ್ನಂತಹವರಿಗೆ ನೆನಪಿನ ಬುತ್ತಿಗಂಟು ಬಿಚ್ಚಿಸೋ ವಸ್ತು. ಈ ಬೆಂಗಳೂರಾಗ ಇದ್ದು
ಒದ್ದಾಡಿಕೊತ ಆ ಮಳಿದಿನಗಳ ನೆನಪು ಮಾಡಿಕೊಳ್ಳುವುದು ಕಠಿಣ ಅದ. ಒಂದು ಮಳಿ ಬಂದ್ರ ಸಾಕು ಇಲ್ಲಿ ಮಂದಿ ಸ್ವೆಟರ್ರು,
ಮಫ್ಲರ್ರು ಹಾಕಿಕೊಂಡು ಅಡ್ಡಾಡತಾರ. ಮಳಿಯಾಗ ನೆನೆಯೋದು ಸಣ್ಣಾವರಿದ್ದಾಗ ಖುಷಿ ತರುವ ಸಂಗತಿ. ಆದ್ರ ನನ್ನ
ಬಾಲ್ಯದಾಗ ಆ ಸುಖಾನೂ ನಾ ಅನುಭವಿಸಿಲ್ಲ. ನನ್ನ ತಂದೆ ತೋರುತ್ತಿದ್ದ ಕಾಳಜಿಯ ಪ್ರಭಾವ ಅದು.ಅಂಗಳದಾಗ ಧೋ ಅಂತ
ಸುರಿಯೋ ಮಳಿ..ಅದರ ಸೊಗಸು ಅನುಭವಮಾಡೂದು ಬರೇ ನೋಡುವುದರಿಂದ...ಕಿಟಕಿಯೊಳಗ ಕೂತು ಮಳಿ ಅಂಗಳ
ತೊಳಿಯುವುದನ್ನ ಬೆರಗುಗಣ್ಣಿಲೆ ನೋಡುವ ಭಾಗ್ಯ ಮಾತ್ರ ನಂದು...! ಅಂಗಳದಾಗ ಹರನಾಳಿಗಿಲೆ ಸುರಿದ ನೀರು ..ಆ ನೆಲ
ಸೂಸುವ ವಾಸನಿ ಇನ್ನು ನೆನಪದ. ಮೊದಲನೆ ಮಳಿಗ್ರ್ ಮಾಳಿಗಿ ಮ್ಯಾಲಿನ ರಾಡಿ ಎಲ್ಲ ಕರಗಿ ಹರನಾಳಿಗಿಯಿಂದ ಸ್ವಲ್ಪಹೊತ್ತು
ಕೆಂಪು ನೀರು ಸುರೀಬೇಕು...ಆಮ್ಯಾಲ ಮಳಿ ಜೋರಾದ ಮ್ಯಾಲ ಹರನಾಳಿಗಿ ಮುಖ ತುಂಬಿ ನೀರು ಕಕ್ಕಬೇಕು. ಅಂಗಳದಾಗ
ತುಳಸಿಕಟ್ಟಿ ಹತ್ರ ಇದ್ದ ಮೋರಿ ಅದಕ್ಕ ಅಡ್ಡ ಆಗಿ ಯಾವಾಗಲೂ ಕಲ್ಲು ಆನಿಸಿರುತ್ತಿತ್ತು. ಮಳಿಬಂದಾಗ ಆನಿಸಿದ ಅಡ್ಡಕಲ್ಲು ಸರಿಸಿ
ನೀರು ಹರದುಹೋಗಲಿಕ್ಕೆ ಮೋಕಳಿಕಿ ಮಾಡಬೇಕು. ದೊಡ್ಡೊರು ಛತ್ರಿ ತಗೊಂಡು ಹೋಗಿ ಕಲ್ಲು ಸರಿಸಿ ಬರತಿದ್ರು...
ಯಾವಾಗರೆ ನನ್ನ ಪಾಳಿನೂ ಬರತಿತ್ತು ಧೋ ಅಂತ ಸುರಿಯೋ ಮಳಿಯಾಗ ಹೋಗಿ ಕಲ್ಲು ಸರಿಸಿ ಬರೋ ಖುಷಿ ಏನ ಹೇಳಲಿ..
ತೋಯಿಸಿಕೊಂಡು ಬಂದಿದ್ದಕ್ಕ ಮನ್ಯಾಗ ಬೈಸಿಕೊಳ್ಳುವುದು ಇತ್ತು..! ನಮ್ಮ ಅಪ್ಪ ವಿಪರೀತ ಕಾಳಜಿ ಮಾಡತಿದ್ದ ಸ್ವಲ್ಪ ಮಾಡ
ಹಾಕ್ತು ಅಂತ ಅಂದ್ರ ನಾ ಛತ್ರಿ ತಗೊಂಡು ಹೋಗಬೇಕು ಇದು ಅವನ ಹಟ. ಆವಾಗೆಲ್ಲ ಈಗಿನ ಬಟನ್ ಒತ್ತಿದ್ರ ತಕ್ಕೊಳ್ಳೊ ಛತ್ರಿ ಬಂದಿರಲಿಲ್ಲ. ಹಳೇ ಕಾಲದ ನನಗಿಂತಲೂ ಉದ್ದ ಇದ್ದ ಛತ್ರಿ ಹಿಡಕೊಂಡು ಅಡ್ಡಾಡೂದು ನನಗ ಅಪಮಾನ ಅನಿಸತಿತ್ತು.
ಮುಂದಿನ ಬಾಗಿಲಿಂದ ಅಪ್ಪನ ಒತ್ತಾಯಕ್ಕೆ ಮಣಿದು ಛತ್ರಿ ಹಿಡಕೊಂಡು ಹೋದ್ರು...ಹಿತ್ತಲಬಾಗಿಲಿನಿಂದ ಒಳಹೋಗಿ ಮತ್ತ
ಆ ಛತ್ರಿ ಬಾಗಿಲಸಂದಿಗೆ ಇಡತಿದ್ದೆ. ಎಷ್ಟೋಸಲ ಮಳ್ಯಾಗ ತೊಯಿಸಿಕೊಂಡು ಬಂದು ಅಪ್ಪನ ಕಡೆ ಹೊಡತ ತಿಂದಿದ್ದು ಅದ.
ಆದ್ರ ಛತ್ರಿ ಹಿಡಕೊಂಡು ಹೋಗೂದು ಇನ್ನೂ ನನಗ ಸೇರುವುದಿಲ್ಲ.

ನಮ್ಮ ವಾಡೆ ದುರ್ಗದಬೈಲಿಗೆ ಭಾಳ ಹತ್ರ. ಈ ಮಳಿಗಾಲದಾಗ ಸಾಲು ಸಾಲು ಹಬ್ಬ ಬರತಾವ.
ಮಣ್ಣೆತ್ತಿನ ಅಮಾಸಿ, ನಾಗ ಪಂಚಮಿ ಮತ್ತ ಕ್ರಿಷ್ಣಾಷ್ಟಮಿ.. . ಮನ್ಯಾಗ ಬಸವಣ್ಣ ತಯಾರು ಮಾಡಲಿಕ್ಕೆ ಮಣ್ಣು ಸಿಗತಿರಲಿಲ್ಲ
ಅಥವಾ ಅಂಥಾ ಕೌಶಲ್ಯನೂ ನಮ್ಮೊಳಗ ಇದ್ದಿರಲಿಲ್ಲ....ದುರ್ಗದಬೈಲಿನ್ಯಾಗ ಮಣ್ಣಿಲೆ ಮಾಡಿದ್ದ ಬಸವಣ್ಣ--ಅವಕ್ಕ ಅಂದವಾಗಿ
ಬಣ್ಣ ಹಚ್ಚಿರತಿದ್ರು. ಅವನ್ನ ತಗೊಂಡು ಬರುವ ಕೆಲಸ ನಮ್ಮದು. ದುರ್ಗದಬೈಲಿನ ತುಂಬ ಸಂಪಿಗೆ , ಮಲ್ಲಿಗೆ ,ಸೇವಂತಿಗೆ ಹೂಗಳ
ವಾಸನಿ...ಅದರ ಜೋಡಿ ಗುಲಬಿಯ ಘಮ. ಪೇರಲ ಹಣ್ಣಿನ ವಾಸನೆ ಒಂಥರಾ ಸುಗಂಧವಲಯ ಅಲ್ಲಿರತಿತ್ತು. ಅದರಲ್ಲೂ ಶ್ರಾವಣ ಮಾಸ ಸುರು ಇಟ್ರ ಬರುವ ಡೇರೆ ಹೂವು --ಅವು ಬೇರೆ ಬೇರೆ ಬಣ್ಣದಾಗ ಬರತಿದ್ವು. ಈ ಸುಗಂಧವಲಯದಲ್ಲಿ ನಾವು
ಆನಂದ ಅನುಭವಿಸುತ್ತಿದ್ದೆವು ಡೌಲಿನಿಂದ ಬಸವಣ್ಣ, ನಾಗಪ್ಪರ ಮಣ್ಣಿನ ಪ್ರತಿಮೆ ಹೊತ್ತು ಮನೆಗೆ ತರುತ್ತಿದ್ದೆವು.

ಲೆಮಿಂಗ್ಟನ್ ಹೈಸ್ಕೂಲು. ಸುಮಾರು ಐದಕ್ಕೆ ಸಾಲೆ ಬಿಡುತ್ತಿತ್ತು. ಮಳೆ ಬರುವ ಸೂಚನೆ ಇದ್ರೆ ಅದು ಬೇಗನೆ ಬಿಡೋದು.ಆಗ ಮೋಹನಟಾಕೀಸಿನ ಎದುರು ಒಂದು ದೊಡ್ಡ ಗಟಾರಿತ್ತು. ಮಳೆ ಸುರಿದು ನಿಂತರೂ ಅದರಲ್ಲಿ ನೀರು ಇನ್ನೂ
ಹರಿಯುತ್ತಲೇ ಇರುತ್ತಿತ್ತು. ಆ ನೀರ ಹರಿವು ನೋಡುತ್ತ ಇಳಿಜಾರು ಇಳಿದು ಮನೆ ಸೇರುವ ಸೊಗಸು. ಆ ಮಳಿ ಬಂದು ಹೋದ
ಮ್ಯಾಲ ಆಗುವ ಬದಲಾವಣೆ ಮುಖ್ಯವಾಗಿ ನೆಲದಿಂದ ಹೊಮ್ಮುವ ಕಮ್ಮನೆ ವಾಸನಿ. ಈಗ ಅದು ಅನುಭವಿಸಲಿಕ್ಕೂ ಸಾಧ್ಯಇಲ್ಲ
ಮೋಹನ ಟಾಕೀಸಿನ ಎದುರು ಅದೇ ಗಟಾರಿನ ಮೇಲೆ ಸಾಲು ಸಾಲು ಅಂಗಡಿಗಳು..ನಮ್ಮ ಆ ಹಳೆ ನೆನಪುಗಳ ಗೋರಿ ಮೇಲೆ
ಎದ್ದು ನಿಂತಹಂಗ. ಏನು ಮಾಡೋದು ಆ ನೆನಪು ಮಾತ್ರ ಈಗ ನನ್ನ ಆಸ್ತಿ..!

7 comments:

  1. Namaste
    Nija sir..
    maLe eshtella nenapu hottu taruttade... chendada baraha..

    ReplyDelete
  2. ದೇಸಾಯರ,
    ಬುತ್ತಿಗಂಟು ಈ ಸಲಾ ತಡಾ ಮಾಡಿ ಬಿಚ್ಚಿದಿರಿ. ಆದರೇನು, ಭಾಳ ಖಮ್ಮಗಿನ ರುಚಿ ಅದ ನಿಮ್ಮ ಬುತ್ತಿಗೆ. ಈಗ ಹುಬ್ಬಳ್ಳಿಯೊಳಗ ನೀವು ಅಡ್ಡಾಡಿದರ, ನೀವs ಹೇಳಿದ್ಹಾಂಗ, ನೆನಪಿನ ಗೋರಿಗಳ ಕಾಣಸ್ತಾವ!

    ReplyDelete
  3. ದೇಸಾಯ್ ಸರ್,

    ನಿಮ್ಮ ಬಾಲ್ಯದ ಮಳೆ ನೆನಪು ಮತ್ತು ಚತ್ರಿ ಕತೆ ತುಂಬಾ ಚೆನ್ನಗಿದೆ. ಇಂಥ ನೆನಪಿನ ಗಂಟು ಅದೆಷ್ಟು ಇವೆಯೋ? ಒಂದಾದಾಗಿ ಬಿಚ್ಚುತ್ತಾ ಬನ್ನಿ.

    ReplyDelete
  4. Desaiyavare,,

    bhaaLa cholo aitri nimma baraha..neevandiddu khare ada..maLigoo,, nenapugaLigoo adeno nanTu ada nodri..

    ReplyDelete
  5. ನಿಮ್ಮ ಬುತ್ತಿ ಗ೦ಟು ಛಲೋ ಅದ, ದೇಸಾಯರೆ

    ReplyDelete
  6. ಹುಬ್ಬಳ್ಳಿಯಾಗಿನ ಸಣ್ಣವರಿದ್ದಾಗಿನ ತಮ್ಮ ಅನುಭವದ ಬುತ್ತಿ ಬಿಚ್ಚಿ ರಸಪುರ ಊಟಾ ಮಾಡಸಿದ್ರೆಲ್ಲಾ !! ಭಾಳ ಭೇಷದರೀ...

    ReplyDelete