Monday, July 30, 2012

ಕಾದಿಹಳು ಸೈರಂಧ್ರಿ..


 
ಕೀಚಕರಿಗೆ ಪ್ರೀತಿ ಸೆಲೆ ಗೊತ್ತಿರುವುದಿಲ್ಲ

ಮಾಯಿ,ಆಯಿ,ಅವ್ವ,ಅಮ್ಮ ಉಹುಂ ಇವರಿಗಾರೂ ಇಲ್ಲ..
ಇವರಿಗೆ ಬೆರಳುಗಳಿವೆ..ಹತ್ತಿವೆ...
ಎಲ್ಲೆಂದರಲ್ಲಿ ಹರಿದಾಡುತ್ತವೆ..ಹೆಂಗಸಿನ ದೇಹವಂತೂ
ಈ ಬೆರಳುಗಳಿಗೆ ಭೂರಿಭೋಜನ ಅಂತೆ..
ವಾಂಛೆ ತಾಳದೆ ಉಣ್ಣುತ್ತವೆ..ವಿಷ ಹರಿಸುತ್ತವೆ..
ಈ ಕೀಚಕರಿಗೆ ಜಾತಿಇಲ್ಲ ಧರ್ಮಇಲ್ಲ..
ಸೋಗು ಹಾಕುತ್ತಾರೆ..ತೃಷೆ ತೀರಿದಾಗ ವೇಷ ಬಿಸಾಕುತ್ತಾರೆ..
ಗೊತ್ತಿದೆ ಕೀಚಕರಿಗೆ ಯಾವ ಹುಂಬತನವೂ ಸಂದೀತು
ಈ ಷಂಢದೇಶದಲಿ..ವಿರಾಟನ ಆಲಸ್ಯ..ಧರ್ಮನ ಸಹನೆ..
ಹದಪಾಕ ತೇಲಿದೆ ಅಗುಳ ಅಗುಳಲ್ಲಿ...
ಅದಾವಾಗ ಬರುವನೋ ಭೀಮ..
ಅದೆಷ್ಟು ಸೈರಂಧ್ರಿಯರು ಬೆತ್ತಲಾಗಿ ಕೂದಲು ಹರವಿ
ಕುಳಿತಿಹರಿಲ್ಲಿ..ರಕ್ತಲೇಪಕ್ಕೆ ಕಾದು...
ನೆತ್ತರು ಕುಡಿದು ಕೀಚಕರ..
ಎಲುವು ಮುರಿದು ಬಾಚಣಿಗೆ ಮಾಡಿ ಎಂದು
ಬಂದಾನೋ ಭೀಮ...

5 comments:

  1. ಮನಸ್ಸು ಮುದುಡಿ ಹೋಗುವುದೇ ಹೀಗೆ. ಮಂಗಳೂರಿನ ಈ ಘಟನೆಯಿಂದ ನಮಗೂ ನೋವಾಗಿದೆ.

    ಈ ಅಸಹ್ಯ ಕೃತ್ಯವನ್ನು ದ್ವಾಪರಯುಗಕ್ಕೆ ಹೋಲಿಸಿ ನೋಡಿದ ನಿಮ್ಮ ಕವಿ ಮನಸ್ಸಿಗೆ ಅದೆಷ್ಟು ಘಾಸಿಯಾಗಿದೆ ಎಂಬುದು ನಮಗೆ ಅರ್ಥವಾಗುತ್ತದೆ.

    ನ್ಯಾಯ ಪ್ರಕಾಶಮಾನವಾಗಲಿ.

    ReplyDelete
  2. ಗಟ್ಟಿ ತನದ ಮನಮುಟ್ಟುವ ಸಾಲುಗಳು...
    ಯುಗ ಯುಗಗಳಿ0ದಲೂ ತಪ್ಪದ ಈ ಪ್ರಮಾದ...ಎಲ್ಲಿಗೆ ಮುಟ್ಟುತ್ತದೋ...

    ಇದಕ್ಕೆ ಕಡಿವಾಣ ಎಲ್ಲಿಂದ ಎಲ್ಲಿಗೆ ಹಾಕಬೇಕು ತಿಳಿಯದಾಗಿದೆ..
    ಪಾರ್ಟಿ ಮಾಡುವುದೇ.....
    ಅಥವಾ "ಪಾರ್ಟಿ"ಗಳ ಜೊತೆ ಇರುವುದೇ
    ಮರದಲ್ಲಿದ್ದಾಗ ಎಳನೀರು..
    ಇಳಿದಾಗ ಅದೇ "ಏರಿ"ಸುವ ನೀರಾಗುವುದು...
    ಸ್ವೇಚ್ಚಾಚಾರ ತುಂಬಿರುವ ಈ ಜಗದಲ್ಲಿ
    ಸ್ವ"ತಂತ್ರ" ಪರಾ"ತಂತ್ರ" ಆಗದೆ ಇದ್ದರೇ
    ಅದೇ ಬೆಳವಣಿಗೆಯ ಹಾದಿಯಲ್ಲಿ ಒಂದು ಹೆಜ್ಜೆ..

    ReplyDelete
  3. ದೇಸಾಯರ,
    ನಮ್ಮದು ಅನಾಗರಿಕ ದೇಶ, ಧರ್ಮದ ಸೋಗಿನ ದೇಶ!

    ReplyDelete
  4. ಪರಿಣಾಮಕಾರಿಯಾದ ಸಾಲುಗಳಲ್ಲಿ ಘಟನೆಯನ್ನು ಹಿಡಿದಿದ್ದೀರಿ . ಈ ಸೈರಂಧ್ರಿಯರ ಕಣ್ಣೀರೊರೆಸುವ ಭೀಮಸೇನರಿಲ್ಲ ಬಿಡಿ ಈ ವ್ಯವಸ್ಥೆಯಲ್ಲಿ

    ReplyDelete
  5. ದೇಸಾಯರ..... ಚೆನ್ನಾಗೈತಿ ಕವಿತಾ! ಭೀಮ ನಿದ್ರಿಸುತ್ತಿದ್ದಾನೆ ಕುಂಭಕರ್ಣನ ಪರಕಾಯ ಪ್ರವೇಶಮಾಡಿ! ಯಾವಾಗ ಏಳುವನೋ! ಸಮಯವಿನ್ನೂ ಬಲಿತಿಲ್ಲವೇನೋ!

    ReplyDelete