Sunday, December 4, 2011

ಯಾರಿಗೆ ಹೇಳಾಣ ನಮ್ಮ ಪ್ರಾಬ್ಲಮ್ಮು....



ಮೇಲಿನ ಸಾಲನ್ನೇ ಹೊಂದಿರುವ ಸಿನೆಮ ಹಾಡು ಈಗಿನ ದಿನಗಳಲ್ಲಿ ಭಾಳ ಫೇಮಸ್ ಆಗೇದ.
ಈ ಹಾಡು ಕೇಳುತ್ತ ಇದ್ದರೆ ಇದು ಕಂಗ್ಲೀಷ್ ಹಾಡು ಎಂದು ಗೊತ್ತಾಗುತ್ತದೆ. ನಮ್ಮ ಈಗಿನ
ಎಫ್ ಎಮ್ ಯುಗದಲ್ಲಿ ಈ ಹಾಡು ಭಾಳ ಹೆಸರು ಮಾಡಿದೆ. ದಿನದಲ್ಲಿ ಒಮ್ಮೆಯಾದರೂ ಈ
ಹಾಡು ಕಿವಿಮೇಲೆ ಎರಗುತ್ತದೆ. ನಾನೂ ಈ ಹಾಡು ಕೇಳಿದೆ. ನಮ್ಮ ಯೋಗರಾಜ್ ಭಟ್ರು
ಬರೆದಿರುವ ಹಾಡು ಇದು ಅಂತ ತಿಳಿಯಿತು.ಹಾಡಿನಲ್ಲಿ ಅರ್ಥ ಹುಡುಕಲು ಹೋಗಿ ನಿರಾಶೆಪಟ್ಟೆ.
ನಮ್ಮ ಈಗಿನ ದಿನಮಾನಕ್ಕೆ ಈ ಹಾಡು ಬಹಳ ಸೂಟ್ ಆಗುತ್ತದೆ ಹೀಗಾಗಿ ಅದು ರೇಟಿಂಗ್ ನಲ್ಲಿ
ಮುಂದಿದೆ. ನಾನು ಹಳೇ ಕಾಲದವನಿರಬೆಕು ಹೀಗಾಗಿ ಇನ್ನೂ ಹಾಡಿನಲ್ಲಿ ಸಾಹಿತ್ಯ, ಮಾಧುರ್ಯ
ಹುಡುಕುತ್ತಿರುವೆ. ಇದು ಮರುಭೂಮಿಯಿಂದ ನೀರು ತೆಗೆಯುವ ದುಸ್ಸಾಹಸನೇ ಸರಿ....!!
ಭಟ್ಟರ ಇನ್ನೊಂದು ಕಂಗ್ಲೀಷ್ ಹಾಡು ಇದೆ.."ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ ಯಾವತ್ತು ಹೋಗಬಾರದ್ರಿ..."
ಉಪದೇಶಗಳಿಂದ ತುಂಬಿದ ಈ ಹಾಡು ರೇಟಿಂಗನಲ್ಲಿ ಮುಂದಿದೆ. ಇದರಲ್ಲಿ ಇರೋ ಉಪದೇಶ ಭಾಳ
ಪ್ರಾಕ್ಟಿಕಲ್ ಆಗಿದ್ದು ಅನೇಕರು ಅದರ ಉಪಯೋಗ ಮಾಡಿಕೊಳ್ತಾರೆ ಬಿಡಿ...
ಇದೇ ಭಟ್ರು ಮುಂಗಾರುಮಳೆಯಿಂದ ಜಿಡ್ಡುಗಟ್ಟಿದ ಚಿತ್ರರಂಗಕ್ಕೆ ಹೊಸ ಚೈತನ್ಯ ತಂದವರು..ಅಷ್ಟೇಅಲ್ಲ
ಹಾಡು ಸಹ ಬರೆದಿದ್ರು.."ನನ್ನೆದೆ ತುಂಬ ಅವಳ ಹೆಜ್ಜೆ ಗುರುತು.."ಎಂಬ ಸುಂದರ ಸಾಲಿನಿಂದ ಗಮನ ಸೆಳೆದ್ರು."ನೋಟ್
ಇಂಥಾ ಭಟ್ರು "ಹಳೇ ಪಾತ್ರೆ ಹಳೇ ಕಬ್ಬಣ.." ಬರೆದಾಗ ದಿಗಿಲಾಗಿತ್ತು.ಈಗ "ಯಾರಿಗೆ ಹೇಳಾಣ..." ದಂಥ
ಹಾಡಿನಿಂದ ಒಂದು ವಿಶಯ ಖಾತ್ರಿ ಮಾಡಿದ್ರು. ಅದೆಂದರೆ ಜನರ ಅಭಿರುಚಿಯಮಟ್ಟ ಯಾವ ಹಂತಕ್ಕಿದೆ ಅಂತ
ಅಥವಾ ಹೀಗೂ ಇರಬಹುದು ಇದೇ ಸರಿ ಇದನ್ನು ಕೇಳಿ ನಿಮಗೆ ಸಿಗೋದೇ ಇದು ಅಂತ ಭಟ್ಟರಂಥವರು ಫರಮಾನು
ಹೊರಡಿಸಿದ್ದಾರೆ. ಜನಾನೂ ಅದನ್ನು ಇಷ್ಟಪಟ್ಟಿದ್ದಾರೆ. ಇದೆಲ್ಲದರ ನಡುವೆ ಇನ್ನೊಂದು ಸಾಧ್ಯತೆನೂ ಇದೆ.
ನಾನು ಅಥವಾ ನನ್ನತರದವರು ಅತೀತವನ್ನೇ ಚಂದ ಎನ್ನುವವರು. ಅದೇನಿದ್ದರೂ ಹಳೆಯದೇ ಚೆನ್ನ ಎಂದು ನಂಬಿರುವವರು.
ನನ್ನ ವಾದಕ್ಕೆ ಪುಷ್ಟಿಯಾಗಿ ಹತ್ತು ಹಾಡುಗಳ ಒಂದು ಪಟ್ಟಿ ಕೊಟ್ಟಿರುವೆ, ಈ ಹಾಡುಗಳು ಅಮರವಾದ ಹಾಡುಗಳು
ಮುಂದಿನ ಪೀಳಿಗೇಯೂ ಇವುಗಳನ್ನು ಗುನುಗುನಿಸಲಿ ಎಂಬುದು ನನ್ನ ಹಾರೈಕೆ ಹಾಗೆಯೇ ಇದು ಸಾಧ್ಯವೇ ಎಂಬ
ಪ್ರಶ್ನೆ ಕೂಡ ಇದೆ. ಆದರೂ ಈ ತಿರುವಲ್ಲಿ ನಿಂತು ಒಮ್ಮೆ ಆ ಹಾಡುಗಳ ಮೆಲುಕುಹಾಕುವಾಸೆ ಇದೆ....
೧) " ಭಾವ ಎಂಬ ಹೂವು ಅರಳಿ ಗಾನ ಎಂಬ ಗಂಧ ಚೆಲ್ಲಿ.."(ವಾಣಿಜಯರಾಂ)
೨) "ಯಾವ ಜನ್ಮದ ಎಳೆಯೋ ಕಾಣೆನು ಕಂಡಕೂಡಲೇ ಒಲಿಸಿತು.."( ಸುಶೀಲಾ)
೩)" ನಿನ್ನ ಕಣ್ಣ ಕನ್ನಡಿಯಲಿ ಕಂಡೆ ನನ್ನ ರೂಪ"(ಪಿಬಿಎಸ್ --ಸುಶೀಲಾ)
೪)"ಜೇನಿನ ಹೊಳೆಯೋ ಹಾಲಿನ ಮಳೆಯೋ.."(ರಾಜಕುಮಾರ್)
೫)"ನೋಟದಾಗೆ ನಗೆಯ ಮೀಟಿ..."(ಎಸ್ಪಿಬಿ)
೬)" ಈ ಭೂಮಿ ಬಣ್ಣದ ಬುಗುರಿ.."(ಎಸ್ಪಿಬಿ)
೭)"ಗಗನವು ಎಲ್ಲೊ ಭೂಮಿಯೂ ಎಲ್ಲೋ...(ಜಾನಕಿ)
೮)"ನಗುವ ನಯನ ಮಧುರ ಮೌನ.."(ಜಾನಕಿ--ಎಸ್ಪಿಬಿ)
೯)" ನಗುನಗುತ ನಲಿ....(ಪಿಬಿಎಸ್)
೧೦)"ಆಸೆಯ ಭಾವ ಒಲವಿನ ಜೀವ.."(ಎಸ್ಪಿಬಿ)
ಹೇಳಿ ಹಾಡಿನ ಪಟ್ಟಿನೋಡಿ ನಿಮಗೇನನ್ನಿಸಿತು ಏನು ಕಳೆದುಕೊಳ್ಳುತ್ತಿರುವೆವು ನಾವು ಎಂಬ ಅರಿವು ಮೂಡಿದರೆ ಸಾಕು...!!

5 comments:

  1. ದೇಸಾಯರ,
    ನಿಮ್ಮ ವ್ಯಥೆ ನನ್ನದೂ ಹೌದು. ಭರತನಾಟ್ಯ ಮಾಡಿದ ರಂಗದ ಮ್ಯಾಲೆ ತಮಾಶಾ ನಾಚು ಕುಣಿಯೋರು ಬಂದಾರ!
    ನಿಮ್ಮ ಯಾದಿಗೆ ನಾನು ಮತ್ತೊಂದೆರಡು ಹಳೆಯ ಗೀತೆಗಳನ್ನು ನೆನಪಿಸಿಕೊಂಡು ಸೇರಸ್ತೇನಿ:
    (೧)ಮೌನವೇ ಆಭರಣ, ಮುಗುಳ್ನಗೆ ಶಶಿಕಿರಣ...
    (೨)ಒಲವಿನಾ ಸುಮಲತೆ, ಅವಳದೇ ಚಿಂತೆ...

    ReplyDelete
  2. ಇದಕ್ಕೆ ನನ್ನ ನೆನಪಿನಲ್ಲಿ ಉಳಿದ ಎರಡು ಹಾಡುಗಳನ್ನೂ ಸೇರಿಸಬಹುದು;೧)ಬಾರೆ ಬಾರೆ ,ಚೆಂದದ ಚೆಲುವಿನ ತಾರೆ ೨)ಆಕಾಶವೇ ಬೀಳಲಿ ಮೇಲೇ.ಸುನಾತ್ ಸರ್ ಅವರು ನೆನಪಿಸಿಕೊಂಡ ಎರಡನೇ ಹಾಡು ಒಲವಿನಾ,ಪ್ರಿಯ ಲತೆ

    ReplyDelete
  3. ದೇಸಾಯರೇ ತಮ್ಮ ಮಾತು ಅಕ್ಷರ ಸಹ ನಿಜ ಸರ್ , ಒಳ್ಳೆಯ ವಿಚಾರ ಮಂಡಿಸಿದಿರಿ. ನಿಮ್ಮ ಪಟ್ಟಿಯಲ್ಲಿರುವ ಹಾಡುಗಳ ಜೊತೆ ಸೇರಲು ಅರ್ಹತೆಇರುವ ಇನ್ನೂ ಬಹಳಷ್ಟು ಹಾಡುಗಳು ಇವೆ. ಆದರೆ ಇದೆ ರೀತಿ ಬೇರೆ ಎಲ್ಲಾ ಭಾಷೆಯಲ್ಲೂ ಆಗ್ತಿದೆ ಆಲ್ವಾ ??? ಅಲ್ಲಿಯ ರಾಜ್ಯದ ಜನಗಳೂ ಸಹ ನಮ್ಮಂತೆ ಬೈಯ್ಯುತ್ತಾರೆ ಆದ್ರೆ ಕೇಳುವವರು ಯಾರು ??? ಒಳ್ಳೆಯ ಆಲೋಚನೆ ಇರುವ ಲೇಖನಕ್ಕೆ ನಿಮಗೆ ಜೈ ಹೋ
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  4. ದೇಸಾರಯೇ ಪರಿಣಾಮ ನಿಮ್ಮ ಮುಂದೇನೆ ಇದೆ. ಒಮ್ಮೆ ಬಿನ ಲ್ಯಾಡನ್ನು ನಮ್ ಭಾವ ಹಾಡು ಟಾಪಲ್ಲಿತ್ತು ಈಗ ಅದನ್ನ ನೆನೆಪಿಸಿಕೊಳ್ಳೋರು ಕೇವಲ ಡ್ಯಾನ್ಸ್ ಮಾಡ್ಬೇಕು ಅಂತ ರಿಯಾಲಿಟಿ ಶೋಗೆ ಇಳಿಯೋರು...
    ಅದೇ ನೋಡಿ..ನೀವು ಕೊಟ್ಟಿರೋ ಹಾಡುಗಳು ಈಗಲೂ ಗುನುಗುನಿಸ್ತೇವೆ...ರಿಯಾಲಿಟಿ ಶೋಗಳಲ್ಲಂತೂ ಇವುಗಳನ್ನು ಚನ್ನಾಗಿ ಹಾಡಿದರೆ ಅದೇ ಒಂದು ಮಾನದಂಡ....ವ್ಯತ್ಯಾಸಕ್ಕೆ ಎಲ್ಲೂ ಹೋಗ್ಬೇಕಿಲ್ಲ...ಅಂಗೈಹುಣ್ಣಿಗೆ ಕನ್ನಡಿಯಾಕೆ...??? ಅಲ್ವಾ????

    ReplyDelete
  5. ಇದೇ ಯೋಗರಾಜ್ ಭಟ್ಟರು ಈ ಹಾಡುಗಳನ್ನು ಸಹ ಕೊಟ್ಟಿದ್ದಾರೆ ಇವು ಕೂಡ ಜನಪ್ರಿಯವಾಗಿವೆ.

    ೧. ಕವಿತೆ ಕವಿತೆ ನೀನೇಕೆ ಪದಗಳಲಿ ಕುಳಿತೆ
    ೨. ಇ೦ತಿ ನಿನ್ನ ಪ್ರೀತಿಯ
    ೩. ಒ೦ದೊ೦ದೆ.. ಬಚ್ಚಿಟ್ಟ ಮಾತು
    ೪. ಹೂ ಕನಸ ಜೋಕಾಲಿ
    ೫. ನಧೀಮ್ ಧೀಮ್ ತನ
    ೬. ಎರಡು ಜಡೆಯನ್ನು ಎಳೆದು ಕೇಳುವೆನು
    ೭. ನಾ ನಗುವ ಮೊದಲೆನೆ
    .. ಮುಂತಾದವು..

    ReplyDelete