Thursday, June 25, 2015

ಮಳಿ ಬರದ ಚಿತ್ರಗಳು..


ಆಯೇ ಕುಛ್ ಅಬ್ರ ಕುಛ್ ಶರಾಬ್ ಆಯೆ
ಉಸ್ ಕೆ ಬಾದ್ ಬಸ್ ಅಜಾಬ್ ಆಯೆ..(ಪೈಜ್ ಅಹ್ಮದ್ ಫೈಜ್)
ಅಬ್ ಕೆ ನಾ ಸಾವನ್ ಬರಸೆ..
ಅಬ್ ಕೆ ಬರಸ ತೋ ಬರಸೆಂಗಿ ಅಖಿಯಾಂ...(ಗುಲ್ಜಾರ್)

ಮಳಿ ಸೂಕ್ಷ್ಮ ಮನಸ್ಸಿನವರಿಗೆ ಹೆಂಗೆಲ್ಲ ಮಾಡಬಹುದು ಅಲ್ಲ..?ಅದೂ ಈ ಕವಿಜಾತಿಯವರ ಪಾಡು ಕೇಳೂದ ಬ್ಯಾಡ.
ಕಿಟಕಿ ಹೊರಗ ಮುಚ್ಚಿದ ಗ್ಲಾಸಿನೊಳಗಿಂದ ಹೊರಗ ಸುರಿಯು ಮಳಿ ಅದೆಷ್ಟು ಛಂದ ಕಾಣಸತಿರತದ..
ಹಂಗ ಟಪ್ ಟಪ್ ಬೀಳೂ ಹನಿ ಸಪ್ಪಳ ಕೇಳಕೋತ ಇಡೀ ರಾತ್ರಿ ಚಾದರ ಹೊತಕೊಂಡು ಕೂಡಬೇಕು ಅನಸತದ
ಕರೆಂಟು ಹೋಗಿ ಹಳೆ ಟ್ರಾನ್ಸಿಸ್ಟರ್ ದಾಗ ವಿವಿಧಭಾರತಿಯೊಳಗ ಮುಕೇಶನ ದರ್ದಭರಿ ಆವಾಜಿನ್ಯಾಗಿನ ಹಾಡು...
"ಸಾವನ್ ಕೆ ದಿನ್ ಆಯೆ ಬೀತಿ ಯಾದೆಂ ಲಾಯೇ ಕೌನ್ ಬಿಛಾಕರ್ ಆಂಖೆ ಮುಜಕೊ ಪಾಸ್ ಬಿಠಾಯೆ?...."
ಹೌದು ಕವಿ ಕೇಳುವ ಪ್ರಶ್ನಿ ಸ್ವರೂಪ ಅನಂತ ಅದ ಅಪಾರ ಅದ. ಯಾಕ ಮಳಿ ಸಪ್ಪಳದ ಜೊತಿ ಜೊತಿ
ಅಕಿ ನೆನಪಿನ ಬಿಕ್ಕಳಿಕಿ ಬರತದ. ನೀರ ಬೊಗಸ್ಯಾಗ ಹಿಡದು ಕುಡದರೂ ಬಾಯಾರಿಕಿ ಹೋಗೂದಿಲ್ಲ
ಅಸಲು ಮಳಿ ಜೋಡಿ ಕಣ್ಣು ಅಳತಿರತಾವ..ಕಣ್ಣಾಗ ಮಳಿ ನಟ್ಟಂಗ..ರಕ್ತದ ಬದಲಿಗೆ ನೀರ ಸುರಿತಾವ ಅಷ್ಟ...!
ಯಾಕ ಮಳಿ ಬಂದಾಗ ಹಾಡು ಬರತಾವ..ಕವಿತಾ ಹುಟ್ಟತಾವ. ಮಾಡ ಆವಿಯಾಗತದ ಕರಗಿ ನೀರಾಗತದ ಇದು
ಸಹಜ ಪ್ರಕ್ರಿಯಾ ಅಂತ ಒಣ ಮನಸ್ಸಿನ ವಿಜ್ನಾನಿ ಅನಬಹುದು ಕವಿ ಎಂದೂ ಹಿಂಗ ನಿರ್ವಿಕಾರದಿಂದ ಮಳಿ
ವರ್ಣಿಸಲಾರ...ಸಹಜೀಕ ಕ್ರಿಯಾದಾಗೂ ಅವ ಒಂದು ಲಯ ಕಾಣತಾನ ಮಾಡ ಗುಡಗೋದು ಗಾಳಿ ಬೀಸೋದು
ಎಲ್ಲಾದರಾಗೂ ಒಂದು ಕವಿತಾದ ಸಾಲು ಅವಗ ಹೊಳೀತಿರತದ. ಭೂಮಿಗೇನೋ ಹಸಿವು ತಿಂದು ತೇಗಿ ಕುಡೀತಾಳ
ಮುಳಿನೀರು ಕವಿಗೆ ಮಾತ್ರ ಒಂದು ನಮೂನಿ ರೋಗ ತಂದಿರತದ ಹಂಗ ಔಷಧನೂ..!!

ಶಹರದ ಮಂದಿ ನಾವು ಹಳ್ಳಿಮಕ್ಕಳ ಮಳಿ ಸಂಭ್ರಮದ ಸವಿ ಗೊತ್ತಿಲ್ಲ. ಇಲ್ಲೆ ಮಳಿ ಬಂದ್ರ ಶಪಿಸೋ ಜನ ಅಲ್ಲಿ
ಮಳಿ ಸುರೀತಿದ್ದರೂ ಕಂಬಳಿ ಹೊದ್ದು ಹೊಲಬಿತ್ತೋ ಜನ. ಎಷ್ಟು ವಿರೋಧಾಭಾಸ ಅದ ನೋಡರಿ.. ಸಾಲು ಸಾಲು
ಅಂಗಡಿಗಳು..ಶುಂಠಿ ಜಜ್ಜಿಹಾಕಿದ ಚಹಾಗಳು, ಭಜಿ ಮಿರಚಿಗಳು ಮಳಿಯ ತಂಪು ಮರೆಸಿ ನೆನೆದವರಿಗೆ ಬಿಸಿಮಾಡಿ
ಹೊಸಾ ಉಮೇದಿ ಕೊಡೋ ಶಹರದ ಈ ಚೈತನ್ಯಶಾಲೆಗಳು..!! ಇಂತಹವುಗಳ ತುಂಬ ಮುಗಿಬಿದ್ದ ಜನ..ಸೊರ್ ಅಂತ
ಸಪ್ಪಳ ಮಾಡಿ ಚಹಾ ಹೀರಿ ಮಳಿಮಜಾ ದುಪ್ಪಟ್ ತಗೊಳ್ಳೊ ಖಯಾಲಿನವರು. ಮಳೆನಿಂತು ಹೋದ ಮೇಲೆ ಅಂತ
ಕಾಯ್ಕಿಣಿ ಹಾಡ ಬರದಾರ. ಹೌದು ಮಳಿನಿಂತು ಹೋದಮೇಲೆ ಟ್ರಾಫಿಕ್ ಜಾಮ್ ಆಗತದ..ಅಂತ ಶಹರವಾಸಿ ಅದಕ್ಕ
ಸಾಲು ಜೋಡಿಸಿಯಾನು..! ರಸ್ತೆ ಬಾಜೂಕ ಸಾಲುಗಟ್ಟಿ ನಿಂತ ವಾಹನ ಸಿಕ್ಕ ಅಲ್ಪ ನೆರಳಲ್ಲೆ ನಿಂತು ಚಶ್ಮಾದ ಮ್ಯಾಲಿನ
ಹನಿ ಒರಿಸಿಗೋತ ನಿಂತಾವ ಅಥವಾ ತಲಿ ಮ್ಯಾಲಿಂದ ಕೆಳಗ ಸುರದು ಬರುವ ನೀರನ್ನು ಒರೆಸುವ ಭಗೀರಥರನ್ನು ನೀವು
ಕಂಡಿರಬಹುದು .ನೆನೆಯುವುದು ಅನಿವಾರ್ಯ ಅಂತ ಯಾರೂ ನಡಕೋತ ಹೋಗುವ ಧೈರ್ಯ ಮಾಡುವ ಮಂದಿ ಕಮಿ
ಪಾಪ ಅವರದೇನೂ ತಪ್ಪಿಲ್ಲ ರಸ್ತೆಗಿಂತ ತೆಗ್ಗೇ ಹೆಚ್ಚು ಊರಾಗ ಮಳಿ ಬಂದಾಗ ನೆಲ ಯಾವುದು ತೆಗ್ಗು ಯಾವುದು ಯಾರಿಗೆ
ಕಾಣಸತದ. ಹಂಗ ಶಹರ ಹುಟ್ಟಿಸೋ ವಿಪರ್ಯಾಸದ ಪರಿ ವಿಪರೀತ..ಆ ಅದ ಭಜಿ ಅಂಗಡಿ ಗರ್ದಿ ಅದಕಿಂತ ಸ್ವಲ್ಪ
ದೂರ ನಿಂತಾವನ ಬಾಯಾಗ ನೀರು ಆದರೇನು ಕಿಸೆ ರಿಕಾಮಿ..ಸುರಿಯೋ ಮಳಿ ಜೋರಿನ್ಯಾಗ ಮಿರಚಿ ಖಾರಕ್ಕ
ಲುಸುಗುಡುವ ಶಹರಿಕರಿಗೆ ಅವನ ಆಳು ಕಾಣೂದ ಇಲ್ಲ..ಅಸಲು ಮಳಿ ಅವನೊಬ್ಬನ ಕಣ್ಣಾಗಿಂದ ಸುರೀತಿರೋದಿಲ್ಲ
ಶಹರದಾಗ ಇವನಂತಹವರೆಷ್ಟೋ..!!

ಕಾಗದದ ಬೋಟ ಮಾಡಿ ಅದರಾಗ ಒಂದು ಮಳಿಹುಳ ಇಟ್ಟು ಅದನ ತೇಲಿಬಿಟ್ಟು ಸಂಭ್ರಮಿಸಿದ ಬಾಲ್ಯ ಈಗಿಲ್ಲ.
ಹೈಸ್ಕೂಲು ಮುಗಸಿ ಮನಿಗೆ ಬರುವಾಗ ಕೊಪ್ಪೀಕರ್ ರಸ್ತೆ ತುಂಬ ಹರಿಯುವ ನೀರಿನ ರಭಸನೋಡಿ ಅದರಕೂಟ ನಾವೂ
ಎಲ್ಲಿ ತೇಲಿ ಹೋಗತೇವೋ ಅನ್ನುವ ಹೆದರಿಕಿನೂ ಈಗಿಲ್ಲ. ಅಂಗಳದಾಗ ಹರನಾಳಿಗಿಯಿಂದ ಕೆಳಗಿಳಿದ ನೀರು ಅಂಗಳದ
ಮಣ್ಣು ತರತಿದ್ದ ವಿಚಿತ್ರ ಸುಗಂಧದ ವಾಸನಿನೂ ಈಗ ಉಳದಿಲ್ಲ. ಜೋರುಮಳಿಗೆ ಕ್ಯಾಂವಿಕಲ್ಲಿನ ಗ್ವಾಡಿ ಎಲ್ಲಿ ಬೀಳತದೋ
ಅನ್ನುವ ಅಂಜಿಕಿಯೊಳಗ ಕವುಚಿ ಮಲಗಿದ ರಾತ್ರಿ ಈಗ ಬರೆ ನೆನಪು ಮಾತ್ರ.ಹಂಗ ಸೋರುವ ನಡಮನಿ ನೀರ ಹಿಡಿಲಿಕ್ಕೆ ಇಟ್ಟ ಬಕೀಟು ಹನಿ ಹನಿ ಬಿದ್ದು ಅಲ್ಲಿ ಏಳುತ್ತಿದ್ದ ನಾದತರಂಗನೂ ಇಲ್ಲ. ರಸ್ತೆ ತುಂಬ ಕೆಸರು ಒದ್ದಿ ಹುಬ್ಬಳ್ಳಿ ನೆಲ..ಹಂಗ ಅಂಥಾಮಳಿಯಾಗ ರುಚಿ ದೀಡಪಟ್ಟ ಅನಸೋ ಭಿಲ್ಲೆನ ಅಂಗಡಿ ಮಿರಚಿ..ಉಫ್ ಎಲ್ಲಾನೂ ಅಲ್ಲೆ ಬಿಟಗೊಟ್ಟು ಬಾಲ್ಯದ ಮೈಲಿಗಲ್ಲ ದಾಟಿ ಬಂದಾತು.ಇನ್ನ ಯಾಕ ಹಳಹಳಿ..ಆ ಊರಿಗೆ ಹೋಗುವದಕ್ಕ ರಸ್ತೆನೂ ಇಲ್ಲ ಹಳೀನೂ ಇಲ್ಲ.ಬರೇ ನೆನಪು ಚೀಲತುಂಬ ತಂದದ್ದು.."ವೊಹ್ ಕಾಗಜ್ ಕಿ ಕಶ್ತಿ ವೊ ಬಾರಿಶ್ ಕಾ ಪಾನಿ...." ಕೇಳಕೋತ ಮರಗಿಕೋತ ಕಳಿಯುವ ಈ ಮಳಿಯ ರಾತ್ರಿಗಳು..!


Wednesday, June 10, 2015



ನಿರೋಪ..
------------------------------
ಗ್ರೀಶ್ಮನೂ ಅರೆಬರೆ ಬಟ್ಟೆ ಧರಿಸಿ ಬೆದರಿ ನಿಂತಿಹ
ಉದುರಿದ ನಾಕೈದು ಹನಿಗಳನೇ ಮತ್ತೆ ಮತೆ ನೆಕ್ಕಿ ತೇಗುವ ಭುವಿ.
ಸುಡುವ ಹಾಸಿಗೆಯ ಮೇಲೆ ನಿದ್ದೆ ಬಾರದೆ
ಉರುಳಾಡಿ ಮಗ್ಗುಲಾದಾಗ ಮುಖಾಮುಖಿಯಗುತ್ತವೆ ಇವು.
ಹೌದು ಇವು ಹೀಗಿರಬೇಕು ಹೀಗೆ ಹೇಳಬೇಕು ಹೀಗೆಯೇ ಬದುಕಬೇಕು
ಎಂದು ನಾ ನಿರ್ದೇಶಿಸಿದ್ದೆ ಹಂಬಲಿಸಿದ್ದೆ ಇವುಗಳ ಪೋಷಣೆಗೆ.. ರಕ್ತ ಸುಟ್ಟುಕೊಂಡಿದ್ದೆ..
ಅವುಗಳನ್ನು ಅಲ್ಲಿಗಲ್ಲಿಗೆ ಬಿಟ್ಟು ಮುಂದೆಂದಾದರೂ ಮತ್ತೆ ಸಂಧಿಸುವ ಮೈ ನೇವರಿಸುವ
ಮಾತನಾಡಿ ನಾಜೂಕಿನಿಂದ ಅವುಗಳ ಬಂಧ ಬಿಡಿಸಿಕೊಂಡ ಭ್ರಮೆಯಿಂದ ಖುಶಿಯಾಗಿ
ಬೀಗುವಾಗ ಹೀಗೆ ಹಾಳುರತ್ರಿಗಳಲಿ ಇವು ಬರಬೇಕೆ?
ಸುಮ್ಮನಿರದೆ ತಿವಿದು ಎಬ್ಬಿ ಕಾಡುವ ಪ್ರಶ್ನೆಗಳೆಸೆದು ಮೋಜು ನೋಡಲೇಕೆ..
ಅಯ್ಯಾ ನಾ ಬಳಲಿಹೆ..ಅದೆಷ್ಟೋ ಉಳಿಪೆಟ್ಟು ತಿಂದು ಬೆಂದರೂ ನಾನಿನ್ನೂ
ಕಲ್ಲಾಗಿಯೇ ಉಳಿದಿಹೆ..ನಿಮ್ಮ ತಿದ್ದಿ ನಿಮ್ಮ ಬದುಕಿಗೊಂದು ಗತಿಕೊಡುವ ತ್ರಾಣ ಇಲ್ಲ
ಅಸಲು ನಾ ಯಾಕೆ ಉಸಿರಾಡಿಹೆ ಎಂಬ ಜಡದಲ್ಲಿ ನಾನಿರುವಾಗ
ಜೇಡರ ಬಲೆಯಲ್ಲಿ ಸಿಕ್ಕಿರುವ ನಿಮ್ಮ ಹೇಗೆ ಬಿಡಿಸಲಿ..
ನಾ ಸುಧಾರಿಸಿ ನಿಮಗೊಂದು ಹಂತ ತರಲು ಯುಗಗಳೇ ಬೇಕಾದಾವು..
ಹೋಗಿ ಹಾರಾಡಿ ಅದಾರೋ ಶಕ್ತ ನಿಮಗಾಗಿ ಕಾದಿರಬಹುದು..ಅವನ ಹೆಗಲನೇರಿ
ಅವನ ನೇವರಿಸಿರಿ..ನಾನೋ ಜೀವಚ್ಛವ
ಕನಸು ಇಲ್ಲಿನ್ನು ಕುಡಿಯೊಡೆಯಲಾರದು..ಬರಡು ಬೆಂಗಾಡಿನಲಿ ಭಾವ ಮೂಡಲಾರದು...!!



Monday, January 26, 2015

ದಂಡಿಮ್ಯಾಲ ನಿಂತು..

ಈ ಕತೆ ತುಶಾರದಿಂದ ತಿರಸ್ಕರಿಸಲ್ಪಟ್ಟಿತ್ತು. ಅಲ್ಲಿಯ ಸಂಪಾದಕರು ಈ ಕತೆ ತುಷಾರಕ್ಕೆ ಯೋಗ್ಯವಲ್ಲ ಎಂಬ ಫರಮಾನು ಕೊಟ್ಟಿದ್ದರು. ಪತ್ರಿಕೆಗೆ ಈ ಕತೆ ಯೋಗ್ಯ ಅಥವಾ ಅಯೋಗ್ಯ ಎಂದು ನಿರ್ಧರಿಸುವ ಮಾನದಂಡವೂ ಇರುತ್ತವೆ ಇದು ವಿಚಿತ್ರಸಂಗತಿ.ಮಂಗಳದವರು ಈ ಕತೆ ೨೧/.೦೧/೨೦೧೫ ರ ಸಂಚಿಕೆಯಲ್ಲಿ ಪ್ರಕಟಿಸಿದ್ದಾರೆ. ಅವರಿಗೊಂದು ಸಲಾಮು. ಎಲ್ಲರೂ ಕತೆ ಓದಲಿ ಎಂಬ ಉದ್ದೇಶದಿಂದ ಕತೆಯನ್ನು ಬ್ಲಾಗಿಗೆ ಹಾಕಿರುವೆ ಓದಿ ಹೆಂಗನ್ನಿಸಿತು ತಿಳಸರಿ.
-------------------------------------------------------------------------------------------------
  ಬೆಳಿಗ್ಗೆ ಎದ್ದಾಗ ಆಗಲೇ ಎಂಟು ಹೊಡದಿತ್ತು.ರಂಜನಾಳನ್ನು ಎಬ್ಬಿಸಿಕೊಂಡು ಹೊರಬಂದೆ.ಗಿರೀಶ ಆಗಲೇ ಆಫೀಸಿಗೆ ಹೊರಡುವುದರಲ್ಲಿದ್ದ.ಅವನ ಹೆಂಡತಿ ಶುಭದಾ ಕೊಟ್ಟ ಚಹಾ ಕುಡಿಯುತ್ತ ಅತ್ಯಾಳನ್ನು ಹುಡುಕಿದೆ. ಗಿರೀಶ ಅವಳು ಗುಡಿಗೆ ಹೋಗಿರುವುದಾಗಿ ಹೇಳಿದ. ಗಿರೀಶನಿಗೆ ಆಫೀಸಿಗೆ ಕಳಿಸಿ ಶುಭದಾ ನನ್ನ ಮುಂದೆ ಬಂದು ಕುಳಿತಳು.
"ವೈನ್ಸ ನಿನ್ನೆ ರಾತ್ರಿ ಏನಾತು..ಅತ್ಯಾ ಆಳುವ ದನಿ ಜೋಡಿ ನಿಮ್ಮ ರಮಿಸೋ ದನಿ ಕೇಳತಿತ್ತು.."
"ಏನಿಲ್ಲ ಅಕಿ ಹಳೇದು ನೆನಪಾಗಿ ಅಳತಿದ್ದಳು..ನಾ ಸಮಾಧಾನ ಮಾಡತಿದ್ದೆ..." ಪೇಪರ ಮೇಲೆ ಕಣ್ಣಾಡಿಸುತ್ತಲೆ ಹೇಳಿದೆ. "ರಂಜನಾ ಬ್ರಶ್ ಮಾಡಿ ಸ್ನಾನ ಮಾಡು..ಲಗೂನ ಮುಗಸು.." ನನಗೆ ಶುಭದಾ ಮುಂದೆ ಕೂಡುವ ಮನಸ್ಸಿರಲಿಲ್ಲ. ರಂಜನಾಗ ನೀರು ತೋಡಿ ಬಂದಾಗೂ ಅಕಿ ಅಲ್ಲೆ ಕೂತಿದ್ದಳು.
" ವ್ವೆನ್ಸ ನೀವೂ ಸುಳ್ಳ ಹೇಳಬ್ಯಾಡ್ರಿ..ಇವರಂಗ..ನಾ ಇವರಿಗೆ ರಗಡ ಸಲ ಹೇಳೇನಿ..ಅತ್ಯಾ ನಾವು ರಾತ್ರಿ ಮಲಗಿದಾಗ ರೂಮಿನ ಬಾಗಿಲ ಸಂದಿಲೆ ಹಣಕಿಹಾಕತಿರತಾರ ಅಂತ ಇವರು ಮ್ವೆಮ್ಯಾಲ ತೆಗೀತಾರ..ನೀವೂ ಹಂಗ ಆಗ ಬ್ಯಾಡರಿ..ಅವರು ರೂಮಿನ ಬಾಗಲದಾಗ ನಿಂತಿದ್ದರು ಹೌದಲ್ಲೋ....." ಅವಳ ದನಿಯಲ್ಲಿ ನಿಖರತೆ ಇತ್ತು.
"ಶುಭದಾ ನೀ ಏನರೆ ಕಲ್ಪನಾ ಮಾಡಿಕೊಂಡು ಮಾತಾಡತಿ..ಅಂಥಾದೇನೂ ಆಗಿಲ್ಲ.." ನನ್ನ ದನಿಯಲ್ಲಿ ವಿಶ್ವಾಸ ಇರಲಿಲ್ಲ..ನನಗೇ..!!
"ವ್ವೆನ್ಸ ಹಿಂಗ ಆಗೂದು ಮೊದಲನೇ ಸಲ ಅಲ್ಲ..ಸಹಸಾ ಮಾವನವರು ಊರಾಗಿಲ್ಲದಾಗ ಹಿಂಗ ಆಗತದ.ನಂಗಂತೂ ಅತ್ಯಾನ ವರ್ತನಾ ವಿಚಿತ್ರ ಅನಸತದ.ಅಲ್ಲ ನಾವು ಮಗ ಸೊಸಿ ಸಮಾನ ಅವರಿಗೆ..ಹಿಂಗ ರೂಮಿನ್ಯಾಗ ಹಣಕಿಹಾಕೂದು ಕದ್ದು ಕೇಳೋದು ಸರಿ ಅನಸತದ ಏನು..ನೀವು ಅವರಿಗೆ ಹೇಳಬಿಡರಿ ಇದು ಯಾಕೋ ಸರಿ ಬರೂದಿಲ್ಲ ನಾ ಮಾವನವರ ಮುಂದ ಎಲ್ಲಾ ಹೇಳಿಬಿಡಾಕಿದ್ದೀನಿ ಹಿರೇಮನಷಾರು ಅವರು ಇದ್ದಾಗ ಹಿಂಗದ ಮುಂದ ಹೆಂಗೋ..." ಅವಳಲ್ಲಿ ಅತ್ಯಾನ ಬಗ್ಗೆ ಜಿಗುಪ್ಸೆ ಇತ್ತು.
"ಇವರು ಮದವಿಮೊದಲ ಏನೇನೋ ಹೊಲಸು ಪುಸ್ತಕ ತಂದಿಟ್ಟಾರ. ನಾ ಅವನ್ನ ಗಂಟುಕಟ್ಟಿ ಮೂಲ್ಯಾಗ ಇಟ್ಟಿದ್ದೆ .ಯಾಕೋ ಯಾರೋ ಆ ಗಂಟುಬಿಚ್ಚಿದಂಗ ಅನಸತಿತ್ತು. ಅವರಿಲ್ಲದಾಗ ಅತ್ಯಾನ ರೂಮಿನ್ಯಾಗ ಹುಡುಕಿದೆ ಅಲ್ಲಿ ಅವು ಸಿಕ್ಕವು..ಏನ ಅಸಹ್ಯರಿ ಇದು.ಮಂದೀಗೆ ಗೊತ್ತಾದ್ರ ಮಾವನವರ ಪುರೋಹಿತಿಕಿ ಬಂದಾಗ್ತದ..ಈ ವಯಸ್ಸಿನ್ಯಾಗ ಎಂಥಾ ಆಶಾ ಅಂತೀನಿ..." ಅತ್ಯಾನ ವರ್ತನೆಯ ಬಗ್ಗೆ ಶುಭದಾಳಲ್ಲಿ ಪುರಾವೆ ಇತ್ತು.ಅದಕ್ಕೆ ಅವಳ ಮಾತಿನಲ್ಲಿ ನಿಖರತೆ ಇದ್ದಿರಬೇಕು.
"ನಾ ಮಾತಾಡತೇನಿ ನೀ ರಸಕಸಿ ಮಾಡಕೋಬ್ಯಾಡ.." ಸಮಾಧಾನ ಮಾಡಿ ಸಾಗಹಾಕಿದೆ. ಪೇಪರ ಓದಲು ತಗೊಂಡೆ. ಮನಸ್ಸು ಅಲ್ಲಿರಲಿಲ್ಲ. ಈ ಅತ್ಯಾ ಹಿಂಗ್ಯಾಕ ಮಾಡಿದಳು.ಅಪ್ಪಗ ಹೇಳಬ್ಯಾಡ ಅಂತ ಆಣಿಚೂರಿ ಎಲ್ಲ ಹಾಕಿಸಿಕೊಂಡಳು.ಸುಡ್ಲಿ ಅಕಿ ಮಾಡಿದ್ದು ನೆನೆದ್ರ ಇನ್ನೂ ಮ್ವೆಮ್ಯಾಲ ಮುಳ್ಳು ಹರದಂಗ ಆಗತದ. ರಾತ್ರಿ ರಂಜನಾ ಎದ್ದಿದ್ಲು. ಅರೇದ ಜಾಗ ಅಂತ ನಾನೂ ಎದ್ದು ಹೋಗಿದ್ದೆ. ಗಿರೀಶ ಶುಭದಾ ಎಲ್ಲೋ ಹೊರಗ ಹೋಗಿ ತಡಾಮಾಡಿ ಬಂದಿದ್ದರು. ರಂಜನಾಳ ಕಾರ್ಯಕ್ರಮ ಮುಗಸಿ ನಡಮನಿ ಹಾದು ರೂಮಿಗೆ ಹೊಂಟಿದ್ದೆ. ಗಿರೀಶನ ರೂಮಿನ ಬಾಗಲದಾಗ ಯಾರೋ ನಿಂತಂಗ ಅನಸತು.ದೀಪದ ಬೆಳಕು ಬೀಳತಿರಲಿಲ್ಲ..ಆದರೂ ಅಲ್ಲೆ ಯಾರೋ ಇದ್ದಾರ ಇದು ಖಾತ್ರಿಆತು. ಹತ್ರ ಹೋಗಿ ನೋಡದೆ..ಅಕಿ ಅತ್ಯಾ ಆಗಿದ್ದಳು. ಅವರ ರೂಮಿನ ಬಾಗಲದಾಗ ಇಕಿ ಏನು ಮಾಡತಾಳ..ರೂಮಿನಿಂದ ಕ್ಷೀಣವಾದ ಬೆಳಕು ಬರತಿತ್ತು, ಅತ್ಯಾ ಸಂದಿಯೊಳಗಿಂದ ಬಗ್ಗಿ ನೋಡತಿದ್ಲು. ಅಕಿ ಹೆಗಲ ಮ್ಯಾಲ ಹೌರಗ ಕೈ ಇಟ್ಟೆ. ನನ್ನ ನೋಡಿ ಗಾಬರಿ ಆದಾಕಿ ಕಣ್ಣಾಗಿಂದ ದಳದಳ ನೀರು ಇಳೀತಿದ್ದವು.ನಂಗ ಗದ್ದಲ ಆಗೂದು ಬ್ಯಾಡಾಗಿತ್ತು. ಅಕಿನ ಕರಕೊಂಡು ಹಿತ್ತಲ ಪಡಸಾಲಿಗೆ ಹೋದೆ.ಅಕಿ ಬಿಕ್ಕಿಸಿ ಬಿಕ್ಕಿಸಿ ಅಳತಿದ್ಲು. ಇದ ಇನ್ನೂ ಹಣಿಕಿಹಾಕ್ಕೋತ ನಿಂತಾಕಿ ಇಕೀನ ಅನ್ನೂದು ಅರಿವಾಗಿ ಸಮಾಧಾನ ಮಾಡುವ ಪ್ರಯತ್ನ ನಿಲ್ಲಿಸಿದೆ.ಇದೆಂಥಾ ಹಂಬಲ ಇಕೀದು..ಈ ವಯಸ್ಸಿನ್ಯಾಗ ಇಕಿಗ್ಯಾಕ ಇಂಥಾ ಬುದ್ಧಿ ಬಂತು...

ಅಕಿದು ಒಂದ ವರಾತ. ಇಲ್ಲಾಗಿದ್ದು ಅಪ್ಪಗ ಹೇಳಬ್ಯಾಡ..ಆಣಿಹಾಕಿಸಿಕೊಂಡಳು.ಮೆಲುದನೀಲೆ ಪರಿಪರಿ ಬೇಡಿಕೊಂಡಳು. ರಾತ್ರಿ ಹಂಗ ಮುಗದಹೋಗಿತ್ತು.ಈಗ ನೋಡಿದರ ಅಕಿ ಮನ್ಯಾಗ ಇಲ್ಲ. ಅಪ್ಪ ರುದ್ರಾಭಿಷೇಕ ಮಾಡಸಲಿಕ್ಕೆ ದಾವಣಗೆರಿಗೆ ಹೋಗಿದ್ದ.ಅಪ್ಪನ ರುದ್ರ ಅಂಬೋಣಕ್ಕೆ ಭಾಳ ಡಿಮಾಂಡ ಇತ್ತು.ರೇಲ್ವೆ ನೌಕರಿಯಿಂದ ರಿಟೈರಾದರೂ ಪುರೋಹಿತಕಿ ನಿಲಸಿರಲಿಲ್ಲ.ಅವ್ವ ಗರ್ಭಾಶಯದ ಕ್ಯಾನ್ಸರಿಂದ ತೀರಕೊಂಡಳು..ಬೆನ್ನಿಗೆ ಬಿದ್ದ ತಂಗಿ ವಿಧವಾಆಗಿ ಮನಿ ಸೇರಿಕೊಂಡಳು.ಹಂಗ ನೋಡಿದರ ಅಪ್ಪಗ ಸುಖ ಎಂದೂ ಭೇಟಿಆಗಿಯೇಇಲ್ಲ ಅಂತ ಹೇಳಬಹುದು.ಗಿರೀಶಗೂ ರೇಲ್ವೆಯಲ್ಲಿ ನವಕರಿ ಆಗಿತ್ತು.ಲಗ್ನ ಆಗಿ ಸೊಸಿ ಬಂದಿದ್ದಳು.ನನ್ನೂ ಛಲೋಕಡೆ ನೋಡಿ ಕೊಟ್ಟಿದ್ದ.ಇವರದು ಬ್ಯಾಂಕಿನ ಕೆಲಸ ಈಗ ಟ್ರೇನಿಂಗಗಾಗಿ ಮುಂಬಯಿಗೆ ಹೋಗ್ಯಾರ.ರಂಜನಾಗೂ ಸೂಟಿ ಇತ್ತು. ಅಪ್ಪ ಗಿರೀಶರ ಆಗ್ರಹದ ಕರೆಯುವಿಕೆಗೆ ಓಗೊಟ್ಠು ಬಂದಿದ್ದೆ.
-------------------------------------------------------------------------------------------------
ಮಧ್ಯಾಹ್ನದ ಊಟ ಮುಗದಿತ್ತು. ಶುಭದಾ ತಲಿನೋವು ಅಂತ ರೂಮು ಸೇರಿದ್ದಳು. ಹಳೆ ಫೋಟೋ ನೋಡುತ್ತ ರಂಜನಾ ಜೋಡಿ ಪಡಸಾಲಿಯೊಳಗ ಕೂತಿದ್ದೆ. ಬಾಜೂಮನಿ ಹುಡುಗಿ ಆಟಕ್ಕ ಕರದಳು ಅಂತೇಳಿ ರಂಜನಾ ಎದ್ದು ಹೋದಳು.ಎಂಜಲಗೋಮ ಮುಗಸಿದ ಅತ್ಯಾ ಬಂದಾಗ ನೋಡಿದೆ ಮುಖದಾಗ ಯಾವ ಪ್ರಾಯಶ್ಚಿತ್ತದ ಭಾವನಾನೂ ಇರಲಿಲ್ಲ. ಸ್ವಲ್ಪ ಅತಿನ ಅನ್ನಬಹುದಾದ ಕೆಂಪು ಬಣ್ಣ ಅಕಿದು. ಮೈ ಕೈ ತುಂಬಿಕೊಂಡಿದ್ದಳು.ಹಂಗ ನೋಡಿದರ ಅಕಿಗೆ ಅಂಥ ವಯಸ್ಸೇನೂ ಆಗಿರಲಿಲ್ಲ. ಲಗ್ನ ಆದಾಗ ಹದಿನೆಂಟು ಆಗಿದ್ದವಂತ. ಅವ್ವ ಹೇಳತಿದ್ಲು. ನಾ ಅವಾಗ ಅಕಿ ಹೊಟ್ಠಿಯೊಳಗ ಇದ್ಯಂತ. ಅತ್ಯಾನ ಲಗ್ನದ ಸುದ್ದಿ ಅವ್ವ ಆಗಾಗ ನೆನಪು ಮಾಡಕೋತ ಹೇಳತಿದ್ದಳು.ಅಪ್ಪಗ ವಂಶಪಾರಂಪರ್ಯ ವಾಗಿ ಸಿಕ್ಕಿದ್ದು ಈ ಹಳೇಮನಿ ಮತ್ತ ಊರಾಗಿನ ತುಂಡ ಜಮೀನು. ಅಂಥ ಸ್ಥಿತಿವಂತ ಅಲ್ಲದ ಅಪ್ಪಗ ಅವರಪ್ಪ ತಂಗಿ ಲಗ್ನದ ಜವಾಬ್ದಾರಿ ಹೊಸಿಹೋಗಿದ್ದ. ಅಪ್ಪಗ ಹೊಲಾಮಾರಿ ತಂಗಿ ಲಗ್ನಮಾಡುವ ಅನಿವಾರ್ಯತೆ ಬಂತು. ಸರಿ ಬೀಗರು ಜೋರಿದ್ದರು..ಅದು ಇದು ಅಂತ ಅಪ್ಪಗ ಕಾಡಿದರು. ಅವ್ವ ಹೇಳತಿದ್ಲು ಅದು ಎಷ್ಠಸಲಾ ಅತ್ಯಾನ ಅತ್ತಿ ಮಾವನ ಕಾಲು ಹಿಡಿಬೇಕಾಗಿ ಬಂತು..ಅಂತ. ಅಪ್ಪ ಅವ್ವ ಅತ್ಯಾನ ಕಣ್ಣೀರಿಗೆ ಬೇಡಿಕೆಗೆ ಅಲ್ಲಿ ಬೆಲೆನ ಇರಲಿಲ್ಲ.ಸರಿ ಎಲ್ಲಾ ಮುಗೀತು ಇನ್ನು ಪ್ರಸ್ತದ ತಯಾರಿ..ರೂಮು ಸಿಂಗರಿಸಿ ಅತ್ಯಾಗ ಒಳಗ ಕಳಿಸಿದರಂತ ಅಳಿಯ ರೂಮಿಗೆ ಹೋಗದ ಹಟಾಹಿಡದಿದ್ದ..ಅದಕ ಅವನ ಅವ್ವನ ಹಿಕಮತ್ತು ಬ್ಯಾರೆ. ಹುಡುಗಗ ಹಾಕಬೇಕಾದ ಬಂಗಾರದ ಚೈನು ಇನ್ನೂ ಬಂದಿಲ್ಲ ಅದು ಬರದ ಹೊರತು ರೂಮಿಗೆ ಹೋಗೂದಿಲ್ಲ ಅಂತ. ಅಪ್ಪನ ಕೈ ಖಾಲಿಯಾಗಿ ಅಲ್ಲಿ ಇಲ್ಲಿ ಸಾಲಾನೂ ಆಗಿತ್ತು. ಹಿಂಗ ರಾತ್ರಿ ಬಂಗಾರದ ಚೈನು ತರೂದು ಕಠಿಣ ಆಗತದ ಅಂತ ಅಪ್ಪ ಚಾಲವರದು ಬೇಡಿಕೊಂಡರೂ ಅವರ ಮನಸ್ಸು ಕರಗಲಿಲ್ಲ. ಚೈನು ತಗೋಂಡು ಸೊಸಿ ಬರಲಿ ಮುಂದಿದೆಲ್ಲ ಆಮ್ಯಾಲ ಅಂತ ಅವರು ಹೊರಟ ಹೋದರು. ಮುಂದ ನಾಕದಿನಕ್ಕ ಕೆಟ್ಟ ಸುದ್ದಿ ಬಂತು. ಬಸ್ ಹಾದು ಅತ್ಯಾನ ಗಂಡ ತೀರಿಕೊಂಡಿದ್ದ. ಅತ್ಯಾನ ಮ್ಯಾಲೆ ಗಂಡನ್ನ ನುಂಗಿ ನೀರ ಕುಡದಾಕಿ ಅನ್ನೋ ಅಪವಾದಾನೂ ಬಂತು. ಹೋದ ಅಪ್ಪ ಅವ್ವ ಅನಿಸಿಕೊಂಡು ಮನಿಗೆ ಬಂದರು. ಅತ್ಯಾ ಕಾಯಂಆಗಿ ತವರುಮನಿ ಸೇರಿಕೊಂಡಳು.

ಬಂದು ಕೂತಾಕಿ ಮೆತ್ತಗಿನ ದನಿಯೊಳಗ ಮಾತು ತಗದಳು.
"ಅಕಿಗೆ ಗೊತ್ತಾತೇನು ಏನರೆ ಅಂದಳೇನು.." ಇಕೀಗೆ ಸ್ಪಷ್ಟ ಉತ್ರ ಕೊಡಲೇಬೇಕು ಖಾರ ಆದರೂ ಮಾತು ಹೇಳಲೇಬೇಕು ಅನಕೊಂಡೆ.
"ನಂಗ ಗೊತ್ತು ನೀನೂ ನನ್ನ ಬಗ್ಗೆ ಹಂಗ ವಿಚಾರ ಮಾಡತಿಅಂತ..ನನ್ನ ನೋವು ಯಾರಿಗೆ ಹೇಳ್ಕೋಳುದು ಅದ..ನಿಮ್ಮವ್ವಾ ಇದ್ದಾಗೊಂಥರಾ ಈಗ ಇಕೀ ಕ್ಯೆಯ್ಯಾಗ ಇನ್ನೊಂಥರಾ..ನಂದು ನಶೀಬ ಆ ದೇವರು ಹೆಂಗ ಬರದಾನೋ..ಸುಡ್ಲಿ.." ಅಳುತ್ತಲೇ ಮತಾಡಿದಳು.
"ಅತ್ಯಾ ನೀ ನಿನ್ನೆ ಮಾಡಿದ್ದು ನಿನಗ ಸರಿ ಅನಸತದೇನು...?"
"ಇದು ಸರಿ ತಪ್ಪಿನ ಪ್ರಶ್ನಿ ಅಲ್ಲ.ಒಂದು ಮಾತು ಹೇಳತೇನಿ ನಾ ಏನ ಕಲತಾಕಿ ಅಲ್ಲ ನದಿಯೊಳಗ ಇಳದಾವರಿಗೆ ಮಾತ್ರ ಅದರ ಸೆಳವು ಸುಳಿಯ ಜೋರು ಗೊತ್ತಾಗತದ ದಂಡಿಮ್ಯಾಲ ನಿಂತಾವರಿಗಲ್ಲ..ನಂದೇನು ತಪ್ಪಿತ್ತು ಹೇಳು. ಗೊತ್ತಿತ್ತು ಗೆಳತ್ಯಾರು ಹೇಳಿದ್ದರು ಸಿನೆಮದಾಗ ನೋಡಿದ್ದೆ..ಕಲ್ಪನಾ ಮಾಡಕೊಂಡಿದ್ದೆ..ಇನ್ನೇನು ಹಾಲಿನಬಟ್ಟಲ ತುಟಿಗೆ ಮುಟ್ಟಸಬೆಕು ಅದನ್ನ ಕಸಗೊಂಡ ಆ ದೇವರು..ಹಾಲು ಚೆಲ್ಲಿತು..ನನ ಬಾಳು ಹಿಂಗಾತು..ಹೇಳು ನಂದೇನು ತಪ್ಪಿತ್ತು.." ಅಳುವಿನ ನಡುವೆಯೇ ತೂರಿಬಂದ ಪ್ರಶ್ನೆ ನಂಗ ಭರ್ಚಿಯಿಂದ ತಿವಿದಂಗಾತು.ಹೌದು ಹಸದಾವರ ಮುಂದ ತುಂಬಿದ ತಾಟು ಇಟ್ಟು ಹಂಗ ಕಸಗೊಂಡಂಗ ಆಗಿತ್ತು. ಇದರಾಗ ಅಕಿದು ತಪ್ಪುಇರಲಿಲ್ಲ..ಆದರ ನಿನ್ನಿ ಅಕಿ ಮಾಡಿದ್ದಕ್ಕ ಇದು ಹೆಂಗ ಸಮರ್ಥನಾ ಆಗತದ..ನನ್ನ ಪ್ರಶ್ನೆಗೆ ಅಕಿ ಉತ್ತರ ತಯಾರಿತ್ತು.
"ಎಲ್ಲಾರಂಗ ಕೀರ್ತನಾ ಕೇಳಕೋತ ಬತ್ತಿ ಹೊಸಕೋತ ಉಪವಾಸ ಮಾಡಕೋತ ನಾ ಇರಬೇಕಾಗಿತ್ತು..ಖರೆ. ಆದರ ಯಾವ ಉಪವಾಸಕ್ಕೂ ಕೀರ್ತನಾಕ್ಕೂ ನನ್ನ ವ್ಯಾಪ ಹೊಗಸೂ ಶಕ್ತಿ ಇರಲಿಲ್ಲ. ಎಷ್ಟ ದೇವರಿಗೆ ಕೈ ಮುಗದು ಮಲಗಿದರೂ ರಾತ್ರಿ ಆದ ಮ್ಯಾಲ ಅದ ಚಿತ್ರ ಆ ಹೂವಿನ ಹಾಸಿಗಿ ಊದಿನ ಕಡ್ಡಿ ವಾಸನಿ ಎಲ್ಲಾ ಸಮರ್ಪಣಾಕ್ಕ ತಯಾರಾಗಿ ಕೂತ ನಾನು ಈ ಚಿತ್ರ ರಾತ್ರಿಯಿಡೀ ಕಾಡತಿತ್ತು.ಏನೇನೋ ಬಯಕಿ ಹುಚ್ಚಕುದುರಿ ಹತ್ತಿ ದೂರ ಹೋಗೂ ಹಂಬಲ.ಬ್ಯಾರೆದವರ ಛಲೋ ಸುದ್ದಿ ಅಪಥ್ಯ ಆಗತಿತ್ತು.ಬ್ಯಾರೆಯವರ ಬಸಿರು ಬಾಣಂತನ ಸುದ್ದಿಕೇಳಿ ಉರದಂಗಾಗೋದು. ಮ್ಯಾಲ ನಿಮ್ಮವ್ವಂದು ಕಿಟಿಕಿಟಿ..ಅದನ ಮುಟ್ಟಬ್ಯಾಡ ಅದನ ನೋಡಬ್ಯಾಡ ಹಿಂಗ..ಒಳಗೊಳಗ ನಾ ಸತಕೋತ ಹೋದಂಗ....ಯಾರೋ ಬಂದಂಗ ಹತ್ರ ನಿಂತಂಗ..ಉಸಿರು ತಾಕದಂಗ..ನಾ ಹೆಂಗ ಹೇಳಲಿ.."

ಅತ್ಯಾ ಉದ್ವಿಗ್ನಗೊಂಡಿದ್ದಳು. ಏನು ಉತ್ತರ ಕೊಡೋದು ಎಂಬ ಗೊಂದಲದಲ್ಲಿದ್ದೆ...ನನ್ನ ಯಾವ ಉತ್ತರವೂ ಅವಳಿಗೆ ಸಮಾಧಾನ ತರಲಾರದು ಎಂಬುದು ಗೊತ್ತಿತ್ತು.ಅದೇ ಸಮಯಕ್ಕೆ ಸರಿಯಾಗಿ ಬಾಗಿಲ ದೂಡಿಕೊಂಡು ಅಪ್ಪ ಒಳಬಂದ. ನಾ ನಿರಾಳವಾದೆ
----------------
ಅಪ್ಪ ರಂಜಿತಾಳ ಜೊತೆ ಛಲೋ ಹೊಂದಿಕೊಂಡಿದ್ದ.ಅವಳ ಜೊತೆ ಚೌಕಾಬಾರಾ ಕೇರಮ್ ಹೀಗೆ ಆಟಗಳಲ್ಲಿ ರಮಿಸಿದ್ದ. ಒಮ್ಮೊಮ್ಮೆ ನಾನು ಅತ್ಯಾ ಇಲ್ಲವೇ ಶುಭದ ಹೀಗೆ ಜೋಡಿಯಾಗುತ್ತಿದ್ದೆವು. ನೆರೆಮನೆಯ ಹುಡಗಿ ಕೂಡ ರಂಜಿತಾಳ ಗೆಳತಿಯಾಗಿದ್ದಳು. ಇವರ ಟ್ರೇನಿಂಗ್ ಮುಗಿಯಲು ಬಂದಿತ್ತು. ಮುಂದಿನವಾರ ಬೆಂಗಳೂರಿಗೆ ಹೊರಡುವ ಸಲುವಾಗಿ ಟಿಕೇಟ ಬುಕ್ ಮಾಡಲು ಗಿರೀಶನಿಗೆ ಹೇಳಿದ್ದೆ.ಹಂಗ ನೋಡಿದರ ಬೆಂಗಳೂರಿನಲ್ಲಿ ಸಿಗದ ವಸ್ತು ಯಾವುದೂ ಇಲ್ಲ..ಆದರೂ ತವರಮನಿಯಿಂದ ತಗೊಂಡು ಹೋಗುವ ಖುಶಿ ಬ್ಯಾರೆನ ಇರತದ. ಅತ್ಯಾ ಮಸಾಲಿ ಪುಡಿ, ಚಟ್ನಿಪುಡಿ ತಯಾರಿ ನಡಸಿದ್ದಳು. ರಂಜಿತಾ ಅಕಿ ಅಜ್ಜಗ ಕಾಡಿಬೇಡಿ ನೃಪತುಂಗ ಬೆಟ್ಟದ ಕಾರ್ಯಕ್ರಮ ಹಾಕಿದ್ದಳು. ಅವಳ ಗೆಳತಿ ನಾನು ಅಪ್ಪ ಎಲ್ಲಾರೂ ಸಂಜಿನ್ಯಾಗ ಗುಡ್ಡದ ಪ್ರಶಾಂತತೆಯಲ್ಲಿ ಕಳೆದುಹೋದೆವು. ಹುಡುಗಿಯರು ಆಟದಲ್ಲಿ ಲೀನರಾಗಿದ್ದರು. ಸೇಂಗಾ ಪುಡಿಕಿ ತಗೊಂಡು ಬಂದು ನಂಗೊಂದು ಕೊಟ್ಟು ಬಾಜು ಕೂತ ಅಪ್ಪ ಮಾತಿಗೆ ಸುರು ಮಾಡದ.

"ತುಳಸಾ ಮನ್ಯಾಗ ಏನೋ ಆದಂಗ ಅದ..ಸೊಸಿ ಮಾರಿ ಗಂಟಗಂಟ ಅದ.." ಅವನ ದನಿಯಲ್ಲಿ ಕಾಳಜಿ ಇತ್ತು.ಮುಚ್ಚಿಡುವಲ್ಲಲÀರಲ್ಲಿ ಯಾವ ಅರ್ಥವೂ ಕಾಣಲಿಲ್ಲ.ಎಲ್ಲಾ ಹೇಳಬೇಕು ಅತ್ಯಾಳ ಹುಚ್ಚಾಟಕ್ಕ ಒಂದು ಗತಿ ಕಾಣಸಬೇಕು ಅನಿಸಿತು. ಎಲ್ಲ ವಿವರವಾಗಿ ಹೇಳಿದೆ.ದನಿ ನಡಗುತ್ತಿತ್ತು. ಅಪ್ಪ ಎಂದಿನಂತೆ ಶಾಂತವಾಗಿದ್ದ.ಎಲ್ಲಾ ಕೇಳಿಸಿಕೊಂಡು ನಿಡಿದಾಗಿ ಕಾಲು ಚಾಚಿ ಕೂತ. ಅವನೊಳಗ ಉದ್ವೇಗದ ಯಾವ ಚಿಹ್ನಾನೂ ಇರಲಿಲ್ಲ.

"ಅತ್ಯಾ ಹಿಂಗ ಮಾಡೂದು ಸರಿ ಅನಸತದೇನು.." ನನ್ನ ಉದ್ವಿಗ್ನತೆ ಇನ್ನೂ ಶಾಂತವಾಗಿರಲಿಲ್ಲ.

"ಅದನ್ನ ನಿರ್ಧರಿಸೋದು ಹೆಂಗ ಇದು ಪ್ರಶ್ನಿ..ಅಕಿ ಮಾಡಿದ್ದು ನಿನಗ ಶುಭದಾಗ ಸರಿ ಅನಸೂದಿಲ್ಲ.ಖರೆ ಆದರ ಒಂದ ಸಲಾ ಅಕಿ ಜಾಗಾದಾಗ ನೀವನಿಂತು ನೋಡರಿ.ಅಕಿಗೆ ಏನೂ ತಪ್ಪಿಲ್ಲದನ ಶಿಕ್ಷಾ ಆಗೇದ.ನಿಮ್ಮವ್ವ ಅಂತೂ ಅಕಿ ತಲಿಬೋಳಸಲಿಕ್ಕೆ ನಿಂತಿದ್ದಳು. ಓಣಿಯ ಹಿರಿಯರು ಸಕೇಶಿನ್ನ ಹೆಂಗ ಮನಿಯೋಳಗ ಇಟಗೊಂಡಿರಿ ಅಂತ ಜಗಳಾ ಆಡಿದರು. ನನ್ನ ಅನೇಕ ಕಾರ್ಯಕ್ರಮಕ್ಕ ಕೂಡ ಕರೀಲಿಲ್ಲ ಪುರೋಹಿತಕಿಗೆ.ಆದರೂ ನಾ ಅಡ್ಡನಿಂತೆ.ಎಲ್ಲಾನೂ ಎದುರಿಸಿದೆ. ನಿಮ್ಮವ್ವ ಹ್ಯಾವಾ ಸಾಧಿಸಿದಳು.ಬೆನ್ನಿಗೆ ಬಿದ್ದ ತಂಗಿ ಕರುಳು ಕೊರೀತಿತ್ತು.ನಾ ಎಷ್ಟಸಲಾ ನಿಮ್ಮವ್ವನ ಜೋಡಿ ಜಗಳ ಆಡೇನಿ...." ಅವನ ದನಿಯಲ್ಲಿ ನೋವಿತ್ತು.
"ಬರೇ ಒಂದು ಬಂಗಾರದ ಸರಾ ..ತೂಕಾಮಾಡಿದರ ನನ ತಂಗಿ ಅದರ ನೂರಪಟ್ಟು ಮೂಲ್ಯವಾನ ಇದ್ದಳು. ಅವರು ಕುರುಡರು..ದುರಾಶಾಕ್ಕ ಬಿದ್ದರು.ಹೂವಿನ ಹಾಸಿಗಿ ಮ್ಯಾಲಕೂತಾಕಿ ಬಾಳತುಂಬ ಮುಳ್ಳ ಮುತಗೊಂಡವು.ನನ್ನ ಕಡೆ ರೊಕ್ಕ ಇರಲಿಲ್ಲ.. ಆ ರಾತ್ರಿ ನೆನಪಾದರ ಇನ್ನೂ ಎದಿ ನೋಯ್ತದ.." ಅಪ್ಪನ ದನಿ ಭಾರವಾಗಿತ್ತು.

"ಅಪ್ಪ ಆದ್ರ ಹಳೇಸಂಗತಿನ ನೆನೆಸಿಕೋತ ಕೂಡೂದು ಯಾವ ನ್ಯಾಯ..ಈಗ ಹಳಹಳಿ ಮಾಡಿಕೊಳ್ಳುವುದರಾಗ ಏನೂ ಉಪಯೋಗ ಇಲ್ಲ.ಪ್ರಶ್ನಿ ಇರೂದು ಅತ್ಯಾನ ಈಗಿನ ವರ್ತನಾದ ಬಗ್ಗೆ.ನೀವ ಹೇಳಿ ಶುಭದಾ ತನ್ನ ತವರುಮನಿಯವರಿಗೆ ಹೇಳಿದರ ಮರ್ಯಾದಿ ಹೋಗೋದು ಯಾರದು..? ಅತ್ಯಾಗ ನಿಂದು ಕಾಳಜಿ ಇಲ್ಲ.."

"ಮಂದಿ ಆಡಕೋತಾರ ಅಂತ ಅಂಜಿ ನಾವ ಏನೆಲ್ಲಾ ಮಾಡತೇವಿ..ಇದ ಮಂದಿ ಅಕಿ ಹಿಂದ ಹಂಗಸಿ ಮಾತಾಡಿದ್ರು ಗಂಡನ್ನ ನುಂಗಿದಾಕಿ ಅಂತ ಕರದರು.ಸಕೇಶಿಗೆ ಮನಿಯೊಳಗ ಇಟಗೊಂಡಾವ ಇವಾ ಎಂಥಹಾ ವೈದಿಕ ಬ್ರಾಹ್ಮಣ ಅಂತ ಜರದರು.ಯಾವ ವೇದದಾಗೂ ಪುರಾಣದಾಗೂ ವಿಧವಾ ಹಿಂಗಿರಬೇಕು ಅಂತ ಹೇಳಿಲ್ಲ..ನಾ ವಾದಾ ಹಾಕಿದೆ. ಸ್ವಲ್ಪದಿನ ನನ್ನ ಪುರೋಹಿತಕಿಗೆ ತ್ರಾಸು ಬಂತು. ಎಲ್ಲಾ ಬದಲಾತು ಎಲ್ಲದಕ್ಕೂ ವ್ಯಾಳ್ಯಾ ಬೇಕು.ನಿಮ್ಮವ್ವ ಸಾಯುಮುಂದ ಇಕಿ ಕೈಹಿಡದು ಅತ್ತಿದ್ದು ನೋಡಿದೆ. ತಪ್ಪು ಮಾಡಿದೆ ಅಂತ
ಹಲಬತಿದ್ದಳು...." ಅವನ ಮಾತಿನಲ್ಲಿ ಸತ್ಯ ಇತ್ತು. ಈ ಸಂಪ್ರದಾಯ ಎಲ್ಲಾ ನಾವು ಮಾಡಕೊಂಡು ಬಂದಿದ್ದು.ಇವು ಎಂದೂ ಸಮಾಜಮುಖಿ ಆಗಲಿಲ್ಲ. ರಂಜನಾ ಮತ್ತು ಅಕಿ ಗೆಳತಿಗೆ ಹಸಿವಾಗಿತ್ತು. ಅವರನ್ನ ಕರಕೊಂಡು ಭೇಲಪುರಿ ತಿನಿಸಿ ಬಂದೆ. ಅಪ್ಪ ಯಾರದೋ ಜೋಡಿ ಮಾತಾಡತಿದ್ದ. ಬಾಜು ಕೂತೆ. ಅವ ಮತ್ತ ಹೇಳಿದ.

" ಹಂಗ ಅಕಿ ಈಗ ಮಾಡಿದ್ದೆಲ್ಲ ಸರಿ ಅಂತ ನಾ ಅನ್ನೂದಿಲ್ಲ..ಆದರ ತುಳಸಾ ನೋಡು ಕೆಲವರಿಗೆ ಹಂಬಲ ಇರತಾವ ಕುತೂಹಲ ಇರತಾವ.ಹಸದವರಿಗೆ ಯಾವಾಗಲೂ ಮೃಷ್ಟಾನ್ನದ ಕನಸ ಬೀಳತಾವಂತ.ಹಂಗ ಇದು..ನಿಂಗ ಹೇಳತೇನಿ ಅಕಿ ಹಂಗ ಅವರ ರೂಮಿನ ಮುಂದೆ ಕತ್ತಲಿಯೊಳಗ ಹಣಿಕಿ ಹಾಕೂದನ್ನ ನಾನೂ ನೋಡೇನಿ..ನಾ ಚಕಾರ ಎತ್ತಲಿಲ್ಲ.ಇನ್ನೂತನ ಅಕಿ ಬ್ಯಾರೆ ಜಗತ್ತು ನೋಡಿಲ್ಲ..ಯಾರೂ ಅಕಿಗೆ ಬಾ ಅನ್ನುದಿಲ್ಲ ಹೋಗು ಅನ್ನೂದಿಲ್ಲ. ನಿಂಗ ಅಕಿ ಹೇಳಿದಂಗ ರಾತ್ರಿ ಆದರ ಸಾಕು ಪ್ರಲೋಭನಾ ತಡಕೊಳ್ಳಿಕ್ಕೆ ಆಗೂದಿಲ್ಲ ಅನ್ನೋದು ನನಗ ಸಹಜೀಕ ಅನಸತದ.." ಅಪ್ಪನ ದನಿಯಲ್ಲಿ ನಿರ್ಧಾರ ಇತ್ತು. ನಾ ಇನ್ನೂ ಗೊಂದಲದಲ್ಲಿದ್ದೆ.

"ನಾ ಅವಾಗ ಅಂದೆ ಅಕಿ ಜಾಗಾದಾಗ ನಿನ್ನ ಕಲ್ಪಿಸಿಕೊಂಡು ನೋಡು ಅಂತ.ನಾ ತಪ್ಪು ಮಾಡತೇನಿ ಅನ್ನೂದು ಅಕಿಗೆ ಗೊತ್ತದ..ಆದರ ಅಕಿ ವಾಂಛಾ ಅದಕ್ಕ ಅಡ್ಡಬರತದ.ಹಿಂಗಾಗಿ ಅಕಿಗೆ ಪ್ರಲೋಭನಾ ಗೆಲ್ಲೂದು ಆಗವಲ್ತು. ಅಕಿಗೆ ಈಗ ಅಂತಃಕರಣ ಬೇಕಾಗೇದ..ನಾಕು ಮಾತು ಒಳ್ಳೇದು ಕೇಳಬೇಕಾಗೇದ.ಒಂದು ಸಮಾಧಾನ ಅದ ಅಕಿ ಯಾವ ಅಡ್ಡ ಹಾದಿ ಹಿಡಿಲಿಲ್ಲ ಅಂತೇಳಿ.ಈ ಹುಚ್ಚಿನ ಮ್ಯಾಲ ಅಕಿ ಲಗೂ ಗೆಲುವು ಸಾಧಿಸಲಿ.ಇದ ದೇವರಿಗೆ ಬೇಡತೇನಿ..."

ಅಪ್ಪ ಭಾವುಕನಾಗಿದ್ದ. ಎಂದೂ ಹಿಂಗ ನೋಡಿರಲಿಲ್ಲ. ಶಲ್ಯದ ಚುಂಗಿಗೆ ಕಣ್ಣ ಒರೆಸಿಕೊಂಡ. ನಂಗೂ ನೀರಾಡಿತ್ತು.
---------------------------------------------------------
ನನಗ ಏನಾದರೂ ದ್ವಂದ್ವ ಕಾಡಿದಾಗ ಇವರಹತ್ತರ ಹೇಳಕೋತೇನಿ. ಇವರು ಸಮಾಧಾನದಿಂದ ಕೇಳಿ ಉತ್ತರ ಕೊಡತಾರ. ಇವತ್ತು ಹಂಗ ಆತು. ಅತ್ಯಾನ ಬಗ್ಗೆ, ಮನೆಯಲ್ಲಿ ನಡೆದ ರಗಳೆಯ ಬಗ್ಗೆ ಅಪ್ಪನ ಜೊತೆ ಆದ ಮಾತುಕತೆ ಬಗ್ಗೆ ಎಲ್ಲಾನೂ ಹೇಳಿದೆ. ಎಲ್ಲಾ ಕೇಳಿಸಿಕೊಂಡ ಇವರು ಒಂದು ಮಾತು ಅಂದರು.ಅತ್ಯಾಗ ಜೋಡಿ ಕರಕೊಂಡು ಬಾ ಅಂತ. ಬದಲಾವಣೆಯ ಮೊದಲ ಹೆಜ್ಜಿಗೆ ನಾವು ನೆರವಾಗೋಣು ಅಂತ. ಅಪ್ಪನ ಮುಂದ ಹೇಳಿದೆ.ಕೇಳಿ ಖುಷಿಪಟ್ಟ. ಅತ್ಯಾಗ ಅವನ ಕರದು ಹೇಳಿದ. ಅಕಿಮಾರಿ ಮ್ಯಾಲ ಇನ್ನೂ ಚಿಂತಿಗೆರಿ ಇದ್ದವು.ಅಕಿ ಹೆಗಲ ಮೇಲೆ ಕೈ ಹಾಕಿದೆ. ಅಕಿ ಕಣ್ಣತುಂಬಿ ಬಂದವು.ಸೆಳವಿನ ವಿರುಧ್ದ ಈಸಲು ಹಂಬಲಿಸುವ ಅವಳ ಜೋಡಿ ನಾನೂ ಕೈ ಜೋಡಿಸಿದ್ದೆ.
---------------
ಉಮೇಶ ದೇಸಾಯಿ

ಜನೇವರಿ-೨೦೧೫

Monday, December 15, 2014

ಸುಮ್ಮನ ನೆನಪು....೨

ಮೊದಲಿನ ಭಾಗದಲ್ಲಿ ಬರದಂಗ ಹೇಮಂತ್ ಅನ್ನುವ ಹೆಸರು ಹೊಸಾ ಸಾಧ್ಯತೆ ತೆರೆದಿತ್ತು. ನನ್ನೆಲ್ಲ ಈ ಸಾಹಸಗಳನ್ನು
ಗೆಳೆಯ ವಿವೇಕ್ ಶಿಂಧೆ ಜೊತೆ ಹಂಚಿಕೊಳ್ಳುತ್ತಿದ್ದೆ. ಅವ ಪ್ರೋತ್ಸಾಹ ಕೊಡತಿದ್ದ. ರಂಜಿತಾ ಅನ್ನೋ ಬಂಗಾಲಿ ಹುಡುಗಿದು
ಪತ್ರ ಬಂದಿತ್ತು. ವಿವೇಕ್ ಶಿಂಧೆ ಗ ಏರ್ಫೋರ್ಸ ನೌಕರಿ ಸಿಕ್ಕಿತ್ತು. "ಬಂಗಾಲಿ ಹುಡುಗ್ಯಾರು ಭಾಳ ಛಂದಿರತಾರಲೆ.." ಅಂತ
ಅವ ಆಸೆಗಳಿಗೆ ಗೊಬ್ಬರ ಹಾಕಿದ. ಫೋಟೋಗಳ ವಿನಿಮಯನೂ ಆದುವು..ಅವು ಕಲರ್ ಫೋಟೋಗಳಲ್ಲ ..ಬ್ಲಾಕ್ ವೈಟ್ ದಾಗ ಹುಡುಗಿಯರ ಚೆಹರೆ ಛಂದ ಕಾಣಸತಿತ್ತು.ಮನಸ್ಸಿನ್ಯಾಗ ಮಂಡಿಗಿ ತಿಂತಿದ್ದೆ ಜೋರಾಗಿ ಪತ್ರಹೋಗೂದು ಬರೂದು ಇತ್ತು.

ಹುಡುಗರ ಗೆಳೆತನನೂ ಲಭಿಸಿತು. ತಾಳಿಕೋಟಿಯ ಮುಜಾವರ್ ,ಗದಗದ ಮಕಾಂದಾರ್ ಇತ್ಯಾದಿ. ಮಕಾಂದಾರ್ ಹೊಸಾ
ಕವಿಗಳ ಸಂಕಲನ ತರುವ ತಯಾರಿಯಲ್ಲಿದ್ದರು. ನಾನು ನನ್ನ ಕವಿತೆ ಕಳಿಸಿದ್ದೆ ಹೆಸರು "ಸಾರಾಂಶ" ಅಂತ. ಅದು ಪ್ರಕಟ ಆತು ನನ್ನ ಕಿರುಪರಿಚಯನೂ ಅದು ಒಳಗೊಂಡಿತ್ತು. ಹೊಸಾ ಗೆಳೆಯರ ಗೆಳತಿಯರ ಪರಿಚಯ ಲಭಿಸಿತು, ನಾನು ಮಕಾಂದಾರ್ ಜೋಡಿ "ಪ್ರೇಮಲೋಕ" ಸಿನೇಮಾ ನೋಡಿದ್ದೆ..ನಾವಿಬ್ಬರೂ ಆ ಸಿನೇಮಾದ ವಿಮರ್ಶಾನೂ ಮಾಡಿದೆವು..ಅತ್ಯಂತ ಕಟು ಶಬ್ದದಾಗ ಸಿನೇಮಾ ಫ್ಲಾಪ್ ಆಗತದ ಅಂತ ಭವಿಷ್ಯ ಹೇಳಿದೆವು ಆಗಿದ್ದೆಲ್ಲ ಉಲಟಾ ಅದು ಬ್ಯಾರೆ. ಈ ಒಂದು ಘಟ್ಟದಾಗ ನಂಗ .ಎಚ್.ಕೆ ಸುಬ್ಬಲಕ್ಷ್ಮಿ ಅನ್ನುವಳ ಪರಿಚಯ ಆತು..ಪತ್ರಗಳ ಮುಖೇನ. ಅಕಿದು ಒಂಥರಾ ದೈವಿಕ ವ್ಯಕ್ತಿತ್ವ. ಫೋಟೋ ಕಳಿಸಿದ್ಲು ನನ್ನ ಒತ್ತಾಯಕ್ಕ..ಮುತ್ತಿನಂತಹ ಅಕ್ಷರ ಅಕಿವು. ಅಕಿ ಮಯೂರದಾಗ ಬರುತ್ತಿದ್ದ "ಚಿತ್ರಕವನ" ಸ್ಫರ್ಧಾದಾಗ ಭಾಗವಹಿಸತಿದ್ಲು..ಬಹುಮಾನ ಕೆಲವೊಮ್ಮೆ ಬರತಿದ್ದವು ಹಲವು ಸಲ ಅವಳ ಕವಿತೆ ಮೆಚ್ಚಿಗೆ ಪಡೆದ ಲಿಸ್ಟಿನ್ಯಾಗ ಇರತಿದ್ದವು. ಮಲ್ಲಾಡಿಹಳ್ಳಿಯೊಳಗ ಆಶ್ರಮದಾಗ ಇದ್ದು ಕಾಲೇಜು ಕಲಿತಿದ್ದಳು..ಸ್ವತಃ ಅಪ್ಪ ಅವ್ವ
ಇದ್ದರೂ ಅವರ ಬಗ್ಗೆ ಭಾರಿಕಮಿ ಹೇಳಾಕಿ ಬದಲಿಗೆ ಆಶ್ರಮ ಅಲ್ಲಿಯ ಗುರೂಜಿ ಹಂಗ ಅಲ್ಲಿಯ ಜೀವನದ ಬಗ್ಗೆ ಬಹಳ ಸೊಗಸಾಗಿ ಬರಿತಿದ್ದಳು. ಅಕಿ ಜೋಡಿ ಪತ್ರವ್ಯವಹಾರ ಮಾಡುತ್ತ ನಾ ಹೊಸಾಹೊಸಾ ವಿಷಯ ತಿಳಕೊಂಡೆ. ಅಕಿ ನಂಕಿಂತಸಣ್ಣಾಕಿ ಆದ್ರ ಅಕಿ ಜೀವನದ ಬಗ್ಗೆ ವ್ಯಕ್ತಪಡಿಸುವ ಅಭಿಪ್ರಾಯ ಎಲ್ಲ ನಂಗೂ ಪಟಾಯಿಸಿದವು. ವೈಯುಕ್ತಿಕವಾಗಿ ನಾ ನನ್ನ ತಂದಿ, ಅಕ್ಕಗ ಕಳಕೊಂಡಿದ್ದು ಸಹ ನನ್ನಲ್ಲಾದ ಬದಲಾವಣೆಗೆ ಕಾರಣ ಆದವು.

ಪತ್ರಮಿತ್ರತ್ವದಾಗ ಆದ ಒಂದು ಕಹಿಘಟನಾ ನಾ ಅದರಿಂದ ವಿಮುಖಆಗಲಿಕ್ಕೆ ಕಾರಣಆತು. ಭೀಮಪ್ಪ ಅನ್ನುವ ಆನೆಗೊಂದಿಯವ ಪರಿಚಯವಾದ. ಅವ ಬೇಂದ್ರೆಯವರ ಮ್ಯಾಲೆ ಬರೆದಿರುವ ಕವಿತಾ ಸಂಗ್ರಹ ಹೊರತರುವುದಾಗಿ ವಿಳಾಸ ನಿಮ್ಮದು ಕೊಡುವುದಾಗಿ ಬರುವ ಕವಿತೆಗಳ ಸಂಗ್ರಹಿಸುವುದು ಹಾಗೆಯೇ ಆ ಕವಿಗಳ ವಿಳಾಸ ಭೀಮಪ್ಪಗೆ ಕಳಿಸಿಕೊಡುವುದು ಅಂತ ಮಾತಾತು. ಪೇಪರುಗಳಲ್ಲಿ ಅವನೇ ಜಾಹೀರಾತು ಕೊಟ್ಟಿದ್ದ. ಕೆಲವುದಿನಗಳಲ್ಲಿ
ಕವಿತೆಗಳು ಬರಲುಶುರುಆದವು. ಸುಮಾರು ೫೦ ಕವಿತಾಗಳ ಸಂಗ್ರಹ ಆತು. ನಾ ಕಳಿಸಿದವರ ವಿಳಾಸಎಲ್ಲಾ ಭೀಮಪ್ಪಗೆ ಕೊಟ್ಟು ಕಳಿಸಿದ್ದೆ.ಮುಂದೆ ಬಂದ ಪತ್ರಗಳ ಧಾಟಿ ವಿಚಿತ್ರಆಗಿದ್ದುವು. "ನೀವು ಹೇಳಿದಂತೆ ದುಡ್ಡು ಕಳಿಸಿರುವೆ..ನೀವು ಹೇಳಿದ ಭೀಮಪ್ಪ ಅವರ ವಿಳಾಸಕ್ಕೆ..ಸಂಕಲನ ಯಾವಾಗ ಬರುತ್ತದೆ.." ಅನ್ನುವ ಒಕ್ಕಣೆ. ಯೋಚಿಸಿದಾಗ ನಾನೆಂತಹ ಕೆಲಸದಲ್ಲಿ ಅಮಾಯಕಾವಾಗಿ ಸಿಕ್ಕಿಹಾಕಿಕೊಂಡೆ ಇದು ನೆನೆದು ನೋವಾಯಿತು. ದೂರಿನ ಪತ್ರಗಳು ಖಾರರೂಪ ತಾಳಿದವು..ನಾ ಭೀಮಪ್ಪಗೆ ಎಲ್ಲ ವಿವರ ಕೇಳಿ ಪತ್ರಬರೆದೆ. ಆಸಾಮಿಯಿಂದ ಉತ್ತರವೇ ಇಲ್ಲ..!! ಹೋಗಿಅವನನ್ನು ಖುದ್ದು ಭೇಟಿಯಾಗಲೆ
ಜೋರುಮಾಡಲೆ ಅನ್ನುವ ದ್ವಂದ್ವ ಕಾಡಿತು.ಮನೆಯಲ್ಲಿ ನನ್ನವ್ವಗೆ ಇದು ಗೊತ್ತಾಗಿ ಅಕಿನೂ ಹೆದರಿದಳು. ಯಾರಾದರೂ ಮನೆಗೆ ಬಂದು ಜೋರುಮಾಡಿದರೆ ಗತಿಏನು ಎಂಬ ಹೆದರಿಕೆ ನಂಗೂ ಕಾಡಿತು ಎರಡುತಿಂಗಳವರೆಗೆ ನಿರಂತರ ಟೆನಶನ್ ಕೊನೆಗೆ ಭೀಮಪ್ಪ ಬಂದ.ಅನಾರೋಗ್ಯದ ಕಾರಣ ಹೇಳಿದ. ಸಂಕಲನ ಶೀಘ್ರಹೊರತರುವುದಾಗಿ ದುಡ್ಡು ಸಂಗ್ರಹಿಸಲು ನನ್ನ ಹೆಸರು ಬಳಸಿಕೊಂಡಿದ್ದು ನಿಜಅಂತ ಒಪ್ಪಿಕೊಂಡ. ನಾ ಅದುವರೆಗೆ ಸಂಕಲಿತ ಎಲ್ಲ ಕವಿತೆಗಳ ಹಸ್ತಪ್ರತಿ ಅವನ ಕೈಯ್ಯಲ್ಲಿತ್ತು ಅವನಿಗೆ ಇದರಿಂದ ಬಿಡುಗಡೆಗೊಳಿಸೆಂದು ಕೇಳಿದೆ. ಅವನಯಾವ ಪ್ರಲೋಭನೆಗಾಗಲಿ ಮನವಿಗಾಗಲಿ ನಾ ಒಪ್ಪಲಿಲ್ಲ.

ಮುಂದೆ ಪೇಪರ್ ನಲ್ಲಿ ಅವ ಮಾಡಿದ ಮೋಸದ ವರದಿ ಪ್ರಕಟವಾಗಿತ್ತು. ಅನೇಕ ಜನರಿಗೆ ಅವ ಸಂಕಲನ ತರುವುದಾಗಿ ಮೋಸಮಾಡಿದ್ದನಂತೆ. ನೋವಾಗೋದು ಇಂತಹ ಹೀನ ಕೆಲಸಗಳಿಗೆ ಬೇಂದ್ರೆಯವರ ಹೆಸರು ಬಳಸಿಕೊಂಡಿದ್ದುದು. ನಾ ಗೊತ್ತಿಲ್ಲದೆಯೇ ಹುದುಲಾಗ ಸಿಕ್ಕಿ ಕೊನೆಗೆ ಹೊರಬಂದಿದ್ದೆ. ಪತ್ರಮಿತ್ರತ್ವದ ಇನ್ನೊಂದು ಮುಖದ ಪರಿಚಯಾನು ಆದಂಗಾತು..



Saturday, December 6, 2014

ಸುಮ್ಮನ ನೆನಪು...೧



ಈ ಫೇಸಬುಕ್, ವಾಟ್ಸಅಪ್ ಯುಗ ಇನ್ನೂ ಶುರು ಆಗಿರಲಿಲ್ಲದಾಗ "ಪತ್ರಮಿತ್ರ" ಅನ್ನುವ
ಪ್ರಕಾರ ಇತ್ತು. ಕನ್ನಡದಾಗ ಮಂಗಳ, ಉತ್ಥಾನ ಹಂಗ ಇಂಗ್ಲೀಶಿನ್ಯಾಗ 'ಸ್ಪೋರ್ಟವೀಕ್' ಮತ್ತು ಇನ್ನೂ
ಕೆಲವು ಪತ್ರಿಕೆಗಳು ಆಸಕ್ತರ ವಿಳಾಸ ಪ್ರಕಟಿಸಿ ಗೆಳೆತನ ಬೆಳೆಯಲು ಉಪಕಾರ ಮಾಡತಿದ್ವು. ನಂದು
ಕಾಲೇಜು ಮುಗದಿತ್ತು ನಂಗೂ ಇದರ ಹುಚ್ಚು ಹಿಡೀತು..ಎಷ್ಟು ಅಂದರ ಯಾಕೋ ನಂಗ 'ಉಮೇಶ' ಹೆಸರು
ಪಸಂದ ಬರಲಿಲ್ಲ ನಮ್ಮವ್ವ ಯಾವಾಗೋ ಹೇಳಿದ್ದಳು ಹೆಸರ ಇಡಾವರು "ಹೇಮಂತ" ಅಂತನೂ ಜೇಳಿದ್ರು ಅಂತ.
ತಗೊರಿ ನಂಗೂ ಸೇರತು ಯಾವ ಕಾಯಿದೆಯ ಉಸಾಬರಿಗೆ ಹೋಗದೆ ನಾನ ಹೆಸರು ಹೇಮಂತ್ ದೇಸಾಯಿ ಅಂತ
ಬದಲಾಯಿಸಿಕೊಂಡೆ. ನಾ ಮ್ಯಾಲ ಹೇಳಿದ ಪತ್ರಿಕೆಗ ಕಳಿಸಿದೆ ವಿಳಾಸ ಅದ ಇತ್ತು ದೇಸಾಯಿ ವಾಡೆ,ಕಲಾದಗಿ ಓಣಿ
ಹುಬ್ಬಳ್ಳಿ ಅಂತ. ಇದು ಮುಂದಿನ ಅನೇಕ ಗೊಂದಲಕ್ಕ, ಸಂಭ್ರಮಕ್ಕ ಸಿಹಿ ಕಹಿ ಅನುಭವಕ್ಕೂ ಕಾರಣ ಆತು.

ಯಾವಾಗಲೂ ಬರುವ ಪೋಸ್ಟಮನ್ "ಇಲ್ಲೆ ಹೇಮಂತ ದೇಸಾಯಿ"ಯಾರು ಅಂತ ಕೇಳಕೋತ ಬಂದಾಗ ನಾ ಇರಲಿಲ್ಲ
ಯಾರೂ ಅಂಥಾವರು ಇಲ್ಲ ಅಂತ ಅವಗ ಹೇಳಿಕಳಿಸಲಾಗಿತ್ತು. ಮನಿಗೆ ಬಂದ ನಂಗ ಈ ಸುದ್ದಿ ಗೊತ್ತಾತು..ಮರಾಠಾಗಲ್ಲಿ
ಪೋಸ್ಟ ಆಫೀಸಿಗೆ ಹೋಗಿ ನಾನ ಹೇಮಂತ್ ದೇಸಾಯಿಅಂತ ಅವನಿಗೆ ತಿಳಸಿ ,ಮುಂದ ಈ ಹೆಸರಿಗೆ ಪತ್ರ ಬಂದರ
ನಮ್ಮನಿಗೆ ಹಾಕರಿ ಅಂತ ಹೇಳಿ ಮೊದಲ ಪತ್ರ ತಗೊಂಡು ಬಂದೆ. ಅದು ಶರ್ಮಿಳಾ ಪಣಸಾರೆ ಅನ್ನಾಕಿ ಕಳ್ವಾ,ಠಾಣೆಯಿಂದ
ಬರದಿದ್ದುದು. ಮರಾಠಿಯೊಳಗ ಇತ್ತು. ನನ್ನ ಹೆಸರು ಅಕಿಗೆ ಮಹಾರಾಷ್ಟ್ರೀಯನ್ ಅನಿಸಿ ನಾ ಮರಾಠಿನ ಅಂತ ಗ್ರಹಿತ ಹಿಡದು ಅಕಿ ಬರದಿದ್ಲು. ನಂಗ ಬರೋ ಹರಕುಮುರಕು ಮರಾಠಿ ಅವಾಗ ಉಪಯೋಗ ಬಂತು..ಮೊದಲಿಗೆ ಸೆಳೆದಿದ್ದು ದುಂಡ ಅಕ್ಷರ..ಇಡೀ ಪತ್ರದಾಗ ಇದ್ದಿದ್ದು ತನ್ನ ಕಾಲೇಜು, ಅಲ್ಲಿನ ಜೀವನ ಮೆಚ್ಚಿನ ಹೀರೋ ನೋಡಿದ ಸಿನೇಮಾ ಗಳ ಬಗ್ಗೆ. ನಂಗ ಪತ್ರ ಬರದು ರೂಡಾ ಏನೋ ಇತ್ತು ಆದ್ರ ಈ ಪತ್ರ ವಿಶೇಷದ್ದು..ಅದೂ ಹುಡುಗಿದು..ನಂಗ ತಿಳದ ಮರಾಠಿ ಹಂಗ ಇಂಗ್ಲೀಶು ಎರಡೂ ಸೇರಿ ಬರದೆ,ಮೂರು ದಿನ ತಗೊಂಡೆ ಆ ಮಾತು ಬ್ಯಾರೆ. ಅಕಿಯಿಂದ ಉತ್ತರ ಬಂತು..ಬೋನಸ್ ಅಂದ್ರ ಅಕಿ ನನ್ನ ಅಡ್ರೆಸ್ ತನ್ನ ಗೆಳತಿ ಸುನೇತ್ರಾ ದಿಗೆ ಗಕೊಟ್ಟಿದ್ದಳು ಸುನೇತ್ರಾ ಬರದ ಪತ್ರನೂ ಜೋಡಿನ ಬಂತು. ಅದೂ ಮರಾಠಿಯೊಳಗ ಇತ್ತು.ಡಬಲ್ ಖುಶಿ ನಂಗ..ಇಬ್ಬರಿಗೂ ಉತ್ತರ ಬರೆದೆ( ಇಂಥಾ ಪತ್ರ ಎಲ್ಲಾ ಛಂದನ್ನೂ ಕಲರ್ ಪೇಪರಿನ್ಯಾಗ ಬರೀಬೇಕು ಅಂತ ಗೆಳ್ಯಾ ಶಿಂಧೆ ಹೇಳಿದ) ಏನೋ ಸಾಧಿಸಿದ ತೃಪ್ತಿ ಒಂದು ಕಡೆ ಮುಂದ ಅವರ ಗೆಳೆತನ ಬೆಳೆದು ಮುಂದ ಹಂಗ ಮುಂದ ಹಿಂಗ ಅನ್ನುವ ರಂಗುರಂಗಿನ ಕನಸೂ ಸುರು ಆದವನ್ರಿ.

ಈ ಪತ್ರಮಿತ್ರ ಪ್ರಕರಣಕ್ಕ ಟ್ವಿಸ್ಟ ಸಿಕ್ಕಿದ್ದು ನಮ್ಮಪ್ಪನಿಂದ. ಅವಗ ನಾ ಹೆಸರು ಬದಲಾಯಿಸಿದ್ದು ವಿಚಿತ್ರ ಅನಿಸಿತ್ತು ಮೇಲಾಗಿ ಎಲ್ಲೋ ಇರಾವರು ಅವರು ಅವರ ಜೋಡಿ ಅದೆಂತಾ ಗೆಳತನ ಅನ್ನೋದು ಅವನ ವಾದ. ಸೂಟಿಗೆ ಬಂದ ನಮ್ಮಕ್ಕನ ಮುಂದ "ನಿನ್ನ ತಮ್ಮ ಈಗ ದೊಡ್ಡಾವಾಗ್ಯಾನ ನಾವಿಟ್ಟ ಹೆಸರು ಬದಲಾಯಿಸಿಕೊಂಡಾನ...ಹುಡುಗ್ಯಾರ ಪತ್ರ ಬರತಾವ ಅವಗ..." ಅಂದ.ಒಂದಂತೂ ಖಾತರಿ ಆಗಿತ್ತು ನಮ್ಮಪ್ಪ ನಂಗ ಬಂದಿದ್ದ ಪತ್ರಾ ಎಲ್ಲಾ ಓದ್ಯಾನ ಅಂತ. ಜೀವನದಾಗ ಮೊದಲಸಲಾ ನಂದ ಒಂದು ಖಾಸಗಿ ಜಗಾ ಇರಬೇಕು ಅದರಾಗ ಯಾರಿಗೂ ಬರಕೊಡಬಾರದು ಅನಿಸಿತು. ಬರೇ ಹುಡುಗ್ಯಾರದ ಪತ್ರ ಬರಲಿಲ್ಲ.. ಹುಡುಗುರುದು ಇದ್ದವು, ತಾಳಿಕೋಟಿ, ರಬಕವಿ, ಗದಗ ಹಂಗ ದೂರದ ಬೆಂಗಳೂರು... ಇದು ನಂಗ ಸೇರಲಿಕ್ಕತ್ತು. ಮುಂಡಗೋಡದಿಂದ ಪತ್ರ ಬರೆದ ಸಂಜೀವ್ ರೇವಣಕರ್ ಅನ್ನಾವ ಶನಿವಾರ ಹುಬ್ಬಳ್ಳಿಗೆ ಬರುವುದಾಗಿ...ವಿಳಾಸ ಕೇಳಿದ ಕೊಟ್ಟೆ. ಹೇಳಿದಂಗ ಶನಿವಾರ ಅವ ಬಂದ..ಹೊರಗ ಊಟಕ್ಕ ಹೋದ್ವಿ..
ಜೀವನದಾಗ ಹಿಂಗ ಅಪರಿಚಿತಗೆಳೆಯನ ಮುಖಾಮುಖಿ..ಹೊಸಾ ಅನುಭವ ಅದು.ಬಿಯರ್ ಮತ್ತು ಚಿಕನ್ ರುಚಿ ನೋಡಿದ್ದು ಅವತ್ತ ಮೊದಲು.....


ಮುಂದುವರೆಯಲಿದೆ...........

Friday, November 7, 2014

ಈ ಹೊತ್ತಿಗೆ ಕಥಾ ಕಮ್ಮಟ--೨೦೧೪



 ಹಿಂದೆ ಕುಪ್ಪಳಿಯಲಿ ಎರಡು-ಮೂರುದಿನ ಕಥಾ ಕಮ್ಮಟದಲ್ಲಿ ಭಾಗವಹಿಸಿದ್ದೆ. ಸ್ವಲ್ಪ ಕಹಿಯೇ ಅನ್ನಬಹುದಾದ ಅನುಭವ
ಅದರದು. ಶ್ರೀಮತಿ ಜಯಲಕ್ಷ್ಮಿ ಪಾಟಿಲ್ ಅವರ ಮುಂದಾಳತ್ವದ "ಈ ಹೊತ್ತಿಗೆ" ಇದು ಪ್ರತಿತಿಂಗಳು ಒಂದು ಕಡೆ ಸೇರಿ ನಿರ್ಧಾರವಾದ ಕತೆ/ಕಾದಂಬರಿ ಬಗ್ಗೆ ಚರ್ಚಿಸುತ್ತಾರೆ.ಒಂದು ಸಲ ಮಾತ್ರ ನಾನು ಇದರಲ್ಲಿ ಭಾಗಿಯಗಿದ್ದು. ಆ ಗುಂಪಿನ ಸದಸ್ಯರೆಲ್ಲ ಸಾಹಿತ್ಯದಲ್ಲಿ ಒಳ್ಳೆ ಅಭಿರುಚಿ ಹೊಂದಿದವರು. ಈಗ ಆ ಗುಂಪಿಗೆ ಶ್ರೀ ದಿವಾಕರ್ ಅವರ ಮಾರ್ಗದರ್ಶನ ಲಭಿಸಿದೆ. ಅದು ಅ ಗುಂಪಿನ ಹಿರಿಮೆ ಹೆಚ್ಚಿಸಿದೆ. ಇರ್ಲಿ .ಜೆಪಿ ಮೇಡಂ ಕಥಾಕಮ್ಮಟ ಆಯೋಜಿಸಲಿದ್ದಾರೆ ಅನ್ನುವ ಸುದ್ದಿ ಕೇಳಿ ಹೆಸರು ನೊಂದಯಿಸಿದೆ.ದಿವಾಕರ್, ಹೆಚ್ ಎಸ್ ಆರ್ ಮತ್ತು ಚ.ಹ. ರಘುನಾಥ್ ಸಂಪನ್ಮೂಲ ವ್ಯಕ್ತಿಗಳಾಗಿ ಬಂದರು.

ಮೊದಲ ದಿನ ಪರಿಚಯ ಮುಗಿದಮೇಲೆ ಹೆಚ್ ಎಸ್ ಆರ್ ಕನ್ನಡ ಕಥೆಗಳ ಇತಿಹಾಸ ಸದ್ಯದ ಸ್ಥಿತಿಗತಿಗಳ ಬಗ್ಗೆ ಸೊಗಸಾಗಿ ಮತ್ತು ನಿರಾಳವಾಗಿ ಮಾತಾಡಿದರು. ಅನೇಕ ಆಯಾಮಗಳ ಪರಿಚಯಿಸುತ್ತ ಕತೆ ಹೇಗಿರಬೇಕು ಇಂದಿನ ಕತೆ ಹೇಗಿವೆ ಎಂಬ ಕಡೆ ಬೆಳಕುಚೆಲ್ಲಿದರು. ಅವರಂದ ಕೆಲ ಸಂಗತಿ ಇನ್ನೂ ರಿಂಗಣಿಸಿವೆ. ಅವರು ಪ್ರಮುಖವಾಗಿ ಈ ಸಾಹಿತ್ಯ
ಚಳುವಳಿಗಳು ಹೇಗೆ ಜನಜೀವನದಿಂದ ವಿಮುಖವಾದವು ಎಂದು ಹೇಳಿದರು.ಸ್ತ್ರೀವಾದಿ ಸಾಹಿತ್ಯ ಚಳುವಳಿಗಳು ಹೇಗೆ ಪುರುಷರನ್ನು ದ್ವೇಷಿಸುವ ಕಡೆ ಗಮನಹರಿಸಿ ಸಾಮಾನ್ಯ ಶೃಂಗಾರದ ಪರಿಭಾಶೆ ಅಥವಾ ಅದರಲ್ಲಿ ಸಿಗುವ ಆನಂದವನ್ನು ಅವಗಣಿಸಿದವು ಅಂತ. ಗಂಡಸಿನ ಸಹಕಾರ ಇಲ್ಲದಿರೆ ಶೃಂಗಾರ ನೀರಸ ಅಂತಂದರು.ಅಂತೆಯೇ ಬಂಡಾಯ ಚಳುವಳಿ ಹೇಗೆ ಜನಸಾಮಾನ್ಯರ ನೋವಿಗೆ ಸ್ಪಂದಿಸದೇ ವಿರೋಧಿಸಿ ಬರೆದವರು ತಮ್ಮ ಸ್ಥಾನಮಾನ ಗಳಿಸಿ ಆ ನಂತರ ಮೂಲಹೋರಾಟವನ್ನೇ ಮರೆತರು ಅಂತ.ನಾನು ಮೊದಲಬಾರಿ ಅವರ ಮಾತು ಕೇಳಿದ್ದು.ಮೂರ್ತಿ
ಚಿಕ್ಕದಾದರೂ ಕೀರ್ತಿ ದೊಡ್ದದು ಅಂತಅವರನ್ನು ನೋಡಿ ಹೇಳಬಹುದು. ತುಂಬ ಸರಳ ವ್ಯಕ್ತಿ. ಚೂರೂ ಅಹಂಕಾರ ಇಲ್ಲ. ಕತೆಗಳ ಬಗ್ಗೆ ಅವುಗಳ ಔಚಿತ್ಯಗಳ ಬಗ್ಗೆ ಸೊಗಸಾಗಿ ಹೇಳಿದರು. ಆಶ್ಛರ್ಯವೆಂದರೆ ಕೆಲವು ಕತೆ/ಕವಿತೆಗಳಲ್ಲಿನ ಸಾಲುಗಳನ್ನು ಉದ್ಧರಿಸಿದ್ದು. "ತುಪ್ಪ ಹಚ್ಚಿದ ಕನ್ನಡಿ" ಯಿಂದ ಜಗ ನೋಡಿ ಕತೆ ಬರೆಯುವವರ ಬವಣೆಗಳ ಬಗ್ಗೆ ಹಾಗೂ ಅವರ ವಿಚಿತ್ರ ಧೋರಣೆಗಳ ಬಗ್ಗೆ ಕುಹಕ ವಾಡಿದರು.

ನಮಗೆ ಮೇಲ್ ನಲ್ಲಿ ಎರಡು ಕತೆ "ದಗಡು ಪರಬ್ ನ ಅಶ್ವಮೇಧ"-- ಜಯಂತ್ ಕೈಕಿಣಿ ಬರೆದದ್ದು ಹಾಗೂ "ಕಥಾನಾಯಕಿಯೂ ಚರಿತ್ರಪಾತ್ರಗಳು"--ತುಳಸಿ ವೇಣುಗೋಪಾಲ್ ಬರೆದದ್ದು.ಕಳಿಸಿದ್ದರು. ಎರಡನೆಯ ಕತೆ ಕನ್ನಡದ ಅತ್ಯಂತ ಶ್ರೇಷ್ಠಕತೆಗಳಲ್ಲಿ ಒಂದು ಅಂತ ಹೇಳಲು ಅಡ್ಡಿಯಿಲ್ಲ. ಮೊದಲ ಕತೆ ಲೇಖಕ ಬಳಸಿದ ಶೈಲಿ,ತಂತ್ರ ಸ್ಥಳಪುರಾಣ ಹೀಗೆ ಸುಮಾರು ಎರಡುಗಂಟೆ ಚರ್ಚೆ ಅದರ ಬಗ್ಗೆ ಆಯಿತು. ದಿವಾಕರ್ ಅವರು ಕತೆಗಳಲ್ಲಿ ಅಡಗಿದ Round charecter ಮತ್ತು Flat charecter ಗಳನ್ನು ಗುರುತಿಸುವುದು ಹೇಗೆ ಕತೆಗಾರ ಬಳಸಿದ ತಂತ್ರ ಅವನ Theme ಹೀಗೆ ಎಲ್ಲದರ ಬಗ್ಗೆ ಚೆನ್ನಾಗಿ ಹೇಳಿದರು.ಆಗೀಗ ಭಾಗವಹಿಸಿದವರು ಕೇಳುವ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳು ಉತ್ತರ ಕೊಡುತ್ತಿದ್ದರು. ಒಂದೇ ಕೊರಗು ಅದು ಎರಡನೇ ಕತೆ ಚರ್ಚಿಸಲು ವೇಳೆ ಸಾಲದೇ ಹೋಗಿದ್ದು.ಮಧ್ಯಾಹ್ನ ಚ. ಹ. ರಘುನಾಥ್ ನಡೆಸಿಕೊಟ್ಟರು. ಅವರು ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯ ಸಂಪಾದಕರು. ವಾರಕ್ಕೆ ಏನಿಲ್ಲಎಂದರೂ ಸುಮಾರು ೪೦ ಕತೆ ಬರುತ್ತವೆ..ಎಲ್ಲ ಕತೆಗಾರರೂ ತಮ್ಮತಮ್ಮ ಕತೆಯೇ ಉತ್ತಮ ಅಂದುಕೊಂಡಿರೋದು ..ಪ್ರಕಟಿಸದ ಸಂಪಾದಕರಿಗೆ ಬೈದುಕೊಳ್ಳೋದು ಇದು ನನ್ನಂತಹ ಕತೆಗಾರರೂ ಮಾಡುವ ಕಿತಾಪತಿ. ಮೇಲ್ ನಲ್ಲಿ ಕತೆ ಕಳಿಸುವವರದು ಇನ್ನೊಂದು ಪಾಡು..ಒಂದು ವೇಳೆ ಸಂಪಾದಕ ಕತೆ ಸುಮಾರಾಗಿದೆ..ಪ್ರಕಟಿಸಲು ಆಗುವುದಿಲ್ಲ ಅಂದರೆ, ಮರುಕ್ಷಣ ಆ ಸಂಪಾದಕನ ಇನ್ ಬಾಕ್ಸಿಗೆ ಅದೇ ಲೇಖಕ ಮತ್ತೊಂದು ಕತೆ ಕಳುಹಿಸಿರುತ್ತಾನೆ..ಅಂತ ಹೇಳಿ ವ್ಯಂಗ್ಯವಾಡಿದರು. ಹೇಗೆ ಪ್ರಮುಖ ಪತ್ರಿಕೆ ವಿಜಯಕರ್ನಾಟಕ ತನ್ನ ಪುರವಣಿಯಲ್ಲಿ ಕತೆ ಪ್ರಕಟಿಸುತ್ತಿಲ್ಲ..ಈಗಿನ ನ್ಯೂಸ್ ಪ್ರಿಂಟ್ ದರದಲ್ಲಿ ಪುರವಣಿಯಲ್ಲಿ ಜಾಹೀರಾತು ಹಾಕದೆ ಪುರವಣಿ ಹೊರತರಲು ಸಾಧ್ಯವಿಲ್ಲ..ಹೀಗೆ ಸಂಪಾದಕರ ಅಳಲು ತೋಡಿಕೊಂಡರು.ಅದಕ್ಕೆ ಯಾವುದೇ ಕತೆಗಾರ ಪದಮಿತಿ ಹಾಕಿಕೊಂಡು ಬರೆದರೆ ಅದು ಉಭಯತರರಿಗೂ ಅನುಕೂಲ ಅನ್ನೋ ಮಾತು ಹೇಳಿದರು.

ಒಟ್ಟಿನಲ್ಲಿ ನಾ ಹಿಂದೆ ಕುಪ್ಪಳಿಯಲ್ಲಿ ಭಾಗವಹಿಸಿದ ಕಹಿಯನ್ನು ಈ ಕಮ್ಮಟ ಅಳಿಸಿತು. ದಿವಾಕರ್ ಹೇಳಿದ ಹಾಗೆ ಇಂತಹ ಸೊಗಸಾದ ಕಮ್ಮಟಗಳನ್ನು ನಡೆಸುವುದು ಸವಾಲಿನ ಸಂಗತಿ. ಸಾಹಿತ್ಯ ಅಕಾಡೆಮಿ, ಕಸಾಪ ಇತರೇ ಸಂಸ್ಥೆಗಳು ಈ ರೀತಿಯ ಕಮ್ಮಟ ಆಯೋಜಿಸುವುದು ಕನಸಿನ ಮಾತೇ ಸರಿ. ಅಂತಹುದರಲ್ಲಿ ಸೊಗಸಾಗಿ ನಡೆಸಿಕೊಟ್ಟ ಈ ಹೊತ್ತಿಗೆ ತಂಡ ಮತ್ತು ಜೆಪಿ ಮೇಡಮ್ ಅಭಿನಂದನಾರ್ಹರು. ಇಂತಹ ಕಮ್ಮಟ ಬರುತ್ತಲಿರಬೇಕು..


Saturday, October 25, 2014

ಚೌಕಟ್ಟಿನಾಚೆ

ಪ್ರಸ್ತುತ ಈ ಕತೆಗೆ ಶ್ರೀ ವಿದ್ಯಾದರ್ ಕನ್ನಡ ಪ್ರತಿಷ್ಠಾನ, ಮುಂಬೈ ದವರು ಏರ್ಪಡಿಸಿದ ಕಥಾಸ್ಫರ್ಧೆಯಲ್ಲಿ ಮೂರನೇ ಬಹುಮಾನ ಬಂದಿತ್ತು. ಕತೆ ಓದಿ ನಿಮ್ಮ ಅನಿಸಿಕೆ ಅಭಿಪ್ರಾಯ ಜರೂರು ತಿಳಿಸಿ.

-------------------------------------------------------------------
“ಆರ್‍ ಯು ಕಂಫರ್ಟೆಬಲ್ ಇನ್ ಬೆಡ್” ಅವನ ಪ್ರಶ್ನೆ ಅನಿತಾಗೆ ಮೊದಲು ಅರ್ಥವಾಗಲೇ ಇಲ್ಲ. ನಿಧಾನವಾಗಿ ವಾಸ್ತವಕ್ಕೆ ಬಂದಳು. ಉತ್ಸಾಹ, ಆತಂಕ ಎಲ್ಲ ಮಾಯವಾಗಿ ಎದುರಿನ ಅವನನ್ನು ನಿರುಕಿಸಿದಳು ಹಾಗೆಯೇ ಅರಿವಿಗೆ ಬಂದಿದ್ದು... ತನ್ನ ಗಂಡ ಎಂದೂ ಈ ಪ್ರಶ್ನೆ ಕೇಳಿರಲೇ ಇಲ್ಲ ಅಂತ. ಪ್ರಶ್ನೆಗೆ ಏನು ಉತ್ತರಿಸುವುದು ಎಂಬ ಗೊಂದಲವಿತ್ತು. ಇವಳ ದ್ವಂದ್ವ ಅರಿತವನಂತೆ ಆತ ಮುಂದುವರೆಯಲಿಲ್ಲ. ನಿಧಾನವಾಗಿ ಬೀರ್ ಹೀರಲು ಸುರು ಇಟ್ಟ.
“ನಿಜ ಹೇಳೂದಾದ್ರೆ ಇದೆಲ್ಲ ಅನಬಿಲಿವೇಬಲ್... ಇದು ಸಾಧ್ಯನೇ ಅಂತ ಅನ್ಸುತ್ತೆ...” ಅನಿತಾಳ ಗೊಂದಲ ಅವಳ ದನಿಯಲ್ಲಿ ಇಣುಕಿತ್ತು.
“ರಿಲಾಕ್ಸ್... ಈ ಘಟನೆ ಅಥವಾ ಈ ಗೇಮ್‍ನ ಉದ್ದೇಶವೇ ಹೀಗೆ... ಒಂದೇ ತರಹದ ಅಡಿಗೆ ಪ್ರತಿದಿನ ಉಂಡರೆ ಹೇಗೆ ಬೇಸರ ಆಗುತ್ತದೋ ಹಾಗೆ... ಅದೇ ಗಂಡ ಅಥವಾ ಹೆಂಡತಿ. ನನಗೆ ಈ ಗೇಮ್‍ನಲ್ಲಿ ಹಿಂದೆ ಭಾಗವಹಿಸಿದ ಅನುಭವ ಇದೆ. ನಿಮ್ಮದು ಮೊದಲಸಲ ಅನ್ಸುತ್ತೆ ಅಲ್ಲ...”
ಅವನ ಪ್ರಶ್ನೆಗೆ ತಲೆ ಆಡಿಸಿದಳು. ಕ್ಲಬ್ಬಿಗೆ ಮೆಂಬರ ಶಿಪ್ ಸಹಿ ಮಾಡಿಸಿಕೊಳ್ಳುವಾಗ ಗಂಡ ಈ ಆಟದ ಬಗ್ಗೆ ಹೇಳಿರಲಿಲ್ಲ. ಲಕ್ಕಿ ಡ್ರಿಪ್‍ನಲ್ಲಿ ತಮ್ಮ ಹೆಸರು ಕೂಗಿದಾಗಲೂ ನಂಬಿಕೆ ಬಂದಿರಲಿಲ್ಲ. ತನ್ನ ಮೆಂಬರ್‍ಗಳಿಗೆ ಕೊಡುವ ವಿಶಿಷ್ಟ ಸೇವೆಯೇ ಈ ಆಟ. ಕಳೆದ ಮೂರುವರ್ಷಗಳಿಂದ ಈ ಸ್ಕೀಮನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಹೀಗೆ ಲಕ್ಕಿ ಡಿಪ್‍ನಿಂದ ಎರಡು ಜೋಡಿ ಆರಸಲಾಗುತ್ತದೆ. ಆ ಜೋಡಿಗಳು ಅದಲು ಬದಲಾಗಬೇಕು. ಅಂದರೆ ಆ ಕಡೆಯ ಗಂಡನ ಜೊತೆ ಈ ಕಡೆಯ ಹೆಂಡತಿ... ಆ ಕಡೆಯ ಹೆಂಡತಿ ಜೊತೆ ಈ ಗಂಡ ಇದಕ್ಕೆ ವೈಫ್ ಸ್ವಾಪಿಂಗ್ ಅಂತಾರೆ ಅಂತ ಅನಿತಳ ಗಂಡ ತಿಳಿಸಿದ್ದ. ಬರೀ ವೈಫ್ ಯಾಕೆ ಹಸ್ಬೆಂಡ್ ಸ್ವಾಪಿಂಗ್ ಕೂಡ ಅಲ್ಲವೇ ಅನ್ನುವ ಅನಿತಾಳ ಪ್ರಶ್ನೆಗೆ ಹುಬ್ಬು ಕುಣಿಸಿದ್ದ. ಅನಿತಾ-ಅನಿಲ್ ಮದುವೆಯಾಗಿ ಐದುವರ್ಷ ಮೂರುವರ್ಷದ ಮಗಳು ಮುಂದಿನ ವರ್ಷದಿಂದ ಶಾಲೆಗೆ ಹೋಗುತ್ತಾಳೆ. ಇಬ್ಬರೂ ದುಡಿಯುತ್ತಾರೆ. ಕೆಲಸದ ಒತ್ತಡ ವಿಪರೀತವಿದೆ. ಫ್ಲಾಟ್‍ಬುಕ್ ಮಾಡಿದ್ದು ಇನ್ನೊಂದೆರಡು ತಿಂಗಳಲ್ಲಿ ಪೂಸೆಶನ್ ಸಿಗುವುದಿದೆ. ಮೇಲ್ನೋಟಕ್ಕೆ ಸುಖ ಹಾಗೂ ಸಂತೃಪ್ತತೆಯ ಕುಟುಂಬ ಇಬ್ಬರಲ್ಲೂ ವೃತ್ತಿಯ ಬಗ್ಗೆ ಕಳಕಳಿ ಇದೆ. ಮಹತ್ವಾಕಾಂಕ್ಷೆ ಇದೆ. ಮಗಳಿಗೂ ಏನೂ ಕಮ್ಮಿ ಮಾಡಿಲ್ಲ. ವೀಕೆಂಡ್ ಪೂರ್ತಿ ಅವಳಿಗೆ ಮೀಸಲಿಟ್ಟಿರುವುದಿದೆ. ಆದರೂ ಏನೋ ಚಿಂತೆ ಇದೆ... ಕೊರತೆ ಇದೆ. ಆದರೂ ಮೊದಲಿನ ಹಾಗೆ ಇಲ್ಲ... ಏನನ್ನೂ ಕಳೆದುಕೊಳ್ಳುತ್ತಿದ್ದೇವೆ... ಇದು ಇಬ್ಬರಿಗೂ ಅನಿಸಿತ್ತು. ಹೀಗೆ ಅಂತ ಬೊಟ್ಟುಮಾಡಿ ತೋರಿಸುವುದು. ಸುಲಭದ ಮಾತಾಗಿರಲಿಲ್ಲ. ಅನಿಲ್ ಹೇಳಿದಾಗ ಅನಿತಾ ತಲೆ ಆಡಿಸಿದಳು. ಅವಳಲ್ಲೂ ಅದು ಇತ್ತ್ತು. ಆ ಕೊರತೆಯ ಭಾವ ಅವಳಿಗೂ ಬಾಧಿಸುತ್ತಿತ್ತು. ಇಬ್ಬರು ಹುಡುಕುತ್ತಿದ್ದರು. ಆ ಹಿಂದಿನ ದಿನಗಳ ಸುಖವನ್ನು ಉನ್ಮಾದವನ್ನು ಆದರೆ ಮೊದಲಿನ ಹಾಗೆ ಇರಲಾಗುತ್ತಿಲ್ಲ. ಅನಿಲ್, ಅನಿತಾ ಗೆಳೆಯರೊಡನೆ ಚರ್ಚಿಸಿದರು. ನೆಟ್ ತುಂಬ ಹರಡಿರುವ ಕೌನ್ಸಲಿಂಗ್‍ಗೂ ಮೊರೆಹೋದ್ರು. ಆದರೆ ಪ್ರಯೋಜನ ಮಾತ್ರ ಶೂನ್ಯ. ಈ ಕ್ಲಬ್ ಹಾಗೂ ಅದರ ಸದಸ್ಯರಲ್ಲಿ ನಡೆಸುವ ಲಕ್ಕಿಡಿಪ್ ಎಲ್ಲ ಹೊಸತೆನಿಸಿದ್ದವು. ಇಬ್ಬರೂ ಪರಸ್ಪರ ಒಪ್ಪಿಗೆಯಿಂದಲೇ ಮುಂದುವರೆದದ್ದು.
***
ಬಿಸಿ ಹಾಗೂ ತಣ್ಣಗಿನ ಹದದ ಮಿಶ್ರಣ. ತುಂತುರು ತುಂತುರಾಗಿ ಬೀಳುತ್ತಿತ್ತು. ಸುಹಾಸ್ ಕಣ್ಣುಮುಚ್ಚಿ ಆಸ್ವಾದಿಸುತ್ತಿದ್ದ. ಹೀಗೆಲ್ಲ ಆದೀತು ಎಂದು ಅವ ಊಹಿಸಿರಲಿಲ್ಲ. ಆದರೆ ಅವನು ಯಾವಾಗಲೂ ಆಶಾವಾದಿ. ಅಂದು ನಡೆದು ಹೋದ ವಿಷಯಗಳ ಪುನರಾವರ್ತನೆ ಮಾಡಿಕೊಳ್ಳುತ್ತ ಕೊರಗುವುದು ಮೂರ್ಖತನ ಅನಿಸಿತವಗೆ. ಆದರೆ ತನ್ನ ವರ್ತನೆಯಿಂದ ಅವಳು... ಹೆಸರು ಅನಿತಾ ಅಲ್ಲವೇ... ಇಂಪ್ರೆಸ್ ಆಗಿದ್ದಾಳೆ. ತಾನೇ ತನ್ನ ನಂಬರ್ ಕೊಟ್ಟಿದ್ದಾಳೆ. ಹೊಸಬಳು... ಅನೇಕ ದ್ವಂದ್ವಗಳಿರುತ್ತವೆ... ಹಾಗೆಯೇ ಎಲ್ಲ ಗೋಜಲಾಗಿರುತ್ತದೆ. ತಾನೇ ಸಂಭಾಳಿಸಿಕೊಳ್ಳಬೇಕು. ಈ ಸಂಭಾಳಿಸಿಕೊಳ್ಳುವಿಕೆ ಒಂಥರಾ ರೂಢಿಯಾದಂತಾಗಿದೆ ಅಲ್ಲವೆ... ಅದೂ ಈ ಮೂರು ವರ್ಷಗಳಲ್ಲಿ. ಸುಮತಿ ಡಿಮಾಂಡಿಂಗ್ ಆದ ಮೆಲೆ ತಾನು ಎಲ್ಲ ಅಡ್ಜೆಸ್ಟ್‍ಮೆಂಟ್‍ಗಳ ಮೊರೆ ಹೊಕ್ಕಿರುವುದು. ಈ ಸ್ಥಿತಿ ತನಗೆ ಪೂರ್ತಿ ಒಪ್ಪಿಗೆ ಇಲ್ಲ. ಆದರೂ ಅನಿವಾರ್ಯವಾಗಿ ಒಗ್ಗಿ ಕೊಳ್ಳಬೇಕಾಗಿದೆ. ನೀರು ಹಿತವಾಗಿತ್ತು. ಈ ಶಾವರ್‍ನಿಂದ ಹೊರಹೋಗುವುದೇ ಬೇಡ ಅಂತ ಸುಹಾಸ್ ಅಂದುಕೊಂಡ ನೀರಿನ ಹಿತ ಅನುಭವಿಸುತ್ತಲೇ ಕಳೆದುಹೋದ.
ಸುಮತಿ ಅಂದರೆ ಸುಹಾಸನ ಹೆಂಡತಿ ಬಿಂದಾಸ್ ಆಗಿ ಬೆಳೆದವಳು. ಸುಹಾಸನ ಜೊತೆ ಅವಳ ಮೊದಲ ಭೇಟಿಯೂ ವಿಚಿತ್ರಸ್ಥಿತಿಯಲ್ಲಿಯೇ ಆಗಿತ್ತು. ರಿಸಾರ್ಟ್ ಒಂದರಲ್ಲಿ ಪಾರ್ಟಿ ನಡೆಯುತ್ತಿತ್ತು. ಗೆಳೆಯನೋರ್ವ ಸುಮತಿಗೆ ಸುಹಾಸನನ್ನು ಪರಿಚಯಿಸಿದ್ದ. ಸುಮತಿ ಅದಾಗಲೇ ನಶೇ ಏರುವಂತೆ ಕುಡಿದಿದ್ದಳು. ಮಾತಿನಲ್ಲಿ ಹಿಡಿತವಿರಲಿಲ್ಲ. ಚೇಂಜ್‍ರೂಮ್‍ಗೆ ಹೋಗುವಾಗ ಕಾಲುಜಾರಿಬಿದ್ದವಳನ್ನು ಅನಾಮತ್ತಾಗಿ ಎತ್ತಿಕೊಂಡು ರೂಮಿನ ಹಾಸಿಗೆ ಮೇಲೆ ಮಲಗಿಸಿದ ಸುಹಾಸ ಅಂದಿಡೀ ರಾತ್ರಿ ಮೂಲೆಯ ಸೂಫಾದ ಮೇಲೆಯೇ ಒರಗಿದ್ದ. ನಡುವೆ ಅವಳಿಗೆ ಎಚ್ಚರವಾಗಿ ಬಾತ್‍ರೂಮಲ್ಲಿ ವಾಂತಿ ಮಾಡಿಕೊಂಡಳು ಆಗಲೂ ಅವಳ ಜೊತೆಯೇ ಇದ್ದ. ಮರುದಿನ ಅವಳು ಏಳುವ ಮೊದಲೇ ಬಿಸಿನೀರಿನ ಪಾನಕ ಮಾಡಿಸಿ ಅವಳಿಗೆ ಒತ್ತಾಯದಿಮದ ಕುಡಿಸಿದ್ದ. ಸುಮತಿಗೆ ಇಡೀ ರಾತ್ರಿ ಸುಹಾಸ್ ತನ್ನ ಮೈ ಸಹ ಮಟ್ಟದೇ ಹಾಗೆಯೇ ಇದ್ದಿದ್ದು ವಿಚಿತ್ರವಾಗಿ ಕಂಡಿತು ಕೇಳಿಯೂ ಬಿಟ್ಟಳು. ಸುಹಾಸನ ಮುಗುಳ್ನಗೆಯೇ ಅವಳಿಗೆ ಉತ್ತರ ರೂಪದಲ್ಲಿ ಸಿಕ್ಕಿತು.
ವರಿಬ್ಬರೂ ಮತ್ತೆ ಮತ್ತೆ ಭೇಟಿಯಾದರು ಇಬ್ಬರಲ್ಲೂ ಆಕರ್ಷಣೆ ಬೆಳೆಯಿತು. ಅದಕ್ಕೆ ಮದುವೆಯ ಅಂಕಿತವನ್ನು ಹಾಕಿಕೊಂಡರು. ಇಬ್ಬರೂ ಸಾಪ್ಟ್‍ವೇರ್ ವೃತ್ತಿಯವರು. ಮದುವೆಯಾದ ಮೇಲೆ ಇಬ್ಬರೂ ಜೊತೆಗಿದ್ದುದೇ ಅಪರೂಪ. ಸಿಕ್ಕ ವೇಳೆ ಇಬ್ಬರೂ ಸದುಪಯೋಗಿಸುತ್ತಿದ್ದರು. ಸುಮತಿ ಸೆಕ್ಸ್ ಬೆಗಿನ ಆಸಕ್ತಿ ಅವಳ ಹಸಿವು ಸಹಾಸನಿಗೆ ಅಚ್ಚರಿ ಮೂಡಿಸಿತ್ತು. ಅವಳ ಬಿಂದಾಸ್ ನಡುವಳಿಕೆ, ಅವಳ ಹಿಂದಿನ ಜೀವನದ ಅಫೇರುಗಳು ಎಲ್ಲ ಸುಹಾಸ್ ಅವಳಿಂದ ಕೇಳಿಸಿಕೊಂಡಿದ್ದ. ಮಗ ನಿಶಾಂತ ಹುಟ್ಟಿದ ಮೇಲೆ ಅವಳ ವರ್ತನೆ ಕಡಿಮೆಯಾದೀತು ಅಂದುಕೊಂಡವ ನಿರಾಶೆ ಅನುಭವಿಸಿದ್ದ. ನಿಶಾಂತನಿಗೆ ಬೋರ್ಡಿಂಗ್ ಸ್ಕೂಲ್‍ಗೆ ಸೇರಿಸುವ ಸುಮತಿಯ ನಿರ್ಧಾರ ಸಹಾಸನಿಗೆ ಸಂಬಂದಿರಲಿಲ್ಲ. ಈ ಬಗ್ಗೆ ವಾದ ವಿವಾದಗಳಾದರೂ ಕೊನೆಗೆ ಗೆದ್ದಿದ್ದು ಸುಮತಿಯೇ ಸುಹಾಸ ನಿರ್ಲಿಪ್ತನಾಗುವ ಸೋಗು ಹಾಕಿದ. ಸುಮತಿ ಕೆರಳಿ ನಿಂತಾಗಲೂ ಇವನದು ಅದೇ ಧೋರಣೆ. ಅವಳ ನಿಂದನೆಗಳಿಗೆ, ಚುಚ್ಚುಮಾತುಗಳಿಗೆ ಇವನಿಂದ ಯಾವ ಸ್ಪಂದನೆಯೂ ಇರುತ್ತಿರಲಿಲ್ಲ. ಸುಮತಿನೇ ಕ್ಲಬ್ಬಿನ ಬಗ್ಗೆ ವಿವರ ತೆಗೆದು ಸದಸ್ಯರಾಗುವ ಪ್ರಸ್ತಾಪ ಮುಂದಿಟ್ಟಾಗ ಸುಹಾಸ ವಿಚಲಿತನಾದ. ಇದು ಸರಿ ಅಲ್ಲ ಅನ್ನುವ ವಾದ ಸುಮತಿಯ ಅಬ್ಬರದ ನುಡಿಗಳೆದುರು ಮಂಕಾಯಿತು. ಮುಖ್ಯವಾಗಿ ಸುಮತಿ ಅಂದ ಮಾತುಗಳು ಅವನನ್ನು ಇನ್ನಷ್ಟು ಜರ್ಜರಿತ ಮಾಡಿದವು. ಸುಮತಿ ತನ್ನನ್ನು ‘ಎಮ್‍ಸಿಪಿ’ ಎಂದು ಬ್ರಾಂಡ್ ಮಾಡಿದಾಗ ಸುಹಾಸ ಸೋಲೊಪ್ಪಿಕೊಂಡ. ಇದೂ ಒಂದು ಆಗಿ ಹೋಗಲಿ ಎನ್ನುವ ಧೋರಣೆಯಿಂದ ಫಾರ್ಮಿಗೆ ಸಹಿ ಹಾಕಿದ. ಹೊಸ ಪರಿಚಯ, ಅಲ್ಲಿ ಬಂದ ದಂಪತಿಗಳು ಅವರು ಏನನ್ನು ಹುಡುಕುತ್ತ ಇಲ್ಲಿ ಬಂದಿರಬಹುದು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವಾಗಲೇ ಇವರ ಹೆಸರು ಲಕ್ಕಿ ಡಿಪ್‍ನಲ್ಲಿ ಬಂದಾಗಿತ್ತು. ಪಾರ್ಟನರ್ ಮೇಲೆ ಎಲ್ಲಿಲ್ಲದ ಆವೇಶ ಪ್ರದರ್ಶಿಸಿದ. ಸುಹಾಸ್ ತನ್ನ ಸಾಹಸಕ್ಕೆ ಹೆಮ್ಮೆಯನ್ನು ಅನುಭವಿಸಿದ. ಒಂದೆರಡು ಸಾರಿ ಆದ ಮೇಲೆ ಅದ ಬೇಸರ ತರಿಸಿತು. ಹೀಗೆ ಪರರ ಹೆಂಡಂದಿರ ಮೇಲೆ ತನ್ನ ಮೃಗತೃಷೆ ತೀರಿಸಿಕೊಳ್ಳುವುದು ಎಷ್ಟು ಸರಿ ಈ ಜಿಜ್ಞಾಸೆ ಸುರ ಆಯಿತು. ಹಾಗೆ ನೋಡಿದ್ರೆ ತಾನೇಕೆ ಇದಕ್ಕೆ ಒಪ್ಪಿದೆ... ಯಾವ ಸೆಳೆತ ಇತ್ತು ಈಗ ನಿರ್ಧರಿಸಲಾಗುತ್ತಿಲ್ಲ. ಎಲ್ಲ ಸಂಬಂಧಗಳು ಹೀಗೆಯೇನು... ದಿನ ಕಳೆದಂತೆ ಆಕರ್ಷಣೆ ಕಮ್ಮಿಯಾಗುತ್ತ ಸಾಗುತ್ತದೆ. ವಿವಾಹದ ಬೆಳ್ಳಿ, ಸುವರ್ಣ ಮಹೋತ್ಸವ ಆಚರಿಸಿಕೊಂಡವರ ಬಗ್ಗೆ ಹಲವು ಸೋಜಿಗದಿಂದ ನೋಡಬೇಕು. ಅದು ಹೇಗೆ ಅವರ ಬಾಂಡಿಂಗ್ ಅಷ್ಟು ಮಜಬೂತಾಗಿರುತ್ತದೆ ಅಥವಾ ಅವರು ಒಳಗಿಂದೊಳಗೇ ಕಸಿವಿಸಿಪಡುತ್ತ ಹೊರಗಡೆ ಖಷಿಯ ಸೋಗು ಹಾಕಿಕೊಂಡಿರುತ್ತಾರೇನೋ...?
‘ತೇರೆ ಬಿನಾ ಜಿಂದಗಿ ಸೆ ಕೋಯಿ...’ ಮೊಬೈಲ್ ಗುಣುಗುಣಿಸಿತು. ಸುಮತಿಯ ಕಾಲ್‍ಗೆ ಸೆಟ್ ಮಾಡಿಟ್ಟ ಹಾಡು. ಕಾಲ್ ತೆಗೆದು ಕೊಂಡವನಿಗೆ ಅತ್ತಲಿಂದ ತೇಲಿಬಂದ ದನಿಯಲ್ಲಿ ಉತ್ಸಾಹ ತುಳುಕುತ್ತಿದ್ದುದು ಗಮನಕ್ಕೆ ಬಂತು...
“ಹಾಯ್ ಎಲ್ಲಿದ್ದಿ... ನಾ ಅಂತೂ ಫೇಡ್‍ಔಟ್ ಆಗಿರುವೆ. ಈಗ ನಾಳೆ ಸಂಜೆವರೆಗೂ ನಿದ್ದೆ ಮಾಡಬೇಕು. ಮನೆಗೆ ಬಂದರೂ ಡಿಸ್ಟರ್ಬ ಮಾಡಬೇಡ. ನಿನ್ನ ಪಾರ್ಟನರ್ ಹೇಗಿದ್ಲು ಎಂಜಾಯ್ಡ...?”
“ಓಕೆ ಸೋ ಹ್ಯಾಪಿ ಡ್ರೀಮಿಂಗ್... ನಾ ಇದೀಗ ಫ್ರೆಶ್ ಆಗಿ ಹೊರಟಿರುವೆ...”
ಇವನ ಮಾತು ಪೂರ್ತಿಯಾದದ್ದೇ ತಡ ಸಂಪರ್ಕ ತುಂಡರಿಸಿತ್ತು. ನಿರಾಳವಾಗಿ ಉಸಿರುಹಾಕಿದ ಸುಹಾಸ್ ಟಾವೆಲ್‍ಗೆ ಕೈ ಚಾಚಿದ.
***
ಊಟಿ ಹಿತವಾಗಿತ್ತು. ಕಾಟೇಜ್ ಹೊರಗಡೆ ಬಿಸಿ ಚಹಾ ಕುಡಿಯುತ್ತಿದ್ದ ಅನಿತಾಳ ಮೂಡು ಊಟಿಯಲ್ಲಿಯೂ ಸರಿಹೋಗಿರಲಿಲ್ಲ. ಹಾಗೆ ನೋಡಿದರೆ ಅವಳ ಮೂಡು ಸರಿ ಇಲ್ಲ ಅಂತ ಶುರು ಅನಿಸತೊಡಗಿದ್ದು ಮೂರು ತಿಂಗಳ ಹಿಂದಿನಿಂದಲೇ. ಸುಹಾಸ ಜೊತೆ ಆ ರಾತ್ರಿ ಕಳೆದ ನಂತರವೇ. ಮೊದಲಿನ ಹಾಗೆ ತಾನಿಲ್ಲ ಇದು ಅವಳ ಅರಿವಿಗೂ ಬಂದ ಸಂಗತಿಯೇ. ಗಂಡ ಅನಿಲ್ ಎರಡು ಮೂರು ಸಲ ಈ ಬಗ್ಗೆ ಕೆದಕಿದ್ದ. ಏನು ಉತ್ತರ ನೀಡಿದರೆ ಅವನಿಗೆ ಸಮಾಧಾನವಾದೀತು ಎಂಬ ಕುಹಕ ಅವಳ ಮನದಲ್ಲಿ ಮೂಡಿದ್ದು ಸುಳ್ಳಲ್ಲ. ಅನಿಲ್ ಮಾತ್ರ ಆ ದಿನದ ಅಂದರೆ ಲಕ್ಕಿ ಡಿಪ್‍ನ ಸಂಗಾತಿಯೊಡನೆ ಕಳೆದ ರಾತ್ರಿಯ ನಂತರ ಹೆಚ್ಚು ಉತ್ಸಾಹದಿಂದ ಇದ್ದ. ಇದು ಅನಿತಾ ಗಮನಿಸಿದ ಸಂಗತಿ. ತಮ್ಮ ಮಿಲನದ ಸವಿಗಳಿಗೆಗಳನ್ನು ಅವ ವರ್ಣಿಸಿದ್ದ. ಅನಿತಾಳಿಗೆ ಮುಜುಗರವಾಗಿತ್ತು. ಸುಮತಿ -ಅವನ ಪಾರ್ಟನರ್- ಡಿಮಾಂಡಿಂಗ್ ಆಗಿದ್ದಳು. ಕೊಟ್ಟ ಎರಡರಷ್ಟು ಪಡೆದುಕೊಳ್ಳುತ್ತಿದ್ದಳು. ಇವೇ ಮುಂತಾಗಿ ಅವ ಹೇಳಿದ್ದ. ಅನಿತಾ ವಿಚಿತ್ರ ಸಂಕಟ ಅನುಭವಿಸುತ್ತಿದ್ದಳು. ಅವಳ ಗಂಡ ಇನ್ಯಾರ ಜೊತೆಗೆ ರಮಿಸಿ ಅಲ್ಲಿಯ ರಸನಿಮಿಷಗಳನ್ನು ಯಾವ ಮುಜುಗರ ಇಲ್ಲದೇ ವರ್ಣಿಸುತ್ತಾನೆ ಈ ಕ್ರಿಯೆ ಅವಳಿಗೆ ಸೋಜಿಗ ತಂದಿತ್ತು. ಜೀವನ ಒಮ್ಮೆಲೆ ಇಷ್ಟು ಮುಕ್ತವಾಯಿತೆ... ಕಟ್ಟುಪಾಡು ಬೇಡ ಪ್ರೀತಿ ಪ್ರೇಮದ ಸೆಲೆಯೂ ಬತ್ತಿಹೋಯಿತೆ... ಅನಿಲ್‍ಗೆ ಇದು ಬೇಕಾಗಿತ್ತು. ನನ್ನ ಸಹವಾಸ ಅವನಿಗೆ ಬೇಸರ ತರಿಸಿತ್ತೇ... ನನ್ನ ಆಕರ್ಷಣೆ ಮಂಕಾಯಿತೇ ಹೀಗೆ ಹತ್ತು ಹಲವು ಪ್ರಶ್ನೆಗಳು ಅವಳಿಗೆ ಕಾಡಿದ್ದವು. ಮಾತು ಮಾತಿನಲ್ಲಿಯೇ... ಅನಿಲ್ ಅನಿತಾಳ ಮಾತುಗಳ ಮೇಲೆ ಅವನಿಗೆ ನಂಬಿಕೆ ಇರಲಿಲ್ಲ ಅನಿತಾಳ ಅನುಭವದ ಬಗ್ಗೆಯೂ ಕೇಳಿದ್ದ. ತನ್ನ ಪಾರ್ಟನರ್ ಜೊತೆ ಅದು ನಡೆಯಲೇ ಇಲ್ಲ ಎಂಬ ಅನಿತಾಳ ಮುಚ್ಚುಮರೆಯಿಲ್ಲದೇ ಹೇಳಿಕೊಳ್ಳಲಿ ಇದು ಅವನ ಆಗ್ರಹವಾಗಿತ್ತು. ಸತ್ಯ ಹೇಳಿದರೂ ನಂಬದ ತನ್ನ ಗಂಡನ ಬಗ್ಗೆ ಅನಿತಾ ಮರುಕಗೊಂಡಿದ್ದಳು.
ಮೇಲಿನ ಸಂವಾದ ನಡೆದು ಅದಾಗಲೇ ಮೂರು ತಿಂಗಳು. ಊಟಿಯಲ್ಲಿ ಮಳೆಗಾಲದ ಸೂಚನೆಗಳಿದ್ದವು. ಮುಂದಿನ ತಿಂಗಳಿಂದ ಮಗಳು ಶಾಲೆಗೆ ಹೋಗುತ್ತಾಳೆ. ಬೇಸರ ಕಳೆಯಲು ಊಟಿಯ ಟೂರ್ ಅನಿಲ್ ಪ್ರಸ್ತಾಪಿಸಿದಾಗ ಅನಿತಾ ಹುಂಗುಟ್ಟಿದ್ದಳು. ಬೆಳಿಗ್ಗೆಯಿಂದ ಅಲ್ಲಿ ಇಲ್ಲಿ ಸುತ್ತಾಡಿ ದಣಿದ ಅಪ್ಪ ಮಗಳು ಮಲಗಿದ್ದರು. ಸಂಜೆಯ ನೀರವತೆಯಲ್ಲಿ ಊಟಿತೊಯ್ದಿತ್ತು. ಚಹಾ ಕಪ್ ಕೆಳಗಿರಿಸಿದ ಅನಿತಾ ಎದ್ದಳು. ಊಟಿಯಲ್ಲಿಯೇ ನಾವು ಹನಿಮೂನಿಗೆ ಬಂದಿದ್ದು. ಅವು ಚಳಿಗಾಲ ದಿನಗಳು. ಆ ಉನ್ಮಾದತೆಯ ದಿನಗಳು ಅದೆಲ್ಲಿ ಕರಗಿ ಹೋದವು. ಯಾಕೆ ನಾವು ಎಲ್ಲರ ಹಾಗೆ ಇಲ್ಲ. ಶೂನ್ಯವನ್ನು ಹುಡುಕುತ್ತಿದ್ದೇವೆ ಎಂಬ ಭಯ ಅನಿತಾಗೆ ಬಂದಿದ್ದು ಇದೇ ಮೊದಲಲ್ಲ. ಅನಿಲ್ ಜೊತೆ ಈ ಬಗ್ಗೆ ಒಂದೆರಡು ಸಲ ಚರ್ಚೆ ಮಾಡಿದಾಗಲೂ ಅವನಿಂದ ನೀರಸ ಪ್ರತಿಕ್ರಿಯೆಯೇ ದೊರೆತಿತ್ತು. ಇಲ್ಲದ್ದನ್ನೆಲ್ಲ ವಿಚಾರ ಮಾಡುವ ಬದಲು ಈ ಕ್ಷಣವನ್ನು ಎಂಜಾಯ್ ಮಾಡು ಎಂಬ ಉಪದೇಶವೂ ಸಿಕ್ಕಿತ್ತು. ಮಗಳ ಶಾಲೆಯ ತಯಾರಿ ಅವಳಿಗೆ ಹೊಸದಾಗಿ ಕೊಡಿಸಿದ ಬ್ಯಾಗು, ಬೂಟು ಎಲ್ಲ ಹಾಕಿಕೊಂಡು ಮಗಳು ನಕ್ಕಾಗ ಆ ಖುಷಿಯಲ್ಲಿ ನೋವು ಮರೆಯುವ ಪ್ರಯತ್ನ ಮಾಡಿಯೂ ಆತು. ಆದರೂ ತಳಮಳ ತಡಬಂದಿಗೆ ಬಂದಿರಲಿಲ್ಲ. ಒಂದೇ ಮಂಚದ ಮೇಲೆ ಮಲಗಿದರೂ ಗಂಡನೊಡನೆ ಸ್ವರ ಮಿಡಿದಿರಲಿಲ್ಲ. ಒಂದೆರಡು ಸಲ ಅವನೇ ಮುಂದುವರೆದಾಗ ಇವಳಿಂದ ಪ್ರತಿಸಾದ ಸಿಗದೇ ಸಿಟ್ಟಿನಿಂದ ಸರಿದು ಹೋಗಿದ್ದ. ಅವನ ಆ ವರ್ತನೆ ಅನಿತಾಳಿಗೆ ಖುಷಿ ನೀಡಿತ್ತು. ಅವನ ಕ್ರಿಯೆಗೆ ತನ್ನ ಪ್ರತಿಕ್ರಿಯೆ ಶೂನ್ಯ ಎನ್ನುವ ಭಾವ ಅವಳಿಗೆ ಅದೇನೋ ವಿಚಿತ್ರ ಹರ್ಷ ನೀಡಿತ್ತು. ಅವನ ಆ ಹತಾಶ ಮುಖ ನೋಡಿದಾಗ ಆ ಗೆದ್ದೆ ಎಂದು ಬೀಗಿದ್ದಳು.
ಊಟಿಯ ಸೌಂದರ್ಯವೂ ಮುದಗೊಳಿಸದ ಸ್ಥಿತಿ ನನ್ನದು. ಮಗಳು ನಕ್ಕಾಗಲೂ ಕೊರತೆಯ ಭಾವ ಕಾಡಿದ್ದಿದೆ. ತಾ ಹುಡುಕುತ್ತಿರುವ ಪ್ರಶ್ನೆಗಳಿಗೆ ಉತ್ತರ ದೊರೆತರೆ ಸಮಾಧಾನವಾದೀತು. ಆದರೆ ಅಷ್ಟು ಸುಲಭವಾಗಿ ಉತ್ತರ ಸಿಗುವುದೇ... ಅಥವಾ ಉತ್ತರ ಕೊಡುವ ಯೋಗ್ಯತೆ ಅನಿಲ್‍ಗಿದೆಯೇ... ವಿಚಾರಮಾಡಿದಾಗ ಹೊಳೆದಿದ್ದು ನಕಾರಾತ್ಮಕತೆಯೇ... ಇಲ್ಲ ಅನಿಲ್ ಮತ್ತೆ ಈ ವಿಷಯ ತಮಾಶೆಯಲ್ಲಿಯೇ ತೇಲಿಸಬಹುದು. ಅವನಿಂದ ಉತ್ತರ ನಿರೀಕ್ಷಿಸುವುದು ತಪ್ಪಾಗಬಹುದು. ಸುಹಾಸ್‍ನನ್ನು ಕೇಳಿದರೆ ಹೇಗೆ ಈ ಪ್ರಶ್ನೆಗಳಿಗೆ ಅವನ ಉತ್ತರ ಏನಿರಬಹುದು. ಅವನೂ ಇದೇ ತೊಳಲಾಟದಲ್ಲಿ ಇದ್ದಿರಬಹುದು. ವೈಫ್ ಸ್ವ್ಯಾಪಿಂಗ್‍ಗೆ ಅವನೂ ಒಪ್ಪಿಕೊಂಡವನೇ... ಅವನೇ ನನ್ನ ದ್ವಂದ್ವಗಳಿಗೆ ಪ್ರಶ್ನೆಗಳಿಗೆ ಉತ್ತರವಾಗಬಲ್ಲ. ಹೌದು ಬೆಂಗಳೂರಿಗೆ ಹೋದ ಮೇಲೆ ಅವನೊಡನೆ ಮಾತು ಆಡುವುದೇ ನಿರ್ಧಾರದಿಂದ ಮನ ಹಗುರಾಯಿತು.
***
ಉನ್ಮಾದದ ಘಳಿಗೆಗಳು ಜಾರಿಹೋಗಿ ಹುಮ್ಮಸ್ಸು ಇಳಿದು ಹೋಗಿತ್ತು. ಇದ್ದಕ್ಕಿದ್ದಂತೇ ಸುಹಾಸನಿಗೆ ಸಿಗರೇಟು ಸೇದಬೇಕೆನಿಸಿ ಅಲ್ಲಿಯೇ ಸೇದಿದರೆ ಅವಳು ಮುಜುಗರ ಪಟ್ಟಾಳೆಂದು ಹೊರನಡೆದ. ಒಂದರೆ ಕ್ಷಣದಲ್ಲಿ ಎಲ್ಲ ಮುಗಿದು ಮತ್ತೆ ಶೂನ್ಯ ಕವಿದ ಭಾವ. ಇದು ಹೀಗೆಯೇ... ಅರಸುತ್ತಿದ್ದ ವಸ್ತು ಕೈ ಸೇರಿ ಅದರ ಅನುಭೂತಿ ಅನುಭವಿಸಿ ನಂತರ ಕವಿಯುವ ಅದೇ ಹತಾಶ ಭಾವ. ಗೊತ್ತಿದ್ದೂ ಗೊತ್ತಿದ್ದೂ ಮತ್ತೆ ಮತ್ತೆ ಅದರ ಹಿಂದೆ ಓಡುವುದೇಕೆ. ಮತ್ತೆ ಈ ವಿಷಾದ ಭಾವ ಅಮರಿಕೊಳ್ಳಲೇಕೆ... ಪರಿಣಾಮ ಪೂರ್ವ ನಿರ್ಧರಿತವಾಗಿರುತ್ತದೆ. ಆದರೆ ಪ್ರಯಾಸಪಡುವುದು ತಪ್ಪಿಸಿಕೊಳ್ಳದ್ದು. ಸುರುಳಿ ಸುರುಳಿಯಾಗಿ ಹೊಗೆ ಬಿಡುವ ಮನಸ್ಸಾಯಿತವಗೆ. ಪ್ರಯತ್ನ ಪಟ್ಟ. ಇಂಜಿನಿಯರಿಂಗ್ ಓದುವಾಗ ಹಾಸ್ಟೆಲ್‍ನಲ್ಲಿ ಗೆಳೆಯರ ಜೊತೆ ಪಂದ್ಯಕಟ್ಟಿ ಸುರುಳಿ ಸುರುಳಿಯಾಗಿ ಹೊಗೆ ಬಿಟ್ಟ ದಿನ ಛೆ ನಾ ಏಕಾದರೂ ಹೀಗಾದೆ. ಎಲ್ಲ ಮರೆತಿತ್ತು. ಅವಳ ಫೋನು ಬರುವವರೆಗೂ ಅವಳಾಗಿಯೇ ನೆನಪು ಮಾಡಿಕೊಡದಿದ್ದರೆ ಅವಳ ಹೆಸರೂ ಸಹ ನೆನಪಿನಲ್ಲಿರಲಿಲ್ಲ. ಮಾತನಾಡಬೇಕಾಗಿದೆ... ಭೇಟಿಯಾಗುವ ಎನ್ನುವ ಅವಳ ಆಗ್ರಹಕ್ಕೆ ಮಣಿದಿದ್ದೆ. ಕಾಫಿ ಡೇನಲ್ಲಿ ಭೇಟಿಯಾಗಿ ಅದರ ಪರ್ಯಾವಸಾನ ಆಗಿದ್ದು ಈ ರಿಸಾರ್ಟನ ರೂಮಿನಲ್ಲಿ. ಮಗಳು, ಗಂಡನಿಗೆ ಸುಳ್ಳು ಹೇಳಿ ಬಂದಿರಬಹುದು ಅವಳು. ದಿಟ್ಟೆ ಅಂದುಕೊಂಡ. ತನಗಾದರೋ ಸುನೀತಾ ಎಲ್ಲಿ ಹೋಗಿದ್ದು ಎಂದು ಕೇಳುವುದೇ ಇಲ್ಲ. ಆದರೆ ಅವಳು ತನ್ನ ಎಲ್ಲ ಕಟ್ಟುಪಾಡು ತೊರೆದು ಹೀಗೆ ನನ್ನ ಜೊತೆ... ಹಿಂದೆಯೂ ಹೀಗೆ ಇತ್ತು. ಆದರೆ ಇದು ಅವಳಾಗಿಯೇ ಬಯಸಿದ್ದು. ಹಿಂದಿನ ಅ ಲಕ್ಕಿ ಡ್ರಿಪ್‍ನಲ್ಲಿ ಭೇಟಿಯ ಹಾಗಲ್ಲ ಇದು. ಕೇಳಬೇಕವಳಿಗೆ ಯಾಕೆ ಹೀಗೆ ಅಂತ. ಹಿಂದೆಯೇ ಅರಿವಿಗೆ ಬಂತು. ತಾನು ಅವಳನ್ನು ಹೀಗೆ ಮಾಡುವುದು ಬೇಡ... ಅದು ಅನಿವಾರ್ಯವಲ್ಲ ಅಂತ ಅನೇಕ ಸಲ ತಿಳಿಸಿಹೇಳಿದ್ದು. ಅದು ಅವಳಿಗೆ ಕಿರಿಕಿರಿ ತರಿಸಿದ್ದು. ಅವಳು ವಾದ ಮಾಡಿದ್ದು ಎಲ್ಲ ನೆನಪಾಯಿತು. ಸುನೀತಾ ಹೀಗೆ ಅವಳ ವಾಂಛೆಗಳ ಮೇಲೆ ಅವಳಿಗೆ ಹತೋಟಿಯಿಲ್ಲ. ಅವಳನ್ನು ಸುಲಭವಾಗಿ ವರ್ಗೀಕರಿಸಬಹುದು. ಇವಳು ಹಾಗಲ್ಲ. ಇವಳು ಅದೇನೋ ಹುಡುಕುತ್ತಿದ್ದಾಳೆ. ನನ್ನ ಸಹವಾಸ ಅವಳಿಗೆ ಉತ್ತರ ಹುಡುಕಲು ನೆರವಾಯಿತೇ ಗೊತ್ತಿಲ್ಲ. ಇಷ್ಟಕ್ಕೂ ಚೌಕಟ್ಟಿನಾಚೆ ಅವಳು ಏನನ್ನು ಹುಡುಕುತ್ತಿದ್ದಳು. ಮುಖ್ಯವಾಗಿ ಯಾಕೆ ಹುಡುಕುತ್ತಿದ್ದಳು ಈ ಪ್ರಶ್ನೆಗೆ ಉತ್ತರ ಹೇಳಬೇಕಾದವಳು ಅವಳೇ...
***
ಇದ್ದಕ್ಕಿದ್ದಂತೇ ಆ ಭಾವ ಬಂದಿತ್ತು. ತಡೆಹಿಡಿಯಲಾರೆ ಅನಿಸಿದಾಗ ಮೊದಲಿಟ್ಟಿದ್ದು ಶಾವರ್ ನೀರ ಜೊತೆ ಸುರಿಸುವ ಕಣ್ಣೀರು ಮೇಳೈಸಿರಬಹುದು... ಪೈಪೋಟಿ ಕೊಟ್ಟರೆ ಕಣ್ಣೀರೇ ಗೆಲ್ಲಬಹುದೇನೋ... ಕತ್ತಲಲ್ಲಿ ತಡಕಾಡುತ್ತಿದ್ದಾಗ ಹುಡುಕುತ್ತಿದ್ದ ವಸ್ತು ದೊರೆತು ಅಪ್ಪಿ ಮುದ್ದಾಡಿ ಮತ್ತೆ ಅದರ ಮೇಲೆ ಬೇಸರ ಬಂದಂಥ ತಾ ಹುಡುಕುತ್ತಿದ್ದ ವಸ್ತು ಇದೆಯೇ ಎಂಬ ಸಂಶಯವೂ ಸೇರಿಕೊಂಡಂತೆ ನಾ ಹೀಗೆ ಮಾಡಿದ್ರೆ... ಇದು ನಂಬಿಕೆಗೆ ನಿಲುಕದ ಸಂಗತಿ. ನನ್ನನ್ನು ಯಾರೂ ಬಲವಂತ ಮಾಡಿರಲಿಲ್ಲ. ಇಲ್ಲಿ ಯಾವ ಲಕ್ಕಿಡ್ರಿಪ್‍ನ ಪ್ರಲೋಭನೆ ಇರಲಿಲ್ಲ. ಅಥವಾ ಅದು ಹೇಗಿರಬಹುದು ಎಂದು ನೋಡಿಬಿಡುವ ಹುಚ್ಚು ಹಂಬಲವೂ ಇಲ್ಲ. ಎಲ್ಲ ಗೊತ್ತಿತ್ತು. ಅದು ಹೀಗೆಯೇ ಇರುತ್ತದೆ ಅಂತ. ಆದರೂ ಸೆಳೆತ ತಡೆಯದಾದೆ. ಅವನೂ-ಸುಹಾಸನೂ-ಹೇಳಿ ನೋಡಿದ್ದ. ಬೇಡ ಇದು ಅಂತ. ನನ್ನ ಹಟಗೆದ್ದಿತ್ತು. ನಾನೇ ಅವನಿಗೆ ಈ ರೆಸಾರ್ಟ ಬಗ್ಗೆ ಹೇಳಿದ್ದು. ಅಲ್ಪಸ್ವಲ್ಪ ಮುಜುಗರ ಇತ್ತು. ಮೊದಮೊದಲು ಆದರೆ ಕೊನೆಗೆ ಉಕ್ಕಿದ್ದು ಸುನಾಮಿಯ ಅಲೆಗಳು... ಈಗ ಎಲ್ಲ ಶಾಂತ ಮತ್ತೆ ಅದೇ ಸ್ಥಿತಿ. ಇದರ ಬಗ್ಗೆ ಅವ ಮೊದಲೇ ಹೇಳಿದ್ದ ನಾ ಹುಡುಕುತ್ತಿರುವುದು ಇದಲ್ಲವಾಗಿರಬಹುದು ಎಂದು. ಆದರೂ ಹುಚ್ಚಿತ್ತು. ಒಂದು ಕೈ ನೋಡೇಬಿಡುವ ಹಂಬಲ. ಯಾಕೋ ಗೊತ್ತಿಲ್ಲ. ಯುದ್ಧದಲ್ಲಿ ಎಲ್ಲ ಗೆದ್ದರೂ ಶೂನ್ಯ ಕವಿಯುವ ಸ್ಥಿತಿ ಯಾಕೆ ಬರುತ್ತದೋ... ಅನಿಲನಿಗೆ, ಮಗಳಿಗೆ ನೆವ ಹೇಳಿ ಬಂದಿದ್ದಾಯಿತು. ಎಲ್ಲ ಮುಗಿಸಿ ಗೆದ್ದ ಬೀಗುವಿಕೆಯಲ್ಲಿ ಒಮ್ಮೆ ನಗಬೇಕು ಎಂದುಕೊಂಡಾಗಲೇ ಬಂದಿತ್ತು ಬಿಕ್ಕುವಿಕೆ ಜೊತೆಗೂಡಿದ ಅಳು. ಈ ಅಳು ನನ್ನ ಸ್ಥಿತಿಗೆ ದ್ಯೋತಕವೇ ನಾ ಏನೇ ಮಾಡಿದರೂ ಇದರಿಂದ ಈ ಹಂಬಲಗಳಿಂದ ಬಿಡುಗಡೆಯೇ ಇಲ್ಲವೇ... ಏನೂ ಗೊತ್ತಿರದ ಪರಿಸ್ಥಿತಿ. ಉತ್ತರ ಮೊದಲೇ ಗೊತ್ತಿದ್ದೂ ಪ್ರಶ್ನೆ ಎಸೆಯುವ ಹುಂಬತನ ಇದೆ ಏನು...
ನೀರು ಸುರಿಯುತ್ತಿತ್ತು. ಅನಿತಾ ನಿಂತೇ ಇದ್ದಳು ಕ್ಷಣ ಅನಂತವಾಗಿತ್ತು. ಚೌಕಟ್ಟಿನಾಚೆಗಿನ ಚಿತ್ರ ಗಾಳಿಯಲ್ಲಿ ತೇಲುತ್ತಲೇ ಇತ್ತು.
-------------------------------------------------------------------