Thursday, November 3, 2011

ಮಾರಿಷಸ್ ಕವಿತೆಗಳು.....

ಎರಡು ಕವಿತೆಗಳು ಹೊರಡಿಸುವ ದನಿ ಭಿನ್ನ .ಮೊದಲನೇಯದ್ದು ಬರೆದಾಗ ಅದಿನ್ನೂ ಕಿಚ್ಚು ಹೊತ್ತಿದ ಸಮಯ. ಎರಡನೇದು
ಬರೆವಾಗ ಸ್ಥಿತಿಬಗ್ಗೆ ಒಂಥರಾ ಒಪ್ಪಂದ ಆಗಿಹೋಗಿತ್ತು. ಇದಮಿತ್ಥಂ ಅಂದಹಾಗೆ. ಕವಿತೆಗಳು ನಿಮಗೆ ಇಷ್ಟಆದಲ್ಲಿ ನನ್ನ ಕಷ್ಟ
ಸಾಫಲ್ಯವಾಗಬಹುದೇನೋ..

೧)
ಮಾವಿನ ಗಿಡದಲ್ಲಿ ಇಲ್ಲೀಗ
ಹೂವಿನ ಒರತೆ..
ಒಂಟಿಹಾಸಿಗೆಯ ತುಂಬ ಹೊದೆಯಲು
ಇವೆ ನೂರೆಂಟು ಚಿಂತೆ.
ಅಪರಿಚಿತ ಮುಖ, ಭಾಷೆಗಳ ನಡುವೆ
ಬೇಯುತಿಹೆ ನಾನಿಲ್ಲಿ
ಮೊಬೈಲಿನಲಿ ಅವಿತ ದಾದಾಬರ್ಮನ್ ಕೂಡ
ನನ್ನ ವಿಷಾದ ಪ್ರತಿಫಿಲಿಸಿಹ...
"ಮಾಝಿ ಓ ರೇ ಮಾಝಿ...'
ಸುತ್ತ ಕವಿದ ಸಮುದ್ರ ಲಂಘಿಸಿ
ಹಾರದ ಒಂಟಿ ರಾಮ ನಾನು..
ಸೀತೆಯ ಛಾಯೆ ನಿನ್ನ ನಿಟ್ಟುಸಿರಲ್ಲಿದೆ
ಅರಿವು ನನಗೂ ಇದೆ.
ನಮ್ಮ ನೋವು ಮಾವಿಗಿಲ್ಲ
ಹೂ ತೊನೆದು ಪೀಚುಗಾಯಿ ನಕ್ಕಿವೆ
ಸಾಗರದ ಅಲೆಯಲ್ಲೂ ಅಬ್ಬರವಿಲ್ಲ
ನೀರವತೆ ನನ್ನಂತೆ ಅದೂ ಹೊದ್ದಿದೆ
ವಿರಹ ಅಂದರೆ ಇದೆಯೇ
ನೀರವ ಮನ ಖಾಲಿ ಮಧು ಪಾತ್ರೆ
ಹಸುರುಟ್ಟು ನಲಿಯುವ ಬುವಿ ಬಾನು
ಉಸಿರು ಉಸಿರಿಗೆ ತಾಕದೆ ಬೇಯುವ
ನಾನು ನೀನು.....!!


೨)
ಬದುಕಿನ ಗತಿ ಬದಲಿಸುವ ಛಲ ಇತ್ತು
ಪರಿಣಾಮ ಇದೇ ಅಂತ ಗೊತ್ತಿದ್ದರೆ
ಉಸಾಬರಿ ಮಾಡುತ್ತಿರಲಿಲ್ಲ..
ಹೊನ್ನ ಕೂಳಿನ ಆಸೆ ದೇಶ ಬಿಡಿಸಿತು
ಡಾಲರ್ರಿಗೆ ತಾಕತ್ತಿದೆ
ಇಡೀ ಜಗ ಅದರ ಕೆಳಗೆ ನಲುಗಿದೆ
ಗರಿ ಗರಿ ನೋಟುಗಳಿಗೆ ಗತ್ತಿದೆ ಠೀವಿದೆ
ನೋವು ಉಣ್ಣಿಸುವ ಖಯಾಲಿಯೂ ಇದೆ
ಬಂದಾಗಿದೆ ಈಗ ಎಲ್ಲ ತೊರೆದು
ದಿನ ಕಳೆಯುವುದಿದೆ ಹಾಗೂ ಹೀಗೂ
ರಾತ್ರಿ ಮಾತ್ರ ಬೆತ್ತಲಾಗಿ ನಿಲ್ಲುತ್ತದೆ
ಕನ್ನಡಿಯಲಿ ನನ್ನ ಇರುವು ಕರಗುತಿದೆ...!!


6 comments:

 1. Sir, first of all - Welcome home.

  ಮೊದಲನೇ ಪದ್ಯ ಕೊನೆ ಕೊನೆಗೆ ಮಸ್ತ್ ಫೀಲ್ ಕೊಡ್ತು ನೋಡ್ರಿ.
  "ನೀರವ ಮನ ಖಾಲಿ ಮಧು ಪಾತ್ರೆ" ಈ ಸಾಲು ಓದಿ ಬಾಳ್ ಖುಷಿಯಾತು :-)

  ಎರಡನೇದು ವಾಸ್ತವ. Thank you

  ReplyDelete
 2. ಹಹಹ ಸುಂದರ್ ಅತಿ ಸುಂದರ್...ಭಾಭಿಜಿ ಕೆ ಯಾದ್ ಮೆಂ...
  ಅಲ್ಲಾ ಯಾರು ಹೇಳಿದ್ರು ನಿಮಗೆ ಒಂದ್ಸೊಲ್ಪ ಖರ್ಚು ಮಾಡಿದ್ರೆ ಎಲ್ಲಾ ಹೋಗಿ ಬರಬಹುದಿತ್ತು...ಆಮೇಲೆ ಇಂಥ ಸೂಪನ್ರ್ ಕವನ ಹುಟ್ತಿರ್ಲಿಲ್ಲ ಅಂತೀರಾ...??
  ಡಾಲರ್ ನಲುಗಿತ್ತಿದೆಯಲ್ಲಾ..?? ಅಲ್ಲಿ ಕರೆನ್ಸಿ ಹೇಗೇ ಡಾಲರ್ ಜೊತೆ ಡಿಲಿಂಕ್ ಆಗಿದೆಯೋ ಇಲ್ಲವೋ..??
  ನಾಡಿಗೆ ಮತ್ತು ಬ್ಲಾಗಿಗೆ ಮತ್ತೊಮ್ಮೆ ಬರೋಣವಾಗಲಿ...ಉಮೇಶ್ ಭಾಯ್..

  ReplyDelete
 3. "ಡಾಲರ್ರಿನ ಮಹಿಮೆ" ಚೆನ್ನಾಗಿದೆ ದೇಸಾಯಿ ಯವರೇ ....

  ReplyDelete
 4. ದೆಸಾಯರೇ:ಎರಡೂ ಕವನಗಳೂ ಸಖತ್ತಾಗಿವೆ!ಖುಷಿಯಾಯಿತು.ಅಭಿನಂದನೆಗಳು.

  ReplyDelete
 5. ದೇಸಾಯರ,
  ಎಲ್ಲಿ ಕಳೆದು ಹೋಗಿದ್ದಿರಿ ಅಂತ ಪೇಚಾಡಿಕೋತಿದ್ದೆ. ನೀವು ಎಲ್ಲೇ ಹೋದರೂ ಕವಿಹೃದಯ ಮಾತ್ರ ಕಳೆದು ಹೋಗೋದಿಲ್ಲ!
  If winter comes, can spring be far behind?

  ReplyDelete
 6. ಮನದ ಭಾವಗಳ ಮರದ ಪಟ್ಟಿಗಳನ್ನು ಪೋಣಿಸಿ ತೂಗು ಸೇತುವೆ ನಿರ್ಮಿಸಿದ್ದೀರಿ ದೇಸಾಯರೆ, ಜನನೀ ಜನಭೂಮಿಶ್ಚ ಸ್ವರ್ಗಾದಪಿ ಗರೀಯಸೀ ಎಂಬುದರ ಸ್ವಾನುಭವ ನಿಮಗಾಗಿರುತ್ತದೆ ಈ ಘಳಿಗೆಯಲ್ಲಿ. ಅಂತೂ ಹಣ ತುಸು ಕಮ್ಮಿ ಇದ್ದರೂ ಪರವಾಗಿಲ್ಲ, ನೆಮ್ಮದಿ ಮುಖ್ಯ ಹೌದಲ್ಲ? ಮರಳಿಬಂದ ನಿಮಗೆ ಸ್ವಾಗತ ಹಾಗೇ ನಿಮ್ಮ ಕವಿತೆಗಳಿಗೂ ಕೂಡ!

  ReplyDelete