Sunday, July 26, 2009

೪೪---ಮುನ್ನುಡಿ

ಎರವಲು ಬೇಡಿ ತಂದ ಉಸಿರು
ಅದ ಬಂಡವಾಳಮಾಡಿ
ಸಾಗಿಸಿಹ ವ್ಯಾಪಾರ...
೪೩ ಶ್ರಾವಣ ನೋಡಿದ ಈ
ಬಾಳ ಪುಟ ಒಮ್ಮೆ ತಿರುವಿಹಾಕುವ ...

ಬಯಕೆ ಬಿತ್ತಿ ಬೆವರು ಧಾರೆ ಎರೆದು
ಹಂಬಲಿಸಿದ್ದು ಹಸಿರಿಗಾಗಿ
ಯಂತ್ರವಾದ ಸ್ವಂತಿಕೆ ಬೆಳೆಯದ
ಗಳಿಗೆಗಳು ನಿರಂತರ...
ಅವಳ ಕಲ್ಪಿಸಿ ಇವಳೊಡನೆ ರಮಿಸುವ
ಅರೆಬೆಂದ ಕಾಮ, ತಿಂಗಳ ಜೀತಕ್ಕೆ
ಎಣಿಸುವ ವರಮಾನ...
ಮೂಲೆಯಲಿ ನಿಂತ ಫ್ರಿಜ್ಜು,ಟಿವಿ
ಹಣಿಕಿಕ್ಕುವ ಸಾಲದಕಂತು....
ತಲೆಮೇಲೊಂದು ಸೂರು
ದಾಖಲಿಸಲೇ ಇವುಗಳ ಸಾಧನೆಗಳೆಂದು?
ಮುಗಿಯದ ದ್ವಂದ್ವ ಇಡೀಯಾಗಿ ಆವರಿಸುವ
ನುಂಗಿ ನೀರು ಕುಡಿವ ಬದುಕು...

ಆದರೂ ಸಾಗಿಸಿಹೆ ಬಂಡಿ...
ಹುಡುಕುತಿರುವೆ ಹೊಸ ಅರ್ಥ...
ನಾಳಿನ ಅನೂಹ್ಯದಲಿ
ಮೂಡಲಿ ಸಮಾಧಾನ...ಸಾಂತ್ವನ
ಮತ್ತೊಮ್ಮೆ ನೆನಪುಗಳ ದಾಖಲಿಸುವಾಗ
ಆಗಿರಲಿ ಎಲ್ಲ ನವ ನವೀನ....!
----------------------------------------------------------------------------------------------
ಹಳೆ ಡೈರಿಯಲ್ಲಿ ನಾನೇ ಬರೆದ ಈ ಕವಿತೆ ಇತ್ತು ಆ ಕವಿತೆಯಲ್ಲಿ ೩೫ ಶ್ರಾವಣ ಅಂತ ಬರೆದಿದ್ದೆ ಈಗ ೪೩
ಅದ ಅಷ್ಟ ವ್ಯತ್ಯಾಸ ಮತ್ತ ಎಲ್ಲ ಅದ ಅದ...

6 comments:

  1. ದೇಸಾಯರ,
    ನಿಮಗ ೪೩ ಯಾವ ದಿನಾ ಆತು ಗೊತ್ತಾಗಲಿಲ್ಲ. ಇರಲಿ, Many Happy returns of the day!
    ಬಂಡಿ ಸಾಗ್ತಾ ಇರೋದs ಸಂತೋಷ ಅಲ್ಲೇನ್ರಿ?
    ನಿಮ್ಮ ಖುಶಿಗಳು ನೂರ್ಮಡಿ ಆಗಲಿ.

    ReplyDelete
  2. ಸುನಾಥ ಸರ್ ಇಂದ ಮುಗೀತು ೪೩ ಆಗಲೆ ೪೪ ಬಂದು ತಲಿ ಏರೇದ

    ReplyDelete
  3. ದೇಸಾಯಿ ಸರ್,

    ನಿಮ್ಮ ಬದುಕಿನ ಇದುವರೆಗಿನ ಪಯಣವನ್ನು ಕೆಲವೊಂದು ಸೂಕ್ಷ್ಮ ವಿಚಾರಗಳಲ್ಲಿ ಕವನದ ಮೂಲಕ ಅವಲೋಕಿಸಿದ್ದೀರಿ...

    ನಿಮಗೆ ೪೪ನೇ ಹುಟ್ಟು ಹಬ್ಬದ ಶುಭಾಶಯಗಳು.

    ReplyDelete
  4. ಧನ್ಯವಾದಗಳು ಶಿವು ಅವಲೋಕನ ಮಾಡ್ಕೊತ ಇದ್ದೇನಿ ಇನ್ನು ಸುಧಾರಣೆ ಮಾಡ್ಕೋಬೇಕಾಗೇದ

    ReplyDelete
  5. ದೇಸಾಯಿ ಸರ್,

    ಮೊದಲು ನಿಮಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನಲವತ್ಮೂರು ವಸಂತಗಳನ್ನು ಕಂಡು ನಲವತ್ನಾಲ್ಕನೇ ವರುಷಕ್ಕೆ ಪಾದಾರ್ಪಣೆ ಮಾಡುತ್ತಿರುವ ನೀವು ಇಲ್ಲೀವರೆಗೆ ಜೀವನದಾಗ ಕಲಿತ ಪಾಠಗಳನ್ನು, ಜೀವನಾಭಾಸಗಳನ್ನು ನಿಮ್ಮ ಕವನದಲ್ಲಿ ತುಂಬಾ ಚೆನ್ನಾಗಿ ಅಭಿವ್ಯಕ್ತಿಪಡಿಸಿದ್ದೀರಿ. ಹಳೆಯ ಸೋಲು, ಗೆಲುವುಗಳನ್ನು ಒಂದ್ಸಲ ತಿರುಗಿ ನೋಡಿ, ನಾಳೆಯ ಕಡೆ ಆಶಾಭಾವದ ದೃಷ್ಟಿಯಿಂದ ಮುನ್ನಡೆಯುವ ನಿಮ್ಮ ಜೀವನ್ಮುಖಿ ದೃಷ್ಟಿಕೋನ ತುಂಬಾ ಹಿಡಿಸಿತು. ನಿಮ್ಮ ಮುಂದಿನ ಸಲದ ನೆನಪುಗಳ ದಾಖಲೆ ನವನವೀನವಾಗಿರಲೆಂಬುದು ನನ್ನ ಮನಃಪೂರ್ವಕ ಹಾರೈಕೆ.

    - ಉಮೇಶ್

    ReplyDelete
  6. "ಹುಡುಕುತಿರುವೆ ಹೊಸ ಅರ್ಥ...
    ನಾಳಿನ ಅನೂಹ್ಯದಲಿ"
    ಅದೇ ಅಲ್ಲವೇ ಉಮೇಶಣ್ಣ ಬದುಕಿನ ಅರ್ಥ! ಶುಭವಾಗಲಿ...

    ReplyDelete