Sunday, June 21, 2009

ಆಷಾಢ--ವಿರಹ---ಮುಕ್ತಕಗಳು...

೧) ಈ ಆಷಾಢದ ಗಾಳಿಗಳೇಕೆ
ಇಷ್ಟೊಂದು ಜೋರು...
ನಿನ್ನ ನೆನಪು ಇವು
ಹೊತ್ತು ತಂದಿರಲಾರವಷ್ಟೆ....!

೨) ಸುಂದರ ಸಂಜೆಗೆಂಪ
ನುಂಗಿದ ಮೇಘ
ಶಹನಾಯಿ ನುಡಿಸಿದ..

೩) ಅಗಲಿಕೆಯ ಕಹಿಕಷಾಯ
ಕುಡಿಸಿದ್ದಾನೆ
ಹೊಸ ಮದುಮಕ್ಕಳಿಗೆ
ಈ ಆಷಾಢ ಮಹಾರಾಯ...!

೪) ಸುಂಯ ಗುಡುವ ಗಾಳಿ
ತಂಪಲ್ಲಿ ನಿನ್ನ ನೆನಪಿನ
ಹಪ್ಪಳ ಸುಟ್ಟು ತಿನ್ನುತ್ತಿರುವೆ...

೫) ಆ ಚಂದಿರ ನೋಡಿ
ಮೋಡದ ಕಂಬಳಿಯೊಳಗೆ
ಹೇಗೆ ಮಲಗಿದ್ದಾನೆ.....!

೬) ದೂರದಲ್ಲೆಲ್ಲೊ ನವಿಲು
ಗರಿಗೆದರಿದೆ ಸಖಿ, ಬಂದುಬಿಡು
ಈ ಭೂಮಿ
ಬಾಯಾರಿದೆ....

೭) ಎದ್ದಾಗ ಪಕ್ಕದ ಹಾಸಿಗೆ
ಬೆಚ್ಚಗಿತ್ತು ರಾತ್ರಿ ಕಾಡಿದ ನಿನ್ನ
ನೆನಪು ಉಸಿರಿಗೆ ಶಾಖ
ಕೊಟ್ಟಿತ್ತು....!

೮) ಮಡುಗಟ್ಟಿದ ನಿಶೆ
ಎಣಿಸಲೂ ತಾರೆಗಳೂ ಇಲ್ಲ...
ಹೊದ್ದುಕೊಳ್ಳಲು ನಿನ್ನ ನೆನಪು
ಕಳಿಸಿದೆಯಲ್ಲ....!

೯) ಆಷಾಢದ ಆಗಸದ ತುಂಬ
ಚಾಚಿಕೊಂಡ ಕಪ್ಪು ಮೇಘ...
ಮತ್ತಷ್ಟು ರಂಗೇರಿದೆ
ವಿರಹಿಯ ನಿಟ್ಟುಸಿರಿಗೆ....!

೧೦) ಅವನ ತೋಳು ನಿನ್ನ ನಡು
ಬಳಸಿರಬೇಕಿಗ ,ಅವನ ಮಾತಿಗೆ
ನಿನ್ನ ಕೆನ್ನೆ ಕೆಂಪಗಾಗಿರಬೇಕಿಗ.....
ನಾ ಹಿಡಿದ ಮಧು ಬಟ್ಟಲಲಿ
ನನ್ನ ಕಣ್ಣೀರು ಜಾರಿ ಬಿದ್ದಿತೀಗ....

೧೧) ಒಂದೇ ಸಮಯದಿ ಎರಡು ಮಳೆ
ಮೇಘದ ಸಂಗಡ ಕಣ್ಣೀರು..
ಹರಿದರೇನು,,,
ಹೃದಯದ ಬೆಂಕಿ ಆರದಿನ್ನೂ....!

೧೨) ಹೊರಗೆ ಸೋನೆ ಮಳೆ ಸುರಿದು
ಅವನಿಯ ಬೆಂಕಿ ಆರಿ ಮೈ ತುಂಬ
ತಂಪು... ಒಳಗೆ ನಿನ್ನ ನೆನಪಿನ
ಮಳೆ ಸುರಿದು ಹೃದಯದ ಬೆಂಕಿ
ಹೊಸ ಕಿಚ್ಚು ಪಡೆದಿದೆ...

8 comments:

 1. ದೇಸಾಯರೇ, ಶರಣ್ರಿಯಪ್ಪ, ನಿಮ್ಮನೀಕಡೆ ಬರದೆ ಬಹಳಾ ದಿನ ಆತು ನೋಡ್ರೀ, ಪುರುಸೊತ್ತೇ ಸಿಗೂವಲ್ದು, ಆಷಾಡಕ್ಕೆ ಮು೦ಚೇನೇ ವಿರಹಗೀತೆ ಹಚ್ಚಿ ಬಿಟ್ಟೀರಲ್ಲ.

  ReplyDelete
 2. ದೇಸಾಯಿಯವರೆ...

  ಇವತ್ತು ರಂಗ ಶಂಕರದಲ್ಲಿ ನಿಮ್ಮನ್ನು ಭೇಟಿಯಾದದ್ದು ಖುಷಿಯಾಯಿತು...

  ನಿಮ್ಮ ಕವನಗಳು ತುಂಬಾ ಚೆನ್ನಾಗಿವೆ...

  " ಒಂದೇ ಸಮಯದಿ ಎರಡು ಮಳೆ
  ಮೇಘದ ಸಂಗಡ ಕಣ್ಣೀರು..
  ಹರಿದರೇನು,,,
  ಹೃದಯದ ಬೆಂಕಿ ಆರದಿನ್ನೂ.."

  This is very nice.....!

  ReplyDelete
 3. ವಾಹ್ ಕ್ಯಾ ಶಾಯರಿ!

  ReplyDelete
 4. ದೇಸಾಯಿ ಸರ್‌ರ,

  ಕವನ ಭಾಳ ಚಂದ ಐತ್ರೀ.. ಆಷಾಡ ಮಾಸದ ಗಂಡ ಹೆಂಡತಿ ವಿರಹವನ್ನು ಭಾಳ ಚಂದ ಹೇಳೀರಿ.

  ReplyDelete
 5. ಚನ್ನಗಿದವ ರೀ ಆಷಾಢ--ವಿರಹ---ಮುಕ್ತಕಗಳು...

  ಮದುವೆಯಾದವರಿಗೆ ಆಷಾಢದ ವಿರಹ ನೋವಾದರೆ,
  ನನ್ನಂತಹ ಮದುವೆಯಾಗದ ಹುಡುಗರಿಗೆ, ಮದುವೆಯಾಗುವವರೆಗೂ ಪ್ರತಿತಿಂಗಳು ಆಷಾಢವಿದ್ದಂತೆ... ;)

  ReplyDelete
 6. ಪರಾಂಜಪೆ ಸರ್ ಗೆ ಸುಸ್ವಾಗತ...ಹಾಗೆಯೇ ಧನ್ಯವಾದ ಕೂಡ..
  ಹೆಗಡೆ ಸರ್ ಮೈಸೂರು ಮಲ್ಲಿಗೆ ನಾಟಕ ಅಂತರಂಗ ಕಲಕಿದೆ...ಮುಂದೆ ಅದರ ಬಗ್ಗೆ ಬರೆಯಬೇಕೆಂದಿರುವೆ...
  ಗೋಪಾಲ್ ಮೆಚ್ಚಿ ಬರೆದಿರುವಿರಿ ಧನ್ಯವಾದಗಳು...
  ಸುನಾಥ ಸರ್ ತಮ್ಮ ಎಂದಿನ ಪ್ರೋತ್ಸಾಹ ಹೀಗೇ ಇರಲಿ...
  ಉಮೇಶ ಹಾಗೂ ಶಿವಪ್ರಕಾಶ ಅವರಿಗೆ ನೀವೇನೋ ಬ್ರಹ್ಮಚಾರಿ ಇರಬಹುದು ಆದ್ರೂ ವಿರಹ ಕಾಡದೇ ಇರುವುದಿಲ್ಲ...ಹುಷಾರು....!

  ಇಲ್ಲಿ ಬರೆದ ಕೆಲವು ಕವಿತೆ(ಹನಿ)ಗಳು ಹಿಂದೆ ವಿಕ ದಲ್ಲಿ ಪ್ರಕಟ ಆಗಿದ್ದವು...

  ReplyDelete
 7. ದೇಸಾಯಿ ಸರ್,

  ನಿಮ್ಮ ಈ ಬ್ಲಾಗ್ ಲಿಂಕಿಸಿಕೊಂಡಿರಲಿಲ್ಲ ಅದ್ದರಿಂದ ಇಷ್ಟು ಸೊಗಸಾದ ಚುಟುಕಗಳನ್ನು ಓದುವ ಅವಕಾಶ ತಪ್ಪಿಸಿಕೊಂಡಿದ್ದೆ..ಅದಕ್ಕಾಗಿ ಲಿಂಕಿಸಿಕೊಂಡಿದ್ದೇನೆ...ಮತ್ತು ಹಿಂಬಾಲಿಸುತ್ತಿದ್ದೇನೆ....

  ಆಶಾಡದ ಬಗೆಗಿನ ಎಲ್ಲಾ ಚುಟುಕು ಕವನಗಳು ತುಂಬಾ ಚೆನ್ನಾಗಿವೆ...
  ಪದಗಳ ಪ್ರಯೋಗ ಮತ್ತು ಭಾವಾರ್ಥ ಎರಡರಲ್ಲೂ ಹಿಡಿತ ಸಾಧಿಸಿದ ಕವನಗಳು ನನಗೆ ಇಷ್ಟವಾದವು....

  ಸುಂದರ ಸಂಜೆಗೆಂಪ
  ನುಂಗಿದ ಮೇಘ
  ಶಹನಾಯಿ ನುಡಿಸಿದ..

  ಇದಂತೂ ತುಂಬಾ ಇಷ್ಟವಾಯಿತು...

  ಧನ್ಯವಾದಗಳು.

  ReplyDelete