Monday, June 15, 2009

ರೇಡಿಯೋ---ನೆನಪು

-ರೇಡಿಯೋ ಜತೆ ನನ್ನ ಒಡನಾಟ ಶುರು ಅಗಿದ್ದು ಸುಮಾರು ೧೯೭೦-೭೧ ನೇ ಇಸವಿಯಿಂದ .ನನಗೆ ಇನ್ನೂ ನೆನಪಿದೆ
ನಮ್ಮ ಮನೆಯಲ್ಲಿ ಆಗ ಹಳದಿ ಬಣ್ಣದ ಕರೆಂಟಿನ ರೇಡಿಯೋ ಇತ್ತು. ಆಶಕ್ಕ ಸಂಜೆ ಕಾಲೇಜು ಮುಗಿಸಿ ಬಂದು ಹೆರಳು
ಹಾಕಿ ಕೊಳ್ಳುತ್ತ ಹಾಡು ಕೇಳಿಸಿಕೊಳ್ಳುತ್ತಿದ್ದಳು. ಆಗ ಸಂಜೆ ೪ ರಿಂದ ಐದೂವರೆ ವರೆಗೆ ವಿವಿಧ ಭಾರತಿಯಲ್ಲಿ
ತಮಿಳು,ತೆಲುಗು, ಕನ್ನಡ ಹಾಡು ಹಾಕುತ್ತಿದ್ದರು.ಸುಮಾರು ನಾಲ್ಕೈದು ಕನ್ನಡ ಹಾಡು ಹಾಕುತ್ತಿದ್ದರೆಂದು ನೆನಪು.
ಮುಂದೆ ನಮ್ಮ ಮನೆಯ ರೇಡಿಯೋ ಪುಣೆಗೆ ಹೋಯಿತು( ನಮ್ಮ ಅಣ್ಣ ಅದನ್ನು ಒಯ್ದ ಆ ರೇಡಿಯೋ ಅವರ ತಂದೆ
ಖರೀದಿಸಿದ್ದರು ಅಂತ ಅವ್ವ ಹೇಳಿದಳು , ಅಂದಹಾಗೆ ಅಣ್ಣ ಅಂದರೆ ದೊಡ್ಡಪ್ಪನ ಮಗ).ನನಗೆ ಬಹಳ ಬೇಜಾರಾಗಿತ್ತು.
ಅಣ್ಣಾಜಿ ಮನೆಯಲ್ಲಿ ದೊಡ್ಡ ರೇಡಿಯೊ ಇತ್ತು... ನಾವೆಲ್ಲ ಹುಡುಗ ಹುಡುಗಿಯರು ರವಿವಾರ ಮಧ್ಯಾಹ್ನ ಅವನ ಮನೆಯಲ್ಲಿ ಜಮಾಯಿಸುತ್ತಿದ್ದೆವು. ಧಾರವಾಡ ಆಕಾಶವಾಣಿ ಯಲ್ಲಿ ಅಭಿಲಾಶಾ ಕಾರ್ಯಕ್ರಮ ೧-೩೦ ರಿಂದ ೨-೦೦ರ
ವರೆಗೆ.ಆ ದಿನಗಳಲ್ಲಿ ಬರುತ್ತಿದ್ದ ಕೆಲ ಹಾಡುಗಳೆಂದರೆ "ಬಾಳ ಬಂಗಾರ ನೀನು " ," ಕಸ್ತೂರಿ ಕನ್ನಡ ಕುಲದ
ಕಟ್ಟಾಳು ಮೊಗವೀರ....".ಆ ದಿನಗಳು ಮರಳಿ ಬರಲಾರವು.

ಅಣ್ಣಾಜಿ ಯ ಮನೆಯಲ್ಲಿಯೇ ನನಗೆ ಕ್ರಿಕೆಟ್ ಕಾಮೆಂಟ್ರಿ ಯ ಗುಂಗು ಹಿಡಿದಿದ್ದು. ನಮಗೆ ಇಂಗ್ಲೀಶ್ ಆಗ ತಿಳಿಯುತ್ತಿರಲಿಲ್ಲ ಅಣ್ಣಾಜಿ ನಮಗೆ ತಿಳಿಸಿ ಕೊಡುತ್ತಿದ್ದ.ಅದು ಸುಮಾರು ೧೯೭೪-೭೫ ನೇ ಇಸವಿ. ಲಾಯ್ಡ ತನ್ನ ಟೀಮ್
ತಗೊಂಡು ಬಂದಿದ್ದ. ಹುಬ್ಬಳ್ಳಿ ಯ ದುರ್ಗದ ಬೈಲು ಅಲ್ಲಿಯ ದತ್ತಾತ್ರೆಯ ಗುಡಿಯ ಎದಿರು score board ಹಚ್ಚಿರುತ್ತಿದ್ದರು. ನನಗಿನ್ನೂ ನೆನಪಿದೆ. ಬೆಂಗಳುರಿನ ಈಗಿನ stadium ನಲ್ಲಿ ಮೊದಲ ಮ್ಯಾಚ್ ಅದಾಗಿತ್ತು.
ವಿಶ್ವನಾಥ ಆಡುತ್ತಿದ್ದ ಸುಮಾರು ೨೩ ರನ್ ಹೊಡೆದಿರಬೇಕು ಮುಂದಿನ ಬಾಲ್ ಸಿಕ್ಸರ್ ಎತ್ತಿದ್ದ ಆಗ ಅಲ್ಲಿ ನೋಡಲು/ಕೇಳಲು ಸುಮಾರು ೫೦ ಜನ ಸೇರಿದ್ದರು... ಹೋಯ್ ಎನ್ನುವ ಗದ್ದಲ ಮುಗಿಲು ಮುಟ್ಟಿತ್ತು...
ಮುಂದಿನ ಎಸೆತದಲ್ಲಿಯೇ ವಿಶಿ ಔಟ ಆದಾಗ ಅಲ್ಲಿ ನೀರವ ಮೌನ ಕವಿದಿತ್ತು.
ಆ score board ನ ಹುಚ್ಚು ಬಹಳಿತ್ತು ನಮಗೆಲ್ಲ. ನಾವೂ ಸಹ ಆ ಪ್ರಯೋಗ ನಮ್ಮ ವಾಡೆ ದಲ್ಲಿ ಮಾಡಿದೆವು.
ಬಾಂಬೆ ಯಲ್ಲಿ ಕಡೆಯ ಮ್ಯಾಚ್ ವೇಳೆಗೆ ನಮ್ಮ score board ರೆಡಿಯಾಗಿತ್ತು.ಸುಂದರವಾಗಿ ಅಕ್ಷರ ಬರೆಯುತ್ತಿದ್ದ
ವಿಜು ಬೋರ್ಡು ತಯಾರು ಮಾಡಿದ. ಅಣ್ಣಾಜಿ ಮನೆಯ ರೇಡಿಯೋ ಜೋರಾಗಿ ಹಚ್ಚಿ ಅಂಗಳದ ಹೊರಗೆ ಬೋರ್ಡು
ನೇತು ಹಾಕಿದ್ದೆವು... ಲಾಯ್ಡ ಆ ಮ್ಯಾಚ್ ನಲ್ಲಿ ಡಬಲ್ ಸೆಂಚುರಿ ಬಾರಿಸಿದ್ದ ಅವನ ಹೆಸರಿನ ಎದಿರು ತೂಗು ಹಾಕಿದ್ದ
ಅಂಕೆ ಬದಲಾಯಿಸುವುದರಲ್ಲಿ ನಾವು ಸುಸ್ತಾಗಿ ಹೋದೆವು.
ಕಾಮೆಂಟ್ರಿಯ ಮಾತು ಬಂದಿದೆ ಅಂದಾಗ ನಾನು ಕೆಲವು ಯುಗಪುರುಷರ ಹೆಸರು ಇಲ್ಲಿ ನೆನೆಯಲೇ ಬೇಕು.
ಅನಂತ್ ಸೆಟಲ್ ವಾಡ್ , ಸುರೇಶ್ವರಯ್ಯಾ , ಟೊನಿ ಕೋಜಿಯರ್, ಮುರಳಿ ಮನೋಹರ್‍ ಮಂಜುಲ್, ಸುಶೀಲ್ ದೋಶಿ, ಕ್ರಿಸ್ ಮಾರ್ಟಿನ್ ಜೇಕಿನ್ಸ್ , ಟ್ರೆವರ್ ಬೇಲಿ, ಡಾನ್ ಮೊಸೆಸ್ ಈ ಹೆಸರುಗಳು ಕ್ರಿಕೆಟ್ ಇರುವವರೆಗೂ
ಅಜರಾಮರವಾಗಿ ಇರುತ್ತವೆ. ಈಗಿನ ಹರ್ಶ ಬೋಗಲೆ ಸಹ ರೇಡಿಯೋದಲ್ಲಿಯೇ ಮೊದಲು ಶುರು ಮಾಡಿದ್ದು ತನ್ನ
ಕರಿಯರ್ ಅನ್ನು.
"ಬಿನಾಕಾ ಗೀತ್ ಮಾಲಾ" ರೇಡಿಯೋಕ್ಕೆ ಸ್ಟಾರಪಟ್ಟ ತಂದುಕೊಟ್ಟ ಕಾರ್ಯಕ್ರಮ ಅಂತ ಹೇಳಬೇಕು...ಅಮೀನ್ ಸಯಾನಿ ಎನ್ನುವ ಮಾಂತ್ರಿಕ ಇದನ್ನು ನಡೆಸಿಕೊಡುತ್ತಿದ್ದ ..."ಬಹನೊಂ ಭಾಯಿಯೊಂ" ಆತ ಹೇಳಿದ್ರೆ ಸಾಕು ನಮ್ಮ ಕಿವಿ ನೆಟ್ಟಗಾಗುತ್ತಿದ್ದವು....ನಮ್ಮ ವಾಡೆದ ಅಂಗಳದಾಗ ಕಟ್ಟಿಮ್ಯಾಲ ಕೂತು ಬುಧವಾರ ಸಿಲೋನ್ ರೇಡಿಯೋದಾಗ ಬಿನಾಕ
ಮುಗಿಯುವವರೆಗೂ ನಮಗ ಊಟ ಸಹ ನೆನಪಾಗುತ್ತಿರಲಿಲ್ಲ. ಸುಮಾರು ೮=೩೦ಕ್ಕೆ ನಮ್ಮ ನಮ್ಮಲ್ಲಿಯೇ ಬೆಟ್ಟಿಂಗ ಶುರುಆಗತಿತ್ತು ಅಂದಿನ ಒಂದನೆ ನಂಬರ್ ಗೀತೆ ಯಾವುದು ಎಂದು.... ಆ ಕಾಲದ ಕೆಲವು ಹಾಡುಗಳ ಪಟ್ಟಿ....
೧)"ನೂರಿ" ಚಿತ್ರದ ಆಜಾರೇ ಆಜಾರೆ ಓ ಮೇರೆದಿಲಬರ್ ಆಜಾ...
೨)ಮುಕದ್ದರ್ ಕ ಸಿಕಂದರ್ ಚಿತ್ರದ " ಸಲಾಮೆ ಇಶ್ಕ ಮೆರಿ ಜಾನ್ ಕಬೂಲ್ ಕರಲೋ..."
೩) "ಅಖಿಯೊಂಕೆ ಝರೊಂಕೊಸೆ " ಚಿತ್ರದ ಅಜರಾಮರ ಹಾಡು...
ಒಂದೇ ಎರಡೇ ಒಂದೊಂದು ಅಪ್ರತಿಮ....ಬಿನಾಕಾ ದಲ್ಲಿ ಇಪ್ಪತ್ತೈದು ಸಾರಿ ಪ್ರಸಾರಆದ ಹಾಡಿಗೆ ಸರತಾಜ್ ಗೀತೆ ಪದವಿ ಸಿಗುತ್ತಿತ್ತು ಮುಂದೆ ವಾರ್ಷಿಕ ಬಿನಾಕ ಗೀತಮಾಲಾದಲ್ಲಿ ಆ ವರ್ಷದ ಸರತಾಜ್ ಹಾಡುಗಳೆಲ್ಲ ಪ್ರಸಾರ ಆಗುತ್ತಿದ್ದವು...
ಬಿನಾಕಾದಲ್ಲಿ ಹಾಡು ಬಂದಿದೆ ಎಂದರೆ ಆ ಹಾಡು ಹಿಟ್ ಆಗಿದೆ ಅಂತಲೇ ಅರ್ಥ....!

ರೇಡಿಯೋ ನಾ ಈಗಲೂ ಆವಾಗಾವಾಗ ಕೇಳುತ್ತೇನೆ...ಕನ್ನಡ ಕಾಮನಬಿಲ್ಲು FM ನನ್ನ ಮೆಚ್ಚಿನ ತಾಣ...ಯಾವಾಗಲಾದರೂ
ಮುಂಜನೆ ೧೧=೦೦ಕ್ಕೆ ಪ್ರಸಾರಆಗುವ ಮೀಠಿಯಾದೆಂ ಕೇಳತಿರತೇನಿ..
ರೇಡಿಯೋ ಒಂದು ಮಾಯೆ ...ಅದೊಂದು ಅದ್ಭುತ ಪ್ರಪಂಚ....

6 comments:

 1. ರೇಡಿಯೋದಲ್ಲಿ ಕ್ರಿಕೆಟ್ commentary ಹಾಗೂ ಬಿನಾಕಾ ಗೀತಮಾಲಾ ಕೇಳುವ ಆ ದಿನಗಳು!ನಮ್ಮ ಎಳೆಯತನದ ಚಿನ್ನದ ದಿನಗಳು ಅವು!

  ReplyDelete
 2. ದಿನಾಲು ಮುಂಜಾನೆ ೧೧ಕ್ಕ ಎಫ್ ಎಮ್‍ದಾಗ ಬರೊ ’ಮೀಠಿ ಯಾದೆಂ’ ಮನ್ಯಾಗಿದ್ದಾಗ ನಾನೂ ತಪ್ಪದ ಕೇಳ್ತಿನ್ರಿ ಉಮೆಶ್, ನಿಮ್ಮ ಈ ಲೇಖನಾ ಓದಿ ಹಳೆ ನೆನಪ್ಗೋಳು ತಾಜಾ ಆದ್ವು. ಥ್ಯಾಂಕ್ಸ್.

  ReplyDelete
 3. ನಿಮ್ಮ ಅಂಬೋಣಗಳು ಉಂಬಲಿಕ್ಕ ಭಾಳ ರುಚಿ ಅವರೀ ಯಪ್ಪಾ, ದೇಸಾಯಪ್ಪಾ.

  ReplyDelete
 4. ಸುನಾಥ ಸರ್ ನಿಮ್ಮ ಗೋಲ್ಡನ್ ದಿನಗಳ ಬಗ್ಗೆ ಕೇಳುವ ಕುತೂಹಲವಿದೆ...ಕೇಳಿಸುತ್ತೀರಾ?
  ಮೇಡಂ ಧನ್ಯವಾದಗಳು...ಆಗಾಗ ಬರ್ಕೊತ ಇರ್ರಿ...
  ಶಾಸ್ತ್ರಿ ಸರ್ ನಿಮ್ಮ ಮೆಚ್ಚಿಗೆಗೆ ಧನ್ಯವಾದಗಳು... ಆಗಾಗ ಬರ್ತಾ ಇರಿ...

  ReplyDelete
 5. ಚೆನ್ನಾಗಿದೆ. ನಿಮ್ಮ ಹಳೆಯ ದಿನಗಳು ನನ್ನ ಬಾಲ್ಯವನ್ನು ನೆನಪಿಸಿದವು.

  ReplyDelete
 6. ದೇಸಾಯಿ ಸರ್,

  ಬಾಲ್ಯದ ರೇಡಿಯೋ ನೆನಪುಗಳು ಚೆನ್ನಾಗಿವೆ. ರೇಡಿಯೋ ಕೇಳಿ ಸ್ಕೋರ್ ಬೋರ್ಡ್ ಬರೆಯುವುದು ಹೊಸತು ಅನ್ನಿಸಿತು...

  ನನಗೂ ರೇಡಿಯೋ ಮೆಚ್ಚಿನ ಹವ್ಯಾಸ...೧೧ ಗಂಟೆಗೆ FM ರೈನ್‌ಬೌನಲ್ಲಿ ಬರುವ ಮೀಠಿಯಾದೆಂ ನಾನು ತಪ್ಪದೇ ಕೇಳುತ್ತೇನೆ...ಅದ್ರೂ ನಾನು ಇತ್ತೀಚೆಗೆ ರೇಡಿಯೋ ಮಿರ್ಚಿ ಕೇಳಲು ಶುರುಮಾಡಿದ್ದೇನೆ...[ಅವರು ಕೇಳುವ ಪ್ರಶ್ನೆಗೆ ಉತ್ತರ ಮೆಸೇಜ್ ಮಾಡಿದರೆ ಬಿಟ್ಟಿ ಸಿನಿಮಾ ಟಿಕೆಟ್ ಕೊಡುತ್ತಾರೆ. ಆ ರೀತಿ ನನಗೆ ಟಿಕೆಟ್ ಅಲ್ಲದೇ ಬಹುಮಾನಗಳು ದೊರಕಿವೆಯಾದ್ದರಿಂದ ಅದ್ರ ಬಗ್ಗೆ ಒಲವು ಹೆಚ್ಚು..ದೀಪಾವಳಿ ಡಿವಿಡಿ ಪ್ಲೇಯರ್ ಗೆದ್ದಿದ್ದೆ.]

  ಧನ್ಯವಾದಗಳು.

  ReplyDelete