Tuesday, September 30, 2014

ದುಃಖ ಬಂದಾಗ..



ದುಃಖ ಇದ್ದೀದ್ದೇ ಅದು ಹೇಗಿದ್ದರೂ ಬರುವುದೇ..ಅದಕೆ ಹೆದರಿ ಮುಂಬಾಗಿಲ
ಮುಚ್ಚಿಕೊಂಡರೆ ಹಿತ್ತಲಬಾಗಿಲಿಂದ ಒಳಬಂದೀತು..ಅದು ಸರ್ವರೂಪಿ ಕಿಟಕಿಯ ಸಂದಿಯಿಂದಲೋ
ಬಾಗಿಲ ಮರೆಯಿಂದಲೋ ಬೆಳಕಿಂಡಿಯ ಮೂಲಕವೋ ಅದು ಒಳಗೆ ಬಂದೇ ಬರುವುದು..
ಹೀಗೆ ಮಾಡಿದ್ರೆ ಹೇಗೆ ಅದು ಬಾಗಿಲ ಹೊರಗೆ ನಿಂದಾಗ ಬಾಗಿಲ ತೆರೆದು ಒಳಗೆ ಕರೆಯುವುದು..
ಆರಾಮ ಕುರ್ಚಿಯಲ್ಲಿ ಅದನು ಕೂಡಿಸಿ ಚಹಾ ,ಕಾಫಿ ಕೂಲ್ ಡ್ರಿಂಕ್ ಕೇಳುವುದು ಉಪಚರಿಸುವುದು..
ನಮ್ಮ ಸೋಪಸ್ಕಾರಕ್ಕೆ ಅದು ಅಷ್ಟು ಸುಲಭವಾಗಿ ಬಗ್ಗದು ಅದು ಬಹು ಚಾಲಾಕಿ..ಅದರದು ಹದ್ದಿನಕಣ್ಣು..
ಮನೆಯ ಟಿವಿ, ಫ್ರಿಜ್ಜು, ವಾಶಿಂಗಮಶೀನಿನ ಮೇಲೆ ಕಣ್ಣು ಹಾಕಬಹುದು..ತುಂಬಬೇಕಾದ ಕಂತುಗಳ ರಾಶಿ ರಾಚಬಹುದು ಖಕೆ
ಮನೆ ಜಂತಿ ನೋಡುತ್ತ ತುಂಬಬೇಕಾಗಿರುವ ಇಎಮ್ಐ ನೆನಪುಮಾಡಿಕೊಡಬಹುದದು..ಅದರದೋ ನಿರಂತರ ಹಸಿವು
ನಿಮ್ಮ ಮನೆಯಲ್ಲಿ ಸಮಾಧಾನದ ಲವಲೇಶವೂ ಅದಕೆ ಕಂಡೀತೋ..ಅದು ಅದ ಆಪೋಶನ ತಗೊಂಡು ಓಬ್ ಅಂದೀತು..
ಹಾಗೆಯೇ ನಿಮ್ಮೊಳಗನ್ನು ಬಗೆದು ಬತ್ತಲಾಗಿಸುವ ಕಲೆಯೂ ಅದಕಿದೆ..ಅದರ ಈ ಆಟಕೆ ನೀವು ಸೋತು ಬಳಲಿದಿರೋ
ಮುಗೀತು ಅನಾಮತ್ತಾಗಿ ನಿಮ್ಮನ್ನೇ ನುಂಗಿ ಹಾಕೀತು..ಬದಲು ಅದಕೆ ಉಪಚರಿಸಿಯಾದ ಮೇಲೆ ಅದರ ಬಗ್ಗೆ ಆತ್ಮೀಯವಾಗಿ ಮಾತಾಡಿರಿ..
ಮಳೆ ಬೆಳೆ ಹೇಗೆ ವಿಚಾರಿಸಿರಿ,ಅದನೊಮ್ಮೆ ನಯವಾಗಿ ನೇವರಿಸಿ ನೋಡಿ..ಅದು ಕರಗಬಹುದು ಸೋಲಬಹುದು ಬಂದದಾರಿಗೆ ಸುಂಕವಿಲ್ಲ
ಎಂದು ಮರಳಬಹುದು..ಎಲ್ಲ ಗೆದ್ದೆ ಎಂಬ ಭ್ರಮೆ ಅದಕೆ ಗೊತ್ತಿಲ್ಲ ನಿಮ್ಮ ಕಣ್ಣಪಾಪೆಗಳ ಹಿಂದೊಂದು ಕನಸಿದೆ..ಅಲ್ಲಿ ನಿಮ್ಮ ಸುಖ ಅವಿತಿದೆ ಅಂತ..
ಈಗ ಅದು ಬಂದರೆ ಹೀಗೆ ಮಾಡೋಣ..ಇದೊಂದಾಟವ ಆಡಿಯೇ ಬಿಡೋಣ..!!!!!

(ಸಂದೀಪ್ ಖರೆ ಬರೆದ ಮರಾಠಿ ಕವಿತೆಯೊಂದರ ಸಾರಾಂಶವಿದು..ಹೇಗಿದೆ?)


Tuesday, April 1, 2014

ಅವರವರ ಅನುಕೂಲ..

ಎಲ್ಲಾ ಶುರುಆಗಿದ್ದು ಮಧ್ಯಾಹ್ನ ಬಂದ ಫೋನಿಂದ. ಅದ ಇನ್ನೂ ಮೀಟಿಂಗ ಮುಗಸಿ ಹಂಗ ಕಂಪನಿ ಕ್ಯಾಂಟಿನನಾಗ ಮಸ್ತ ಪೈಕಿ ಊಟಹೊಡದು ನಾಳಿನ ವೀಕೆಂಡ ಬಗ್ಗೆ
ವಿಚಾರಮಾಡತಿದ್ದೆ.
"ಹಲೋ ನಾನು ನಿಖಿಲ ಮಾತಾಡುದು..ಮೇಘಾನ ಬಾಬಾ ಹೆಂಗಿದ್ದಿ...?"
ಅವರ ದನಿ ಕೇಳಿದಾಗ ಮೊದಲು ಹೊಳೆದಿದ್ದು ಅದರಲ್ಲಡಗಿದ ಉತ್ಸಾಹ. ಭಾಳ ಖುಶಿಯಾಗ ಇದ್ದವರಂಗ ಇತ್ತು ಆ ದನಿ. ನಾ ವಿಶ್ ಮಾಡಿ ಹಂಗ ಅಂತ ಹೇಳಿದೆ.
"ಓಕೆ ಯು ಆರ್ ರೈಟ್ ನಾ ಖುಶಿಯಾಗಿದ್ದೇನಿ ಅನ್ನೋದು ಖರೆಅದ. ಆ ಖುಶಿಯೊಳಗ ನೀನೂ ಶಾಮೀಲಾಗಬೇಕು ಇದು ನನ್ನ ಹಂಬಲ ಅದ. ಹೇಳು ಸಂಜಿನ್ಯಾಗ ಸಿಗತಿಯೇನು"
ನಾ ಒಮ್ಮೆಲೆ ಒಪಿಕೊಳ್ಳಿಕ್ಕೆ ತಯಾರಿರಲಿಲ್ಲ. ಅಕಸ್ಮಾತ ಮೋನಿ ಏನರ ಪ್ಲಾನ ಮಾಡಿರಬಹುದು ನಾ ವಿಚಾರ ಮಾಡುವುದಾಗಿ ಹೇಳಿದೆ.
"ಏನಿಲ್ಲ ನಿನ್ನ ತಾಯಿಮಾಡಿದ ಭಾಜಿ ಭಾಕರಿ ನೆನಪಾತು ಅವತ್ತು ನಿಮ್ಮ ಕಾಕುಮನಿಯೋಳಗ ಬಂದಾಗ ಎಣಿಸಿ ಆರು ತಿಂದಿದ್ದೆ ನೋಡು. ನೀನೂ ಕರದರ ನಾ ಏನೂ ಬರೂದಿಲ್ಲ
ಅನ್ನೂದಿಲ್ಲ ಮತ್ತ.."
"ಇಲ್ಲ ಹಂಗೇನಿಲ್ಲ ಆದ್ರ ಅವ್ವ ಈಗ ಧಾರವಾಡಕ್ಕ ಹೋಗ್ಯಾಳ ಸೋ ಸಾರಿ ಆದ್ರ ನಿಮಗ ಭಕ್ಕರಿನ ತಿನ್ನೂದಿದ್ರ ಬೇಕಾದ್ರ ಹೊಟೆ¯ಲಿಗೆ ಹೋಗೋಣು.
ನಿಮಗ ಬ್ಯುಗಲರಾಕ್ ಗೊತ್ತದ ಅಲ್ಲ ಅದರ ಬಾಜೂನ ಛಲೋ ಹೊಟೆಲ ಅದ.ರೊಟ್ಟಿ ಊಟ ಫೇಮಸ ಅದ ಅಲ್ಲಿದು..ನಿಮಗ ಅವಡಿ ವಸ್ತು ಸಂಗೀತನೂ ಇರತದ.."
"ವಾ ಖೂಪಛಾನ ಆತು ನಾ ಬರತೇನಿ ಜೋಡಿ ನಿನಗ ಸರಪರೈಸ ಅಂತ ಹೊಸಾ ಹೆಂಡತಿನ ಕರಕೊಂಡು ಬರತೇನಿ.."
"ಅಂದ್ರ ನನಗ ತಿಳೀಲಿಲ್ಲ..ಚಾಷ್ಟಿಮಾಡತೀರಿ ಹೌದಲ್ಲೋ.."
"ಇಲ್ಲ ನಾ ನನ್ನ ಸೆಕೆಂಡ ಹನಿಮೂನಿಗೆ ಬಂದೇನಿ ಅವನಿ ಅದ ನನ್ನಹೊಸಾ ಹೆಂಡತಿಗೆ ಬೆಂಗಳೂರು ಭಾಳ ಸೇರತದ ಅದಕ ಇಲ್ಲಿ ಬಂದೆ..ಸೋ ಸಂಜಿನ್ಯಾಗ ಬಾ ನಿನ್ನ ಮಿಸ್ಟರನೂ
ಕರಕೊಂಡು ಬಾ ಭೆಟ್ಟಿಆಗತದ.." ಅವರ ದನಿಯಲ್ಲಿ ಯಾವ ಕುಹಕವೂ ಇರಲಿಲ್ಲ. ನಿಖಿಲ ವಾಗ್ಲೆ ಇನ್ನೊಂದು ಮದಿವಿ ಆಗ್ಯಾರ ಅದು ಹೆಂಡತಿ ಸತ್ತು ಆರುತಿಂಗಳಿನೊಳಗ. ಇದು
ವಿಚಿತ್ರ ಅನಸತು. ಅವತ್ತು ಪುಣೆಗೆ ಹೋದಾಗ ಇದೇ ಮನುಷ್ಯ ಮುಂದ ಬರೀ ಶೂನ್ಯ ಅದ ರಜನಿ ಇಲ್ಲದ ನಾ ಹೆಂಗ ಬದುಕಿರಲಿ ಅಂತ ಗೋಳಾಡಿದ್ದ.ಮೇಘಾನ ತಾಯಿ ಕ್ಯಾನ್ಸರ
ಆಗಿ ತೀರಿಕೊಂಡಿದ್ರು. ಅವರನ ಉಳಸಿಕೊಳ್ಳಲಿಕ್ಕೆ ನಿಖಿಲ ಬಹಳ ಹೋರಾಡಿದ್ರು. ಒಂದು ಸಲ ಬಂದು ಹೋಗಿ ಮತ್ತ ತಿರುಗಿ ವಕ್ಕರಿಸಿತ್ತು ಮಾರಿ. ಬ್ರೆಸ್ಟ ಕ್ಯಾನ್ಸರ ಇತ್ತವರಿಗೆ.
ಮೇಘಾ ಚೂರುಚೂರಾಗಿದ್ದಳು. ನನ್ನ ಅಪ್ಪಿಕೊಂಡು ಜೋರಾಗಿ ಅತ್ತು ಬಿಟ್ಟಿದ್ದಳು. ನನಗ ತಿಳದಂಗ ನಾ ಸಮಾಧಾನದ ಮಾತು ಹೇಳಿದ್ದೆ. ನಿಖಿಲರಿಗೆ ಸಮಾಧಾನ ಹೇಳುವಷ್ಟು
ದೊಡ್ಡಾಕಿ ಅಲದಿದ್ರೂ ಒಂದು ನಾಕು ಮಾತಾಡಿದ್ದೆ.ಅಳುವಿನ ನಡುವೆ ಅವರು ಅಂದಿದ್ರು.
"ಹೌದು ನೀ ಅನ್ನೋದು ಖರೆ ಶೋ ಮಸ್ಟ ಗೋ ಆನ ಆದ್ರ ಅಕಿ ನನ್ನ ಜೋಡಿ ಇಪ್ಪತ್ತು ವರ್ಷಬಾಳುವೆ ಮಾಡಿದಳು. ನನ್ನೆಲ್ಲ ಸುಖದುಖದೊಳಗ ಪಾಲುದಾರಿದ್ದಳು. ಹಿಂಗ ಅಕಿ
ಹೋಗಿದ್ರಿಂದ ಶೂನ್ಯ ಆವರಿಸೇದ ಅದು ತುಂಬೂದು ಭಾಳ ದುಸ್ತರ ಅದ."
---------------------------------------------------------
ರಾತ್ರಿ ಒಮ್ಮೆಲೆ ಎಚ್ಚರಾತು. ಅಂದು ಸಂಜೆ ನಡದ ಘಟನಾ ಎಲ್ಲಾ ನೆನಪಾತು. ಕಾರು ನಿಲ್ಲಿಸಿ ಹಾದಿ ನೋಡತಿದ್ದೆ. ಕೈಯಾಗ ಬುಕೆ ಇತ್ತು. ಎಷ್ಠ ಇದ್ರೂ ಒಂಥರಾ ಮುಜುಗರ ಇತ್ತು.
ಹಿಂಗ ಮದಿವಿ ಆಗಿರೋದು ಸರಿ ಏನು ಅನ್ನುವ ಪ್ರಶ್ನಿ ಮೋನಿಗೂ ಕೇಳಿದ್ದೆ.ಅವ ಸಮಾಧಾನದ ಮಾತು ಹೇಳಿದ್ದ ಅವಗೂ ಮೇಘಾನ ಪರಿಚಯ ಇತ್ತು ಮತ್ತು ಅಕಿ ತಾಯಿ
ತೀರಿಕೊಂಡಾಗ ನನ್ನ ಜೋಡಿ ಪುಣೆಗೂ ಬಂದಿದ್ದ.ಅವಗೂ ಇದು ವಿಚಿತ್ರ ಅನಿಸಿತ್ತು ಆದರ ಅವಾ ಅಂದಿದ್ದ "ಅವರವರ ಅನುಕೂಲ ಅನಾನುಕೂಲ ಅದ ಇದು ನಾವು ಹೊರಗಿನವರು
ಹೆಂಗ ಹೇಳೋದು ನೀ ಹೋಗಿ ಬಾ ನಂಗ ಕಾಲ್ ಅದ ರಾತ್ರಿ ತಡಾಆಗಬಹುದು.." ದೊಡ್ಡಗಣಪತಿಗೆ ಹೋಗಿದ್ರು ಅಂತ ಕಾಣತದ ಅವರ ಹಣಿಮ್ಯಾಲ ಕುಂಕಮ ಇತ್ತು.
ಜೋಡಿ ಇದ್ದ ಹೆಂಗಸಿಗೆ ನೋಡಿದೆ. ಮೇಕಪ್ ಇರಲಿಲ್ಲ..ಐವ್ವತ್ತರ ಸುಮಾರಿನ ಹೆಂಗಸು ಸಡಿಲವಾದ ನೀಲಿ ಚೂಡಿಹಾಕೊಂಡಿದ್ದರು. ಗೋದಿ ಬಣ್ಣ ಮೊಳದುದ್ದ ಮಲ್ಲಿಗಿ ಹಾಕೊಂಡಿದ್ದರು.
ನಿಖಿಲ ಪರಿಚಯಿಸಿದಾಗ ಆತ್ಮೀಯವಾಗಿ ಹಿಂದಿಯಲ್ಲಿ ಮಾತಾಡಿದರು ನಾ ಮರಾಠಿಯಲ್ಲಿ ಮಾತಾಡಿದ್ದು ನೋಡಿ ಖುಶಿಆದರು. ಬುಕೆ ಕೊಟ್ಟು ಅಭಿನಂದಿಸಿದೆ.
ಊಟ ಸೊಗಸಾಗಿ ಮಾಡಿದವರೆಂದರೆ ನಿಖಿಲ ಒಬ್ಬರೇ. ಅವನಿ ಒಂದು ಭಕ್ಕರಿಸಹ ಪೂರ್ತಿ ತಿನಲಿಲ್ಲ. ಯಾಕೋ ಪದೇಪದೇ ಅದ ನೆನಪಾಗತಿತ್ತು. ಹೆಂಡತಿಸಾವಿನಿಂದ ಕಂಗಾಲಾಗಿ
ಕೂತ ಆ ಮನಿಶಾ ಎಲ್ಲಿ ಉತ್ಸಾಹದ ಬುಗ್ಗೆಯಾದ ಈ ನಿಖಿಲ ಎಲ್ಲಿ ಇಬ್ಬರಲ್ಲೂ ಬಹಳ ಫರಕಿತ್ತು.
ಅವನಿ ಬಾಳಲ್ಲಿ ಬಂದಮೇಲೆ ತಮ್ಮಲ್ಲಾದ ಬದಲಾವಣೆಯ ಬಗ್ಗೆ ಹೇಳುತ್ತಿದ್ದರು..ನನಗ ಅದೆಲ್ಲ ನಾಟಕೀಯ ಅನಸತಿತ್ತು ಯಾವಾಗ ಎದ್ದು ಹೋದೇನು ಅನ್ನೋ ಚಡಪಡಿಕೆ
ಶುರುಆತು. ಎರಡನೇ ಮದುವಿ ಹನಿಮೂನ ಎಲ್ಲಾ ಯಾಕ ಅಂತ ಇವರಂದಾಗ ರಜನಿ ಹೆಂಗ ಕನವಿನ್ಸ ಮಾಡಿದಳು ಹೆಂಗ ಅಕಿಯಿಂದ ದಿನಮಾನ ಬದಲಾಗ್ಯಾವ ಹೆಂಗ ಅವನಿ
ಇಲ್ಲಿ ಮಸಾಲೆ ದೋಸೆ, ಫಿಲ್ಟರ ಕಾಫಿಗೆ ಫಿದಾ ಆಗ್ಯಾಳ ಮಾತಿನ ತುಂಬ ಬರೆ ಅವನಿ ತುಂಬಿಕೊಂಡಿದ್ದಳು. ಈಗ ಆರು ತಿಂಗಳ ಹಿಂದೆ ಮೊದಲನೇ ಹೆಂಡತಿಯ ಸೇವೆಯೇ
ಗುರಿ ಅನ್ನುತ್ತಿದ್ದ ಇದೇ ಮನುಷ್ಯ ಹಿಂಗ ಬದಲಾಗತಾನ ಅನ್ನೊದು ಅಷ್ಟು ಸಹಜವಾಗಿ ಒಳಗ ಇಳಿಯುವುದಲ್ಲ.
ಎಲ್ಲಕ್ಕೂ ಮಿಗಿಲಾಗಿ ದಿಗಿಲಾದದ್ದು ಅಂದರ ಮೇಘಾ ಈ ಎರಡನೇ ಮದುವೆ ಬಗ್ಗೆ ಪ್ರಸ್ತಾಪಿಸದೇ ಇದ್ದುದು. ಒಂದೆರಡ ಸಲ ಚಾಟ್ ನಲ್ಲಿ ಸಿಕ್ಕಿದ್ದಳು..ಫೇಸಬುಕ್ಕಿನಲ್ಲೂ ಕೂಡ
ಈ ಬಗ್ಗೆ ಹೇಳಿರಲಿಲ್ಲ.ಬಹುಷಃ ತಂದೆ ಇಟ್ಟ ಈ ಹೆಜ್ಜೆಯಿಂದ ತೀರ ಮುಜುಗರಕ್ಕೆ ಒಳಗಾಗಿದ್ದಾಳೋ ಹೆಂಗ, ಹಂಗ ನೋಡಿದ್ರ ಇದುವರೆಗೂ ಏನನ್ನೂ ಮುಚ್ಚಿಡದಾಕಿ ಈಗ
ಯಾಕ ಹಿಂಗ ಮಾಡಿದಳು..

ಅಕಿ ಮತ್ತು ನನ್ನ ಗೆಳೆತನ ಕೂಡಿದ್ದು ಬೆಳಗಾವಿಯೊಳಗ ಅಕಿ ಎಂಬಿಏ ಮಾಡಲಿಕ್ಕೆ ಬಂದಾಗ. ನಾನೂ ಕಾಕಾನ ಮನಿಯಾಗ ಇದ್ದು ಎಂಬಿಏಗೆ ಸೇರಿದ್ದೆ.
ಜೋಡಿ ಕಲಿಯುವಾಗ ಅಸೈನಮೆಂಟು, ಸೆಮಿನಾರು ಹಿಂಗ ಹತ್ತಿರವಾದೆವು ಅವಳ ತಾಯಿಗೆ ಅದಾಗಲೇ ಕ್ಯಾನ್ಸರ ಬಂದಿತ್ತು. ಬ್ರೆಸ್ಟ ಕ್ಯಾನ್ಸರು..ಒಂದು ಮೊಲೆಯನ್ನೇ ತೆಗೆದಿದ್ದರಂತೆ. ನಾ ಕಾಕುನ ಕಡೆ ಇದ್ದೆ
ಅಕಿ ಮನಿಯೊಳಗ ಮೇಘಾ ಆತ್ಮೀಯ ಅತಿಥಿಯಾದಳು. ಕಾಕಾ ಕಾಕು ಈ ಪುಣೆರಿ ಹುಡುಗಿಗೆ ಬಹಳ ಹಚಕೊಂಡರು. ಅವರ ತಂದೆ ತಾಯಿ ಬೆಳಗಾವಿಗೆ ಬಂದಾಗ ಭೇಟಿಯಾಗತಿದ್ರು.
ಒಂದು ಸಲ ಅವ್ವ ಬಂದಿದ್ದಳು ಅವಾಗ ಕಾಕುನ ಮನಿಯೊಳಗ ನಿಖಿಲ,ಮೇಘಾನ ತಾಯಿ ರಜನಿ ಊಟಕ್ಕ ಬಂದಿದ್ರು. ಅವ್ವ ಮಾಡಿದ ಭಕ್ಕರಿ ಚಪ್ಪರಿಸಿ ತಿಂದು ಅವ್ವಗ "ಅನ್ನಪೂರ್ಣ"
ಅಂತ ಹರಸಿ ಹೋಗಿದ್ದರು. ಮೇಘಾ ದಿನಾ ಸಂಜಿಮುಂದ ತನ್ನ ಆಯಿಗೆ ಫೋನ ಮಾಡತಿದ್ದಳು. ಆರೋಗ್ಯದ ಕಾಳಜಿ ವಹಿಸುವಂತೆ ತನಗೆ ತಿಳಿದ ರೀತಿಯಲ್ಲಿ ಹೇಳುತ್ತಿದ್ದಳು
ಮಾತಾಡತ ಮಾತಾಡತ ಎಮೋಶನಲ್ ಆಗತಿದ್ದಳು..ಅಳತಿದ್ದಳು. ನನಗೂ ಅಕಿ ಬಗ್ಗೆ ಕನಿಕರ ಇತ್ತು. ಇಂತಹಾ ಪರಿಸ್ಥಿತಿಯಲ್ಲೂ ಓದುವ ಛಲ ಅವಳಿಗೆ.ಅವಳ ಗುರಿ ನಿಚ್ಚಳವಾಗಿತ್ತು.
ನನಗೂ ಅವಳ ನಡಾವಳಿ ಪ್ರೇರಕ ಅನಿಸಿತ್ತು. ಕೋರ್ಸು ಮುಗದು ಕ್ಯಾಂಪಸ ಇಂಟರವ್ಯೂದಲ್ಲಿ ಅಕಿ ಸಿಲೆಕ್ಟ ಆಗಿದ್ದಳು ಪುಣೆ ಅವಳಿಗೆ ಬೇಕಾಗಿತ್ತು.
ಅದೇ ಊರಲ್ಲಿ ಎಚ್‍ಎಸ್ಬಿಸಿಯಲ್ಲಿ ಅವಳು ಸಿಲೆಕ್ಟ ಆಗಿದ್ದಳು. ನಾನು ಸಿಲೆಕ್ಟ ಆಗಿದ್ದೆ ಬೆಂಗಳೂರಿನ ಒಂದು ಐಟಿಕಂಪನಿಗೆ. ಹೋಗುವ ದಿನ ಅಪ್ಪಿಕೊಂಡು ಅತ್ತಬಿಟ್ಟಿದ್ದಳು.
ನಾವು ಬೇರೆ ಬೇರೆಯಾದರೂ ಮೇಲಗಳಿಂದ, ಫೋನಕಾಲುಗಳಿಂದ ಹಾಗೂ ಫೇಸಬುಕ್ಕಿನಿಂದ ನಿರಂತರ ಸಂಪರ್ಕದಲ್ಲಿದ್ದೆವು. ಅವಳ ಮದುವೆ, ಅವಳು 'ಪರಿ'ಗೆ ಜನ್ಮ ನೀಡಿದ್ದು ಅವಳು
ಖರೀದಿಸಿದ ಹೊಸ ಫ್ಲಾಟಿನ ವಾಸ್ತು ಹಾಗೆಯೇ ಅವಳ ತಾಯಿ ತೀರಿಕೊಂಡಾಗ ಹೀಗೆ ಅವಳ ಎಲ್ಲ ಸುಖದುಖಗಳಿಗೆ ನಾ ಸಾಕ್ಷಿಯಾಗಿದ್ದೆ. ನಾ ಮೋನಿಯನ್ನು ಮದುವೆಯಾದಾಗ
ಬಂದಿದ್ದಳು."ಲಕ್ಕಿ ಗರ್ಲ." ಅಂತ ಗುದ್ದಿ ಹೋಗಿದ್ದಳು. ಎಲ್ಲಾ ರೀತಿಯಿಂದ ಹತ್ತಿರ ಇದ್ದಾಕಿ ಈ ವಿಷಯ ಯಾಕ ಮುಚ್ಚಿಟ್ಟಳು ಇದು ಕೊರೀತಿತ್ತು.
---------------------------------------------------------
ಮೇಘಾ ಒಂದೆರಡು ಸಲ ಸಿಕ್ಕಿದ್ದಳು ಬೇರೆ ಎಲ್ಲ ವಿಷಯ ಸಲೀಸಾಗಿ ಮಾತಾಡಿದಾಕಿ ಯಾಕೋ ಅಕಿ ಬಾಬಾನ ಎರಡನೇ ಮದವಿ ಸುದ್ದಿ ಬಂದಾಗ ಸುಮ್ಮನಾದಳು. ಒಂದೆರಡು
ಸಲ ಹಿಂಗಾದ ಮೇಲೆ ನಾನೂ ಕೆದಕುವುದು ಬಿಟ್ಟೆ.ಆದರ ಮುಂದ ಅಚಾನಕ ಆಗಿ ಪುಣೆಗೆ ಹೋಗುವ ಪ್ರಸಂಗ ಬಂತು. ಮಾವುಶಿಯ ಮಗನ ಲಗ್ನ ಒಂದೆರಡು ದಿನ ರಜೆ ಹಾಕಿದರೆ
ಐದು ದಿನ ಒಟ್ಟುಸೂಟಿಯಗುವುದಿತ್ತು. ಮೋನಿ ಬರುವುದಿಲ್ಲ ಎಂದು ಕೈ ಎತ್ತಿದ. ನಾನೇ ವಿಮಾನವೇರಿ ಪುಣೆಯಲ್ಲಿಳಿದೆ. ಮದುವೆಯ Uಡಿಬಿಡಿಯ ನಡುವೆ ಮೇಘಾಗೆ ನಾನು
ಬಂದ ವಿಷಯ ತಿಳಿಸಿದೆ ಹುಡುಗಿಗೆ ಖುಶಿಯಾಗಿತ್ತು ವೀಕೆಂಡ್ ಇಬ್ಬರೂ ಹಳೆದಿನಗಳ ಪುನರಾವರ್ತನೆ ಮಾಡುವುದು ಅಂತ ನಿರ್ಧಾರವಯಿತು. ಸೂಚಿಸಿದಂತೆ ನಾ ಶುಕ್ರವಾರ
ಸಂಜೆ ಅವಳ ಫ್ಲಾಟಿಗೆ ಹೋದೆ. ಅಕಿ ಇನ್ನೂ ಬಂದಿರಲಿಲ್ಲ. ಅಕಿ ಗಂಡ ಲಂಡನ್ ಗೆ ಹೋಗಿದ್ದ..ಪರಿಗೆ ತಂದ ಚಾಕಲೇಟ ಕೊಟ್ಟು ಮೇಘಾಳ ಅತ್ತೆ ಮಾಡಿಕೊಟ್ಟ ಚಹಾ ಕುಡಿಯುತ್ತಿದ್ದೆ.
ಅವರೂ ಒಂದು ಕಪ್ ಹಿಡದು ಎದುರು ಕೂತಗೊಂಡರು.
"ಏನು ಹೊಸಾ ಜೋಡಪ ಭೇಟಿಯಾತೇನು ಬೆಂಗಳೂರಾಗ.." ಅವರ ದನಿಯಲ್ಲಿ ವ್ಯಂಗ್ಯ ಇರಲಿಲ್ಲ. ಏನು ಮಾತಾಡುವುದು ತಿಳಿಯದೆ ತಲೆ ಆಡಿಸಿದೆ.
" ಹುಂ ಒಂಥರಾ ಇಕಿ ಬಾಬಾನ ಕಾಳಜಿ ತಪ್ಪತು. ಮುಪ್ಪಿನಕಾಲದಾಗ ಸಾಥಿದಾರಿದ್ರ ಎಲ್ಲ ಸುರಳೀತ ಅನಸತದ.."
" ಆದ್ರ ಅವರು ಹೆಂಗ ಒಪ್ಪಿಕೊಂಡರು ಅಷ್ಟು ಹಚಕೊಂಡಿದ್ರು ಆಯಿ ತೀರಿಕೊಂಡಾಗ ಕುಸದುಹೋಗಿದ್ದರು ಈಗ ಒಮ್ಮೆಲೆ ಈ ಬದಲಾವಣಿ ನನಗ ಅರ್ಥಆಗಲಿಲ್ಲ.."
ದನಿಯಲ್ಲಿ ಸಾಧ್ಯವಿದ್ದಷ್ಟು ಕಮಿ ವ್ಯಂಗ್ಯ ತೋರಿಸಿದ್ದೆ.
" ಇಲ್ಲ ನೋಡು ಅವಶ್ಯಕತಾ ಎಲ್ಲ ಮಾಡಸತದ ಅದರ ಮುಂದ ಯಾರದೂ ಆಟ ನಡಿಯೂದಿಲ್ಲ.ಈಗ ಎಲ್ಲಾ ಸಹಜ ಆಗೇದ ಅಲ್ಲ ಅದು ಮುಖ್ಯ.."
" ಆದ್ರ ಕಾಕು, ಅವಶ್ಯಕತಾ ಅದ ಅಂತೇಳಿ ಅವರು ಹಿಂಗ ಮಾಡೂದ..ಆಯಿ ಸತ್ತು ಆರುತಿಂಗಳೂ ಆಗಿಲ್ಲ..ಅಂಥಾದ್ದೇನಾಗಿತ್ತು ಅವರಿಗೆ ಅದೂ ಮೇಘಾಹೆಂಗ ಸುಮ್ಮನಿದ್ಲು
ಅಕಿಗೆ ಅವರು ಮದುವಿ ಆಗತೇನಿ ಅಂತ ಹೇಳಿದಾಗ ಅಕಿಗೆ ಹೆಂಗಾಗಿರಬ್ಯಾಡ.."
" ಇಲ್ಲ ಇದರಾಗ ಅಕಿ ಬಾಬಾಂದು ಏನೂ ತಪ್ಪಿರಲಿಲ್ಲ. ನಾ ಆಗಲೇ ಹೇಳಿದೆನಲ್ಲ ಅವಶ್ಯಕತಾದ ಮುಂದ ಮನಿಶಾಂದು ಏನೂ ನಡ್ಯೂದಿಲ್ಲ.." ಬಾಗಿಲ ಬೆಲ್ ಸಪ್ಪಳಾತು.
ಮೇಘಾ ಬಂದಳು. ಜೋರಾಗಿ ಅಪಕೊಂಡಳು. ಪರಿಗೆ ಮುದ್ದುಮಾಡಿಬಂದು ಕೂತಳು.
" ನೋಡು ಇಲ್ಲಿ ಮಾತಾಡೂದು ಸರಿ ಅಲ್ಲ..ಹೊರಗ ಹೋಗೋಣು..ನಾ ಫ್ರೆಶ ಆಗಿ ಬರತೇನಿ. ಬಹಳ ಮಾತಾಡೂದದ ನಿನ್ನ ಜೋಡಿ.." ಎದ್ದು ಹೋದವಳನ್ನೇ ನೋಡಿದೆ.
ಅವಳ ಸ್ವಭಾವದಲ್ಲಿ ಏನೂ ಬದಲಾಗಿರಲಿಲ್ಲ.
_______________________________________________________
ಕೆಫೆಡೆಯ ಮೂಲೆಯಲ್ಲಿ ಎದಿರು ಕುಳಿತವಳನ್ನೇ ನೋಡುತ್ತಿದ್ದೆ..ಏನೋ ಇದೆ ಇಲ್ಲವಾದರೆ ಯಾಕೆ ಮಾತಾಡೋಣ ಅಂತ ಹೇಳತಿದ್ಲು..
" ಹೇಳಲೇ ಸುಮ್ಮನ ಯಾಕ ಕೂತಿ ಅವೇನು ಪ್ರಶ್ನಾ ಅವ ಒಗೀಯಲ್ಲ..." ಅವಳ ದನಿಯಲ್ಲಿ ಒತ್ತಾಯವಿತ್ತು.
" ನಾ ಏನ ಕೇಳಬೇಕಂತ ಮಾಡೇನಿ ಅದು ನಿಂಗ ಈಗಾಗಲೇ ಗೊತ್ತದ..ಸೋ ಯು ಬಿಗಿನ್..." ನಾನು ಅವಳ ಉತ್ತರಕ್ಕೆ ಕಾದು ಕೂತೆ.
" ಹುಂ..ಎಲ್ಲಾ ವಿಚಿತ್ರ ಅನಸತದ. ಆಯಿ ಇರುವಾಗ ಮುಂದ ಇಂಥಾದಿನಾ ಬರತದ ಅನ್ನೋದು ಖಾತರಿ ಇರಲಿಲ್ಲ..ಎಲ್ಲಾ ಹೆಂಗ ಸುರಳೀತ ನಡದಿತ್ತು.
ನಿಂಗ ಗೊತ್ತದ ಆಯಿಗೆ ಮೊದಲನೇ ಸಲ ಆಪರೇಶನ್ ಮಾಡಿದ್ರು. ಒಂಥರಾ ಸಾವಿನ ಬಾಗಿಲಾ ಬಡದು ವಾಪಸ್ ಬಂದಿದ್ದಳು.ಬಾಬಾನೂ ಭಾಳ ತ್ರಾಸಮಾಡಕೊಂಡಿದ್ದರು
. ಆದ್ರ ಅಕಿ ಸೇವಾ ಮಾಡಿದರು. ಅಕಿ ಹೋದಮೇಲೆ ವಿಹ್ವಲ ಆಗಿಹೋದರು. ನಮ್ಮನಿಯೊಳಗ ಇರತಿದ್ದರು. ಯಾರ ಜೋಡಿ ಮಾತಿಲ್ಲ ಏನಿಲ್ಲ ನಂಗ ಬಾಬಾಂದು ಕಾಳಜಿ ಆತು.."
ಅಕಿ ದನಿಯಲ್ಲಿ ಆತಂಕವಿತ್ತು.
" ಆದರ ಒಂದು ರಾತ್ರಿ ವಿಚಿತ್ರ ಆತು. ನಾ ನಡುವ ಎದ್ದಿದ್ದೆ. ಬಾಬಾ ಮಲಗುವ ಜಾಗಾದಾಗ ಇರಲಿಲ್ಲ. ಬಾಗಿಲ ಲಾಕ್ ಹಾಕಿದ್ದಿತ್ತು.ರೂಮಿನಿಂದ ಏನೋ ಶಬ್ದ..ಹೋಗಿ ನೋಡಿದೆ
ಬಾಬಾ ಸಿಸ್ಟಮ್ ಮುಂದಿದ್ರು ಅದರೊಳಗ ಪಾರ್ನ ನೋಡತಿದ್ರು. ನಂಗ ಶಾಕ್ ಆತು. ಮರುದಿನ ಅನಿಲ್‍ಗ ಹೇಳಿದೆ. ಅವಗೂ ಬಬಾನ ಈ ನಡತೆ ವಿಚಿತ್ರ ಅನಿಸತು.ಹೆಂಗ
ಕೇಳೋದು ಇದ ಗೊಂದಲದಾಗ ನಾವಿದ್ವಿ. ನನಗ ಬಾಬಾನ ಮ್ಯಾಲೆ ಸಿಟ್ಟು ಬಂದಿತ್ತು. ತಲಿಯೊಳಗ ನೂರಾಎಂಟು ವಿಚಾರ...ಪರಿ ಬಾಬಾಗ ಹಚಿಕೊಂಡಾಳ ಒಬ್ಬಾಕಿನ ಅವರ
ಜೊತಿ ಇರತಾಳ ಬ್ಯಾಡ ಅಂದ್ರೂ ಕೆಟ್ಟ ವಿಚಾರ ಬರತಿದ್ದವು. ನನ್ನ ಅತ್ತಿ ಶಾಣ್ಯಾಕಿ..ಏನೋ ಅದ ಅನಿಸೇದ. ನಂಗ ಕೇಳಿದರು. ನಂಗ ತಡಿಲಿಕ್ಕೆ ಆಗಲಿಲ್ಲ.ಎಲ್ಲಾ ಹೇಳಿದೆ.
ಅವರು ಕೌನ್ಸೆಲರ್ ಅಂತ ಕೆಲಸ ಮಾಡಿದ್ರು. ತೀರ ಶಾಂತವಾಗಿ ಹೇಳಿದರು. ಬಾಬಾನ ಜೋಡಿ ಅವರು ಮತಾಡತಾರ ಅನ್ನೂದು ಕೇಳಿ ಸಮಾಧಾನ ಆತು. " ಕೆಫೆಚಿನೋ
ಹೀರುತ್ತಿದ್ದವಳನ್ನೇ ಗಮನಿಸಿದೆ. ಈ ಆರು ತಿಂಗಳಲ್ಲಿ ಏನೆಲ್ಲ ಅನುಭವಿಸಿಯಾಗಿದೆ ಈ ಹುಡುಗಿ.ಜೀವನ ಹೆಂಗ ಒಮ್ಮೆಲೆ ಬದಲಾಗತದ ಅಲ್ಲ.
" ಅಂದ್ರ ನಿನ್ನ ಅತ್ತಿ ಮುತುವರ್ಜಿ ತಗೊಂಡರೇನು..ಆದರ ಮೇಘಾ ನೀ ನಿನ್ನ ಬಾಬಾಗ ಹಿಂಗ ಒಮ್ಮಿಂದೊಮ್ಮೆಲೆ ಹೆಂಗ ವಿಲನ್ ಮಾಡಿದಿ ಅಂದ್ರ ಪರಿ ಮತ್ತು ಅವರ
ಒಡನಾಟದಾಗೂ ಯಾಕ ಸಂಶಯ ಬಂತು.."
" ಹುಂ ನಿಂಗ ಹಂಗ ಅನಿಸೋದು ಸಹಜ ಆದ್ರ ಅವತ್ತ ಬಾಬಾ ಆ ಹೊಲಸು ನೋಡತಿದ್ದರಲ್ಲ ಯಾಕೋ ಪರಿಗೆ ಅವರ ಜೋಡಿ ಬಿಢಲೇ ಹೆದರಿಕಿ ಆತು.."
" ಆದ್ರ ಅವರು ನಿನ್ನ ಬಾಬಾ ನಿಂಗ ಯಾಕ ಹಿಂಗ ಒಮ್ಮೆಲೆ ಸಂಶಯ ಬಂತು ತಿಳೀಲಿಲ್ಲ.."
" ಅವರು ಬಾಬಾ ಖರೆ ಆಯಿಸಲುವಾಗಿ ತ್ರಾಸ ಮಾಡಕೊಂಡ್ರು ಎಲ್ಲ ಖರೆ..ಆದ್ರ ನೀನ ವಿಚಾರ ಮಾಡು ನಾ ಕೆಲಸ ಬಿಟ್ಟು ಸದಾ ಕಾಯಕೋತ ಕೂಡಲಿಕ್ಕೆ ಆಗೂದಿಲ್ಲ. ಮ್ಯಾಲಾಗಿ
ಪೇಪರಿನ್ಯಾಗ ಟಿವಿಯೊಳಗ ಸದಾ ಓದತಿರತೇವಿ.ನನಗ ಯಾಕೋ ಆ ಹೆದರಿಕಿ ಹೋಗಲೇ ಇಲ್ಲ. ನನ್ನ ಅತ್ತಿ ಬಬಾನ ಜೋಡಿ ಏನ ಮಾತಾಡಿದರು ಗೊತ್ತಿಲ್ಲ. ಅವರ ಸೂಚನಾ
ಕೊಟ್ರು. ಅವನಿ ವಿಚ್ಛೇದನಾ ಪಡದಾಕಿ. ಬಾಬಾ ಮೊದಲ ಒಪ್ಪಲಿಲ್ಲ. ನಾನು ಅನಿಲ ಮಾತಾಡಿದ್ವಿ. ಒಪ್ಪಿಸಿದಿವಿ.ಈಗ ನೋಡು ಎಲ್ಲಾ ಸುರಳೀತ ಆಗೆದ.."
ಅಕಿ ದನಿಯೊಳಗ ನಿರಾಳತೆ ಇತ್ತು ತನ್ನ ಅಂತರಂಗ ಎಲ್ಲಾ ಹೇಳಿಕೊಂಡ ಸಮಾಧಾನವಿತ್ತು. ಆದ್ರ ನಂಗ ತಳಮಳ ಇನ್ನೂ ಇತ್ತು. ಅಕಿ ಅತ್ತಿ ಹೇಳಿದ ಮಾತು ನೆನಪಾತು.
ಅವಶ್ಯಕತಾ ಎಲ್ಲಾ ಮಾಡಸತದ ಅದರ ಮುಂದ ಯಾರದೂ ಏನೂ ನಡೆಯೂದಿಲ್ಲ. ಮೇಘಾ ಸ್ವತಃ ತನ್ನ ಹಡದ ತಂದಿಮೇಲೆಯೇ ವಿಶ್ವಾಸ ಇಡಲಿಲ್ಲ.ಅವರ ಅಂದಿನ ರಾgತ್ರಿಯ
ಪಾರ್ನ ವೀಕ್ಷಣೆ ಹೀಗೆಲ್ಲ ಅವಳ ತಲೆಯಲ್ಲಿ ಗೊಂದಲ ಎಬ್ಬಿಸೇದ. ಅಕಿ ಬಾಬಾಗೂ ಸಾಥಿ ಬೇಕಾಗಿತ್ತು. ಅವರಿಗೂ ಅವಶ್ಯಕತಾ ಇತ್ತು. ಅಂದ್ರ ಅವಶ್ಯಕತಾ ಮುಂದ ಸಂಬಂಧಗಳು
ಎಷ್ಟು ಅಲ್ಪ.ಅವರವರ ಅವಶ್ಯಕತಾ ಅವರವರಿಗೆ ಮುಖ್ಯ..ಅದರ ಸಲುವಾಗಿನ ಇದೆಲ್ಲ ಹೋರಾಟ.
---------------------------------------------------------

ಉಮೇಶ ದೇಸಾಯಿ





Thursday, January 9, 2014

ಮಾತು ಮರೆತವರು...

ಆಫೀಸು ಮುಗಿಸಿ ಸುಧೀರ ಮನೆ ಸೇರಿದಾಗ ಎದಿರಾದದ್ದು ಮಡದಿಯ ದುಗುಡದ ಮುಖ. ಮಗಳು ನೀತಾ ತನ್ನ ಹೋಮ್‍ವರ್ಕ್‍ನಲ್ಲಿ ಮುಳುಗಿದ್ದಳು. ಕಾಫಿ ಕೊಡುವಾಗಲೂ ಹೆಂಡತಿ ಅನ್ಯಮನಸ್ಕಳಾಗಿದ್ದನ್ನು ಗಮನಿಸಿದ ಸುಧೀರ. ಅವನ ಹೆಂಡತಿ ನೀರಜ ಸನ್ನೆ ಮಾಡಿ ಇವನನ್ನು ಹೊರಕರೆದಾಗ ಮೌನವಾಗಿ ಹಿಂಬಾಲಿಸಿದ. ನೀರಜಳ ಆತಂಕಕ್ಕೆ ಕಾರಣವಾಗಿದ್ದು ಅಂದು ಅವಳು ಕೆಲಸ ಮಾಡುತ್ತಿದ್ದ ಬ್ಯಾಂಕಿಗೆ ಬಂದ ವಾರಿಜ ಮೇಡಂ ಹಾಗೂ ಅವರ ಜೊತೆ ಬಂದಿದ ಇಬ್ಬರು ಗಂಡಸರು ಹಾಗೂ ಆ ಗಂಡಸರು ಆಡಿದ ಧಮಕಿಪೂರಿತ ಮಾತುಗಳಾಗಿದ್ದವು. ಪ್ರಕರಣ ಇಲ್ಲಿಯೇ ಮೊಟಕುಗೊಳಿಸಿರಿ ಇದು ಅವರ ತಾಕೀತಾಗಿತ್ತು. ನೀರಜ ಅದನ್ನು ಕೇಳಿದಾಗಿನಿಂದ ಉದ್ವಿಗ್ನಗೊಂಡಿದ್ದಳು. ಮಾತು ಕೇಳಿಸಿಕೊಂಡ ಸುಧೀರ ಸಹ ಗಲಿಬಲಿಗೊಂಡಿದ್ದ ಇದು ಎಲ್ಲಿಯೋ ಶುರುವಾಗಿ ಕೊನೆಗೆ ತನ್ನ ಒಬ್ಬಳೇ ಮಗಳ ಸುತ್ತ ಸುತ್ತಿಕೊಂಡರೆ ಎಂಬ ಆತಂಕ ಇತ್ತು. ಆದರೂ ಹೆಂಡತಿಗೆ ಸಮಾಧಾನ ಹೇಳಿ, ಅಂದು ಅಪ್ಪನೊಡನೆ ಮಾತನಾಡುವುದಾಗಿ ಹೇಳಿದ.
***
ಆದರೆ ಸುಧೀರ ಅಂದುಕೊಂಡಷ್ಟು ಆ ಮಾತು ಸುಲಭವಾಗಿರಲಿಲ್ಲ. ಅಪ್ಪನೊಡನೆ ವಾದಿಸುವಾಗ ಈಗೆಲ್ಲ ಅವನು ಸೋತಿದ್ದಾನೆ. ಅಪ್ಪ ಎತ್ತುವ ಅನೇಕ ಪ್ರಶ್ನೆಗಳಿಗೆ ತನ್ನಲ್ಲಿ ಉತ್ತರಗಳೇ ಇಲ್ಲ ಇದು ಅವನಿಗೆ ಗೊತ್ತಿತ್ತು. ಹಾಗೆಂದು ಆ ಪ್ರಶ್ನೆಗಳು ಸುಧೀರನಲ್ಲಿಯೂ ಇದ್ದವು... ಎಲ್ಲ ನೋಡಿ ಸಿಡಿದೇಳಬೇಕು ಎಂಬ ಹಂಬಲ ಅವನಲ್ಲೂ ಇತ್ತು. ಆದರೆ ಅವನನ್ನು ಏನೂ ತಡೆಹಿಡಿದಿತ್ತು. ಆ ಏನೋ ಹಲವಾರು ಬಾರಿ ಅವನ ನಿರ್ಲಿಪ್ತತೆಯೇ ಆಗಿತ್ತು. ಈ ಬಗ್ಗೆ ಸಹ ಅವನಿಗೆ ಗೊತ್ತಿತ್ತು.

ಸುಧೀರನ ತಂದೆ ವಾಮನ ದೇಸಾಯಿ. ಸರಕಾರಿ ನೌಕರಿಯಿಂದ ನಿವೃತ್ತರಾದವರು. ಅವರ ಹೆಂಡತಿ ತೀರಿಕೊಂಡು ಎರಡು ವರ್ಷವಾಗಿದೆ. ಹುಬ್ಬಳ್ಳಿಯ ತಮ್ಮ ಮನೆಯ ಒಂದು ಕೋಣೆ ಹೊರತುಪಡಿಸಿ ಉಳಿದೆಲ್ಲ ಬಾಡಿಗೆಕೊಟ್ಟು ಮಗನ ಜೊತೆ ಬೆಂಗಳೂರಿಗೆ ಬಂದಿದ್ದಾರೆ. ಸುಧೀರನಿಗೆ ಒಬ್ಬ ತಂಗಿಯೂ ಇದ್ದಾಳೆ. ಅವಳು ಅಮೆರಿಕಾದಲ್ಲಿ ತನ್ನ ಗಂಡನ ಜೊತೆ. ವಾಮನ ದೇಸಾಯರು ತಮ್ಮ ಸರ್ವೀಸಿನುದ್ದಕ್ಕೂ ಪ್ರಾಮಾಣಿಕ ಅನಿಸಿಕೊಂಡವರು. ಅವರ ಸಹೋದ್ಯೋಗಿಗಳೆಲ್ಲ ದುಡ್ಡು ಹೊಡೆದು ಎರಡು ಮೂರು ಬೇನಾಮಿ ಆಸ್ತಿ ಸಂಪಾದಿಸಿದ್ದರೂ, ವಾಮನ ದೇಸಾಯರು ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಮಕ್ಕಳಿಗೆ ನಾನೇನು ಆಸ್ತಿ ಮಾಡಿಡೋಲ್ಲ ಬದಲು ಅವರನ್ನೇ ಆಸ್ತಿಯಾಗಿ ಮಾಡುವೆ ಇದು ಅವರು ಆಗಾಗ ಹೇಳುತ್ತಿದ್ದ ಮಾತು. ತಾವು ನುಡಿದಂತೆ ನಡೆದಿದ್ದರು ಕೂಡ. ಪರಿಣಾಮವಾಗಿ ಸುಧೀರ ಪ್ರತಿಷ್ಠಿತ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದಾನೆ. ಮಗಳು ಸುನೀತಾ ಅಮೆರಿಕದಲ್ಲಿ ಲೆಕ್ಚರರ್.

ಆದರೆ ವಾಮನ ದೇಸಾಯರ ಸ್ವಭಾವದಲ್ಲಾದ ಪಲ್ಲಟ ಸುಧೀರನಿಗೆ ಚಿಂತೆ ತಂದಿತ್ತು. ಅಪ್ಪ ಹಾಯಾಗಿದ್ದಾರೆ... ಮೊಮ್ಮಗಳ ಜೊತೆ ಆಟ ಆಡುತ್ತ. ಅವಳ ಹೋಮ್‍ವರ್ಕನಲ್ಲಿ ನೆರವಾಗುತ್ತ ಹಾಗೆಯೇ ಸಾಯಂಕಾಲದ ಹೊತ್ತು ಹತ್ತಿರದ ಪಾರ್ಕಿನಲ್ಲಿ ವಾಮನ ದೇಸಾಯರು ಹೋಗಿ ಕೂಡುತ್ತಿದ್ದುದು, ಅಲ್ಲಿ ಪರಿಚಯವದ ಅನೇಕ ಅವರ ಮಿತ್ರರು ಮನೆಗೆ ಬಂದಿದ್ದರು. ಹಾಗೂ ಸುದೀರನಿಗೂ ಅವರ ಪರಿಚಯ ಇತ್ತು. ತನ್ನ ಮಗಳು ತಾತನ ಜೊತೆ ಹೊಂದಿಕೊಂಡಿದ್ದು, ಸುಧೀರ-ನೀರಜರಿಗೆ ಸಂತಸವಾಗಿತ್ತು. ಮೇಲಾಗಿ ಬೇಕಾದ ತರಕಾರಿ, ದಿನಸಿ ಹೀಗೆ ಬಹಳಷ್ಟು ಜವಾಬ್ದಾರಿ ವಾಮನ ದೇಸಾಯರು ಹೊತ್ತುಕೊಂಡಿದ್ದರು. ಸುಧೀರನೂ ಮನೆಯಲ್ಲಿರುವ ಕಂಪ್ಯೂಟರ್, ಇಂಟರ್‍ನೆಟ್ ಬಳಕೆ ಹೀಗೆ ಅಪ್ಪನಿಗೆ ಹೊಸದರ ಬಗ್ಗೆ ತಿಳಿಸಿಕೊಟ್ಟದ್ದ. ಎಲ್ಲ ಸುರಳಿತ ಇದೆ ಅಂದುಕೊಂಡಾಗಲೇ... ಸುಧೀರ ನೀರಜರಿಗೆ ಗಾಂಧಿಬಜಾರಿನಲ್ಲಿ ಭೇಟಿಯಾದ ಸುಬ್ಬರಾವ್ ಹೇಳಿದ ಮಾತು ಚಿಂತೆಗೆ ಈಡು ಮಾಡಿತ್ತು. ಸುಬ್ಬರಾವ್ ಹಲವು ಸಲ ಇವರ ಮನೆಗೆ ಬಂದು ಹೋಗಿದ್ದರು. ಸುಧೀರನ ಪರಿಚಯ ಅವರಿಗೆ ಇತ್ತು.
“ನೋಡಿ ಸುಧೀರ್ ನಿಮ್ಮ ತಂದೆಗೆ ವಯಸ್ಸಾಗಿದೆ. ಈ ವಯಸ್ಸಿನಲ್ಲಿ ಪ್ರತಿಭಟನೆ, ಹೋರಾಟ ಎಲ್ಲ ಯಾಕೆ ಬೇಕು... ನಾವು ಹೇಳಿ ನೋಡಿದ್ವಿ ಅವರು ಕೇಳೊಲ್ಲ... ನೀವು ಮಗ ಹೇಳಿ... ನಾವು ಬದಲಾಯಿಸುತ್ತೇವೆ... ಎಂದು ಹೊರಟರೆ ಜಗತ್ತು ಬದಲಾಗಿ ಬಿಡುತ್ತದೆಯೇ...?”

ಸುಬ್ಬರಾವ್‍ರ ಮಾತು ಒಂದು ಸುಳಿವು ನೀಡಿತ್ತು. ತನ್ನ ಅಪ್ಪನೊಡನೆ ಆ ಮಾತು ಆಡಿದಾಗ ವಾಮನದೇಸಾಯರು ಒಪ್ಪಿಕೊಂಡರು. ಅವರು ಪ್ರಗತಿಪರ ಸಂಘಟನೆಯ ಸದಸ್ಯರು ಅಂತ ಹೇಳಿಕೊಂಡ್ರು. ಸರಕಾರ ಹಾಗೂ ಇತರೇ ಸಂಸ್ಥೆಗಳಿಂದ ಅನ್ಯಾಯ ಆಗಿದೆ ಅಂತ ಕಂಡುಬಂದಲ್ಲಿ ಅದರ ವಿರುದ್ಧ ಪತ್ರಿಕೆಗಳಿಗೆ ಲೇಖನ ಬರೆಯುವುದು, ಪ್ರತಿಭಟಸೋದು ಇವೇ ಮುಂತಾದ ಆ ಸಂಘಟನೆಯ ಕಾರ್ಯಸೂಚಿಗಳು. ಮಾತಾಡುತ್ತ ವಾಮನ ದೇಸಾಯರು ಆ ಸಂಘಟನೆಯೊಂದಿಗಿನ ಸಖ್ಯ ತಮಗೆ ಹೊಸ ದಿಕ್ಕು ತೋರಿಸಿದೆ ಅಂತ ಹೇಳಿದರು. ಸುಧೀರನಿಗೆ ತಂದೆಯ ಮಾತು ಅಷ್ಟಾಗಿ ರುಚಿಸಲಿಲ್ಲ. ಯಾಕೆ ಈ ಎಲ್ಲ ಉಸಾಬರಿ... ನಿಮ್ಮ ಪಾಡಿಗೆ ನೀವಿರಿ ಎಂಬ ಅವನ ಮಾತಿಗೆ ನೀರಜಳೂದನಿಗೂಡಿಸಿದಳು. ಮೇಲಾಗಿ ಸುಧೀರ ತನ್ನ ತಂದೆಯ ಜೊತೆ ಅವರ ನೌಕರಿ ಸಮಯದಲ್ಲಿ ಅನ್ಯಾಯಗಳನ್ನು ಅವರು ಮೌನವಾಗಿ ಸಹಿಸಿದುದರ ಬಗ್ಗೆ ಕೆದಕಿದ. ಎಲ್ಲ ಶಾಂತಬಾಗಿ ಕೇಳಿಸಿಕೊಂಡ ವಾಮನ ದೇಸಾಯರು.

“ಸುಧಿ ನಾ ಸುಮ್ಮನಿದ್ದೆ ನನ್ನ ಸುತ್ತುಮುತ್ತ ಇರೋರೆಲ್ಲ ದುಡ್ಡು ಹೂಡೀತಿದ್ರು. ನಾ ಪ್ರಾಮಾಣಿಕ ಇದ್ದೆ. ಈ ವಿಷಯ ನನ್ನ ಮೇಲಾಧಿಕಾರಿಗಳಿಗೂ ಅಸಮಾಧಾನ ತಂದಿತ್ತು. ನನ್ನ ಮಟ್ಟ ಹಾಕಬೇಕು ಇದು ಅವರ ಹುನ್ನಾರ. ಅವರು ಕೊಡುವ ಎಲ್ಲ ಕಿರುಕುಳ ಸಹಿಸಿಕೊಂಡೆ. ಸಂಸಾರದ ಜವಾಬ್ದಾರಿ ಇತ್ತು. ನಿಮ್ಮನ್ನೆಲ್ಲ ಒಂದು ದಾರೀಗೆ ಹಚ್ಚಬೇಕಾಗಿತ್ತು. ಈಗ ನಿರಾಳ ಆಗೇನಿ... ಈಗ ಅವಾಗ ಮಾಡದ್ದನ್ನ ಮಾಡ ಹೊರಟೀನಿ... ಇದರಾಗ ನಿನಗೇನು ತಪ್ಪು ಕಾಣಸ್ತದ ತಿಳೀಲಿಲ್ಲ...”

ಸುಲಭವಾಗಿ ಸೋಲಬಾರದು ಎಂದು ಸುಧೀರ ಹಾಗೂ ನೀರಜ ಮನಸ್ಸು ಮಾಡಿದರೂ ವಾಮನ ದೇಸಾಯರ ತರ್ಕಬದ್ಧ ವಾದಗಳಿಗೆ ಇಬ್ಬರೂ ಸುಮ್ಮನಾಗಲೇಬೇಕಾಯಿತು. ಹಾಗೆಯೇ ಸುಧೀರ ತಂಗಿ ಸುನೀತಾಳಿಗೆ ಒಂದು ಮೇಲ್ ಹಾಕಿ ಅಪ್ಪನ ಈ ವರ್ತನೆ ಹಾಗೂ ಇದು ಹಾಗೆಯೇ ಮುಂದುವರೆದರೆ ಅಪ್ಪ ಸಿಕ್ಕಿಹಾಕಿಕೊಳ್ಳುವ ಸಂಭಾವ್ಯ ಅಪಾಯಗಳ ಬಗ್ಗೆಯೂ ಹೇಳಿದ. ಸುನೀತಾ ಅಪ್ಪನಿಗೊಂದು ದೀರ್ಘವಾದ ಮೇಲ್ ಹಾಕಿದ್ದಳು. ಅದರ ಪ್ರಸ್ತಾಪ ಸುಧೀರನೊಡನೆ ಮಾಡಿದ ವಾಮನ ದೇಸಾಯರು... ಅನ್ಯಾಯದ ವಿರುದ್ಧ ತಮ್ಮ ಹೋರಾಟ ಹೀಗೆಯೇ ಸಾಗಲಿದೆ ಎಂದು ಘೋಷಿಸಿದರು.

ಸುಧೀರನೂ ವಿಚಾರ ಮಾಡಿದ. ಅಪ್ಪ ಹೀಗೆ ಪ್ರತಿಭಟಿಸುವುದು ಅವನ ಒಳದನಿಗೆ ಅಪ್ಯಾಯಮಾನವೇ. ಅದೆಷ್ಟು ಲಂಚಗುಳಿತನ, ಗುಂಡಾಯಿಸಂ ನಮ್ಮ ಸುತ್ತ ಸುತ್ತಿದೆ... ಒಂಥರಾ ನಿರ್ಲಿಪ್ತರಾಗಿದ್ದೇವೆ. ನಮ್ಮನ್ನು ನಾವು ಒಂದು ಕಂಫರ್ಟವಲಯದಲ್ಲಿ ಸಿಗಿಸಿಕೊಂಡಿದ್ದೇವೆ. ಅಪ್ಪ ಹೀಗೆಲ್ಲ ಮಾಡುವುದರ ಹಿಂದೆ ಯಾವ ಸ್ವಾರ್ಥವೂ ಇಲ್ಲ. ಆದರೂ ಅವರ ವರ್ತನೆ ನನ್ನಲ್ಲೇಕೆ ಈ ಬಗೆ ತಳಮಳ ತಂದಿದೆ. ಬಹುಷಃ ಅಪ್ಪನ ಮೇಲೆ ನನಗೆ ಕಾಂಪ್ಲೆಕ್ಸ ಬೆಳೆಯುತ್ತಿದೆಯೇ...

***
ಸುಧೀರನ ಹೆದರಿಕೆ ಇನ್ನೂ ಬಲವಾಗುವ ದಿನ ಸ್ವಲ್ಪದರಲ್ಲಿಯೇ ಕೂಡಿಬಂತು. ಅದು ಕಾರ್ಪೊರೇಷನ್ ಚುನಾವಣೆ. ಇವರ ಕ್ಷೇತ್ರದ ಎಂಎಲ್‍ಎ ಅಂದು ತನ್ನ ಪಕ್ಷದ ಅಭ್ಯರ್ಥಿ ಪರ ವೋಟು ಕೇಳಲು ಇವರ ಬಡಾವಣೆಗೂ ಬರುವವನಿದ್ದ. ಭಾನುವಾರವಾದ್ದರಿಂದ ಸುಧೀರ ನೀರಜರೂ ಮನೆಯಲ್ಲಿದ್ದು. ಎಂಎಲ್‍ಎ ಸವಾರಿ ಇವರ ಮನೆ ಬಾಗಿಲಿಗೆ ಬಂತು. ವಾಮನ ದೇಸಾಯರು ಅದನ್ನೇ ಎದುರು ನೋಡುತ್ತಿದ್ದರು ಎಂಬಂತೆ... ಎಂಎಲ್‍ಎಗೆ ಒಂದು ಪ್ರಶ್ನೆ ಕೇಳಿದರು. ಸುತ್ತಮುತ್ತಲಿನ ಜನ ಗಮನಿಸುತ್ತಿದ್ದರು... ಆದರೆ ದೇಸಾಯರು ಹೆದರಿರಲಿಲ್ಲ. ಅವರ ಪ್ರಶ್ನೆ ಆಕ್ಷೇಪವಾಗಿತ್ತು. ಆ ಅಭ್ಯರ್ಥಿಯ ಶಿಷ್ಯನೊಬ್ಬ ಹತ್ತಿರದ ಹೈಸ್ಕೂಲಿನ ಹತ್ತಿರ ನಿಂತು ಬರುವ ಹುಡುಗಿಯರನ್ನು ಚುಡಾಯಿಸುತ್ತಿರುತ್ತಾನೆ. ಇದ ಸರಿಯೇ... ಇಂಥ ಅಭ್ಯರ್ಥಿಗೆ ನಾವು ಬೆಂಬಲಿಸಬೇಕೆ... ಇದು ರಾಯರ ಪ್ರಶ್ನೆ. ನೇರವಾದ ಪ್ರಶ್ನೆಯಿಂದ ಅಭ್ಯರ್ಥಿ ಹಾಗೂ ಎಂಎಲ್‍ಎ ತಡಬಡಾಯಿಸಿದರು. ಅಂಥ ವ್ಯಕ್ತಿ ನಮಗೇ ಗೊತ್ತೆ ಇಲ್ಲ ಎಂದು ಜಾರಿಕೊಳ್ಳಲು ಅನುವಾದರು. ದೇಸಾಯರು ಸುಮ್ಮನಾಗದೇ ಅಲ್ಲಿದ್ದ ಒಬ್ಬ ವ್ಯಕ್ತಿಯನ್ನು ತೋರಿಸಿ ಅದೇ ವ್ಯಕ್ತಿ ಎಂದು ಗುರುತಿಸಿದರು.

ಮುಂದಾಗಿದ್ದು ನಾಟಕೀಯ ಬೆಳವಣಿಗೆಗಳು. ಸುಧೀರನ ಅಕ್ಕಪಕ್ಕದ ಮನೆ ಜನ ದೇಸಾಯರ ಸಾಹಸ ಮೆಚ್ಚಿ ಹೂಗಳಿದರು. ಎದುರು ಮನೆ ಹುಡುಗಿಯಂತೂ ದೇಸಾಯರ ಕೈಕುಲುಕಿ ಸಂತಸ ವ್ಯಕ್ತಪಡಿಸಿದಳು. ಅಪ್ಪನನ್ನು ಸೂಕ್ಷ್ಮವಾಗಿ ಗಮನಿಸಿದ ಸುಧೀರ ಹೊಗಳಿಕೆಯಿಂದ ಉಬ್ಬಿಹೋಗಿದ್ದಾರೆಯೇ ಅಂತ. ದೇಸಾಯರು ಎಂದಿನಂತೆ ನಿರ್ಲಿಪ್ತರಾಗಿದ್ದರು. ಸುದ್ದಿ ತಿಳಿದ ಟಿವಿ ಚಾನೆಲ್‍ನವರು ಬಂದಾಗ ರಾಯ ರು ಎಂದಿನಂತೆ ಸಹಜವಾಗಿಯೇ ಇದ್ದರು. ಸುಧೀರನಿಗೆ ಅಪ್ಪ ತನಗೆ ದೊರೆತ ಅವಕಾಶ, ಅದಕ್ಕೆ ಸಿಕ್ಕ ಸ್ಕೋಪನ್ನು ಆನಂದಿಸುತ್ತಿದ್ದಾರೆ. ಇದ್ದಕ್ಕಿದ್ದಂತೆಯೇ ತನ್ನ ಅಪ್ಪ ಎತ್ತರ ಎತ್ತರ ಬೆಳೆದಂತೆ ಅವನಿಗೆ ಅನಿಸತೊಡಗಿತು. ಹಾಗೆಯೇ ಅವರ ಈ ವರ್ತನೆ ತನ್ನ ಹಾಗೂ ನೀರಜಳ ಮಧ್ಯೆ ಹೊಸ ಟೆನ್‍ಶನ್ ಕೊಡುತ್ತದೆ ಎಂಬುದು ಕೂಡು ಸುಧೀರನಿಗೆ ಅರಿವಿತ್ತು.
***
ಸುಧೀರನ ಮಗಳು ನೀತಾ ಆಗಿನ್ನೂ ನಾಲ್ಕನೇಯತ್ತೆಯಲ್ಲಿ ಓದುತ್ತಿದ್ದಳು. ಮನೆಗೆ ಹತ್ತಿರ ಹಾಗೂ ಹಳೆಯ ಶಾಲೆ. ಡೊನೇಶನ್ನು ಕಮ್ಮಿ ಇತ್ತು. ನೀತಾಳಿಗೆ ಅಜ್ಜ ಬಂದು ತಮ್ಮೊಡನಿದ್ದುದು ಬಹಳೇ ಖುಷಿಯಾಗಿತ್ತು. ಅಜ್ಜ ಅವಳಿಗೆ ಶಾಲೆಗೆ ಕಳಿಸಿ ಕರೆತರುವ ಜವಾಬ್ದಾರಿ ಹೊತ್ತಿದ್ದರು. ಅಪ್ಪ, ಅಮ್ಮನ ಜೊತೆ ಮಾತಾಡುವುದಕ್ಕಿಂತ ಅಜ್ಜನೊಡನೆ ಹಾಯಾಗಿದ್ದಳು. ಅವಳ ಸ್ಕೂಲು, ಅವಳ ಮಿಸ್ಸುಗಳು ಅವಳ ಸ್ಕೂಲಲ್ಲಿ ಅಂದು ನಡೆದ ಸಂಗತಿಗಳು ಹೀಗೆ ಎಲ್ಲ ನೀತಾ ಅಜ್ಜನಿಗೆ ವರದಿ ಒಪ್ಪಿಸುತ್ತಿದ್ದಳು. ನೀತಾ ಸ್ಕೂಲಿಂದ ಬಂದಾಗ ಅಜ್ಜನೇ ಅವಳಿಗೆ ಊಟ ಬಡಿಸಿ ತಾವು ಅವಳ ಜೊತೆ ಊಟ ಮಾಡುತ್ತಿದ್ದರು. ರಾತ್ರಿ ಅವಳು ಮಲಗುವ ಮೊದಲು ಕತೆ ತಪ್ಪದೇ ಕೇಳುತ್ತಿದ್ದಳು. ಅಜ್ಜನಿಂದ ನೀತಾಳಿಗೆ ಅಜ್ಜ ಹೊಸ ಗೆಳೆಯನಂತೆ ಅನಿಸಿದ್ದ.

ಅವರ ಈ ಅಪ್ಯಾಯತೆಯೇ ವಾರಿಜ ಮೇಡಂ ನಡಾವಳಿಯ ಬಗ್ಗೆ ವಾಮನ ದೇಸಾಯರಿಗೆ ಪರಿಚಯ ಮಾಡಿದ್ದು. ಶಾಲೆಯಲ್ಲಿ ಬಹಳ ಶಿಸ್ತಿನ ಮೇಡಂ ಅಂತ ವಾರಿಜ ಹೆಸರು ತಗೊಂಡಿದ್ರು. ಶಾಲೆಯ ಹುಡುಗರು ಅವರಿಗೆ ಹೆದರುತ್ತಿದ್ದರು. ವಾರಿಜ ಮೇಡಂ ಈ ವರ್ಷ ನೀತಾಳ ಕ್ಲಾಸ್ ಟೀಚರ್ ಬೇರೆ. ಅವರ ವಿಷಯದ ಹೋಮ್‍ವರ್ಕ ಆಗಲಿ, ಟೆಸ್ಟ್ ತಯಾರಿಯಾಗಲಿ, ನೀತಾ ತಪ್ಪಿಲ್ಲದೇ ಪಾಲಿಸುತ್ತಿದ್ದಳು. ವಾಮನ ದೇಸಾಯರು, ಮೊಮ್ಮಗಳು ವಾರಿಜ ಮೇಡಂ ಬಗ್ಗೆ ಮಾತಾಡುವಾಗ ಗಂಭೀರಳಾಗುತ್ತಿದ್ದುದನ್ನು ಗಮನಿಸಿತಿದ್ದಳು. ಒಂದು ವಾರದ ಹಿಂದೆ ಅದೇಕೋ ನೀತಾ ಹೆದರಿದ್ದನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಅಂದು ಶಾಲೆ ಬಿಟ್ಟು ಬಂದಾಗಿನಿಂದಲೂ ಅನ್ಯಮನಸ್ಕಳಾಗಿದ್ದಳು ನೀತಾ. ಕೆದಕಿ ಕೇಳಿದಾಗ ಬಾಯಿ ಬಿಟ್ಟಿದ್ದಳು. ಇವಳ ಕ್ಲಾಸ್‍ಮೆಟ್ ಸುಂದರ ಅದೇನೋ ಗಲಾಟೆ ಮಾಡಿದ ಅಂತ. ವಾರಿಜ ಮೇಡಂ ಅವನನ್ನು ಬಲವಾಗಿ ತಳ್ಳಿದಾರೆ... ಗೋಡೆಗೆ ಆತನ ತಲೆ ಬಡಿದು ಅವ ಎಚ್ಚರತಪ್ಪಿದ್ದಾನೆ. ನೀರು ಚಿಮುಕಿಸಿ, ಆಟೋ ಮಾಡಿ ಸಾಲೆಯ ಸೆಕ್ಯೂರಿಟಿ ಜೊತೆ ಅವನ್ನು ಮನೆಗೆ ಕಳಿಸಿಕೊಟ್ಟಿದ್ದಾರೆ. ನೀತಾ ಇದನ್ನೆಲ್ಲ ನೋಡಿ ಹೆದರಿದ್ದಾಳೆ. ಎಲ್ಲ ಕೇಳಿದ ವಾಮನ ದೇಸಾಯರಿಗೂ ಕೆಡುಕೆನ್ನಿಸಿತು. ಅದೇಕೆ ಇದ್ದಕ್ಕಿದ್ದಂತೆ ವಾರಿಜ ಮೇಡಂಗೆ ಈ ಪರಿಕೋಪ. ಹಾಗೆಯೇ ವಿಚಾರಿಸಿದಾಗ ಅವರು ಶಿಕ್ಷಿಸುವ ಅನೇಕ ವಿಧಗಳನ್ನು ನೀತಾ ಹೇಳಿದಳು. ಕೇಳಿದವರು ಕಸಿವಿಸಿಗೊಂಡರು. ಸುಂದರ ಯಾಕೋ ಎರಡು ಮೂರುದಿನ ಶಾಲೆಗೇ ಬಂದಿಲ್ಲ ಎಂದು ನೀತಾ ಹೇಳಿದಾಗ ಮಾತ್ರ ದೇಸಾಯರು ನಿರ್ಧಾರ ತಳೆದರು.

ಹೆಡ್‍ಮಿಸ್ ಜೊತೆಗೆ ನೇರವಾಗಿ ವಿಷಯ ಪ್ರಸ್ತಾಪಿಸಿದರು ಅವರು. ಆದರೆ ಸುಲಭದಲ್ಲಿ ಹೆಡ್‍ಮಿಸ್ ಒಪ್ಪಿಕೊಳ್ಳಲಿಲ್ಲ. ಬದಲು ಸುಂದರನಿಗೆ ಜ್ವರ ಬಂದಿದ್ದಕ್ಕೆ ಅವ ಶಾಲೆಗೆ ಬಂದಿಲ್ಲ ಎಂದು ತಿಳಿಸಿದರು. ಸುಂದರನ ಮನೆ ವಿಳಾಸ ಸಂಪಾದಿಸಿದ ದೇಸಾಯರು ಅಂದು ಮಧ್ಯಾಹ್ನ ಅವನ ಮನೆಗೆ ಹೋದರು. ಸುಂದರನ ಅಪ್ಪ ಬೀಡಾ ಅಂಗಡಿ ಇಟ್ಟುಕೊಂಡಿದ್ದರು. ದೇಸಾಯರು ಅವರ ಮನೆಗೆ ಹೋದಾಗ ಸುಂದರನ ತಾಯಿ ಮಾತ್ರ ಇದ್ದರು. ಸುಂದರನಿಗೆ ಸ್ಕಾನಿಂಗ್ ಮಾಡಿಸಲು ಅವನ ಸೋದರ ಮಾವ ಕರೆದುಕೊಂಡು ಹೋಗಿದ್ದ. ವಾರಿಜ ಮೇಡಂ ನೂಕಿದ ವೇಗಕ್ಕೆ ತಲೆಗೆ ಪೆಟ್ಟು ಬಿದ್ದಿದೆ ಸುಂದರನಿಗೆ ಈ ವಿಷಯ ದೇಸಾಯರಿಗೆ ಸುಂದರನ ಅಮ್ಮ ಹೇಳುವಾಗ ದನಿ ವ್ಯಾಕುಲಗೊಂಡಿತ್ತು. ಸ್ವಲ್ಪಹೊತ್ತು ಅವರ ಜೊತೆ ಮಾತನಾಡಿದ ದೇಸಾಯರು ಸುಂದರ ವಾಪಸ್ ಬಂದಾಗ ಮತ್ತೆ ಬರುವೆ ಎಂದು ತಿಳಿಸಿಹೋದರು.

ಮರುದಿನ ಮತ್ತೆ ಸುಂದರನ ಮನೆಗೆ ಹೋದ ದೇಸಾಯರ ಅನುಮಾನ ನಿಜವಾಗಿತ್ತು. ಸುಂದರನಿಗೆ ತಲೆಗೆ ಪೆಟ್ಟುಬಿದ್ದಿದೆ... ಮೇಲಾಗಿ ಮಾನಸಿಕವಾಗಿ ಅವ ಆಘಾತಗೊಂಡಿದ್ದಾನೆ ಅಂತ. ಸುಂದರನ ಅಪ್ಪ ಅಮ್ಮರೊಡನೆ ಮಾತನಾಡಿದ ದೇಸಾಯರು ವಾರಿಜ ಮೇಡಂರ ಈ ವರ್ತನೆ ಬಗ್ಗೆ ಸ್ಕೂಲ್ ಬೋರ್ಡಗೆ ಕಂಪ್ಲೇಂಟ್ ಕೊಡಲು ತಿಳಿಸಿದರು. ದೇಸಾಯರ ಒತ್ತಾಯ ಹಾಗೂ ಸುಂದರನ ಚಿಕಿತ್ಸೆಗೆ ದುಡ್ಡು ಸಿಗಬಹುದು... ಹೀಗೆ ಉದ್ದೇಶ ಇಟ್ಟುಕೊಂಡು ಸುಂದರನ ತಂದೆ ಲಿಖಿತ ದೂರು ಕೊಟ್ಟರು. ದೇಸಾಯರು ಸ್ಕೂಲ್‍ಬೋರ್ಡು ಮಾತುಕತೆಗೆ ಕರೆದಾಗ ಹಾಜರಿದ್ದು ಸುಂದರನ ತಂದೆಗೆ ಬೆಂಬಲ ಸೂಚಿಸಿದರು. ಸ್ಕೂಲಿನ ಬೋರ್ಡಿನವರಿಗೂ ಇದು ನುಂಗಲಾರದ ತುತ್ತು. ವಾರಿಜ ಸೀನಿಯರ್ ಮೇಡಂ... ಯಾವುದೋ ವೈಯುಕ್ತಿಕ ಕಾರಣ, ಒತ್ತಡಕ್ಕೆ ಅವರು ಈ ರೀತಿ ಮಾಡಿದ್ದಾರೆ. ಆದರೆ ಸುಂದರನಿಗೆ ಹೆಚ್ಚು ಕಮ್ಮಿ ಆದರೆ ಸ್ಕೂಲಿಗೂ ಕೆಟ್ಟ ಹೆಸರು ಬರುತ್ತದೆ. ಶಿಕ್ಷೆ ಕೊಡುತ್ತಾರೆ, ಹುಡುಗರನ್ನು ಹೊಡಯುತ್ತಾರೆ ಈ ದೂರುಗಳು ಹೆಡ್‍ಮಿಸ್ ಹಲವು ಸಾರಿ ಕೇಳಿದ್ದರು ಬಹಳ ಸಲ ವಾರಿಜ ಮೇಡಂ ಜೊತೆ ಈ ಬಗ್ಗೆ ಹೇಳಿದ್ರುಕೂಡ. ಈ ಪ್ರಕರಣ ಬೇರೆಯೇ ತಿರುವು ತಗೂಳ್ಳಬಹುದು ಅಂತಾನೇ ಅವರು ಸ್ಕೂಲಿನ ಬೋರ್ಡಿಗೂ ವಿಷಯ ತಿಳಿಸಿದ್ದು. ಬೋರ್ಡಿನವರು ವಾರಿಜ ಮೇಡಂಗೆ ಕರೆದು ಬೈದರು ಕೂಡ. ಆದರೆ ಸುಂದರ್‍ನ ಸ್ಥಿತಿ ಸ್ಕ್ಯಾನಿಂಗ್ ರಿಪೋರ್ಟು ಮೇಲೆ ಅವಲಂಬಿತವಾಗಿತ್ತು. ಒಂದು ವೇಳೆ ಅವನ ಮಿದುಳಿಗೆ ಪೆಟ್ಟಾಗಿದ್ದರೆ ಮುಂದಾಗುವ ಪರಿಣಾಮ ನೆನೆದು ಬೋರ್ಡಿನವರು ಹೆದರಿದ್ದರು. ಮೇಲಾಗಿ ವಾಮನ ದೇಸಾಯರು ಹಾಗೂ ಅವರ ಸಂಘಟನೆಯ ಬಗ್ಗೆ ಅವರಿಗೆ ಭಯವಿತ್ತು. ಹೇಗಾದ್ರೂ ಮಾಡಿ ಸುಂದರನ ತಂದೆ, ತಾಯಿಯನ್ನು ಒಳಗೆ ಮಾಡಿಕೊಂಡು, ಏನಾದರೂ ಪರಿಹಾರಕೊಟ್ಟು ಪ್ರಕರಣ ಮುಗಿಸಬೇಕು ಇದು ಬೋರ್ಡಿನ ಹವಣಿಕೆಯಾಗಿತ್ತು.

ವಾಮನ ದೇಸಾಯರು ಸುಂದರನ ತಂದೆಯನ್ನು ಪೂರ್ಣ ನಂಬಿದ್ದರು. ಹೋರಾಟ ನಡೆಸಿರುವುದು ಸುಂದರನಿಗಾದ ಅನ್ಯಾಯ ಸರಿಪಡಿಸಲು ಅಂತ ಮನವಿರಿಕೆ ಮಾಡಿದ್ದರು. ಇತ್ತ ವಾರಿಜ ಮೇಡಂಗೂ ತಮ್ಮ ದುಡುಕು ತರಬಹುದಾದ ತೊಂದರೆ ಬಗ್ಗೆ ಚಿಂತೆಯಾಗಿತ್ತು. ಬೋರ್ಡಿನವರು ಇದು ಕೊನೆ ಎಚ್ಚರಿಕೆ ಎಂಬರ್ಥದ ಮಾತು ಹೇಳಿದ್ದಾರೆ. ಬೇಕೂಂತ ಅವನನ್ನು ತಳ್ಳಿಲ್ಲ ಎಂಬ ಸಮಾಜಾಯಿಷಿಯಿಂದ ಬೋರ್ಡಿನವರು ತೃಪ್ತಿ ಹೊಂದಿರಲಿಲ್ಲ. ಲಿಖಿತ ದೂರು ಬೇರೆ ಇದೆ. ಒಂದು ವೇಳೆ ಈ ವಿಷಯ ಬೆಳೆದರೆ ತೊಂದರೆ ಕಟ್ಟಿಟ್ಟ ಬುತ್ತಿ ಇದು ಅವರಿಗೆ ಗೊತ್ತಿತ್ತು. ಸುಂದರನ ತಂದೆ ಓದಿದವರಲ್ಲ... ನೀತಾಳ ಅಜ್ಜನ ಬೆಂಬಲ ಇದೆ. ನೀತಾಳ ತಾಯಿಯನ್ನು ಕಂಡು ದೂರು ಹಿಂತೆಗೆದುಕೊಳ್ಳಲು ಕೇಳಿದ್ದರು. ಅವರ ಕಸಿನ್ ಹಾಗೂ ಪುಢಾರಿ ಗೆಳೆಯನ ಜೋರಾದ ಮಾತು ನೀತಾಳ ತಾಯಿ ನೀರಜ ಮೇಲೆ ಕೆಲಸ ಮಾಡಿದೆ ಅನ್ನಿಸಿ ನಿರಾಳವಾದರು.
***
ಮಗ, ಸೊಸೆ ಆಡಿದ ಎಲ್ಲ ಮಾತುಗಳನ್ನು ದೇಸಾಯರು ಸಾವಧಾನದಿಂದ ಕೇಳಿಇಕೊಂಡರು. ಮಗ ಮುಂದೆ ನೀತಾಳಿಗೆ ಏನಾದರೂ ಆದೀತು ಎಂದು ಒತ್ತಿ ಒತ್ತಿ ಹೇಳಿದ್ದ. ದ್ವಂದ್ವ ದೇಸಾಯರಲ್ಲೂ ಇತ್ತು. ಈ ಹೋರಾಟ, ಸಂಘರ್ಷ ಅದಕ್ಕೆಂದೇ ಹುಟ್ಟಿದ ಸಂಸ್ಥೆ. ಅಲ್ಲಿ ಎಲ್ಲವೂ ಸರಿ ಇಲ್ಲ. ಸದಸ್ಯರು ಕೆಲವರು ಬ್ಲಾಕ್‍ಮೇಲ್ ಮಾಡುತ್ತಿದ್ದರು. ಹಲವರು ತಮ್ಮ ಸಂಘಟನೆಯನ್ನು ತಮ್ಮ ಲಾಭಕ್ಕಾಗಿ ಬಳಸುತ್ತಿದ್ದರು. ಈ ಬಗ್ಗೆ ಗ್ರುಪ್‍ನಲ್ಲಿ ದೇಸಾಯರು ಒಂದೆರಡು ಬಾರಿ ಪ್ರಸ್ತಾಪ ಸಹ ಮಾಡಿದ್ದರು. ತಾವು ಸಂಘಟನೆಗೆ ಸೇರಿದ ಹೊಸದಾಗಿನ ಉತ್ಸಾಹ ಏಕೋ ಕುಂದಿದೆ ಇದು ಅವರ ಅರಿವಿಗೂ ಬಂದಿತ್ತು. ಈಗ ವಾರಿಜ ಮೇಡಂ ದುಡುಕಿನಿಂದ ಮಾಡಿದ್ದೋ ಅಥವಾ ಅವರ ಅಸಹಜ ಮನಸ್ಥಿತಿಯೋ ಗೊತ್ತಿಲ್ಲ. ಮೊನ್ನೆ ಗ್ರುಪ್‍ನಲ್ಲಿ ಸದಸ್ಯರೊಬ್ಬರು ಈ ಬಗ್ಗೆ ಪ್ರಸ್ತಾಪಿಸಿ ಇನ್ನೂ ಅನೇಕ ಸಮಸ್ಯೆಗಳಿವೆ. ಅವುಗಳ ವಿರುದ್ಧ ಹೋರಾಡುವ. ವಾರಿಜ ಮೇಡಂ ಕ್ಷಮೆ ಕೇಳಿದ್ದಾರೆ. ಬೇಕಾದರೆ ಸುಂದರನ ಆರೈಕೆಯ ಖರ್ಚು ಕೇಳೋಣ ಇತ್ಯಾದಿ ವಾದ ಮಂಡಿಸಿದ್ದರು. ಅದೇಕೋ ಅಂದಿನಿಂದ ವಾಮನ ದೇಸಾಯರು ಖಿನ್ನರಾಗಿದ್ದರು. ಸುತ್ತೆಲ್ಲ ಜಗ ಬತ್ತಲೆ ತಿರುಗುತಿರುವಾಗ ತಾವೂಬ್ಬರೇ ಬಟ್ಟೆ ಹಾಕಿಕೊಂಡ ರೀತಿ ಅವರಿಗೆ ಅನ್ನಿಸಿತು. ಇದು ವೈಯುಕ್ತಿಕ ಸೋಲೇ ಎಂಬ ಜಿಜ್ಞಾಸೆಗೆ ಅವರು ಶರಣಾಗಿದ್ದರು. ಅನ್ಯಾಯದ ವಿರುದ್ಧ ಹೋರಾಡಬೇಕು ನಿಜ ಆದರೆ... ಯಾರನ್ನು ನಂಬುವುದು. ಏಕಾಕಿ ಹೋರಾಟ ವ್ಯರ್ಥ ಅಂತ ಅವರಿಗೆ ಅರಿವಿತ್ತು. ಹೀಗಾಗಿ ಆ ಸಂಘಟನೆ ಸೇರಿದ್ದರು. ಅಲ್ಲೂ ಅವರಿಗೆ ಸೋಲೇ ಎದುರಾಗಿತ್ತು. ಏನೋ ಸಾಧಿಸುವ ಭರದಲ್ಲಿ ತೊಂದರೆಯಾಗಬಾರದು. ತಾನೊಬ್ಬ ಎಲ್ಲ ನಿಗ್ರಹಿಸುವುದು ಅಸಾಧ್ಯದ ಮಾತು. ವಾರಿಜ ಮೇಡಂ, ಸುಂದರನ ತಂದೆ ಒಳ ಒಪ್ಪಂದ ಮಾಡಿಕೊಳ್ಳಲಿ... ಎಲ್ಲ ಸರಿ ಇದೆ ಎಂಬ ಭ್ರಮೆಯ ಬದುಕು ಎಷ್ಟು ನಿರಾಳ. ಮಗ ಸೊಸೆಯ ಮುಂದೆ ಎಲ್ಲ ತಳಮಳ ಬಿಚ್ಚಿಟ್ಟರು. ತಮ್ಮ ನೋವು ಅರ್ಥ ಆದರೆ ಸಾಕು ಅಂತಂದರು.

ಸುಧೀರ ಅಪ್ಪನ ಕೈ ಹಿಡಕೊಂಡ ಕೈ ಬೆಚ್ಚಗಿತ್ತು. ನಡುಗುತ್ತಿರಲಿಲ್ಲ. ಮೆಲ್ಲನೆ ಅವರ ಕೈ ಅದುಮಿದ ಮಗನ ಈ ಸ್ಪರ್ಶ... ದೇಸಾಯರಲ್ಲಿ ವಿಚಿತ್ರ ಅನುಭೂತಿ ತಂತು.
***
2012

Saturday, November 23, 2013

ಅಂಗೈ ಅಗಲದ ಕಥೆ--೬

ಅಂಗೈ ಅಗಲದ ಕಥೆ--೬


ಆ ಭೇಟಿಗಾಗಿ ಅವಳು ಕಾಯುತ್ತಿದ್ದಳು. ಅನೇಕ ದಿನಗಳಿಂದ. ಕಳೆದ ವಾರದ ಘಟನೆಗಳು
ಅವಳ ಜೀವನಕ್ಕೊಂದು ಹೊಸ ಗತಿ ಕೊಟ್ಟಿದ್ದವು..ಅನಪೇಕ್ಷಿತ ಅನಿರೀಕ್ಷೀತ ಘಟನೆಗಳು ನಡೆಯುವುದೇ
ಬದುಕಿನ ರಂಗಸ್ಥಳದಲ್ಲಿ. ತನಗಾದ ಅನ್ಯಾಯಕ್ಕೆ ಇಲ್ಲಿ ನ್ಯಾಯದೊರೆತೀತು ಇದು ಅವಳ ಆಸೆ. ಅಂತೂ ಇವಳಿಗೆ
ಕರೆ ಬಂತು. ಹೋಗಿ ಹೆಚ್ ಆರ್ ಮುಂದೆ ಕೂತಳು. ರೂಮಲ್ಲಿ ಏಸಿಯ ತಂಪು ಅಲ್ಲಿಯ ಬಿಸಿ ವಾತಾವರಣಕ್ಕೆ
ಮಿಳಿತವಾದಂತಿತ್ತು. ಇವಳ ಲಿಖಿತ ದೂರಿಗೆ ಸ್ಪಂದಿಸಿದ ಅಧಿಕಾರಿಣಿ ಕ್ರಮದ ಭರವಸೆ ನೀಡಿದಳು. ಇದಾಗಿ ಹದಿನೈದು
ದಿನ ಆಗಿವೆ..ಆ ಟಿಎಲ್ ಹೊಸ ಹಕ್ಕಿಯನ್ನು ಬಲೆಗೆ ಹಾಕಿಕೊಂಡಿದ್ದಾನೆ ಇವಳು ಆ ಪ್ರಾಜೆಕ್ಟನಿಂದ ಹೊರಹೋಗಿದ್ದಾಳೆ ..
ದೂರು ಕೊಡುವ ಮುನ್ನ ಅವಳು ಭೇಟಿಯಾಗಿದ್ಲು. ಅವಳು ಇವಳಿಗಿಂತ ಸೀನಿಯರ್ ಅವಳು ಹೇಳಿದ್ದು ಒಂದೇ ಮಾತು
"ನಿನ್ನಂಥ ಎಷ್ಟೋ ಜನರ ಆಕ್ರಂದನಗಳು,ನೋವುಗಳು ಕಡತಗಳಲ್ಲಿ ಬಂದಿಯಾಗಿವೆ..ನರಳಿವೆ.ಹಾಂ ಈ ಕಂಪನಿಯ ನಾಲ್ಕುದಿಕ್ಕಿನಲ್ಲೂ
ಕೂಡ ನನ್ನ ನಿನ್ನ ನೋವುಗಳು,ಸೋಲುಗಳು ಅಪಮಾನಗಳು ಚೀರಲಾರದೆ ಸಿಡಿಯಲಾರದೆ ಬಂದಿಯಾಗಿವೆ...." ಅವಳ ಮಾತು
ರಿಂಗಣಿಸುತ್ತಿದೆ..ಹೊಸ ಟಿಎಲ್ ನಡಾವಳಿಯೂ ಅದೇ ಪೂರ್ವಸಿದ್ದ ರೂಪದ ಹಾದಿ ಹಿಡಿದಿದೆ..ಮತ್ತೊಂದು ಅಪಮಾನದ

ಹಾದಿ ಕಾಯುತ್ತ ಅವಳು ಕಲ್ಲಾಗುತ್ತಿದ್ದಾಳೆ.

Monday, November 11, 2013

ಹೀಗೊಂದು ಲಹರಿ..

ಹೀಗೊಂದು ಲಹರಿ..
-------------------------
ಮೈಥಿಲಿ ಗೆಲ್ಲಲೇಬೇಕಿತ್ತು...
ಮಂದಾಕಿನಿ ಸೋಲಲೇಬೇಕಿತ್ತು ಬಿಡಿ..
ಎಷ್ಟಿದ್ದರೂ ಚಾಣಕ್ಯನೀತಿಯ ಉತ್ತಿ ಹೊತ್ತು ಮೆರೆದ ದೇಶವಲ್ಲವೇ ಇದು..
ಭಾವನೆಗಳ ದಾಸ ಆ ಭಾಸ ಬರೀ ಸುಭಾಷಿತ ಉಲಿಯಲು ಲಾಯಕ್ಕು...!
ಅಟಕಾಯಿಸಿದ ಹುಲ್ಲು ಮೆದೆಯ ಬೇರಿಂದ ಕಿತ್ತು ಸುಡುವ ಚಾಣಕ್ಯನ ಛಲ..ಅವನಲ್ಲಿಲ್ಲ..
ಅಂತೆಯೇ ದೊಡ್ಡಣ್ಣನ ಬಿಳಿಮನೆ, ಜಿನೀವಾದ ತಂಪುಕೋಣೆಯಿಂದ ಹೊಮ್ಮಿದ ಒಪ್ಪಂದ..
ದೂರದ ಕಂದಹಾರಿನಲ್ಲೋ ಮತ್ತೆಲ್ಲೋ ಅಪ್ಪಳಿಸಿದ ದ್ರೋನ ದ ಕಿಡಿಯಲ್ಲೂ
ಅವನದೇ ನೆರಳು..ಅದೇಕೇ ನಮ್ಮ ನಿಮ್ಮ ಆಳುವವರು ರೂಪಿಸುವ ಕರಡು,ಮಸೂದೆ
ಗಳಲೂ ಮೂಡಿದೆ ಅವನದೇ ಅವ್ಯಕ್ತ ಮುದ್ರೆ.....!
ಅದೇ ಭಾಸ ಆ ಹುಲ್ಲುಮೆದೆಯ ಗಲ್ಲ ಸವರಿ ಹೂ ಅರಳಿಸಿದರೂ ಸಿಗಲಿಲ್ಲ..ಕಿಮ್ಮತ್ತು..
ಅದಾವುದೋ ಮಾಸಲು ಪುಸ್ತಕದ ಅಕ್ಷರಗಳಲಿ....
ಪಂಡಿತ ಪಾಮರರ ಉಲಿಯುವಿಕೆಯಲ್ಲಿ...ನಮ್ಮ ನಿಮ್ಮ ಭಾವನೆಗಳಲಿ ಬಂದಿ ಅವ..
ಅವನಿಗೊಂದು ಪ್ರತಿಮೆ ಮಾಡಿ ಗಾಳಿ ಬಿಸಿಲು ಮಳೆಗಳಿಗವನೊಡ್ಡಿ ನಿಲ್ಲಿಸಿದ್ದೇವೆ...
ಸ್ಥಾಯಿ ಈಗ ಭಾಸ..ಬೇಕಿಲ್ಲ ಜಗಕೆ ಅವನ ಸಹವಾಸ.....

(ನಿನ್ನೆ ಮಹಾಪರ್ವ ಧಾರಾವಾಹಿಯ ಇಬ್ಬರು ಪಾತ್ರಧಾರಿಗಳ ಸಂವಾದದಿಂದ ಪ್ರೇರಿತವಿದು...)


Monday, November 4, 2013

ಮತ್ತೆ ಮತ್ತೆ ದೀಪಾವಳಿ.

ಈಗಿನ ದೀಪಾವಳಿ ಹೀಗೇ ಅಲ್ಲ
ನಮ್ಮ ನಿಮ್ಮ ಮಾತು ಹಳೆಯದಾಯಿತಲ್ಲ....
ಮಗಳು ಮಾಲಿಂಗನ ಬಳ್ಳಿ ನೋಡಿಲ್ಲ...
ಹಿತ್ತಾಳಿ ಕೊಳಗ ಹಂಡೆಗಳಿಗೆ ಮನೆ ಸಾಲದಲ್ಲ..
ಅಸಲು ತುಂಬಿಡಲು ನೀರೇ ಬಂದಿಲ್ಲ....!
ಆದರೂ ಇವಳು ಏಳುತ್ತಾಳೆ ಅವಳ ಎಬ್ಬಿಸುತ್ತಾಳೆ ಗದರಿ..
ಆರತಿ ಹಿಡಿದು ನಿಂತ ಮಗಳ ಕಣ್ಣಲ್ಲಿಣಕಿದೆ ಮುಗಿಯದ ನಿದ್ದೆ..
ಮುಂಜಾನೆಯ ಪೇಪರಿನಲ್ಲಿ ದೀಪ ಹಿಡಿದ ರೂಪದರ್ಶಿ..ಕೆಳಗೆ
ಅದೇ ಸುದ್ದಿ ಸಾವು ಸೂತಕ ಮೋದಿ ರಾಹುಲ್ ಸಿದ್ದು ಎದ್ದಾಯಿತು ನಿದ್ದೆಗೊಂದು ಗುದ್ದಿ...!
ಉಂಡಿ,ಚಕ್ಕಲಿ ಚೂಡ ಧಾರವಾಡದ ಪೇಡ....
ಶುಗರ್ ಲೆವಲ್ ತೂಕಹಾಕಿ ತಿನ್ನಬೇಕು ಜಾಸ್ತಿ ಬೇಡ..
ಅಳಿವಿನಂಚಿನ ಸಂಪ್ರದಾಯ ರಂಗೋಲಿ ಹಾಡು ನಗು ಎಲ್ಲ ಮಾಯ..
ಪಟಾಕಿ ತಯಾರಿಸುವವ ಬೆಂದರೂ ಸಿಡಿಯುತ್ತಾನೆ ಕಿಡಿಯಾಗಿ..
ಹೊಗೆ ವಾಸನೆ ಮಾಸ್ಕು ಹಾಕಿ ಬಾಂಬು ಹೊಡಿಯುವ ಖಯಾಲಿ...
ಬಿಡವಲ್ಲದು ಚಾಳಿ..ಪರ್ಯಾವರಣದ ಮಾನದ ಕಿಮ್ಮತ್ತು ಅರೆಪಾವಲಿ..
ಮುಗಿಯದ ಆಫರ್ರುಗಳ ಭರಾಟೆ ಕನ್ನಡ ಚಾನೆಲ್ ಹಾಕಿದರೆ ಅದೇ ಹಳೆ ಹರಟೆ...!
ಹಬ್ಬ ಮುಗಿಸಿ ಬಸ್ಸಿಳಿದವನ ಮುಖದಲ್ಲೂ ಸೋಲೇ ಇದೆ...
ಮತ್ತೆ ಮತ್ತೆ ಈ ದೀಪಾವಳಿ ಬರಲಿದೆ...

ಮತ್ತೆ ಮತ್ತೆ ಹೌದು ಮತ್ತೆ ಮತ್ತೆ...

Friday, August 23, 2013

ಇನ್ನಷ್ತು ಅಂಗೈ ಅಗಲದ ಕತೆಗಳು


ಅಂಗೈ ಅಗಲದ ಕಥೆ--೫
---------------------
ರಂಗರಾಯರು ತೀರಿಕೊಂಡ್ರು..ಮಗ ಸೊಸೆ ಮಡದಿ ಹಾಗೂ ೯ ವರ್ಷದ ಮೊಮ್ಮಗನನ್ನು
ಅಗಲಿದ್ರು. ದಿನ ಕರ್ಮ ಶಾಸ್ತ್ರೋಕ್ತವಾಗಿ ಮಾಡಬೇಕೆಂಬ ಮಗನ ಹಂಬಲಕ್ಕೆ
ಅನುಗುಣವಾಗಿಯೇ ಸಿಕ್ಕ ಪುರೋಹಿತ್ರು ಪ್ಯಾಕೇಜ್ ಡೀಲ್ ಒಪ್ಪಿಸಿಕೊಂಡ್ರು. ಸಾಕಷ್ಟು ಆಸ್ತಿ
ಉಳಿಸಿಹೋಗಿದ್ರು ರಂಗರಾಯರು.... ಮಗನೂ ಶ್ರದ್ಧೆಯಿಂದ ಮುಡಿಕೊಟ್ಟು ಆಣಿಯಾದ.
.ಮೊಮ್ಮಗನಿಗೆ ಅವ್ರ ಮಿಸ್ಸು ಹೇಳಿದ್ರು ಸ್ವರ್ಗ ನರಕ ಎರಡೂ ಇಲ್ಲೇಇವೆ..ಒಳ್ಳೆಯದು ಮಾಡಿದ್ರೆ ಸ್ವರ್ಗ ಸಿಗುತ್ತದೆ.
..ಈ ಅಪ್ಪ ತಲೆ ಬೋಳ್ಸಿ ಮಾಡೋ ಕರ್ಮದಿಂದ ತಾತ ಸ್ವರ್ಗಕ್ಕೆ ಹೋಗ್ತಾನೆ ಅಂತ ಪುರೋಹಿತ್ರು ಅಂತಾರೆ
ಮೊಮ್ಮಗ ಗೊಂದಲದಲ್ಲಿದ್ದ. ರಾಯರು ಬಳಸುತ್ತಿದ್ದ ವಾಕಿಂಗ್ ಸ್ಟಿಕ್ಕು ಅದಕ್ಕೊಂದು ಬೆಳ್ಳಿ ಹಿಡಿ..ಅಪ್ಪ ಅಮ್ಮಗೆ ಗೊತ್ತಾಗದೇ
ಅದನ್ನು ತೆಗೆದು ಹಿಂದಿನ ಬೀದಿಯ ಬಡ ಮುದುಕನಿಗೆ ಕೊಟ್ಟಿದ್ದ...ತಾನು ಮಾಡಿದ ಈ ಕೆಲ್ಸದಿಂದ ತಾತ ಸ್ವರ್ಗಕ್ಕೋಗಲಿ
ಇದು ಅವನ ಆಶಯ...ಅಂತೂ ಇಂತೂ ಕರ್ಮಧರ್ಮ ಎಲ್ಲ ಮುಗದ್ವು...ಬಂಗಾರದ ಬಿಸ್ಕತ್ತು ದಾನವಾಗಿ ಪಡೆದ
ಪುರೋಹಿತ್ರು ತಮ್ಮ ಮಂತ್ರಬಲದಿಂದ ಮತ್ತು ಮಾಡಿದ ಕರ್ಮಫಲದಿಂದ ರಾಯರಿಗೆ ಸ್ವರ್ಗಪ್ರಾಪ್ತಿ ಆಗುತ್ತದೆ ಅಂದ್ರು..
ರಾಯರು ವೈತರಣಿ ದಾಟಿ ಸ್ವರ್ಗಸೇರಿದ್ರು..ಅಲ್ಲಿಂದ ನೋಡಿದವ್ರಿಗೆ ಕಂಡಿದ್ದು ಆ ಬಡಮುದುಕ ತಮ್ಮ ಸ್ಟಿಕ್ ಹಿಡಿದು ನಡೆಯುವುದ
ರಾಯರು ಖುಷಿಗೊಂಡ್ರು..
 
ಅಂಗೈ ಅಗಲದ ಕಥೆ---೬
------------------------------------
ಪುಟ್ಟನ ಅಪ್ಪ ಸಾಫ್ಟವೇರ್ ಇಂಜಿನೀಯರ್ ಅವ್ವ ಬ್ಯಾಂಕಿನಲ್ಲಿ..ಮನೆಯಲ್ಲಿ ಅಜ್ಜಿ ಮತ್ತು ಪುಟ್ಟ.
ಪ್ರತಿ ಟೆಸ್ಟ ಪರೀಕ್ಷೆಯಲ್ಲೂ ಮೊದಲ ಸ್ಥಾನ ಪುಟ್ಟನದು..ಅಪ್ಪ ಅಮ್ಮನ ಪ್ರೀತಿ ಹಾಗೂ ಸ್ಥಾನಬಿಟ್ಟುಕೊಡಬಾರದೆಂಬ ಜಿದ್ದು..
ಒಂದು ಗಂಟೆ ಮಾತ್ರ ಪುಟ್ಟನಿಗೆ ಟಿವಿ ನೋಡುವ ಅವಕಾಶ. ಅಂದು ಸ್ಕೂಲಿಂದ ಬಂದವ ಊಟಮಾಡಿ ತನ್ನ ಸ್ಟಡಿ ಟೇಬಲ್
ಮುಂದೆ ಕುಳಿತ. ರೂಮಿನ ಬಾಗಿಲು ಹಾಕಿ. ಹಾಲನಲ್ಲಿ ಅಜ್ಜಿ ಟಿವಿ ನೋಡುತ್ತಿದ್ದರು, ಬೆಲ್ ಸದ್ದಾಯಿತು ಹೋಗಿ ನೋಡಿದ್ರೆ
ಪೇಪರ್ ಅಂಕಲ್ ಮತ್ತು ಇನ್ನೊಬ್ಬ. ತನ್ನಮ್ಮ ಹೇಳಿಕೊಟ್ಟಿದ್ದು ಯಾರೇ ಬಂದ್ರೂ ಅವರಿಗೆ ವಿಶ್ ಮಾಡಬೇಕು ಇಂದೂ ಹಾಗೆ
ಮಾಡಿ ಮರಳಿ ರೂಮುಸೇರಿ ಬಾಗಿಲು ಮುಚ್ಚಿಕೊಂಡ. ಪುಸ್ತಕವನ್ನು ಆಪೋಷನ ತಗೊಳ್ಳಲು ಮೊದಲಿಟ್ಟ. ನಡುವೆ ಎಲ್ಲೋ
ಟಿವಿ ಸದ್ದು ಒಮ್ಮೆಲೆ ಜೋರಾದಂತೆನ್ನಿಸಿತು..ಇನ್ನೂ ಹೆಚ್ಚು ಪುಸ್ತಕದಲ್ಲಿ ಗಮನಹರಿಸಿದ. ದಿನಾಲೂ ಪುಟ್ಟ ಅಮ್ಮ ಬರುವವರೆಗೂ
ಸ್ಟಡಿ ಟೇಬಲ್ ಬಿಟ್ಟು ಏಳುತ್ತಿರಲಿಲ್ಲ. ತಾ ಬಂದಾಗ ಮಗ ಬುಕ್ಕು ಹಿಡಿದುದನ್ನು ಕಂಡ್ರೆ ಅವಳಿಗೆ ಖುಷಿ..ಹಾಗೆಯೇ ಅಮ್ಮ ತನ್ನ
ಹೊಗಳುವುದು ಇವನಿಗೆ ಖುಷಿ. ಇಂದೂ ಅಮ್ಮ ಬಂದವಳು ಚೀರತೊಡಗಿದ್ದಳು..ಗಾಬರಿಯಾದ ಪುಟ್ಟ ಹೊರಬಂದ. ಅಜ್ಜಿತಲೆಗೆ ಪೆಟ್ಟಾಗಿತ್ತು
ರಕ್ತ ಸೋರಿತ್ತು,ತಿಜೋರಿ ಖಾಲಿಯಾಗಿತ್ತು..ಟಿವಿ ಜೋರಾಗಿ ಕಿರುಚುತ್ತಿತ್ತು..
 
ಅಂಗೈ ಅಗಲದ ಕತೆ--೭
-----------------------
ರೂಟ್ ನಂ ೨೦೧ರ ಬಸ್ಸಿನಲ್ಲಿ ಅವರಿಬ್ಬರಿಗೆ ಕೂರಲು ಸೀಟು ಸಿಕ್ಕಿರಲಿಲಲ್ಲ..ನಿಂತುಕೊಂಡೇ ಬಂದಿದ್ರು.
ಅವರ ವೇಷಭೂಷದಿಂದ ಅವರು ಕಟ್ಟಡ ಕಾರ್ಮಿಕರೆಂದು ಹೇಳಬಹುದಾಗಿತ್ತು..ಅವರಲ್ಲೊಬ್ಬ ಹಿರಿಯ..
ಬಗ್ಗಿ ಬಗ್ಗಿ ಹೊರಗಡೆ ನೋಡುತ್ತಿದ್ದ..ಇನ್ನೊಬ್ಬ ಯುವಕ..ಅವ ಕಂಬಕ್ಕಾನಿಸಿಕೊಂಡು ನಿಂತಿದ್ದ..ಅವನ
ಗಮನವೆಲ್ಲ ಅವನ ಪಕ್ಕದ ಸೀಟಿನಲ್ಲಿ ಕುಳಿತ ಐಟಿಗ ತನ್ನ ಲ್ಯಾಪಟಾಪಿನಲ್ಲಿ ನೋಡುತ್ತಿದ್ದ ದೀವಾರ್ ಸಿನೆಮಾದಲ್ಲಿತ್ತು..
ಅಮಿತಾಬ್ ಮತ್ತು ಡಾಗಾ ನ ನಡುವಿನ ಸೀನು ರಸವತ್ತಾಗಿತ್ತು..ಆಗ ಆ ಹಿರಿಯ ಇವನನ್ನು ಅಲ್ಲಾಡಿಸಿ
ಪಕ್ಕದಲ್ಲಿರುವ ದೊಡ್ಡ ಕಟ್ಟಡ ತೋರಸಿ ಆ ಕಟ್ಟಡ ಕಟ್ಟುವಾಗ ತಾನಿ ಇಟ್ಟಿಗೆ ಹೊತ್ತುದರ ಬಗ್ಗೆ ಹೇಳಿದ...
ಅದೇ ಸುಮಾರು ಲ್ಯಾಪಟಾಪಿನಲ್ಲಿ ಅಮಿತಾಬ್ ಉಸುರುತ್ತಿದ್ದ.."ಮೈ ಯೇ ಬಿಲ್ಡಿಂಗ್ ಖರೀದನಾ ಚಾಹತಾ ಹುಂ...
ಇಸ್ ಕೆ ಲಿಯೆ ಮೇರೆ ಮಾಂ ನೆ ಭೀ ಇಂಟೇ ಉಠಾಯೇ ಹೈ...".ರೀಲು ಮತ್ತು ರಿಯಲ್ ಲೈಫಿನ ಪರಿವೆ ಇಲ್ಲದೆಯೇ
ಬಸ್ಸು ಭರದಿಂದ ಸಾಗಿತ್ತು..ಹಿಂದೆ ಸರಿದು ಹೋದ ಬಿಲ್ಡಿಂಗನ್ನೇ ಆ ಹಿರಿಯ ನೋಡುತ್ತಿದ್ದ..ಯುವಕ ರಸಭಂಗವಾದದ್ದಕ್ಕೆ
ಒಟಗುಟ್ಟುತ್ತಿದ್ದ.