Friday, August 23, 2013

ಇನ್ನಷ್ತು ಅಂಗೈ ಅಗಲದ ಕತೆಗಳು


ಅಂಗೈ ಅಗಲದ ಕಥೆ--೫
---------------------
ರಂಗರಾಯರು ತೀರಿಕೊಂಡ್ರು..ಮಗ ಸೊಸೆ ಮಡದಿ ಹಾಗೂ ೯ ವರ್ಷದ ಮೊಮ್ಮಗನನ್ನು
ಅಗಲಿದ್ರು. ದಿನ ಕರ್ಮ ಶಾಸ್ತ್ರೋಕ್ತವಾಗಿ ಮಾಡಬೇಕೆಂಬ ಮಗನ ಹಂಬಲಕ್ಕೆ
ಅನುಗುಣವಾಗಿಯೇ ಸಿಕ್ಕ ಪುರೋಹಿತ್ರು ಪ್ಯಾಕೇಜ್ ಡೀಲ್ ಒಪ್ಪಿಸಿಕೊಂಡ್ರು. ಸಾಕಷ್ಟು ಆಸ್ತಿ
ಉಳಿಸಿಹೋಗಿದ್ರು ರಂಗರಾಯರು.... ಮಗನೂ ಶ್ರದ್ಧೆಯಿಂದ ಮುಡಿಕೊಟ್ಟು ಆಣಿಯಾದ.
.ಮೊಮ್ಮಗನಿಗೆ ಅವ್ರ ಮಿಸ್ಸು ಹೇಳಿದ್ರು ಸ್ವರ್ಗ ನರಕ ಎರಡೂ ಇಲ್ಲೇಇವೆ..ಒಳ್ಳೆಯದು ಮಾಡಿದ್ರೆ ಸ್ವರ್ಗ ಸಿಗುತ್ತದೆ.
..ಈ ಅಪ್ಪ ತಲೆ ಬೋಳ್ಸಿ ಮಾಡೋ ಕರ್ಮದಿಂದ ತಾತ ಸ್ವರ್ಗಕ್ಕೆ ಹೋಗ್ತಾನೆ ಅಂತ ಪುರೋಹಿತ್ರು ಅಂತಾರೆ
ಮೊಮ್ಮಗ ಗೊಂದಲದಲ್ಲಿದ್ದ. ರಾಯರು ಬಳಸುತ್ತಿದ್ದ ವಾಕಿಂಗ್ ಸ್ಟಿಕ್ಕು ಅದಕ್ಕೊಂದು ಬೆಳ್ಳಿ ಹಿಡಿ..ಅಪ್ಪ ಅಮ್ಮಗೆ ಗೊತ್ತಾಗದೇ
ಅದನ್ನು ತೆಗೆದು ಹಿಂದಿನ ಬೀದಿಯ ಬಡ ಮುದುಕನಿಗೆ ಕೊಟ್ಟಿದ್ದ...ತಾನು ಮಾಡಿದ ಈ ಕೆಲ್ಸದಿಂದ ತಾತ ಸ್ವರ್ಗಕ್ಕೋಗಲಿ
ಇದು ಅವನ ಆಶಯ...ಅಂತೂ ಇಂತೂ ಕರ್ಮಧರ್ಮ ಎಲ್ಲ ಮುಗದ್ವು...ಬಂಗಾರದ ಬಿಸ್ಕತ್ತು ದಾನವಾಗಿ ಪಡೆದ
ಪುರೋಹಿತ್ರು ತಮ್ಮ ಮಂತ್ರಬಲದಿಂದ ಮತ್ತು ಮಾಡಿದ ಕರ್ಮಫಲದಿಂದ ರಾಯರಿಗೆ ಸ್ವರ್ಗಪ್ರಾಪ್ತಿ ಆಗುತ್ತದೆ ಅಂದ್ರು..
ರಾಯರು ವೈತರಣಿ ದಾಟಿ ಸ್ವರ್ಗಸೇರಿದ್ರು..ಅಲ್ಲಿಂದ ನೋಡಿದವ್ರಿಗೆ ಕಂಡಿದ್ದು ಆ ಬಡಮುದುಕ ತಮ್ಮ ಸ್ಟಿಕ್ ಹಿಡಿದು ನಡೆಯುವುದ
ರಾಯರು ಖುಷಿಗೊಂಡ್ರು..
 
ಅಂಗೈ ಅಗಲದ ಕಥೆ---೬
------------------------------------
ಪುಟ್ಟನ ಅಪ್ಪ ಸಾಫ್ಟವೇರ್ ಇಂಜಿನೀಯರ್ ಅವ್ವ ಬ್ಯಾಂಕಿನಲ್ಲಿ..ಮನೆಯಲ್ಲಿ ಅಜ್ಜಿ ಮತ್ತು ಪುಟ್ಟ.
ಪ್ರತಿ ಟೆಸ್ಟ ಪರೀಕ್ಷೆಯಲ್ಲೂ ಮೊದಲ ಸ್ಥಾನ ಪುಟ್ಟನದು..ಅಪ್ಪ ಅಮ್ಮನ ಪ್ರೀತಿ ಹಾಗೂ ಸ್ಥಾನಬಿಟ್ಟುಕೊಡಬಾರದೆಂಬ ಜಿದ್ದು..
ಒಂದು ಗಂಟೆ ಮಾತ್ರ ಪುಟ್ಟನಿಗೆ ಟಿವಿ ನೋಡುವ ಅವಕಾಶ. ಅಂದು ಸ್ಕೂಲಿಂದ ಬಂದವ ಊಟಮಾಡಿ ತನ್ನ ಸ್ಟಡಿ ಟೇಬಲ್
ಮುಂದೆ ಕುಳಿತ. ರೂಮಿನ ಬಾಗಿಲು ಹಾಕಿ. ಹಾಲನಲ್ಲಿ ಅಜ್ಜಿ ಟಿವಿ ನೋಡುತ್ತಿದ್ದರು, ಬೆಲ್ ಸದ್ದಾಯಿತು ಹೋಗಿ ನೋಡಿದ್ರೆ
ಪೇಪರ್ ಅಂಕಲ್ ಮತ್ತು ಇನ್ನೊಬ್ಬ. ತನ್ನಮ್ಮ ಹೇಳಿಕೊಟ್ಟಿದ್ದು ಯಾರೇ ಬಂದ್ರೂ ಅವರಿಗೆ ವಿಶ್ ಮಾಡಬೇಕು ಇಂದೂ ಹಾಗೆ
ಮಾಡಿ ಮರಳಿ ರೂಮುಸೇರಿ ಬಾಗಿಲು ಮುಚ್ಚಿಕೊಂಡ. ಪುಸ್ತಕವನ್ನು ಆಪೋಷನ ತಗೊಳ್ಳಲು ಮೊದಲಿಟ್ಟ. ನಡುವೆ ಎಲ್ಲೋ
ಟಿವಿ ಸದ್ದು ಒಮ್ಮೆಲೆ ಜೋರಾದಂತೆನ್ನಿಸಿತು..ಇನ್ನೂ ಹೆಚ್ಚು ಪುಸ್ತಕದಲ್ಲಿ ಗಮನಹರಿಸಿದ. ದಿನಾಲೂ ಪುಟ್ಟ ಅಮ್ಮ ಬರುವವರೆಗೂ
ಸ್ಟಡಿ ಟೇಬಲ್ ಬಿಟ್ಟು ಏಳುತ್ತಿರಲಿಲ್ಲ. ತಾ ಬಂದಾಗ ಮಗ ಬುಕ್ಕು ಹಿಡಿದುದನ್ನು ಕಂಡ್ರೆ ಅವಳಿಗೆ ಖುಷಿ..ಹಾಗೆಯೇ ಅಮ್ಮ ತನ್ನ
ಹೊಗಳುವುದು ಇವನಿಗೆ ಖುಷಿ. ಇಂದೂ ಅಮ್ಮ ಬಂದವಳು ಚೀರತೊಡಗಿದ್ದಳು..ಗಾಬರಿಯಾದ ಪುಟ್ಟ ಹೊರಬಂದ. ಅಜ್ಜಿತಲೆಗೆ ಪೆಟ್ಟಾಗಿತ್ತು
ರಕ್ತ ಸೋರಿತ್ತು,ತಿಜೋರಿ ಖಾಲಿಯಾಗಿತ್ತು..ಟಿವಿ ಜೋರಾಗಿ ಕಿರುಚುತ್ತಿತ್ತು..
 
ಅಂಗೈ ಅಗಲದ ಕತೆ--೭
-----------------------
ರೂಟ್ ನಂ ೨೦೧ರ ಬಸ್ಸಿನಲ್ಲಿ ಅವರಿಬ್ಬರಿಗೆ ಕೂರಲು ಸೀಟು ಸಿಕ್ಕಿರಲಿಲಲ್ಲ..ನಿಂತುಕೊಂಡೇ ಬಂದಿದ್ರು.
ಅವರ ವೇಷಭೂಷದಿಂದ ಅವರು ಕಟ್ಟಡ ಕಾರ್ಮಿಕರೆಂದು ಹೇಳಬಹುದಾಗಿತ್ತು..ಅವರಲ್ಲೊಬ್ಬ ಹಿರಿಯ..
ಬಗ್ಗಿ ಬಗ್ಗಿ ಹೊರಗಡೆ ನೋಡುತ್ತಿದ್ದ..ಇನ್ನೊಬ್ಬ ಯುವಕ..ಅವ ಕಂಬಕ್ಕಾನಿಸಿಕೊಂಡು ನಿಂತಿದ್ದ..ಅವನ
ಗಮನವೆಲ್ಲ ಅವನ ಪಕ್ಕದ ಸೀಟಿನಲ್ಲಿ ಕುಳಿತ ಐಟಿಗ ತನ್ನ ಲ್ಯಾಪಟಾಪಿನಲ್ಲಿ ನೋಡುತ್ತಿದ್ದ ದೀವಾರ್ ಸಿನೆಮಾದಲ್ಲಿತ್ತು..
ಅಮಿತಾಬ್ ಮತ್ತು ಡಾಗಾ ನ ನಡುವಿನ ಸೀನು ರಸವತ್ತಾಗಿತ್ತು..ಆಗ ಆ ಹಿರಿಯ ಇವನನ್ನು ಅಲ್ಲಾಡಿಸಿ
ಪಕ್ಕದಲ್ಲಿರುವ ದೊಡ್ಡ ಕಟ್ಟಡ ತೋರಸಿ ಆ ಕಟ್ಟಡ ಕಟ್ಟುವಾಗ ತಾನಿ ಇಟ್ಟಿಗೆ ಹೊತ್ತುದರ ಬಗ್ಗೆ ಹೇಳಿದ...
ಅದೇ ಸುಮಾರು ಲ್ಯಾಪಟಾಪಿನಲ್ಲಿ ಅಮಿತಾಬ್ ಉಸುರುತ್ತಿದ್ದ.."ಮೈ ಯೇ ಬಿಲ್ಡಿಂಗ್ ಖರೀದನಾ ಚಾಹತಾ ಹುಂ...
ಇಸ್ ಕೆ ಲಿಯೆ ಮೇರೆ ಮಾಂ ನೆ ಭೀ ಇಂಟೇ ಉಠಾಯೇ ಹೈ...".ರೀಲು ಮತ್ತು ರಿಯಲ್ ಲೈಫಿನ ಪರಿವೆ ಇಲ್ಲದೆಯೇ
ಬಸ್ಸು ಭರದಿಂದ ಸಾಗಿತ್ತು..ಹಿಂದೆ ಸರಿದು ಹೋದ ಬಿಲ್ಡಿಂಗನ್ನೇ ಆ ಹಿರಿಯ ನೋಡುತ್ತಿದ್ದ..ಯುವಕ ರಸಭಂಗವಾದದ್ದಕ್ಕೆ
ಒಟಗುಟ್ಟುತ್ತಿದ್ದ.

  

2 comments:

  1. 5. ರಾಯರಿಗೆ ಆಗ ನಿಜವಾದ ಸ್ವರ್ಗ ಪ್ರಾಪ್ತಿ.
    6. ಇದರಲ್ಲಿ ಹಲವು ಸೂಕ್ಷ್ಮಗಳಿವೆ, ಮಕ್ಕಳನ್ನು ನಾವು ರೇಸ್ ಕುದುರೆಗಳ ತರಹ ಓಡಿಸಿ ಅವರ ಲೋಕ ಜ್ಞಾನವನ್ನೇ ಶೂನ್ಯ ಮಾಡಿಟ್ಟಿದ್ದೀವೇನೋ?
    7. ಬದುಕು ಮತ್ತು ಸಿನಿಮಾ. ಎರಡೂ ನಾಣ್ಯದ ಎರಡು ಮುಖಗಳೇ ದೇಸಾಯರೇ.

    ReplyDelete
  2. ಥಟ್ಟನೇ ಮನಸ್ಸಿಗೆ ತಟ್ಟುವ ಕತೆಗಳಿವು.

    ReplyDelete