Saturday, December 6, 2014

ಸುಮ್ಮನ ನೆನಪು...೧ಈ ಫೇಸಬುಕ್, ವಾಟ್ಸಅಪ್ ಯುಗ ಇನ್ನೂ ಶುರು ಆಗಿರಲಿಲ್ಲದಾಗ "ಪತ್ರಮಿತ್ರ" ಅನ್ನುವ
ಪ್ರಕಾರ ಇತ್ತು. ಕನ್ನಡದಾಗ ಮಂಗಳ, ಉತ್ಥಾನ ಹಂಗ ಇಂಗ್ಲೀಶಿನ್ಯಾಗ 'ಸ್ಪೋರ್ಟವೀಕ್' ಮತ್ತು ಇನ್ನೂ
ಕೆಲವು ಪತ್ರಿಕೆಗಳು ಆಸಕ್ತರ ವಿಳಾಸ ಪ್ರಕಟಿಸಿ ಗೆಳೆತನ ಬೆಳೆಯಲು ಉಪಕಾರ ಮಾಡತಿದ್ವು. ನಂದು
ಕಾಲೇಜು ಮುಗದಿತ್ತು ನಂಗೂ ಇದರ ಹುಚ್ಚು ಹಿಡೀತು..ಎಷ್ಟು ಅಂದರ ಯಾಕೋ ನಂಗ 'ಉಮೇಶ' ಹೆಸರು
ಪಸಂದ ಬರಲಿಲ್ಲ ನಮ್ಮವ್ವ ಯಾವಾಗೋ ಹೇಳಿದ್ದಳು ಹೆಸರ ಇಡಾವರು "ಹೇಮಂತ" ಅಂತನೂ ಜೇಳಿದ್ರು ಅಂತ.
ತಗೊರಿ ನಂಗೂ ಸೇರತು ಯಾವ ಕಾಯಿದೆಯ ಉಸಾಬರಿಗೆ ಹೋಗದೆ ನಾನ ಹೆಸರು ಹೇಮಂತ್ ದೇಸಾಯಿ ಅಂತ
ಬದಲಾಯಿಸಿಕೊಂಡೆ. ನಾ ಮ್ಯಾಲ ಹೇಳಿದ ಪತ್ರಿಕೆಗ ಕಳಿಸಿದೆ ವಿಳಾಸ ಅದ ಇತ್ತು ದೇಸಾಯಿ ವಾಡೆ,ಕಲಾದಗಿ ಓಣಿ
ಹುಬ್ಬಳ್ಳಿ ಅಂತ. ಇದು ಮುಂದಿನ ಅನೇಕ ಗೊಂದಲಕ್ಕ, ಸಂಭ್ರಮಕ್ಕ ಸಿಹಿ ಕಹಿ ಅನುಭವಕ್ಕೂ ಕಾರಣ ಆತು.

ಯಾವಾಗಲೂ ಬರುವ ಪೋಸ್ಟಮನ್ "ಇಲ್ಲೆ ಹೇಮಂತ ದೇಸಾಯಿ"ಯಾರು ಅಂತ ಕೇಳಕೋತ ಬಂದಾಗ ನಾ ಇರಲಿಲ್ಲ
ಯಾರೂ ಅಂಥಾವರು ಇಲ್ಲ ಅಂತ ಅವಗ ಹೇಳಿಕಳಿಸಲಾಗಿತ್ತು. ಮನಿಗೆ ಬಂದ ನಂಗ ಈ ಸುದ್ದಿ ಗೊತ್ತಾತು..ಮರಾಠಾಗಲ್ಲಿ
ಪೋಸ್ಟ ಆಫೀಸಿಗೆ ಹೋಗಿ ನಾನ ಹೇಮಂತ್ ದೇಸಾಯಿಅಂತ ಅವನಿಗೆ ತಿಳಸಿ ,ಮುಂದ ಈ ಹೆಸರಿಗೆ ಪತ್ರ ಬಂದರ
ನಮ್ಮನಿಗೆ ಹಾಕರಿ ಅಂತ ಹೇಳಿ ಮೊದಲ ಪತ್ರ ತಗೊಂಡು ಬಂದೆ. ಅದು ಶರ್ಮಿಳಾ ಪಣಸಾರೆ ಅನ್ನಾಕಿ ಕಳ್ವಾ,ಠಾಣೆಯಿಂದ
ಬರದಿದ್ದುದು. ಮರಾಠಿಯೊಳಗ ಇತ್ತು. ನನ್ನ ಹೆಸರು ಅಕಿಗೆ ಮಹಾರಾಷ್ಟ್ರೀಯನ್ ಅನಿಸಿ ನಾ ಮರಾಠಿನ ಅಂತ ಗ್ರಹಿತ ಹಿಡದು ಅಕಿ ಬರದಿದ್ಲು. ನಂಗ ಬರೋ ಹರಕುಮುರಕು ಮರಾಠಿ ಅವಾಗ ಉಪಯೋಗ ಬಂತು..ಮೊದಲಿಗೆ ಸೆಳೆದಿದ್ದು ದುಂಡ ಅಕ್ಷರ..ಇಡೀ ಪತ್ರದಾಗ ಇದ್ದಿದ್ದು ತನ್ನ ಕಾಲೇಜು, ಅಲ್ಲಿನ ಜೀವನ ಮೆಚ್ಚಿನ ಹೀರೋ ನೋಡಿದ ಸಿನೇಮಾ ಗಳ ಬಗ್ಗೆ. ನಂಗ ಪತ್ರ ಬರದು ರೂಡಾ ಏನೋ ಇತ್ತು ಆದ್ರ ಈ ಪತ್ರ ವಿಶೇಷದ್ದು..ಅದೂ ಹುಡುಗಿದು..ನಂಗ ತಿಳದ ಮರಾಠಿ ಹಂಗ ಇಂಗ್ಲೀಶು ಎರಡೂ ಸೇರಿ ಬರದೆ,ಮೂರು ದಿನ ತಗೊಂಡೆ ಆ ಮಾತು ಬ್ಯಾರೆ. ಅಕಿಯಿಂದ ಉತ್ತರ ಬಂತು..ಬೋನಸ್ ಅಂದ್ರ ಅಕಿ ನನ್ನ ಅಡ್ರೆಸ್ ತನ್ನ ಗೆಳತಿ ಸುನೇತ್ರಾ ದಿಗೆ ಗಕೊಟ್ಟಿದ್ದಳು ಸುನೇತ್ರಾ ಬರದ ಪತ್ರನೂ ಜೋಡಿನ ಬಂತು. ಅದೂ ಮರಾಠಿಯೊಳಗ ಇತ್ತು.ಡಬಲ್ ಖುಶಿ ನಂಗ..ಇಬ್ಬರಿಗೂ ಉತ್ತರ ಬರೆದೆ( ಇಂಥಾ ಪತ್ರ ಎಲ್ಲಾ ಛಂದನ್ನೂ ಕಲರ್ ಪೇಪರಿನ್ಯಾಗ ಬರೀಬೇಕು ಅಂತ ಗೆಳ್ಯಾ ಶಿಂಧೆ ಹೇಳಿದ) ಏನೋ ಸಾಧಿಸಿದ ತೃಪ್ತಿ ಒಂದು ಕಡೆ ಮುಂದ ಅವರ ಗೆಳೆತನ ಬೆಳೆದು ಮುಂದ ಹಂಗ ಮುಂದ ಹಿಂಗ ಅನ್ನುವ ರಂಗುರಂಗಿನ ಕನಸೂ ಸುರು ಆದವನ್ರಿ.

ಈ ಪತ್ರಮಿತ್ರ ಪ್ರಕರಣಕ್ಕ ಟ್ವಿಸ್ಟ ಸಿಕ್ಕಿದ್ದು ನಮ್ಮಪ್ಪನಿಂದ. ಅವಗ ನಾ ಹೆಸರು ಬದಲಾಯಿಸಿದ್ದು ವಿಚಿತ್ರ ಅನಿಸಿತ್ತು ಮೇಲಾಗಿ ಎಲ್ಲೋ ಇರಾವರು ಅವರು ಅವರ ಜೋಡಿ ಅದೆಂತಾ ಗೆಳತನ ಅನ್ನೋದು ಅವನ ವಾದ. ಸೂಟಿಗೆ ಬಂದ ನಮ್ಮಕ್ಕನ ಮುಂದ "ನಿನ್ನ ತಮ್ಮ ಈಗ ದೊಡ್ಡಾವಾಗ್ಯಾನ ನಾವಿಟ್ಟ ಹೆಸರು ಬದಲಾಯಿಸಿಕೊಂಡಾನ...ಹುಡುಗ್ಯಾರ ಪತ್ರ ಬರತಾವ ಅವಗ..." ಅಂದ.ಒಂದಂತೂ ಖಾತರಿ ಆಗಿತ್ತು ನಮ್ಮಪ್ಪ ನಂಗ ಬಂದಿದ್ದ ಪತ್ರಾ ಎಲ್ಲಾ ಓದ್ಯಾನ ಅಂತ. ಜೀವನದಾಗ ಮೊದಲಸಲಾ ನಂದ ಒಂದು ಖಾಸಗಿ ಜಗಾ ಇರಬೇಕು ಅದರಾಗ ಯಾರಿಗೂ ಬರಕೊಡಬಾರದು ಅನಿಸಿತು. ಬರೇ ಹುಡುಗ್ಯಾರದ ಪತ್ರ ಬರಲಿಲ್ಲ.. ಹುಡುಗುರುದು ಇದ್ದವು, ತಾಳಿಕೋಟಿ, ರಬಕವಿ, ಗದಗ ಹಂಗ ದೂರದ ಬೆಂಗಳೂರು... ಇದು ನಂಗ ಸೇರಲಿಕ್ಕತ್ತು. ಮುಂಡಗೋಡದಿಂದ ಪತ್ರ ಬರೆದ ಸಂಜೀವ್ ರೇವಣಕರ್ ಅನ್ನಾವ ಶನಿವಾರ ಹುಬ್ಬಳ್ಳಿಗೆ ಬರುವುದಾಗಿ...ವಿಳಾಸ ಕೇಳಿದ ಕೊಟ್ಟೆ. ಹೇಳಿದಂಗ ಶನಿವಾರ ಅವ ಬಂದ..ಹೊರಗ ಊಟಕ್ಕ ಹೋದ್ವಿ..
ಜೀವನದಾಗ ಹಿಂಗ ಅಪರಿಚಿತಗೆಳೆಯನ ಮುಖಾಮುಖಿ..ಹೊಸಾ ಅನುಭವ ಅದು.ಬಿಯರ್ ಮತ್ತು ಚಿಕನ್ ರುಚಿ ನೋಡಿದ್ದು ಅವತ್ತ ಮೊದಲು.....


ಮುಂದುವರೆಯಲಿದೆ...........

2 comments:

 1. ಪತ್ರಮಿತ್ರರಾದ ಜೋಡಿಯೊಂದು ಮುಂದೆ ಜಾತಿಯನ್ನೂ ಮೀರಿ ಮದುವೆಯಾದ ಉದಾಹರಣೆ ಕೇಳಿದ್ದೇನೆ ಹೇಮಂತರೇ!


  ಪತ್ರಮಿತ್ರದ ಮೂಲಕ ಗೆಳೆಯಳಾದ ಜಯಲಲಿತ ಎನ್ನುವಾಕಿ ಈಗಲೂ ನನಗೆ ಸಿಗುತ್ತಾಳೆ.

  ಅಂದಹಾಗೆ, ಈ ಬಿಯರ್ ಮತ್ತು ಚಿಕನ್ ರುಚಿ ಪ್ರಸಂಗ ಸವಿಸ್ತಾರವಾಗಿ ವಿವರಿಸಿ ದೇಸಾಯರೇ.

  ಒಮ್ಮೆ ನಾವು ಕೂತು ಬಿಯರ್ ಮತ್ತು ಚಿಕನ್ ರುಚಿ ನೋಡೋಣ ಅಲ್ಲವಾ?

  ReplyDelete
 2. ನಿಮ್ಮ ಲೇಖನಗಳಲ್ಲಿ ಒಂದ ಹೊಸತನಾ ಯಾವಾಗಲೂ ಇರತದ. ಈಗ ಪತ್ರಮಿತ್ರತ್ವ ಚಾಲೂ ಮಾಡೀರಿ. ಇನ್ನು ಇಲ್ಲಿ ಬರತಕ್ಕಂತಹ ರೋಮಾಂಚಕ ಅಧ್ಯಾಯಗಳ ಹಾದಿ ನೋಡತಿರತೇನಿ.

  ReplyDelete