Friday, November 7, 2014

ಈ ಹೊತ್ತಿಗೆ ಕಥಾ ಕಮ್ಮಟ--೨೦೧೪



 ಹಿಂದೆ ಕುಪ್ಪಳಿಯಲಿ ಎರಡು-ಮೂರುದಿನ ಕಥಾ ಕಮ್ಮಟದಲ್ಲಿ ಭಾಗವಹಿಸಿದ್ದೆ. ಸ್ವಲ್ಪ ಕಹಿಯೇ ಅನ್ನಬಹುದಾದ ಅನುಭವ
ಅದರದು. ಶ್ರೀಮತಿ ಜಯಲಕ್ಷ್ಮಿ ಪಾಟಿಲ್ ಅವರ ಮುಂದಾಳತ್ವದ "ಈ ಹೊತ್ತಿಗೆ" ಇದು ಪ್ರತಿತಿಂಗಳು ಒಂದು ಕಡೆ ಸೇರಿ ನಿರ್ಧಾರವಾದ ಕತೆ/ಕಾದಂಬರಿ ಬಗ್ಗೆ ಚರ್ಚಿಸುತ್ತಾರೆ.ಒಂದು ಸಲ ಮಾತ್ರ ನಾನು ಇದರಲ್ಲಿ ಭಾಗಿಯಗಿದ್ದು. ಆ ಗುಂಪಿನ ಸದಸ್ಯರೆಲ್ಲ ಸಾಹಿತ್ಯದಲ್ಲಿ ಒಳ್ಳೆ ಅಭಿರುಚಿ ಹೊಂದಿದವರು. ಈಗ ಆ ಗುಂಪಿಗೆ ಶ್ರೀ ದಿವಾಕರ್ ಅವರ ಮಾರ್ಗದರ್ಶನ ಲಭಿಸಿದೆ. ಅದು ಅ ಗುಂಪಿನ ಹಿರಿಮೆ ಹೆಚ್ಚಿಸಿದೆ. ಇರ್ಲಿ .ಜೆಪಿ ಮೇಡಂ ಕಥಾಕಮ್ಮಟ ಆಯೋಜಿಸಲಿದ್ದಾರೆ ಅನ್ನುವ ಸುದ್ದಿ ಕೇಳಿ ಹೆಸರು ನೊಂದಯಿಸಿದೆ.ದಿವಾಕರ್, ಹೆಚ್ ಎಸ್ ಆರ್ ಮತ್ತು ಚ.ಹ. ರಘುನಾಥ್ ಸಂಪನ್ಮೂಲ ವ್ಯಕ್ತಿಗಳಾಗಿ ಬಂದರು.

ಮೊದಲ ದಿನ ಪರಿಚಯ ಮುಗಿದಮೇಲೆ ಹೆಚ್ ಎಸ್ ಆರ್ ಕನ್ನಡ ಕಥೆಗಳ ಇತಿಹಾಸ ಸದ್ಯದ ಸ್ಥಿತಿಗತಿಗಳ ಬಗ್ಗೆ ಸೊಗಸಾಗಿ ಮತ್ತು ನಿರಾಳವಾಗಿ ಮಾತಾಡಿದರು. ಅನೇಕ ಆಯಾಮಗಳ ಪರಿಚಯಿಸುತ್ತ ಕತೆ ಹೇಗಿರಬೇಕು ಇಂದಿನ ಕತೆ ಹೇಗಿವೆ ಎಂಬ ಕಡೆ ಬೆಳಕುಚೆಲ್ಲಿದರು. ಅವರಂದ ಕೆಲ ಸಂಗತಿ ಇನ್ನೂ ರಿಂಗಣಿಸಿವೆ. ಅವರು ಪ್ರಮುಖವಾಗಿ ಈ ಸಾಹಿತ್ಯ
ಚಳುವಳಿಗಳು ಹೇಗೆ ಜನಜೀವನದಿಂದ ವಿಮುಖವಾದವು ಎಂದು ಹೇಳಿದರು.ಸ್ತ್ರೀವಾದಿ ಸಾಹಿತ್ಯ ಚಳುವಳಿಗಳು ಹೇಗೆ ಪುರುಷರನ್ನು ದ್ವೇಷಿಸುವ ಕಡೆ ಗಮನಹರಿಸಿ ಸಾಮಾನ್ಯ ಶೃಂಗಾರದ ಪರಿಭಾಶೆ ಅಥವಾ ಅದರಲ್ಲಿ ಸಿಗುವ ಆನಂದವನ್ನು ಅವಗಣಿಸಿದವು ಅಂತ. ಗಂಡಸಿನ ಸಹಕಾರ ಇಲ್ಲದಿರೆ ಶೃಂಗಾರ ನೀರಸ ಅಂತಂದರು.ಅಂತೆಯೇ ಬಂಡಾಯ ಚಳುವಳಿ ಹೇಗೆ ಜನಸಾಮಾನ್ಯರ ನೋವಿಗೆ ಸ್ಪಂದಿಸದೇ ವಿರೋಧಿಸಿ ಬರೆದವರು ತಮ್ಮ ಸ್ಥಾನಮಾನ ಗಳಿಸಿ ಆ ನಂತರ ಮೂಲಹೋರಾಟವನ್ನೇ ಮರೆತರು ಅಂತ.ನಾನು ಮೊದಲಬಾರಿ ಅವರ ಮಾತು ಕೇಳಿದ್ದು.ಮೂರ್ತಿ
ಚಿಕ್ಕದಾದರೂ ಕೀರ್ತಿ ದೊಡ್ದದು ಅಂತಅವರನ್ನು ನೋಡಿ ಹೇಳಬಹುದು. ತುಂಬ ಸರಳ ವ್ಯಕ್ತಿ. ಚೂರೂ ಅಹಂಕಾರ ಇಲ್ಲ. ಕತೆಗಳ ಬಗ್ಗೆ ಅವುಗಳ ಔಚಿತ್ಯಗಳ ಬಗ್ಗೆ ಸೊಗಸಾಗಿ ಹೇಳಿದರು. ಆಶ್ಛರ್ಯವೆಂದರೆ ಕೆಲವು ಕತೆ/ಕವಿತೆಗಳಲ್ಲಿನ ಸಾಲುಗಳನ್ನು ಉದ್ಧರಿಸಿದ್ದು. "ತುಪ್ಪ ಹಚ್ಚಿದ ಕನ್ನಡಿ" ಯಿಂದ ಜಗ ನೋಡಿ ಕತೆ ಬರೆಯುವವರ ಬವಣೆಗಳ ಬಗ್ಗೆ ಹಾಗೂ ಅವರ ವಿಚಿತ್ರ ಧೋರಣೆಗಳ ಬಗ್ಗೆ ಕುಹಕ ವಾಡಿದರು.

ನಮಗೆ ಮೇಲ್ ನಲ್ಲಿ ಎರಡು ಕತೆ "ದಗಡು ಪರಬ್ ನ ಅಶ್ವಮೇಧ"-- ಜಯಂತ್ ಕೈಕಿಣಿ ಬರೆದದ್ದು ಹಾಗೂ "ಕಥಾನಾಯಕಿಯೂ ಚರಿತ್ರಪಾತ್ರಗಳು"--ತುಳಸಿ ವೇಣುಗೋಪಾಲ್ ಬರೆದದ್ದು.ಕಳಿಸಿದ್ದರು. ಎರಡನೆಯ ಕತೆ ಕನ್ನಡದ ಅತ್ಯಂತ ಶ್ರೇಷ್ಠಕತೆಗಳಲ್ಲಿ ಒಂದು ಅಂತ ಹೇಳಲು ಅಡ್ಡಿಯಿಲ್ಲ. ಮೊದಲ ಕತೆ ಲೇಖಕ ಬಳಸಿದ ಶೈಲಿ,ತಂತ್ರ ಸ್ಥಳಪುರಾಣ ಹೀಗೆ ಸುಮಾರು ಎರಡುಗಂಟೆ ಚರ್ಚೆ ಅದರ ಬಗ್ಗೆ ಆಯಿತು. ದಿವಾಕರ್ ಅವರು ಕತೆಗಳಲ್ಲಿ ಅಡಗಿದ Round charecter ಮತ್ತು Flat charecter ಗಳನ್ನು ಗುರುತಿಸುವುದು ಹೇಗೆ ಕತೆಗಾರ ಬಳಸಿದ ತಂತ್ರ ಅವನ Theme ಹೀಗೆ ಎಲ್ಲದರ ಬಗ್ಗೆ ಚೆನ್ನಾಗಿ ಹೇಳಿದರು.ಆಗೀಗ ಭಾಗವಹಿಸಿದವರು ಕೇಳುವ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳು ಉತ್ತರ ಕೊಡುತ್ತಿದ್ದರು. ಒಂದೇ ಕೊರಗು ಅದು ಎರಡನೇ ಕತೆ ಚರ್ಚಿಸಲು ವೇಳೆ ಸಾಲದೇ ಹೋಗಿದ್ದು.ಮಧ್ಯಾಹ್ನ ಚ. ಹ. ರಘುನಾಥ್ ನಡೆಸಿಕೊಟ್ಟರು. ಅವರು ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯ ಸಂಪಾದಕರು. ವಾರಕ್ಕೆ ಏನಿಲ್ಲಎಂದರೂ ಸುಮಾರು ೪೦ ಕತೆ ಬರುತ್ತವೆ..ಎಲ್ಲ ಕತೆಗಾರರೂ ತಮ್ಮತಮ್ಮ ಕತೆಯೇ ಉತ್ತಮ ಅಂದುಕೊಂಡಿರೋದು ..ಪ್ರಕಟಿಸದ ಸಂಪಾದಕರಿಗೆ ಬೈದುಕೊಳ್ಳೋದು ಇದು ನನ್ನಂತಹ ಕತೆಗಾರರೂ ಮಾಡುವ ಕಿತಾಪತಿ. ಮೇಲ್ ನಲ್ಲಿ ಕತೆ ಕಳಿಸುವವರದು ಇನ್ನೊಂದು ಪಾಡು..ಒಂದು ವೇಳೆ ಸಂಪಾದಕ ಕತೆ ಸುಮಾರಾಗಿದೆ..ಪ್ರಕಟಿಸಲು ಆಗುವುದಿಲ್ಲ ಅಂದರೆ, ಮರುಕ್ಷಣ ಆ ಸಂಪಾದಕನ ಇನ್ ಬಾಕ್ಸಿಗೆ ಅದೇ ಲೇಖಕ ಮತ್ತೊಂದು ಕತೆ ಕಳುಹಿಸಿರುತ್ತಾನೆ..ಅಂತ ಹೇಳಿ ವ್ಯಂಗ್ಯವಾಡಿದರು. ಹೇಗೆ ಪ್ರಮುಖ ಪತ್ರಿಕೆ ವಿಜಯಕರ್ನಾಟಕ ತನ್ನ ಪುರವಣಿಯಲ್ಲಿ ಕತೆ ಪ್ರಕಟಿಸುತ್ತಿಲ್ಲ..ಈಗಿನ ನ್ಯೂಸ್ ಪ್ರಿಂಟ್ ದರದಲ್ಲಿ ಪುರವಣಿಯಲ್ಲಿ ಜಾಹೀರಾತು ಹಾಕದೆ ಪುರವಣಿ ಹೊರತರಲು ಸಾಧ್ಯವಿಲ್ಲ..ಹೀಗೆ ಸಂಪಾದಕರ ಅಳಲು ತೋಡಿಕೊಂಡರು.ಅದಕ್ಕೆ ಯಾವುದೇ ಕತೆಗಾರ ಪದಮಿತಿ ಹಾಕಿಕೊಂಡು ಬರೆದರೆ ಅದು ಉಭಯತರರಿಗೂ ಅನುಕೂಲ ಅನ್ನೋ ಮಾತು ಹೇಳಿದರು.

ಒಟ್ಟಿನಲ್ಲಿ ನಾ ಹಿಂದೆ ಕುಪ್ಪಳಿಯಲ್ಲಿ ಭಾಗವಹಿಸಿದ ಕಹಿಯನ್ನು ಈ ಕಮ್ಮಟ ಅಳಿಸಿತು. ದಿವಾಕರ್ ಹೇಳಿದ ಹಾಗೆ ಇಂತಹ ಸೊಗಸಾದ ಕಮ್ಮಟಗಳನ್ನು ನಡೆಸುವುದು ಸವಾಲಿನ ಸಂಗತಿ. ಸಾಹಿತ್ಯ ಅಕಾಡೆಮಿ, ಕಸಾಪ ಇತರೇ ಸಂಸ್ಥೆಗಳು ಈ ರೀತಿಯ ಕಮ್ಮಟ ಆಯೋಜಿಸುವುದು ಕನಸಿನ ಮಾತೇ ಸರಿ. ಅಂತಹುದರಲ್ಲಿ ಸೊಗಸಾಗಿ ನಡೆಸಿಕೊಟ್ಟ ಈ ಹೊತ್ತಿಗೆ ತಂಡ ಮತ್ತು ಜೆಪಿ ಮೇಡಮ್ ಅಭಿನಂದನಾರ್ಹರು. ಇಂತಹ ಕಮ್ಮಟ ಬರುತ್ತಲಿರಬೇಕು..


4 comments:

  1. ಮೊದಲ ಅನುಭವ ಕಹಿಯನು ಉಳಿಸದೆ ಕಡೆಗೆ ಸಿಹಿಯನು ಉಣಿಸಿದ್ದು ನಮಗೆ ಕುಶಿ ಕೊಟ್ಟಿತು.

    ReplyDelete
  2. 'ಕುಪ್ಪಳಿಯ ಕಹಿ' ಏನಂತ ಅರ್ಥಾಗಲಿಲ್ಲಾ... ಸೊಲ್ಪು 'ಬಿಚಮಗ್ಯಾಗ' ಹೇಳ್ರಿ ದೇಸಾಯರ...

    ReplyDelete
  3. ದೇಸಾಯರ,
    ‘ಕಾವ್ಯಶಾಸ್ತ್ರ ವಿನೋದೇನ ಕಾಲೋ ಗಚ್ಛತಿ ಧೀಮತಾಮ್’ಅಂತ ಅನ್ನೋದು ಇದಕ್ಕs ನೋಡರಿ.

    ReplyDelete
  4. ಹೊಸ ಅನುಭವ.. ಚೆನ್ನಾಗಿದೆ.
    ನಾನು ಬ್ಲಾಗ್ ಆರಂಭ ಮಾಡಿದ ದಿನಗಳವು.. ಒಂದು ಪತ್ರಿಕೆಯವರೊಬ್ಬರು ಅವರ ಪತ್ರಿಕೆಯ ಯುವಜನತೆಯ ವಿಭಾಗಕ್ಕಾಗಿ ನನ್ನಿಂದ ಲೇಖನ ಬಯಸಿ,ನನ್ನಿಂದ ಆಗಲ್ಲ.. ನನಗೆ ಆ ಶಕ್ತಿ ಇಲ್ಲವೆಂದರೂ, ಮತ್ತೆ ಮತ್ತೆ ಕೇಳುತ್ತಿದ್ದರು.. ನಾನು ಪತ್ರಿಕೆಗೆ ಬರೆದರೆ ಅದು ಸಾಮಾನ್ಯವಾಗಿರಬಾರದು, ಅದನ್ನು ಓದಿದವರಿಗೆ ಏನಾದರೂ ಸ್ಫೂರ್ತಿ/ಉಪಯೋಗ ಆಗಬೇಕೆಂಬ ಉತ್ಸಾಹ ನನಗಿದ್ದುದರಿಂದ ಸುಮಾರು ಒಂದು ತಿಂಗಳು ಸಮಯ ವಿನಿಯೋಗಿಸಿ ಒಂದು ಲೇಖನ ಸಿದ್ಧಪಡಿಸಿ ಕಳಿಸಿದ್ದೆ(ಅದು ಸ್ಪೂರ್ತಿದಾಯಕ ಲೇಖನ ಎಂದು ನನಗನಿಸಿದೆ ).. ಅದಕ್ಕೆ ಅವರಿಂದ ಬಂದ ಪ್ರತ್ಯುತ್ತರ "ಈಗಿನ್ಹ ಕಾಲದಲ್ಲಿ ಈ ರೀತಿ ಸಂದೇಶ ಸಾರೋ ಲೇಖನ ಯಾರು ಓದ್ತಾರೆ ಸರ್.. ಏನಾದರೂ ಮನರಂಜನೆ ಇರೋ ರಸ ತುಂಬಿದ ಲೇಖನ ಬರೀರಿ.. ಆಗ ಓದೋವ್ರು ಜಾಸ್ತಿ ಆಗ್ತಾರೆ, ಪೇಪರ್ ಕೂಡ ಜಾಸ್ತಿ ಹೋಗ್ತವೆ".. ನಾನು ಸರಿ ಬರೆಯೋಣ ಎಂದೆ, ಬರೀಲಿಲ್ಲ. ಯಾವುದೇ ಮೇಲ್ ಗೂ ಪ್ರತ್ಯುತ್ತರ ನೀಡಲಿಲ್ಲ.. ನಮ್ಮ ಯೋಚನೆಗಳೇ ಒಂದು ಧಾಟಿಯಾದ್ರೆ ಪಾಪ ಅವರು ಅವರು ಪೇಪರ್ ಹೆಚ್ಚು ಸೇಲಾಗ್ ಬೇಕಲ್ಲ ಅವರ ಬದುಕು ನಡೀಬೇಕಲ್ಲ ಎಂದುಕೊಂಡು ಅದೇ ಕೊನೆ ಪೇಪರ್ ಕಡೆ ತಿರುಗಿ ನೋಡಿಲ್ಲ.

    ReplyDelete