ಈ ಕಥೆ ನನ್ನ ನಿಂತುಹೋದ ಬ್ಲಾಗು "ಕತೆ ಹೇಳುವೆ" ಯಲ್ಲಿ ಹಾಕಿದ್ದೆ
ಇದು ೨೦೦೨ ರಲ್ಲಿ ಕರ್ಮವೀರದಲ್ಲಿ ಪ್ರಕಟವಾಗಿತ್ತು..
------------------------------------------------------------------------------------------
‘ಅಪೂರ್ವ’ಳಿಗೆ ಕೊಡಲೆಂದು ಗಂಡ ಅಂದು ಮುಂಜಾನೆ ಕೊಟ್ಟ ಅಳಿಗಿಷ್ಟವಾದ ಚಾಕಲೇಟ್ ಇಟ್ಟುಕೊಂಡು ಮಗಳು ಬರುವ ದಾರಿ ಕಾಯುತ್ತಿದ್ದಳು. ಅಪೂರ್ವ ಬಂದವಳು ಎಂದಿನಂತಿರಲಿಲ್ಲ. ಮುಖ ಎಲ್ಲ ಬಾಡಿತ್ತು. ಅತ್ತಿದ್ದರ ಕುರುಹು ಎಂಬಂತೆ ಕಣ್ಣು ಬಾತುಕೊಂಡಿತ್ತು. ತನ್ನೊಡನೆ ಒಂದು ಮಾತೂ ಆಡದೆ ರೂಮಿನಲ್ಲಿ ಹೋಗಿ ಮಲಗಿದವಳ ವರ್ತನೆ ಸುರೇಖಳಿಗೆ ವಿಚಿತ್ರವಾಗಿ ಕಂಡಿತು. ಹಾರ್ಲಿಕ್ಸ್‍ನ ಕಪ್ ಹಿಡಿದು ರೂಮ್ ಪ್ರವೇಶಿದವಳು ಕಂಡಿದ್ದು ಯೂನಿಫಾರ್ಮ್ ಕೂಡ ಬಿಚ್ಚದೇ ಮಲಗಿದ ಮಗಳು. ಬೋರಲಾಗಿ ಮಲಗಿದವಳು ಅಳುತ್ತಿದ್ದಳು. ಸ್ಕೂಲಿನ ಟೆಸ್ಟ್‍ನಲ್ಲಿ ಮಾಕ್ರ್ಸ್ ಚೆನ್ನಾಗಿ ಬಿದ್ದಿರಲಿಕ್ಕಿಲ್ಲ, ಅದಕ್ಕೆ ಈ ರೀತಿ ವರ್ತಿಸುತ್ತಿದ್ದಾಳೆ ಎಂದುಕೊಂಡು ರಮಿಸಲು ಮುಂದಾದಳು.
ಮಗಳ ಮುಖವನ್ನು ಬಲವಂತವಾಗಿ ತನ್ನೆಡೆಗೆ ತಿರುಗಿಸಿಕೊಂಡು ಅತ್ತು ಅತ್ತು ಬಾಡಿದ ಮುಖಕ್ಕೆ ಮುದ್ದಿಸಿ ಹಾರ್ಲಿಕ್ಸ್ ಕುಡಿಯುವಂತೆ ಹೇಳಿದಳು. ಕುಡಿಸಲು ತಂದ ಕಪ್‍ನ್ನು ಬಲವಾಗಿ ಜಾಡಿಸಿದಳು ಅಪೂರ್ವ. ಅದು ಪೂರ ಚೆಲ್ಲಿಹೋಯಿತು. ಅವಳ ಈ ವಿಚಿತ್ರ ವರ್ತನೆಗೆ ಗದರಿಸಬೇಕು ಎಂದುಕೊಂಡು ಸುರೇಖ ಮುಂದಾದಾಗಲೇ ಬಂದಿತ್ತು ಆ ಪ್ರಶ್ನೆ ಅವಳ ಮುದ್ದು ಮಗಳ ಬಾಯಿಂದ.
“ಅವ್ವ, ನಿಮಗೆ ನಾ ತಿಪ್ಪಿಯೊಳಗ ಸಿಕ್ಕಿದೆ ಅಂತೆ ಹೌದಾ? ಖರೇ, ಏನು, ನಾ ತಿಪ್ಪಿಯೊಳಗ ಬಿದ್ದಿದ್ದೆ ಅಂತ?” ಅವಳ ಪ್ರಶ್ನೆಗೆ ಸುರೇಖಳ ಧೈರ್ಯ ಕುಸಿಯಿತಾದರೂ ಮರುಕ್ಷಣ ಸಾವರಿಸಿಕೊಂಡಳು.
“ಇಲ್ಲ... ಹಂಗಂತ ಯಾರು ಹೇಳಿದ್ರು. ನೀನು ನನ್ನ ಮಗಳು... ನನ್ನ ಮಗಳು” ಗಾಬರಿಯಿಂದ ಅವಳ ಧ್ವನಿ ತಡಬಡಾಯಿಸಿತು.
“ಇಲ್ಲ ನೀ ಸುಳ್ಳು ಹೇಳತಿದಿ. ನಾನು ನಿಮ್ಮ ಮಗಳು ಅಲ್ಲ, ನಿನ್ನ ಹೊಟ್ಟ್ಯಾಗ ನಾ ಹುಟ್ಟಿಲ್ಲ, ನಾ ಅನಾಥೆ, ನನ್ನ ತಿಪ್ಪಿ ಒಳಗಿಂದ ಎತ್ತಿಕೊಂಡು ಬಂದಿರ್ರಿ ಹೌದಲ್ಲೋ?” ಭರ್ಜಿಯಂತೆ ತಿವಿಯುತ್ತಿತ್ತು ಅವಳ ಪ್ರಶ್ನೆ ಸುರೇಖಳಿಗೆ.
“ನನಗೆ ಎಲ್ಲಾ ಗೊತ್ತಾಗೇದ. ಸುಮಾ ಎಲ್ಲಾ ಹೇಳಿದ್ಲು, ಅನಾಥಾಲಯದಿಂದ ನನ್ನ ತಂದೀರಿ. ಅದು ಅಂದ್ರ ತಿಪ್ಪೀನ ಹೌದಲ್ಲೋ” ಮಗಳು ನುಡಿದ ಮಾತುಗಳಿಗೆ ಸುರೇಖಳಲ್ಲಿ ಉತ್ತರವಿರಲಿಲ್ಲ. ಅವಳು ಎಂದು ಊಹಿಸದಿದ್ದುದು ಕ್ಷಣಾರ್ಧದಲ್ಲಿ ಜರುಗಿತ್ತು. ಹತ್ತುವರ್ಷ ಮುಚ್ಚಿಟ್ಟ ರಹಸ್ಯ ಒಮ್ಮಲೇ ಸ್ಫೋಟಗೊಂಡಿತು. ಯಾವುದು ಆಗಬಾರದು ಅಂದುಕೊಂಡಿದ್ದಳೋ ಅದೇ ನಡೆದಿತ್ತು. ಸುರೇಶ ಬಹಳ ಸಲ ಅನ್ನುತ್ತಿದ್ದ. ‘ನಾವು ಹೇಳದಿದ್ರೂ ಮಂದಿ ಈ ವಿಷಯ ಅವಳಿಲಗೆ ಹೇಳಿಯೇ ಹೇಳ್ತಾರ. ಆದ್ರ ಅವಾಗ ಆಕಿಗ ಬಹಳ ಶಾಕ್ ಆಗ್ತದ. ಅದಕ್ಕಿಂತಾ ನಾವು ಹೇಳಿಬಿಡೂದು ಛಲೋ’ ನಿಜ, ಗಂಡನ ಮಾತು ಎಷ್ಟು ಸತ್ಯ? ಆದ್ರ ನಾನು ಅವರಿಗೆ ತಡೆಹಿಡಿದಿದ್ದೆ. ಎಲ್ಲಿ ಖರೇ ಗೊತ್ತಾದ್ರ ಮಗಳು ತಮ್ಮ ಮ್ಯಾಲ ತೋರಿಸುವ ಪ್ರೀತಿ ಏರುಪೇರಾಗ್ತದ ಅನ್ನುವ ಸಂಕಟ ನಂದು. ಅದೂ ಅಲ್ಲದ ಹೆಂಗ ಹೇಳಲಿಕ್ಕೆ ಬರ್ತದ. ಇಷ್ಟೆಲ್ಲ ಪ್ರೀತಿಮಾಡಿ ಅಂತಃಕರಣ ತೋರ್ಸಿ ಮುಂದೆ ನೀ ನನ್ನ ಮಗಳಲ್ಲ; ಸಾಕಿದವಳು ಅಂತ ಕಡ್ಡಿ ಮುರದಂಗ ಹೇಳುವುದು ನನ್ನ ಕಡೆ ಸಾಧ್ಯ ಇರಲಿಲ್ಲ. ಆದ್ರ ಈಗ ಆಕಿಗೆ ಖರೆ ಏನು ಅನ್ನುವುದು ಗೊತ್ತಾಗಿಬಿಟ್ಟದ. ಅಪೂರ್ವ ಬಹಳ ಸೂಕ್ಷ್ಮ ಸ್ವಭಾವದ ಹುಡುಗಿ. ಕ್ಲಾಸಿನ ಪರೀಕ್ಷೆಗಳಲ್ಲಿ ಅವಳ ನಿರೀಕ್ಷೆಗೆ ತಕ್ಕಂತೆ ಮಾರ್ಕ್ ಬೀಳದಿದ್ದರೆ ಅಪ್‍ಸೆಟ್ ಆಗಿಬಿಡುವವಳು. ಇಂಥ ದೊಡ್ಡ ಸಂಗತಿಯ ಬಗ್ಗೆ ಈ ರೀತಿ ಪ್ರತಿಕ್ರಿಯಿಸುವುದು ಸಹಜವಾಗಿತ್ತು. ಒತ್ತಾಯ ಮಾಡಿಯೇ ಅವಳಿಗೆ ಸ್ಕೂಲಿಗೆ ರೆಡಿ ಮಾಡಿಸಿ ಕಳಿಸಿದ್ದಳು. ಒಂದೆರಡು ದಿನ... ಆದರೆ ಮೂರನೇ ದಿನ ಶಾಲೆಯಿಂದ ಫೋನ್ ಬಂದಾಗ ಗಾಬರಿಯಿಂದಲೇ ಹೋಗಿದ್ದಳು. ಅವಳ ಕ್ಲಾಸ್ ಟೀಚರ್ ಸುರೇಖಳಿಗೆ ಅಪೂರ್ವಳ ನೋಟ್‍ಬುಕ್ ತೋರಿಸಿದಳು. ಅದರಲ್ಲಿ ದೊಡ್ಡ ದೊಡ್ಡ ಅಕ್ಷರದಲ್ಲಿ ಅಪೂರ್ವ ಮುದ್ದಾಗಿ ಬರೆದಿದ್ದಳು. “ನಾನು ಅನಾಥೆ. ತಿಪ್ಪೆಗುಂಡಿಯಲ್ಲಿ ನನ್ನ ಒಗೆದು ಹೋಗಿದ್ದರು.”
ಟೀಚರ್ ಸಲಹೆಯಂತೆ ಅಪೂರ್ವಳ ಶಾಲೆ ಒಂದೆರಡು ದಿನ ಬಿಡಿಸಿ ಮನೆಗೆ ಕರೆದೊಯ್ದಳು. ಆದರೆ ಅಂದು ರಾತ್ರಿಯೇ ಅಪೂರ್ವಳಿಗೆ ಜ್ವರ ಬಂದು ಏನೇನೋ ಬಡಬಡಿಸ ಹತ್ತಿದಳು. ಡಾಕ್ಟರ್ ನೀಡಿದ ಉಪಚಾರದ ಪ್ರಭಾವದಿಂದ ಬೆಳಗಾಗುವುದರಲ್ಲಿ ಮತ್ತೆ ನಾರ್ಮಲ್ ಆದಳು. ಅದೇ ಮುಂಜಾನೆ ಸುರೇಶ್ ಫೋನ್ ಮಾಡಿದ್ದ, ಅಂದೇ ಸಂಜೆ ಹೊರಟು ಬರುವುದಾಗಿ ಹೇಳಿದ್ದ. ಗಂಡನ ಬರುವನ್ನು ಆತಂಕದಿಂದ ಕಾಯುತ್ತ ಸುರೇಖ ಕುಳಿತಿದ್ದಾಳೆ. ಅಪೂರ್ವ ರೂಮಿನಲ್ಲಿ ಮಲಗಿ ಸೀಲಿಂಗ್ ದಿಟ್ಟಿಸುತ್ತಿದ್ದಾಳೆ. ಹತ್ತು ವರ್ಷದ ಮುಗ್ಧೆಯ ಕಣ್ಣುಗಳು ಶೂನ್ಯ ದಿಟ್ಟಿಸುತ್ತಿವೆ. ಮನಸ್ಸು ಅನೇಕ ಪ್ರಶ್ನೆ ಕೇಳಿದೆ. ಆದರೆ ಆ ಪ್ರಶ್ನೆಗಳಿಗೆ ಉತ್ತರ ಅಲ್ಲೆಲ್ಲೂ ಇರದೇ ಸುರೇಖ, ಸುರೇಶರ ಅತೀತದಲ್ಲಿ ಹುದುಗಿದೆ.
ಮದುವೆಯಾಗಿ ಐದುವರ್ಷಗಳಾದರೂ ಮಕ್ಕಳಾಗದಿದ್ದುದು ಸುರೇಖಳಿಗೆ ನೋವು ತಂದ ಸಂಗತಿಯಾಗಿತ್ತು. ಸುರೇಶ್ ಒಂದು ದೊಡ್ಡ ಕಂಪನಿಯ ಮಾರಾಟ ಅಧಿಕಾರಿ. ತಿಂಗಳಿಗೆ ಎಂಟು-ಹತ್ತು ದಿನಮಾತ್ರ ಊರಲ್ಲಿರುತ್ತಿದ್ದ. ಮನೆಯಲ್ಲಿ ಒಬ್ಬಳೇ ಇರುವ ತನ್ನ ಜೊತೆ ಆಡಲು ಮಗುವಿಗಾಗಿ ಹಂಬಲಿಸುತ್ತಿದ್ದಳು ಸುರೇಖ. ಮನೆಯ ಅಕ್ಕಪಕ್ಕದ ಹುಡುಗರು, ಅವರ ಸಂಭ್ರಮ ನೋಡಿ ಆನಂದಿಸುವ ತಾಯಂದಿರು... ಅವಳ ಮನ ಮೌನವಾಗಿ ರೋದಿಸುತ್ತಿತ್ತು. ಗಂಡನೊಡನೆ ಅನೇಕ ಸಲ ಪರೀಕ್ಷೆಗೆ ಒಳಪಟ್ಟಿದ್ದಳು. ಗಂಡನಲ್ಲಿ ದೋಷವಿದೆ ಎಂದು ಡಾಕ್ಟರ್ ತಿಳಿಸಿದ್ದರು. ತನ್ನನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಗಂಡ ತನಗೆ ಒಂದು ಮಗು ಕೊಡಲು ಅಸಮರ್ಥ. ಈ ಸತ್ಯ ಅವಳು ಅರಗಿಸಿಕೊಳ್ಳಲು ಅಸಮರ್ಥಳಾಗಿದ್ದಳು. ಸ್ವತಃ ಸುರೇಶ್ ಸಹ ವಾಸ್ತವದ ಬೆಂಕಿಗೆ ಒಡ್ಡಿಕೊಂಡಿದ್ದ. ಸುರೇಶನ ತಂದೆ-ತಾಯಿ ಅವನ ಮದುವೆಯ ಹಿಂದೆಯೇ ತೀರಿಕೊಂಡಿದ್ದರು. ಚಿಕ್ಕಚೊಕ್ಕ ಮನೆ, ಕೈತುಂಬಾ ಸಂಬಳ ತರುವ ಕೆಲಸ, ಆಸೆ ಅರಿವ ಪೂರೈಸುವ ಹೆಂಡತಿ ಎಲ್ಲಾ ಇದ್ದರೂ ಅನೇಕ ಡಾಕ್ಟರ್‍ನ್ನು ತಾನೇ ಸ್ವತಃ ಕಂಡುಕೊಂಡ ಸತ್ಯ ತನ್ನಿಂದ ಸುರೇಖಳ ಗರ್ಭದಲ್ಲಿ ವಂಶದ ಕುಡಿ ಅರಳಲಾರದು ಎಂಬುದು. ಕೊರತೆ ತನ್ನಲ್ಲಿದೆ ಎಂದು ಕೊರಗಿದರೆ ಅವಳ ಗತಿ ಏನಾಗಬಹುದು. ಈ ವಿಚಾರದಲ್ಲಿ ಅವ ಹಣ್ಣಾಗಿದ್ದ. ಬೆಳ್ಳಿಗೆರೆಯಂತೆ ಅವನ ತಲೆಯಲ್ಲಿ ವಿಚಾರ ಹೊಳೆಯಿತು. ಸುರೇಖಳಿಗೆ ತಿಳಿ ಹೇಳಿದ.
ಸುರೇಶ್ ಹೇಳಿದ ಸಂಗತಿ ಸುರೇಖಳಿಗೆ ಒಮ್ಮೆಲೆ ಪಟಾಯಿಸಿರಲಿಲ್ಲ. ಯಾರೋ ಹುಟ್ಟಿಸಿದ ಮಗು. ಯಾರ ಪಾಪದ ಫಲ ಅದಾಗಿರುತ್ತದೋ ಈ ದ್ವಂದ್ವಗಳಲ್ಲಿ ಅವಳು ಮುಳುಗಿದ್ದಳು. ಸುರೇಖಳ ತಾಯಿಯಾಗಲಿ, ಅಕ್ಕ ಆಗಲಿ ಸುರೇಶನ ಪ್ರಸ್ತಾವನೆಗೆ ಒಪ್ಪಿ ಸೂಚಿಸಿರಲಿಲ್ಲ. ಸುರೇಖಳ ತಾಯಿಯಂತೂ ಜಾತಿಮತಗಳ ಪ್ರಶ್ನೆ ಎತ್ತಿದ್ದರು. ಸುರೇಶ್ ತನ್ನ ಬೇಡಿಕೆ ಒಪ್ಪಲೇಬೇಕೆಂಬ ನಿರ್ಬಂಧವಾಗಲಿ, ಒತ್ತಾಯವಾಗಲಿ ಮಾಡಿರಲಿಲ್ಲ. ತನ್ನ ಮನದಲ್ಲಿ ಗುರಿ ನಿರ್ಧರಿಸಿಕೊಂಡಿದ್ದ ಆತ. ನಿಧಾನವಾಗಿಯಾದರೂ ಸುರೇಖ ಆ ಹಾದಿ ತುಳಿಯುತ್ತಾಳೆ ಎಂದು ನಂಬಿದ್ದ. ಸುರೇಖ ದ್ವಂದ್ವಗಳಲ್ಲಿ ಸಿಕ್ಕು ಒದ್ದಾಡುತ್ತಿದ್ದಳು. ಯಾರೋ ಹೆತ್ತ ಮಗುವನ್ನು ತನ್ನದು ಎಂದು ಒಪ್ಪಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಜೀವನದಲ್ಲಿ ಪ್ರಮುಖವಾದ ನಿರ್ಧಾರ ಅವಳು ತೆಗದುಕೊಳ್ಳಬೇಕಾಗಿತ್ತು. ತುಳಿದ ದಾರಿ ಹೊರತುಪಡಿಸಿ ಬೇರೆ ದಾರಿಯಲ್ಲಿ ಅವಳು ಸಾಗಬೇಕಾಗಿತ್ತು. ಅನೇಕ ಸಲ ವಿಚಾರ ಮಾಡಿ ಎಲ್ಲ ತರಹದ ಪರಿಣಾಮಗಳ ಲಕ್ಷ್ಯದಲ್ಲಿರಿಸಿ ಕೊನೆಗೂ ಅವಳು ಸುರೇಶನ ಜೊತೆ ಹೆಜ್ಜೆ ಹಾಕಲು ನಿರ್ಧರಿಸಿದಳು. ಅವಳ ತಾಯಿಯ, ಅಕ್ಕನ ಪ್ರಬಲವಾದ ವಿರೋಧ ಲೆಕ್ಕಿಸದೇ ಅವಳು ಮುಂದುವರೆದಳು.
ಮೂದಿನ ನಾಲ್ಕೈದು ತಿಂಗಳು ಅನಾಥಾಲಯದ ನಿಯಮಾವಳಿಗಳನ್ನು ಪಾಲಿಸುವುದರಲ್ಲಿ ಕಳೆಯಿತು. ಅಲ್ಲಿಯ ಅಧಿಕಾರಿಗಳು ಸುರೇಖ-ಸುರೇಶರನ್ನು ಅನೇಕ ಸಲ ಸಂದರ್ಶಿಸಿದರು. ದಿನಕಳೆದಂತೆ ಸುರೇಖಳಿಗೆ ಅನ್ನಿಸಹತ್ತಿತು. ಬಹುಶಃ ಇದೆಲ್ಲ ನಾಟಕ, ಅವರಿಗೆ ದತ್ತು ಕೊಡುವ ವಿಚಾರ ಇರಲಿಕ್ಕಿಲ್ಲ ಅಥವಾ ನನ್ನ ನಸೀಬದಲ್ಲಿ ದತ್ತು ತೆಗೆದುಕೊಳ್ಳುವುದು ಸಹ ಬರೆದಿರಲಾರದು ಎಂದು ದಿನಕಳೆದಂತೆ ಹತಾಶೆ ಅವಳನ್ನು ಆವರಿಸಿತು. ಆದರೆ ಅವಳ ಎಲ್ಲ ಚಿಂತೆ ಕಳೆದಿತ್ತು ಬೆಂಗಳೂರಿನ ಅನಾಥಾಲಯದಿಂದ ಪತ್ರ ಬಂದಾಗ.
ಬೆಂಗಳೂರಿನ ಬಡಾವಣೆಯಲ್ಲಿರುವ ಆ ಅನಾಥಾಲಯಕ್ಕೆ ಅವಳು ಹೋಗುತ್ತಿದ್ದುದು ಮೊದಲ ಸಲವಲ್ಲ. ಆದರೆ ಈ ಬಾರಿ ಬೇರೆ ಪರಿಣಾಮ ನಿರೀಕ್ಷಿಸಿ ಬಂದಿದ್ದಾಳೆ. ಹೆಣ್ಣುಮಗುವನ್ನೇ ದತ್ತು ತೆಗೆದುಕೊಳ್ಳುವುದು ಎಂದು ಇಬ್ಬರೂ ಚರ್ಚೆ ಮಾಡಿ ನಿರ್ಧರಿಸಿದ್ದರು. ತೊಟ್ಟಿಲ ತುಂಬ ಆಟ ಆಡುವ ಹಾಲುಗಲ್ಲದ ಹಸುಳೆಗಳು ಮಾನವ ಸೃಷ್ಟಿಯ ಸುಂದರ ನಮೂನೆಗಳು. ಒಂದು ತೊಟ್ಟಿಲಲ್ಲಿ ಆಡುತ್ತಿದ್ದ ಕೂಸು ಸುರೇಖಳ ಮನಸೆಳೆಯಿತು. ಸುರೇಶನಿಗೂ ತೋರಿಸಿದಳು. ಇಬ್ಬರೂ ಅದನ್ನೇ ನೋಡುತ್ತಿದ್ದಂತೆ ಅದು ಹೌದೋ ಅಲ್ಲವೋ ಎಂಬಂತೆ ನಕ್ಕಿತು. ಮೂರು ತಿಂಗಳಿನ ಮುದ್ದಾದ ಮಗುವಿನ ನಗೆಗೆ ಅವರು ಮನಸೋತರು.
ಶಾಸ್ತ್ರದ ಪ್ರಕಾರ, ಕಾನೂನಿನ ಪ್ರಕಾರ ದತ್ತು ತೆಗೆದುಕೊಳ್ಳುವ ವಿಧಿ ಎಲ್ಲ ಮುಗಿಸಿ ಮನೆಗೆ ಕರೆತಂದರು. ತಾವೇ ಶಾಸ್ತ್ರಮಾಡಿ ‘ಅಪೂರ್ವ’ ಎಂದು ಹೆಸರಿಟ್ಟರು. ಮುಂದಿನ ದಿನಗಳು, ತಿಂಗಳುಗಳು ಅಪೂರ್ವಳ ಆಟ-ಪಾಠ ನೋಡುತ್ತಲೇ ಕಳೆದರು. ಅವಳು ನಕ್ಕಾಗ, ಅಂಬೆಗಾಲಿಟ್ಟಾಗ, ನಡೆಯಲು ಶುರು ಮಾಡಿದಾಗ... ಎಲ್ಲಕ್ಕೂ ಮಿಗಿಲಾಗಿ ಮಾತನಾಡಲು ಶುರು ಮಾಡಿದಾಗ ಆನಂದದ ಅನುಭೂತಿಯಲ್ಲಿ ಮುಳುಗೆದ್ದರು. ಅಪೂರ್ವ ಅವರಿಬ್ಬರ ಜೀವನಕ್ಕೆ ಹೊಸ ಅರ್ಥ ಕೊಟ್ಟಿದ್ದಳು. ದಿನಕಳೆದಂತೆ ಸುರೇಖ ಮಗಳ ಬಗ್ಗೆ ಪೊಸೆಸಿವ್ ಆಗಿಬಿಟ್ಟಳು. ಅಪೂರ್ವ ಶಾಲೆಗೆ ಹೋಗಲು ಶುರು ಮಾಡಿದಾಗಲಂತೂ ಅವಳ ವರ್ತನೆ ಸ್ವಲ್ಪ ಅತಿಯೇ ಆಯಿತು. ಮಗಳು ತನ್ನ ಶೂಸ್, ಸಾಕ್ಸ್ ತಾನೇ ಹಾಕಿಕೊಳ್ಳಲು ಕಲಿಯಲಿ ಇದು ಸುರೇಶನ ಅಭಿಮತವಾಗಿತ್ತು. ಆದರೆ ಸುರೇಖ ಒಪ್ಪಿಕೊಳ್ಳಲಿಲ್ಲ. ಕೆಲಸ ಮಾಡಿದರೆ ಮಗಳು ಎಲ್ಲಿ ಸವೆಯುತ್ತಾಳೋ ಎಂಬಂತೆ ಅವಳಿದ್ದಳು. ಮಗಳು ಒಂಭತ್ತು ದಾಟಿದ್ದರೂ ಸುರೇಖಳಿಗೆ ಅವಳಿನ್ನೂ ಚಿಕ್ಕ ಮಗುವೇ ಆಗಿದ್ದಳು. ತಾಯ್ತನದ ಪರಿಪೂರ್ಣ ಪಕ್ವವಾದ ಅನುಭವ ಅವಳಿಗೆ ದೊರೆತಿತ್ತು.
ಅಪೂರ್ವಳ ಮನಸ್ಥಿತಿ ಡೋಲಾಯಮಾನವಾಗಿತ್ತು. ತನ್ನನ್ನು ಅನಾಥಾಲಯದಿಂದ ತಂದು ಸಾಕಿದ್ದಾರೆ. ಈ ಸಂಗತಿ ಆ ಪುಟ್ಟ ಮಿದುಳಲ್ಲಿ ವಿಪ್ಲವ ಎಬ್ಬಿಸಿತ್ತು. ತನ್ನ ನಿಜವಾದ ತಂದೆ-ತಾಯಿ ಯಾರು... ಇದುವರೆಗೂ ಇವರೇ ತನ್ನ ಪಪ್ಪ, ಅಮ್ಮ ಎಂದು ತಿಳಿದಿದ್ದೆ. ಆದರೆ ಈಗ ನಿಜ ಗೊತ್ತಾಗಿದೆ. ಅವಳ ಕ್ಲಾಸಿನಲ್ಲಿ ಓದುತ್ತಿದ್ದ ಸುಮಾ ಆ ಮಾತು ಹೇಳಿ ನಕ್ಕಿದ್ದಳು. ಎಷ್ಟು ಅಪಮಾನವಾಗಿತ್ತು. ಟೆಸ್ಟ್‍ನಲ್ಲಿ ಮಾರ್ಕ್ ಕಡಿಮೆ ಬಿದ್ದಿದೆ ಎಂಬ ಹೊಟ್ಟೆಕಿಚ್ಚಿನಿಂದ ಆ ಮಾತು ಅವಳು ಹೇಳಿಲ್ಲ, ಅವಳು ಹೇಳಿದ್ದು ಖರೇ ವಿಷಯ ಎಂಬುದು ಅಮ್ಮನ ಮುಖ ನೋಡಿದರೆ ಗೊತ್ತಾಗುತ್ತದೆ. ನನ್ನಂತೆ ಅವಳೂ ಟೆನ್ಯನ್‍ನಲ್ಲಿದ್ದಾಳೆ. ನಾನೀಗ ಏನು ಮಾಡಲಿ? ನನ್ನ ನಿಜವಾದ ತಂದೆ-ತಾಯಿ ಯಾರಿರಬಹುದು? ಸುಮಾ ಹೇಳುತ್ತಾಳೆ: ತಿಪ್ಪೆಗೆ ಎಸೆದು ಹೋದ ಕೂಸುಗಳನ್ನು ಅನಾಥಾಲಯದವರು ಎತ್ತಿಕೊಂಡು ಸಾಕುತ್ತಾರೆ. ತನ್ನನ್ನು ತಿಪ್ಪೆಗೆ ಎಸೆದ ತಾಯಿ ಹೇಗಿರಬಹುದು? ತಾನು ಬೇಡವಾದವಳೆ? ಅವಳ ತಲೆ ತುಂಬಾ ಬರೀ ಇವೇ ವಿಚಾರಗಳು. ಯಾವುದರಲ್ಲಿಯೂ ಅವಳ ಮನಸ್ಸು ನಿಲ್ಲುತ್ತಿಲ್ಲ, ಟಿ.ವಿ.ಯಲ್ಲಿ ಕಾರ್ಟೂನ್ ಸಹ ನೋಡಲು ಮನಸ್ಸು ಬರುತ್ತಿಲ್ಲ. ಶಾಲೆಯಲ್ಲಿ ಮೇಡಂ ಲೆಕ್ಕ ಹೇಳುತ್ತಿದ್ದರೂ ಗಮನ ಅಲ್ಲಿರುವುದಿಲ್ಲ. ಮೊನ್ನೆ ಯಾವುದೋ ಲೆಕ್ಕದ ಉತ್ತರ ಇವಳಿಗೆ ಕೇಳಿದಾಗ ಇವಳು ತಡಬಡಾಯಿಸಿದಳು. ಮೇಡಂ ಇವಳ ನೋಟ್ ಪುಸ್ತಕ ಕಿತ್ತುಕೊಂಡು ಇವಳು ಅದರಲ್ಲಿ ಬರೆದಿದ್ದನ್ನು ಓದಿ ಸುರೇಖಳಿಗೆ ಹೇಳಿ ಕಳಿಸಿದ್ದಳು.
ಸುರೇಶ್ ಬಂದವ ಮಗಳ ಸ್ಥಿತಿ ಗಮನಿಸಿದ. ಅವನು ತನ್ನ ಟೂರ್ ರಿಪೋರ್ಟ್ ರೆಡಿಮಾಡಿಕೊಂಡು ತನ್ನ ಬಾಸ್‍ಗೆ ಭೇಟಿಯಾದ. ಎಂಟುದಿನ ರಜೆ ಬೇಕೆಂದು ಅರ್ಜಿ ನೀಡಿದ ಈ ಬೆಳವಣಿಗೆ ಅವನು ನಿರೀಕ್ಷಿಸಿದ್ದ. ತಾವು ಹೇಳದಿದ್ದರೂ ಬೇರೆ ಯಾರೋ ಅಪೂರ್ವಳಿಗೆ ಹೇಳಿಯೇ ಹೇಳುತ್ತಾರೆ. ಈ ಬಗ್ಗೆ ಸುರೇಖಳಿಗೆ ಅನೇಕ ಸಲ ತಿಳಿಹೇಳಿದ್ದ. ಆದರೆ ಮಗಳ ಬಗ್ಗೆ ಅತೀ ಮೋಹ ಇಟ್ಟುಕೊಂಡ ಸುರೇಖಳನ್ನು ನಂಬಿಸುವುದು ಸುಲಭವಾಗಿರಲಿಲ್ಲ. ಮುಂದೆ ಇಂಥ ಪರಿಸ್ಥಿತಿ ಎದುರಾಗಬಹುದು ಎಂದು ಸುರೇಖ ತಿಳಿದುಕೊಂಡಿರಲಿಲ್ಲ. ಮಗಳಲ್ಲಿ ಆದ ಈ ಬದಲಾವಣೆ ನೋಡಿ ಅವಳೂ ಶಾಕ್ ಆಗಿದ್ದಾಳೆ. ಹಾಗೆ ನೋಡಿದರೆ ಅಪೂರ್ವ ಆ ರೀತಿ ವರ್ತಿಸುವುದು ಅನಿರೀಕ್ಷಿತವಲ್ಲ. ಅವಳು ಇದುವರೆಗೂ ನಂಬಿದವರು ತನ್ನ ತಾಯಿ-ತಂದೆ ಎಂದು ಅವಳು ತಿಳಿದುಕೊಂಡಿದ್ದವರು ಈಗ ಒಮ್ಮೆಲೆ ಅಪರಿಚಿತರಂತೆ ಕಾಣಿಸುತ್ತಿದ್ದಾರೆ.
ಆ ಒಂದೇ ಸೂರಿನಡಿ ವಾಸಿಸುವ ಮೂವರು ವ್ಯಕ್ತಿಗಳು ತಮ್ಮದೇ ತೊಳಲಾಟಗಳಲ್ಲಿ ಮುಳುಗಿದ್ದಾರೆ. ಮೂವರಿಗೂ ಊಟ ರುಚಿಸುತ್ತಿಲ್ಲ. ಮನಸ್ಸಿನಲ್ಲಿ ವಿಚಿತ್ರವಾದ ತಾಕಲಾಟಗಳಿವೆ. ಅಶಾಂತಿಯ ಕರಿನೆರಳು ಅವರ ಮನ ಮನೆ ಎಲ್ಲ ವ್ಯಾಪಿಸಿದೆ. ಬೆಳ್ಳಿಗೆರೆಗಾಗಿ ಹಂಬಲಿಸುತ್ತಿದ್ದಾರೆ.
***
ಸುರೇಶ ಟೂರ್‍ಗೆ ಹೋಗಿಬರುವ ಎಂದು ಹೇಳಿದಾಗ ಸುರೇಖ, ಅಪೂರ್ವ ಉತ್ಸಾಹ ತೋರಲಿಲ್ಲ. ಆದರೆ ಸುರೇಶ ಹಟಕ್ಕೆ ಬಿದ್ದು ಅವರಿಬ್ಬರನ್ನೂ ಹೊರಡಿಸಿದ. ಅಪೂರ್ವಳ ಟೀಚರ್‍ನ ಕಂಡು ಪರ್ಮಿಶನ್ ತೆಗೆದುಕೊಂಡಿದ್ದ. ಅವನ ರಜೆಯೂ ಮಂಜೂರಾಗಿತ್ತು. ಬೆಳಗಿನ ಟ್ರೈನ್‍ಗೆ ಬೆಂಗಳೂರಿಗೆ ಹೊರಟಿದ್ದರು. ದಾರಿಯುದ್ಧಕ್ಕೂ ಮಗಳು ಅನ್ಯಮನಸ್ಕಳಾಗಿದ್ದಳು. ಅವನ ಪ್ರಶ್ನೆಗೆ ಚುಟುಕಾಗಿ ಉತ್ತರಿಸುತ್ತಿದ್ದಳು. ಅರಳು ಹುರಿದಂತೆ ಪಟಪಟನೆ ಮಾತನಾಡುವ ಮಗಳು ಈ ರೀತಿ ಮೌನವಾಗಿರುವುದನ್ನು ನೋಡಿ ಸುರೇಖಳ ಕರುಳು ಚುರ್ ಎನ್ನುತ್ತಿತ್ತು. ಗಂಡನಿಗೆ ಗೊತ್ತಾಗದ ರೀತಿ ಕಣ್ಣೀರು ಒರೆಸಿಕೊಂಡಿದ್ದಳು. ಅಪೂರ್ವಳಿಗೂ ಈ ಪ್ರವಾಸ ಬೇಕಾಗಿರಲಿಲ್ಲ. ಪಪ್ಪ ತನ್ನನ್ನು ಪುಸಲಾಯಿಸಲು ನೋಡುತ್ತಿದ್ದಾನೆ. ಖರೇ ವಿಷಯ ಮರೆಮಾಚಿ ಪ್ರಲೋಭಿಸುತ್ತಿದ್ದಾನೆ ಎಂದುಕೊಂಡಳು. ಇವರಿಬ್ಬರ ಮನಸ್ಥಿತಿಗಿಂತ ಭಿನ್ನವಾಗಿ ಸುರೇಶ್ ಪ್ರಶಾಂತವಾಗಿದ್ದ, ಮಗಳಿಗೆ ಈಗ ಸತ್ಯ ಗೊತ್ತಾಗಿದೆ. ಸೂಕ್ಷ್ಮವಾದ ಪರಿಸ್ಥಿತಿ ಜಾಣ್ಮೆಯಿಂದ ನಿಭಾಯಿಸಬೇಕು. ಮನದಲ್ಲಿ ಅದಕ್ಕೆ ಯೋಜನೆ ಹಾಕಿಕೊಂಡಿದ್ದಾನೆ. ಎಲ್ಲ ಅವನಂದುಕೊಂಡಂತೆ ನಡೆದರೆ ಸಾಕು. ಮನದಲ್ಲಿ ದೇವರನ್ನು ಪ್ರಾರ್ಥಿಸುತ್ತಾನೆ. ಕಿಟಕಿಯ ಹೊರಗಡೆ ನೋಡುತ್ತಿದ್ದ ಅಪೂರ್ವಳ ತಲೆಗೂದಲು ಹಾರಾಡುತ್ತಿವೆ. ಹೆಂಡತಿಯ ಮುಖದಲ್ಲಿ ಕವಿದ ಕಾರ್ಮೋಡ... ಸುರೇಶ ಕಿರುನಗೆ ನಗುತ್ತಾನೆ.
ಅಪೂರ್ವ ತನ್ನ ತಂದೆ-ತಾಯಿಯ ಜೊತೆ ಈ ಮೊದಲು ಪ್ರವಾಸ ಹೋಗಿದ್ದಳು. ಆದರೆ ಈ ಬಾರಿ ವಿಶೇಷವಿತ್ತು. ಮೈಸೂರಿನ ಜೂ, ಬೃಂದಾವನ ತೀರ ಹೊಸದಾಗಿ ಕಂಡವು. ಬೆಂಗಳೂರಿನ ಹೊರಗಡೆ ಇರುವ ‘ಅಮ್ಯುಸ್‍ಮೆಂಟ್ ಪಾರ್ಕ್’ಗೆ ಹೋದಾಗಲಂತೂ ಎಲ್ಲ ಹಮ್ಮ ಮರೆತು ಮೊದಲಿನಂತಾದಳು. ಬರೀ ಟಿವಿಯಲ್ಲಿ ಕಂಡಿದ್ದು... ಈಗ ಸ್ವತಃ ಅನುಭವಿಸುತ್ತಿದ್ದಾಳೆ. ಎತ್ತರದ ಜಾಗೆಯಿಂದ ನೀರಿನಲ್ಲಿ ತೇಲಿಬಂದಾಗ ಹೆದರಿಕೆಯಿಂದ ‘ಅಮ್ಮಾ’ ಎಂದು ಜೋರಾಗಿ ಕಿರುಚಿದಳು. ಮಗಳ ಈ ವರ್ತನೆಗೆ ಸುರೇಖ ಸಹ ಮಿಡಿದಳು. ಒಂದು ವಾರದ ಹಿಂದೆ ತಮ್ಮಿಬ್ಬರ ನಡುವೆ ಏನೂ ಜರುಗೇ ಇಲ್ಲ ಎನ್ನುವ ರೀತಿ ಸಹಜವಾಗಿ ವರ್ತಿಸಿದರು. ಮೊದಲಿನ ಅವರ ಬಾಂಧವ್ಯದ ಸೆಲೆ ಬತ್ತಿರಲಿಲ್ಲ. ಅದು ಗುಪ್ತಗಾಮಿನಿಯಾಗಿ ಪ್ರವಹಿಸುತ್ತಿತ್ತು. ಸುರೇಶ ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಅಪೂರ್ವಳ ಮನದಲ್ಲಿ ಅದುವರೆಗೂ ಇದ್ದ ಸಂದೇಹದ ಪೊರೆ ಕರಗುತ್ತಿತ್ತು. ಅಪ್ಪ ತನ್ನನ್ನು ಪುಸಲಾಯಿಸಲೆಂದು ಇಲ್ಲಿ ಕರೆದುಕೊಂಡು ಬಂದಿರಬಹುದು. ಆದರೆ ತನಗೆ ದೊರೆತ ಈ ಹೊಸ ಅನುಭವ ಚೆನ್ನಾಗಿದೆ. ಈ ಆನಂದ ಹೀಗೆಯೇ ಯಾವಾಗಲೂ ಇರಲಿ ಎಂಬ ಪ್ರಲೋಭನೆಯೂ ಅವಳ ಪುಟ್ಟ ಮನದಲ್ಲಿ ಬೆಳೆಯತೊಡಗಿತು.
ಸುರೇಶನ ಯೋಜನೆಯಂತೆ ಇದುವರೆಗೂ ಎಲ್ಲ ಸಾಗಿತ್ತು. ಸುರೇಖಳಿಗೂ ತಿಳಿಸಿರಲಿಲ್ಲ. ಅಂತೆಯೇ ಅವರ ಟ್ಯಾಕ್ಸಿ ಅನಾಥಾಲಯದತ್ತ ಸಾಗಿದಾಗ ಗಂಡನ ಮುಖ ನೋಡಿದಳು. ಅವನ ಮುಖದಲ್ಲಿ ಅದೇ ಪ್ರಶಾಂತತೆ ಇತ್ತು. ಅನಾಥಾಲಯದ ಮ್ಯಾನೇಜರ್ ಜೊತೆ ಈ ಮೊದಲೇ ಮಾತನಾಡಿ ವೇಳೆ ನಿಗದಿಪಡಿಸಿಕೊಂಡಿದ್ದ. ಅಪೂರ್ವಳ ಮುಖದಲ್ಲಿ ಕುತೂಹಲವಿತ್ತು. ತೆರೆದ ಕಣ್ಣುಗಳಿಂದ ಸುತ್ತಲಿನ ಪರಿಸರ ಗಮನಿಸ ಹತ್ತಿದಳು. ಅವಳ ಸುತ್ತಲೂ ಬೇರೆಯದೇ ಜಗತ್ತಿತ್ತು. ಅವಳು ಎಂದು ಕಂಡು ಕೇಳರಿಯದ ಜಗತ್ತು. ಮಮತೆ ಏನೆಂಬುದು ಅಲ್ಲಿದ್ದವರಿಗೆ ಗೊತ್ತೇ ಇರಲಿಕ್ಕಿಲ್ಲ. ಅದೆಷ್ಟು ಜನರ ತುಚ್ಛಮಾತು ಇವರ ಮನ ನೋಯಿಸಿರಬಹುದು. ಬಹುಶಃ ಇವರಿಗೆ ತನ್ನ ಪಪ್ಪ-ಅವ್ವರಂತೆ ಯಾರೂ ಎತ್ತಿಕೊಂಡು ಮುದ್ದುಮಾಡುವವರಿರಲಿಕ್ಕಿಲ್ಲ. ಅವಳ ಸುತ್ತಲೂ ದುಃಖವಿತ್ತು; ಶೋಕವಿತ್ತು. ಅಲ್ಲಿದ್ದವರ ಕಣ್ಣುಗಳಲ್ಲಿ ನೀರಸ ಮೌನವಿತ್ತು. ಅವರೆಲ್ಲರನ್ನೂ ನೋಡುತ್ತಿದ್ದಂತೆ ಅವಳಿಗೆ ಸತ್ಯದ ಅರಿವಾಗತೊಡಗಿತು. ತನ್ನ ಪಪ್ಪ-ಅವ್ವರ ಬಗ್ಗೆ ಮಿಡಿಯಿತು. ಎಲ್ಲೋ ಬಿಸುಟ ತನ್ನನ್ನು ಎತ್ತಿಕೊಂಡು ಮುದ್ದಾಡಿದ್ದಾರೆ, ತನ್ನ ಬಾಳಿಗೊಂದು ದಾರಿ ತೋರಿಸಿದ್ದಾರೆ, ಯಾರೋ ಏನೋ ಅಂದರು ಅಂತ ತಾನು ಎಷ್ಟು ತಲೆಕೆಡಿಸಿಕೊಂಡಿದ್ದೆ. ಅವಳ ಮನಸ್ಸಿಗೆ ಆವರಿಸಿದ್ದ ಮಂಜು ಕರಗಿತು.
ಮ್ಯಾನೇಜರ್ ಜೊತೆ ಮಾತು ಮುಗಿಸಿ ಹೊರಬಂದ ಸುರೇಶ ಸುರೇಖ ತಮ್ಮೆಡೆಗೆ ಓಡುತ್ತ ಬಂದ ಅಪೂರ್ವಳನ್ನು ಕಂಡರು. ಅಪೂರ್ವ ಬಂದವಳೇ ಸುರೇಖಳಿಗೆ ತೆಕ್ಕೆಬಿದ್ದಳು. ಉಕ್ಕಿಬಂದ ಅಳುವಲ್ಲಿ ಅವಳಾಡಿದ ಮಾತು ಕೇಳುತ್ತಿರಲಿಲ್ಲ. ಸುರೇಖಳೂ ಭಾವನೆಗಳ ಸುಳಿಯಲ್ಲಿ ಸಿಕ್ಕಿದ್ದಳು. ಮಗಳನ್ನು ತಬ್ಬಿಕೊಂಡು ಮುತ್ತಿನ ಮಳೆಗೆರೆದಳು. ಅವರಿಬ್ಬರನ್ನೂ ನೋಡುತ್ತ ನಿಂತ ಸುರೇಶನ ಕಣ್ಣಿನಲ್ಲೂ ನೀರು ಚಿಮ್ಮಿತು. ಅವರ ನಡುವೆ ಅರ್ಥಗರ್ಭಿತ ಮೌನವಿತ್ತು. ಕಳಚಿದ ಕೊಂಡಿ ಮತ್ತೆ ಬೆಸೆದುಕೊಂಡಿತ್ತು.
ಈ ಕಥೆಯ ನಾಯಕ ಸುರೇಶ...ಎಷ್ಟು ಸುಲಲಿತವಾಗಿ ಕಗ್ಗಂಟಾಗಬಹುದಿದ್ದ ಸಮಸ್ಯೆಯನ್ನು ಸಮಯೋಚಿತ ಪ್ರಜ್ಞೆಯಿಂದ ಬಿಡಿಸಿದ..ಅಭಿನಂದನೆಗಳು ದೇಸಾಯಿ ಸರ್..ತುಂಬಾ ಸೊಗಸಾಗಿದೆ.ಕಥೆ ಹಳೆಯದಾದರೇನು ಭಾವ ಎಂದಿಗೂ ನವೀನ....
ReplyDeleteಮನೋವೈಜ್ಞಾನಿಕ ಕತೆಯನ್ನು ಸುಲಲಿತವಾಗಿ ಹೆಣೆದಿದ್ದೀರಿ. ಜೊತೆಗೆ ‘ದೇಸಾಯರ ವಿಶಿಷ್ಟ ಶೈಲಿ’ಯ ಸೊಗಸು ಬೇರೆ!
ReplyDeleteವಿಭಿನ್ನ ಪ್ರಕಾರದ ಕತೆ ಇಷ್ಟವಾಗುತ್ತದೆ.
ಹನಿಗಲಲಿ ಎಂತೋ ಕಥನದಲೂ ದೇಸಾಯರೇ ಅನನ್ಯ.
ReplyDeleteಉತ್ತಮ ನಿರೂಪಣಾ ಶೈಲಿಯ ಕಥನ. ಸುರೇಶ ತನ್ನ ಯೋಜನಾ ಬದ್ಧ ನಡೆಗಳಿಂದ ನನ್ನನ್ನೂ ಗೆದ್ದ.
ಮನ ತಟ್ಟುವ ಕಥೆ.... ಕಠಿಣ ಸಮಸ್ಯೆಯನ್ನು ಸರಳವಾಗಿ ಬಿಡಿಸಬಹುದು ಎಂದು ಕಥಾನಾಯಕ ತೋರಿಸಿದ್ದಾನೆ... ಉತ್ತಮ ಸಂದೇಶವಿರುವ ಕಥೆ... ಹೇಳಿದ ರೀತಿಯೂ ಚೆನ್ನಾಗಿದೆ ಸರ್...
ReplyDeleteನಿಮ್ಮ ಕಥೆ ಹೇಳುವ ನಿರೂಪಣಾ ಶ್ಯಲಿ ಇಸ್ಥವಾಯಿತು .ಇಲ್ಲಿ ಬರುವ ಮೂರು ಪಾತ್ರಗಳನ್ನು ಹಾಗು ಅವರ ಭಾವನೆಗಳನ್ನು ಅದ್ಭುತವಾಗಿ ಮನಮುಟ್ಟುವಂತೆ ಹೆಣೆದಿದ್ದೀರಿ . ವಸ್ತು ಹಳೆಯದಾದರೂ ಒಂದು ಹೊಸ ಸಂದೇಶದೊಂದಿಗೆ ಆಪ್ತವಾಗಿ ಕಥೆ ಓದಿಸಿಕೊಂಡು ಹೋಗುತ್ತದೆ ಉಮೇಶ ಅವರಾ .ಅಭಿನಂದನೆಗಳು .
ReplyDeleteಕಥೆಯನ್ನು ನಿರೂಪಿಸಿದ ಶೈಲಿ ಇಷ್ಟ ಆಯಿತು....ಉತ್ತಮ ಸಂದೇಶದೊಂದಿಗೆ ಸುಂದರವಾಗಿ ಕಥೆಯನ್ನು ಹೆಣೆದಿದ್ದೀರಿ... ....ಅಭಿನಂದನೆಗಳು.
ReplyDelete