ಮೆಟ್ಟಿಲು ಏರಿ ಬಂದಾಗ ಬಾಗಿಲಲ್ಲಿ ತೂಗುತ್ತಿದ್ದ ಕಾರ್ಡು ನೋಡಿಯೇ ಅಂದುಕೊಂಡೆ... ಅವ್ವಳದು ಅಂತ. ಬಾಗಿಲು ತೆರೆದು ಪತ್ರ ಟೀಪಾಯ್ ಮೇಲೆ ಇಟ್ಟು ಒಳನಡೆದೆ. ಮುಖ ತೊಳೆದು ಬಿಸಿ ಕಾಫಿಯೂಡನೆ ಬಂದಾಗ ಮತ್ತೆ ಎದುರಾಗಿತ್ತು ಆ ಪತ್ರ. ಅವೇ ಚಿರಪರಿಚಿತ ಅಕ್ಷರಳು... ಅದೇ ಭಾವ. ಪತ್ರದ ತುಂಬ ಅಂತಃಕರಣ ಉಣಬಡಿಸುವ ಅವ್ವಳ ಪರಿ ಅದ್ಭುತವಾದದ್ದು. ಪತ್ರದಲ್ಲಿ ಅಡಕವಾಗಿರುವ ವಿಷಯವೂ ಅದೇ- ತನಗೆ ವಯಸ್ಸಾಗುತ್ತಿದ್ದು... ನನ್ನ ತಲೆ ಮೇಲೆ ಅಕ್ಕಿಕಾಳು ಹಾಕಿ ನಿರಾತಂಕವಾಗಿ ಸಾಯುವೆ... ಅಣ್ಣನ ಪರಿಚಯದ ಓರ್ವ ಗಂಡಿದ್ದಾನೆ ನೀನು ಒಪ್ಪುವುದಾದರೆ ಮಾತು ಮುಂದುವರೆಸುವ... ಅವ್ವಳ ಕಾಳಜಿ ಸಹಜ ಪ್ರತಿಕ್ರಿಯೆಯಾಗಿತ್ತು. ಮುವ್ವತ್ತು ದಾಟಿದರೂ ನನಗೆ ಮದುವೆ ಆಗಿರಲಿಲ್ಲ... ಅವ್ವ ಯಾವಾಗಲೂ ಹೇಳುತ್ತಿದ್ದ ಮಾತುಗಳು ನೆನಪಿಗೆ ಬರುತ್ತವೆ. “ಆಯಾ ವಯಸ್ಸಿಗೆ ಯಾವುದು ಆಗುವುದು ಅದು ಆದ್ರ ಛಂದ...” ತನ್ನ ಹದಿನಾರನೇ ವಯಸ್ಸಿಗೆ ದೊಡ್ಡ ಅಕ್ಕಳನ್ನು ಹಡೆದ ಅವ್ವಳ ಬಾಯಿಂದ ಇಂತಹ ಮಾತುಗಳು ಬರುವುದು ತೀರ ಸ್ವಾಭಾವಿಕವಾಗಿತ್ತು. ತನ್ನ ಗಂಡ, ಮಕ್ಕಳು ಸಂಸಾರ ಇದೇ ಸೀಮಿತ ವಲಯದಲ್ಲಿ ಅವಳು ಜೀವನ ಸವೆಸಿದ್ದಳು. ಅವಳ ಬಾಯಿಂದ ವೇದಾಂತ ಇಲ್ಲವಾದರೆ ಮತ್ತೇನು ಬರಲು ಸಾಧ್ಯ?
ಆದರೆ ಪ್ರಶ್ನೆ ಅದಲ್ಲ ಅವ್ವಳ ಆಗ್ರಹಳಿಗೆ, ಅಣ್ಣ ವೈನಿಯರ ಹಂಬಲಗಳಿಗೆ ಅಕ್ಕಳ ಒತ್ತಾಸೆಗಳಿಗೆ ನಾನೇಕೆ ಕಲ್ಲಾದೆ... ಯಾಕೆ ನನ್ನ ಮನಸ್ಸಿನಲ್ಲಿ ಮಿಡಿತಗಳಿಲ್ಲ... ಮನಸ್ಸು ಏಕೆ ಕಲ್ಲಾಗಿದೆ...? ಪ್ರಶ್ನೆಗಳಿವೆ... ಸಾವಿರ ಸಾವಿರ ಪ್ರಶ್ನೆಗಳು. ಈ ಹಿಂದೆ ಅನೇಕ ಸಲ ಮಾಡಿದಂತೆ ಒಂದೊಂದೇ ಎಳೆ ಬಿಡಿಸಲು ಪ್ರಯತ್ನಿಸುತ್ತೇನೆ. ಈ ಹಿಂದೆಯೂ ಮದುವೆ ಸಂಸಾರ ಇತ್ಯಾದಿಗಳ ಬಗ್ಗೆ ಯೋಚಿಸಿದಾಗ ತಲೆ ಹೀಗೆಯೇ ಗೊಂದಲದ ಗೂಡಾಗಿತ್ತು... ಬಹುಷ... ನಾನು ನಾರ್ಮಲ್ ಅಲ್ಲ ಎಂದುಕೊಂಡಿರುವೆ. ಎಷ್ಟೂಸಲ ಪರಿಚಯದ ಮನಶಾಸ್ತ್ರ ಓದಿದವರಲ್ಲಿ ಈ ಬಗ್ಗೆ ಅನೇಕ ಸಲ ಚರ್ಚಿಸಿದ್ದೆ ಕೂಡ...! ನನ್ನ ಎಲ್ಲ ಗೊಂದಲಗಳಿಗೆ ಉತ್ತರ ಅಡಗಿದುದು ಅತೀತದಲ್ಲಿ ಅಪ್ರಿಯ ನೆನಪುಗಳವು ಆದರೆ ಆ ನೆನಪುಗಳ ಮೇಲೆಯೇ ಆ ಒಂದು ಅಭದ್ರ ಬುನಾದಿಯ ಮೇಲೆಯೇ ನನ್ನ ಮುಂದಿನ ಜೀವನ ನಾ ರೂಪಿಸಲು ಪ್ರಯತ್ನಿಸಿದ್ದೆ... ಇದು ನಿಜವಾಗಿತ್ತು.
***
ನನಗೆ ಬುದ್ಧಿ ತಿಳಿದಾಗನಿಂದಲೂ ಆ ದೃಶ್ಯ ನಮ್ಮ ಮನೆಯಲ್ಲಿ ನೋಡುತ್ತಿದ್ದೆ. ನನಗೂ ಅಕ್ಕಳಿಗೂ ಹನ್ನೆರಡು ವಯಸ್ಸಿನ ಅಂತರ. ಶಾಲೆ ಮುಗಿಸಿ ಮನೆಗೆ ಬಂದವಳಿಗೆ ಮನೆಯ ಹಾಲ್ ಎನ್ನಬಹುದಾದ ಕೋಣೆಯಲ್ಲಿ ಬಾಜೂ ಮನೆಯಿಂದ ತಂದ ಬೆತ್ತದ ಕುರ್ಚಿಗಳು... ಅದರ ಮೇಲೆ ಡಾಂಬರುಗುಳಿಗೆ ಹಾಕಿ ಕೆಡದಂತೆ ಜೋಪಾನವಾಗಿಟ್ಟ ‘ಕುತನಿ’ ಜಮಖಾನೆಗಳು... ಒಳಗಡೆ ಉಪ್ಪಿಟ್ಟಿನ ಗಡಿಬಿಡಿಯಲ್ಲಿ ಇರುವ ಅವ್ವ... ರೂಮಿನ ಕನ್ನಡಿ ಮುಂದೆ ಹೆರಳು ಹಾಕಿಕೊಳ್ಳುತ್ತಿದ್ದ ಅಕ್ಕ... ಶತಪಥ ತಿರುಗಾಡುತ್ತ ಸದಾ ಒತ್ತಡದಲ್ಲಿರುವ ಅಪ್ಪ... ಊದಿನಕಡ್ಡಿ ಹಚ್ಚಿ... ಪೇಪರ್ ತೆಗೆದಿಡುವ ಅಣ್ಣ... ಎಲ್ಲ ನನಗೆ ಅಪರಿಚಿತರೇ ಆದರ ಈ ಅವತಾರದಲ್ಲಿ ಅವರನ್ನು ನೋಡಿದಾಗ ಅಪರಿಚಿತರಂತೆ ಕಂಡು ಬರುತ್ತಿದ್ದರು. ಅಕ್ಕಳನ್ನು ನೊಡಲು ಬಂದಿದ್ದರು ಎನ್ನುವುದು ಇಡೀ ಓಣಿಗೆ ಗೊತ್ತಾಗಿ ಬಿಡುತ್ತಿತ್ತು ಅಷ್ಟು ಸಂಭ್ರಮ ಇರುತ್ತಿತ್ತು. ಆದರೆ ಈ ಸಂಭ್ರಮ ಬಹಳ ಹೊತ್ತು ಉಳಿಯುತ್ತಿರಲಿಲ್ಲ. ವರನ ಕಡೆಯವರ ನೋಟಕ್ಕೆ, ಅವರು ಕೇಳಿದ ಪ್ರಶ್ನೆಗಳಿಗೆ... ಪಿಯುಸಿ ಮುಗಿಸಿದರೂ ಕನ್ನಡ ವರ್ತಮಾನ ಪತ್ರ ಓದಿಸುವ ಅವರ ಹಟಕ್ಕೆ ಅಕ್ಕ ಕಲ್ಲಾಗಿದ್ದಳು. ಒಬ್ಬರು ಬೇಡ ಎನ್ನುವುದು ಗೊತ್ತಾದರೆ ಅಂದೇ ಇನ್ನೊಂದು ಸಂಬಂಧ ಬೆಳೆಸುವತ್ತ ಅಪ್ಪನ ಪತ್ರ ಸಾಗುತ್ತಿತ್ತು. ನನ್ನ ಅಕ್ಷರ ದುಂಡಾಗುತ್ತವೆ ಎನ್ನುವ ಕಾರಣದಿಂದ ಪತ್ರ ಬರೆಯುವ ಕೆಲಸ ನನ್ನದಾಗುತ್ತಿತ್ತು. ಆ ವಯಸ್ಸಿನಲ್ಲಿ ಅಪ್ಪ ಹೇಳಿದ ರೀತಿಯಲ್ಲಿ ಪತ್ರ ಬರೆಯುವುದು ನನಗೆ ಬಹಳ ಖುಷಿ ಕೊಡುತ್ತಿದ್ದ ಕೆಲಸವಾಗಿತ್ತು. ತನ್ನ ಮದುವೆಯಾಗಲಿ... ಈ ಹಂಬಲ ಅಕ್ಕಳಲ್ಲಿ ಇರುತ್ತಿತ್ತು. ಅಂತೆಯೇ ಪ್ರತಿ ಕನ್ಯಾಪರೀಕ್ಷೆಗಾಗಿ ಆಸ್ಥೆಯಿಂದ ಅಲಂಕಾರಮಾಡಿಕೊಳ್ಳುತ್ತಿದ್ದಳು. ಅವರು ಇವರು ಹೇಳಿದರು ಎಂದು ರಾಮಕೋಟಿ ಬರೆಯುವುದು, ಸೋಳಾ ಸೋಮವಾರದ ಪತ್ರ... ಒಂದೇ ಎರಡೇ ಅವಳ ಹಂಬಲಗಳು. ಆಗೆಲ್ಲ ಅಕ್ಕಳ ಈ ರೀತಿಯ ವರ್ತನೆ ಬರೀ ದೃಶ್ಯವಾಗಿದ್ದವು. ಆದರೆ ನನಗರಿವಿಲ್ಲದೇ ನಾನದಕ್ಕೆ ಸ್ಪಂದಿಸತೊಡಗಿದೆ. ವಧುಪರೀಕ್ಷೆಯಲ್ಲಿ ಅಡಗಿದ ನ್ಯೂನತೆಗಳ ಬಗ್ಗೆ... ಗಂಡಿನ ಕಡೆಯವರ ದರ್ಪದ ಬಗ್ಗೆ... ಅಪ್ಪ ಅವ್ವರ ಅಸಹಾಯಕತೆ ಬಗ್ಗೆ ಮನ ರೋಸಿಹೋಗಿತ್ತು. ನನಗೇ ಅರಿವಿಲ್ಲದೇ ವ್ಯವಸ್ಥೆಯ ವಿರುದ್ಧ ಕಿಡಿಯೊಂದು ಮನದಲ್ಲಿ ಬೀಜಬಿತ್ತಿತು.
ಅಂತೂ ಅಕ್ಕ ಪುಸ್ತಕಗಟ್ಟಲೇ ಬರೆದು ಮುಗಿಸಿದ ರಾಮಕೋಟಿಯ ಪ್ರಭಾವ... ಅಥವಾ ಸೋಮವಾರ ಮಂಗಳವಾರ ಅನ್ನದೇ ಮಾಡಿದ ಉಪವಾಸಗಳ ಪ್ರಭಾವದಿಂದ ಅಕ್ಕಳ ಮದುವೆ ಠರಾಯಿಸಿತ್ತು. ಸಂಬಂಧ ಅಣ್ಣನಿಗಾಗಲಿ ಅಥವಾ ಅಪ್ಪನಿಗಾಗಲಿ ಪೂರ್ಣ ಮನಸ್ಸೂಪ್ಪಿಗೆಯಾಗಿರಲಿಲ್ಲ. ಆದರೆ ಬಂದ ಸಂಬಂಧವನ್ನು ನಿರಾಕರಿಸುವುದು ಸುಲಭವಾಗಿರಲಿಲ್ಲ. ಅಕ್ಕಳ ಮುಖದಲ್ಲಿ ಉತ್ಸಾಹ ಆಗೀಗ ಮೂಡುತ್ತಿತ್ತು. ಅಂತೂ ತನ್ನ ಬಾಳು ಒಂದು ಗುರಿ ಮುಟ್ಟಿದ ಧನ್ಯತೆ ಇತ್ತು ಅವಳ ಮುಖದಲ್ಲಿ. ಅವ್ವ ನಿರಾಳವಾಗಿದ್ದಳು. ಜೋರು ಅನ್ನುವ ರೀತಿಯಲ್ಲಿಯೇ ಅಪ್ಪ ಮದುವೆ ಮಾಡಿಕೊಟ್ಟಿದ್ದ. ಸಾಲಸೋಲಮಾಡಿ ಮದುವೆ ಮಾಡಿ ಗೆದ್ದೆ ಎಂದು ಉಸಿರು ಬಿಟ್ಟಿದ್ದ. ಅಕ್ಕಳ ಬಸಿರು ಬಾಣಂತನಗಳಲ್ಲಿ ವರ್ಷ ಓಡುತ್ತಿದ್ದವು. ನಾನು ಸಹ ಕಾಲೇಜು ಕಟ್ಟೆ ಹತ್ತಿದ್ದೆ.
ಕಾಲೇಜಿನ ಮೊದಲಿನ ದಿನಗಳಲ್ಲಿ ಒಂದು ರೀತಿಯ ಅನ್ಯಮನಸ್ಕತೆ ಕಾಡುತ್ತಿತ್ತು. ಯಾಕೂ ಎಲ್ಲ ಹುಡುಗರು ನನ್ನನ್ನೇ ನೋಡುತ್ತಿದ್ದಾರೆ ನನ್ನ ಕಲ್ಪನೆಗಳಾಗಿರಲಿಲ್ಲ ಸೂಕ್ಷ್ಮವಾಗಿ ಅವಲೋಕಿಸಿದೆ ತಿಳಿದು ಬಂದ ಸಂಗತಿ ವಿಸ್ಮಯಕರವಾಗಿತ್ತು. ಇದುವರೆಗೂ ಹುಡುಗಿಯರನ್ನು ನೋಡಿಯೇ ಇಲ್ಲ ಎನ್ನುವ ರೀತಿ ಅವರು ವರ್ತಿಸುತ್ತಿದ್ದರು. ಕಂಡರೆ ಸಾಕು ಏನೋ ಕೂಗುವುದು... ಸಿಳ್ಳು ಹಾಕುವುದು, ಜೋರಾಗಿ ನಗುವುದು ಅವರ ಈ ವರ್ತನೆ ಅಸಹ್ಯಕರವಾಗಿತ್ತು. ಇನ್ನೂ ಒಂದು ವಿಷಯ ನನ್ನ ಗಮನಕ್ಕೆ ಬಂತು ಅದೆಂದರೆ ನನ್ನ ಸಹಪಾಠಿಗಳೆಲ್ಲ ಇದು ಅನಿವಾರ್ಯಕರ್ಮ ಎಂಬಂತೆ ಸಹಿಸಿಕೊಂಡಿದ್ದರು. ಅನ್ಯಾಯ ಆಗುತ್ತಿದೆ ಗೊತ್ತಾದರೂ ಮೌನವಾಗಿ ಅವರು ತಾಳಿಕೊಂಡಿದ್ದರು. ಈ ಬಗ್ಗೆ ನಾನು ಕೆಲವರಲ್ಲಿ ಚರ್ಚಿಸಿದೆ. ಅನೇಕರು ನನಗೆ ಬುದ್ಧಿ ಹೇಳಿದರು. ತಲೆ ತಗ್ಗಿಸಿ ನಡೆಯುವುದೇ ಲೇಸು... ಏನೂ ಗೊತ್ತಿಲ್ಲದಂತೆ ಇರುವುದೇ ಶಾಣ್ಯಾತನ ಅನ್ನುವ ರೀತಿ ಮಾತನಾಡಿದರು. ಅವರ ಪ್ರತಿಕ್ರಿಯೆ ನಾನು ಊಹಿಸಿಯೇ ಇದ್ದೆ ಆದರೆ ದೀಪಾಳ ಗೆಳೆತನ ಈ ಸಂಧರ್ಭದಲ್ಲಿಯೇ ನನಗೆ ಸಿಕ್ಕಿತು.
ದೀಪಾಳ ಗೆಳೆತನ ಬೆಳೆದಂತೆಲ್ಲ ನನಗೆ ಜೀವನದ ವಿವಿಧ ಮುಖಗಳ ಪರಿಚಯವಾಗತೊಡಗಿತು. ಅವಳ ಅವ್ವ ಹಾಗೂ ಆಕೆ ಇಬ್ಬರೇ ಇದ್ದರು. ದೇಶಪಾಂಡೆನಗರದ ಪ್ರಶಾಂತವಾತಾವರಣದಲ್ಲಿ ಅವರ ಮನೆ. ಮಾಳಿಗೆಯ ಮೇಲೆ ಕುಳಿತು ನಾವು ಚರ್ಚಿಸುತ್ತಿದ್ದ ವಿಷಯಗಳ ಬಗ್ಗೆ ಅಂತ್ಯವೇ ಇರುತ್ತಿರಲಿಲ್ಲ. ನನ್ನ ಒಳಗನ್ನೆಲ್ಲ ಅವಳ ಮುಂದೆ ತೋಡಿಕೊಂಡಿದೆ... ನನ್ನ ಧ್ವನಿಗೆ ಅವಳು ಚೆನ್ನಾಗಿ ಪ್ರತಿಸಾದ ಕೊಡುತ್ತಿದ್ದಳು. ಅವಳ ತಾಯಿ ನಮ್ಮ ಜೊತೆ ಬೆರೆಯುತ್ತಿದ್ದುದು ಅಪರೂಪ... ಆದರೆ ಮಧ್ಯಾಹ್ನ ಚಹಾ ಕಡಿಸದೇ ಕಳಿಸುತ್ತಿರಲಿಲ್ಲ. ದೀಪಾಳಲ್ಲಿ ಯಾವುದೋ ಅತೃಪ್ತಿ ಇದೆ... ಇದು ನನ್ನ ಅರಿವಿಗೆ ಬಂದಿದ್ದು ಅವರ ಮನೆ ಮುಂದೆ ಬಿಳಿಕಾರು ನಿಂತಾಗಲೆಲ್ಲ. ಮೊದ ಮೊದಲು ಅವಳ ಅಸಹಜತೆ ನನ್ನ ಗಮನಕ್ಕೆ ಬಂದಿರಲಿಲ್ಲ. ಆದರೆ ಆ ಕಾರು ಅವಳ ಮನೆ ಮುಂದೆ ನಿಂತಾಗೆಲ್ಲ ಅವಳು ನನ್ನೊಡನೆ ಮಾತನಾಡುವಾಗ ಇದ್ದಕಿದ್ದಂತೆ ರೇಗಾಡುವುದು... ಅನಗತ್ಯವಾಗಿ ವಾದ ಮಾಡುವುದು ಹೀಗೆಲ್ಲ ವರ್ತಿಸುತ್ತಿದ್ದಳು. ಬಿಳಿಕಾರಿನ ವ್ಯಕ್ತಿಯ ಜೊತೆ ದೀಪಾಳ ತಾಯಿ ನಗುನುತ್ತ ಮಾತನಾಡುತ್ತಿದ್ದಳು. ಅವರ ಮುಖದಲ್ಲಿ ವಿಶೇಷ ಕಾಂತಿ ಇರುತ್ತಿತ್ತು. ದೀಪಾಳ ಸಿಡುಕತನದ ವರ್ತನೆಗೆ ತದ್ವಿರುದ್ಧವಾಗಿ ಅವರು ಶಾಂತವಾಗಿರುತ್ತಿದ್ದರು. ದೀಪಾಳ ಜೊತೆಗಿನ ನನ್ನ ಗೆಳೆತನ ಈ ದ್ವಂದ್ವಗಳ ಸುಳಿಯಲ್ಲಿದ್ದಾಗಲೇ ನಾನು ರಜೆಗೆಂದು ಅಕ್ಕಳ ಊರಿಗೆ ಹೋದೆ.
ಅಕ್ಕಳನ್ನು ಮದುವೆ ಮಾಡಿಕೊಟ್ಟಿದ್ದು ಹಳ್ಳಿಯಲ್ಲಿ ಧೋತ್ರ ಉಡುವ ಮಾಮಾರ ಬಗ್ಗೆ ಮದುವೆ ವೇಳೆಯಲ್ಲಿ ಸಂಬಂಧಿಕರಲ್ಲಿ ನಗಾಡಿದ್ದರು. ಆದರೆ ಮದುವೆ ಆಗುವುದೇ ದುಸ್ತರ ಎಂದು ಕೊಂಡ ಅಪ್ಪ-ಅವ್ವ ಅವರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಅವಳ ಮದುವೆಯಾದ ಮೇಲೆ ಅವಳ ಊರಿಗೆ ಹೋಗುತ್ತಿದ್ದುದ್ದು ಇದೇ ಮೊದಲ ಸಲವಾಗಿತ್ತು. ಅಕ್ಕ ಆಗಲೇ ಎರಡು ಮಕ್ಕಳ ತಾಯಿಯಾಗಿದ್ದಳು. ಮೊದಲಿಗಿಂತ ಬಹಳ ಬದಲಾದಂತೆ ಅನ್ನಿಸಿದಳು. ಅವರದು ಒಟ್ಟುಕುಟುಂಬ. ಮನೆ ಸದಾ ಜನರಿಂದ ಗಿಜಿಗುಡುತ್ತಿತ್ತು. ಅಕ್ಕಳ ಮೈದುನ ಅವರ ಹೆಂಡಿರು ಮಕ್ಕಳು ಅಲ್ಲದೇ ಆಳುಕಾಳು ಹೀಗೆ ಅಲ್ಲಿ ಲೆಕ್ಕವಿರಲಿಲ್ಲ. ಪಾಳಿಯ ಪ್ರಕಾರ ನಿಗೆಣ್ಣಿಯರೆಲ್ಲ ಕೆಲಸ ಹಂಚಿಕೊಂಡಿದ್ದರು. ಅಕ್ಕಳ ಹಿರೇ ನಿಗೆಣ್ಣಿಯ ಮಗಳು ನನ್ನದೇ ವಯಸ್ಸಿನವಳು... ನನಗೆ ಜೊತೆಗಾರಳಾದಳು. ನನಗೆ ಹಳ್ಳಿಯ ವಾತಾವರಣ ಹೊಸದು... ಅಲ್ಲಿಯ ಹಸಿರು, ಮಣ್ಣು ಎಲ್ಲ ಅಪ್ಯಾಯಮಾನ ಎನಿಸಿದವು. ಮೆಟ್ರಿಕ್ ನಪಾಸಾಗಿ ಮನೆಯಲ್ಲಿಯೇ ಇದ್ದ ಗಿರಿಜಳಿಗೆ ಮದುವೆ ಮಾಡುವ ತಯಾರಿನಡೆದಿತ್ತು. ಅವರ ಮನೆಯಲ್ಲಿ ಹೊಲಗದ್ದೆ ಅಲ್ಲದೇ ಮಾವಿನ ಹಣ್ಣು ಬೆಳೆಸುವ ತೋಟ ಸಹ ಅವರದಾಗಿತ್ತು. ನೀರಾವರಿ ಜಮೀನು... ಒಟ್ಟಿನಲ್ಲಿ ಅಕ್ಕಳ ಮನೆತನ ಫಲವತ್ತಾಗಿತ್ತು.
ಅವರ ತೋಟದಲ್ಲಿ ಒಮ್ಮೆ ಮಧ್ಯಾಹ್ನ ನಾನು, ಗಿರಿಜ ಬರದಿದ್ದುದುಕೆ ಒಬ್ಬಳೇ ಹೋಗಿದ್ದೆ. ಮಧ್ಯಾಹ್ನವಾಗಿದ್ದರಿಂದ ಆಳುಮಂದಿ ಎಲ್ಲ ಬುತ್ತಿಯ ಗಂಟು ಬಿಚ್ಚುತ್ತಿದ್ದರು. ತೋಟ ದಾಟಿ ಹೊಲದಲ್ಲಿ ಕಾಲಿಡುತ್ತಿದ್ದೆ. ಅಕಸ್ಮಾತ್ತಾಗಿ ಜೋಲಿ ಹೋಗಿ ಹಾಕಿಕೊಂಡಿದ್ದ ಚೂಡಿಗೆಲ್ಲ ಕೆಸರು ಅಂಟಿಕೊಂಡಿತು. ದೂರದಲ್ಲಿ ಪಂಪ್‍ಹೌಸ್ ಕಾಣಿಸುತ್ತಿತ್ತು. ಪಂಪ್ ಶುರು ಮಾಡಿದ್ದರೆ ರಾಡಿ ತೊಳೆದುಕೊಂಡರಾಯಿತೆಂದು ಅತ್ತ ಹೆಜ್ಜೆ ಹಾಕಿದೆ. ಪಂಪ್‍ಹೌಸ್‍ಗೆ ಹೊಂದಿಕೊಂಡಂತೆ ಒಂದು ಸಣ್ಣಗುಡಿಸಲಿತ್ತು. ನಮ್ಮ ತೋಟದ ಮನೆ ಎಂದು ಗಿರಿಜ ಅಭಿಮಾನದಿಂದ ಹೇಳುತ್ತಿದ್ದಳು. ಪಂಪ್‍ನಿಂದ ನೀರು ತೆಗೆದು ನಾಲೆ ಮಾಡಿ ಹೊಲಕ್ಕೆ ಹರಿಬಿಟ್ಟಿದ್ದರು. ಬಗ್ಗಿ ಕಾಲಿಗೆ ನೀರು ಹುಯ್ದುಕೊಂಡೆ. ಒಳಗಡೆ ಗುಡಿಸಲಿಂದ ಏನೋ ಸದ್ದು ಕೇಳಿಬರುತ್ತಿತ್ತು. ಕುತೂಹಲದಿಂದ ಹೆಜ್ಜೆ ಹಾಕಿದೆ. ಅರ್ಧಮರ್ಧ ಮುಚ್ಚಿದ ಗುಡಿಸಲ ಬಾಗಿಲಿಂದ ನಾ ನೋಡಿದ ದೃಶ್ಯ ನನ್ನನ್ನು ಅಲ್ಲಿಯೇ ಗೊಂಬೆಯಂತೆ ನಿಲ್ಲಿಸಿತು. ಒಳಗಡೆ ಮಾಮಾ ಇದ್ದರು... ಜೊತೆಗೆ ಯಾರೋ ಹೆಂಗಸು... ಹೊರಗಿನ ಜಗತ್ತಿನ ಗೊಡವೆ ಇಲ್ಲದವರಂತೆ ಪೂರ್ತಿ ಬೆತ್ತಲಾಗಿ ಒಬ್ಬರನ್ನೂಬ್ಬರು ಅಪ್ಪಿಹೊರಳಾಡುತ್ತಿದ್ದರು.
ದೃಶ್ಯ ನೋಡಿದೆ... ಕೈ ಕಾಲುಗಳಲ್ಲಿ ನಡುಕ ಉಂಟಾಯಿತು. ಆ ವೇಳೆಯಲ್ಲಿ ಅಕ್ಕಳ ದೀನ ಮುಖ ತೇಲಿಬಂತು. ಮನಸ್ಸು ಅವಳಿಗಾದ ಅನ್ಯಾಯಕ್ಕೆ ಮರಗಿತು. ಮುಂದೆ ಅವಳ ಹಾಗೂ ನನ್ನ ಒಡನಾಟ ಸಹಜವಾಗಲಿಲ್ಲ. ಅವಳೊಡನೆ ಕಣ್ಣು ಜೋಡಿಸಿ ಮಾತನಾಡುವುದು ಸಹ ಮುಜುಗರವಾಯಿತು. ಅವಳಿಗಾದ ಅನ್ಯಾಯದ ಬಗ್ಗೆ ಅವಳಿಗೆ ಗೊತ್ತಿದೆಯೊ, ಇಲ್ಲವೂ ಎಂಬ ಸಂದೇಹ ಬೆಳೆಯಿತು. ಅಲ್ಲಿ ಬಹಳ ದಿನಗಳ ವರೆಗೆ ನನಗೆ ಇರಲು ಮನಸ್ಸಾಗಲಿಲ್ಲ... ಊರಿಗೆ ಹೊರಡುವ ಗಡಿಬಿಡಿ ನಡೆಸಿದೆ. ನನ್ನ ವರ್ತನೆಗಳನ್ನು ಸೂಕ್ಷ್ಮವಾಗಿ ನನ್ನ ಅಕ್ಕ ಗಮನಿಸುತ್ತಿದ್ದಳು. ಊರಿಗೆ ಹೊರಡುವ ಹಿಂದಿನ ರಾತ್ರಿ ನನ್ನ ಕೈ ಹಿಡಿದು ತನ್ನ ರೂಮಿಗೆ ಕರೆದೂಯ್ದಳು. ಬಾಗಿಲು ಭದ್ರಮಾಡಿ ನಿಂತವಳು ತೀರ ಬಳಲಿದಂತೆ. ತುಳಿತಕ್ಕೆ ಒಳಗಾದಂತೆ ಕಂಡಳು. ಅದುವರೆಗೂ ತಡೆ ಹಿಡಿದಿದ್ದ ನನ್ನ ಭಾವನೆಗಳಿಗೆ ಧ್ವನಿಕೊಟ್ಟೆ. ತೋಟದ ಮನೆಯ ಪ್ರಸಂಗ ಸಹ ಹೇಳಿದೆ. ನನ್ನ ಊಹೆಗೆ ವ್ಯತಿರಿಕ್ತವಾಗಿ ಅಕ್ಕ ಸ್ಪಂದಿಸಿದಳು. ಅವಳ ಕಣ್ಣು ಕಂಬನಿ ಸುರಿಸಲಿಲ್ಲ ಬದಲು ಶೂನ್ಯವಾಗಿದ್ದವು. ನಿಧಾನವಾಗಿ ಅವಳು ಹೇಳಲಾರಂಭಿಸಿದಳು. ನಾನುಕೇಳುತ್ತಲೇ ಹೋದೆ. ಕೇಳಿದಂತೆಲ್ಲ ಅವಳು ತಾನೇ ಹಾಕಿಕೊಂಡ ಸಂಕೋಲೆಗಳಿಗೆ ಕಟ್ಟು ಬಿದ್ದು ಅವೇ ತನ್ನ ಜೀವನದ ಗುರಿಗಳು ಎಂದು ನಿರ್ಧರಿಸಿಕೊಂಡ ಹಾಗನ್ನಿಸಿತು. ಅವಳ ಪ್ರತಿಕ್ರಿಯೆ ಸಾಮಾನ್ಯ ಹೆಂಗಸಂತೆ... ಬಂದದ್ದೆಲ್ಲ ಬರಲಿ ಎನ್ನುವ ರೀತಿಯದು. ನನಗದು ಸರಿ ಬರಲಿಲ್ಲ... ಪ್ರತಿಭಟಿಸಿದೆ. ಅವಳ ನಂಬಿಕೆಗಳು... ಆದರ್ಶಗಳು ಎಷ್ಟು ಪೂಳ್ಳು... ಅವಳ ಅನಿಸಿಕೆಗಳಿಗೆ ನೆಲೆಯೇ ಇಲ್ಲ ಎಂದು ತಿಳಿಹೇಳಿದೆ. ಆದರೆ ಅಕ್ಕ ಬದಲಾಗಲಿಲ್ಲ. ನನ್ನದೆಲ್ಲ ಸರಿ ಇದ್ದರೂ ತಾ ಆ ದಾರಿ ತುಳಿಯಲಾರೆ ಎಂದಳು. ಅವಳ ಈ ಅಸಹಾಯಕತೆ ನನಗೆ ರೇಜಿಗೆ ತಂದಿತು. ಮಾಮಾನ ಜೊತೆ ಇದರ ಬಗ್ಗೆ ಮಾತನಾಡುವ ನನ್ನ ವಿಚಾರ ಸಹ ಅವಳಿಗೆ ಸರಿ ಅನ್ನಿಸಲಿಲ್ಲ. ತನ್ನದೇ ಆದರ್ಶಗಳ... ನಂಬಿಕೆಗಳ ಗೋರಿ ಅವಳು ಕಟ್ಟಿಕೊಂಡಿದ್ದಳು. ರಾಮಕೋಟಿ ಬರೆದು... ಉಪವಾಸ ವನವಾಸ ಮಾಡಿ ಪಡೆದ ಗಂಡ... ಅವನೇನೆ ಆಗಿರಲಿ ಅವನಿಲ್ಲದೆ ಜೀವನವಿಲ್ಲ ಎಂದು ನಂಬಿದ ಅವಳ ಮೌಢ್ಯಕ್ಕೆ ನಾ ಬೆರಗಾದೆ. ಅವಳು ಪತ್ರದಲ್ಲಿ ಬರೆಯುತ್ತಿದ್ದ ಗಂಡ ಮಕ್ಕಳ ವಿಷಯಗಳೆಲ್ಲ ಟೊಳ್ಳುತನದಿಂದ ಕೂಡಿದ್ದವು. ಅವಳಿಗೆ ಎಲ್ಲ ಗೊತ್ತಿದೆ... ಆದರೆ ಪ್ರತಿಭಟಿಸದ ಅಸಹಾಯಕತೆಯೂ ಇದೆ. ಮನಸ್ಥಿತಿ ತುಂಬ ವಿಷಾದ ತುಂಬಿಕೊಂಡೇ ಅವಳ ಊರು ಬಿಟ್ಟೆ. ಹುಬ್ಬಳ್ಳಿಗೆ ಬಂದಾಗ ಮತ್ತೊಂದು ಆಘಾತ ನಾನು ಎದಿರು ನೋಡಬೇಕಾಗಿತ್ತು.
***
ದೀಪಾ ಕಾಣೆಯಾಗಿದ್ದಳು. ಹೌದು ಈ ವಿಷಯ ಆಘಾತ ತಂದಿತ್ತು. ಹೇಳದೇ ಕೇಳದೇ ಹೋದ ಅವಳ ವರ್ತನೆ ವಿಚಿತ್ರವೂ ಸೂಜಿಗವೂ ಆಗಿತ್ತು. ಅವರ ಪೈಕಿ ಅದಾರೋ ನಾನಿಲ್ಲವಾದಾಗ ಮನೆಗೆ ಬಂದು ವಿಚಾರಿಸಿ ಹೋಗಿದ್ದರಂತೆ. ದೇಶಪಾಂಡೆ ನಗರದ ಅವರ ಮನೆಗೆ ಹೋಗಿದ್ದೆ. ನೀರವ ಮೌನವಿತ್ತು. ಅವಳ ತಾಯಿ ಹಾಸಿಗೆ ಹಿಡಿದಿದ್ದರು. ನನ್ನ ಕೈ ಹಿಡಿದು ಗೋಳಾಡಿದರು. ನನಗೆ ತಿಳಿದ ರೀತಿಯಲ್ಲಿ ಅವರಿಗೆ ಸಮಾಧಾನ ಹೇಳಿದೆ. ಆದರೆ ದೀಪಾ ಯಾಕೆ ಈ ಹೆಜ್ಜೆ ಇಟ್ಟಳು ಇದು ನನಗೆ ತಿಳಿಯದ್ದು. ಅವರ ತಾಯಿಯ ಬಳಿ ಕಣ್ಣಿರೋಂದೆ ಉತ್ತರ ರೂಪದಲ್ಲಿತ್ತು. ಅವರ ಮನೆಯ ಅಡಿಗೆ ಮಾಡುವ ರಾಧಾಬಾಯಿ ಎಲ್ಲ ವಿಷಯ ಹೇಳಿದರು.
ದೀಪಾಳ ಅವ್ವಳಿಗೆ ನಾಡಿನ ಪ್ರಮುಖ ರಾಜಕಾರಣಿಯೊಡನೆ ಸಂಬಂಧವಿತ್ತು. ದೀಪಾಳೇ ಅವರ ಸಂಬಂಧದ ಫಲಶೃತಿ. ಇದು ದೀಪಾಳಿಗೂ ಗೊತ್ತಿತ್ತು. ತನ್ನ ಹಡೆದವ ನನ್ನ ಮಗಳೆಂದು ಒಪ್ಪಿಕೊಳ್ಳಲಿ ಇದು ಅವಳ ವಾದ. ಆದರೆ ಆ ವ್ಯಕ್ತಿ ಮುಜುಗರಕ್ಕೆ ಅಥವಾ ಹಾಗೆ ಮಾಡುವುದರಿಂದ ತನ್ನ ರಾಜಕೀಯ ಭವಿಷ್ಯ ಹಾಳಾದೀತು ಅನ್ನುವ ಹೆದರಿಕೆಗೆ ಆ ಧೈರ್ಯ ತೋರಿರಲಿಲ್ಲ. ದೀಪಾ ಅವರ ತಾಯಿಯ ಜೊತೆ ಈ ಬಗ್ಗೆ ಅನೇಕ ಸಲ ಜಗಳವಾಡಿದ್ದಳು. ಆದರೆ ಅದು ಫಲಕಾರಿಯಾಗಿರಲಿಲ್ಲ. ತಾನೆಲ್ಲಿಗೆ ಹೋಗುವೆ ಎಂಬುದು ಯಾರಿಗೂ ಗೊತ್ತಾಗದ ರೀತಿ ಅವಳು ನಿಗಾವಹಿಸಿದ್ದಳು. ದೀಪಾ ಶಾಶ್ವತವಾಗಿ ಮರೆಯಾಗಿದ್ದಳು.
ಹೀಗೆ ಅಪ್ರಿಯ ಅತೀತ ಭಾದಿಸುತ್ತಿದೆ. ಎಲ್ಲ ಗಂಡಸರನ್ನೂ ಒಂದೇ ದೃಷ್ಟಿಯಲ್ಲಿ ನೋಡದಿರಲು ಅಮ್ಮ, ಅಕ್ಕ ಅನೇಕ ಬಾರಿ ಹೇಳಿದ್ದರು. ಅವರ ವಾದದಲ್ಲಿ ಹುರುಳಿಲ್ಲದೇ ಇಲ್ಲ. ಯಾಕೊ ಮದುವೆ ಈ ವ್ಯವಸ್ಥೆ ನನಗೆ ಸರಿಬರಲಿಲ್ಲ. ಗಂಡ ಏನೇ ಮಾಡಿದರೂ ತುಟಿ ಕಚ್ಚಿ ಸಹಿಸಿಕೊಳ್ಳುವ ಅಕ್ಕ. ತನ್ನ ಜೊತೆ ರಮಿಸಿ ಮಗಳನ್ನು ಕೊಟ್ಟರೂ ಈ ಸಮಾಜದಲ್ಲಿ ತನಗೆ ಸ್ಥಾನ ನೀಡಲಾಗದ ಅಸಹಾಯಕ ವ್ಯಕ್ತಿಯನ್ನು ಮೇಲ್ಗಟ್ಟುವ ದೀಪಾಳ ತಾಯಿ ಎರಡು ಭಿನ್ನ ನಿಲುವುಗಳು ನಿಜ. ನಾವು ಅಂದರೆ- ಅಕ್ಕ-ದೀಪಾಳ ತಾಯಿ ಒಂದು ತ್ರಿಕೋನದಲ್ಲಿ ಭಗಿಯಾಗಿದ್ದೇವೆ ಅಂತ ಅನಿಸಿತು. ಅವೆರಡು ಕೋನಗಳು ನನ್ನ ಚುಚ್ಚಿದ ಹಾಗೆ, ನೋವು ತಾಳಲಾರದೆ ನಾ ಮಿಡುಕಿದಂತೆ ಹೀಗೆ ಹುಚ್ಚು ವಿಚಾರಗಳು ಬೇಡ ಈ ನೋವು ಅನ್ನುವಂತೆ ಇಲ್ಲ. ನನಗರಿವಿಲ್ಲದೇ ನಾ ಅವರ ನೋವಿಗೆ ಅಸಹಜ ರೀತಿಯಲ್ಲಿ ಸ್ಪಂದಿಸಿದೆನೆ...ಅವರು ಪಡುವ ಬವಣೆಗಳನ್ನು ನೋಡಿ ನಾ ಮದುವೆ ಆಗದಿರಲು ನಿರ್ಧರಿಸಿದೆನೇ... ಉತ್ತರ ನನಗೆ ಸ್ಪಷ್ಟವಾಗಿಲ್ಲ. ಮನದ ಮೂಲೆಯಲ್ಲಿ ಎಲ್ಲೋ ಚೀತಾರವಿದೆ. ನಾ ಮೇಲಿನಿಂದ ಮೇಲೆ ಅದನ್ನು ದಬ್ಬುತ್ತೇನೆ. ಗೆದ್ದೆನೆಂದು ಬೀಗುತ್ತೇನೆ. ಈ ಗೆಲುವು ನಿಜವೆ ಮತ್ತೆ ಗೊತ್ತಿಲ್ಲ ಎಂದು ಒಪ್ಪಿಕೊಳ್ಳುತ್ತೇನೆ.
2007
ಅಕ್ಕ ಮತ್ತು ದೀಪಾ ಎರಡು ವಿಭಿನ್ನ ಪಾತ್ರಗಳ ಒಳತೋಟಿಯು ಸಮರ್ಥವಾಗಿ ಬಿಂಬಿತವಾಗಿದೆ. ದೀಪಾಳ ತಾಯಿಯ ಅನಿವಾರ್ಯತೆ ಮತ್ತು ಅಕ್ಕನ ಮೌನವೂ ಅರ್ಥವಾಗುವಂತಿದೆ. ಇದು ಆಕೆಯ ಮನಸ್ಸಿನ ಮೇಲೆ ಉಂಟು ಮಾಡಿದ ತೀವ್ರ ಪರಿಣಾಮವು, ಮದುವೆ ವಿರುದ್ದ ಮನಸ್ಸು ಮಾಡಿದೆ.
ReplyDeleteಒಟ್ಟಾರೆ ಕಥನದಲ್ಲಿ ಮಾನವೀಯ ಸಂಬಂಧಗಳ ವಿಶ್ಲೇಷಣೆ ಉತ್ತಮವಾಗಿ ಮೂಡಿಬಂದಿದೆ.
ಕತೆ ತುಂಬಾ ಚೆನ್ನಾಗಿ ಮೂಡಿಬಂದಿದೆ. ಅನಿವಾರ್ಯತೆಗಳ ನಡುವೆ ಸಿಲುಕಿ ತಮ್ಮ ಮನಸ್ಸಿನಲ್ಲಿ ಪರದಾಡುವ ಅಕ್ಕ ಮತ್ತು ದೀಪ ಇಬ್ಬರ ಸ್ಥಿತಿಯೂ ಒಂದೇ ರೀತಿ ಮೂಡಿಬಂದಿದೆ. ಸಮಾಜದಲ್ಲಿ ಇಂತಹ ಎಷ್ಟುಮಂದಿ ಅಕ್ಕಂದಿರು ಮತ್ತು ದೀಪಾಗಳು, ಈ ರೀತಿಯ ಅನಿವಾರ್ಯತೆಗಳಲ್ಲಿ ಸಿಲುಕಿದ್ದಾರೋ!!!
ReplyDeleteತಪ್ಪು ಹುಡುಕುವುದು ನನ್ನ ಹವ್ಯಾಸವಲ್ಲ. ಆದರೂ ಈ ಕೆಳಗಿನ ಪದಗಳು ದೋಷಪೂರಿತವಾಗಿವೆ. ಇದನ್ನು ಸರಿಪಡಿಸುವುದು ಲೇಸು.
ಕಾಫಿಯೂಡನೆ,ಅಕ್ಷರಳು...ಆಗ್ರಹಳಿಗೆ,ನೊಡಲು,ಮನಸ್ಸೂಪ್ಪಿಗೆಯಾಗಿರಲಿಲ್ಲ, ಯಾಕೂ, ತೋಡಿಕೊಂಡಿದೆ... ,ಚಹಾ ಕಡಿಸದೇ,ಎಂದು ಕೊಂಡ( ಎಂದುಕೊಂಡ) ಕಣ್ಣಿರೋಂದೆ, ಯಾಕೊ, ಭಗಿಯಾಗಿದ್ದೇವೆ,ಚೀತಾರವಿದೆ.
kate tumba chennagide sir.. anivaaryateyalli esto jana sikkikoLLuttaare
ReplyDeletedesaayara,
ReplyDeleteheNNu obbaLa manada aLalin I kate tuMba sumdaravaagi mUDi baMdide. bhaaShe bahaLa hiDisitu.
ಕಥೆ ಚೆನ್ನಾಗಿದೆ.ವಾಸ್ತವಕ್ಕೆ ಹತ್ತಿರ... ಟೈಪಿಸುವಾಗಿನ ದೋಷಗಳನ್ನು ದೂರವಿರಿಸಿದರೆ ಇನ್ನೂ ಸಂತೋಷ :-)
ReplyDeleteಕಥೆ ತುಂಬಾ ಚೆನ್ನಾಗಿದೆ. ವಾಸ್ತವದಲ್ಲಿ ನಡೆಯುವ ವಸ್ತು ವಿಷಯದೊಂದಿಗೆ ಹೆಣ್ಣೊಬ್ಬಳು ತನ್ನ ಸ್ವಂತ ಮನಸ್ಸಿನಿಂದ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದಾಳೆ.
ReplyDeleteದೇಸಾಯಿಯವರೆ..
ReplyDeleteತುಂಬಾ ಚಂದದ ಕಥೆ...
ದ್ವಂದ್ವಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದೀರಿ...
ಯಾರದ್ದೋ ಬದುಕಿನ ಅನುಭವಗಳ ಮೇಲೆ ನಮ್ಮ ಬದುಕಿನ ನಿರ್ಧಾರವಾಗ ಬೇಕೆ ?
ಇದು ಕಾಡುತ್ತಾ ಇದೆ...
ಜೀವನದ ಜಡಕುಗಳನ್ನು ಎಳೆ ಎಳೆಯಾಗಿ ಬಿಡಿಸ ಹೊರಟ ಹೆಣ್ಣೊಬ್ಬಳ ಮನಸ್ಸನ್ನು ಸುಂದರವಾಗಿ ಚಿತ್ರಿಸಿದ್ದೀರಿ. ಎಷ್ಟೋ ಅನಿವಾರ್ಯತೆಗಳನ್ನು ಸಹಿಸಿಕೊಳ್ಳಲೇ ಬೇಕಾಗುತ್ತದೆ. ಅನುಭವ ನಮ್ಮದೇ ಅಗಲಿ, ಬೇರೆಯವರದ್ದೇ ಆಗಲಿ ಪಾಠ ಕಲಿಯಲೇ ಬೇಕಾಗುತ್ತದೆ.
ReplyDeleteದೇಸಾಯ್ ಸರ್,
ReplyDeleteಬದುಕಿನ ವಿವಿಧ ಸ್ಥಿತಿಗಳನ್ನು ಬಿಡಿಸುವ ನಿಟ್ಟಿನಲ್ಲಿ ಹೆಣ್ಣಿನ ಮನಸ್ಸನ್ನು ಅರಿತಿರುವ ರೀತಿ ತುಂಬಾ ಖುಷಿಕೊಟ್ಟಿತು.ಈ ಬದುಕು ಎಷ್ಟೊಂದು ಅನಿವಾರ್ಯ ಪ್ರಸಂಗಗಳನ್ನು ಸಹಿಸಿಕೊಳ್ಳಬೇಕೆನ್ನುವುದು ಸತ್ಯ...