ಆರ್ ಅಂಕುಶ್ ಮಿಟ್ಟೊಡಂ ನೆನೆವುದೆನ್ನ ಮನಂ ಮಮ ದುರ್ಗದ ಬೈಲಂ...!! ಇದು ನನ್ನ ಉದ್ಗಾರ..
ಇದು ಬದಲಾಗೂದಿಲ್ಲ ಬಿಡ್ರಿ ಯಾವಾಗಲೂ..!! ನಾ ಹುಬ್ಬಳ್ಳಿಯೊಳಗ ಇಲ್ಲಾ ಅನ್ನೂದು ಖರೆ,,ಆದ್ರ ಈ ಮನಸ್ಸು ಅಲ್ಲೇ ಆ
ದುರ್ಗದಬೈಲಿನ್ಯಾಗ ಹರದಾಡತದ..ಅಲ್ಲಿ ಸಿಗುವ ತಿನಿಸುಗಳ ನೆನೆನೆನೆದು ಚಪ್ಪರಿಸ್ತದ..ಅಲ್ಲಿ ಅಡ್ಡಾಡುವ
ಚಂದ ಚಂದ ಹುಡುಗ್ಯಾರನ್ನ ನೆನಸತದ..ಅಲ್ಲಿಯ ಗಣಪತಿ ಆ ಪೆಂಡಾಲಿನ ಅಲಂಕಾರ ಅದನ್ನ ನೋಡಲಿಕ್ಕೆ
ಬಂದ ಮಂದಿ.ಅವರನ್ನ (ಹುಡುಗ್ಯಾರನ್ನ) ನೋಡಲಿಕ್ಕೆ ಹೋಗೋ ನಮ್ಮ ಟೋಳಿ... ನಿಮ್ಮ ಕಿಸೆದಾಗ ಎಷ್ಟ
ರೊಕ್ಕ ಇದ್ರೇನು ಈ ನೆನಪು ತರುವ ಖುಷಿ ಈ ರೊಕ್ಕಕ್ಕ ಇಲ್ಲ ಬಿಡ್ರಿ..!!
ಗುತ್ತಲಗಲ್ಲಿ ಮತ್ತು ಈಗಿನ ಕಲಾದಗಿ ಓಣಿಯೊಳಗ ಅದ. ಒಂದು ಕೊತಂಬ್ರಿ ಸಿವುಡು ಬೇಕಂದ್ರೂ ದುರ್ಗದಬೈಲಿಗೆ
ಹೋಗಬೇಕು. ಹಂಗ ನೋಡಿದ್ರ ಅದು ನಮ್ಮ ಜೀವನಾಡಿಯಾಗಿತ್ತು. ಹಂಗ ನಮ್ಮ ಓಣಿದಾಟಿ ದುರ್ಗದಬೈಲಿಗೆ
ಹೋದ್ರ ಮೊದಲ ಸಿಗೋದು ಮೋಹನ್ ಪ್ರಿಂಟಿಂಗ್ ಪ್ರೆಸ್ಸು ಹಳೇದು ಅದರೊಳಗಿಂದ ಬರುವ ಶಬ್ಡ ,ದಾಟಿ ಮುಂದ
ಹೋದ್ರ ಪಾಚಂಗೆ ಅವ್ರ ಗಾದಿ ಅಂಗಡಿ , ಮಿರಜಕರ್ ಅವರ ಮನಿ, ಹತ್ರ ಇದ್ದ ಓಂಕಾರ್ ಫೋಟೋ ಸ್ಟುಡಿಯೋ
ದಾಟಿದ್ರ ಸಾವಳಗಿ ಅವರ ಚಪ್ಪಲಿ ಅಂಗಡಿ ಮುಂದ ಇದ್ದ ಸೇವು ಖಾರ ಮಾರುವ ಅಂಗಡಿ. ಹಂಗ ರಸ್ತೆಮ್ಯಾಲ
ಕೂತ್ಕೋತಿದ್ದ ಛತ್ರಿ ರಿಪೇರಿಯವ್ರು ಅಲ್ಲೇ ಇದ್ದ ರಿಕ್ಷಾ ಸ್ಟಾಂಡು. ಹಾಂ ನಾವು ಅಥವಾ ನಮ್ಮನಿಗೆ ಬಂದ ಬೀಗರು
ವಗೈರೆ ಅವರನ್ನ ಕಳಿಸಿಕೊಡಲು ಇಲ್ಲಿಂದ ರಿಕ್ಷಾ ತಗೊಂಡು ಬರಬೇಕು .ಹಂಗ ರಿಕ್ಷಾ ಸ್ಟಾಂಡ್ ದಾಟಿದ್ರ ಕಾಣೂದು
ದುರ್ಗದ ಬೈಲಿನ ಸರ್ಕಲ್ಲಿನ ಕಂಬ. ಇಲ್ಲಿ ಒಂದು ಲೈಟ್ ಕಂಭ ಅದಕ್ಕ ಆಸರಿಯಾಹ್=ಗಿ ವೃತ್ತಾಕಾರದಲ್ಲಿರುವ ಕಟ್ಟೆ.
ಈ ಕಟ್ಟೆ ಅದೆಷ್ಟು ಸಾರಿ ಒಡೆದಿದೆಯೋ ರಿಪೇರಿ ಕಂಡಿದೆಯೋ ಗೊತ್ತಿಲ್ಲ .ಹಾಂ ಇದು ಕೇಂದ್ರಸ್ಥಾನ ಕೂಡ
ನಾಲ್ಕುದಿಕ್ಕು ಇಲ್ಲಿ ಕೂಡತಾವ..ಹಂಗ ಮುಂದ ಹೋದ್ರ ಎಂಜಿ ಮಾರ್ಕೆಟ್ ಗೆ ಹೋಗುವ ದಾರಿ ..ದಾರಿತುಂಬ
ಹೂ ಹಣ್ನು ಹಚ್ಚಿಕೊಂಡು ಕೂತ ಜನಾ ಕೈಗಾಡಿಯೊಳಗ ಅವು ಇವು ಸಾಮಾನು ಮಾರುವ ಮಂದಿ ಮುಕರಿರುವ
ಜನಜಂಗುಳಿ...ಈ ಜಾಗ ಒಂದೊಂದು ಸೀಜನ್ನಿಗೂ ಒಂದೊಂದು ಸುಗಂಧ ಹೊರಡಸತದ. ಗುಲಾಬಿ ಅಬಾಲಿ, ಡೇರೆ,
ಸ್ಯಾವಂತಿಗಿ, ಸಂಪಿಗಿ, ಕ್ಯಾದಗಿ ಎಷ್ಟು ಥರದ ಹೂ ಅದರ ಗಂಧ ಇನ್ನೂ ಮೂಗು ತುಂಬೇದ.ಈಗ ಗಣಪತಿ ಸೀಜನ್ನು
ರಸ್ತೆ ವ್ಯಾಪಾರಿಗಳಿಗೆ ಒಕ್ಕಲೆಬ್ಬಿಸಿ ಅಲ್ಲಿ ಪೆಂಡಾಲ್ ಹಾಹುವ ತಯಾರಿ. ಅಲ್ಲಿ ಗಣಪತಿ, ಆ ಪೆಂಡಾಲಿನ ಅಲಂಕಾರ
ಜನಜನಿತ.ಹಂಗ ಎಡಕ್ಕ ಹೊರಳಿದ್ರ ಕಿಲ್ಲೆಗೆ ಹೋಗುವ ಕಿರು ರಸ್ತೆ ಎಡಬಲ ಹರಡಿಕೊಂಡ ಬೆಣ್ಣಿ ವ್ಯಾಪಾರಿಗಳು..
ಆ ಅಂಗಡಿಯಿಂದ ಹೊಮ್ಮುವ ಕಮ್ಮನೆ ವಾಸನಿ ಹಂಗ ಮುಂದ ಹೋದ್ರ ಗಾಡಿಯೊಳಗ ಹಚ್ಚಿರುವ ಮಸಾಲಿ ಸಾಮಾನು
ಒಂಥರಾ ನಂದನ ಅದು. ಕಂಬದ ಬಲಕ್ಕ ಹೊರಳಿದ್ರ ಮೈಸೂರು ಸ್ಟೋರ್ ಗೆ ಹೋಗುವ ರಸ್ತೆ ಅಕ್ಕ ಪಕ್ಕ
ಇರೋ ಅರಿವಿ ಅಂಗಡಿ ಮೂಲ್ಯಾಗಿದ್ರೂ ಸೆಳೆಯೋ ಮೊಸರಿನ ಪ್ಯಾಟಿ(ಈಗಿನ ಪೀಳಿಗಿ ಅದಕ್ಕ ಬಟರ್ ಮಾರ್ಕೆಟ್ ಅಂತಾರ್ )
.ಇದೇ ವೃತ್ತದಲ್ಲಿ ಪ್ರತಿಭಟನಾ ಆಗೋದು,ಪ್ರತಿಕೃತಿ ದಹನ ಆಗೋದು ಹಂಗ..ವಿಜಯೋತ್ಸವದ ಪಟಾಕಿ ಹಾರೋದು..
ಇನ್ನೊಂದು ಹಿಂದ ಇಲ್ಲೇ ಈ ಮೇಲಿಂದೆಲ್ಲಾ ಮಾಡಿದವ್ರು ಈಗ ಎಂಪಿ, ಮುಮಂ ಆಗ್ಯಾರ..ಹಿಂಗದ ಈ ದುರ್ಗದ ಬೈಲಿನ
ವೃತ್ತದ ಮಹಿಮಾ...!!
ತಿಳದೆ ಕೆಲವು ಊರಾಗ "ಈಟಿಂಗ್ ಸ್ಟ್ರೀಟ್" ಅವ ಅಂತ. ನನ್ನಂಥ ತಿನ್ನಾಸಬಡಕರ ಸ್ವರ್ಗ ಅಂದ್ರ ನಮ್ಮ
ದುರ್ಗದ ಬೈಲು. ಹಳೇ ತಲೆಮಾರಿನ ತಿನಸು ಹಿಡಕೊಂಡು ಈಗಿನ ತಲೆಮಾರಿನ ಹುಬ್ಬಳ್ಳಿ ಮಂದಿ ಇದಕ್ಕ ಹೌದೌದು ಅಂತಾರ.
ಸಂಜಿ ಆಗತಿದ್ದಂಗ ಇಲ್ಲಿ ಒಂದು ಬ್ಯಾರೆ ಲೋಕ ತಕ್ಕೋತದ. ಎಣ್ಣಿ ಕಮರು, ಚುಂಯ್ ಅನ್ನೋ ಕಾದ ಹಂಚಿನ ಸೀಟಿ,
ಹಿಂಡಾಲಿಯಂ ಗುಂಡ್ಯಾಗ ಸೌಟು ಹೊರಡಿಸೋ ಆ ಶಬ್ಡ ಅವನೌನ ದೇವರು ಇಲ್ಲೆ ಬಂದು ತಿಂದು ಬಿಟ್ಟಾ ಅಂದ್ರ ವಾಪಸ
ಹೋಗೂದಿಲ್ಲ ನೋಡ್ರಿ ಬೇಕಾದ್ರ...! ಏನು ಇಲ್ಲ ಇಲ್ಲಿ ಗಿರಮಿಟ್ಟು, ಮಿರಚಿ, ಭಜಿ ಶೇವು,ಪಾನಿಭೇಲ್ ಪೂರಿ ಹಂಗ ಪಾವ್ ಭಾಜಿ,
ಸಮೋಸಾ, ಕಚೋರಿ ಪೇಟಿಸ್ ಸ್ಯಾಂಡ್ ವಿಚ್ , ಇಡ್ಲಿ, ವಡಾ, ದ್ವಾಸಿ ಒಂದ ಎರಡ ...ಹುಂ ಏನ ಹೇಳಲಿ. ಇವು ರಸ್ತೆಗಾಡಿದಾದ್ರ
ಹೊಟೆಲ್ ದ್ದು ಬ್ಯಾರೇ ರುಚಿ. ಪ್ರಕಾಶ ಹೊಟೆಲ್ ನ ಪಾಪಡಿ ಚಟ್ನಿ, ಬೋಂಡಾ ಫೇಮಸ್ಸು. ಹಂಗ ಸುವರ್ಣ ಮಂದಿರದಾಗ
ಸಿಗುವ ಉಸಳಿ(ಈಗ ಆ ಹೊಟೆಲ್ ಇಲ್ಲ)ಮತ್ತು ಬಾಜೂ ಇರೋ ಕಾಮತ್ ಕೆಫೆ ಅಲ್ಲಿ ಸಿಗೋ ಕಾಫಿ ರುಚಿ ಇಡಿ ಬೆಂಗಳೂರಾಗೂ
ಇರಲಿಕ್ಕಿಲ್ಲ. ಹಳೇ ಗುರೂನ ಅಂಗಡಿ (ಭಾರತ್ ಕೆಫೆ) ದಾಗ ಸಿಗೂವ ದ್ವಾಸಿ ಮತ್ತು ಪೂರಿ ಜೋಡಿ ಕೊಡುವ ಸಿಹಿಮಿಶ್ರಿತ ಭಾಜಿ
ಹಂಗ ಮುಂದ ಹೋದ್ರ ಸವಿತಾ ಹೊಟೆಲ್ ನ ಪೂರಿಭಾಜಿ ರುಚಿ ...ಬರೆಯುವಾಗ ನೀರು ಬಂದಾವ ಬಾಯಾಗ...!!!
ಪೀಳಿಗಿಗೆ ಅದು ಮರೆತುಹೋಗಿರಬಹುದು. ಯಾವಗರೆ ನೆನಪು ಬಂದಾಗ ಹಿಂಗ ಪರವಶ ಆಗತೇನಿ..ಸ್ವಲ್ಪು ಹಿಂದ ಹಿಂದ
ಹೋಗತೇನಿ.....
ನಮಗ ದುರ್ಗದ ಬೈಲ್‍ನ್ಯಾಗ ನೆನಪಾಗೂದು ಕಬ್ಬಿನ ಹಾಲಿನ ಅಂಗಡಿ.. ಸಂತಿ ಮಾಡಿ ಸುಸ್ತಾದ ಮ್ಯಾಲೆ ನಮ್ ಅಜ್ಜ ಒಂದೊಂದು ಕಬ್ಬಿನ ಹಾಲು ಕೊಡಿಸ್ತಿದ್ದ ನಮಗ :-) ಛಂದದ ನಿಮ್ಮ ಬರಹ.. ದುರ್ಗದ ಬೈಲ್‍ನ್ಯಾಗ ಒಂದ್ ರೌಂಡ್ ಹಾಕ್ಕೊಂಡ್ ಬಂದ್ ಹಂಗಾತು..
ReplyDeleteಸರ್. ೨೦೦೪ನೇ ಇಸ್ವಿಯೊಳಗ ನನ್ನ ವಾಪಸ್ ಕರ್ಕೊಂಡ್ ಹೋದ್ರಲ್ರೀ ಸರ್ರ...! ಈಗ ಇಲ್ಲ್ ಬೆಂಗಳೂರ್ನಾಗ್ ಕುಂತ್ ಯೋಚ್ನೀ ಮಾಡಾಕತ್ತೀನಿ ಎಷ್ಟ್ ಛಲೋ ಇತ್ತ್ ನಮ್ಮ ಹುಬ್ಳೀರಿ!
ReplyDeleteನಿಮ್ಮ ಬರಹ ಓದಿ ನನ್ನ ಅಲ್ಮೀರದೊಳಗಿದ್ದ ದುರ್ಗದ ಬೈಲ್ ಪೂಜಾರಿ ಅಂಗಡಿನಾಗೆ ತಗೊಂಡ ಸೂಟ್ಕೇಸ ಒಮ್ಮೆ ಮುಟ್ಟಿ ಬಂದ್ ಈ ಕಮೆಂಟ್ ಹಾಕಕತ್ತೀನಿ ನೋಡ್ರೀ!
ಆ ನೆನಪುಗಳು ಅಂಗೆ ಅವ ಮನ್ಸಿನ ಸೂಟ್ಕೇಸನೊಳಗೆ!
Desayar,
ReplyDeletePrkash Hotel! Wah re wah!
Really Durgada Bail is the best thing on earh.
ನಿಮ್ಮ ಲೇಖನವನ್ನು ಬೇರೆಯವರ ಬಳಿ ಓದಿಸುತ್ತಾ..ನಾನು ಅರೆಗಳಿಗೆ ಕಣ್ಣು ಮುಚ್ಚಿ ಕೂತರೆ....ಅಹ..ನಿಮ್ಮ ವರ್ಣನೆ, ಆ ಪ್ರದೇಶವನ್ನು ಹಾಗು ಅದರ ವಿಶೇಷವನ್ನು ಪರಿಚಯಿಸುವ ರೀತಿ..ಹಾಗೆಯೇ ಕಣ್ಣ ಮುಂದೆ ಒಂದು ಲೋಕವನ್ನೇ ತೆರೆದಿಡುತ್ತದೆ..ಸುಂದರವಾಗಿದೆ..ಆ ತನ್ಮಯ ಲೋಕ..
ReplyDeleteಸರ್,
ReplyDeleteಮನಸು ಯಾವತ್ತು ಹಳೇದರ ಬಗ್ಗೆನ ನೆನಪು ಮಾಡುತ್ತ ಇರುತ್ತದೆ ... ನಾನು ಹುಬ್ಬಳ್ಳಿಯಲ್ಲಿ ಇದ್ದಾಗ ಒಂದೆರಡು ಸರ್ತಿ ಹೋಗಿದ್ದೆ.. ಅಲ್ಲಿ ನಜಾರಾ ಸಕ್ಕತ ಆಗಿ ಇರುತ್ತದ ...ಮುಂದೊಂದು ದಿನ ಬೆಂಗಳೂರು ಬಗ್ಗೆ ಸುಂದರ ಲೇಖನ ನಿರೀಕ್ಷಿಸುತ್ತೇನೆ ... ನಿಮ್ಮ ಪುಸ್ತಕ ತೆಗೆದುಕೊಂಡಿದ್ದೆದೇನೆ... ಓದಿ ಖಂಡಿತ ಹೇಳುವೆ ... ಆದರೆ ಷ್.. ಅಕ್ಷರ ಎಲ್ಲೋ ಕಾಣಿಸಲಿಲ್ಲ ...:)))
ಪ್ರೀತಿಯಿಂದ
-- ಗೋಪಾಲ್ ...
ಬಾಗಲಕೋಟೆಯಿಂದ ರಾತ್ರಿ ಗೋಲಗುಂಬಜ ಹಿಡ್ಕೊಂಡು ಬಂದು ಒಂದು ಸಿನಿಮಾ ನೋಡಿ, ದುರ್ಗದ ಬೈಲಿನ್ಯಾಗ ಭಜ್ಜಿ ಹೊಡದು, ಅತ್ಯಾನ ಮನಿಗೆ ಹೋಗಿ ಮಾತು ಕಥಿ ಹೊಡೆದು, ಅಲ್ಲೇ ಕ್ರಿಕೆಟ ಆಡಿ ಮತ್ತ ರಾತ್ರಿ ವಾಪಸ್ಸು ಹೋಗ್ತಿದ್ದ ದಿನಗಳು ನೆನಪಾದವು -ನಿಮ್ಮ ಲೇಖನದಿಂದ.
ReplyDelete-Anil
ದುರ್ಗದ ಬೈಲಿಬ ಮಹತ್ವದ ಬಗ್ಗೆ ನನ್ನ ಹುಬ್ಬಳ್ಳಿಯ ವಕೀಲ ಮಿತ್ರ ಪಾಸ್ತೆ ವಿವರಿಸುವಾಗ ನನ್ನ ಬಾಯಿಯಲ್ಲಿ ಜೊಲ್ಲು ಜೋಗದ ಜಲಪಾತವಾಗುವುದಿದೆ.
ReplyDeleteನಮ್ಮ ಹುಬ್ಬಳ್ಳಿ ಮಂದಿ ಏನ್ ಪುಣ್ಯ ಮಾಡಿದಾರಪ್ಪಾ ಅಂತ ಹಲುಬಿಕೊಳ್ಳುವ ಹೊತ್ತಿನಲ್ಲಿ, ಇಂತಹ ರಸವತ್ತಾದ ಬರಹ ನನಗೆ ಇನ್ನೂ ನೀರೂರಿಸಿತು. ಇಲ್ಲಿ ಕಾಲಮಾನದ ಜೊತೆ ಬೈಲನ್ನು ಗುರ್ತಿಸುವ ಕಾಯವೂ ಆಗಿದೆ.
ನಡ್ರಿ ಸವಿತಾ ಹೋಟೆಲ್ ಕಡಿ ಹೋಗೋಣ!
niv hinga hind hind hOgi durgad bail parichayaa maaDikoTTiddu khushi koDtri....
ReplyDeletedhanyavaadaari....