Saturday, October 10, 2009

ಕರಗಿದ ಮಂಜು

ಈ ಕತೆ ನಾನು ಬರೆದಿದ್ದು ೨೦೦೨-೦೩ ರ ಸುಮಾರು... .ಕರ್ಮವೀರದಲ್ಲಿ ಪ್ರಕಟವಾಗಿತ್ತು.ಪ್ರಸ್ತುತ ಕತೆಯ ಹಸ್ತಪ್ರತಿ
ಸಹ ನನ್ನಲ್ಲಿ ಉಳಿದಿಲ್ಲ.ಇನ್ನು ಕರ್ಮವೀರದ ಕಾಂಪ್ಲಿಮೆಂಟರಿ ಕಾಪಿಯಾರೋ ತಗೊಂಡು ಹೋಗಿದ್ದು ವಾಪಸ್ ಕೊಡಲಿಲ್ಲ.
ಈಗ ಈ ಕತೆ ನೆನಪಿನಾಳದಿಂದ ಹೆಕ್ಕಿ ಮತ್ತೆ ಬರೆದಿರುವೆ. ಕತೆಯ ಮೊದಲಭಾಗ ಇದೆ...ಮುಂದಿನ ಭಾಗಕ್ಕಾಗಿ ಕಾಯುವಿರಿ ತಾನೇ....

ಕರಗಿದ ಮಂಜು
-------------------
== ೧ ==


ಸ್ಕೂಲ್ ವ್ಯಾನ್ ಬರುವುದನ್ನೇ ಕಾಯುತ್ತ ಗೇಟಿನಲ್ಲಿ ನಿಂತ ಸುರೇಖಳಿಗೆ ಅದು ಬಂದಾಗ ಅದರಿಮ್ದಿಳಿದ
ಮಗಳು ಯಾಕೋ ಸರಿಇಲ್ಲ ಅನಿಸಿತು. ಮನೆಗೆ ಬಂದ ಮಗಳು ಬ್ಯಾಗ್ ಬೀಸಿ ರೂಮ್ ಸೇರಿದಾಗ ದಿಗಿಲುಗೊಂಡಳು.ಎಂದೂ ಹೀಗೆ ವರ್ತಿಸದವಳು ಇಂದೇಕೆ ..ಇಂದಿನ ಪೇಪರ್ ಚೆನ್ನಾಗಿ ಮಾಡಿರಲಿಕ್ಕಿಲ್ಲ ..ಕೊನೆ ಪೇಪರ್ ಇವತ್ತು ಎಂದು ಬೆಳಿಗ್ಗೆ ಹಾರ‍ಾಡಿ ಹೋದವಳು
ಈಗ ಈ ರೀತಿ ಸಪ್ಪಾಗಿದ್ದಾಳೆ . ದಿಗಿಲಾಯಿತು ಸುರೇಖಳಿಗೆ. ತಾನೇ ಅವಳ ಬ್ಯಾಗ್ ಎತ್ತಿಟ್ಟು ರೂಮ್ ನಲ್ಲಿ ನೋಡಿದರೆ ಕಾಟ್ ಮೇಲೆ
ಬೋರಲಾಗಿ ಮಲಗಿದ ಮಗಳು ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ. ಗಾಬರಿಗೊಂಡು ಸುರೇಖ ಮಗಳ ಹತ್ರ ಹೋಗಿ ತಲೆಗೂದಲಲ್ಲಿ ಬೆರಳಾಡಿಸುತ್ತ ನಲ್ಮೆಯಿಂದ ಮುದ್ದುಗರೆದಳು. ಸಿಕ್ಕ ಪ್ರತಿಕ್ರಿಯೆ ಮಾತ್ರ ಸುರೇಖಳನ್ನು ಬೆಚ್ಚಿ ಬೀಳಿಸಿತು.

" ನೀವು ನನ್ನ ತಿಪ್ಪ್ಯಾಗಿಂದ ಎತ್ಕೊಂಡು ಬಂದೀರಿ ಹೌದಲ್ಲೊ ನಾ ನಿಮ್ಮ ಮಗಳಲ್ಲ ಅಲ್ಲ...." ಬಿಕ್ಕುವಿಕೆಯ ನಡುವೆಯೂ ದನಿ ಸ್ಪಷ್ಟವಾಗಿತ್ತು. ಸುಮನ್ ಕಂಪಿಸುತ್ತಿದ್ದಳು. ಅತ್ತು ಅತ್ತು ಕಣ್ಣು ಕೆಂಪಾಗಿದ್ದವು. ಮಗಳ ರೂಪ ಮೇಲಾಗಿ ಅವಳು
ಆಡಿದ ಮಾತು ಸುರೇಖಳನ್ನು ದಂಗಾಗಿಸಿತು.ಹತ್ತು ವರ್ಷ ಮುಚ್ಚಿಟ್ಟ ರಹಸ್ಯ ಹೀಗೆ ಹೊರಬೀಳಬಹುದು ಅದೂ ಮಗಳೇ ಹೀಗೆ
ಪ್ರಶ್ನೆಮಾಡಿಯಾಳು ಇದು ಅವಳು ಊಹಿಸಿರಲಿಲ್ಲ. ಗಂಡ ಸುರೇಶ ಈ ಬಗ್ಗೆ ಅನೇಕಬಾರಿ ಚರ್ಚಿಸಿದ್ದ. ನಿಜ ಏನು ಮಗಳಿಗೆ ಹೇಳಿ
ಬಿಡುವ ಅವನ ವಾದ ಸುರೇಖಳಿಗೆ ಸರಿ ಅನಿಸಿರಲಿಲ್ಲ. ತಾನು ಬಚ್ಚಿಟ್ಟುಕೊಂಡಿದ್ದು ತಪ್ಪಲ್ಲ ಇದು ಅವಳ ನಿಲುವು.
ಮಗಳು ಪ್ರಶ್ನೆಕೇಳಿ ಎದೆಮೇಲೆ ಈ ರೀತಿ ಪ್ರಹಾರ ಮಾಡಬಹುದೇ..

ಸುಮನ್ ಳನ್ನು ಬಾಚಿ ತಬ್ಬಿದವಳು ತಡೆಯಲಾರದೆ ಅಳಲು ಶುರುಮಾಡಿದಳು.ತಾಯಿಯಿಂದ ಕೊಸರಿ ಬಿಡಿಸಿಕೊಂಡ ಸುಮನ್ ದೂರ
ನಿಂತಳು. ಮಗಳ ಈ ಪ್ರತಿಕ್ರಿಯೆ ಸುರೇಖಳಿಗೆ ನೋವು ತಂತು.

"ರೂಪಾ ಎಲ್ಲ ಹೇಳಿದ್ಲು ಅಕಿ ಮನ್ಯಾಗ ನಿನ್ನೆ ಇದ್ನ ಮಾತಾಡತಿದ್ರಂತ.. ಇದು ಖರೆ ಅದ ಅಲ್ಲ...?"
ಮಗಳ ಪ್ರಶ್ನೆಗೆ ಸುರೇಖಳ ಬಳಿ ಉತ್ತರ ಇರಲಿಲ್ಲ.
-----------------೦-----------------------------೦-------------------------------೦-----------------------------------------------------

ಸುರೇಶ ಬ್ಯಾಂಕಿನಲ್ಲಿ ಅಧಿಕಾರಿ.ಹೆಂಡತಿಯಿಂದ ಫೋನ ಬಂದಾಗ ಅವಳ ದನಿ ಗಾಬರಿಯಿಂದ ಕೂಡಿದ್ದು
ಏನೋ ಹೇಳಹೊರಟವಳು ತಡವರಿಸುವದನ್ನು ಕಂಡವ ತಾ ಹೊರ‍ಟುಬರುವುದಾಗಿ ಹೇಳಿದ. ಬೈಕ್ ಮೇಲೆ ಹೊರಟಾಗಲೂ ಏನಾಗಿರಬಹುದು ಎಂಬ ಯೋಚನೆ ಆಗಿತ್ತು. ಮನೆ ತಲುಪಿದಾಗ ಹಾಲ್ ನಲ್ಲಿ ಆತಂಕದಿಂದ ಕುಳಿತ ಸುರೇಖ ಕಂಡಳು.
ಇವನನ್ನು ನೋಡಿದವಳು ಇವನ ಎದೆಗೊರಗಿ ಅಳಲಿಟ್ಟಾಗ ಗಾಬರಿಗೊಂಡ ಸುರೇಶನಿಗೆ ಕಾಣಿಸಿದ್ದು ಮಗಳ ಬ್ಯಾಗು ಅಂದರೆ
ಮಗಳು ಮನೆಯಲ್ಲಿದ್ದಾಳೆ ಹೆಂಡತಿಯ ಮುಖ ಎತ್ತಿ ಹಣೆಗೆ ಮುತ್ತು ನೀಡಿದವ ಏನಾಯಿತೆಂದು ಕೇಳಿದ. ಹೆಂಡತಿಯ ಅಳುವೇ ಉತ್ತರವಾಗಿತ್ತು.
ನಿಧಾನವಾಗಿ ಸುರೇಖ ಎಲ್ಲ ಹೇಳಿದಳು. ಸುರೇಶ ಶಾಂತವಾಗಿ ಕೇಳಿಸಿಕೊಂಡ. ಒಂದಿಲ್ಲೊಂದು ದಿನ ಈ ಸ್ಥಿತಿ ಎದುರಾಗಬಹುದು ಇದು ಅವ ಅಂದಾಜಿಸಿದ್ದ.
ಹೆಂಡತಿಗೂ ತಿಳಿ ಹೇಳುವ ಪ್ರಯತ್ನ ಮಾಡಿದ್ದ. ಸುರೇಖ ಭಾವುಕಳಾಗುತ್ತಿದ್ದಳು ಏನೋ ಗಾಬರಿ ಅವಳಲ್ಲಿರುತ್ತಿತ್ತು.ಅವಳ ಹೆದರಿಕೆಯ ಕಾರಣ ಸುರೇಶನಿಗೂ
ಗೊತ್ತಿತ್ತು. ಹಾಗಂತ ಅವ ಪಲಾಯನವಾದಿಯಾಗಲು ಅವನಿಗೆ ಇಷ್ಟವಿರಲಿಲ್ಲ. ಬದಲು ಮಗಳಿಗೆ ತಮ್ಮಿಂದಲೇ ನಿಜ ಸಂಗತಿ ಗೊತ್ತಾಗಬೇಕು ಬೇರೆ ಯಾರಿಂದಾದರೂ
ಅವಳಿಗೆ ತಿಳಿಯುವುದು ಅವನಿಗೆ ಬೇಡವಾಗಿತ್ತು.ಈಗ ಮಗಳಿಗೆ ಗೊತ್ತಾಗಿ ಹೋಗಿದೆ ಮುಚ್ಚಿಡುವುದರಲ್ಲಿ ಲಾಭವಿಲ್ಲ ಆದರೆ ಸುಮನ್ ಳ ಎಳೆ ಮನಸ್ಸಿನ ಮೇಲೆ
ಇದು ಯಾವ ರೀತಿ ಪರಿಣಾಮ ಬೀರಬಹುದು. ಇದು ಕಸಿವಿಸಿ ಅವನದು. ಅಳುಕುತ್ತಲೇ ಸುಮನ್ ಇದ್ದ ರೂಮಿಗೆ ಹೋದ.....

--------------------------------೦------------------------------------೦--------------------------------------೦----------------------

ಮದುವೆಯಾಗಿ ನಾಲ್ಕು ವರ್ಷಕಳೆದಿದ್ದವು, ಸುರೇಖಳಿಗಿಂತಲೂ ಅವಳ ತಾಯಿ ಆತಂಕಕ್ಕೆ ಒಳಗಾಗಿದ್ದರು. ಅವರ ಒತ್ತಾಯಕ್ಕೆ ಮಣಿದು ಸುರೇಖ
ಡಾಕ್ಟರ್ ಕಡೆ ಹೋಗಿದ್ದು.ಟೆಸ್ಟ ಎಲ್ಲ ಮುಗಿಸಿದ ಡಾಕ್ಟರು ಮರುದಿನ ಗಂಡನ ಜೊತೆ ಬರಲಿಕ್ಕೆ ಹೇಳಿದರು.ಮರುದಿನ ಸುರೇಶ ಹಾಗೂ ಸುರೇಖಳ ಮುಂದೆ ಬಿಚ್ಚಿಟ್ಟ
ಸಂಗತಿ ಸುಲಭವಾಗಿ ಜೀರ್ಣಿಸಲಾರದ್ದು. ಸುರೇಖಳ ಗರ್ಭಾಶಯಮಗುವನ್ನು ಹೆರಲು ಸಮರ್ಥವಾಗಿರಲಿಲ್ಲ. ಮಗು ಆಗುವ ಚಾನ್ಸು ಬಹಳ ಕಡಿಮೆ ಎಂದಾಗ ದಂಪತಿಗಳು
ಕಂಗಾಲಾದರು. ಬೇರೆ ಡಾಕ್ಟರ್ ಬಳಿಯೂ ಇದೇ ಅಭಿಪ್ರಾಯ ವ್ಯಕ್ತವಾದಾಗ ಸುರೇಖ ಹೌಹಾರಿದಳು. ತನ್ನ ಮಡಿಲು ಮಗು ಇಲ್ಲದೆ ಬರಿದು ಈ ವಾಸ್ತವ ಅವಳಿಗೆ
ಆಘಾತ ತಂದಿತ್ತು. ಸುರೇಶನಿಗೂ ಬೇಸರ ಆಗಿತ್ತು ಹಾಗಂತ ಹೆಂಡತಿ ಎದಿರು ಅಧೀರತನ ತೋರುವಹಾಗಿರಲಿಲ್ಲ. ಸುರೇಖ ಗಂಡನಿಗೆ ಇನ್ನೊಂದು ಮದುವೆಯಾಗುವ ಸಲಹೆ
ನೀಡಿದಳು.ಸುರೇಶ ನಿರಾಕರಿಸಿದ. ಹೆಂಡತಿಗೆ ಬುದ್ಧಿಹೇಳಿದ.ಸಮಸ್ಯೆ ಇದೆ ಅದನ್ನು ಎದುರಿಸುವ ಇದು ಅವನ ಆಶಾವಾದ.

ಸುರೇಖ ದೇವರಿಗೆಲ್ಲ ಹರಕೆ ಹೊತ್ತಿದ್ದಳು. ಸುರೇಶ ಹೆಂಡತಿಯ ಒತ್ತಾಯಕ್ಕೆ ಪೂಜೆ ಆರತಿ ಹೀಗೆ ಭಾಗಿ ಆಗುತ್ತಿದ್ದ. ಆದರೆ ಅವನ ಮನದಲ್ಲಿ ಬೇರೆ ಯೋಚನೆ
ಸಾಗಿತ್ತು. ಈ ನಿರ್ಧಾರ ಅವನೊಬ್ಬನೇ ತೆಗೆದುಕೊಳ್ಳುವ ಹಾಗಿರಲಿಲ್ಲ. ಸುರೇಖ ಆ ನಿರ್ಧಾರಕ್ಕೆ ಒಪ್ಪುತ್ತಾಳೊ ಇಲ್ಲವೊ ಅವನಿಗೆ ಖಾತ್ರಿ ಇರಲಿಲ್ಲ. ಸುರೇಶ ಮಗುವನ್ನು ದತ್ತು
ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದ. ಅನಾಥಾಲಯದಿಂದಲೆ ದತ್ತು ತೆಗೆದುಕೊಳ್ಳುವುದು ಇದು ಅವ ತಗೊಂಡ ನಿರ್ಧಾರ. ತನ್ನ ನಿರ್ಧಾರ ಹೆಂಡತಿಗೆ ಹೇಳಿದ. ಸುರೇಖ ಹೌಹಾರಿದಳು.
ಗಂಡ ಈ ರೀತಿಯಾಗಿ ವಿಚಾರ ಮಾಡಬಹುದು ಇದು ಅವಳಿಗೆ ಅಪಥ್ಯ ವಾಗಿತ್ತು. ಬಲವಾಗಿ ವಿರೋಧಿಸಿದಳು. ಸುರೇಶ ಹೆಚ್ಚಿಗೆ ಬಲವಂತ ಮಾಡಲಿಲ್ಲ. ಎರಡು ದಿನ ಸುಮ್ಮನಿದ್ದ
ಸುರೇಖ ಗಂಡನ ಮಾತಿಗೆ ಹುಂಗುಟ್ಟಿದಾಗ ಸ್ವತಃ ಸುರೇಶನಿಗೆ ಆಶ್ಚರ್ಯವಾಗಿತ್ತು. ಹೆಂಡತಿಗೆ ಮುಂದೆ ಬರಲಿರುವ ಚಾಲೆಂಜ್ ಗಳ ಬಗ್ಗೆ ತಿಳಿಹೇಳಿದ. ಅವಳ ನಿರ್ಧಾರ ಪಕ್ಕಾ ಅನಿಸಿದಾಗ
ತಾ ಈ ಮೊದಲೇ ಗುರ್ತುಮಾಡಿಕೊಂಡ ಸ್ವಯಂಸೇವಾ ಸಂಸ್ಥಾಗೆ ಪತ್ರ ಹಾಕಿದ. ಗಂಡ ಹೆಂಡತಿ ತಗೊಂಡ ಈ ನಿರ್ಧಾರ ಇಬ್ಬರ ಮನೆತನದ ಹಿರಿತಲೆಗಳಿಗೆ ಹಿಡಿಸಿರಲಿಲ್ಲ.
ಅದರಲ್ಲಿ ಸುರೇಶನ ಸೋದರಮಾವ ತನ್ನ ಮೂರು ಮಕ್ಕಳ ಪೈಕಿ ಒಬ್ಬನನ್ನು ದತ್ತು ತೆಗೆದುಕೊಳ್ಳಲು ದುಂಬಾಲು ಬಿದ್ದ. ಸುರೇಶ ನಿರ್ಣಯ ತಗೊಂಡಾಗಿತ್ತು. ಬಂಧು ಬಳಗ
ಇವರಿಗೆ ಮುಂದಿನ ಪರಿಣಾಮಗಳ ಬಗ್ಗೆ ಎಚ್ಚರಿಸಿದರು...ಹೆದರಿಸಿದರು. ಸುರೇಖ ವಿಚಲಿತಳಾದರೂ ಗಂಡನ ಪ್ರಶಾಂತ ಮುಖ ನೋಡಿ ಧೈರ್ಯ ತೆಗೆದುಕೊಳ್ಳುತ್ತಿದ್ದಳು.
ಆ ಸಂಸ್ಥೆಯ ವಿಚಾರಣೆಗಳು, ನಿಯಮಾವಳಿಗಳು ಪತ್ರವ್ಯವಹಾರ ಹೀಗೆ ಒಂದು ತಿಂಗಳು ಕಳೆಯಿತು. ಸುರೇಖಳಿಗೆ ಚಡಪಡಿಕೆ ಹೆಚ್ಚಾಯಿತು. ಅಂತೂ ಆ ಸಂಸ್ಥೆಯಿಂದ ಇವರಿಗೆ
ಬೇಕಾದ ಹಾಗೂ ಒಪ್ಪುವಂತಹ ಹೆಣ್ಣುಮಗು ಇದೆ ಬಂದು ನೋಡಿ ಎಂದು ಪತ್ರ ಬಂದಾಗ ಗಂಡ ಹೆಂಡತಿ ನಿರಾಳವಾದರು. ಬೆಂಗಳೂರಿಗೆ ಹೊರಡಲು ಅಣಿಯಾದರು.

ಆ ದಿನ ದಂಪತಿಗಳಿಬ್ಬರೂ ಮರೆಯುವ ಹಾಗಿಲ್ಲ.ಸಂಸ್ಥೆಯಲ್ಲಿ ಕಾಲಿಟ್ಟಾಗ ಇದ್ದ ದುಗುಡ ಅಲ್ಲಿನ
ಸಿಬ್ಬಂದಿಯ ಪ್ರೀತಿಯ ಮಾತಿನಿಂದ ಮಾಯವಾಗಿತ್ತು. ಸ್ವಲ್ಪ ಹೊತ್ತಿಗೆ ಬೆಚ್ಚನೆ ಅರಿವೆಯಲ್ಲಿ ಸುತ್ತಿದ ಮಗುವನ್ನು ತೆಗೆದುಕೊಂಡು
ಬಂದ ಆಯಾ ಸುರೇಖಳ ಕೈಯಲ್ಲಿಟ್ಟಾಗ ಸುರೇಖ ಮೂಕವಾದಳು. ಮುಷ್ಟಿಬಿಗಿದ ಪುಟ್ಟಕೈಗಳು..ಪುಟ್ಟ ಪಾದಗಳು..
ಒಂದು ತಿಂಗಳೂ ತುಂಬಿರದಿದ್ದ ಕೂಸು. ಅದರ ಅನುಭೂತಿಯಲ್ಲಿ ತೇಲಿಹೋದಳವಳು.ಮೆಲ್ಲಗೆ ಕಣ್ಣು ತೆರೆದವಳು ಬೆಳಕಿನ ಪ್ರಖರತೆಗೆ ಮತ್ತೆ ಕಣ್ಣು ಮುಚ್ಚಿದಳು.ಎಲ್ಲ ಫಾರ್ಮಾಲಿಟಿ ಮುಗಿದು ಮಗುವನ್ನು ಎದೆಗಾನಿಸಿಕೊಂಡು ದಂಪತಿ ಹೊರನಡೆದರು.
ಮುಂದಿನ ದಿನಗಳು ಅವಳ ಲಾಲನೆಯಲ್ಲಿ ಕಳೆಯಿತು. ನಾಮಕರಣ,ಮೊದಲ ವರ್ಷದ ಹುಟ್ಟುಹಬ್ಬ ಹೀಗೆ ಸಂಭ್ರಮದಲ್ಲಿ ದಿನ
ಕಳೆದುದೇ ತಿಳಿಯಲಿಲ್ಲ. .ನೋದುತ್ತಿದ್ದಂತೆ ಸುಮನ್ ಬೆಳೆದು ಶಾಲೆಗೆ ಹೊರಟಳು. ಸುರೇಶನಿಗೆ ದಿಗಿಲು ಸತ್ಯಸಂಗತಿ ಮಗಳಿಗೆ ತಿಳಿಹೇಳಬೇಕು ..ಆದರೆ ಇದಕ್ಕೆ ಹೆಂಡತಿಯ ಪ್ರಬಲ ವಿರೋಧ ಎದುರಾಯಿತು.ಸುರೇಖ ಸುಮನ್ ಬಗ್ಗೆ ಪಾಸೆಸಿವ್ ಆಗಿದ್ದಳು.
ಅವಳಿಗೆ ಚಿಕ್ಕ ನೋವಾದರೂ ಇವಳಿಗೆ ತಳಮಳವಾಗುತ್ತಿತ್ತು.
--------------------೦------------------------------೦-----------------------------------೦---------------------------------------

ಮಗಳ ಜೊಂಪುಗೂದಲಲ್ಲಿ ಬೆರ‍ಳಾಡಿಸುತ್ತ ಸುರೇಶ ಕುಳಿತಿದ್ದ. ಅತ್ತು ಅತ್ತು ಸುಸ್ತಾಗಿ ಸುಮನ್ ಮಲಗಿ
ಬಿಟ್ಟಿದ್ದಳು. ಸುರೇಖಳೂ ನಿದ್ದೆ ಹೋಗಿದ್ದಳು.ಸುರೇಶ ಯೋಚಿಸುತ್ತಿದ್ದ. ಹೇಗೆ ಈ ಸಮಸ್ಯೆ ಪರಿಹರಿಸುವುದು ಮಗಳ ಮುಗ್ಧ
ಮನಸ್ಸಿಗೆ ನೋವಾಗಿದೆ ನಿಜ ಆದರೆ ವಾಸ್ತವಕ್ಕೆ ಬೆನ್ನು ಮಾಡಿ ಅದೆಷ್ಟು ದಿನ ಇರೋದು. ಸತ್ಯ ಅವಳಿಗೆ ತಮ್ಮಿಂದಲೆ ಗೊತ್ತಾಗಿದ್ದರೆ ಅದರ ಪರಿಣಾಮ ಬೇರೆ ಆಗಿರುತ್ತಿತ್ತು ಆದರೆ ಬೇರೆಯವರಿಂದ ತಿಳಿಯೋದು ಆಘಾತ ತಂದಿದೆ .... ಯೋಚಿಸುತ್ತ
ಸುರೇಶ ಒಂದು ನಿರ್ಧಾರಕ್ಕೆ ಬಂದ. ನಿರಾಳವಾಗಿ ಮಲಗಿದ.

12 comments:

  1. ಉಮೇಶ,
    ಇತ್ತೀಚಿನ ವಾಸ್ತವ ಜೀವನಕ್ಕೆ ತೀರ ಹತ್ತಿರವಾದ ಕತೆಯೊಂದನ್ನು ಎತ್ತಿಕೊಂಡಿದ್ದೀರಿ.ಇಂತಹ ಎರಡು ಕೇಸುಗಳನ್ನು ನಾನು ಕಣ್ಣಾರೆ ನೋಡುತ್ತಿದ್ದೇನೆ.
    ಕತೆಯನ್ನು ಹೇಗೆ ಮುಂದೊಯ್ಯುತ್ತೀರಿ ಎನ್ನುವ ಕುತೂಹಲ ನನಗಿದೆ.ಯಾಕೆಂದರೆ ಕತೆಯಲ್ಲಿಯ ಪಾತ್ರಗಳ ದುಗುಡ ದುಮ್ಮಾನಗಳು ಓದುಗನಿಗೂ ಹಾಗು ಕತೆಗಾರನಿಗೂ ಇರುತ್ತವೆ.
    ಆದುದರಿಂದ ಶುಭ ಹಾರೈಸುತ್ತೇನೆ.

    ReplyDelete
  2. ಮು೦ದಿನ ಭಾಗಕ್ಕೆ ತೀವ್ರ ಕುತೂಹಲದಿ೦ದ ಕಾಯ್ತಾ ಇದ್ದೇನೆ. ಚೆನ್ನಾಗಿದೆ ಲೇಖನ.

    ReplyDelete
  3. ಉಮೇಶ ಅವರೇ,
    Very Interesting...
    Nice Article..
    Waiting for next episode...

    ReplyDelete
  4. ಉಮೇಶ್ ಸರ್,

    ನೀವು ೨೦೦೩ ರಲ್ಲೇ ಕತೆ ಬರೆದಿರಲ್ಲ...ಮತ್ಯಾಕೆ ನಿಲ್ಲಿಸಿದಿರಿ? ನಿಮ್ಮ ಕತೆ ಕುತೂಹಲದಿಂದ ಓದಿಸಿಕೊಂಡು ಹೋಗುತ್ತೆ. ಮುಂದಿನ ಭಾಗಕ್ಕೆ ಕಾಯುತ್ತಿದ್ದೇನೆ..

    ReplyDelete
  5. ಕಾಕಾ ಇದುಮೊದಲೇ ಸಿಕ್ಕ ಸೂತ್ರ. ಆ ಕತಿ ಮುಕ್ತಾಯ ಅದ ತಯಾರಿ ನಡದದ...

    ReplyDelete
  6. ಸೀತಾರಾಮ್ ಅವರಿಗೆ ಸುಸ್ವಾಗತ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  7. ಶಿವು ಧನ್ಯವಾದಗಳು...

    ReplyDelete
  8. ಗೋಪಾಲ್ ಧನ್ಯವಾದಗಳು.....

    ReplyDelete
  9. ಸುಘೋಷ ಅವರಿಗೆ ಸುಸ್ವಾಗತ ಆಗಾಗ ಬರ್ಕೊತ ಇರ್ರಿ

    ReplyDelete
  10. ಶಿವು ನಾ ೨೦೦೩ ದಾಗ ಈ ಕತಿ ಬರೆದೆ ಅದೂ ಕರ್ಮವೀರದಾಗ ಪ್ರಕಟನೂ ಆತು. ಒಟ್ಟು ಮೂರು ಕತಿ ಇದುವರೆಗೆ ಬೆಳಕು
    ಕಂಡಿವೆ .ಮಧ್ಯೆ ಆಸಕ್ತಿ ನಶಿಸಿತ್ತು ಈಗ ಮತ್ತೆ ಚಿಗುರುತ್ತಿದೆ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

    ReplyDelete