Sunday, October 14, 2012

ಅವಳೇ..ಇವಳು ...ಮತ್ತೆ ಬಂದಳು..


ಹೌದು ಅವಳನ್ನು ಇವತ್ತು ಮತ್ತೆ ಕಂಡೆ..ಅದೆಷ್ಟೋ ಯುಗಗಳನಂತರ..
ಬಾಳನದಿಯಲ್ಲಿ ಅದೆಷ್ಟು ನೀರು ಹರಿದುಹೋಗಿದೆ..ಅದೆಷ್ಟು ನೆಲ ಜಲ ಬೆಳಗಿದೆ..ಎಲ್ಲೋ ಒಂಟಿ ಮರ
ಬಂಜರು ಭೂಮಿ ನದಿನೀರನುಂಡು ನಳನಳಸಿವೆ..ನನ್ನ ಬದುಕಲ್ಲೂ ಅನೇಕ ಬದಲಾವಣೆ..
ಅವಳ ಬಾಳಲ್ಲೂ ಅನೇಕ ಮಾರ್ಪಾಡುಗಳು..ನಾ ಪತಿಯಾಗಿ ನಂತರ ಅಪ್ಪನಾಗಿ ಬದಲಾಗಿಹೆ..
ಅವಳೂ ಪತ್ನಿಯಾಗಿ ನಂತರ ತಾಯಿಯಾಗಿ ಪ್ರಮೋಶನ್ ತಗೊಂಡಿದ್ದಾಳೆ..ಆದರೆ ಮತ್ತು ಇಂದು ಅವಳನ್ನು
ನೋಡಿದಾಗ ಈ ಸ್ಥಾನಪಲ್ಲಟ ಗಮನಕ್ಕೇ ಬರಲೇ ಇಲ್ಲ ಎಂದು ಹೇಳಿದರೆ ತಪ್ಪಾಗುತ್ತದೆ...
ಮೊದಲಿಂದಲೂ ಅಷ್ಟೇ..ದೂರದಿಂದ ಮಾತ್ರ ಅವಳನ್ನು ನೋಡಲು ಸಾಧ್ಯ ಆಗಿದ್ದು ..ಕನಸ ಕಾಣುವುದರಲ್ಲಿಯೇ
ಆನಂದ ಹೊಂದಿದ್ದು ನಮ್ಮಿಬ್ಬರ ನಡುವೆ ಅಗಾಧ ನದಿಯಿತ್ತು ಅದರ ವಿಸ್ತಾರ ಹರಿವು ದೊಡ್ಡದಿತ್ತು..
ಅದ ದಾಟಲು ಈಸಿ ಆ ದಡಸೇರಲು ನನಗೆಂದೂ ಸಾಧ್ಯಆಗಲೇ ಇಲ್ಲ..





ಇಂದೂ ಹಾಗೆಯೇ ಅವಳು ಹೊಸ ರೂಪದಲ್ಲಿ, ಮೊದಲಿನಂತೆ ಮಾದಕವಾಗಿರದೆ..ಪ್ರೌಢಿಮೆಯಿಂದ
ಆ ದಡದಲ್ಲಿ ನಡೆಯುತಿರಲು ದಂಗಾಗಿ ಹೋದೆ,,ಇವಳು ಅವಳೇನಾ ಅಥವಾ ಅವಳ ಪ್ರತಿರೂಪನಾ ಅಂತ
ದಿಗಿಲಾದೆ. ಮುಖದಲ್ಲಿ ಸ್ವಲ್ಪ ವಯಸ್ಸಿನ ನೆರಳಿದೆ..ಆದರೆ ಆ ಕಣ್ಣುಗಳು ಉಫ್ ಅವು ಎಂದೂ ಬದಲಾಗಲಾರವೇನೋ...
ಆ ಕಣ್ಣುಗಳ ಹೊಳಪು ಇನ್ನೂ ಬದಲಾಗಿಯೇ ಇಲ್ಲ..ಕವಿತೆ ಏನು ಮಹಾಕಾವ್ಯನೇ ಬರೆಯುವ ಶಕ್ತಿ ಆ ಕಣ್ಣುಗಳದು...
ನನ್ನ ಹೆಂಡತಿಯೂ ಒಪ್ಪಿದಳು ಈ ವಿಷಯಕ್ಕೆ..ನಿಜ ಇಂದು ಅವಳ ಮತ್ತೆ ನೋಡಿದಾಗ ಹೆಂಡತಿ ಜೊತೆಗೇ ಇದ್ದಳು..!!
ಪೀಠಿಕೆ ಜಾಸ್ತಿ ಆಯ್ತಾ..ನಾ ಇಂದು ಮತ್ತೆ ನೋಡಿದೆ, ಶ್ರಿದೇವಿಯನ್ನು ತೆರೆಯ ಮೇಲೆ ಎಷ್ಟು ವರ್ಷನೆನಪಿಲ್ಲ
"ಲಮ್ಹೆ" ಇರಬಹುದೇನೋ ಅವಳನ್ನು ನಾನು ಸಿನೆಮಾದಲ್ಲಿ ಕೊನೆಯಬಾರಿ ನೋಡಿದ್ದು. ಇಂದು "ಇಂಗ್ಲೀಶ್ ವಿಂಗ್ಲೀಶ್"
ಅವಳು ಬದಲಾಗಿದ್ದಾಳೆ ಆ ಸೆಡ್ಡುಹೊಡೆದು ನಿಲ್ಲಿಸಿದ ಮಾದಕ ಸೌಂದರ್ಯ ಇಲ್ಲ..ಆ ಸೊಂಟದ ಮುಲಿಕಿಲ್ಲ..ಆ ಕಿಲಕಿಲ
ನಗೆ ಇಲ್ಲ ..ಈಗವಳು ಪ್ರಶಾಂತನದಿ.ಮುಖದಲ್ಲಿ ಮಾತ್ರವಲ್ಲ ಅಭಿನಯದಲ್ಲೂ ಮಾಗಿದ್ದಾಳೆ. ಅವಳ ಈ ಹಿರಿತನ
ಇನ್ನೊಂದು ಹೊಸ ಅನುಭವ ಕೊಡುತ್ತದೆ. ಆ ಅನುಭವಕ್ಕೆ ಅದರದೇ ಆದ ಗತ್ತಿದೆ ಖುಷಿಇದೆ.
ಅನೇಕ ಚಿತ್ರಗಳು ಹಿಂದಿಸಿನೇಮಾಕ್ಕೆ ಅವಳದು ಎರಡನೇ ಎಂಟ್ರಿ..ತೆಲುಗು ಫಿಲ್ಮು ರಿಮೇಕು "ಹಿಮ್ಮತ್ ವಾಲಾ"
ಇವಳ ಎರಡುಪಟ್ಟು ವಯಸ್ಸಿನ ಜಿತೇಂದ್ರ ನಾಯಕ..ಹಾಗೆ ನೋಡಿದ್ರೆ ಆಗೆಲ್ಲ ಅದೇ ರೂಢಿಗತ..ಅಕ್ಕಿನೇನಿ, ಎನ್ ಟಿ ಆರ್ ಹೀಗೆ
ಎಲ್ಲವಯಸ್ಸಾದವರ ಜೊತೆ ಸೊಂಟ ಕುಲುಕಿಸುವ ಅನಿವಾರ್ಯತೆ ಅವಳಿಗೆ. ಸಾಲು ಸಾಲು ಹಿಟ್ ಚಿತ್ರಗಳು..
"ಮವಾಲಿ", "ತೋಫಾ","ಜಸ್ಟಿಸ್ ಚೌಧರಿ.." ಉಫ್ ಎಲ್ಲದರಲ್ಲೂ ಚೆಲ್ಲು ಚೆಲ್ಲು ನಗುವ ,ಕುಣಿಯುವ ಕುಣಿಸುವ ಪಾತ್ರಗಳು.
ಹಿಂದಿ ಸಿನೆಮಾರಂಗದ ರಾಣಿಯಾಗಿಬಿಟ್ಲು..ಈ ನಡುವೆ ಅದ್ಭುತವಾಗಿ ನಟಿಸಿದ "ಸದ್ಮಾ" ಬಂತು ಜನ ಅದರಲ್ಲಿ "ಆ" ಶ್ರಿದೇವಿಯನ್ನು
ಹುಡುಕುತ್ತಿದ್ದರು..ಚಿತ್ರ ಫ್ಲಾಪು. ಶೇಖರ್ ಕಪೂರ್ ಮಿ.ಇಂಡಿಯಾದಲ್ಲಿ ಹವಾ ಹ್ವಾಯಿ ಮಾಡಿಸಿದ..ಶ್ರಿದೇವಿ ಹವಾ ಬಲವಾಗಿ ಬೀಸಿತ್ತು.
ಚಾಂದನಿ ಬಂತು..ಯಶ್ ಚೋಪ್ರಾ ಇವಳಿಗಾಗಿಯೆ ಚಿತ್ರ ಮಾಡಿದಂತೆ..ಆ ಚಿತ್ರ ಹುಚ್ಚೆಬ್ಬಿಸಿತು..ಸ್ವಿಸ್ ನ ಆ ಹಿಮತುಂಬಿದ ಪರ್ವತ ಮಾಲೆ..
ನೀಲಿ ಸೀರೆ ಉಟ್ಟು ಬಳಕುತ್ತ "ತೇರೆ ಮೇರೆ ಹೋಟೊಂಪೆ ಮಿಠೆ ಮಿಠೆ ಗೀತ್ ಮಿತವಾ.."ಎಂದಾಗ ನನ್ನ ಮನಸ್ಸು ಹುಚ್ಚೆದ್ದಿತ್ತು.
"ಕ್ಷಣಕ್ಷಣಂ" ತೆಲುಗು ಚಿತ್ರ ಅದರಲ್ಲಿ ಅವಳು ಕಂಡು ಬಂದ ರೀತಿ .."ದೇವಡಾ ದೇವಡಾ"ಎಂದು ಅವಳು ತಡಬಡಾಯಿಸಿದ ರೀತಿ ಮರೆಯಲುಂಟೇ?
ಇಂದಿನಚಿತ್ರದಲ್ಲಿ ಅವಳದು ಸೀದಾ ಸಾದಾ ಪಾತ್ರ, ಪಾತ್ರ ಆವಾಹಿಸಿಕೊಂಡಿದ್ದಾಳೆ. ಶಶಿ ಗೋಡಬೋಲೆಯಾಗಿ ಕಾಣುತ್ತಾಳೆ ವಿನಃ
ಹಿಂದಿನ ಮೆರೆದಾಟದ ಯಾವ ಕುರುಹೂ ಇಲ್ಲ. ಅದ್ಭುತ ಚಿತ್ರ ನಮ್ಮ ನಿಮ್ಮ ಮನೆಯಲ್ಲಿ ನಡೆಯುವ ಕತೆ ಇದು.ಯಾವ ಗದ್ದಲವಿಲ್ಲದೆ
ಘೋಷಣೆ ಇಲ್ಲದೆಯೇ ಒಂದು ಉತ್ತಮ ಸಂದೇಶ ನೀಡಿದ್ದಾಳೆ--ನಿರ್ದೇಶಕಿ--ಗೌರಿಶಿಂಧೆ--. ಚಿತ್ರ ನನ್ನನ್ನು ಗೆದ್ದಿದೆ..ಅದರಲ್ಲಿ ಅವಳಿದ್ದಾಳೆ ಇದುಮಾತ್ರ
ಕಾರಣವಲ್ಲ ಇನ್ನೂ ಏನೋ....ಮತ್ತೆ ಮೋಡಿಮಾಡಿದಳವಳು..ಇಷ್ಟು ದಿನದ ಮೇಲೂ ಎಂದಿನಂತೆ ಸಲೀಸಾಗಿ.

3 comments:

  1. ನಿಜ ಉಮೇಶ್ ಭಾಯ್...ಶ್ರೀದೇವಿ ಒಳ್ಲೆಯ ನಟಿ ಎನ್ನುವುದಕ್ಕೆ ಇನ್ನೊಂದು ಪುರಾವೆ ಇದು... ಯೌವನದ ಯಾವುದೇ ಗಿಮಿಕ್ ಇಲ್ಲದೇ ಸ್ವಚ್ಛ ಕಲಾವಂತಿಕೆಯ ಪ್ರೌಢಿಮೆ ಮೆರೆದ ಪಾತ್ರಕ್ಕೆ ಪೂರ್ಣ ನ್ಯಾಯ ಕೊಡಿಸಿರುವುದು ಎದ್ದು ಕಾಣುತ್ತೆ.

    ReplyDelete
  2. ಶ್ರೀದೇವಿ ಶ್ರೇಷ್ಠ ನಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೆಂಡತಿಯ ಜೊತೆಗೇ ಅವಳನ್ನು ಮತ್ತೊಮ್ಮೆ ಮೆಚ್ಚುವುದು ನಿಮ್ಮ ಪ್ರೌಢಿಮೆಯನ್ನು (-ಅವಳ ಪ್ರೌಢಿಮೆಯಂತೆಯೆ-)ತೋರಿಸುತ್ತದೆ, ಅಲ್ಲವೆ!

    ReplyDelete
  3. ಶ್ರೀದೇವಿಯ ಸದ್ಮಾ, ತೊಫಾ, ಕ್ಷಣ ಕ್ಷಣಂ...ಕನ್ನಡ ಭಕ್ತ ಕುಂಬಾರ, ಹೊಸಿಲು ಮೆಟ್ಟಿದ ಹೆಣ್ಣು..ಈ ಚಿತ್ರಗಳಲ್ಲಿಯ ಮುಗ್ಧ ಅಭಿನಯ, ಚುರುಕು ಮಾತುಗಳು ಇಷ್ಟವಾಗಿದ್ದವು..ರಿ ಎಂಟ್ರಿ ಎನ್ನುವ ಹುಚ್ಚುಹೊಳೆಯಲ್ಲಿ ಇತ್ತೀಚಿನ ಕೆಲವು ನಾಯಕಿಯರು...ತಮ್ಮ (ಗಬ್ಬೆದ್ದ) ದೇಹ ಸಿರಿ ಪ್ರದರ್ಶಿಸಿವುದು ಮಾಮೂಲು (ಉದಾ: ರಾಣಿ ಇನ್ ಅಯ್ಯಾ)..ಅಂತಹುದರಲ್ಲಿ ತನ್ನ ಭಾವುಕ ಅಭಿನಯದ ಮೂಲಕ ಮನಸನ್ನು ತೆರೆದಿಟ್ಟಿರುವುದು..ಈಕೆ ಕೊಂಚ ಭಿನ್ನ ಅನ್ನುವ ಜಾಡನ್ನು ತುಳಿದ್ದಿದ್ದು ಸಂತಸ ಸಂಗತಿ...ಲೇಖನ ಸೊಗಸಾಗಿದೆ ಉಮೇಶ್ ಸರ್

    ReplyDelete