Saturday, September 22, 2012

ಹೀಗೊಂದು ಅಭಿಮಾನದ ಪತ್ರ..


ಇದು ನನ್ನ ದುರ್ಗದ ಬೈಲಿನ ಲೇಖನಕ್ಕೆ ಉತ್ತರವಾಗಿ ನನ್ನ ಗುರುದ್ರೋಣಾಚಾರ್ಯ ಶ್ರೀ ಗೋಪಾಲ ವಾಜಪೇಯಿ ಅವರು ಬರೆದು ಕಳಿಸಿದ ಮೇಲ್ ಇದು.
ನನ್ನ ನೆನಪುಗಳ ಜೊತೆ ತಮ್ಮ ಅನುಭವಗಳ, ನೆನಪುಗಳನ್ನು ಹಂಚಿಕೊಂಡಿದ್ದು ನನಗೆ ಬಹಳ ಖುಷಿಆಗಿದೆ...ಅವರು ನೋಡಿದ ಅಥವಾ ನಾನು ನೋಡಿದ
ಹುಬ್ಬಳ್ಳಿ ಈಗ ಇಲ್ಲ ಆದರೆ ನಮ್ಮ ನೆನಪಿನಲ್ಲಿ ಮನದಲ್ಲಿ ಅದು ಸದಾ ಇದೆ. ಹೌದು ಅದು ಹಾಗೆಯೇ ಬಿಟ್ಟುಬಂದ ಊರಿನ ನೆನಪು ಯಾವಾಗಲೂ
ಕಾಡುತ್ತದೆ.
ಯಾವುದೇ ಲೇಖಕ ಪ್ರತಿಸಾದ ಬೇಡುತ್ತಾನೆ. ಕಾಮೆಂಟುಗಳು ಮಾಡುವುದು ಇದೇ ಕೆಲಸವನ್ನು. ಆದರೆ ಇಲ್ಲಿ ನನಗೆ ಪ್ರತಿಯಾಗಿ ಸಿಕ್ಕಿದ್ದು ಅತ್ಯಮೂಲ್ಯವಾದದ್ದು.
ಇಲ್ಲಿ ಅನುಭವದ ರಸಪಾಕವಿದೆ..ಈ ಪದಗಳಲ್ಲಿ ಆ ಒಂದುಕಾಲಘಟ್ಟದ ಚಿತ್ರಣಮಾತ್ರ ಅಲ್ಲ ಅಂದಿನ ಆ ಕಾಲವನ್ನು ಹಾಗೆಯೇ ಅನಾಮತ್ತಾಗಿ ಎತ್ತಿಕೊಂಡು ಬಂದ
ಹುಮ್ಮಸ್ಸಿದೆ..ತಾಕತ್ತಿದೆ.ಅವರ ಮೇಲ್ ನ್ನು ನನ್ನ ಬ್ಲಾಗಿನಲ್ಲಿ ಬಳಸಿಕೊಳ್ಳಲು ಪರವಾನಿಗಿ ನೀಡಿದ ಶ್ರೀ ವಾಜಪೇಯಿಯವರಿಗೆ ನಾನು ಆಭಾರಿ...
**************************************************************************

ನಿಮ್ಮ 'ದುರ್ಗದ ಬೈಲಿನ ಪುರಾಣಮು' ಓದಿದೆ. ಅಷ್ಟs ಅಲ್ಲಾ, ಅಲ್ಲೆ ಸುತ್ತಾಡ್ಯೂ ಬಂದೆ. 
ನೆನಪಿನ ಸುರಳಿ ಬಿಚಿಗೊಂಡ್ತ್ಯು.
ದುರ್ಗದ ಬೈಲಿನ ಜೋಡಿ ನಂದು ಐದೂವರಿ ದಶಕಗಳ ಸಂಬಂಧ. ನನ್ನ ಬದುಕು ಅರಳಿದ್ದs ಅದರ ಸುತ್ತಮುತ್ತಲಿನ ಕಿಲ್ಲೆ, ವಾಳವೇಕರ ಓಣಿ, ಮತ್ತ ಸರಾಫಗಟ್ಟಿ ಒಳಗ. ಮತ್ತ, ಅಖಂಡ ಇಪ್ಪತ್ಮೂರು ವರ್ಷ ನಾ ಪ್ರತಿ ತಿಂಗಳ ಕಿರಾಣಿ ಸಾಮಾನು ತೊಗೊಳ್ತಿದ್ದದ್ದು ಅಲ್ಲಿಂದ ಮೈಸೂರ್ ಸ್ಟೋರ್ ಕಡೆ ಹೊಳ್ಳೂ ರಸ್ತೇದ ಆರಂಭಕ್ಕ, ಬಲಕ್ಕಿರೋ 'ಮಹಾಜನ ಸ್ಟೋರ್ಸ್'ನ್ಯಾಗ. 
ನಮ್ಮಪ್ಪಾ ಹು-ಧಾ ಮುನಸಿಪಲ್ ಬರೋದಾಗ ಕೆಲಸಾ ಮಾಡತಿದ್ದನಂತ (ಅಂವನ್ನ ನೋಡಿದ ನೆನಪೂ ನನಗಿಲ್ಲಾ. ಅಂವಾ ಸತ್ತಾಗ ನನಗಿನ್ನೂ ನಾಲ್ಕು ವರ್ಷ ಅಷ್ಟs.). ಕಿಲ್ಲೇದಾಗ ಇದ್ದ ಪುರಾಣಿಕ ನರಸಿಂಹ ಭಟ್ಟರ ಮನ್ಯಾಗ ಬಾಡಿಗಿ ಇದ್ವೆಂತ. ಒಮ್ಮೆ ನಾ ತಪ್ಪಿಸ್ಕ್ಯೊಂಡು, ಹಾಂಗs ತಬೀಬ ಅವರ ಸರಾಫೀ ಅಂಗಡೀ ತನಕಾ ಹೋಗಿ, ಮುಂದ ಎಲ್ಲೆ ಹೋಗೋದು ಅಂತ ಗೊತ್ತಾಗದ ಅಳಕೋತ ಕೊಪ್ಪೀಕರ ರೋಡಿಗೆ ಬಂದು 'ಸಂಯುಕ್ತ ಕರ್ನಾಟಕ'ದ ಮುಂದ ನಿಂತಿದ್ನೆಂತ. ಅಲ್ಲೇ ಕೆಲಸಾ ಮಾಡ್ತಿದ್ದ ಸುರೇಂದ್ರ ದಾನಿಯವರು ಇದ್ದದ್ದು ನಮ್ಮನೀ ಹತ್ತರನs. ಅವ್ರು ನನಗ 'ಪೇಪೇ' ಕೊಡಿಸಿ, ಮನೀಗೆ ಬಿಟ್ಟು ಹೋಗಿದ್ರಂತ. ''ನೀ ಅವತ್ತ 'ಸಂಯುಕ್ತ ಕರ್ನಾಟಕ'ದ ಮುಂದ ಅಳಕೋತ ನಿಂತದ್ದಕ್ಕs ಅಲ್ಲೆ ಕೆಲಸಾ ಮಾಡೂವಂಗಾತು,'' ಅಂತ ನಮ್ಮವ್ವಾ ಮುಂದ ಎಷ್ಟೋ ದಿನಾ ಹೇಳಿ ಹೇಳಿ ನಗತಿದ್ಲು. (ಮುಂದ   ನಾನು ''ಅವತ್ತ 'ಸಂಯುಕ್ತ ಕರ್ನಾಟಕ'ದ ಮುಂದ ನಿಂತದ್ದಕ್ಕs ಮುಂದ, ಶಾಮರಾಯನ ಕಾಲದಾಗ ಕೆಲಸಾ ಕಳಕೊಂಡು ಗೇಟ್ ಮುಂದ ಅಳಕೋತ ನಿಲ್ಲೋವಂಗೂ ಆತು,''...ಅಂತ ಬದಲಿಸಿ ನಮ್ಮ ಅವ್ವನ ಮುಂದ ಹೇಳಿದ್ದೆ.)
ಇನ್ನೊಂದು ಪ್ರಸಂಗಾ ಹೇಳಲಿಕ್ಕೇ ಬೇಕು.
ನಮ್ಮ ಅಪ್ಪ ಸತ್ತ ಮ್ಯಾಲೆ ಸ್ವಾದರಮಾವನs ನಮ್ಮ ಜಿಮ್ಮೇದಾರಿ ನೋಡಿಕೋತಿದ್ದ.  
ಆಗ ಅಂವಾ ವಾಳವೇಕರ ಓಣಿ ಒಳಗ ಮನೀ ಮಾಡಿದ್ದಾ. ನಮ್ಮ ಅಜ್ಜ (= ಅವ್ವನ ಅಪ್ಪ) ಯಾವಾಗಾರೆ ಹುಬ್ಬಳ್ಳಿಗೆ ಬರ್ತಿದ್ದಾ. ಅಲ್ಲೆ 'ಬ್ರಾಡ್ವೇ'ದಾಗ ಒಂದು ಅಟ್ಟದ ಮ್ಯಾಲೆ ವಾಚನಾಲಯ ಇತ್ತು. ಅಜ್ಜ ಅಲ್ಲೆ ಕರಕೊಂಡು ಹೋಗ್ತಿದ್ದಾ. ಹೋಗೋ ಮದಲ ಅಲ್ಲೇ ದತ್ತಪ್ಪಗ ನಮಸ್ಕಾರಾ ಮಾಡಿ, ಎಡಕ್ಕ ಹೊಳ್ಳಿ, 'ಸುವರ್ಣ ಮಂದಿರ'ದಾಗ ತನಗೊಂದು ತುಪ್ಪದ ದ್ವಾಸಿ, ನನಗೊಂದು ಶಿರಾ ಆರ್ಡರ್ ಮಾಡ್ತಿದ್ದಾ. ಅಂವಾ ಛಾ ಕುಡೀತಿದ್ದಿಲ್ಲಾ. ನಾ ಅಂತೂ ಶಿರಾ ತಿಂದಿರತಿದ್ದೆ. 
ಹೀಂಗ ತಿಂದು ಗಟ್ಯಾಗಿ ನನ್ನ ಹೆಗಲ ಮ್ಯಾಲೆ ಕೂಡಿಸಿಕೊಂಡು ಹೊಂಟಾ ಅಂದ್ರ, ನನ್ನ ಅಂವಾ ಕೆಳಗ ಇಳಸೂದು ಲೈಬ್ರರಿ ಬಾಗಲದಾಗs. 
ಆಮ್ಯಾಲೆ ಅಂವಾ ಸುದ್ದಿ ಒಳಗ, ನಾ ಹೊರಗ ನೋಡಿಕೋತ ಕೂಡೂದರೊಳಗ ಮೈ ಮರೀತಿದ್ವಿ. 
ಒಮ್ಮೆ ಅಂವಾ ವರ್ತಮಾನ ಪತ್ರದಾಗ ಮುಳಗಿದ ಹೊತ್ತಿನ್ಯಾಗ ನಾ ಹೊರಗ ಬಂದಾಂವಾ ಹಾಂsಗ ನಡಕೋತ ಹೋಗಿ, ದುರ್ಗದ ಬೈಲಿನ ಸರ್ಕಲ್ಲಿನ್ಯಾಗ ನಿಂತುಬಿಟ್ನೆಂತ. ಅಲ್ಲೆ ಬರೇ ಸಿಟಿ ಬಸ್ಸುಗೋಳು ತುಂಬಿರತಿದ್ವು. (ಆಗಿನ್ನೂ ಸಿಬಿಟಿ ಆಗಿರಲಿಲ್ಲ. ಇನ್ನ, ಬಸ್ ಸ್ಟ್ಯಾಂಡು ಈಗ ಜನತಾ ಬಜಾರ್ ಇರೋ ಜಾಗಾದಾಗ ಇತ್ತು.) ಒಂದ್ ಕಡೀಂದ ಬಸ್ಸುಗೋಳು, ಇನ್ನೊಂದ್ ಕಡೀಂದ ಎಮ್ಮಿಗೋಳು... ಎತ್ಲಾಗ ಹೋಗಬೇಕು ಅನ್ನೂದು ತಿಳೀದs ನಾ ಅಳಕೋತ ನಿಂತಬಿಟ್ಟಿದ್ನೆಂತ.    
ಅವತ್ತ ಒಟ್ಟs ಹ್ಯಾಂಗೋ ನಾ ಮನೀ ಸೇರಿದೆ.
ಇದರ ಪರಿಣಾಮ ಏನಾತಂದ್ರ, ಅಜ್ಜನ ಜೋಡಿ ನಾ ಹೊರಗ ಹೋಗೋದು, ಅಂದ್ರ 'ಸುವರ್ಣ ಮಂದಿರ'ದಾಗ ತಿನ್ನೂದು, ಬಂದ್. 
ಮುಂದ ಏನೇನೋ ಪ್ರಸಂಗಾ... ಹುಬ್ಬಳ್ಳಿ ಬಿಟ್ಟು ನಮ್ಮೂರಿಗೆ ಹೋಗಿ ಇರಬೇಕಾತು. ಆದ್ರ, ಮನೀಗೆ ನಾನs ಒಬ್ಬನಲಾ 'ಗಂಡಸು'. ಹೀಂಗಾಗಿ ಮತ್ತ ಮತ್ತ ಹುಬ್ಬಳ್ಳಿಗೆ ಬರಬೇಕಾಗತಿತ್ತು. ದೇಶಪಾಂಡೆ ನಗರದಾಗ ನಮ್ಮ ಒಬ್ಬ ಮಾಂವಶೀ ಮನಿ. ಚಂದ್ರಕಲಾ ಟಾಕೀಜಿನ ಮಗ್ಗಲದಾಗಿರೋ ಶೆಟ್ಟರ ಓಣಿ ಒಳಗ ಇನ್ನೊಬ್ಬ ಮಾಂವಶೀ ಇರತಿದ್ಲು. 
ಲಕ್ಷ್ಮೇಶ್ವರದಿಂದ ಗುಡಗೇರಿಗೆ ಬಸ್ಸು ; ಅಲ್ಲಿಂದ ಹುಬ್ಬಳ್ಳಿಗೆ ಟ್ರೇನು. ಖರೇ ಅಂದ್ರ, ಆಗಿನ ನನ್ನ ಹುಬ್ಬಳ್ಳಿ ಯಾತ್ರಾದ ಉದ್ದೇಶ ವಾಯಿಂಗಣಕರ್ ವೈದ್ಯರ ಹತ್ರ ನಮ್ಮ ಅಕ್ಕಗ ಔಷಧ ತೊಗೊಂಡು ಹೋಗೋದs ಆಗಿರತಿತ್ತು. 
''ಸ್ಟೇಶನ್ನಿಂದ ಹೊರಗ ಬಂದ ಕೂಡ್ಲೇ ಕೆಳಗ ಸರ್ಕಲ್ ತನಕಾ ಬಂದು, ಎಡಕ್ಕ ತಿರಗಿ ದೊಡ್ಡ ರಸ್ತೆ ಹಿಡದು ಹೋಗು. ಅಲ್ಲೇ ಚಂದ್ರಕಲಾ ಟಾಕೀಜು ಬರತದ. ಹಂಗs ಮುಂದ ಹೋದ್ರ ಸುದರ್ಶನ್ ಟಾಕೀಜು. ಅಲ್ಲೇ ಎಡಕ್ಕ ಹೊಳ್ಳು. ಮುಂದ ಹೋದ್ರ ಸಿವಿಲ್  ಹಾಸ್ಪಿಟಲ್ಲು. ಮುಂದ ಹೋಗಿ ಎಡಕ್ಕ ಹೊಳ್ಳು. ಸೀದಾ ಹೋದ್ರ ಬರತದ ವಾಯಿಂಗಣಕರ್ ವೈದ್ಯರ ದವಾಖಾನಿ.'' ನಮ್ಮ ಅವ್ವ ದಾರೀ ಹೇಳಿ ಕೊಟ್ಟಿರತಿದ್ಲು. 
ಆದ್ರೂ, ಸ್ಟೇಶನ್ನಿನಿಂದ ಹೊರಗ ಬಂದ ಕೂಡ್ಲೇ ನನಗ ಯಾ ಕಡೆ ಹೋಗೋದು ಅಂತ ಭಾಳಾ ಕನ್ಫ್ಯೂಜ್ ಆಗೋದು... ನಮ್ಮವ್ವ ಬ್ಯಾರೆ ಎಡಕ್ಕ, ಬಲಕ್ಕ ಅಂತ  ಹೇಳಿರತಿದ್ಲಲಾ... ಒಮ್ಮೆಂತೂ ಸಿವಿಲ್ ಹಾಸ್ಪಿಟಲ್ ಮುಂದ ನಾ ಹೋಗೋದಕ್ಕೂ ಅಲ್ಲಿಂದ ಒಂದು ಹೆಣಾ ಹೊತಗೊಂಡು ಹೊರಗ ಬರೋದಕ್ಕೂ ಸಮಾ ಆತು. ಆವತ್ನಿಂದ ನಾ ಆ ಕಡೆ ತಿರಗೋದು ಬಿಟ್ಟುಬಿಟ್ಟೆ. (ಆಗ ನನ್ನ ಮನಸಿನ ಮ್ಯಾಲೆ ಆ ರಸ್ತೆ ಮಾಡಿದ ಪರಿಣಾಮ ಇನ್ನೂ ತನಕಾ ಮಾಸಿಲ್ಲಾ... ಇವತ್ತಿಗೂ ನನಗ ಆ 'ಕೊಯೆನ್ ರಸ್ತೆ' ಅಂದ್ರ ಒಗ್ಗೂದುಲ್ಲಾ...) ಸೀದಾ ಹೋಗಿ, ಎಡಕ್ಕ ಹೊಳ್ಳಿ, ಅಲ್ಲಿರೋ ಹಣಮಪ್ಪಗ ಒಂದು ಸಲಾಮು ಹಾಕಿ, ಮರಾಠ ಗಲ್ಲಿ ಒಳಗಿಂದ ಹಾಂಗs ಹೋಗಿ, ಬಲಕ್ಕ ಹೊಳ್ಳೀದ್ರ ದುರ್ಗದ ಬೈಲು, ಎಡಕ್ಕ ಹೊಳ್ಳೀದ್ರ ವಾಯಿಂಗಣಕರ್ ವೈದ್ಯರ ದವಾಖಾನಿ. ಅಲ್ಲೀ ಕೆಲಸಾ ಮುಗೀತು ಅಂದ್ರ ಹಾಂಗ ಕೊಪ್ಪೀಕರ್ ರಸ್ತೇಕ್ಕ ಇಳದು, ಮಲ್ಲಿಕಾರ್ಜುನ ಟಾಕೀಜಿನ ಎದುರಿಗೆ ನೆಹರೂ ಮೈದಾನದ ಕಡೆ ಹೊಳ್ಳಿ, ಸ್ಟೇಶನ್ನು ತಲಪತಿದ್ದೆ.    
ಆದ್ರೂ ನನಗ ಇವತ್ತಿಗೂ 'ಸ್ಟೇಶನ್ ರಸ್ತೆ' ಕೊಡೋ ಆನಂದಾsನ ಹುಬ್ಬಳ್ಯಾಗಿನ ಬ್ಯಾರೆ ಯಾವ ರಸ್ತೇನೂ ಕೊಟ್ಟಿಲ್ಲಾ... ಯಾಕಂದ್ರ, ಅಲ್ಲೆ ಉದ್ದಕ ಸಿನೆಮಾ ಟಾಕೀಜು, ನಾಟಕದ ಥೇಟರು,  ಒಮ್ಮೊಮ್ಮೆ ಸಣ್ಣ-ಪುಟ್ಟ ಸರ್ಕಸ್ಸು, ಹೋಟೆಲ್ಲು, ಅಂಗಡಿ-ಅಂಚಡಿ... ಅಲ್ಲೇ ಒಮ್ಮೊಮ್ಮೆ 'ಹಾಂವಗಾರನ ಆಟಾ' ನೋಡಿಕೊತ ಆ ಅಂತ ಬಾಯಿ ತಕ್ಕೊಂಡು ನಿಂತದ್ದೂ ಅದ. ಎದರಿಗೆ 'ಉಡಪೀ ಲಾಜ್.' ಅದರ ಹತ್ರನs 'ಕರಾಚಿ ಸ್ವೀಟ್ಸ್' ಅಂತ ಒಂದು ಅಂಗಡಿ. ಆ ಸೀ ಜೀನಸು ನೋಡಿ ಜೊಲ್ಲು ಸುರಿಸಿಗೋತ ನಿಂತು ಅಂಗಡಿಯವನ ಹತ್ರ ಬೈಸಿಗೊಂಡು ಓಡಿದ್ದು ಇನ್ನೂ ನೆನಪಿಗೆ ಬರತದ. (ಆ 'ಉಡಪೀ ಲಾಜ್' ಇನ್ನೂ ಅಲ್ಲೇ ಅದ ; 'ಕರಾಚಿ ಸ್ವೀಟ್ಸ್' ಎಂದೋ ಮುಚಿಗೊಂಡು ಹೋಗೇದ.)  
ಹಾಂ... ನಾಟಕದ ಥೇಟರು ಅಂದ್ನೆಲಾ... ಆಗ ಅಲ್ಲೆ ಕನಿಷ್ಠ ಎರಡಾsರೆ ನಾಟಕ ಕಂಪನಿಗೋಳು ಕ್ಯಾಂಪ್ ಹಾಕಿರತಿದ್ವು... ಮತ್ತ ಎಲ್ಲಾ ಕಡೆ ಲೌಡ್ ಸ್ಪೀಕರಿನ್ಯಾಗ 'ಮಹೋನ್ನತ ಸಾಮಾಜಿಕ ನಾಟಕ... 'ಅರಿಶಿಣ ಕುಂಕುಮ'...'' ಅಂತೇನೇನೋ ಒದರಿಕೋತ ಹೋಗೋ ಗಾಡಿಗೋಳು. ಆಗ ಅಲ್ಲೆ ಭಾಳ ದಿನ ನಡದ ನಾಟಕಾ ಅಂದ್ರ ಏಣಗಿ ಬಾಳಪ್ಪ ಅವರ 'ಮಾವ ಬಂದ್ನಪೋ ಮಾವ' ಮತ್ತ 'ಖಾದೀ ಸೀರೆ'... (ಮುಂದ ನಾನು ವೃತ್ತಿ ನಾಟಕಗಳನ್ನ ಹೆಚ್ಹೆಚ್ಚು ಪ್ರೀತಿಸಲಿಕ್ಕೆ ಶುರು ಮಾಡಿದ ಮ್ಯಾಲೆ ಆ ಜಗಾಕ್ಕ ಹೋಗೋದು ನಿತ್ಯದ ಮಾತಾತು.)     
ದುರ್ಗದ ಬೈಲಿನ 'ಸುವರ್ಣ ಮಂದಿರ' ಅಂದ್ನೆಲಾ... ಅಲ್ಲೇ ಚಿತ್ರಬ್ರಹ್ಮ ವಿ. ಶಾಂತಾರಾಮ್ ಅವರ ಅಜ್ಜಿ ಒಂದು ಹೋಟೆಲ್ಲು ನಡಸ್ತಿದ್ಲು ; ಮತ್ತ ಈಗ ಭಾಳ ಜನಪ್ರಿಯ ಆಗಿರೋ 'ಮಿಸsಳ್' ಅನ್ನೂ ತಿನಸಿನ ರುಚೀನ ಜನಕ್ಕ ಮದಲಿಗೆ ಹಚ್ಚಿದಾಕಿನ ಆ ಅಜ್ಜಿ ಅಂತ ನಮ್ಮ ಎನ್. ಎಸ್. ಘಳಿಗಿ ಅವರು ಹೇಳಿದ್ದು ಕೇಳೀನಿ. 
ನಾನು 'ಕರ್ಮವೀರ'ದಾಗ ಉಪಸಂಪಾದಕ ಅಂತ ಕೆಲಸಕ್ಕ ಸೇರಿದ ಮ್ಯಾಲೆ ವಾಳವೇಕರ್ ಓಣಿ ಒಳಗ ಕೆಲವು ದಿನಾ ರೂಮು ಮಾಡಿಕೊಂಡಿದ್ದೆ. ಆಗೆಲ್ಲ ನನಗ   
ಮುಂಜಾನಿ ತಿನಸು, ದಿನದ ಎರಡು ಹೊತ್ತಿನ ಊಟ ಕೊಟ್ಟದ್ದ ಈ ದುರ್ಗದ ಬೈಲಿನ ಹೋಟೆಲಗೋಳು. ಅಷ್ಟs ಯಾಕ, ಮುಂದ ನಾ ತಿಂಗಳಿಗೊಮ್ಮೆ 'ಮಹಾಜನ ಸ್ಟೋರ್ಸ್'ನ್ಯಾಗ ಸಾಮಾನು ತೊಗೊಳ್ಳಿಕ್ಕೆ ಅಂತ ಬರ್ತಿದ್ದಾಗ ನನ್ನ ಇಬ್ರೂ ಮಕ್ಕಳಿಗೆ ಬೇಕಾದ್ದು ತಿನಲಿಕ್ಕೆ ಕೊಡಸ್ತಿದ್ದದ್ದs ಇಲ್ಲಿರೋ 'ಭಾರತ ಕೆಫೆ,' 'ಕಾಮತ್ ಹೋಟೆಲ್,' ಮತ್ತ 'ಸವಿತಾ ಹೋಟೆಲ್'ನ್ಯಾಗ. ಈ 'ಸವಿತಾ ಹೋಟೆಲ್' ಮುಂದನs ಒಂದು ಬೇಕರಿ ಇತ್ತು - ಹಿಂದಿ ಸಿನೆಮಾ ನಟ ವಿಕ್ರಂ ಅವರ ಅಪ್ಪಂದು. (ಹಿಂದಕ, ಈ ವಿಕ್ರಂ-ಲಕ್ಷ್ಮಿ ಜೋಡಿ ಅಭಿನಯಿಸಿದ 'ಜ್ಯೂಲೀ' ಸಿನೆಮಾ ಭಾಳ ಪ್ರಸಿದ್ಧ ಆತು.) 
1977 ರ ಸುಮಾರಿಗೆ ನಾವು 'ಕರ್ಮವೀರ'ದಾಗ 'ಹಸಿದ ಕಣ್ಣುಗಳಿಂದ...' ಅಂತ ಒಂದು ಕಾಲಂ ಸುರು ಮಾಡಿದ್ವಿ. ಯುವಕರ ದೃಷ್ಟಿ ಒಳಗ ಅವರವರ ಊರಿನ ಒಂದು ಏರಿಯಾದ ಬಗ್ಗೆ ಬರಸೂದು. ನಾನು ದುರ್ಗದಬಯಲಿನ ಬಗ್ಗೆ 'ಮತ್ತು ಸುತ್ತುವ ಬಯಲು ದುರ್ಗ' ಅನ್ನೋ ಲೇಖನಾ ಬರದಿದ್ದೆ. (ಆಗಿನ್ನೂ ಇನ್ನೂ ನನಗ ಮದಿವಿ ಆಗಿದ್ದಿಲ್ಲಾ...!)   
ಇನ್ನ ಹಾಂಗs 'ಮಹಾತ್ಮಾ ಗಾಂಧೀ ಮಾರ್ಕೆಟ್'ನ್ಯಾಗ ಕಾಲಿಡೋಬೇಕಾರ, ಎಡಕ್ಕ ಒಂದು ಸಣ್ಣ ಅಂಗಡಿ ಇತ್ತು - ಬಣ್ಣದ ಹಾಳಿ, ಪಾಟಿ-ಪೇಣೆ, ಎಕ್ಸರಸೈಜ್ ನೋಟಬುಕ್ಕು, ಮತ್ತಿನ್ನೇನೋ ಇನ್ತಾವ ಸಾಮಾನು ಮಾರೋ ಅಂಗಡಿ. ಅಲ್ಲೆ ಒಬ್ಬ ವಾಮನ ಮೂರ್ತಿ ತಮ್ಮಷ್ಟಕ್ಕs ತಾವು ಹಾಡಿಕೋತ ಕೂತಿರತಿದ್ರು. ಅವರs 'ನಮ್ಮ ತಾಯಿ ಕನ್ನಡ, ನಮ್ಮ ಪ್ರಾಣ ಕನ್ನಡ...' ಅನ್ನೋ ನಾಡ ಗೀತೆಯನ್ನ ಕೊಟ್ಟಂಥ ಕವಿ ಗಂಗಪ್ಪಾ ವಾಲೀ ಅವರು. ಆಗಾಗ ಹೋಗಿ ಅವರ ಜೋಡಿ ಒಂದಿಷ್ಟು ವಿಚಾರ ತಿಳಕೊಂಡು ಬರೋದು ನನಗ ಕಾಮತ ಹೋಟೆಲಿಗೆ ಹೋಗೋದಕಿಂತಾ ಮುಖ್ಯ ಅನಸ್ತಿತ್ತು. 
ದುರ್ಗದ ಬೈಲಿನ ನೆನಪು ಒಂದs ಎರಡs...
_______________________________________

7 comments:

  1. Thank you for publishing this beautiful letter.

    ReplyDelete
  2. ಉಮೇಶ್ ದೇಸಾಯ್ ಸಾರ್ ಅಭಿಮಾನದ ಪತ್ರದಲ್ಲಿ ಎಸ್ಟೊಂದು ಸುಂದರ ವಿಚಾರ ನೆನಪುಗಳಿವೆ. ಪತ್ರ ಬರೆದ ಮಹನೀಯರಿಗೆ ನನ್ನ ನಮನಗಳನ್ನು ತಿಳಿಸಿ.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  3. ನೆನಪುಗಳನ್ನೆಲ್ಲ ಕೆದಕಿ ಹಾಕಿದಂತಿದೆ ಈ ಪತ್ರ. ಗೋಪಾಲ ಮಾಮ ನಮ್ಮ ನಡುವಿನ ವಾಲ್ಮೀಕಿ.

    ReplyDelete
  4. ಸರ್, ಪತ್ರವನ್ನು ಓದಿದೆ...ನಿಜಕ್ಕೂ ಅದ್ಬುತವಾದ ಪತ್ರವಿದು..

    ReplyDelete