Tuesday, April 10, 2012

ಮುಗಿಯುವುದೇ ಮುಕ್ತ ಮುಕ್ತ......

ನನ್ನ ಈ ಲೇಖನ ಕೆಲವರಿಗೆ ಕೊರೆತ ಅನಿಸತದ...ಎಷ್ಟೋಮಂದಿ ಟಿವಿ ನೋಡೂದು ನ್ಯೂಸ್ ಗಾಗಿ
ಅಂಥಾದ್ರಾಗ ನಾ ಧಾರಾವಾಹಿ ಬಗ್ಗೆ ಹೇಳಹೊರಟೇನಿ ಹಂಗ ನೋಡಿದ್ರ ನಾನೂ ಧಾರಾವಾಹಿ
ನೋಡೂದು ಕಮ್ಮಿ..ಆಯ್ದ ಧಾರಾವಾಹಿ ಮಾತ್ರ ನಾ ನೋಡೋದು. ಟಿಎನ್ ಸೀತಾರಾಂ ಯಾಕೋ
ಭಾಳ ಸೇರಿದ್ರು ಮಟ ಮಟ ಮಧ್ಯಾಹ್ನ ೪=೩೦ ಕ್ಕೆ ಧಾರಾವಾಹಿ ಪ್ರಸಾರಮಾಡುವ ಧಾಡಸೀತನ
ಅವರು ಮಾಡಿದ್ರು.."ಮಾಯಾಮೃಗ" ಅನ್ನುವ ಸುಂದರ ಧಾರಾವಾಹಿ ನಮ್ಮ ನಿಮ್ಮ ನೆರೆಮನೆಯಲ್ಲಿಯೇ
ನಡೆದ ಕತೆ ಅನಿಸ್ತು. ಭಾಳ ಭಾಳ ಹಿಟ್ ಆತು. ಖಾಸಗಿ ಚಾನೆಲ್ ಗೆ ಜಿಗಿದವ್ರು "ಮನ್ವಂತರ" ಅನ್ನುವ
ಸುಂದರ ಧಾರಾವಾಹಿ ಕೊಟ್ರು. ಮುಂದ ಬಂದಿದ್ದು "ಮುಕ್ತ " ಎಲ್ಲ ಮಸಾಲಾ, ಭಾವುಕ ಮತ್ತು ಸಾಮಾಜಿಕ
ಅಂಶ ಇಟ್ಟುಕೊಂಡೂ ತನಗನಿಸಿದ್ದನ್ನು ಈ ಜಾಗತೀಕರಣ , ರೈತ ಸಮಸ್ಯೆ,ರಾಜಕೀಯ ದ ಬಗ್ಗೆ ವ್ಯವಸ್ಥಿತವಾಗಿ
ಹೇಳಬಹುದು ಎಂದು ತೋರಿಸಿಕೊಟ್ಟ ಧಾರಾವಾಹಿ ಇದು. ಒಂದಾದಮೇಲೊಂದು ಹಿಟ್ , ಜೊತೆಗೆ ಊರೂರಲ್ಲಿ
ನಡೆಯುವ ಸಂವಾದ( ಹುಬ್ಬಳ್ಳಿಯ ಸಂವಾದದಾಗ ನಾನೂ ಭಾಗಿ ಆಗಿದ್ದೆ) ಸೀತಾರಾಮ್ ಹೆಸರು ಮನೆ ಮನೆಯಲ್ಲಿ
ಗುಂಜಿಸಿತು... ಅದೇ ಹುರುಪಿನಲ್ಲಿ ಅವರು "ಮುಕ್ತ ಮುಕ್ತ" ಕೀ ಕೈ ಹಾಕಿದರು.ಹೊಸ ಕತೆ, ಪಾತ್ರಗಳು, ಬದಲಾದ
ರಾಜಕೀಯ ಪರಿಸ್ಥಿತಿ ಎಲ್ಲದರ ಚಿತ್ರಣ ಸುಂದರವಾಗಿ ಮೂಡಿಬಂತು. ಜನ ಮೆಚ್ಚಿದ್ರು..ಹೊಗಳಿದ್ರು..ಇದರಲ್ಲಿ ಪಾತ್ರ
ಮಾಡಿದ ಅನೇಕರು ಸ್ಟಾರ್ ಆದರು ..ಡಿ. ವಿಷ್ಣುವರ್ಧನ ಕೂಡ ಈ ಧಾರಾವಾಹಿಯಲ್ಲಿ "ಮಂಗಳತ್ತೆ" ಪಾತ್ರ ಮಾಡಿದ
ಜೆಪಿ ಮೇಡಮ್ ಗೆ ಮನೆಗೆ ಕರೆದು ಅಭಿನಂದಿಸಿದರು. ನಿಜಕ್ಕೂ ಆ ಪಾತ್ರ ಅವರಲ್ಲದೆ ಬೇರೆ ಯಾರೂ ಮಾಡಲು
ಸಾಧ್ಯ ಇರಲಿಲ್ಲ. ನಮ್ಮ ಇನ್ನೊಬ್ಬ ಗೆಳೆಯ ಸುಘೋಷ್ ದೇವು ಆಗಿ ಮನಮಿಡಿಯುವ ಅಭಿನಯ ಮಾಡಿದ್ರು.
ಸೀತಾರಾಮ್ ಒಂಥರಾ ಜಾದೂಗಾರ ಇದ್ದ ಹಾಗೆ ಮಿಡಾಸ್ ಟಚ್ ಇದೆ ಅವರಲ್ಲಿ... ಆದರೆ ಅವರ ಜಾದೂ ಪೇಲವ
ಆಗುತ್ತಿದೆ ಅವರ "ಮುಕ್ತ ಮುಕ್ತ" ಮುಕ್ತವಾಗಲು ಹಾತೊರೆಯುತ್ತಿದೆ..ಅವರ ಮುಷ್ಟಿಯಿಂದ ಬಿಡುಗಡೆ ಆಗಲು ಕಾಯುತ್ತಿದೆ.
ಆದರೆ ಹತಾಶರಾಗಿರುವ ಸೀತಾರಾಮ್ ಪಟ್ಟು ಬಿಡಲೊಪ್ಪುತ್ತಿಲ್ಲ ಅನೇಕ ಮುತ್ತುಗಳು ಕಳಚಿಕೊಂಡು ಬೇರೆಯಾಗಿವೆ..
ಬೊಡ್ಡೆಯನ್ನೇ ಹಿಂಡಿ ಹಿಂಡಿ ರಸ ತೆಗೆಯಲು ಹೊರಟಿದ್ದಾರೆ ಈ ಭಗೀರಥ...!!





ಕಳೆದ ತಿಂಗಳು ಅವಧಿಯಲ್ಲಿ ಜೋಗಿ ಸೀತಾರಾಮ್ ಅವರಿಗೆ ಬರೆದ ಪತ್ರ ಪ್ರಕಟವಾಗಿತ್ತು. ಸೃಜನಶೀಲತೆ ಅದರ
ಕೊರತೆ ಮತ್ತು ಏಕತಾನತೆ ಭಾದಿಸುತ್ತಿದೆ ಇದು ಸೀತಾರಾಮ್ ಅಂಬೋಣ ಅದಕ್ಕೆ ಅವರು ಸಮಾಧಾನ ಹೇಳಿದ್ರು ಅದೂ
ಪ್ರಯೋಜನಕಾರಿನೂ ಇತ್ತು. ಸೋಲು, ನಿರಾಶೆ ಎಲ್ಲರಿಗೂ ಭಾದಿಸುವವೇ ಯಾರೂ ಹೊರತಲ್ಲ. ನನಗನ್ನಿಸುವ ಹಾಗೆ
ಸೀತಾರಾಮ್ ಈ ಧಾರಾವಾಹಿ ತೆಗೆಯುವಾಗ ಇದು ಹೊಂದಬಹುದಾದ ಹೊಸ ಆಯಾಮಗಳ ಬಗ್ಗೆ ಅರಿವಿಟ್ಟುಕೊಂಡಿದ್ರು
ಆದ್ರೂ ಅದು ಅವರ ಕೈ ಮೀರಿ ಹೋಗಿದೆ ಅದೆಷ್ಟು ಪಾತ್ರಗಳು ಅವುಗಳ ಆದಿ ಅಂತ್ಯ ನಿರ್ಧರಿಸಲು ಅವರಿಗೆ ಆಗುತ್ತಿಲ್ಲ.
ಕೆಲವು ಪಾತ್ರಗಳನ್ನು ಮಧ್ಯದಲ್ಲಿಯೇ ಕೊಂದು ಹಾಕಿದ್ದಾರೆಅನಿವಾರ್ಯವಾಗಿ..ಇನ್ನು ಕೆಲವು ಪಾತ್ರಗಳ ಹಣೆಬರಹ ತಾವೇ
ತಿರುಚಿ ಬರೆದಿದ್ದಾಗಿದೆ..ಶಾಂಭವಿ,ಕಲ್ಯಾಣಿ ಪಾತ್ರಗಳು ಇನ್ನೆಂದೂ ಬರಲಾರವು. ಇನ್ನೊಂದು ಸಮಸ್ಯೆ ಇದೆಅದೆಂದರೆ
ನಿನ್ನೆ ನೋಡಿದ ನಟ ಅಥವಾ ನಟಿಯ ಜಾಗೆಯಲ್ಲಿ ಅದಾರೋ ಬೇರೆಯವರು ಬಂದಿರುತ್ತಾರೆ ಇದು ಯಾಕೆ ಈ ಪ್ರಶ್ನೆಗೆ
ಹಲವು ಉತ್ತರಗಳಿವೆ..ಅದು ಆರ್ಥಿಕ,ಸಾಮಾಜಿಕ ಅಥವರಾಜಕೀಯಾನೂ ಇರಬಹುದು. ಟಿವಿ, ಸಿನೇಮಾ ದಲ್ಲಿ ಭ್ರಾಮುಕತೆ
ತೋರಿಸುತ್ತಾರೆ ನಿಜ ಜೀವನ ಹಾಗೆಂದೂ ಇರೋದೆ ಇಲ್ಲ ಇದು ಆಗಾಗ ಕೇಳಿ ಬರೋ ಮಾತು ಉಳಿದ ಧಾರಾವಾಹಿಗಳ
ಬಗ್ಗೆ ಈ ಮಾತು ಸೋಳಾಅಣೆ ಖರೆ. ಆದ್ರ ಸೀತಾರಾಮ್ ಬ್ಯಾರೆಇದ್ರು ಪುಟ್ಟಣ್ಣ ನ ಶಿಷ್ಯ ಅವರೂ ದಿಕ್ಕ ತಪ್ಪ್ಯಾರ....
ಇದ್ದ ಕತಿನ ಇತಿಮಿತಿಯೊಳಗ ಹೇಳಿ ಒಂದು ಚೌಕಟ್ಟು ಕೊಟ್ಟು ಮುಗಸೂದು ಅವರ ಮುಂದಿನ ಸವಾಲಾಗಬೇಕು...
ಕತಿ ಹಿಂಜಿ ಹಿಂಜಿ ನನ್ನಂಥಾವ್ರ ತಲಿ ನೋಯಸದಿದ್ರ ಸಾಕು. ಇದು ಅವರಿಗೆ ವಿನಂತಿ ಅದ ಕೇಳೂದಿಲ್ಲಾ ಅಂದ್ರ ಟಿವಿ
ರಿಮೋಟು ನನ್ನ ಕಡೆ ಅದ.


ಈ ನಿರಾಶಾ ಪರ್ವದಾಗ ನಾ ಇನ್ನೊಂದು ಧಾರಾವಾಹಿ ತಪ್ಪದ ನೋಡತೇನಿ ಒಮ್ಮೊಮ್ಮೆ ಆಗೂ ದಿಲ್ಲಾ ಅವಾಗ
ರವಿವಾರದ ಮರುಪ್ರಸಾರ ಅದೂ ತಪ್ಪಿತು ಅಂದ್ರ you tube ನಾಗ ಹಿಂಗ ಅದು ಯಾಕೋ ನನಗ ಭಾಳ ಸೇರತು.
ಅದು ಮರಾಠಿಯೊಳಗ ಅದ. ಝ್ಹಿ ಮರಾಠಿ ಯೊಳಗ ದಿನಾ ರಾತ್ರಿ ೮=೦೦ ಗಂಟೆಗ. ಹೆಸರು "ಊಂಚ್ ಮಾಝಾ ಜೋಕಾ"
ಖರೆ ಅಂದ್ರೂ ಅದು ಭಾಳ ಉಚ್ಚ ಪ್ರಮಾಣದ್ದು . ಅದು ರಮಾಬಾಯಿ ರಾನಡೆ ಅವರ ಜೀವನ ಕಥನ ಆಧರಿಸಿದ್ದು ಈ ಕತೆ
ಸುರುಆಗಿದ್ದು ೧೮೭೩ ನೇ ಇಸವಿಯೊಳಗ ಅವಾಗಿದ್ದ ಟಿಪಿಕಲ್ ಬ್ರಾಹ್ಮಣರು, ಅವರು ಉಟಕೊಳ್ಳುವ ಧೋತ್ರ,ಮನ್ಯಾಗ
ಹೊಳಿಯುವ ಹಿತ್ತಾಳಿ ಭಾಂಡೆ ಸಾಮಾನು, ಬೀಸುವ ಕಲ್ಲು, ಹಾರಿ ಕೋಲು ಒಂದು ಸುಂದರ ಲೋಕ ನಾವು ಸಣ್ಣಾವರಿದ್ದಾಗಿಂದು
ಕ್ಕ ಕರಕೊಂಡು ಹೋಗತದ.ಕಥಾನಾಯಕಿ ರಮಾ ಬರೇ ಹನ್ನೊಂದು ವರ್ಷದಾಕಿ..ಮಾಧವರಾನಡೆ ವಿಧವಾ ವಿವಾಹ ಬೆಂಬಲ
ಕೊಡಾವ ಸ್ವತಃ ವಿದುರ ಅಪ್ಪ ನ ಮಾತಿಗೆ ಕಟ್ಟು ಬಿದ್ದು ಗೆಳ್ಯಾರು, ಊರಾವ್ರ ವಿರೋಧದ ನಡುವೆ ತನಗಿಂತ ಇಪ್ಪತ್ತು ವರ್ಷ
ಸಣ್ಣಾವಳಿದ್ದ ರಮಾಗ ಮದವಿಯಾಗತಾನ. ರಮಾ ಪಾತ್ರ ಮಾಡಿದ್ದು ತೇಜು ಅನ್ನೋ ಹುಡುಗಿ ಆರನೇಯತ್ತೆಯಲ್ಲಿ ಕಲಿಯುತ್ತಾಳಂತೆ
ಅವಳು ಈಗಾಗಲೇ ಮಹಾರಾಷ್ಟ್ರದಲ್ಲಿ ಮನೆ ಮತಾಗಿದ್ದಾಳೆ ಬೇರೆ ಚಾನಲನವ್ರು ಅವಳ ಸಂದರ್ಶನ ವಗೈರೆ ಮಾಡಿದ್ದಾರೆ.
ಒಂಬತ್ತು ವಾರಿ ಸೀರಿ, ಮೂಗಿನ್ಯಾಗಿ ನತ್ತು, ಕಿವಿಗೆ ಚುಚ್ಚಿಕೊಂಡ ಬುಗುಡಿ, ಬೆಂಡವಾಲಿ. ಕೈ ತುಂಬ ಬಳಿ ಆ ಹುಡುಗಿ ನೋಡಲಿಕ್ಕೆ
ಖರೇನ ಮುದ್ದು ಬರುವಹಂಗ ಇದ್ದಾಳ. ಈ ಧಾರಾವಾಹಿ ಒಂದು ಆಶಾಕಿರಣ ಅನಸತದ..ಟಿವಿ ಧಾರಾವಾಹಿ ಕತ್ತಲಿಯೊಳಗ.

1 comment:

  1. ಸುದ್ದಿ, ಸಮಾಚಾರಗಳs ಒಂಥರಾ ಧಾರಾವಾಹಿ ಹಂಗನs ಇರತಾವ. ಹಿಂಗಾಗಿ ನಾನು ಯಾವ ಧಾರಾವಾಹೀನ್ನೂ ನೋಡ್ತಾ ಇಲ್ಲ. ನೀವು ಹೇಳಿದ ಮ್ಯಾಲ, ಈ ಮರಾಠೀ ಧಾರಾವಾಹೀನ್ನೊಂದು ಸಲ ನೋಡೋಣ ಅಂತ ಅನಸ್ತದ. ಸೂಚನೆಗಾಗಿ ಧನ್ಯವಾದಗಳು.

    ReplyDelete