Monday, October 25, 2010

ನಿರ್ಧಾರ

                        ಮಿತ್ರರೆ ಈ ಕತೆ ಬ್ಲಾಗಿನಲ್ಲಿ ಹಾಕುವ್ ಆಸೆ ಬಹಳದಿನಗಳಿಂದ ಇತ್ತು.ಅದೇನೋ ಹಿಂಜರಿತವಿತ್ತು
ಅದರಲ್ಲೂ ದಿನಕರ್,ಹೆಗಡೇಜಿ ಅವರ ಕತೆ ಓದಿದ ಮೇಲೆ ಆ ಹಿಂಜರಿಕೆ ಇನ್ನೂ ಜಸ್ತಿ ಆತು. ಅಂತು ಇಂತು ಧೈರ್ಯಮಾಡಿ ನಿಮ್ಮ ಮುಂದೆ ಈ ಕತೆ ಇಟ್ಟಿರುವೆ. ತಪ್ಪು ಒಪ್ಪುಗಳನ್ನು ಮುಕ್ತವಾಗಿ ಹಂಚಿಕೊಳ್ಳಿ..

                                                   ನಿರ್ಧಾರ
                                                 ----------
                                                      --೧-     
                               ಕಳೆದೇ ಹೋಗಿದ್ದ ಕೊಂಡಿಯೊಂದು ಮತ್ತೆ ಕೂಡಿಕೊಂಡ ಹಾಗಿತ್ತು ಅಕ್ಕಳ ಪತ್ರದಿಂದ.
ಹಾಗೆ ನೋಡಿದರೆ ಅವಳನ್ನು ಭೇಟಿಯಾಗದೆ ಈಗಾಗಲೇ ಹತ್ತುವರ್ಷ ಕಳೆದಿವೆ. ಧುತ್ತನೆ ಎದುರಾದ ಪ್ರಶ್ನೆಯಂತಿತ್ತು
ಆ ಪತ್ರ..ಬಹಳ ನೋವಿನಿಂದ ತುಂಬಿತ್ತು. ಸ್ವಭಾವತಃ ಸ್ವಾಭಿಮಾನಿಯಾದ ಅಕ್ಕಳ ಪ್ರತಿ ಅಕ್ಷರದಲ್ಲೂ ದೈನ್ಯತೆ
ಇಣುಕುತ್ತಿತ್ತು. ಈಗಾಗಲೇ ಅಮ್ಮ ಅಣ್ಣರಲ್ಲಿ ಸಹಾಯ ಯಾಚಿಸಿದ್ದಾಳೆ.ಸಿಕ್ಕ ಪ್ರತಿಕ್ರಿಯೆ ನಿರೀಕ್ಷಿತವೇ. ಅದರಲ್ಲೂ  ಅಣ್ಣ
ಅವಳಿಗೆ ಕನಿಕರ ತೋರಿಸಿಯಾನು ಎನ್ನುವುದು ಕನಸೇ ಸರಿ. ಅವನಿಗೂ ಅಕ್ಕಳಿಗೂ ಇದ್ದ ಅಸಮಾಧಾನ ಇಂದು
ನಿನ್ನೆಯದಲ್ಲ.ಅವ್ವ  ಹತಾಶಳಾಗಿ ಇಬ್ಬರ ನಡುವಿನ ವೈಮನಸ್ಯ ಬೆಳೆಯುವುದನ್ನು  ನೋಡುತ್ತಿದ್ದಳು.         

                                      ನನ್ನ  ಬದುಕಿನ ಭೂತಕಾಲದ ಪುಟಗಳವು. ಆಗೊಮ್ಮೆ ಈಗೊಮ್ಮೆ  ಹೊರಳಿಸಿ
ಓದುವ ಚಟ ನನಗೆ. ಶೆಟ್ಟರ ಅಂಗಡಿಯಲ್ಲಿ ಲೆಕ್ಕ ಬರೆಯುತ್ತಿದ್ದ ಅಪ್ಪ,ಪೇಪರ್ ಹಂಚುತ್ತಲೇ  ಶಾಲೆ ಕಲಿಯಲು ಹಂಬಲಿಸುತ್ತಿದ್ದ ಅಣ್ಣ, ತನ್ನ ಕಾದಂಬರಿ ಲೋಕದಲ್ಲಿ ಮುಳುಗಿದ್ದ ಅಕ್ಕ, ಎಲ್ಲದಕ್ಕೂ  ದೇವರ ದಯೆ ಬೇಕು ಎಂದು ಸದಾ
ಚಡಪಡಿಸುವ ಅವ್ವ,ಇವರೆಲ್ಲರನ್ನೂ ಬೆರಗುಗಣ್ಣಿಂದ ನೋಡುವ ನಾನು. ಬಹುಶಃ ಉದ್ರಿ ಕೊಡುವ ಕಿರಾಣಿ ಅಂಗಡಿಯವರು, ಮುರುಕಲು ಮನೆಗೆ ತಪ್ಪದೇ ಬಾಡಿಗೆ ವಸೂಲಿ ಮಾಡುತ್ತಿದ್ದ ಮಾಲೀಕರು ,ಇವರ ಕೃಪೆ ಇಲ್ಲದೇ
ಇದ್ದಿದ್ದರೆ ನಮ್ಮ ಬಾಳು ಚೂರಾಗುತ್ತಿತ್ತು.       

                                        ಅಲ್ಲಿ ಇಲ್ಲಿ ಕಾಡಿ ಬೇಡಿ  ಅವರಿವರಕಾಲು ಹಿಡಿದು ಅಪ್ಪ ಅಣ್ಣನಿಗೆ ರೇಲ್ವೆಯಲ್ಲಿ
ನೌಕರಿ ಕೊಡಿಸಿದ.ನಮ್ಮ ಸಂಸಾರಕ್ಕೆ ಹೊಸ ತಿರುವು ಬಂದಿತು.ಅಣ್ಣ ಯಜಮಾನನಾದ ಅಪ್ಪ ನೇಪಥ್ಯಕ್ಕೆ ಸರಿದ.
ಅಕ್ಕಳಿಗೆ ಅಲ್ಲಿ ಇಲ್ಲಿ ವರ ಶೋಧನೆ ನಡೆದಿತ್ತು.ಆದರೆ ಬಂದವರಿಗೆ ಅಕ್ಕಳನ್ನು ನಿರಾಕರಿಸಲು ಅನೇಕ ಕಾರಣಗಳಿದ್ದವು.
ಕೆಲವರಿಗೆ ಅವಳ ರೂಪ ಸಾಧಾರಣವಾಗಿ ಕಂಡರೆ ಹಲವರಿಗೆ ವರದಕ್ಷಿಣೆ ಕೊಡಲಾಗದ ಅಪ್ಪನ ಅಸಹಾಯಕತೆ ನೆವ
ವಾಗುತ್ತಿತ್ತು.ಇನ್ನೂ ಕೆಲವರಿಗೆ ಕೇಳಿದ ಪ್ರಶ್ನೆಗಳಿಗೆ ಅಕ್ಕ ಕೊಡುವ ನಿರ್ಭಿಡೆಯ ಉತ್ತರ ಅವಳಿಗೆ "ದಿಟ್ಟೆ" ಎಂದು ಕಾಣುತಿತ್ತು. ಹೀಗಿರುವಾಗ ದೂರದ ಬೆಂಗಳೂರಿನಿಂದ ಅಕ್ಕಳಿಗೊಂದು ಸಂಭಂದ ಬಂತು.  ಎಲ್ಲ ಸರಿಯಾಯಿತು ಅಂದುಕೊಂಡಾಗಲೇ ಅಕ್ಕ ತಗಾದೆ ತೆಗೆದಳು. ಅದು ಎರಡನೇ ಸಂಭಂದವಾಗಿತ್ತು.ತೆರೆಮರೆಯಲ್ಲಿದ್ದ ಅಣ್ಣ ಅಕ್ಕರ
ವೈಮನಸ್ಯ ಹೆಚ್ಚಾಯಿತು.ಇನ್ನು ಮುಂದೆ ಗಂಡು ಹುಡುಕಲು ಅಲೆಯುವುದಿಲ್ಲ ಅಂತ ಅಣ್ಣ ಘೋಷಿಸಿಯೂ ಆಯಿತು.
ಅಕ್ಕ ನಿರ್ಲಿಪ್ತತೆ ಅಪ್ಪಿದಳು.ಅವಳಿಗೆ ಅದಾಗಲೇ ಮುವ್ವತ್ತು ಸಮೀಪಿಸಿತ್ತು. ದಿನೇ ದಿನೇ ಮನೆಯವಾತಾವರಣ ಹದ
ಗೆಡುತ್ತಿತ್ತು. ಅವಳ ಗೆಳತಿಯರೆಲ್ಲ ಬಾಣಂತನಕ್ಕೋ ಮಕ್ಕಳಿಗೆ ಸೂಟಿಯ ನೆವ ಮಾಡಿ ತವರಿಗೆ ಬರುತ್ತಿದ್ದರು.ಅಕ್ಕ
ಮಾತ್ರ ಯಾವ ಭಾವನೆ ಹೊರಗೆಡವುತ್ತಿರಲಿಲ್ಲ. ಅಮ್ಮ  ಹೇಳಿದ ವ್ರತ ನಿಯಮಗಳನ್ನೂ ಕಡೆಗಣಿಸಿದಳು.

                                        ಪರಿಣಾಮ ಹೀಗಾಗುತ್ತದೆ ಅಂತ ಮನೆಯಲ್ಲಿ ಯಾರೂ ಊಹಿಸಿರಲಿಲ್ಲ.
ಮೂರುದಿನ ಹೇಳದೇ ಕೇಳದೆ ಮನೆ ಬಿಟ್ಟ ಅಕ್ಕ ನಾಲ್ಕನೇ ದಿನ ಮನೆಬಾಗಿಲಲ್ಲಿ ಕಾಣಿಸಿಕೊಂಡಿದ್ದು ಒಬ್ಬನ ಜೊತೆ
ಕೊರಳಲ್ಲಿ ತಾಳಿ ಜೊತೆ. ಅಪ್ಪ ಅಮ್ಮ ಅಳುತ್ತಲೇ  ಆಶೀರ್ವಾದ ಮಾಡಿದ್ರು.ಅಣ್ಣ ಚೀರಾಡಿದ. ಅಕ್ಕ ಮನೆಯಲ್ಲಿ
ನೀರು ಸಹ ಕುಡಿಯಲಿಲ್ಲ. ಅಣ್ಣ ಅಪ್ಪ  ಅಮ್ಮಗೆ ಅವಳ ಜೊತೆ ಮುಂದೆ ಸಂಭಂಧ ಇರಿಸಿಕೊಳ್ಳದಂತೆ  ತಾಕೀತು
ಮಾಡಿದ. ಅಪ್ಪನಿಗೆ ಎದೆನೋವು ಹೊಸದಾಗಿ ಕಾಣಿಸಹತ್ತಿತು. ಅಣ್ಣನ ತಲೆ ಮೆಲೆ ಎರಡು ಅಕ್ಕಿಕಾಳು ಹಾಕಿ ಅಪ್ಪ
ತನ್ನ  ಯಾತ್ರೆ ಮುಗಿಸಿದ. ವೈನಿ ನೌಕರಿ ಮಾಡುತ್ತಿದ್ದುದರಿಂದ ಅವ್ವಳಿಗೆ ಅಡಿಗೆಮನೆಯಿಂದ ಮುಕ್ತಿ ಸಿಗಲಿಲ್ಲ.

                                        ಮುಂದಿನ ಕೆಲವು ಸಂಗತಿಗಳು ನಂಬಲಸಾಧ್ಯವೇಗದಲ್ಲಿ ಜರುಗಿದವು.
ನಾನು ಡಿಗ್ರಿಮುಗಿಸಿದ್ದು,ಬ್ಯಾಂಕಿನಲ್ಲಿ ನೌಕರಿ ದೊರೆತಿದ್ದು, ಅನಂತ್ ನನ್ನ ಬಾಳಿನಲ್ಲಿ ಬಂದಿದ್ದು ಎಲ್ಲ ಕ್ಷಣದಲ್ಲಿ
ನಡೆದಂತಿತ್ತು. ಅನಂತ್ ರ ಮನೆತನ ಜಾಗೀರ್ ದಾರ್ ಮನೆತನ.ಹಿಂದಿನ ವೈಭವ ಅಲ್ಲಿ ಇರಲಿಲ್ಲವಾದರೂ ಅವ್ವ,
ಅಣ್ಣ ಹಾಗೂ ವೈನಿ ಬಹಳ ಖುಷಿಯಾಗಿದ್ದರು. ಅವು ನನ್ನ  ಜೀವನದ ರಸಗಳಿಗೆಗಳು...ಸಾಧಾರಣ ರೂಪಿನ ನನ್ನನ್ನು
ಹ್ಯಾಂಡಸಮ್ ಅನ್ನಬಹುದಾದ ಅನಂತ್ ಕೈ ಹಿಡಿದಿದ್ದು ,ನನ್ನ ಭಾವನೆಗಳಿಗೆ ಸುಖಗಳಿಗೆ ಮಿತಿಯೇ ಇರಲಿಲ್ಲ.
ರಸಗವಳ ಸವಿದಷ್ಟು ಸವಿ ಹೆಚ್ಚಾಗುತ್ತಲೇ ಇತ್ತು. ಪ್ರೀತಿಯ ಸಂಕೇತವಾಗಿ ಸುಮಿ ಒಡಲು ತುಂಬಿದಾಗಲಂತೂ
ನಾ ಕಂಡ ಕನಸುಗಳೆಲ್ಲ ನನಸಾದವು ಎಂದು ಸಂಭ್ರಮಿಸಿದೆ.  ಈ ಸುಂದರಗಳಿಗೆಗಳು ಚಿರನೂತನವಾಗಲಿ ಎಂದು
ಹಂಬಲಿಸಿದೆ.

                                    ----೨----

                                     ವಾಸ್ತವದ ಶಾಖ ನನ್ನ ಕನಸುಗಳಿಗೆ ಕಾವು ಕೊಡಲಾರಂಭಿಸಿತು.ನಿಧಾನವಾಗಿ
ಮಂಜುಕರಗಿ ಚಿತ್ರ ಸ್ಪಷ್ಟವಾಗತೊಡಗಿತು.  ಹಿಂದೊಮ್ಮೆ ವೈಭವದಿಂದ ಮೆರೆದ ಜಾಗೀರ್ ದಾರ ಮನೆತನ. ಮಾವ
ಅದಾವುದೋ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದರು.ಆಸ್ತಿ ಕಳಕೊಂಡಿದ್ದರು.ಹಿಂದೆ ಅನುಭವಿಸಿದ ಸುಖದ ಅಮಲು ಅದರ ವ್ಯಾಮೋಹ ಇನ್ನೂ ಪ್ರಬಲವಾಗಿತ್ತು.ಮಗಳ ಲಗ್ನದ ಖರ್ಚು ಅನಂತ್ ರ ಖಾಸಗಿ ನೌಕರಿಯ ಸಂಬಳ ಎರಡೂ
ಲೆಕ್ಕ ತಾಳೆಯಾಗುತ್ತಿರಲಿಲ್ಲ.ದುಡಿಯುವ ಸೊಸೆ ನನು ಅವರಿಗೆ ಆಶಾಕಿರಣವಾಗಿದ್ದೆ.ನನ್ನ ಸಂಬಳದ ಆಧಾರದ ಮೇಲೆ ಸಾಲ ಸುಲಭವಾಗಿ ಸಿಕ್ಕಿತು.ನಾದಿನಿಯ ಮದುವೆ, ಸೈಟು ಖರೀದಿ , ಮನೆಗೆ ಟಿವಿ ಫ್ರಿಜ್ ಹೀಗೆ..ಅಗತ್ಯಗಳು
ಹುಟ್ಟಿಕೊಂಡವು.ನನಗೆ ಒಂದು ವಿಚಿತ್ರ ಸಂತೋಷವಿತ್ತು. ಸಾಧಾರಣ ರೂಪು ನನ್ನದು ಅನಂತ ನೋಡಿದ್ರೆ ಸ್ಫುರದ್ರೂಪಿ.ಮೇಲಾಗಿ ನನ್ನ ಅಕ್ಕಳ ಹಗರಣ ಅಯಾಚಿತವಾಗಿ ಸಂಭಂಧ ಒದಗಿಬಂದಿತ್ತು. ಹೀಗಾಗಿ ನಾನೂ ಹೆಚ್ಚಿಗೆ
ತಲೆ ಕೆದಿಸಿಕೊಂಡಿರಲಿಲ್ಲ.ಸಾಲದ ಕಂತು ಮುರಿದು ಉಳಿದ ಸಂಬಳ ಅತ್ತೆಯ ಕೈಲಿ ಇಡುತ್ತಿದ್ದೆ.ನನ್ನ ಅಕಸ್ಮಾತಾದ
ಖರ್ಚುಗಳಿಗೂ ಅತ್ತೆ ಮುಂದೆ ಕೈ ಚಾಚಬೇಕಾಗುತ್ತಿತ್ತು. ಈ ವಿಷಯ ಸ್ವಲ್ಪ ಮುಜುಗರನೂ ತರುತ್ತಿತ್ತು.ಬೇಸರ ಬರಿಸಿದ್ದು ಅನಂತ್ ಮಾಡುವ ಖರ್ಚು.ಅವರ ಸಂಬಳದಲ್ಲಿ ಉಳಿಸಿ ಸುಮಿಯ ಮುಂದಿನ ಭವಿಷ್ಯಕ್ಕೆ ಕೂಡಿಡಿ ಅಂತ
ನಾನು ದುಂಬಾಲು ಬೀಳುತ್ತಿದ್ದೆ. ಉಡಾಫೆಯ ಉತ್ತರವೇ ಹಲವುಬಾರಿ ನನಗೆ ಸಿಗುತ್ತಿತ್ತು.

                                    ನನ್ನ ಸಹೋದ್ಯೋಗಿಗಳಿಗೂ ನನ್ನ ಈ ವರ್ತನೆ ಸೇರುತ್ತಿರಲಿಲ್ಲ. ನಿಮ್ಮ ಬಗ್ಗೆನೂ
ವಿಚಾರಿಸಿಕೊಳ್ಳಿ ಇದು ಅವರು ಆಗಾಗ ಹೇಳುತ್ತಿದ್ದ ನುಡಿ.ಹಾಗೂ ನಾ ಮಾಡುತ್ತಿರುವುದು ತಪ್ಪು ಇದು ಅವರ ವಾದ.
ನನ್ನನ್ನು ನಾನೇ ಮೋಸಗೊಳಿಸುತ್ತಿರುವೆ ಇದು ಅವರ ವಾದ.ನಿಧಾನವಗಿ ಯೋಚಿಸಿದರೆ ಅವರು ಹೇಳಿದ ಮಾತಿನಲ್ಲಿ ಸತ್ಯಾಂಶ ಇತ್ತು.ನಾ ದುಡಿಯುವ ಯಂತ್ರವಾಗಿದ್ದೇನೆಯೇ ಈ ಸಂಶಯ ಕಾಡಹತ್ತಿತು. ನನಗಿಂತಲೂ
ನಾ ತರುವ ಸಂಬಳವೇ ಮಹತ್ವ.ನಾನೇನಾದರೂ ಕೆಲಸ ಬಿಟ್ಟರೆ ಮಾವನ ಮನೆಯ ಪರಿಸ್ಥಿತಿ ಏರುಪೇರಾಗುತ್ತದೆ
ಇದು ನನಗೆ ಗೊತ್ತಿದ್ದ ವಿಷಯ.ಯಾಕೋ ನಾ ಮಾಡುವ ಕೆಲಸ, ನನ್ನ  ಅಸ್ತಿತ್ವ ಎಲ್ಲ ಒಂದಕೊಂದು ತಾಳೆನೇ ಇಲ್ಲ
ಅಂತ ಅನಿಸಹತ್ತಿತು.ನನ್ನ  ಬದುಕಿನ  ಈ  ದ್ವಂದ್ವಗಳ ಗಳಿಗೆಯಲ್ಲಿಯೇ ಅಕ್ಕಳ ಪತ್ರ ನನ್ನ  ಕೈ ಸೇರಿದ್ದು.

--------------೦-------------------------------೦--------------------------------------
                                       ಪತ್ರವಿಡೀ ಅಕ್ಕ ನಿಂತಹಾಗೆ ನನ್ನಲ್ಲಿ ಸೆರಗೊಡ್ಡಿ ಬೇಡಿದಹಾಗೆ ಅನ್ನಿಸಿತು.
ಆದರ್ಶ ತಲೆಯಲ್ಲಿಟ್ಟುಕೊಂದು ಮೆಚ್ಚಿದವನ ಜಾತಿ,ಅಂತಸ್ತು ಲೆಕ್ಕಿಸದೆ ಕೈ ಹಿಡಿದಿದ್ದಳು ಅಕ್ಕ. ನಿಧಾನವಾಗಿ ವಾಸ್ತವತೆಯ ಶಾಖಕ್ಕೆ ಆದರ್ಶಗಳು ಮರೀಚಿಕೆಯಾಗಿದ್ದವು. ಅತ್ತೆಮನೆಯಿಂದ, ತವರುಮನೆಯಿಂದ ಯಾವ
ನಿರೀಕ್ಷೆಗಳಿಲ್ಲದೆ ಸ್ವತಂತ್ರವಾಗಿ ಬದುಕುವ ಹಂಬಲ ಅವರಿಗೇನೋ ಇತ್ತು. ಆದರೆ ಗಂಡ ಕೆಲಸಮಾಡುತ್ತಿದ್ದ ಫ್ಯಾಕ್ಟರಿ
ಲಾಕೌಟ್ ಆದಾಗ ಅತ್ತೆಮನೆಯ ಆಶ್ರಯ ಅನಿವಾರ್ಯವಾಯಿತು. ಮೂದಲಿಕೆಗಳಿಗೂ ನಾಂದಿಯಾಯಿತು. ಮಗನಿಗೆ
ಮರುಳು ಮಾಡಿದ ಸೊಸೆ ವರದಕ್ಷಿಣೆ ಒಡವೆ ಅಂತೂ ದೂರವೇ. ಮೇಲಾಗಿ ಸೊಸೆ ಜತೆ ಹಿಂಬಾಲಿಸಿದ  ಮಕ್ಕಳು
ಬೇರೆ. ಅವಳ ಅತ್ತೆಗೆ ಕಿರಿಕಿರಿಯಾಗಿತ್ತು. ಅಕ್ಕ ಮಗನಿಗೆ ಹಿಡಿದ ಅನಿಷ್ಟ ಅಂತ ಅತ್ತೆ ಭಾವಿಸಿದ್ದಳು. ಮೊದಮೊದಲು
ಅಕ್ಕ ಎದಿರು ವಾದಿಸಲಿಲ್ಲ.ಮೀರಿದಾಗ ಸೆಟೆದು ನಿಂತಳು. ಅವಳನ್ನು ಮೆಚ್ಚಿದವ ಸಹ ತಾಯಿಯ ತಾಳಕ್ಕೆ ಕುಣಿಯ
ತೊಡಗಿದಾಗ ಅಕ್ಕ ಕಂಗಾಲಾದಳು. ಕದ್ದುಮುಚ್ಚಿ ಅವ್ವನನ್ನು ಭೇಟಿಯಾದಳು. ಅವ್ವಳಿಂದ ಸಿಕಿದ್ದು ಬರೀ ಸಮಾಧಾನದ ಮಾತು ಹಾಗೂ ನನ್ನ  ವಿಳಾಸ.

                                      ಅವಳ ಪತ್ರದ  ಸಾರಾಂಶವಿಷ್ಟೇ. ಎರಡು ಮಕ್ಕಳ ಭಾರ ಬಹಳವಾಗಿತ್ತು. ಹಿರಿಯವ ಆಗಲೇ ಕೂಲಿ ಮಾಡಲಾರಂಭಿಸಿದ್ದ. ಚಿಕ್ಕವ ಓದಿನಲಿ  ಚುರುಕಾಗಿದ್ದ ಆದರೆ ಅಕ್ಕ ಅದನ್ನು  ಪ್ರೋತ್ಸಾಹಿಸುವ ಸ್ಥಿತಿಯಲ್ಲಿಲ್ಲ. ಅವನಿಗೆ ಹಾಸ್ಟೆಲ್ ನಲ್ಲಿ ಇರಿಸಿ ಒಳ್ಳೆಯ ಶಿಕ್ಷಣ ಕೊಡಿಸುವ  ಇರಾದೆ ಹೊಂದಿದ್ದಳು.
ಸಹಾಯಕ್ಕಾಗಿ ನನ್ನೆಡೆ ತಿರುಗಿದ್ದಳು. ಅವಳ ಚಿಕ್ಕ ಮಗನ ಓದಿಸುವ, ವಸತಿಯ ಖರ್ಚು ಹೊರೆ ಎಂದು ಪತ್ರದಲ್ಲಿ
ಆಗ್ರಹಿಸಿದ್ದಳು. ನೌಕರಿಯಲ್ಲಿದ್ದುದರಿಂದ ಇದನ್ನು ಸುಲಭವಾಗಿ ನಿರ್ವಹಿಸಬಹುದು ಇದು ಅವಳ  ಲೆಕ್ಕಾಚಾರ.     
ಅವಳ ಪತ್ರ ನನ್ನಲ್ಲಿ ಒಂದು ಹೊಸ ಪ್ರಶ್ನೆ ಹುಟ್ಟುಹಾಕಿತು.ನಾನು ಅವಳ ಮಗನಿಗೆ ಓದಲು ನೆರವಾಗಲು ಸಾಧ್ಯವೇ
ಪಂಜರದ ಗಿಳಿಯಂತಿರುವ ಈ ಬದುಕೆ ಹಾಗಾಗಲು ಸಾಧ್ಯವೆ?

                                        ಯೋಚಿಸಿದಂತೆಲ್ಲ ಅನೇಕ ಸಾಧ್ಯತೆಗಳು ಎದುರಾದವು. ಮುಖ್ಯವಾಗಿ ಅತ್ತೆ ಮಾವ ಹಾಗೂ ಅನಂತ್ ರ ಪ್ರತಿಕ್ರಿಯೆ ಹೇಗಿರಬಹುದು.ಬೇರೆಯವ ಅದರಲ್ಲೂ ಜಾತಿಬಿಟ್ಟು ಹೋದವಳ ಮಗನಿಗೆ
ನಾನು ನೆರವಾಗುವುದು ಅವರು ಖಂಡಿತ ಒಪ್ಪುವುದಿಲ್ಲ.ರಾಧ್ಧಾಂತ ಆಗುವುದು ಖಂಡಿತ.ಜಾಗೀರ್ದಾರ ಮನೆತನದ
ಮಾನ ಮರ್ಯಾದೆ ಹೀಗೆ ಹಾರಾಡಬಹುದು.ಅವ್ವ ಅಣ್ಣರಿಂದಲೂ ನನ್ನ ಹೆಜ್ಜೆಗೆ ಪ್ರೋತ್ಸಾಹ ಸಿಗಲಾರದು. ಆದರೆ
ಯಾವುದೋ ಪ್ರತಿಭಟನೆಯ ಅಂಕುರ ನನಗರಿವಿಲ್ಲದೇ ನನ್ನಲ್ಲಿ ಸೆಲೆಯೊಡೆಯುತಿದೆ ಅನಿಸಿತು. ಇನ್ನೆಷ್ಟು ದಿನ
ಇವರ ಆಸೆ ಆಕಾಂಕ್ಷೆ ಪೂರೈಸಬೇಕು.ಮೇಲಾಗಿ ನನ್ನ ಗಳಿಕೆಯ   ಅಲ್ಪಭಾಗ ಆ ಹುಡುಗನ ಓದಿಗೆ ಖರ್ಚಾಗಲಿದೆ
ಅದರಿಂದ ಅಂತಹ ವಿಪರೀತವೇನೂ ಆಗುವುದಿಲ್ಲ . ನಾ ಅಕ್ಕನ ಮಗನ ಓದಿಗೆ ನೆರವಾಗಿ ಆ ಹುಡುಗ ಮುಂದೆ ದೊಡ್ದವನಾಗಿ ಉದ್ಯೋಗ ಗಳಿಸಿದರೀತಿ ಹೊಸ ಹೊಸ ಕನಸು ಟಿಸಿಲೊಡೆಯಹತ್ತಿತು. ನಿರ್ಧಾರ ಅಚಲವಾಯಿತು.
                                                                                               

21 comments:

  1. ದೇಸಾಯರೇ
    ಕಥೆಯ ಚೌಕಟ್ಟು ಚೆನ್ನಾಗಿದೆ, ಎಲ್ಲೂ ಲ೦ಬಿಸದೇ, ವೃಥಾ ವಿಜ್ರ೦ಭಣೆ ಮಾಡದೆ, ಹೇಳಬೇಕಾದ್ದನ್ನು ಕ್ಲುಪ್ತವಾಗಿ ಹೇಳಿದ್ದೀರಿ. ಕಥೆಯ ವಸ್ತು ವಾಸ್ತವಕ್ಕೆ ಹತ್ತಿರವಿದೆ. ಚೆನ್ನಾಗಿದೆ ನಿಮ್ಮ ಶೈಲಿ, ಇನ್ನಷ್ಟು ಬರೆಯಿರಿ. ನಿಮ್ಮೊಳಗಿನ ಕಥೆಗಾರ ನನ್ನು ಹೊರ ಕರೆ ತನ್ನಿ.

    ReplyDelete
  2. ತುಂಬಾ ಚೆನ್ನಾಗಿದೆ ಕಥೆ ಮತ್ತು ಅದರ ಓಟ.

    ReplyDelete
  3. ದೇಸಾಯರ,
    ವಾಸ್ತವ ಜೀವನದ ಕತೆಯನ್ನು ವಾಸ್ತವ ಶೈಲಿಯಲ್ಲಿ ಬರದೀರಿ. ಭಾರೀ ಪಸಂದ ಬಿತ್ತು.
    ನಿಮ್ಮ ನೆನಪಿನ ಬುತ್ತಿ ದೊಡ್ಡದದ. ಅದನ್ನ ಕತೆಯಾಗಿಸೊ ಸಾಮರ್ಥ್ಯ ನಿಮಗದ. ಇನ್ನೂ ಹೆಚ್ಚು ಕತಿಗಳು ಬರಲಿ.

    ReplyDelete
  4. ದೆಸಾಯರೇ ;ಕಥೆ ಚೆನ್ನಾಗಿದೆ.ನಿಮ್ಮಿಂದ ಇನ್ನಷ್ಟು ಉತ್ತಮ ಕಥೆಗಳು ಹೊರಬರಲಿ.ಯಾವುದೇ ಹಿಂಜರಿಕೆ ಇಲ್ಲದೆ ಬರೆಯಲು ಶುರುಮಾಡಿ .

    ReplyDelete
  5. ದೇಸಾಯಿ ಸರ್
    ಜೀವನ ಕತೆಯನ್ನು ವಾಸ್ತವ ರೀತಿಯಲ್ಲಿ ಬರೆದು ತೋರಿಸಿದಿರಿ.ನಿಮ್ಮೊಳಗಿದ್ದ ಉತ್ತಮ ಕತೆಗಾರನನ್ನು ಹೊರ ತಂದಿದ್ದೀರ ..ಹೀಗೆಯೇ ಹೊರಬರುತ್ತಿರಲಿ ನಿಮ್ಮ ಕತೆ.

    ReplyDelete
  6. ದೇಸಾಯೀಜೀ, ಕಥೆ ಚನಾಗಿದೆ.. ಇಷ್ಟ ಆಯ್ತು.. ನಮ್ಗೆ ಇನ್ನೂ ಕಥೆ ಬರ್ಕೊಡಿ.

    ReplyDelete
  7. ಪರಾಂಜಪೆ ಅವರೆ ಕತೆಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವಿರಿ.ಧನ್ಯವಾದಗಳು

    ReplyDelete
  8. ಸಿತಾರಾಮ್ ಅವರೆ ತಮ್ಮ ಅನಿಸಿಕೆ ಟಾನಿಕ್ ಇದ್ದ ಹಾಗೆ..ವಂದನೆಗಳು..

    ReplyDelete
  9. ಕಾಕಾ ಇದು ಕಲ್ಪನೆಯ ಕೂಸು ನೆನಪಿನಬುತ್ತಿ ಅಲ್ಲ ನಿಮ್ಮ ಆಶೀರ್ವಾದ ಹೀಗೆಯೇ ಇರಲಿ...

    ReplyDelete
  10. ಡಾಕ್ಟರ್ ನನಗೆ ಹಿಂಜರಿಕೆ ಇಲ್ಲ ಈ ಕತೆ ನಾನೇ ಓದಿದಾಗ ಸಮಕಾಲೀನ ಅಲ್ಲವೇನೋ ಅನಿಸಿತ್ತು. ಮೆಚ್ಚಿಕೊಂಡಿದ್ದಕ್ಕೆ
    ಧನ್ಯೋಸ್ಮಿ..

    ReplyDelete
  11. ಜೋಯಿಸರೆ ನಿಮ್ಮದು ನನ್ನ ಬ್ಲಾಗಿನಲ್ಲಿ ಮೊದಲಕಾಮೆಂಟು. ಆಗಾಗ ಬರ್ರಿ ತಪ್ಪು ಒಪ್ಪು ಹಂಚಿಕೊಳ್ರಿ...

    ReplyDelete
  12. ಸುಶ್ರುತ ಮೆಚ್ಚಿದ್ದಕ್ಕೆ ಧನ್ಯವಾದ ನಿಮ್ಮಾಸೆ ಈಡೇರಿಸುವ ಇರಾದೆ ನನಗೂ ಇದೆ

    ReplyDelete
  13. ದೇಸಾಯಿ ಸರ್

    ವಾಸ್ತವ ಜೀವನದ ಕತೆ.....ಚೆನ್ನಾಗಿದೆ..

    ReplyDelete
  14. ಉಮೇಶ್ ಸರ್, ಹೌದಲ್ಲಾ...ನಿಜ...ನಿಮ್ಮಲ್ಲಿರುವ ಕಥೆಗಾರನಿಗೆ ಕೊಡಿ ಕೆಲಸ ಸ್ವಾಮಿ...ಪರಾಂಜಪೆಯವರ ಮಾತು ಒಪ್ಪುತ್ತೇನೆ...ಬೇಕಾದಷ್ಟು ಬೇಕಾದೆಡೆ ಹಾಕಿ ಓದಿಸಿಕೊಂಡುಹೋಗುವ ಸಾಲುಗಳು,,,ಎಲ್ಲೂ ಎಳೆತ ಇಲ್ಲ ಸೆಳೆತ ಇದೆ ಕಥೆಯ ಮಧ್ಯ ನುಸುಳಲೇ ಎನ್ನುವ ಕಾತುರತೆ...ಅಭಿನಂದನೆಗಳು...

    ReplyDelete
  15. ಧನ್ಯವಾದಗಳು ಗೋರೆ ಸಾಬ್ ಮೆಚ್ಚಿದ್ದಕ್ಕೆ...

    ReplyDelete
  16. ಮನಸು ಅವರೆ ಅಪರೂಪಕ್ಕೆ ಬಂದು ಮೆಚ್ಚಿದ್ದಕ್ಕೆ ಧನ್ಯೋಸ್ಮಿ

    ReplyDelete
  17. ಆಜಾದ್ ಭಾಯಿ ಸಂತೋಷವಾಯಿತು.ಬೇಸರ ಅಂದ್ರೆ ನೀವು ಸರ್ ಅನ್ನುವುದಕ್ಕೆ ..ಆತ್ಮೀಯತೆಗೆ ಆ ಸಂಭೋಧನೆ ಮುಳುವಾಗುತ್ತದೇನೋ..ಕತೆಮೆಚ್ಚಿದ್ದಕ್ಕೆ ಧನ್ಯವಾದ

    ReplyDelete
  18. ಉಮೇಶ್ ಸಾರ್...
    ಕಥೆ ಚೆನ್ನಾಗಿದೆ.. ಚಿಕ್ಕ, ಚೊಕ್ಕದಾದ ನಿರೂಪಣೆ. ಇಷ್ಟವಾಯಿತು.. ಅದರಲ್ಲೂ ಕಥೆಯ ಅಂತ್ಯ ಒಳ್ಳೆಯ ನಿರ್ಧಾರ..

    ಶ್ಯಾಮಲ

    ReplyDelete
  19. ಶಾಮಲ ಕತೆಮೆಚ್ಚಿ ಅಭಿಪ್ರಾಯಿಸಿದ್ದಕ್ಕೆ ಧನ್ಯವಾದಗಳು

    ReplyDelete
  20. ದೇಸಾಯ್ ಸರ್,

    ಕತೆ ತುಂಬಾ ಚೆನ್ನಾಗಿ ಬರೆದ್ದಿದ್ದೀರಿ. ಇದಕ್ಕೆ ಯಾರ ಸ್ಪೂರ್ತಿ. ಎಲ್ಲೂ ಬೋರ್ ಆಗದೇ ಓದಿಸಿಕೊಂಡು ಹೋಯ್ತು..ಇನ್ನಷ್ಟು ಕತೆ ಬರೆಯಿರಿ. ಎಲ್ಲರೊಳಗೂ ಒಬ್ಬ ಕತೆಗಾರನಿರುತ್ತಾನೆ. ಸದ್ಯ ನಿಮ್ಮೊಳಗಿನ ಕತೆಗಾರ ಜಾಗೃತನಾಗಿದ್ದಾನೆ. ಅವನಿಗೆ ಕೆಲಸ ಕೊಡಿ...

    ReplyDelete