Saturday, October 2, 2010

ಮೇರೆ ಯಾರ್ ಶಬ್ಬಾ ಖೈರ್...


ಸ್ವಲ್ಪ ದಿನಗಳ ಬಿಡುವಿನ ನಂತರ ನನ್ನ ಬ್ಲಾಗಿನಲ್ಲಿ ಮತ್ತೆ ಆ ಹಳೆಯ ದಿನಗಳ ಬಗ್ಗೆ ಹೇಳುತ್ತಿರುವೆ. ಹಿಂದಿ ಸಿನೇಮಾದ ಸುವರ್ಣ ಯುಗವದು ಅಲ್ಲಿ ಪೈಪೋಟಿ ಇತ್ತು ಆದರೆ ಕಾಲೆಳೆಯುವ ಹೊಲಸುತನ ಇರಲಿಲ್ಲ.
ಹಾಡು ಹುಟ್ಟುತ್ತಿದ್ದವು ಜನರ ನಾಲಿಗೆ ಮೇಲೆ ನಲಿದಾಡುತ್ತಿದ್ದವು ಆ ಹಾಡು ಆ ಸಂಗೀತ ಇಂದೂ ಇತಿಹಾಸದಲ್ಲಿ
ಸ್ಥಾಯಿಯಾಗಿವೆ ಅಂದರೆ ಅದರ ಹಿಂದಿನ ಪರಿಶ್ರಮದ ಫಲವೇ ಸರಿ. ಅನೇಕ ಹೊಳೆಯುವ ತಾರೆಗಳ ನಡುವೆ
ನಾ ಇಲ್ಲಿ ಹೇಳಹೊರಟಿದ್ದು ಹಸರತ್ ಜೈಪುರಿ ಬಗ್ಗೆ. ಹಿಂದಿ ಸಿನೇಮಾದ ಇತಿಹಾಸ ಗಮನಿಸಿದರೆ ಒಂದು ಕಾಂಬಿನೇಶನ್
ಗಮನ ಸೆಳೆಯುತ್ತದೆ ಅದೇ ರಾಜ್ ಕಪೂರ್---ಶಂಕರ್-ಜೈಕಿಶನ್--ಶೈಲೇಂದ್ರ--ಹಸರತ್ . ಈ ಒಂದು ಪ್ರತಿಭಾಚತುಷ್ಟಯ ೧೯೪೯ ರಿಂದ ೧೯೭೧ ರ ವರೆಗೆ ಬೇರ್ಪಡದೆ ಇತ್ತು. ಈ ಸಂಗಮದಲ್ಲಿ ಅಮೃತಬಿಂದು
ರೂಪದಲ್ಲಿ ಚಿತ್ರ ರಸಿಕರಿಗೆ ಹಾಡುದೊರೆತವು. ಸದಾ ಹಸಿರಾಗಿರುವ ಮನ ಆವರಿಸುವ ಹಾಡುಗಳು.

ಹಸರತ್ ನ ಮೂಲಹೆಸರು ಇಕಬಾಲ್ ಹುಸೇನ್ . ಜೈಪೂರದ ವಾಸಿ. ತನ್ನ ತಾತನಿಂದ ಉರ್ದು,ಪರ್ಸಿಯಾ ಭಾಷೆ ಕಲಿತುಕೊಂಡ. ೧೯೪೯ ಕ್ಕೆ ಮುಂಬೈಗೆ ಬಂದಿಳಿದ ಸುರುವಾತು ಮಾಡಿದ್ದು ಕಂಡಕ್ಟರ್ ಆಗಿ. ಶಾಯರಿ ಮಾಡುತ್ತಿದ್ದ ಒಂದು ಮುಶಾಯರಾದಲ್ಲಿ ಇವನ ಗಜಲ್ ಕೇಳಿದ ಪೃಥ್ವಿರಾಜ್ ಕಪೂರ್ ತನ್ನ ಮಗ
ರಾಜಕಪೂರ್ ನಿಗೆ ಪರಿಚಯಿಸುತ್ತಾನೆ.ರಾಜಕಪೂರ್ ಆ ದಿನಗಳಲ್ಲಿ ಬರಸಾತ್ ಎಂಬ ಚಿತ್ರದ ತಯಾರಿಯಲ್ಲಿದ್ದ.
ಹಸರತ್ ಆ ಚಿತ್ರಕ್ಕೆ "ಜಿಯಾ ಬೇಕರಾರ್ ಹೈ..."," ಛೋಡ್ ಗಯೆ ಬಾಲಮ್ " ಎಂಬ ಹಾಡು ಬರೆದ.
ಆರ್ ಕೆ ಬ್ಯಾನರ್ ಹಿಟ್ ಆತು ಅಂತೆಯೇ ಆ ಚಿತ್ರಕೆ ಸಂಗೀತ ನೀಡಿದ ಶಂಕರ್ ಜೈಕಿಶನ್ ,ಹಾಗೂ ಮತ್ತೊಬ್ಬ
ಗೀತಕಾರ ಶೈಲೇಂದ್ರ ಹಾಗೂ ಹಸರತ್. ಈ ಜೋಡಿ ಮನೆಮಾತಾಯಿತು.೧೯೭೧ ರವರೆಗೆ ಈ ಕಾಂಬಿನೇಶನ್
ಮೆರೆಯಿತು. ಜೈಕಿಶನ್ ನ ಸಾವು, ಆರ್ ಕೆ ಬ್ಯಾನರಿನ "ಮೇರಾ ನಾಮ್ ಜೋಕರ್ ","ಕಲ್ ಆಜ್ ಔರ್ ಕಲ್"
ಚಿತ್ರಗಳ ಸೋಲು ಜೋಡಿ ಮುರಿಯಲು ಕಾರಣವಾದವು.

ಸ್ವಭಾವದಿಂದ ಹಸರತ್ ರೋಮಾಂಟಿಕ್ ಮನುಷ್ಯ. ತನ್ನ ಹರೆಯದ ದಿನಗಳಲ್ಲಿ ನೆರೆಯಲ್ಲಿಯ
ರಾಧಾ ಎನ್ನುವ ಹುಡುಗಿಗೆ ಪ್ರೇಮ ಪತ್ರ ಬರೆದಿದ್ದ.ಅದು ಕವಿತೆಯ ರೂಪದಲ್ಲಿತ್ತು. ಮುಂದೆ ಆ ಕವಿತೆ ಸಂಗಮ್ ಚಿತ್ರದ "ಮೇರಾ ಪ್ರೇಮ ಪತ್ರ ಪಢಕರ್ ಕೆ ತುಮ್ ನಾರಾಜ್ ನ ಹೋನ" ಅಮರ ಗೀತೆಯಾಯಿತು. ಅಂತೆಯೇ
ಹೊಸ ಶಬ್ದ ಪ್ರಯೋಗದಲ್ಲಿಯೂ ಹಸರತ್ ಎತ್ತಿದ ಕೈ. ಈ ಲೇಖನದ ತಲೆಬರಹವೂ ಅವನ ಇಂತಹ ಪ್ರಯೋಗ.
ಗುಡ್ ನೈಟ್ ಶಬ್ದ "ಶಬ್ಬಾ ಖೈರ್" ರೂಪತಾಳಿದೆ. ಸಸುರಾಲ್ ಚಿತ್ರದ "ತೇರಿ ಪ್ಯಾರಿ ಪ್ಯಾರಿ ಸೂರತ್ ಕೊ.." ಈ
ಹಾಡಿನಲ್ಲಿ "ಚಷ್ಮೆ ಬದ್ದೂರ್.." ಎನ್ನುವ ಪದ ಬಳಸಿದ. ಆರಜೂ ಚಿತ್ರದ "ಐ ನರ್ಗಿಸೆ ಮಸ್ತಾನಾ..." ಹಾಡು ಸಹ
ಹೀಗೆಯೆ ಪದ ಪ್ರಯೋಗದ್ದು. ಆದರೆ ಹಸರತ್ ಬರೆದ ಹಾಡೂ ಸೆನ್ಸಾರ್ ಸುಳಿಗೆ ಸಿಕ್ಕಿತ್ತು ಅದು ಆದದ್ದು ಹೀಗೆ...
"ಜಿಸ್ ದೇಶ್ ಮೆ ಗಂಗಾ ಬೆಹತಿ ಹೈ" ಚಿತ್ರ. ರಸಿಕ ರಾಜಕಪೂರ್ ಗೆ ಪದ್ಮಿನಿಯನ್ನು ವಿಶೇಷವಾಗಿ ತೋರಿಸುವ
ಹಂಬಲ. ನೀರಿನಲ್ಲಿ ಮೀನಿನಂತೆ ಬಳಕುತ್ತ ಅವಳು ಪರದೆಯ ಮೇಲೆ "ಹೊಯ್ ಮೈನೆ ಪ್ಯಾರ್ ಕಿಯಾ " ಅಂದಾಗ
ಆಗಿನ ಹುಡುಗರ ಎದೆ ಹಾರಿದ್ದವು.ಇದೇ ಹಾಡಿನ ಒಂದು ಸಾಲು "ಧಿರೆ ಧಿರೆ ಆಖಿರ್ ಬಂದ್ ಕಲಿ ಮುಸ್ಕಾಯಿ.." ಈ
ಸಾಲಿಗೆ ಸೆನ್ಸಾರ್ ಆಕ್ಷೇಪ ಎತ್ತಿತು. ಹಸರತ್ ಆ ಸಾಲನ್ನು " ಮನ್ ಕಿ ಕಲಿ ಮುಸ್ಕಾಯಿ.." ಅಂತ ಬದಲಾಯಿಸಿ ಬರೆದ.
ಇತರೇ ಸಂಗೀತಗಾರರ ಜತೆಗೂ ಹಸರತ್ ಕೆಲಸಮಾಡಿದ್ದ. ಅದು ರಾಮಲಾಲ್ ಇರಬಹುದು.
ಅಥವಾ ಸಚಿನ್ ದೇವ್ ಬರ್ಮನ್ ಇರಬಹುದು..ಇವರ ಜೊತೆಗೂ ಹಿಟ್ ಹಾಡು ನೀಡಿದ್ದ. ಸೆಹರಾ ಚಿತ್ರದ
"ಪಂಖ್ ಹೋತಿ ತೋ ಉಡ್ ಆತಿರೆ..." ರಾಮಲಾಲ್ ಸಂಗೀತದ್ದು. ತೇರೆ ಘರ್ ಕೆ ಸಾಮನೆ ಯಲ್ಲಿ ದಾದಾ ಬರ್ಮನ್
ಜೊತೆ ಕೆಲಸ ಮಾಡಿದ್ದ. ಈ ಚಿತ್ರದ ಎಲ್ಲ ಹಾಡುಗಳೂ ಹಿಟ್ ಆಗಿದ್ದವು. ರೋಮಾನ್ಸ ಈ ಚಿತ್ರದ ಜೀವಾಳ..ರಫಿ ಹಾಡಿದ " ದಿಲ್ ಕಾ ಭವರ್ ಕರೆ ಪುಕಾರ್...", " ತು ಕಹಾ ಯೇ ಬತಾ ಇಸ್ ನಶೀಲಿ ರಾತ್ ಮೆ..". ಹಾಡಿನಲ್ಲಿ
ಅಮೃತಧಾರೆ ಇತ್ತು.

ಹಸರತ್ ಬರೆದ ಹಾಡುಗಳ ಪಟ್ಟಿ ದೊಡ್ಡದಿದೆ...ಹೆಕ್ಕಿ ಮುತ್ತುಗಳನ್ನು ಮಾತ್ರ ಆರಿಸಿರುವೆ..


೧) ಎಹಸಾನ್ ತೇರಾ ಹೋಗಾ ಮುಝ ಪರ್ ----ಚಿತ್ರ--ಜಂಗಲಿ

೨) ಆಂಸೂ ಭರಿ ಹೈ ಯೇ ಜೀವನ್ ಕೆ ರಾಹೆ---ಚಿತ್ರ-- ಪರ್ವರಿಷ್

೩) ಬೇದರ್ದಿ ಬಾಲಮಾ ತುಜಕೋ ಮೇರಾ ಮನ್ --ಚಿತ್ರ-- ಆರಜೂ

೪) ದಿಲ್ ಕೆ ಝರೋಕೆ ತುಜ್ ಕೊ ಬಿಠಾಕರ್ --ಚಿತ್ರ--ಬ್ರಹ್ಮಚಾರಿ

೫) ಮುಝಕೊ ಅಪನೆ ಗಲೆ ಲಗಾಲೋ ಐ ಮೇರೆ ---ಚಿತ್ರ--ಹಮ್ರಾಹಿ

೬) ತೇರಾ ಮೇರಾ ಪ್ಯಾರ್ ಅಮರ್ ಫಿರ್ ಕ್ಯೂಂ--ಚಿತ್ರ-- ಅಸಲಿ ನಕಲಿ

೭) ಮೇರಿ ಮೊಹಬ್ಬತ್ ಜವಾಂ ರಹೇಗಿ...ಚಿತ್ರ---ಜವಾ ಮೊಹಬ್ಬತ್

೮) ತುಮನೆ ಕಿಸಿಕೆ ಜಾನ್ ಕೊ ಜಾತೆಹುಯೆದೇಖಾಹೈ---ಚಿತ್ರ--ರಾಜಕುಮಾರ್

೯) ಜಾನೆ ಕಹಾಂ ಗಯೇ ವೊ ದಿನ್ ===ಚಿತ್ರ--ಮೇರಾ ನಾಮ್ ಜೋಕರ್

೧೦) ಸುನ್ ಸಾಯಿಬಾ ಸುನ್ ಪ್ಯಾರ್ ಕಿ ಧುನ್ --ಚಿತ್ರ--ರಾಮ್ ತೇರಿ ಗಂಗಾ ಮೈಲಿ


ಮೇಲಿನ ಪಟ್ಟಿಯಲ್ಲಿ "ಬಹಾರೋ ಫೂಲ್ ಬರಸಾವೊ","ಜಿಂದಗಿ ಎಕ್ ಸಫರ್ ಹೈ ಸುಹಾನಾ" ಸೇರಿಸಿಲ್ಲ,ಈ ಎರಡೂ
ಗೀತೆಗಳಿಗೆ ಹಸರತ್ ಗೆ ಫಿಲ್ಮ ಫೇರ್ ಪ್ರಶಸ್ತಿ ಸಿಕ್ಕಿತ್ತು. ಹಸರತ್ ಗೀತೆಗಳಲ್ಲಿ ಪ್ರೀತಿ ಇತ್ತು ಜೀವದ ಒರತೆ ಇತ್ತು
ರೋಮಾನ್ಸ ಇತ್ತು. ಶಾಯರಿ ದೃಷ್ಟಿಯಿಂದಾಗಲಿ,ಸಂದೇಶ ರೂಪದಲ್ಲಾಗಲಿ ಅವನ ಹಾಡು ಗಣನೆಗೆ ಬರಲಿಕ್ಕಿಲ್ಲ
ಆದರೆ ಯಶಸ್ಸಿನಲ್ಲಿ ಅವನ ಹಾಡು ಸದಾ ಮುಂದು.ವ್ಯವಹಾರದಲ್ಲೂ ಹಸರತ್ ಚುರುಕು. ಅಂತ್ಯಕಾಲದಲ್ಲಿ ನೆರವಿಗೆ
ಗೋಗರೆಯಬೇಕಾಗಲಿಲ್ಲ ಅವನಿಗೆ. ೧೯೯೯ ರಲ್ಲಿ ಹಸರತ್ ಇಲ್ಲವಾದ.

ಹಿಂದಿ ಸಿನೇಮಾದ ಅಸಂಖ್ಯ ತಾರೆಗಳಲ್ಲಿ ಹಸರತ್ ಒಬ್ಬ. ಮುಖ್ಯ ಎಂದರೆ ಕಾಲನ ಗತಿಗೆ ಈ ತಾರೆಯ ಹೊಳಪು
ಕುಂದಿಲ್ಲ.

8 comments:

  1. ಉಮೇಶ್ ದೇಸಾಯಿಯವರೆ...

    ಹಳೆಯ ಗೀತೆಗಳನ್ನು ನೆನಪಿಸಿ ಮತ್ತೊಮ್ಮೆ ನಮ್ಮನ್ನು ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಮಾಡಿದ್ದೀರಿ..

    ಎಂಥಹ ಹಾಡುಗಳು...
    ಅವುಗಳ ಸಂಗೀತ.. !!

    ಅವು ಯಾವಾಗಲೂ ಮನತಟ್ಟುತ್ತವೆ...
    ಸದಾ ಹಸಿರಗಿರುತ್ತವೆ...

    ಆ ಅದ್ಭುತ ರಚನೆಕಾರರಿಗೂ..
    ಸಂಗೀತಕಾರರಿಗೂ...
    ಮಧುರ ಕಂಠದ ಗಾಯಕರಿಗೂ...

    ಇದನ್ನೆಲ್ಲ ಮತ್ತೊಮ್ಮೆ ಮೆಲುಕು ಹಾಕುವಂತೆ ಮಾಡಿದ ನಿಮಗೂ...

    ನನ್ನದೊಂದು ಸಲಾಮ್...!!

    ReplyDelete
  2. ದೇಸಾಯರ,
    ಈ ಎಲ್ಲ ಹಾಡುಗಳ ಧುನ್ ನೆನಪಿಸಿಕೊಂಡು ಮತ್ತೊಮ್ಮೆ ಸುರಲೋಕದಲ್ಲಿ ವಿಹರಿಸಿದೆ. ಹಸರತನ ನೆನಪು ಮಾಡಿಕೊಟ್ಟದ್ದಕ್ಕಾಗಿ, ಧನ್ಯವಾದಗಳು.

    ReplyDelete
  3. ದೇಸಾಯ್ ಸರ್,

    ಹಳೆಯ ಗೀತೆಗಳು ಮತ್ತು ಹಸರತ್ ಬಗ್ಗೆ ಬರೆದು ನಮ್ಮನ್ನೆಲ್ಲಾ ಪುಳಕಗೊಳಿಸಿದ್ದಕ್ಕೆ ಥ್ಯಾಂಕ್ಸ್..ಓಲ್ಡ್ ಇಸ್ ಗೋಲ್ಡ್ ಅನ್ನುವುದು ಇದಕ್ಕೆ ಅಲ್ಲವೇ!

    ReplyDelete
  4. ಹಳೆಯ ಚಿತ್ರಗೀತೆಗಳು ಮಾಧುರ್ಯ, ಅರ್ಥಗರ್ಭಿತ ನುಡಿಗಟ್ಟು ಎ೦ದೆ೦ದಿಗೂ ಇಷ್ಟವಾಗುವ ವಿಷಯ ಗಳು. ಹಸರತ್ ಜೈಪುರಿ ಅವರ ಪರಿಚಯ ಚೆನ್ನಾಗಿ ಮಾಡಿದ್ದೀರಿ.

    ReplyDelete
  5. VERY NICE! ಬಹಳ ಚೆನ್ನಾಗಿದೆ, ಹಸರತ್ ಜೈಪುರಿ ಅವರ ಪರಿಚಯ ಚೆನ್ನಾಗಿ ಮಾಡಿದ್ದೀರಿ, ಹಲವು ಧನ್ಯವಾದಗಳು

    ReplyDelete
  6. ಇವೆಲ್ಲಾ ನನ್ನ ಮೆಚ್ಚಿನ ಗೀತೆಗಳೇ. ಆದರೆ ಹಸರತ್ ಜೈಪುರಿ ಬರೆದದ್ದೆಂದು ಗೊತ್ತಿರಲಿಲ್ಲ. ಎಲ್ಲವನ್ನೂ ನೆನಪಿಸಿ ಮನ ಖುಷಿಯಾಯಿತು. ಆ ಗೀತ ರಚನಾಕರರನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.

    ReplyDelete
  7. desai sir,
    ee ellaa haaDugaLu saahityadindale geddiddavu.....

    top ten haaDugaliddante ive...

    dhanyavaada sir....

    ReplyDelete
  8. ಹೆಗಡೇಜಿ ನಿಮ್ಮ ಸಲಾಮಿಗೆ ಪ್ರತಿ ಸಲಾಮು ೧೯೮೦-೮೫ ದಲ್ಲಿ ಈ ಹಾಡುಗಳು,ವಿವಿಧಭಾರತಿ,ಅಮೀನ್ ಸಯಾನಿ ಹೀಗೆ ನನ್ನ ಬಾಳಿನಪುಟಗಳ ಮಧುರ ಅಧ್ಯಾಯಗಳವು. ಮೆಚ್ಚಿಗೆಗೆ ಧನ್ಯವಾದ

    ಕಾಕಾ ನಿಮ್ಮ ಸುರಲೋಕದ ಪ್ರವಾಸ ಸುಖಕರವಾಗಿತ್ತೇ

    ಶಿವು ಹಳೆಯದು ನಿಜಕ್ಕೂ ಹೊನ್ನು ಆಗಾಗ ನೆನಪು ಮಾಡಿಕೊಳ್ಳುತ್ತಿರಬೇಕು ಮೆಚ್ಚಿಗೆಗೆ ಧನ್ಯೊಸ್ಮಿ

    ಪರಾಂಜಪೆ ಅವರೆ ಮೆಚ್ಚಿ ಪ್ರತಿಕ್ರಿಯಿಸಿರುವಿರಿ ಧನ್ಯವಾದಗಳು

    ಭಟ್ ಸರ್ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು

    ಸೀತಾರಾಮ್ ಹೀಗೆಯೇ ಆಗುತ್ತದೆ ಹಾಡು ಗಾಯಕನ ಹೆಸರಲ್ಲಿ ಪ್ರಖ್ಯಾತವಾಗುವುದೇ ಹೆಚ್ಚು ರಚನಾಕಾರ ನನ್ನು ಗುರುತಿಸುವುದು ನನ್ನ ಪ್ರಯತ್ನ

    ದಿನಕರ್ ನೀವು ಹೇಳೋದು ಸರಿ ಆ ಹಾಡುಗಳ ಸಾಹಿತ್ಯದಲ್ಲಿ ತತ್ವವಿದೆ ಅಂತೆಯೇ ಅವು ಗೆದ್ದಿದ್ದು

    ReplyDelete