Sunday, September 12, 2010

"ಮಾಮರವೆಲ್ಲೊ ಕೋಗಿಲೆ ಎಲ್ಲೋ.."ಉದಯಶಂಕರ್ ಬರೆದ ಬಾಲು ಅವರಿಗೆ ಕನ್ನಡದಲ್ಲಿ ಶಾಶ್ವತ ಸ್ಥಾನ ದೊರಕಿಸಿಕೊಟ್ಟ್
ಗೀತೆ ಇದು.ತುಂಬಾ ಜನಪ್ರಿಯವೂ ಆಗಿತ್ತು. ಈ ಹಿಂದೆಯೂ ಅನೇಕ ಮಹನೀಯರು ತಮ್ಮ ಕಂಠಸಿರಿಯಿಂದ
ನಮ್ಮ ಕನ್ನಡ ಸಿನೇಮಾಕ್ಕೆ ಸೇವೆ ಸಲ್ಲಿಸಿದ್ರು. ಅದು ಟಿ.ಎಮ್ ಸೌಂದರ್ ರಾಜನ್ , ಪೀಠಾಪುರಂ, ಘಂಟಸಾಲ
ಅಥವಾ ಶಿರ್ಕಾಳಿ ಗೋವಿಂದರಾಜನ್ ("ರಾಮನ ಅವತಾರ.." ಹಾಡು ನೆನಪಿದೆಯೇ) ಈ ಎಲ್ಲ ಮಹನೀಯರಲ್ಲಿ
ಒಂದು ವಿಷಯ ಸಾಮಾನ್ಯ ಅಂದರೆ ಇವರಾರಿಗೂ ಕನ್ನಡ ಸುಲಲಿತವಾಗಿ ಬರುತಿರಲಿಲ್ಲ ಆದ್ರೂ ಇವರು ಕನ್ನಡದಲ್ಲಿ
ಹಾಡಿದರು ಕರ್ನಾಟಕದ ಜನ ಮೆಚ್ಚಿಕೊಂಡ್ರು ಕೂಡ..! ಹಳೆ ಹಾಡು ಹಾಗೆಯೇ ಮೆಲುಕು ಹಾಕಿರಿ ಇವರು ಹಾಡಿದ
ಹಾಡುಗಳಲ್ಲಿ ಕನ್ನಡತನ ಇಣುಕುತ್ತದೆಯೇ....ಆದರೂ ಇವರು ಹಾಡಿದ ಗೀತೆಗಳು ಜನಪ್ರಿಯ ಆದವು. ಅದರಲ್ಲಿ
ಘಂಟಸಾಲ ಅಂತೂ ಕನ್ನಡದ ಮಟ್ಟಿಗೆ ಸೂಪರ್ ಸಿಂಗರ್. ಪಿ.ಬಿ.ಶ್ರೀನಿವಾಸ್ ಬಂದಾಗ ಮಾತ್ರ ಘಂಟಸಾಲ ಸ್ಥಾನ
ಸ್ವಲ್ಪ ಅಲುಗಾಡಿತು.ಪಿಬಿಎಸ್ ರ ಒಂದು ಉತ್ತಮ ಗುಣ ಅಂದರೆ ಸ್ಪಷ್ಟ ಉಚ್ಚಾರ ಹಾಗೂ ಅಗತ್ಯ ಬಿದ್ದ ಕಡೆ ಮಾಡುತ್ತಿದ್ದ " ಶಬ್ದಫೇಕ್". ರಾಜಕುಮಾರ ಶರೀರ ವಾದರೆ ಪಿಬಿಎಸ್ ಶಾರೀರ ಅನ್ನುವ ಮಟ್ಟಿಗೆ ಪ್ರಸಿದ್ಧಿಯಾದರು.
ಪಿಬಿಎಸ್ ಒಂಥರಾ ಸಮುದ್ರ ಇದ್ದ ಹಾಗೆ ಯಾಕೆಂದರೆ ಅವರಿಗೆ ಕನ್ನಡವಲ್ಲದೆ ಬೇರೆ ಭಾಷೆ ಸಹ ಸಲೀಸಾಗಿ ಬರುತ್ತಿದ್ದವು. ಅವರನ್ನು ಕನ್ನಡದ ಮೊದಲ ಹಿನ್ನೆಲೆ ಗಾಯಕ ಅನ್ನಬಹುದೇನೋ ಯಾಕೆಂದರೆ ಅವರಿಂದ ಹೊಮ್ಮಿದ
ಕನ್ನಡ ಸುಲಲಿತವೂ ಕೇಳಲು ಹಿತಕರವೂ ಆಗಿತ್ತು. ೬೦ರ ದಶಕ ಮುಗಿಯುತ್ತಿದ್ದ ವೇಳೆ ಕನ್ನಡಕ್ಕೆ ಇನ್ನೊಬ್ಬ ಪರಭಾಷಾ ಗಾಯಕ ಪರಿಚಯವಾದ. ಅವರೇ ಎಸ್ ಪಿ ಬಾಲಸುಬ್ರಹ್ಮಣ್ಯಂ....!

ನಾ ಸಣ್ಣವನಿದ್ದಾಗ ಧಾರವಾಡ ಸ್ಟೇಶನ್ನಿನ ಅಭಿಲಾಶಾ ಕಾರ್ಯಕ್ರಮ ಕೇಳುತ್ತಿದ್ದೆ. ಆಗೆಲ್ಲ ಅವಾಗಿನ ಹಿಟ್ ಹಾಡುಗಳಾದ " ಬಾಜಿ ಕಟ್ಟಿ ನೋಡು ಬಾರಾ", "ನಮ್ಮೂರ್ನಾಗ್ ನಾನೊಬ್ನೆ ಜಾಣ.." ,"ನಮ್ಮ
ಸಂಸಾರ ಆನಂದ ಸಾಗರ" ಹೀಗೆ ಹಾಡು ಕೇಳಿಬರುತ್ತಿದ್ದವು. ಒಂದು ವಿಶೇಷ ಅಂದರೆ ಮೇಲಿನ ಎಲ್ಲ ಹಾಡುಗಳಲ್ಲಿ
ಎಸ್ಪಿಬಿ ದನಿಯಿತ್ತು ಮತ್ತು ಆ ದನಿ ಕೇಳಲು ವಿಚಿತ್ರ ಅನಿಸುತ್ತಿತ್ತು.ಕನ್ನಡ ಬಹಳ ಕಷ್ಟಪಟ್ಟು ಹಾಡಿದ ಹಾಗೆ... ಕನ್ನಡ
ಸಿನೇಮಾ ಒಂಥರಾ ಕವಲಿನಲ್ಲಿತ್ತು ರಾಜಕುಮಾರ್ ಗೆ ನಿಧಾನವಾಗಿ ಸ್ಫರ್ಧಿಗಳು ಸಿಗಲಾರಂಭಿಸಿದ್ದರು. ವಿಷ್ಣು, ಶ್ರೀನಾಥ ಹೀಗೆ ಬೇರೆ ನಾಯಕರು ಬಂದರು. ಪಿಬಿಎಸ್ ಅವರಿಗೂ ದನಿ ಕೊಟ್ಟಿದ್ದರು ಹೊತೆಗೆ ಎಸ್ಪಿಬಿ ಅವರಿಂದಲೂ
ಹಾಡು ಹಾಡಿಸಿದರು."ಹಾವಿನ ದ್ವೇಷ ಹನ್ನೆರಡು ವರುಶ" ಹಾಡು ಹಿಟ್ ಆಯಿತು .ಎಸ್ಪಿಬಿ ಪರ್ಯಾಯ ದನಿಯಾಗಿ
ಹೊರಹೊಮ್ಮಿದರು.ಅವರಿಗೆ ಸಿಕ್ಕ ದೊಡ್ಡ ಬ್ರೇಕ್ ಅಂದರೆ "ಮಾಮರವೆಲ್ಲೋ.." ಹಾಡು. ರಾಜನ್ -ನಾಗೇಂದ್ರ ಮತ್ತು
ಎಸ್ಪಿಬಿ ಕಾಂಬಿನೇಶನ್ ಜನಪ್ರಿಯ ಆತು. ಅವರ ಜೋಡಿತನದಲ್ಲಿ ಬಂದ ಹಾಡುಗಳ ಪಟ್ಟಿಯಲ್ಲಿ ಕೆಲವು..
"ಆಸೆಯ ಭಾವ..", "ಚೆಲುವೆ ಎಲ್ಲಿರುವೆ...", "ನೋಟದಾಗೆ ನಗೆಯ ಮೀಟಿ.." ಹೀಗೆ ಎಸ್ಪಿಬಿ ಕನ್ನಡದಲ್ಲಿ ಬಲವಾಗಿ
ಬೇರೂರಲು ಕಾರಣಕರ್ತರು. ಈ ಮಾತು ಎಸ್ಪಿಬಿ ಅವರೂ ಒಪ್ಪಿಕೊಳ್ಳುತ್ತಾರೆ. ಎಸ್ಪಿಬಿ ದನಿಯಲ್ಲಿ modulation ಇತ್ತು..ಯಾವಹಿರೋ ಮೇಲೆ ಹಾಡು ಚಿತ್ರಿತವಾಗುತ್ತದೆ ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರ ದನಿ ಪರಿವರ್ತಿತವಾಗುತ್ತಿತ್ತು. ಹಾಗೆಂದು "ಆಫ್ ಬೀಟ್ " ಹಾಡುಗಳೂ ಅವರ ಕಂಠದಲ್ಲಿ ಸುಲಲಿತವಾಗಿ ಬರುತ್ತಿದ್ದವು.
"ಎಂಥಾ ಮರುಳಯ್ಯಾ ಇದು..","ನಮ್ಮೂರ ಮಂದಾರ ಹೂವೆ.."," ಎಲ್ಲಿದ್ದೆ ಇಲ್ಲಿ ತಂಕ.." . ಎಸ್ಪಿಬಿ ಅಭಿಜಾತಪ್ರತಿಭೆ.
ಇವರ ಜೊತೆಗೆ ಅನೇಕ ಹೊರಗಾಯಕರು ಬಂದರು--ಜೇಸುದಾಸ್, ಜಯಚಂದ್ರನ್, ಮಲೇಶ್ಯಾ ವಾಸುದೇವನ್ ಹೀಗೆ.

ನನ್ನ ಈ ಲೇಖನದ ಉದ್ದೇಶ ಬೇರೆ. ಈಗ ನಮ್ಮ ಕನ್ನಡ ಚಿತ್ರರಂಗ ಎಪ್ಪತ್ತೈದು ವರುಶ ಮುಗಿಸಿದೆ.
ಅನೇಕ ರೀತಿಯಲ್ಲಿ ಬದಲಾವಣೆ ಆಗಿದೆ.ಸಿನೇಮಾ ಈಗ ಒಂದು ದೊಡ್ಡ ಉದ್ಯಮವಾಗಿದೆ ಕೋಟಿ ಕೋಟಿ ಹಣ ಹರಿಯುತ್ತಿದೆ.ನಮ್ಮತನ ಮಾಯವಾಗಿದೆ. ನಾವು ನಮ್ಮ ಮಣ್ಣಸೊಗಡನ್ನು ಎಂದಿಗೂ ಬೆಳೆಯಗೊಡಲೇ ಇಲ್ಲ.ಹೀಗೆ
ಹಾಗೆ ನೆವ ಹೇಳಿ ಇಲ್ಲಿಯ ಸ್ವಪ್ರತಿಭೆಗಳನ್ನು ಚಿವುಟುತ್ತಲೇ ಇದ್ದೇವೆ.ಇತ್ತೀಚೆಗೆ ಅಂತೂ ಇದು ವಿಪರೀತ ಮಟ್ಟಕ್ಕೆ
ಹೋಗಿದೆ . ನಮ್ಮ ಪ್ರತಿಭೆಗಳು ಪ್ರೋತ್ಸಾಹ ಇಲ್ಲದೆ ಸೊರಗುತ್ತ ಇವೆ.ಅದೇನೋ ಅಂತಾರಲ್ಲ ಕಲೆಗೆ ಭಾಶೆಯ ಪರಿಮಿತಿ ಇಲ್ಲ ನಿಜವೇ ಆದರೆ ಭಾಶೆ
ಗೊತ್ತಿರದ ಉಚ್ಚಾರ ಮಾಡಲುಬಾರದ ಕಲಾವಿದರ ಕಡೆ ಕನ್ನಡ ಹಾಡು ಹಾಡಿಸುವುದು ಯಾವ ನ್ಯಾಯ?

ಈ ಹಿಂದೆ "ತಿರುಗುಬಾಣ" ಎಂಬ ಚಿತ್ರ ಬಂದಿತ್ತು ಅದರಲ್ಲಿ ಕನ್ನಡ ನಾಡಿನ ಹಿರಿಮೆಸಾರುವ " ಇದೇ ನಾಡು ಇದೇ ಭಾಶೆ..." ಅನ್ನುವ ಹಾಡಿತ್ತು.
ಲಂಕೇಶ್ ಪತ್ರಿಕೆಯಲ್ಲಿ ಈ ಹಾಡು ಪ್ರಸ್ತಾಪಿಸಿ ಈ ಹಾದು ಹಾಡಿದ ಎಸ್ಪಿಬಿ ತೆಲುಗರು ಎಂದು ಹೇಳಲಾಗಿತ್ತು.ಆ ಒಂದು ಕೆಟ್ಟ ಟ್ರೆಂಡ್ ಹಲವು
ಚಿತ್ರಗಳಲ್ಲಿ ಮುಂದುವರೆದಿದೆ. ಎಲ್ಲೋ ಪುಟ್ಟಣ್ಣ ಅಂಥವರು ಕನ್ನಡದ ಅಪ್ಪಟ ಪ್ರತಿಭೆಗಳಾದ ಸುಮಿತ್ರ, ಛಾಯಾ, ಕಸ್ತೂರಿ ಶಂಕರ್ ಇವರಿಗೆ ಚಾನ್ಸು
ಕೊಟ್ಟು ಪ್ರೋತ್ಸಾಹಿಸಿದ್ದರು.ಹೆಚ್ಚಿನ ಸಿನೇಮಾದವರಿಗೆ ಇಲ್ಲಿಯ ಸಂಸ್ಕೃತಿ ,ಇಲ್ಲಿಯ ಭಾಶೆಯ ಸೊಗಡು ಬೇಕಾಗಿಲ್ಲ. ಗೆಲ್ಲುವ ಕುದುರೆ ಮೇಲೆ ಹಣಸುರಿಯಲು
ಅವರು ತಯಾರು . ಅವರಿಗೆ ಕಿವಿ ಹಿಂಡಿ ಬುದ್ಧಿಮಾತು ಹೇಳುವ ಧೈರ್ಯ ಸಂಗೀತ ನಿರ್ದೇಶಕರಿಗಿಲ್ಲ ಅಂತೇಯೇ ಈಗ ಉದಿತ್ ನಾರಾಯಣ,ಹರಿಹರನ್ ,
ಸೋನು ನಿಗಮ್ ,ಶ್ರೇಯಾ ಘೋಶಾಲ್ , ಕೈಲಾಶ್ ಖೇರ್ ರ ಕಾರುಬಾರು. ಹರಿಹರನ್ ಅಂಥವರು "ಬಲೆಕಲೆ" ಎಂಬ ಶಬ್ದ ವನ್ನು "ಬಲೈ ಕಲೈ" ಅಂತ
ಹಾಡಿದರೂ ತಲೆದೂಗುವ ನಿರ್ದೇಶಕರಿದ್ದಾರೆ.ಕೇಳುಗನ ಪಾಡು ದೇವರಿಗೆ ಪ್ರೀತಿ. ಇನ್ನೊಂದು ಆಮದು ಪ್ರತಿಭೆ ಇದೆ ಅದೇ ಕುನಾಲ್ ಗಾಂಜಾವಾಲಾ
ರಾಜಕುಮಾರ್ ಇವರ ದನಿಮೆಚ್ಚಿಕೊಂಡಿದ್ದರು ಎಂದು ಹೇಳಲಾಗುತ್ತದೆ. ನಿಜವೇ ಇದು ಪ್ರಶ್ನೆ. ಮೇಲೆ ನಮೂದಿಸಿದ ಮಹಾನ್ ಆಮದು ಕಲಾವಿದರ ಎದಿರು
ನಮ್ಮ ಸ್ವಂತದ ಪ್ರತಿಭೆಗಳಾದ ರಾಜೇಶ್, ಹೇಮಂತ್ , ಶಾಸ್ತ್ರಿ, ಚಿನ್ಮಯ್ ಇವರೆಲ್ಲ ಟ್ರಾಕ್ ಹಾಡಿಗೆ ಮಾತ್ರ ಸೀಮಿತರಾಗಿದ್ದಾರೆ.

ಸ್ವಂತ ಪ್ರತಿಭೆಗಳನ್ನು ಕಡೆಗಣಿಸಿ ಆಮದು ಪ್ರತಿಭೆಗಳನ್ನು ತಲೆಮೇಲೆ ಮೆರೆಸಿದ ಕುಖ್ಯಾತಿ ಕನ್ನಡ ಚಿತ್ರರಂಗ ಬಿಟ್ಟರೆ ಬೇರೆ ಯಾವ ಭಾಶೆಗೂ ಇರಲಾರದು.
ಇಲ್ಲಿ ದೊಡ್ಡ ದೊಡ್ದ ಸ್ಟಾರ್ ಗಳಿದ್ದಾರೆ. ದುಡ್ಡು ಸುರಿಯಲು ನಿರ್ಮಾಪಕರಿದ್ದಾರೆ ಅವರಲ್ಲಿ ಅರಿವು ಮೂಡಬೇಕಾಗಿದೆ ನಮ್ಮವರನ್ನು ನಾವೇ ಕಡೆಗಣಿಸಬಾರದು
ಪ್ರತಿಭೆಯಲ್ಲಿ ಬಡತನವಿಲ್ಲ ಆದರೆ ಅವಕಾಶ ನೀಡುವ ದೊಡ್ಡತನ ಬೇಕು. ಆ ಅರಿವು ನಮ್ಮ ಕನ್ನಡಚಿತ್ರರಂಗಕ್ಕೆ ಬರಲಿ. ಇತ್ತಿಚೆಗೆ ಹಂಸಲೇಖ ಹಾಡಿಸಿದ
"ಒಂದು ಮಾಮರಾ ....ಚಿಂವ್ ಚಿಂವ ಗುಬ್ಬಿಯ ಗೂಡಲ್ಲಿ ಚಿಂವ್ ಚಿಂವಾ.." ನನ್ನ ಕಳಕಳಿ ಇಷ್ಟೇ ಮಾಮರದಲ್ಲಿ ಗುಬ್ಬಿ ಹಾಡಲಿ ಆದರೆ ಅಗುಬ್ಬಿ ಇಲ್ಲಿಯ
ಮಣ್ಣಿನದಾಗಿರಲಿ.....!

7 comments:

 1. ದೇಸಾಯರ,
  ಇದು ಎಲ್ಲಾ ಕನ್ನಡಿಗರ ಅಳಲು ಹೌದು. ಉಚ್ಚಾರ ಸರಿಯಾಗಿ ತಿಳಿಯದ, ಕನ್ನಡದ inflection ಅರ್ಥವಾಗದ ಪರಭಾಷಿಕರಿಂದ ಯಾಕ ಕನ್ನಡ ಹಾಡು ಹಾಡಸ್ತಾರೊ ತಿಳಿವಲ್ತು. ನಮ್ಮಲ್ಲೇ ಶ್ರೇಷ್ಠ ಪ್ರತಿಭೆಗಳಿದ್ದಾಗ, ಅವರನ್ನು ಕಡೆಗಣಿಸೋದು ತಪ್ಪು. ಸರಿಯಾಗಿ ಬರೆದಿದ್ದೀರಿ. ಆದರ ಇದು ಒಂದು ಸಾರ್ವಜನಿಕ ಆಂದೋಲನ ಆಗಬೇಕು. ಅಂದರ ಪರಿಸ್ಥಿತಿ ಬದಲಾದೀತು.

  ReplyDelete
 2. sir,
  nimma kalakaLi nammellara kalakali.... idaralli film producer na kaiyide.... hora bhaasheya singer choose maaDonu producer aagirtaane endu keliddene....

  ReplyDelete
 3. ನಿಮ್ಮ ಅಭಿಪ್ರಾಯ ನನ್ನದೂ ಹೌದು. ಆದರೆ ಇಂದು ಚಿತ್ರ ನಿರ್ಮಾಪಕರ ತಮ್ಮ ಚಿತ್ರದ ಆಡಿಯೋ ಕ್ಯಾಸೆಟ್ ಖರ್ಚಾಗಬೇಕಾದರೆ ಆಮದು ಗಾಯಕರು ಹಾಡಿರಬೇಕು. ಇಲ್ಲವಾದರೆ ಆಡಿಯೋ ಕ೦ಪೆನಿಯವರು ಒಳ್ಳೆಯ ಮೊತ್ತ ಕೊಟ್ಟು ಆಡಿಯೋ ಹಕ್ಕು ಖರೀದಿ ಮಾಡುವುದಿಲ್ಲವ೦ತೆ. ನಮ್ಮಲ್ಲಿ ಇರುವ ನೀವು ಉಲ್ಲೇಖಿಸಿರುವ ಮತ್ತು ಎಲೆ ಮರೆಯ ಕಾಯ೦ತೆ ಇರುವ ಇನ್ನೂ ಅದೆಷ್ಟೋ ಮ೦ದಿ ಗಾಯಕರು ಅವಕಾಶ ವ೦ಚಿತರಾಗಿದ್ದಾರೆ ಎಂಬುದು ಹದಿನಾರಾಣೆ ಸತ್ಯ. ಇದು ಎಲ್ಲ ಕ್ಷೇತ್ರಗಳಲ್ಲೂ ಇದೆ. ಹಿತ್ತಲ ಗಿಡ ಮದ್ದಲ್ಲ, ಅ೦ತಾರಲ್ಲ,ಹಾಗೆ.

  ReplyDelete
 4. ದೇಸಾಯ್ ಸರ್,

  ಒಂದು ಮಾಮರ ನಿಜಕ್ಕೂ ತುಂಬಾ ಇಂಪಾದ ಗೀತೆ. ಕೈಲಾಶ್ ಕೇರ್ ಕನ್ನಡ ತಮಿಳು, ತೆಲುಗಿನಲ್ಲಿ ಅದೇ ಹಾಡನ್ನು ಹಾಡಿ ಜೀವ ತುಂಬಿದ್ದಾರೆ. ಆದ್ರೆ ನೀವು ಹೇಳಿದಂತೆ ನಮ್ಮ ಗಾಯಕರಿಗೆ ಕೊಟ್ಟಿದ್ದರೂ ನ್ಯಾಯ ಸಲ್ಲಿಸುತ್ತಿದ್ದರೆನ್ನುವುದು ಅವರಿಗೆ ಅವಕಾಶ ಕೊಟ್ಟಾಗಲೇ ಅಲ್ಲವೇ ಗೊತ್ತಾಗೋದು. ಅದರ ಪ್ರಯತ್ನ ನಡೆಯಲಿ ಎನ್ನುವುದು ನನ್ನ ಆಶೆಯೂ ಕೂಡ.

  ReplyDelete
 5. ನಿಮ್ಮ ವಿಚಾರ ಹಾಗೂ ಆಶಯ ಚೆನ್ನಾಗಿದೆ.

  ReplyDelete
 6. ಸುನಾಥರ ಅನಿಸಕೆ ನನ್ನ ಅನಿಸಿಕೆ, ನಿಮ್ಮ ಲೇಖನ ಬಹಳ ಚಿಂತನೆಗೆ ಹಚ್ಚಲು ಸಹಕಾರಿಯಾಗಿದೆ, ನಮ್ಮಲ್ಲಿ ಎಲ್ಲಾ ಹೀಗೇ ಅಲ್ಲವೇ ಈಗ ? ಚೆನ್ನಾಗಿದೆ, ಧನ್ಯವಾದಗಳು

  ReplyDelete
 7. ನಿಮ್ಮ ಜೊತೆ ನನ್ನ ದನಿಯು ಇದೆ.

  ReplyDelete