Wednesday, September 9, 2009

ಬೆಳಗು ----ಕೆಲ ಪಲಕುಗಳು...

೧) ನಿಶೆಯ ಆ ತೆಕ್ಕೆಯಲಿ
ಅದೋ ಆ ಮೊಗ್ಗಿನಲಿ ಅನೇಕ
ಕನಸುಗಳು ಪಲ್ಲವಿಸುತಿವೆ....
ಬೆಳಕೆ ನೀ ತೂರಿ ಬಂದು
ಸ್ವಪ್ನಭಂಗ ಮಾಡಬೇಡ.....

೨) ಹೂ ಬೆಳದಿಂಗಳು ಬಿಟ್ಟು ಹೋದ
ದಾವಣಿ ಧರಿಸಿದೆ...
ರಾತ್ರಿಯಿಡೀ ಉದುರಿದ ನಕ್ಷತ್ರ
ಇಬ್ಬನಿಯಾಗಿ ಹರಡಿದೆ..
ಹಾಸಿಗೆಯಲಿ ನಿನ್ನ ಮಲ್ಲಿಗೆ ಎಸಳು...
ಈ ಬೆಳಗು ಮತ್ತೆ ರಾತ್ರಿಯ ಧೇನಿಸಿದೆ....!

೩) ನಿನ್ನ ತೋಳಬಂದಿ ಸಡಲಿಸಿದೆ..
ಮೈ ಇಡೀ ಆವರಿಸಿದ ಗಂಧ ಕಳಚಿದೆ..
ಬೆಳಕು ಸೂಸಿ ನಿಶೆ ಕಳೆದಿದೆ...
ಆದರೇನು ನಶೆ ಇಳಿಯದಾಗಿದೆ......!

೪) ತಂತಿ ಮೀಟಿ ಮೀಟಿ ನೀ ರಾತ್ರಿಯಿಡಿ ಹಾಡಿದೆ
ಗಜಲ್....
ನಿನ್ನ ನಳಿದೋಳು,,,ಉಗುರಿನ ಮೊನಚು...
ಬೆಳಗು ಹರಿದಿದೆ ನಿಜ...
ನುಡಿದ ಗಜಲಿನ ಘಮ ಆವರಿಸಿದೆ ಇನ್ನೂ....!

೫) ಫಕ್ಕನೇ ಎಚ್ಚರವಾಯಿತು ...
ನಿನ್ನ ರೇಶಿಮೆ ಅಪ್ಪುಗೆ ಕಳಚಿತು...
ಕೆದರಿದ ಮುಂದೆಲೆ ಹರಡಿದ ಕುಂಕುಮ...
ಬೆಳಗಿದು ರಾತ್ರಿಯ ಕವಿತೆಗೆ ಬೆನ್ನುಡಿ ಬರೆದಿತ್ತು....

೬) ಇವಳ ತುಟಿಯಿಂದ ಜೇನು ಒಸರಿಸಿದೆ..ಇನ್ನೂ
ಸುಖದ ಅಮಲು ನಿದ್ದೆಯಲೂ ಹೊಳೆಯುತಿದೆ ಇನ್ನೂ
ನಿಶಿಗಂಧ ಕಳಚಿಕೊಳ್ಳದಿರು ಈಗಲೇ....
ಬೆಳಗಾಗಲು ಸಮಯವಿದೆ.....ಇನ್ನೂ....!

18 comments:

  1. ಮತ್ತೆ ಮತ್ತೆ ಮೆಲದನಿಯಲ್ಲಿ ಓದಿಕೊಳ್ಳಬಹುದಾದ ಪಲಕುಗಳು. ಈ ಪ್ರಕಾರ ನಿಮಗೊಲಿದೆದೆ ಸರ್. ಮತ್ತಷ್ಟು ಬರೆಯುತ್ತಿರಿ...

    ReplyDelete
  2. ಪಲಕುಗಳು ಮೆಲುಕು ಹಾಕಿಕೊಳ್ಳುವಂತಿವೆ.. ಇಷ್ಟವಾದ್ವು ಸರ್..

    ReplyDelete
  3. kavanagallu superagide sir!

    i liked 3rd and 6th sir its simply amazing

    ReplyDelete
  4. ತುಂಬಾ ರೊಮ್ಯಾಂಟಿಕ್ ಪಲಕುಗಳು....

    ರಾತ್ರಿಯಿಡೀ ಉದುರಿದ ನಕ್ಷತ್ರ
    ಇಬ್ಬನಿಯಾಗಿ ಹರಡಿದೆ..

    ಈ ಸಾಲುಗಳು ತುಂಬಾ ಚೆನ್ನಾಗಿವೆ..

    ReplyDelete
  5. ದೇಸಾಯಿಯವರೆ...

    ಎಲ್ಲವೂ ಸಕತ್ ಆಗಿದೆ...

    ಕನ್ನಡದಲ್ಲಿ ಈ ಥರಹದ

    ನಶೆಯ.. ಮತ್ತಿನ..
    ಮುದ್ದಿನ ಲಲ್ಲೆಯ ಕವಿತೆ ಓದಿ..

    ಅಮಲೇರಿತು...

    ಒಳ್ಳೆಯ ಚುಟುಕುಗಳಿಗೆ ಧನ್ಯವಾದಗಳು..

    ReplyDelete
  6. ನಿಧಾನವಾಗಿ ಓಡಿಸಿಕೊಂಡು, ನಶೆ ಏರಿಸುವಂತಹ ಚುಟುಕುಗಳು.
    ತುಂಬಾ ಚನ್ನಾಗಿದವೆ ರೀ.

    ReplyDelete
  7. ಉಮೇಶ,
    ಸೂಪರ್ ಗಝಲ್ ಗಳನ್ನು ಬರದೀರಿ.
    ನನ್ನ ಮನಸ್ಸಿಗೆ ಮೋಡಿ ಹಾಕಿದವು.
    ರಾತ್ರಿಯಿಡೀ ಈ ಪಲಕುಗಳನ್ನು ಚಪ್ಪರಿಸಿಕೋತ ಕೂಡಬಹುದು.
    "ರಾತ್ರಿರೇವ ವ್ಯರಂಸೀತ್!"

    ReplyDelete
  8. ದೇಸಾಯಿ ಸರ್,

    ಆಹಾ! ನೀವು ಇಷ್ಟು ಚೆಂದ ಪಲಕು ಬರೀತೀರಿ ಅಂತ ಗೊತ್ತsss ಇರ್ಲಿಲ್ಲ ನೋಡ್ರೀ. ಖರೇನ ಮತ್ತ ಮತ್ತ ಓದಬೇಕು ಅನ್ನಿಸ್ತು. ಅಭಿನಂದನೆಗಳು.

    - ಉಮೇಶ್

    ReplyDelete
  9. ಅಬ್ಬಾ, ಪಲ್ಲಂಗದ ನಶೆ ಏರಿಸುವ ಪಲುಕುಗಳು ಮೈ ಮತ್ತು ಮನಸುಗಳಲ್ಲಿ ಕಚಗುಳಿಯಿಡುತ್ತವೆ.

    ReplyDelete
  10. ಸತ್ಯನಾರಾಯಣ್ ಸರ್ ಓದಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು.. ಸರ್ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

    ReplyDelete
  11. ಸುಶ್ರುತ ಮೆಲುಕು ಪಲಕು ಜುಗಲ್ ಬಂದಿ ಚೆನ್ನಾಗಿದೆ ಅಲ್ಲವೆ ಪ್ರತಿಕ್ರಿಯೆಗಾಗಿ ಧನ್ಯವಾದಗಳು...

    ReplyDelete
  12. ವಿಜಯ್ ನೀವು ತರುಣರು ಹೀಗೆ ಸಂತೋಷಪಡೋದು ಸಹಜೀಕ ..ಮೆಚ್ಚಿದ್ದಕ್ಕೆ ಧನ್ಯವಾದಗಳು...

    ReplyDelete
  13. ಶಿವು ಪ್ರತಿಕ್ರಿಯೆಗಾಗಿ ಧನ್ಯವಾದಗಳು...

    ReplyDelete
  14. ಹೆಗಡೇಜಿ ಮೆಚ್ಚಿದ್ದಕ್ಕೆ ಧನ್ಯವಾದಗಳು..ಶೃಂಗಾರ ಕಾವ್ಯ ಕನ್ನಡಕ್ಕೆ ಹೊಸದೇನೂ ಅಲ್ಲ ಕುವೆಂಪು ಅವರ "ಚಂದ್ರಮಂಚಕೆ ಬಾ ಚಕೋರಿ.." ಕೇಳಿರುವಿರಾ ಅದ ಹೋಲಿಸಿದರೆ ನನ್ನದು ತೀರ " ಫೀಕಾ..."

    ReplyDelete
  15. ಶಿವಪ್ರಕಾಶ ನಶೆ ಯಾವಾಗಲೂ ಮೆಲ್ಲ ಮೆಲ್ಲಗೆ ಏರಬೇಕು ಏನಂತೀರಿ...

    ReplyDelete
  16. ಕಾಕಾ ನಿಮ್ಮ ಆಶೀರ್ವಾದ ಹೀಗೆ ಇರಲಿ. ನಾ ಹೋದತಿಂಗಳೆ ಇವನ್ನು ಬರೆದಿದ್ದೆ ಲತಾ ಹಾಡಿದ ಸುರೇಶ್ ಭಟ್ ಬರೆದ
    "ಮಾಳವೂನ ಟಾಕ ದೀಪ್ ಚೇತವೂನ ಅಂಗ ಅಂಗ..." ಈ ಗಜಲು ಕೇಳಿದೆ .ಆ ಹಾಡಿನ ಗುಂಗು ಬಿಡಲೇ ಇಲ್ಲ..
    ಆ ಗಜಲಿನಲ್ಲಿ ಬರುವ ಮಿಲನದ ವರ್ಣನೆ ಕೇಳಿ ಅದರ ಮರುದಿನದ ಬೆಳಗು ಹೇಗಿರಬಹುದೆಂದು ಊಹಿಸಿದೆ..
    ಈ ಸಾಲು ಹೊಳೆದವು....

    ReplyDelete
  17. ಉಮೇಶ ಮೆಚ್ಚಿದ್ದಕ್ಕೆ ಧನ್ಯವಾದಗಳು.. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

    ReplyDelete
  18. ಇಟಗಿ ಸರ್ ನನ್ನ ಬ್ಲಾಗ್ ಗೆ ಸುಸ್ವಾಗತ..ಮೆಚ್ಚಿದ್ದಕ್ಕೆ ಶುಕ್ರಿಯಾ . ಆಗಾಗ ಬರ್ರಿ

    ReplyDelete