Sunday, August 23, 2009

ಅಶೀ ಪಾಖರೆ ಏತಿ ಆಣಿ ಎಕ್ ಸ್ಮೃತಿ ಠೇವೂನಿ ಜಾತಿ...

"ಅಶೀ ಪಾಖರೆ ಏತಿ ಆಣಿ ಎಕ್ ಸ್ಮೃತಿ ಠೇವೂನಿ ಜಾತಿ ...ದೋನ ದಿಸಾಂಚಿ ರಂಗತ ಸಂಗತ ದೋನ ದಿಸಾಂಚಿ ನಾತಿ...." ( ಆ ಹಕ್ಕಿ ಚುಂಚಿನಲ್ಲಿ ತಂದು ಇರಿಸಿದ ಕಡ್ಡಿ ಒಂದು ನೆನಪು ಇಟ್ಟು ಹೋದ ಹಾಗೆ ಎರಡು ದಿನಗಳ
ಈ ಒಡನಾಟ ಎರಡು ದಿನಗಳ ಸಂಬಂಧ...----ಮೂಲ ಮರಾಠಿ ಹಾಡು ಮಂಗೇಶ್ ಪಾಡಗಾಂವಕರ್ ಅವರದು---ಎಂದಿನಂತೆ
ನನ್ನದು ಕೆಟ್ಟ ಅನುವಾದ...!) ಎಂಥಾ ಸಾಲುಗಳು ಆದರೆ ಆ ಕವಿಯ ನಿರ್ಲಿಪ್ತತೆ ನನಗೇಕೆ ಸಿದ್ದಿಸಿಲ್ಲ ಯಾಕೆ ನಾನು ವರ್ತಮಾನ ಮರೆತು ಮತ್ತೆ ಮತ್ತೆ ಅತೀತಕ್ಕೆ ಸಾಗುತ್ತೇನೆ...ಯಾಕೆ ವಾಸ್ತವ ಸೇರುವುದಿಲ್ಲ ...! ಮಗಳು ಕುಣಿಯುತ್ತಿದ್ದಾಳೆ
ಗಣಪತಿ ಮನೆಗೆ ಬಂದಿದ್ದಾನೆ...ಕಾರ್ಟೂನ್ ನಲ್ಲಿ "ಮೈ ಫ್ರೆಂಡ್ ಗಣೇಶಾ..." ಇದೆ .ಅವಳಿಗೆ ಅವಳದೇ ಆದ ಖುಷಿಇವೆ.
ಹೆಂಡತಿಗೂ ಸಡಗರ ..ಸ್ವರ್ಣಗೌರಿ ಪೂಜೆ , ತಯಾರಿ ಮಾಡಲಿರುವ ಅಡಿಗೆ ಅವಳದೇ ಆದ ಹಳವಂಡಗಳು...ಇಬ್ಬರ ನಡುವೆ
ನಾನು ಹೀಗೆ ಕೀಲಿಮಣೆ ಕುಟ್ಟುತ್ತ ಅರೆಬರೆ ಜೀವ ಪರದೆ ಮುಂದೆ ಅಯಾಚಿತವಾಗಿ ಸುತ್ತುತ್ತದೆ ನೆನಪಿನ ರೀಲು...!

ಶ್ರಾವಣ ಬರಲು ಇನ್ನೂ ಹದಿನೈದು ದಿನ ಇರುವಾಗಲೇ ಬರುತ್ತಿದ್ದಳು ಆ ಮುದುಕಿ ಬುಟ್ಟಿತುಂಬ ಮಣ್ಣಿನ
ಗಡಿಗೆಗಳು----ತಂಬಿಗೆ ಆಕಾರದ್ದು--. ಅವುಗಳ ಮೇಲೆ ಅಮ್ಮ ಸುಣ್ಣದಿಂದ ಚುಕ್ಕೆ ಕೂಡಿಸಿ ಚಿತ್ರ ಬರೆಯುತ್ತಿದ್ದಳು.ಸ್ತ್ರೀ ಚಿತ್ರ
ದೇವರು ಅದು ನಮಗೆ ತಿಳಿಹೇಳಲಾಗುತ್ತಿತ್ತು. ಗಡಿಗೆಗೆ ಮಣ್ಣಿನ ಮುಚ್ಚಳಬೇರೆ..ಅದಕ್ಕೂ ಅಲಂಕಾರ. ಜೋಡು ಗೌರಿ ನಮ್ಮ
ಮನೆಯಲ್ಲಿ ದೇವರ ಮಾಡದ ಮೇಲಿನ ಖಾನೆ ಸುಣ್ಣ ಬಳಿದುಕೊಂಡು ಲಕಲಕಿಸುತ್ತಿತ್ತು. ಅದರ ಮೇಲೆ ಬರೆದ ಶ್ರೀಕಾರ.
ಶುಕ್ರವಾರ ಗೌರಿ ಕೂತಳೆಂದರೆ ಆ ಖಾನೆಗೆ ದೈವೀ ಕಳೆ ಬರುತ್ತಿತ್ತು. ಕೇದಿಗೆ, ಡೇರೆ,ಮಲ್ಲಿಗೆ, ಗುಲಾಬಿ ಹೂಗಳು ಎಡವಿ ಬಿದ್ರೆ ದುರ್ಗದ ಬೈಲು ಮುಂಜಾನೆಯ ತಾಜಾ ಹೂಗಳು.. ಗೌರಿ ಮುಂದೆ ನೈವೇದ್ಯಕ್ಕೆ ಇಡುವ ಪ್ಯಾರಲ ಹಣ್ಣು.. ಆ ಖಾನೆ ಹೂ ಹಣ್ಣಿನ
ವಾಸನೆಯಿಂದ ಘಮಘಮಿಸುತ್ತಿತ್ತು. ನೈವೇದ್ಯಕ್ಕೆ ಹೋಳಿಗೆ ಅವ್ವ ಮಾಡಿದ ಹೋಳಿಗೆ, ಕಟ್ಟಿನ ಸಾರು ಆ ರುಚಿಗೆ ಎಲ್ಲಿ ಉಪಮೆ? ಶನಿವಾರವೂ ಗೌರಿಗೆ ನೈವೇದ್ಯ ಸ್ವಲ್ಪ ಭಿನ್ನ --ಕಟ್ಟಂಬಲಿ,ನುಚ್ಚು,ಪುಂಡಿ ಪಲ್ಯ ! ಈ ಅಡಿಗೆ ನಾಲ್ಕು ಶುಕ್ರ ಹಾಗೂ ಶನಿವಾರ ಪುನರಾವರ್ತನೆ ಯಗುತ್ತಿತು..ನಡುವೆ ನುಸುಳಿ ಬರುವ ನಾಗಪಂಚಮಿ, ಕೃಷ್ಣಾಷ್ಟಮಿ ಆ ದಿನಗಳಲ್ಲಿ ಕೇಶರಿಬಾತು...
ರುಚಿಕರ ಭೋಜನ ಶ್ರಾವಣಮಾಸದ ಮಜಾನೆ ಮಜಾ...! ರಾತ್ರಿ ಊಟಕ್ಕೆ ಕುಳಿತಾಗ ಅವ್ವ ನೆನಪು ಮಾಡಬೇಕು ಕಾಕಾನಿಗೆ.
ಮರುದಿನ ನಾನು ಹಾಗೂ ಕಾಕಾ (ನಮ್ಮ ತಂದೆಗೆ ಕಾಕಾ ಅಂತ ಕರೆಯುತ್ತಿದ್ದೆ) ಕಿಲ್ಲೆದಲ್ಲಿರುವ ವಝೆ ಅವರ ಮನೆಗೆ ಹೋಗುತ್ತಿದ್ದೆವು. ಹುಟ್ಟಾ ಮೂಕ --ವಝೆ ಅವರು--ಸುಂದರವಾಗಿ ಗಣಪತಿ ತಯಾರಿಸುತ್ತಿದ್ದರು. ಕಾಕಾ ಚೌಕಾಶಿ ಮಾಡದೇ ತರುತ್ತಿರಲಿಲ್ಲ ವಝೆ ಅವರ ಪಕ್ಕದ ಮನೆಯವರು ಅವರಿಗೆ ವ್ಯಾಪಾರದಲ್ಲಿ ನೆರವಾಗುತ್ತಿದ್ದರು. ಇನ್ನು ನಮ್ಮ ಮನೆಯಲ್ಲಿ ಗಣಪತಿ
ಮಾಡ ತಯಾರಾಗುತ್ತಿತ್ತು. ಸುಣ್ಣ ಬಳಿದುಕೊಂಡು --! ತೃತೀಯಾದ ದಿನ ಸ್ವರ್ಣಗೌರಿ ಬಹಳ ಹಿಂದೆ ವೆಂಕಣ್ಣ ಭಟ್ರು ಪೂಜೆಗೆ
ಬರುತ್ತಿದ್ದರು. ವಾಡೆಯಲ್ಲಿ ಒಟ್ಟು ಐದು ಮನೆ ಎಲ್ಲರೂ ಪ್ರತ್ಯೇಕ ಪೂಜೆ ಒಮ್ಮೊಮ್ಮೆ ತಿಥಿ ಲೋಪವಾಗಿ ಸ್ವರ್ಣಗೌರಿ, ಗಣಪತಿ
ಹಬ್ಬ ಕೂಡಿಯೇ ಬರುತ್ತಿದ್ದವು.ಆಗ ವೆಂಕಣ್ಣ ಭಟ್ರಿಗೆ ಡಿಮಾಂಡೋ ಡಿಮಾಂಡು....! ನಾವು ದೇಸಾಯರು ಅವಸರ ಜಾಸ್ತಿ
ಮತ್ತು ಟೈಮ್ ಟೇಬಲ್ ಪಾಲಿಸಾವ್ರು ಹೆಚ್ಚು ಕಮ್ಮಿ ಸರಿ ಬರುತ್ತಿರಲಿಲ್ಲ ಹೀಗಾಗಿ ಭಟ್ಟರ ಜೋಡಿ ಜಟಾಪಟಿ ಆಗಾಗ ಆಗುತಿತ್ತು..!
ವೆಂಕಣ್ಣ ಭಟ್ಟರಿಗೆ ವಯಸ್ಸಾದಾಗ ರಂಗದ ಮೇಲೆ ಬಂದವರು ಶಾಮಭಟ್ಟ ಗುರ್ಲಹೊಸೂರ್ ಅವರು ಇವರಿಗೊಂದು
ವಿಶೇಷ ಗುಣ ಇತ್ತು ಅದೆಂದರೆ ಅನುಕೂಲ ಸಿಂಧು ಅವಶ್ಯಕತೆಗೆ ತಕ್ಕಂತೆ ಮಂತ್ರ ಹಿಗ್ಗಿಸಿ ಕುಗ್ಗಿಸುತ್ತಿದ್ದರು. ದೇಸಾಯರು
ನಾವು ಗಣಪನಿಗೆ ಸ್ವತಃ ಪೂಜೆ ಮಾಡುತ್ತಿರಲಿಲ್ಲ ಶಾಮಭಟ್ರೇ ಮಡಿಯಿಂದ ಪೂಜೆ ಮಾಡುತ್ತಿದ್ದರು ಇದು ಚತುರ್ಥಿ ಹಾಗೂ
ಗಣಪತಿ ಕಳಿಸುವ ದಿನದ ಉತ್ತರ ಪೂಜೆ ಸೇರಿ ಅವರಿಗೆ ಕಂಟ್ರಾಕ್ಟು...ಇನ್ನು ಗಣಪತಿ ಕಳಿಸೋ ದಿನ. ನಮ್ಮದು ಮೂರುಪೂಜಿ
ಅಂದ್ರ ಜೇಷ್ಠಾಗೌರಿ ಪೂಜಾ ಶ್ರಾವಣದ ಮೊದಲ ಶುಕ್ರವಾರ ಕುಳಿತ ಗೌರಿಗೆ ಜೋಡಿಯಾಗಿ ಅಷ್ಟಮಿಯಂದು ಮತ್ತೊಬ್ಬ ಗೌರಿ
ಬರುತ್ತಿದ್ದಳು.ಒಟ್ಟು ನಾಲ್ಕು ಗೌರಿ ದೇವರ ಮನೆ ಮಾಡ ಭರ್ತಿ ಯಾಗುತ್ತಿತ್ತು. ಕೇದಿಗೆ, ಸಂಪಿಗೆ ಹೂ ವಾಸನೆ. ಅವ್ವ ಅಷ್ಟಮಿಗೆ
ಅಂತ ವಿಶೇಷ ಭಕ್ಷ್ಯ ತಯಾರಿಸುತ್ತಿದ್ದಳು---ಚಕ್ಕಲಿ,ಅಂಬೊಡಿ,ಸಕ್ರಿ ಹೋಳಿಗಿ, ಕರ್ಚಿಕಾಯಿ,ಉಂಡಿ , ಮೋದಕ, ಮಸಾಲಿ ಕಡಬು,ಪುಠಾಣಿ ಹೋಳಿಗಿ ಹೀಗೆ ನೈವೇದ್ಯದ ಎಲೆಗಳು --೮ --ಅಡಿಗೆ ಮನೆ ತುಂಬಿ ಹೋಗುತ್ತಿತ್ತು. ಅದೊಂದು ಕಾಲ
ಮಾಡಲಿಕ್ಕೆ ಆರ್ಥಿಕ ಅನುಕೂಲ ಅಷ್ಟಕ್ಕಷ್ಟೇ ಆದರೆ ಅವ್ವನ ಉಮೇದಿಗೆ ಎಣೆ ಎಲ್ಲಿ..?

ಗಣಪತಿ ಹಬ್ಬಕ್ಕೆ ಇನ್ನೊಂದು ವಿಶೇಷ ಅಂದ್ರ ನಮ್ಮ ಭಾವಿ. ಸುತ್ತಮುತ್ತಲ ಎಲ್ಲೂ ಭಾವಿ ಇರಲಿಲ್ಲ ಇದ್ರೂ ಕೆಲವ್ರು
ಗಣಪತಿ ಕಳಸಲಿಕ್ಕೆ ಅನುಮತಿ ಕೊಡ್ತಿರಲಿಲ್ಲ. ನಮ್ಮ ಭಾವಿ ಅನುಕೂಲ ಇತ್ತು. ನಮ್ಮ ಓಣಿ ಮಂದಿ ಅಷ್ಟ ಅಲ್ಲ ಹಿಂದಿನ ಓಣಿಯವ್ರು, ಕಿಲ್ಲೆದಾವ್ರು , ದಾಜೀಬಾನ್ ಪೇಟ್ ಮಂದಿ ಸಹ ನಮ್ಮದ ಭಾವಿ ಆಶ್ರಯಿಸತಿದ್ರು. ಮೊದಲೆ ದಿನದಿಂದನ ಸುರು
ಆದ್ರ ಮುಗಿಲು ಮುಟ್ಟತಿದ್ದುದು ಐದನೇ ದಿನ.ನಾ ಕಲಿತ ಸಾಲಿ ಕನ್ನಡ ಎರಡನೆ ನಂಬರ್ ನಮ್ಮದ ಓಣ್ಯಾಗ ಇತ್ತು ಆ ಶಾಲ್ಯಾಗ
ಗಣಪತಿ ಇಡೂ ಪದ್ಧತಿ .ಐದನೇ ದಿನಾ ಕಳಸಲಿಕ್ಕೆ ಮೊದಲು ಅವರ ಬರತಿದ್ರು ನಾಲ್ಕು ಗಂಟೆಗೆಲ್ಲ ಗೇಟಿನ ಹೊರಗೆ ಪಟಾಕಿ ಸದ್ದು ಶುರು ಅದು ಸುಮಾರು ರಾತ್ರಿ ೧೨ ರ ವರೆಗೂ ಮುಂದುವರೀತಿತ್ತು. ಕಳಸಲಿಕ್ಕೆ ಬರಾವ್ರು ಬರೇ ಕೈಯ್ಯಲ್ಲಿ ಹೋಗತಿದ್ದಿಲ್ಲ
ಮೊಸರು ಅವಲಕ್ಕಿ, ಸೇವು ಖಾರ ಹಾಕಿದ ಚುರುಮುರಿ ಬೊಗಸೆ ತುಂಬಿ,ಕಿಸೆ ತುಂಬಿ ತುಳುಕುತ್ತಿತ್ತು.

ಈ ಹಬ್ಬ ಹರಿದಿನ ಹೀಗೆ ಸುಮ್ಮನೆ ಬರೂದಿಲ್ಲ ಜೋಡಿ ನೆನಪಿನ ಎಳೆ ತರುತ್ತದೆ...
ಮತ್ತದೇ ಹಾಡು ನೆನಪಾಗುತ್ತದೆ " ಅಶಿ ಪಾಖರೆ ಏತಿ..." ಹೌದೆ ಅದು ಬರೀ ಎರಡು ದಿನದ ಸಂಬಂಧವೇ ಅಲ್ಲ ಏಳು
ಜನ್ಮದ್ದು ಅಥವ ಜನ್ಮಾಂತರದ್ದು .ಅದೇ ಕವಿ ಮತ್ತೊಂದು ಗೀತೆಯಲ್ಲಿ ಹೇಳುತ್ತಾರೆ " ಹ್ಯಾ ಜನ್ಮಾವರ ಹ್ಯಾ ಜಗಣ್ಯಾವರ
ಶತದಾ ಪ್ರೇಮ್ ಕರಾವೆ...." ಹೌದು ನೆನಪು ಹೀಗೆ ಅದು ಅಳಿಯೋದೇ ಇಲ್ಲ..!

11 comments:

 1. ಈ ಹಳೆಯ ನೆನಪುಗಳನ್ನು ಏನು ಮಾಡೋಣ, ಉಮೇಶ? ಪ್ರತಿ ಹಬ್ಬ ಹರಿದಿನದಾಗ ಯಾಕ ನಮ್ಮನ್ನ ಈ ಪರಿ ಕಾಡ್ತಾವ?

  ReplyDelete
 2. ಹೌದು ಸರ್. ನೆನಪುಗಳು ಕಾಡುತ್ತದೆ. ಹಬ್ಬ ಹರಿದಿನಗಳಲ್ಲಿ ನಾವು ಲೌಕಿಕ ಲೋಕದಲ್ಲಿ ಮುಳಿಗಿರುತ್ತೇವೆ. ವಾಸ್ತವದ ಭಾವನೆಗಳನ್ನು ಅನುಭವಿಸಲು ಆಗ ಸಮಯ ಇರುವುದಿಲ್ಲ. ಅದರ ನೆನಪು ಮಾತ್ರ ಶಾಶ್ವತ. ಭಾವನೆಗಳೇ ಇಲ್ಲದವನ ಬಾಳು ವ್ಯರ್ಥ ಅಲ್ವೇ? ನೆನಪು ಕಾಡಬೇಕು.

  ತಮಗೆ ಮತ್ತು ತಮ್ಮ ಕುಟುಂಬದವರಿಗೆ ಹಬ್ಬದ ಶುಭಾಶಯಗಳು.

  ReplyDelete
 3. ದೇಸಾಯಿ ಸರ್,

  ಹಬ್ಬ ಹರಿದಿನದ ನೆನಪುಗಳು ಎಷ್ಟು ಚೆನ್ನಾ ಅಲ್ವಾ..ಈಗೆಲ್ಲಾ ಪ್ರತಿಯೊಂದು ಆಧುನಿಕತೆಯಿಂದ ಕೂಡಿ ಆಗಿನ ಮುಗ್ದ ಭಾವನೆಗಳ ಸುಳಿವೇ ಇಲ್ಲವಾಗಿದೆ. ನಿಮ್ಮ ಹಳೆಯ ನೆನಪುಗಳ ಬರಹ ನಿಮ್ಮೂರಿನ ಭಾಷೆಯಲ್ಲಿ ತುಂಬಾ ಚೆನ್ನಾಗಿದೆ...
  ನಿಮ್ಮ ಕುಟುಂಬದವರಿಗೆ ಹಬ್ಬದ ಶುಭಾಶಯಗಳು.

  ReplyDelete
 4. ದೇಸಾಯರೇ,
  ನಿಮ್ಮ ಹಳೆನೆನಪು, ಹಬ್ಬದ ನೆನಪು, ಚೆನ್ನಾಗಿದೆ. ನನ್ನದೂ ಮನೆಮಾತು ಮರಾಠಿ. ನಿಮ್ಮ ಬ್ಲಾಗ್ ಓದಿ ಖುಷಿಯಾಯಿತು

  ReplyDelete
 5. ದೇಸಾಯಿ ಸರ್,

  ಶ್ರಾವಣ ಮಾಸದ ಹಬ್ಬಗಳ ನೆನಪಿನ ಮೆಲುಕು ಚೆನ್ನಾಗಿತ್ತು. ಹಿರಿಯರು ಹಬ್ಬಗಳನ್ನೂ ಸುಮ್ಮನೇ ಮಾಡಿರ್ತಾರಾ.. ಹಬ್ಬದ ದಿನ ಆದ್ರೂ ಎಲ್ಲಾ ಕಶ್ಟಾ ಮರ್‍ತು ಎಲ್ಲಾರೂ ಖುಶಿಯಿಂದ ಇರ್ಬೇಕು ಅಂತ...ಊರಾಗ ನಂ ಮನ್ಯಾಗೂ ಹನ್ನೊಂದು ದಿನ ಗಣಪತಿ ಕೂರಿಸ್ತೀವಿ. ಮೊನ್ನೆ ಕೂರಿಸುವಾಗ ಹೋಗಿದ್ದೆ. ಕಳಿಸುವಾಗ ಹೋಗಕ್ಕಾಗಲ್ಲ ಅನ್ನೋ ಬೇಜಾರು... ಯಾಕಂದ್ರ ನಂ ಕಡೆ ಕೂರಿಸೋವಾಗಿಗೀಂತ ಕಳಿಸೋವಾಗ ಭಾಳ ಸಂಭ್ರಮ ನೋಡ್ರೀ ಅದಕ್ಕ.

  - ಉಮೇಶ್

  ReplyDelete
 6. ಕಾಕಾ ಶೈಲೇಂದ್ರ ಬರೆದಹಾಡಿನ ಸಾಲು..."ದಿನ್ ಜೋ ಪಖೇರು ಹೋತೆ ಪಿಂಜರೆ ಮೆ ಮೈ ರಖ ಲೇತಾ ಪಾಲತಾ ಉನಕೊ ಜತನ್ ಸೆ ಮೋತಿಕೆ ದಾನೆ ದೇತಾ..." ಆದರೆ ಆ ಹಕ್ಕಿ ಯಾರ ಹಿಡಿತಕ್ಕು ಸಿಗದೆ ಹಾರಿ ಹೋಗಿದೆ

  ReplyDelete
 7. ರಾಜೀವ್ ಧನ್ಯವಾದಗಳು ನೆನಪು ಇಲ್ಲಾಂದ್ರ ಈ ದಿನಗಳನ್ನು ಕಳಿಯೋದು ತ್ರಾಸು ಅದ

  ReplyDelete
 8. ಶಿವು ನೀವು ಸರ್ ಅಂತ ಕರದು ದೂರ ಮಾಡ್ಕೋತಿರಿ ಇರ್ಲಿ ಪ್ರತಿಕ್ರಿಯೆಗೆ ಧನ್ಯವಾದಗಳು

  ReplyDelete
 9. ಪರಾಂಜಪೆ ನಿಮಗ ಮರಾಠಿ ಸಾಹಿತ್ಯ,ಭಾವಗೀತೆ ವಗೈರೆ ಪರಿಚಯ ಇದೆಯೆ ನಿಮ್ಮಿಂದ ಆ ಭಾಷಾದ ಸಾಹಿತ್ಯದ ಬಗ್ಗೆ ತಿಳ್ಕೋಬೇಕು ನನಗ ಆಡುಭಾಷೆ ಮರಾಠಿ ಛಲೋ ಬರ್ತದ ಆದ್ರ ಸಾಹಿತ್ಯಿಕ ಮರಾಠಿ ಸ್ವಲ್ಪ
  ತ್ರಾಸು

  ReplyDelete
 10. ಉಮೇಶ ಹಂಗಾದ್ರ ಪಟಾಕ್ಷಿ ಹಾರಸಲಿಕ್ಕೆ ಕುಂದಗೋಳಕ್ಕ ಹೋಗುದಿಲ್ಲ ಅಂತಾತು ಏನು ಮಾಡೋದು ನೌಕರಿ ಮಹಿಮಾ

  ReplyDelete
 11. ಗಣೇಶ ಹಬ್ಬದ ಶುಭಾಶಯಗಳು. ತುಂಬಾ ಚೆನ್ನಾಗಿ ವಿವರಿಸಿದ್ದಿರ.

  ReplyDelete