Sunday, April 19, 2009

ನೆನಪು

ಹೆಂಡತಿ ತಂದುಕೊಟ್ಟ ಕೋಸಂಬರಿ,ಪಾನಕ ನೋಡಿ ಮನಸ್ಸು ಎಲ್ಲೋ ಹಿಂದೆ ಓಡಿತು. ನಾವೆಲ್ಲ ಈ ಚೈತ್ರ ಮಾಸ ಬರುವುದನ್ನು ಎದಿರು ನೋಡುತ್ತಿದ್ದೆವು.ಗೌರಿಯ ಸಂಭ್ರಮದಲ್ಲಿ ಅವ್ವ,ಆಶಕ್ಕ ಮುಳುಗಿದರೆ ನಾವು ಕೋಸಂಬರಿ, ಪಾನಕದ ಹಾದಿ ಕಾಯುತ್ತಿದ್ದೆವು. ಅವ್ವ ಮಾಡುವ ಕೋಸಂಬರಿ ರುಚಿ ಸೊಗಸಾಗಿತ್ತು.ಕಡ್ಲಿಬೇಳೆ ನೆನೆಹಾಕಿ ಅದಕ್ಕೆ ಹಸಿಕಾಯಿ,ಕೊಬ್ಬರಿ,ಮಾವಿನಕಾಯಿ,ಸೌತೆಕಾಯಿ ಯ ಹೆರಕಲ ಸೇರಿಸಿ ಮೇಲೆ ಇಂಗಿನ ಒಗ್ಗರಣೆಹಾಕಿ ಗಮ್ ಎನ್ನುವ ಕೋಸಂಬರಿಯ ಸವಿ ಸವಿದೇ ತಿಳಿಯಬೇಕು. ಮೇಲೆಬೆಲ್ಲ ಹಾಕಿ,ಮಾವು ಬೇಯಿಸಿದ ಹದವಾದ ಪಾನಕ.ನಾವು ತಬೀಬ ಅವರ ಮನೆ ಕುಂಬಿ ಹತ್ತಿ ಅವರ ಮನೆ ಹಿಂದಿನ ಆಲದ ಗಿಡದ ಎಲೆ ಸಂಗ್ರಹಿಸುತ್ತಿದ್ದೆವು. ಅರಿಸಿಣ ಕುಂಕುಮ ಕೊಡುವುದು,ಕರೆಯುವುದು ಹೆಂಗಸರ ಕೆಲಸವಾದರೆ ನಾವು
ಮನೆಯಲ್ಲಿ ಮಾಡಿದ ಕೋಸಂಬರಿ,ಪಾನಕ ಜಡ್ಜ ಬಳಿ ತಗೊಂಡು ಹೋಗುತ್ತಿದ್ದೆವು. ಜಡ್ಜ ಅಂದರೆ ನಮ್ಮ ಹಣಮುಕಾಕಾ…!

ಹಣಮುಕಾಕಾನ ಕಡೆ ಶಾಭಾಸ್ ಅನಿಸಿಕೊಂಡರೆ ಅದೇನೋ ಸಾಧಿಸಿದ ಖುಷಿ ನಮಗೆ. ಅವ ಎಲ್ಲರ ಮನೆ
ಕೋಸಂಬರಿ,ಪಾನಕ ಇಷ್ಟಪಟ್ಟು ಸೇವಿಸುತ್ತಿದ್ದ. ಅದು ಹೆಸರು ಬೇಳೆ,ಕಡ್ಲಿಬೆಳೆಯದ್ದಾಗಿರಲಿ ಅವ್ ಡೀಲೆ ತಿನ್ನುತ್ತಿದ್ದ. ನಾವು ಅವ ತಿಂದು ಹೇಳುವ ನಿರ್ಣಯಕ್ಕೆ
ಕಾಯುತ್ತಿದ್ದೆವು. ಅನುಕೂಲಕರ ತೀರ್ಪು ಬಂದರೆ ಒಳಿತು..
ಇಲ್ಲವಾದರೆ ಬೇಸರ ಆಗುತ್ತಿತ್ತು. ಆದರೆ ನಿಜ ಫಲಾನುಭವಿ ಮಾತ್ರ ಹಣಮುಕಾಕಾ ಆಗಿದ್ದ.ಪುಕ್ಕಟೆಯಾಗಿ ತರತರದ ರುಚಿಕರ ಕೋಸಂಬರಿ ಸವಿಯುವ ಭಾಗ್ಯ ಅವನದು.ಆದರೇನು ಅವನಿಂದ ಹೊಗಳಿಸಿಕೊಳ್ಳುವ ಉಮೇದು ನಮ್ಮದು..ಅವ ಹೂಡಿದ
ಆಟ ಗೊತ್ತಾಗ್ ತಾ ಇರಲಿಲ್ಲ. ಅಥವಾ ಆ ವಯಸ್ಸಿಗೆ ಅದು ಸಹಜವೂ ಹೌದು.

ಕೋಸಂಬರಿ ,ಪಾನಕ ನೋಡಿದಾಗ ಹಣಮುಕಾಕಾ ನೆನಪಾಗುತ್ತಾನೆ…ವಾಡೆ ನೆನಪಾಗುತ್ತದೆ. ಎದೆ ಭಾರವಾಗುತ್ತದೆ.

1 comment: