Thursday, October 11, 2012

ಪರಿಧಿ


ಇದು ನನ್ನ ಮೊದಲ ಪ್ರಕಟಿತ ಕಥೆ. ವಿಜಯ ಕರ್ನಾಟಕದವರಿಗೆ ಆಭಾರ ಹೇಳುವೆ. ಈ ಕತೆ ಹೇಗನ್ನಿಸ್ತ್ತು ತಿಳಿಸಿರಿ..
ಪರಿಧಿ
1
ಈ ಜೀವನದಲ್ಲಿ ಬರುವ ಸುಖದುಃಖಗಳನ್ನು ನಿರ್ಲಿಪ್ತವಾಗಿ ಸ್ವೀಕರಿಸಬೇಕು ಇದು ನನ್ನ ಧ್ಯೇಯವಾಗಿತ್ತು. ಬಂದದ್ದೆಲ್ಲ ಬರಲಿ ಎನ್ನುವ ಸ್ಥಿತಪ್ರಜ್ಞತೆ ನನಗೆ ಬಹಳೇ ಇಷ್ಟವಾದ ವಿಷಯ ಕೆಲವೊಮ್ಮೆ ಇದರಲ್ಲಿ ಯಶ ಕಂಡಿದ್ದೆ. ಆದರೆ ಬಹಳಷ್ಟು ಸಲ ಭಾವುಕವಾಗಿದ್ದೆ, ಸ್ಥಿತಪ್ರಜ್ಞತೆ ಎಲ್ಲೊ ಓಡಿಹೋಗಿ ಆವೇಶ ನನ್ನ ಮನಸ್ಸನ್ನು ವ್ಯಾಪಿಸುತ್ತಿತ್ತು. ರಮೇಶನ ಸಾವಿನ ಸುದ್ದಿ ಕೇಳಿದಾಗಲೂ ಆಗಿದ್ದು ಹೀಗೆಯೇ. ಟೂರ್ ಮುಗಿಸಿಕೊಂಡು ಮನೆಗೆ ಬಂದವನಿಗೆ ಅವ್ವ ಹೇಳಿದ ಸುದ್ದಿ ಶಾಕ್ ನೀಡಿತ್ತು... ಅದರಲ್ಲೂ ಅವ ವಿಷಕುಡಿದು ಸತ್ತಿದ್ದ... ವಿಷಯ ಗಂಭೀರವಾಗಿತ್ತು. ತಡಮಾಡದೆ ರಮೇಶನ ಮನೆಕಡೆ ಓಡಿದೆ.
ಗೋದು ಮಾವುಶಿ ಅಂದರೆ ರಮೇಶನ ತಾಯಿಯನ್ನು ಸಂತೈಸುವುದು ಸುಲಭದ ಮಾತಾಗಿರಲಿಲ್ಲ. ಇದ್ದ ಒಬ್ಬನೇ ಮಗ, ಅವನ ದಾರುಣ ಕಥೆ ಹೆತ್ತಕರುಳು ಚೂರುಚೂರಾಗಿತ್ತು. ರಮೇಶನ ತಂದೆ ಸಹ ನಿತ್ರಾಣವಾಗಿದ್ದರು... ಒಮ್ಮೆಲೇ ಬಹಳ ವಯಸ್ಸಾದವರಂತೆ ಕಂಡುಬಂದರು. ಮಗನ ಸಾವು ಈ ರೀತಿಯದ್ದಾಗಿರುತ್ತದೆ ಎಂಬ ಕಲ್ಪನೆ ಅವರಿಗೆ ಇರಲಿಲ್ಲ ಅವರೊಡನೆ,ಗೋದು ಮಾವುಶಿಯೂಡನೆ ಮಾತಾನಾಡಿದಾಗ ರಮೇಶನ ಸಾವಿನ ಕಾರಣದ ಅಸ್ಪಷ್ಟ ಚಿತ್ರ ಹೊರಬಂದಿತು. ರಮೇಶ ಪ್ರೀತಿಸುತ್ತಿದ್ದ ಸ್ನೇಹಲ್ ಕುಲಕರ್ಣಿ ಅವನನ್ನು ಮದುವೆ ಯಾವಾಗಲು ನಿರಾಕರಿಸಿದ್ದು. ಅಪ್ಪ, ಅವ್ವ ಹೊರಹೋದಾಗ ರಮೇಶ ವಿಷ ಸ್ವೀಕರಿಸಿದ್ದು ದವಾಖಾನೆಸೇರಿಸುವ ಹೊತ್ತಿಗೆ ಎಲ್ಲ ಮುಗಿದಿದ್ದು ತಿಳಿದು ಬಂದಿತು.
‘ಸ್ನೇಹಲ್ ಕುಲಕರ್ಣಿ’ ಈ ಹೆಸರಿನ ಹುಡುಗಿ ರಮೇಶನ ಜೀವನದಲ್ಲಿ ಬಿರುಗಾಳಿಯಂತೆ ಪ್ರವೇಶಮಾಡಿದ್ದಳು. ಈಗ ಅವನ ಸಾವಿಗೂ ಕಾರಣವಾಗಿದ್ದಳು. ನಾನು ರಮೇಶ ವಾರಕ್ಕೊಮ್ಮೆ ಬಾರ್‍ನಲ್ಲಿ ಬೀರು ಕುಡಿಯುವ ರೂಢಿ ಇಟ್ಟುಕೊಂಡಿದ್ದೆವು. ಈಗೀಗ ಬೀರಿನ ಒಂದು ಸಿಪ್ ಕುಡಿದವನ ಬಾಯಿಯಿಂದ ಹೊರಬೀಳುತ್ತಿದ್ದುದು ಬರೀ ಅವಳ ಬಗೆಗಿನ ಮಾತುಗಳೇ. ಅವಳ ಬಗ್ಗೆ ಅವಳ ಸುಂದರ ಕಣ್ಣುಗಳ ಬಗ್ಗೆ, ಅವಳು ಯಾವಾಗಲೂ ಉಡುತ್ತಿದ್ದ ಬಿಳಿ ಸೀರೆಯ ಬಗ್ಗೆ, ಹೆರಳಲ್ಲಿ ಸಿಗಿಸಿಕೊಳ್ಳುತ್ತಿದ್ದ ಗುಲಾಬಿಯ ಬಗ್ಗೆ... ರಮೇಶ ಹುಚ್ಚನಂತೆ ಮಾತಾನಾಡುತ್ತಿದ್ದ. ಅವನ ಮಾತುಗಳಿಂದ ಅವ ಅವಳನ್ನು ಪ್ರೀತಿಸುತ್ತಿದ್ದ ಎಂಬುದು ಸ್ವಷ್ಟವಾಗಿತ್ತು. ಹಾಗಂತ ಅವನೂ ಹಲವು ಬಾರಿ ನನ್ನೊಡನೆ ಹೇಳಿದ್ದ. ನಾನು ಅವನಿಗೆ ಪ್ರೋತ್ಸಾಹಿಸಿದ್ದೆ. ಮುಖ್ಯವಾಗಿ ಅವನ ಪ್ರೀತಿ ಏಕಮುಖವಾಗಬಾರದು ಎನ್ನುವುದು ನನ್ನ ಆತಂಕವಾಗಿತ್ತು. ಈ ಬಗ್ಗೆ ಅವನೊಡನೆ ಹಲವು ಸಾರಿ ಹೇಳಿದ್ದೆ. ಆದರೆ ಅವ ಎಲ್ಲ ಸರಿಯಾಗಿದೆ ಅವಳೂ ನನ್ನ ಪ್ರೀತಿಸುತ್ತಾಳೆ ಎಂದು ಹೇಳಿಕೊಂಡಿದ್ದ.
ಅವಳನ್ನು ಭೇಟಿ ಮಾಡಬೇಕು ಎಂದು ಅನ್ನಿಸಿ ಅವಳ ಮನೆ ಕಡೆ ನಡೆದೆ. ರಮೇಶನ ಮನೆ ಮುಂದಿನ ಬಂಗಲೆಯ ಔಟ್ ಹೌಸ್ನಲ್ಲಿ ಅವಳ ತಂದೆ, ತಾಯಿ ಬಾಡಿಗೆಗಿದ್ದರು. ಒಬ್ಬಳೇ ಮಗಳು ಸಾಧಾರಣ ಎಂದು ಹೇಳಬಹುದಾದ ಅಂತಸ್ತು ಅವರದು. ಅಪ್ಪ ತರುತ್ತಿದ್ದ ಪೆನ್‍ಶನ್, ತನ್ನ ಖಾಸಗಿ ಶಾಲೆಯ ಟೀಚರ್ ಕೆಲಸದ ಸಂಬಳ ಎರಡೂ ಸೇರಿಸಿ ಸಂಸಾರದ ಖರ್ಚು ತೂಗಿಸಲು ಸ್ನೇಹಲ್ ಬಹಳ ಕಷ್ಟಪಡುತ್ತಿದ್ದಳು. ಈ ಬಗ್ಗೆ ರಮೇಶ ಸಹ ಅನೇಕ ಬಾರಿ ಹೇಳಿದ್ದ. ಅವಳ ಮನೆಗೆ ಬೀಗ ಹಾಕಿತ್ತು... ಅವರ ಮಾಲೀಕರಲ್ಲಿ ವಿಚಾರಿಸಿದಾಗ ಅವರು ಮನೆ ಖಾಲಿ ಮಾಡಿ ಹೋದ ವಿಷಯ ತಿಳಿಯಿತು. ನಿರಾಶೆಯಿಂದ ಮರಳಿದೆ.
:2:.
ರಮೇಶನ ಸಾವು ಅವನ ತಂದೆ ತಾಯಿಯರಿಗೆ ಮರೆಯಲಾರದ ಪೆಟ್ಟಾಗಿತ್ತು. ಇದ್ದ ಒಬ್ಬನೇ ಮಗನ ಮೇಲೆ ಅವರು ಅನೇಕ ಕನಸು ಇಟ್ಟಿದ್ದರು. ಹಾಗೆ ನೋಡಿದರೆ ರಮೇಶನ ತಂದೆ ಬಾಲ್ಯದಲ್ಲಿ ಬಹಳೇ ಕಷ್ಟಪಟ್ಟವರು. ತಂದೆ ತಾಯಿ ಇಲ್ಲದ ಅವರು ಬೆಳೆದಿದ್ದು ಅವರ ಕಕ್ಕಂದಿರ ಆಶ್ರಯದಲ್ಲಿ ಇವರು ಡಿಗ್ರಿ ಮುಗಿಸಿ ಕೆಲಸಕ್ಕೆ ಸೇರಿದಾಗ ಇವರ ಓರ್ವ ಕಾಕಾ ಮಾತ್ರ ಬದುಕಿದ್ದ. ಅವರ ಕಾಕಾ ಒಂದು ರೀತಿಯ ವಿರಾಗಿಯ ಜೀವನ ನಡೆಸಿದ್ದ ಇದ್ದ ತನ್ನ ಮನೆ ಆಸ್ತಿ ಎಲ್ಲ ಅವರ ಹೆಸರಿಗೆ ಬರೆದು ತಾನು ಕಾಶಿಗೆ ಹೊರಟುಹೋಗಿದ್ದ. ಅಯಾಚಿತಾವಾಗಿ ಲಭ್ಯವಾದ ಮನೆ ಆಸ್ತಿ ರಮೇಶನ ತಂದೆಯನ್ನು ಆಲಸಿಯಾಗಿ ಮಾಡಿದ್ದವು ಯಾವುದಕ್ಕೂ ಕಷ್ಟ ಪಡಬೇಕಾಗಿರಲಿಲ್ಲ ಅವರು ಅವರ ಈ ಸೌಭಾಗ್ಯ ಮಗನವರೆಗೂ ವ್ಯಾಪಿಸಿತ್ತು. ಅಪ್ಪನ ವಶೀಲಿಯಿಂದ ಸಿಕ್ಕ ಸಹಕಾರಿ ಬ್ಯಾಂಕಿನ ನೌಕರಿ... ಓಡಾಡಲು ಬೈಕು, ಖರ್ಚು ಮಾಡಲು ಹಣ ಹೊಂದಿದ್ದ ರಮೇಶನ ಬಗ್ಗೆ ನನಗೆ ಅಸೂಯೆ ಇತ್ತು.
ರಮೇಶ ಕಳೆದ ವರ್ಷದಿಂದ ಬದಲಾಗಿದ್ದ. ಹೆಚ್ಚುಹೆಚ್ಚು ಭಾವಜೀವಿಯಾಗಿದ್ದ. ಎಲ್ಲ ಅಯಾಚಿತವಾಗಿ ಸಿಕ್ಕ ಮನುಷ್ಯನಲ್ಲಿ ಅಲ್ಪಸ್ವಲ್ಪ ಗರ್ವ ಸೇರಿಕೊಳ್ಳುವುದು ರೂಢಿಗತ. ಆದರೆ ಬಹುಶಃ ಸ್ನೇಹಲ್‍ಳನ್ನು ಕಂಡಾಗಿನಿಂದ ಅವ ಬದಲಾಗಿದ್ದ. ಅವಳ ಬಗ್ಗೆ ಮಾತನಾಡುವುದೆಂದರೆ ಅವನಿಗೆ ಎಲ್ಲಿಲ್ಲದ ಉತ್ಸಾಹ. ಅವಳ ತಂದೆಯ ಜೊತೆ ಸಹ ಇವನ ಸಲಿಗೆ ಬೆಳೆದು ತನ್ನ ಬ್ಯಾಂಕಿನಲ್ಲಿ ಅವರಿಗೆ ಮೆಂಬರ್ ಮಾಡಿಸಿದ್ದ... ಅವರಿಗೆ ಸಾಲಕೊಡಿಸಿದ್ದ ದಿನವೂ ಸಂಜೆ ಅವರ ಮನೆಗೆ ಹೋಗದಿದ್ದರೆ ಅವನಿಗೆ ಸಮಾಧಾನ ಇರುತ್ತಿರಲಿಲ್ಲ.
ಸ್ನೇಹಲಳನ್ನು ನಾನು ಒಂದೆರಡು ಸಲ ಭೇಟಿಯಾಗಿದ್ದೆ. ಅವಳು ಇವರ ಮನೆಗೆ ಬರುತ್ತಿದ್ದುದು ಅಪರೂಪ. ಗೋದು ಮಾವುಶಿಗೆ ಅವಳು ಹಿಡಿಸುತ್ತಿರಲಿಲ್ಲ ಇದು ನನಗೆ ಗೊತ್ತಿದ್ದ ವಿಷಯವಾಗಿತ್ತು. ತನ್ನ ತಂದೆ ತಾಯಿಯರನ್ನು ಎದಿರು ಹಾಕಿಕೊಂಡು ರಮೇಶ ಸ್ನೇಹಲ್‍ ಳ ಕೈ ಹಿಡಿಯಬಲ್ಲನೇ ಎಂಬ ಆತಂಕ ನನ್ನದಿತ್ತು. ಅವಳ ಬಗ್ಗೆ ಅವನಿಗೆ ಅಗಾಧವಾದ ಗೌರವ ಇತ್ತು ಒಂದು ತರಹದ ಹುಚ್ಚು ಅಭಿಮಾನವಿತ್ತು. ಅವಳ ಮೇಲೆ ಅವನು ಬರೆದು ಕವಿತೆಗಳು, ಅವನ ದಿನಚರಿಯ ಪುಟಗಳು ಎಲ್ಲ ಅದನ್ನೇ ಹೇಳುತ್ತಿದ್ದವು.
ಗೋದು ಮಾವುಶಿ ಮಗನ ಮದುವೆ ಬಗೆ ಅನೇಕ ಕನಸು ಇಟ್ಟುಕೊಂಡಿದ್ದರು. ಬಂಗಾರ, ವರದಕ್ಷಿಣೆ ಸೊಸೆ ತರಲೇಬೇಕು ಎಂಬುದು ಅವರ ವಾದವಾಗಿತ್ತು. ಎಷ್ಟಿದರೂ ಸಾಂಪ್ರದಾಯಿಕ ಧೋರಣೆ ಅವರದು, ಮಗನ ಈ ‘ಕ್ರಾಂತಿ’ ಅವರಿಗೆ ಸರಿ ಬಂದಿರಲಿಕ್ಕಿಲ್ಲ. ಮಗನಿಗೆ ಅನೇಕ ಸಲ ತಿಳಿ ಹೇಳಿದರೂ ಮಗನ ಹಟ ಬಗ್ಗಲಿಲ್ಲವಾಗಿತ್ತು ಸ್ನೇಹಲ್ ಮೇಲೆ ಅವರ ದ್ವೇಷ ತಿರುಗಿದ್ದು ಸ್ವಾಭಾವಿಕವಾಗಿಯೇ ಇತ್ತು. ಅವಳ ಮೇಲೆ ನನ್ನ ಮುಂದೆ ಅನೇಕ ಸಲ ಕೆಂಡಕಾರಿದ್ದರು ಆದರೆ ಮಗನ ಹಟದ ಮುಂದೆ ಅವರ ಆಟ ನಡೆಯಲಿಲ್ಲ, ಪೂರ್ಣ ಮನಸ್ಸಿಲ್ಲದಿದ್ದರೂ ಒಪ್ಪಿಗೆ ಸೂಚಿಸಿದ್ದರು. ರಮೇಶನ ತಂದೆ ಹೆಂಡತಿಗೆ ಎಂದೂ ಎದುರಾಡಿದವರಲ್ಲ. ತನ್ನ ತಾಯಿ ತಂದೆ ಮದುವೆಗೆ ಒಪ್ಪಿಗೆ ಕೊಟ್ಟಿದ್ದನ್ನು ರಮೇಶ ನಾನು ಊರಿಗೆ ಹೋಗುವ ಹಿಂದಿನ ದಿನ ಸಿಕ್ಕಾಗ ಹೇಳಿದ. ಉತ್ಸಾಹದಿಂದ ಪುಟಿಯುತ್ತಿದ್ದ ಅವನನ್ನು ನೋಡಿ ಅಸೂಯೆ ಬಂದಿತ್ತು.
ಆದರೆ ಈಗ ಚಿತ್ರ ಪೂರ್ತಿ ಬದಲಾಗಿದೆ. ಸ್ನೇಹಲ್ ರಮೇಶನನನ್ನು ನಿರಾಕರಿಸಿದ್ದಾದರೂ ಯಾಕೆ... ಈ ಪ್ರಶ್ನೆ ನನ್ನ ತಲೆ ಕೊರೆಯುತ್ತಿತ್ತು. ಸಾಧಾರಣ ಮಧ್ಯಮ ವರ್ಗದಿಂದ ಬಂದವಳು ಅಪೇಕ್ಷಿಸುವ ಎಲ್ಲ ಸುಖ ಸಾಧನಗಳೂ ರಮೇಶನ ಮನೆಯಲ್ಲಿ ಅವಳಿಗೆ ಯಾವ ಕಾರಣವಿತ್ತು ಅವನನ್ನು ನಿರಾಕರಿಸಲು..? ಹತ್ತು ಸಲ ವಿಚಾರಮಾಡಿದರೂ ಈ ಪ್ರಶ್ನೆಯ ಉತ್ತರ ಹೊಳೆದಿರಲಿಲ್ಲ. ಉತ್ತರ ಹೇಳಬೇಕಾದ ಸ್ನೇಹಲ್ ಪಲಾಯನ ಮಾಡಿದ್ದಾಳೆ. ಗೋದು ಮಾವುಶಿಯ ಬಳಿ ಅಳುವೂಂದೇ ಉತ್ತರವಾಗಿತ್ತು.
ನನ್ನ ಆತ್ಮೀಯ ಸ್ನೇಹಿತ ಒಂದು ಹೆಣ್ಣು ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಈ ವಿಷಯ ನನಗೆ ಹೊಸದೆನಿಸಿರಲಿಲ್ಲ. ರಮೇಶನ ಗುಣ ಸ್ವಭಾವ ಬಲ್ಲ ನಾನು ಅವ ಈ ನಿರ್ಧಾರ ಮಾಡಿದ್ದರಲ್ಲಿ ಯಾವ ಸಂದೇಹವೂ ಇಲ್ಲ ಎಂದುಕೊಂಡೆ. ಆದರೆ ಅವನ ಸಾವಿಗೆ ಕಾರಣವಾಗಿ ಈಗ ಹೇಡಿಯಂತೆ ಪಲಾಯನ ಮಾಡಿರು ಸ್ನೇಹಲ್ ಮೇಲೆ ಜಿಗುಪ್ಸೆ ಬಂದಿತ್ತು.
:3:
ರಮೇಶನ ಸಾವು ಅದರ ನಂತರದ ಘಟನೆಗಳು ನಾನು ಬಾಳಿನಲ್ಲಿ ಮರೆಯಲಾರದ ಸಂಗತಿಗಳು. ಗೋದುಮಾವುಶಿಗಂತೂ ನಾನು ದಿನಾಲು ಸಂಜೆ ಅವರ ಮನೆಗೆ ಭೇಟಿಕೊಡದಿದ್ದರೆ ಸಮಾಧಾನವಾಗುತ್ತಿರಲಿಲ್ಲ. ಮಗನನ್ನು ಹೊಗಳಿ... ನೆನೆಸಿ ಅಳುವುದು ಅವರ ರೂಢಿಯಾಗಿಬಿಟ್ಟಿತ್ತು. ಮಾತುಮಾತಿನಲ್ಲಿ ಸ್ನೇಹಲ್‍ಪ್ರಸ್ತಾಪ ಬರದೇ ಇರುತ್ತಿರಲಿಲ್ಲ. ಅವಳಿಗೆ ಎಷ್ಟು ಬೈದರೂ ಗೋದುಮಾವುಶಿಗೆ ಸಮಾಧಾನ ಇರುತ್ತಿರಲಿಲ್ಲ. ನಿಧಾನವಾಗಿ ನನ್ನ ಮನದಲ್ಲೂ ಸ್ನೇಹಲ್ ವಿಷಯದಲ್ಲಿ ದ್ವೇಷ ಮೂಡತೊಡಗಿತ್ತು.
ಬೆಳಗಾವಿಯಲ್ಲಿ ಒಂದು ದಿನ ಸ್ನೇಹಲ್ ಧುತ್ತನೆ ಎದುರಾದಾಗ ನಾನು ಯಾವರೀತಿ ಪ್ರತಿಕ್ರಿಯಿಸಬೇಕು ಎನ್ನುವ ದ್ವಂದ್ವದಲ್ಲಿದ್ದಾಗಲೇ ಅವಳು ಮುಗುಳ್ನಕ್ಕು ನನಗೆ ವಂದಿಸಿದ್ದಳು. ರಮೇಶ ಯಾವಾಗಲೂ ಇಷ್ಟ ಪಡುತ್ತಿದ್ದ ಬಿಳಿವರ್ಣದ ಚೂಡಿಧರಿಸಿದ್ದಳು... ಮುಖದಲ್ಲಿ ಅದೇ ಗಂಭೀರ ಭಾವವಿತ್ತು. ಒಂದು ಮುಖ್ಯ ವ್ಯತ್ಯಾಸ ನಾನು ಗಮನಿಸಿದೆ... ಅವಳ ಕೊರಳಲ್ಲಿ ಮಂಗಳ ಸೂತ್ರವಿತ್ತು. ಅವಳೊಡನೆ ಮಾತನಾಡುವುದು ಬಹಳವಿತ್ತು. ನೇರ ವಿಷಯ ಪ್ರಸ್ತಾಪಿಸಿದೆ... ಅವಳಲ್ಲಿ ನಾನು ನಿರೀಕ್ಷಿಸಿದ ಬದಲಾವಣೆ ಕಾಣಲಿಲ್ಲ. ಅದೇ ಶಾಂತ ಭಾವದಲ್ಲಿ ಸಂಜೆ ನನ್ನ ರೂಮಿಗೆ ಬಂದು ನೋಡುವುದಾಗಿ ಹೇಳಿದಳು.
ಒಂಟಿ ಗಂಡಸಿಗೆ ಭೇಟಿಯಾಗಲು ಲಾಜಿನ ರೂಮಿಗೆ ಅವಳು ಬರಲಾರಳು ನನನ್ನು ಸಾಗ ಹಾಕಲು ಈ ರೀತಿ ನಾಟಕಮಾಡಿದ್ದಾಳೆ ಎಂದುಕೊಂಡೆ. ಅಕಸ್ಮಾತ್ ಅವಳು ಬಂದರೆ ಅವಳಿಗೆ ಚೆನ್ನಾಗಿ ಬೈಯ್ಯಬೇಕು... ರಮೇಶನ ಸಾವಿನ ಬಗ್ಗೆ ಹೇಳಬೇಕು... ಮುಖ್ಯವಾಗಿ ಗೋದುಮಾವುಶಿಯ ಅಸಹಾಯಕತೆ ಬಗ್ಗೆ ಹೇಳಬೇಕು ಎಂದುಕೊಂಡೆ. ಆದರೆ ಬಾಗಿಲು ತೆರೆದು ಒಳಬಂದವಳ ಮುಂದೆ ಮಾತೇ ಹೊರಡದೆ ತಡವರಿಸಿದೆ. ನನ್ನ ಈ ಹೋರಾಟ ಕಂಡು ಅವಳೇ ಮಾತು ಶುರುಮಾಡಿದಳು.
‘ನನ್ನ ಬಗ್ಗೆ ನೀವು ಬಹಳ ವಿಚಾರಮಾಡಿರಬೇಕು... ನಿಮ್ಮ ಗೆಳೆಯ ನನ್ನ ಬಗ್ಗೆ ಎಲ್ಲಾ ಹೇಳಿರಬೇಕು... ರೂಮಿನ ತುಂಬ ಹರಡಿದ ಅವಳ ಗಂಭೀರ ಧ್ವನಿ ಕೇಳುತ್ತಲೇ ಇರಬೇಕು ಅಂತ ಅನ್ನಿಸುತ್ತಿತ್ತು. ಪದರು ಪದರಾಗಿ ತನ್ನ ಒಳಗುದಿ ಎಲ್ಲ ತೆಗೆದಿಟ್ಟಳು.
‘ಅವರು ನನಗೆ ಪ್ರೀತಿಸಿದ್ದು... ಖರೇ ಆದರೆ ಅದು ಏಕಮುಖವಾಗಿತ್ತು... ನಾನು ಅವರಲ್ಲಿ ನನ್ನ ಆದರ್ಶ ಹುಡುಕಿದೆ ಅದು ಅವರೊಳಗೆ ಇದ್ದಿದ್ದಿಲ್ಲ. ಸುಖದ ಅಪ್ಪುಗೆಯಲ್ಲಿ ಬೆಳೆದ ಅವರ ದೇಹದಲ್ಲಿ ನನಗ ಬೇಕಾದ ಕಸು ಇಲ್ಲ ಇದು ನಾ ಕಂಡುಕೊಂಡೆ...
‘ಎಷ್ಟಿದ್ರೂ ಅವಲಂಬಿತ ಜೀವನ ಅವರದು, ಅವರ ತಂದಿದೂ ಹಂಗ ಅಲ್ಲ...! ನಮ್ಮಂತಹ ಬಡವರು ಬರೀ ಕನಸಿನಲ್ಲಿ ಕಾಣುವ ಸುಖದ ವಸ್ತು ಎಲ್ಲ ಅಲ್ಲಿದ್ವು... ಅದೂ ಅಯಾಚಿತವಾಗಿ ಅವರಿಗೆ ಸಿಕ್ಕಿದ್ದು.... ಬಹಳ ಮಾಡಿ ಅವರೂ ಮೂದಮೂದಲು ನಮ್ಮಂಗ ಇದ್ರು ಅಂತ ಅನ್ನಸ್ತದ... ಆದ್ರ ಶ್ರೀಮಂತಿಕೆ ಬಂದ ಮ್ಯಾಲ ಒಮ್ಮೇಲೆ ಎಲ್ಲಾ ಬದಲಾತು... ‘ಸ್ನೇಹಲ್‍ ಧ್ವನಿಯಲ್ಲಿ ಉದ್ವೇಗ ತುಂಬಲಾರಂಭಿಸಿತು. ಅವರು ನನ್ನ ಮ್ಯಾಲ ಕವಿತಾ ಬರದ್ರು... ನಮ್ಮ ಅಪ್ಪಗೆ ಸಹಾಯ ಮಾಡಿದ್ರು ನನ್ನ ಸಲುವಾಗಿ ಅವರ ಅಪ್ಪ ಅವ್ವಗ ಎದಿರು ಹಾಕಿಕೊಳ್ಳಲಿಕೆ ತಯಾರಾದ್ರು... ಖರೇ, ಆದ್ರ ನಾ ಪಂಜರದಗಿಣಿ ಆಗಬಾರ್ದು ಅಂತ ಅನಕೊಂಡೆ. ನೀವು ಹೇಳ್ರಿ, ಅವರ ಮದುವಿಯಾಗಿ ನಾನು ಅವರ ಮಾತು, ಅತ್ತೆ, ಮಾವಂದಿರ ಮಾತು ಮೀರಲಾರದೆ ಒದ್ದಾಡ ಬೇಕಾಗಿತ್ತು. ಬಹಳಷ್ಟು ಕಡೆ ಹಿಂಗ ಆಗಿದೆ. ಮೇಲಾಗಿ ನಾವು ಬಡವ್ರು ವರದಕ್ಷಿಣೆ ಬಂಗಾರ ತರಲಿಲ್ಲಾಂದ್ರ ಅವರು ನನಗೆ ಕೊಡುವ ಗೌರವ ಎಂತಹದು ಎಂದು ನಾ ಊಹಿಸಬಲ್ಲೆ.
ಸ್ನೇಹಲ್ಳ ವಾದ ನಿಖರವಾಗಿತ್ತು. ಮೌನವೇ ಸರಿ ಎಂದು ನಾ ಭಾವಿಸಿದೆ. ‘ನಾ ಅವರಿಗೆ ತಿಳಿಸಿ ಹೇಳಿದೆ... ನಮ್ಮ ಸಂಬಂಧ ಎಂದೂ ಸುಖಕರವಾಗಿರಲಾರದು ಎಂದು ಆದ್ರ ಅವರಿಗೆ ತಿಳಿಲಿಲ್ಲ. ಒಂದು ತರಹದ ಅತಿ ಆತ್ಮವಿಶ್ವಾಸ ಅವರೊಳಗೆ ಇತ್ತು...’
‘ಅವ ನಿಮ್ಮನ್ನ ಇಷ್ಟ ಪ್ರೀತಿಮಾಡುತಿದ್ದ... ನೀವು ನಿಮ್ಮ ವಿಚಾರಧಾಟಿ ಸ್ವಲ್ಪ ಬದಲಾಯಿಸಬೇಕಾಗಿತ್ತು...’ ಅವಳ ವಾದ ಅರ್ಧದಲ್ಲೇ ತಡೆದು ಹೇಳಿದೆ.
‘ನೀವು ಅನ್ನೂದು ಖರೇ... ಆದ್ರ ಪ್ರೀತಿ ಅಂದ್ರೇನು...? ನನ್ನ ಮ್ಯಾಲ ಕವಿತಾ ಬರೆಯೂದು, ನಮ್ಮ ಅಪ್ಪ ಅವ್ವಗೆ ಆತ್ಮೀಯನಾಗೂದು ಎಲ್ಲಾ ಮಾಡಿದ್ರು... ಆದರ ನಾ ಅಪೇಕ್ಷಾ ಮಾಡಿದಂಗ ಅವರು ಬದಲಾಗತಿದ್ದಲ್ಲ. ಅವರ ಮನೆತನದ ರೀತಿ ನೀತಿಗಳಿಗೆ ನಾ ಹೊಂದಿಕೊಬೇಕು... ಅವರ ಆಸೆಗಳಿಗೆ ನಾ ಸ್ಪಂದಿಸಬೇಕು... ಅನ್ನುವುದು ಅವರ ಸ್ವಾರ್ಥ. ಅದೇ ರೀತಿ ನನಗೂ ಅವರ ಬಗ್ಗೆ ಆಶಾ ಇದ್ದವು. ಅವರು ಸ್ವತಂತ್ರರಾಗಬೇಕು... ಅವರ ಅಪ್ಪ ಅವ್ವ ಕಟ್ಟಿದ ಬಂಗಾರದ ಪಂಜರದಿಂದ ಹೊರಗೆ ಬರಬೇಕು ಅಂತ ಅದು ಅವರಿಂದ ಆಗತಿರಲಿಲ್ಲ...’
ನೀವು ನಿಮ್ಮ ಮನಸ್ಸಿನ ಭಾವನಾ ಏನಿದ್ವು ಅವಗ ಹೇಳಬಹುದಿತ್ತು... ನಿಮ್ಮ ಮ್ಯಾಲ ಇಷ್ಟು ಮನಸ್ಸು ಇಟ್ಟಾವ ತನ್ನ ರೀತಿ ಖಂಡಿತ ಬದಲಾಯಿಸಿಕೊಳ್ತಿದ್ದ...’
‘ನಾ ಅವರಿಗೆ ಎಲ್ಲ ತಿಳಿಸಿ ಹೇಳಿದೆ. ಶಾಂತವಾಗಿ ನಾ ಅವರಿಂದ ಅಪೇಕ್ಷಿಸುವ ವಿಷಯ ಎಲ್ಲ ಹೇಳಿದೆ. ಅವರ ಪ್ರತಿಕ್ರಿಯಿ ವಿಚಿತ್ರವಾಗಿತ್ತು. ನನ್ನ ಮೇಲೆ ರೇಗಾಡಲು ಶುರು ಮಾಡಿದ್ರು ಸ್ವಾರ್ಥಿ ಅಂತ ಕರೆದ್ರು... ಏನೋ ಹುಚ್ಚುಹುಚ್ಚಾಗಿ ಮಾತನಾಡಿದರು. ಪಕ್ಕಾ ಗಂಡಸಿನ ತರಹ ಅವರು ವರ್ತಿಸಿದರು. ನೀವು, ಹೆಣ್ಣು ಮಕ್ಕಳು ನಿಮ್ಮ ಅನಿಸಿಕೆಗಳಿಗೆ ಆಸೆಗಳಿಗೆ ಅಡ್ಜಸ್ಟ್ ಆಗಲಿ ಎಂದು ಹಂಬಲಿಸುತ್ತೀರಿ ಆದ್ರ ನಮ್ಮ ಧ್ವನಿ ನಿಮ್ಮ ಕಿವಿಗೆ ಬೀಳೂದೇ ಇಲ್ಲ... ನಾವು ನಮ್ಮ ಆಸೆ, ಅನಿಸಿಕೆ ನಿಮ್ಮ ಮುಂದೆ ತೋಡಿಕೊಂಡರೆ ಅದು ದೊಡ್ಡ ಪ್ರಮಾದ ಆಗ್ತದ ಅಲ್ಲ....?
ಅವಳ ಪ್ರಶ್ನೆಗೆ ನನ್ನ ಬಳಿ ಉತ್ತರ ಇರಲಿಲ್ಲ.
‘ಅವರು ಸಾಯ್ತಾರ ಅಂತ ನಾ ಅಂದುಕೊಂಡಿರಲಿಲ್ಲ. ಬಹುಶಃ ನಾ ಅವರ ಅಸ್ತಿತ್ವ ಅಲುಗಾಡಿಸಿದ್ದೆ... ಸಣ್ಣವರಿದ್ದಾಗಿನಿಂದಲೂ ಅವರಿಗೆ ಬೇಕಾಗಿದ್ದು ಅವರಿಗೆ ಸಿಕ್ಕಿತ್ತು... ಬಂಗಾರದ ಚಮಚ ಬಾಯಾ ಇಟ್ಟುಕೊಂಡೇ ಬೆಳೆದವ್ರು ಅವರು... ಸೋಲು ಅವರಿಗೆ ಮುಖಾಮುಖಿಯಾಗಿದ್ದು ಮೂದಲನೇ ಸಲ ಇರಬೇಕು... ಅದೂ ಒಂದು ಹೆಣ್ಣಿನ ನಕಾರ ಅವರಿಗೆ ಸರಿ ಬರಲಿಲ್ಲ... ಅವರ ‘ಅಹಂ’ ಗೆ ನಾ ದೊಡ್ಡಪೆಟ್ಟು ಕೊಟ್ಟೆ ಅಂತ ಕಾಣ್ತದ...’
‘ಅವರು ಸಾಯುವ ಎರಡು ದಿನ ಮೂದಲೇ ನನಗೆ ಇಲ್ಲಿ ಕೆಲಸಕ್ಕೆ ಆರ್ಡರ್ ಬಂದಿತ್ತು... ಇಲ್ಲಿ ಬಂದೆ ಹೊಸ ಪರಿಸರಕ್ಕ ಹೊಂದಿಕೊಂಡೆ. ಆನಂದ್ ನನಗೆ ದೂರದ ಸಂಬಂಧಿ. ಬದುಕಿನ್ಯಾಗ ಅವರು ಸುಖದ ಮಾರಿ ಎಂದೂ ನೋಡಿದವರ ಅಲ್ಲ... ಹಗಲು ಪ್ಯಾಕ್ಟರಿಯೂಳಗೆ ಕೆಲಸ ರಾತ್ರಿ ಗೆಳೆಯನ ಆಟೊ ಓಡಿಸ್ತಾನ... ನಾನೂ ದುಡೀತಿನಿ ನಾವಿಬ್ಬರೂ ಆರಾಮ ಇದ್ದೇವಿ... ನಾ ರಮೇಶ ಅವರಿಗೆ ನಿರಾಕರಿಸಿದ್ದು ನಮ್ಮ ತಂದಿ ತಾಯಿಗೆ ಸರಿ ಅನ್ನಿಸಿಲ್ಲ... ಹಂಗ ನೋಡಿದ್ರ ನನ್ನ ಅರ್ಥ ಮಾಡಿಕೊಳ್ಳುವವರು ಯಾರೂ ಇಲ್ಲವೇ ಇಲ್ಲ ಅಂತ ನನಗೆ ಬಹಳ ಸಲ ಅನ್ನಿಸಿದ...’
:4:
ಅವಳು ಎದ್ದು ಹೋದರೂ ಅವಳ ಮಾತಿನ ಗುಂಗಿನಿಂದ ನಾನು ಹೊರಬಂದಿರಲಿಲ್ಲ. ಸೂಕ್ಷ್ಮ ಮನಸ್ಸಿನ ಭಾವಜೀವಿ ರಮೇಶ ಒಂದೆಡೆಯಾದರೆ ವಾಸ್ತವವಾದಿ ಸ್ನೇಹಲ್ ಇನ್ನೊಂದೆಡೆ... ಖಂಡಿತವಾಗಿಯೂ ಅವರ ಜೋಡಿ ಸರಿ ಹೊಂದುತ್ತಿರಲಿಲ್ಲ. ಆದರೆ ರಮೇಶನಿಗೆ ಇದು ಅರ್ಥ ಆಗಿರಲಿಲ್ಲ... ಅದೇಕೆ ನಾನೇ ಆ ಬಗ್ಗೆ ವಿಚಾರ ಈ ಮೂದಲು ಮಾಡಿರಲಿಲ್ಲ. ಸ್ನೇಹಲ್ ಹೇಳುವ ಹಾಗೆ ನಾವೆಲ್ಲ ನಮ್ಮ ಬಗ್ಗೆ ಹೆಚ್ಚು ಕೇಂದ್ರಿಕೃತವಾಗುತ್ತೇವೆ ಅಂತ ಅನ್ನಿಸುತ್ತದೆ... ನಮ್ಮ ಯೋಚನೆಗಳು ಸರಿ ಎಂಬುದೇ ನಾವು ಮಾಡಿಕೊಳ್ಳುವ ಆತ್ಮವಂಚನೆ. ನಮ್ಮ
ಪರಿಧಿ ಬಿಟ್ಟು ನಾವು ವಿಚಾರ ಮಾಡುವುದೇ ಇಲ್ಲವೇನೋ? ತಲೆತಲಾಂತರದಿಮದ ನಮ್ಮ ಆಸೆ ಆಕಾಂಕ್ಷೆಗಳ ಬಗ್ಗೆ ಚಿಂತಿಸುವ ನಾವು ಹೆಣ್ಣುಗಳು ನಮ್ಮಿಂದಲೂ ಕೆಲವು ಅಪೇಕ್ಷೆ ಇಟ್ಟುಕೊಂಡಿರುತ್ತಾರೆ ಎನ್ನುವುದು ಮರೆತುಬಿಡುತ್ತೇವೆ. ಇದು ಅಪ್ರಿಯ ಸತ್ಯ. ಸ್ನೇಹಲ್ ಬಹುಶಃ ಅನೇಕ ಹೆಂಗಸರ ಧ್ವನಿಯಾಗಿದ್ದಾಳೆ. ಅವಳ ಗುರಿ ಮಾತ್ರ ಅವಳ ಲಕ್ಷ್ಯ ವಾಗಿತ್ತು. ಬಹುಶಃ ಯಾವುದೂ ಪ್ರಲೋಭನೆಗೂ ಅವಳನ್ನು ಪುಸಲಾಯಿಸುವ ತಾಕತ್ತು ಇರಲಿಲ್ಲ ಅಂತ ಕಾಣುತ್ತದೆ. ಅವಳು ಅಂದುಕೊಂಡಿದ್ದನ್ನು ಅವಳು ಸಾಧಿಸಿದ್ದಾಳೆ. ಒಂದರ್ಥದಲ್ಲಿ ಅವಳೂ ಸ್ವಾರ್ಥಿಯೇ ಸರಿ...!
ತಲೆಗೊಂದಲದ ಗೂಡಾಗಿತ್ತು. ಕತ್ತಲೆ ನಿಧಾನವಾಗಿ ರೂಮಿನ ತುಂಬ ಆವರಿಸುತ್ತಿತ್ತು. ಸಿಗರೇಟು ಹಚ್ಚಿ ಹೊಗೆ ಬಿಡುತ್ತಾ ಮೇಲಿನ ಸೂರು ದಿಟ್ಟಿಸಹತ್ತಿದೆ.ವಿಜಯಕರ್ನಾಟಕ
2000

10 comments:

 1. Very nyc story eegina prapanchada murta roopa desai avre

  ReplyDelete
 2. chennagide story....ramesha swalpa swarti ende annisida....sigalaraddanna innondaralli kanu prayatna madabekittu... paapa hetta amma appandiru eshtu kanniru itttaro...

  ReplyDelete
 3. ಸ್ನೇಹಲ್ ಕುಲಕರ್ಣಿ ಎಂಬ ಅಭಿನವ ಮೃತ್ಯು ದೇವತೆ ರಮೇಶನ ಬದುಕನ್ನು ಹೈರಾಣ ಮಾಡಿಟ್ಟ ಕಥೆ ಮನ ತಟ್ಟಿತು.

  ರಮೇಶನ ಸಾವಿನ ಸುತ್ತ ಬಿಚ್ಚಿಕೊಳ್ಳುವ ಘಟನೆಗಳು ತೀವ್ರವಾಗಿವೆ.

  ReplyDelete
 4. ದೇಸಾಯ್ ಸರ್,
  ಈಗಿನ ಬದುಕಿನ ಬಗ್ಗೆ ವಾಸ್ತವ ಸ್ತಿತಿಯ ಬಗ್ಗೆ ಕುತೂಹಲಕಾರಿಯಾದ ಕತೆಯಿದು...ಚೆನ್ನಾಗಿ ಬರೆದಿದ್ದೀರಿ...ಪತ್ರಿಕೆಯಲ್ಲಿ ಪ್ರಕಟವಾಗಿದ್ದಕ್ಕೆ ಧನ್ಯವಾದಗಳು.

  ReplyDelete
 5. ದೇಸಾಯರ,
  ಮೊದಲೊಮ್ಮೆ ಓದಿದ ಕತೆಯನ್ನು ಮತ್ತೊಮ್ಮೆ ಓದಿ ‘ಭಾವವಿವಶ’ನಾದೆ. ಪ್ರತಿಯೊಂದು ಒಳ್ಳೆಯ ಕತೆಯ ಉದ್ದೇಶವೇ ಅದಾಗಿದೆ. ಪ್ರತಿಯೊಬ್ಬ ಒಳ್ಳೆಯ ಕತೆಗಾರನು ತನ್ನ ಮನದ ಭಾವವನ್ನು (-ಅದು ಆನಂದವೇ ಇರಲಿ, ದುಗುಡವೇ ಇರಲಿ-)ಓದುಗರೊಡನೆ ಹಂಚಿಕೊಳ್ಳಲು ಬಯಸುತ್ತಾನೆ. ಒಬ್ಬ sensible ಹಾಗು sensitive ಹೆಣ್ಣುಮಗಳನ್ನು ಓರ್ವ ಸಾಮಾನ್ಯ ಮನೋಭಾವನೆಯ ಗಂಡಿನೊಡನೆ vis-a-vis ಚಿತ್ರಿಸಿ, ಬದುಕು ಹೇಗಿದ್ದರೆ ಚೆನ್ನ ಎನ್ನುವುದನ್ನು ತಿಳಿಸಿದ್ದೀರಿ. ಅಲ್ಲದೆ, ನಿಮ್ಮ ‘ಹುಬ್ಬಳ್ಳಿಯ ಶೈಲಿ’! Congratulations for the style and the story!

  ReplyDelete
 6. ಉಮೇಶ್ ದೇಸಾಯಿ ಸಾರ್ ನಿಮ್ಮ ಕಥೆ ಓದಿ , ಒಮ್ಮೆಲೇ ಆಲೋಚಿಸಿದಾಗ ವಾಸ್ತವ ಸತ್ಯದ ದರ್ಶನ ಆಯಿತು. ಇದು ಯಾರ ಜೀವನದಲ್ಲಿ ಬೇಕಾದರೂ ಆಗಿರುವ ಕಥೆ , ಅಂತ್ಯ ಸ್ವಲ್ಪ ವೆತ್ಯಾಸ ಇರಬಹುದು. ಇದನ್ನು ಓದಿ ಸತ್ಯ ದರ್ಶನ ಮಾಡಿಕೊಂಡರೆ ಹಲವು ಯುವಕರಿಗೆ ಸುಖದ ದರ್ಶನ ಆಗುತ್ತದೆ. ಒಳ್ಳೆಯ ಕಥಾ ಹಂದರ ಬಿಚ್ಚಿಟ್ಟ ನಿಮಗೆ ಅಭಿನಂದನೆಗಳು.
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ReplyDelete
 7. ಕಥೆ ಚೆನ್ನಾಗಿದೆ ...ಯಾವುದೇ ಘಟನೆಗೂ ಎರಡು ಮುಖಗಳಿರುತ್ತವೆ ..ಎರಡೂಕಡೆಯಿಂದ ಯೋಚಿಸಿದಾಗಲಷ್ಟೇ ನಿಜ ವಿಚಾರ ತಿಳಿಯಲು ಸಾಧ್ಯ ..ಉತ್ತಮ ನಿರೂಪಣೆ ಇಷ್ಟ ಆಯ್ತು.

  ReplyDelete
 8. ಕಥೆ ತುಂಬಾ ಚೆನ್ನಾಗಿದೆ. ಎಷ್ಟೋ ಸಾವಿನ ಹಿಂದೆ ಯಾರನ್ನೋ ದೂಷಿಸಿಬಿಡುತ್ತೇವೆ, ಆದರೆ ಅದರ ಹಿಂದಿನ ಕಥೆಯನ್ನು ಅರಿಯುವುದೇ ಇಲ್ಲ. ಸ್ನೇಹಲ್ ತನ್ನ ಮನಸ್ಸಿನ ನಿರ್ಧಾರದಲ್ಲಿ ಗಟ್ಟಿತನ ಹೊಂದಿದ್ದಳು. ರಮೇಶ್ ಯಾವುದರಲ್ಲೂ ಗಟ್ಟಿತನ ಇರಲಿಲ್ಲ. ನಿರೂಪಣೆ ಚೆನ್ನಾಗಿದೆ ಸರ್.

  ReplyDelete
 9. ಕತೆ ಚೆನ್ನಾಗಿದೆ ದೇಸಾಯಿ ಸರ :) ಮುಂದೆಯೂ ನಿರೀಕ್ಷೆ ಇದೆ.

  ReplyDelete
 10. ಸರಳ ಕಥೆ, ಗಂಭೀರ ವಿಚಾರಗಳು. ಕಥೆ ಹಿಡಿಸಿತು. ನಿರೂಪಣೆ ಇನ್ನೂ ಚೆನ್ನಾಗಿ ಹೆಣೆಯುವ ಸಾಮರ್ಥ್ಯ ನಿಮ್ಮಲ್ಲಿದೆ ಅಂತ ನನಗನಿಸೋದು (ನಿಮ್ಮ ಕನವರಿಕೆಗಳು ಓದಿದ ಮೇಲೆ)

  ReplyDelete