Wednesday, February 1, 2012

ಚೋರ್ ಕೋ ಪಕಡೋ...

ಪುಣೆಯ ಪ್ರಸಿದ್ಧ ಹೊಟೆಲ್ ಗಿಜಿಗುಡುತ್ತಿತ್ತು.
ಸುರೇಶನೂ ಅಲ್ಲಿದ್ದ ರೇಶಿಮಿ ಪರಕಾರ ಪೋಲಕ ಹಾಕಿಕೊಂಡು ಅವನ ಮಗಳು ಓಡಾಡತಿದ್ಲು.
ಗೊಂಬಿಹಂಗ ಕಾಣಸತಿದ್ಲು. ಮಗಳ ಚೆಲುವನ್ನು ಕಣ್ಣಾಗ ತುಂಬಿಕೋತ ಅಲ್ಲೇ ಹೆಂಗಸೂರ ನಡುವೆ ಇದ್ದ
ಹೆಂಡತಿಕಡೆ ಆಗಾಗ ನೋಡಕೋತ ತನ್ನ ಮಾಮಾಗೋಳ ಜೋಡಿ ಬದಲಾದ ಹುಬ್ಬಳ್ಳಿ ಬಗ್ಗೆ ಹೇಳತಿದ್ದ ಸುರೇಶ.
ಸುರೇಶಗ ಸ್ವಂತದ್ದು ಅಂತ ಬಳಗ ಇಲ್ಲ ಸಾಲು ಸಾಲಾಗಿ ಅವನ ಅಪ್ಪ, ಅಕ್ಕ ಹಾಗೂ ಅವ್ವ ತೀರಿಕೊಂಡಿದ್ರು.
ಹಿಂಗಾಗಿ ಅವ ತನ್ನ ಕಾಕಾನ ಮಕ್ಕಳನ್ನ ಹಚ್ಚಿಕೊಂಡಿದ್ದ. ಅವರನ್ನ ತನ್ನ ಸ್ವಂತ ಅಕ್ಕ , ಅಣ್ಣ ಅಂತ ತಿಳಕೊಂಡಿದ್ದ.
ಇದೆಲ್ಲಾಕೂ ಮ್ಯಾಲೆ ಅಂದ್ರ ಇಂದ್ರಾಕಾಕುಇದ್ಲು. ಹೌದು ಸುರೇಶಗ ಅಕಿಮ್ಯಾಲ ಭಾಳ ಅಂತಃಕರಣ.
ತನ್ನ ಬಾಳು ತಿದ್ದಿದಾಕಿ ಅಕಿ, ಅಕಿಯಿಂದ ನಾ ಇವತ್ತು ಹಿಂಗ ಆಗೇನಿ ಇದು ಅವ ತನ್ನ ಹೆಂಡತಿಗೆ ಆಗಾಗ ಹೇಳತಿದ್ದ ಮಾತು.
ಆ ಇಂದ್ರಾಕಾಕು ಇವತ್ತಿನ ಸಮಾರಂಭದ ಮುಖ್ಯ ಆಕರ್ಷಣೆ ಆಗಿದ್ಲು. ಹೌದು , ಮರಿಮೊಮ್ಮಗ ಅಕಿಗೆ ಹುಟ್ಟಿದ್ದ ಹೂ ಹಾರಿಸಿಕೊಳ್ಳುವ
ಭಾಗ್ಯ ಅಕಿದಾಗಿತ್ತು. ಇಂಥಾದ್ದು ನೋಡಬೇಕಂತ ಸುರೇಶ ಕುಟುಂಬ ಸಮೇತ ಪುಣೆಬಸ್ಸು ಹತ್ತಿದ್ದ ಇಂದ್ರಾಕಾಕುಗ ಕೊಡಲಿಕ್ಕೆ ಅಂತ
ಸಾಲಾ ಮಾಡಿ ಬೆಳ್ಳಿ ಗಣಪತಿ ತಂದಿದ್ದ. ಇಂದ್ರಾಕಾಕುಗ ನಾಲ್ಕು ಹೆಣ್ಣುಮಕ್ಕಳು,ಎರಡು ಗಂಡು ಮಕ್ಕಳು. ಎಲ್ಲಾರೂ ಜೀವನ ಯಾನದಾಗ
ಭಾಳ ಯಶಸ್ಸು ಕಂಡಾರ. ದೇಸಾಯರ ಮನೆತನದಾಗ ಅಪರೂಪ ಅನ್ನಬಹುದು ಅಂಥಾ ಪ್ರಸಿದ್ಧಿ ಇಂದ್ರಾಕಾಕು ಹಾಗೂ ಅಕಿ ಮಕ್ಕಳು
ಗಳಿಸ್ಯಾರ. ಇವತ್ತು ಇಂದ್ರಾಕಾಕುನ ಮರಿಮೊಮ್ಮಗನ ಬಾರಸಾ ಹಂಗ ಅಕಿಗೆ ಹೂ ಹಾರಿಸೋ ಕಾರ್ಯಕ್ರಮ. ಸಂಭ್ರಮ ಎಲ್ಲೆಡೆ ತುಂಬಿತ್ತು.
ಇಂದ್ರಾಕಾಕುನ ತೊಡಿಮ್ಯಾಲ ಸುರೇಶ ಸಹ ಆಡಿಬೆಳೆದಿದ್ದ. ಇಂದು ಅಕಿ ತೊಡಿಮ್ಯಾಲ ಮರಿಮೊಮ್ಮಗ ಮಲಗಿದ್ದ.ಮೊಮ್ಮಗ ಹಾಗೂ ಅವನ ಅಪ್ಪ
ಇಬ್ಬರೂ ಬಂಗಾರದ ಹೂ ಜೋಡಿ ಮಲ್ಲಿಗಿ, ಶಾವಂತಿಗಿ,ಗುಲಾಬಿ ಹಿಂಗ ಅನೇಕ ಹೂ ಕಾಕುನ ತಲಿಮ್ಯಾಲ ಸುರದ್ರು. ಎಲ್ಲಾರೂ ಚಪ್ಪಾಳಿ ಹೊಡದ್ರು
ಇಂದ್ರಾಕಾಕುನ ಕಣ್ಣಾಗೂ ನೀರು ಜಿನುಗಿದ್ವು, ತನ್ನ ಕೆಮೆರಾದಾಗ ಈ ಅಪ್ರತಿಮ ಕ್ಷಣ ಸೆರಿಹಿಡದ ಸುರೇಶ ಹೆಮ್ಮೆಯಿಂದ ಬೀಗುತ್ತಿದ್ದ.
ಊಟದ್ದ ತಯಾರಿ ನಡೀತು. ಟೇಬಲ್ ಕುರ್ಚಿ ಮ್ಯಾಲಿನ ಊಟಾ ಪೂನಾಸಿಸ್ಟೆಮ್ ಅಂತ ಸುರೇಶನ ಹೆಂಡತಿ ಚಾಷ್ಟಿ ಮಾಡಿದ್ಲು.
ಇದ್ದಕ್ಕಿದ್ದಂಗ ಗದ್ಲಾ ಸುರು ಆತು. ಅಲ್ಲಿ ಇಲ್ಲಿ ಹರಿದಾಡಿದ ಸುದ್ದಿ ಸುರೇಶನ ಕಿವಿಮ್ಯಾಲನೂ ಬಿತ್ತು. ಇಂದ್ರಾಕಾಕುನ ಎರಡನೇಮಗಳು ಸುರೇಖಳ
ಪರ್ಸು ಕಳದದ ಅದರಾಗ ಬಂಗಾರದ ತೋಡೆ ಇದ್ವು ಅಂತ. ಪ್ರಶಾಂತವಾದ ನೀರಿನ್ಯಾಗ ಯಾರೋ ಕಲ್ಲು ಒಗದಂಗ ಆತು. ಹೊಟೆಲ್ ಸೆಕ್ಯುರಿಟಿ
ಬಂದ್ರು. ಪೋಲಿಸ ರನ್ನು ಕರೆಸುವ ಮಾತಾದ್ವು. ಇಂದ್ರಾಕಾಕುನ ಎರಡನೇ ಮಗ ಸುಭಾಶ ಎಲ್ಲಾರಿಕಿಂತ ದೊಡ್ಡ ಬಾಯಿ ಮಾಡತಿದ್ದ...
" ಇದ ಹಾಲಿನ್ಯಾಗ ಕಳ್ಳ ಇದ್ದಾನ ಎಲ್ಲೂ ಓಡಿ ಹೋಗಲಾರ ಅವ....". ಇಂದ್ರಾಕಾಕುನು ವಿಹ್ವಲ ಆಗಿದ್ಲು. ಅನಿರೀಕ್ಷಿತ ಘಟನಾ ಎಲ್ಲಾರಿಗೂ
ತ್ರಾಸು ಮಾಡಿಸಿತ್ತು. ಸುರೇಶ ಸಹ ನೊಂದಿದ್ದ.
ಸುಭಾಶ ಸುರೇಶನ ಕಡೆಬಂದ. ಅವನ ಕೈ ಹಿಡದು ಮೂಲಿಯೊಳಗ ಕರಕೊಂಡು ಹೋದ..
"ಸುರ್ಯಾ ಖರೇ ಹೇಳು ನಿಂದ ಹೌದಲ್ಲೋ ಈ ಕೆಲಸ ಇದಕ್ಕ ಬಂದೀಯೇನು ಮಗನ...." ದಾಳಿ ಯಿಂದ ಅಪ್ರತಿಭನಾದ ಸುರೇಶ ಮಾತೇ ಆಡದಾದ.
"ಇದು ನಿಂದ ಕರಾಮತ್ತು ಅದ, ನಾ ಸುಮ್ಮನಿರೂದಿಲ್ಲ ಪೋಲಿಸರಿಗೆ ಕರಸತೇನಿ..ಸುಮ್ಮನ ರಗಳಿ ಯಾಕ ಕೊಟ್ಟುಬಿಡು...."
"ಅಂದ್ರ ನಾ ಕಳೂ ಮಾಡೇನಿ ಅಂತ ನೀ ಅಂತಿ ನಾ ಯಾಕ ಹಂಗ ಮಾಡಲಿ .." ಸುರೇಶನ ದನಿ ಕಂಪಿಸುತ್ತಿತ್ತು.
"ನೀ ಏನು ಅನ್ನೂದು ನಮಗ ಗೊತ್ತ ಅದಮಗನ.. ನಮ್ಮವ್ವ ಹೇಳ್ಯಾಳು ಕೊಟ್ಟು ಹೊರಗ ನಡಿ ಪೋಲಿಸ್ರು ಬಂದ್ರ ಅನಾಹುತ ಆಗತದ.." ಸುಭಾಶ ಓತಪ್ರೋತ
ವಾಗಿ ಹೇಳತಿದ್ದ. ಅಸ್ತಿತ್ವ ಕುಸಿಯುತ್ತಿರುವಂಗ ಸುರೇಶ ಗಾಬರಿಯಾದ. ಇಂದ್ರಾಕಾಕುನ ಕಾಲು ಹಿಡಕೊಂಡ ಆಣಿ ಮಾಡದ ಅತ್ತ ಚೀರಾಡಿದ..
ಅವನ ಮಗಳು ಅಪ್ಪನ ಈ ವೇಷ ನೋಡಿ ಗಾಬರಿ ಆಗಿದ್ಲು. ಹೆಂಡತಿಗೆ ಮಾತು ಹೊರಡದಾಗಿದ್ವು. ಇಡೀ ಹಾಲಿನ ಜನಾ ತನ್ನ ವಿರುದ್ಧ ವೃತ್ತಾಕಾರವಾಗಿ
ತಿರುಗುವಹಾಗೆ ಸುರೇಶನಿಗೆ ಅವನ ಆರ್ತನಾದಕ್ಕೆ ಕೇಳುಗರೇ ಇಲ್ಲ,
ಸುಭಾಶ ಸುರೇಶನ ಮೇಲೆ ಮಾಡಿದ ಅಪವಾದಕ್ಕೆ ಒಂದು ಇತಿಹಾಸ ಅದ. ಅವು ಸುರೇಶನ ಕಾಲೇಜಿನ ದಿನಗಳು. ಸಿನೇಮಾ ನೋಡುವ ಚಟ ಅವನಿಗೆ
ಹುಬ್ಬಳ್ಳಿ ಟಾಕೀಸು ಯಾವವೂ ಬಿಟ್ಟಿರಲಿಲ್ಲ ಅವ. ಮನ್ಯಾಗ ಇವನ ಕಾಲೇಜು ಫೀಸು , ಪಾಸು ಅಂತ ಕಟಾನಕಟಿ ರೊಕ್ಕಾ ಕೊಡತಿದ್ರು. ಚಟಾ ತೀರಿಸಿಕೊಳ್ಳಲಿಕ್ಕೆ
ಅಲ್ಲಿಂದ ಇಲ್ಲಿಂದ ಹತ್ತಿಪ್ಪತ್ತು ರೂಪಾಯಿ ಕದೀಲಿಕ್ಕೆ ಶುರುಇಟ್ಟ. ಅಕ್ಕನ ಬಾಣಂತನ ಅಂತ ಇಂದ್ರಾಕಾಕು ಬಂದಿದ್ಲು. ಅಕಿ ಬ್ಯಾಗಿಗೂ ಅವ ಕೈ ಹಾಕಿದ. ಒಂದ್ಸಲ
ಸಿಕ್ಕಿಹಾಕಿಕೊಂಡ. ಇಂದ್ರಾಕಾಕು ಇವನ್ನ ಹತ್ರ ಕೂಡಿಸಿಕೊಂಡು ಬುದ್ಧಿ ಹೇಳಿದ್ಲು..ಇದು ತಪ್ಪು ಅಂತ ತೋರಸಿದ್ಲು. ಯಾಕೋ ಅವಳ ಮಾತು ನಾಟಿತ್ತು. ಸುರೇಶ
ಬದಲಾದ. ಕೆಲಸಕ್ಕ ಸೇರಿಕೊಂಡ. ಯಾರಿಗೂ ಹೇಳೂದಿಲ್ಲ ಅಂತ ಇಂದ್ರಾಕಾಕು ಅಂದಿದ್ಲು ಬಾಯಿತಪ್ಪಿ ಅಕಿ ಅಂದ ಮಾತು ಇಷ್ಟು ವರ್ಷದ ಮೇಲೆ ಇಂಥಾ
ಪರಿಸ್ಥಿತಿ ತಂದಿತ್ತು.
ಸುರೇಶ್ ಅತ್ತು ಅತ್ತು ಹೈರಾಣಾಗಿದ್ದ. ಯಾರೂ ಅವನ ಪರವಾಗಿ ಮಾತನಾಡಲಿಲ್ಲ. ಇಷ್ಟೋತ್ತನಾ ತಮ್ಮ ಜೊತಿ ಹರಟಿ ಹೊಡದ ಮನಿಶಾ ಹಿಂಗ ಕಳ್ಳತನ ಮಾಡ್ಯಾನ
ಇದು ಅಲ್ಲಿಯ ಚರ್ಚಾದ ವಿಷಯಆಗಿತ್ತು. ಸುರೇಶನ ಮಗಳು ಅವನ ತೊಡಿ ಏರಿ ಸುರಿಯುತ್ತಿದ್ದ ಕಣ್ಣೀರು ಒರಸತಿದ್ಲು. ಪೋಲಿಸರು ಬರುವ ಹಾದಿ ನೋಡತಿದ್ರು
ಅವರೂ ಬಂದರು ಸುರೇಶನ ಬೇಡಿಕೆಮಾತು ಕಿವುಡ ಕಿವಿಗೆ ಬೀಳತಿದ್ವು. ಅವರು ಹೇಳಿಕೆ ತಗೊಂಡು ಅವನ್ನ ಕರಕೊಂಡು ಹೊರಟರು.ಇಂದ್ರಾಕಾಕು ವಿಷಣ್ಣಳಾಗಿ
ಕೂತಿದ್ಲು. ಸುರೇಶ ಹಿಂಗ್ಯಾಕ ಮಾಡಿದ ಇದು ಅಕಿ ತಲಿ ಕೊರಿತಿತ್ತು. ವಿಶ್ವಾಸ ದ್ರೋಹ ಯಾಕ ಮಾಡಿದ ಅಂತ ಸುತ್ತಲಿದ್ದಾವರ ಜೊತಿ ಹೇಳಿಕೊಂಡು ಅಳತಿದ್ಲು.
ಸುರೇಶ್ ಪೋಲಿಸ್ ಜೀಪು ಏರಬೇಕು ಅಷ್ಟರಾಗ ಸುರೇಖಾನ ಮೊಮ್ಮಗಳು ಅಜ್ಜಿ ಬೀಳಿಸಿದ್ದ ಪರ್ಸು ಎತ್ತಿ ಕೊಟ್ಲು ಅದರಾಗ ತೋಡೆನೂ ಇದ್ವು... ಯಾರೋ ಪೋಲಿಸರಿಗೆ
ಹೇಳಿದ್ರು. ಸುರೇಶನ್ನ ಜೀಪ್ನಿಂದ ಇಳಿಸಿದ್ರು. ಧೂಳ ಎಬ್ಬಿಸಿಕೋತ ಜೀಪು ಹೋತು. ಇಂದ್ರಾಕಾಕು ದಡಬಡಾಯಿಸಿ ಬಂದ್ಲು ..ಸುರೇಶ ಮಗಳನ್ನು ಎತ್ತಿಕೊಂಡು ಹೊರಟಿದ್ದ
ಹೆಂಡತಿನೂ ಜೋಡಿ ಇದ್ಲು..ಸುರೇಶನ ಮಗಳು ಅಪ್ಪನ ಕಣ್ಣೀರು ಇನ್ನೂ ಒರಸತಿದ್ಲು. ಇಂದ್ರಾಕಾಕು ಕರೆದಿದ್ದು ಸುರೇಶಗ ಕೇಳಸಲೇ ಇಲ್ಲ. ...

18 comments:

  1. ಓದುತ್ತಾ ಓದುತ್ತಾ ತುಟಿ ಮೀರಿ ಅಳು ಉಕ್ಕಿದ್ದು ಸುಳ್ಳಲ್ಲ ಸರ್...

    ReplyDelete
  2. ಮನ ಮಿಡಿಯುವ ಕತೆ...ಚೆನ್ನಾಗಿದೆ ಸಾರ್....

    ReplyDelete
  3. ದೇಸಾಯರ,
    ಎದುರಾಬದರಾ ಕೂತುಕೊಂಡು ಕತಿ ಕೇಳಿದ್ಹಂಗ ಅನಿಸ್ತು. ಛಂದ ಹೇಳಿದಿರಿ. ಆದರ ಸುರೇಶನ ಸಲುವಾಗಿ ದುಖ್ಖನೂ ಆತು!

    ReplyDelete
  4. ದೇಸಾಯಿ ಸರ್,
    ಕಥೆ ಮನಸ್ಸಿಗೆ ನಾಟಿತು...........
    ಸುರೇಶನ ಪರಿಸ್ಥಿತಿ ಅಯ್ಯೋ ಎನಿಸಿತು........
    ಉತ್ತಮ ಕಥೆ.......

    ReplyDelete
  5. ದೇಸಾಯಿ ಸಾಹೇಬರೆ..

    ಕ್ಯಾನ್ಸರ್... ಏಡ್ಸ್.. ಇದೆಲ್ಲ ದೊಡ್ಡ ರೋಗ ಅಂತೆಲ್ಲ ಹೇಳ್ತೇವೆ..

    ಎಲ್ಲಕ್ಕಿಂತ ಕೆಟ್ಟದಾದ ರೋಗ "ಬಡತನ"

    ಈ ಸಮಾಜ ಬಡವರನ್ನು ನೋಡುವ ರೀತಿಯೇ ಬೇರೆ..

    ಕಥೆ ಓದುತ್ತ ಓದುತ್ತ ಗಂಟಲು ಕಟ್ಟಿ ಬಂತು..

    ಬಹಳ ಚಂದದ... ವಾಸ್ತವಕ್ಕೆ ತುಂಬಾ ಹತ್ತಿರದ ಕಥೆ..

    ReplyDelete
  6. ದೇಸಾಯಿ ಸಾಹೇಬರೇ;ಮನ ಕಲಕುವ ಕಥೆ.ಚಂದದ ನಿರೂಪಣೆ.ಮನುಷ್ಯ ಬದಲಾಗಬಲ್ಲ ಎನ್ನುವ ಸತ್ಯ ತಿಳಿಯದೆ ಒಮ್ಮೆ ತಪ್ಪು ಮಾಡಿದ ವ್ಯಕ್ತಿಯನ್ನು ಯಾವಾಗಲೂ ಅನುಮಾನದ ದೃಷ್ಟಿಯಿಂದ ನೋಡುವುದು ಸಮಾಜದ ವಾಡಿಕೆ.

    ReplyDelete
  7. ಮೇಡಮ್ ನಿಮ್ಮ ಮಿಡಿಯುವ ಪ್ರತಿಕ್ರಿಯೆಗೆ ಧನ್ಯೋಸ್ಮಿ

    ReplyDelete
  8. ಅಶೋಕ್ ಸರ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  9. ಕಾಕಾ ದೊಡ್ಡ ಮಾತು ಹೇಳಿದ್ರಿ ಇದು ಘಟನಾ ಆಗಿದ್ದು ಒಂಥರಾ ಅರ್ಧಸತ್ಯ ಸುರೇಶನ ಪಾತ್ರ ಕಾಲ್ಪನಿಕ ಅದ.

    ReplyDelete
  10. ಪ್ರವೀಣ ಅಪರೂಪದ ನಿಮ್ಮ ಭೇಟಿಗೆ ಧನ್ಯವಾದಗಳು

    ReplyDelete
  11. ಹೆಗಡೇಜಿ ನೀವು ಹೇಳಿದ ಮಾತು ಖರೆ. ಬಡತನ ಏನೇನೆಲ್ಲ ಮಾಡಿಸುವುದಿದೆ ಅಲ್ಲ?

    ReplyDelete
  12. ಡಾಕ್ಟರ್ ಸರ್ ತೂಕದ ಮಾತು ಹೇಳಿರುವಿರಿ. ಧನ್ಯೋಸ್ಮಿ

    ReplyDelete
  13. ದೇಸಾಯರ,
    ಕತೆ ಚೆಂದವಿದೆ..
    ಪರಕಾರ ಪೋಲಕ,ಚಾಷ್ಟಿ,ಕಟಾನಕಟಿ-ಆಹಾ..ಎಷ್ಟು ವರ್ಷ ಆಗಿತ್ರಿ ಇಂಥಾ ಶಬ್ದಗಳನ್ನು ಕೇಳಿ.. :-)

    ReplyDelete
    Replies
    1. ಜೋಶಿ ಅವರಿಗೆ ಧನ್ಯವಾದ ನೀವು ಉಲ್ಲೇಖಿಸಿರುವ ಶಬ್ದ ಈಗ ಬರೇ ಕತಿಯೊಳಗ ಸಿಗ್ತಾವ ಇದೂ ಒಂದು ವಿಪರ್ಯಾಸ ಅದ

      Delete
  14. ಉಮೇಶ್ ದೇಸಾಯಿ ಸರ್ ನಿಮ್ಮೊಳಗೊಬ್ಬ ಅದ್ಭತ ಕಥೆಗಾರ ಇದ್ದಾನೆ.ಓದುಗರ ಮನ ಕಲಕುವ ಕಥೆ ಇದು.ನನಗೆ ಮನ ಕಲಕಿ ಒಂದುಕ್ಷಣ ಮೂಕನಾದೆ. ಚೆನಡದ ಕಥೆ ಮುಂದುವರೆಸಿ ನಿಮ್ಮ ಪಯಣ.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
    Replies
    1. ಬಾಲು ಸರ್ ನಿಮ್ಮ ಪ್ರತಿಕ್ರಿಯೆಗೆ ಧನ್ಯೊಸ್ಮಿ

      Delete
  15. ಕಥೆ ಕಟ್ಟಿಕೊಡುವ ಸಿದ್ಧಿ ನಿಮಗೆ ಒಲಿದಿದೆ. ಕಥೆಯ ಓಘವನ್ನು ಕಾಪಿಡುವ ಗುಟ್ಟು ನಿಮಗೆ ಗೊತ್ತಿದೆ. ಇನ್ನೂ ನಿಮ್ಮ ಬರಹಗಳನ್ನು ನಾನು ಓದಿ ಸಂತಸ ಪಡುತ್ತೇನೆ ಗೆಳೆಯ.

    ನಿಮ್ಮ ಒಲುಮೆ ಹೀಗೇ ಇರಲಿ.

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
  16. ಬದರಿ ಸರ್ ನಿಮ್ಮ ಮಾತಿಗೆ ನಾ ಉಬ್ಬಿ ಹೋದೆ
    ಖಂಡಿತ ನಿಮ್ಮ ಬ್ಲಾಗಿಗೂ ಬರುವೆ. ಧನ್ಯೋಸ್ಮಿ

    ReplyDelete