Sunday, March 27, 2011

ಹೀಗೊಂದು ಪ್ರಶ್ನೆ..















ಮಾಗಿಯನ್ನು ಬಾಗಿಲಾಚೆ ಕಳಿಸಿಕೊಟ್ಟ
ಕವಿ ಬಾಗಿಲಿಗೆ ಬಂದು ನಿಂತಿದ್ದಾನೆ..
ಚೈತ್ರನ ನಿರೀಕ್ಷೆಯಲ್ಲಿ.
ಕೋಗಿಲೆ ಪಂಚಮ ತಳಿರು ಹಸಿರು ಹೋಳಿಗೆ
ನೂರೆಂಟು ಸಂಭ್ರಮಗಳ ಆಗಮನದಲ್ಲಿ
ತನ್ನ ಇರುವನ್ನು ಇನ್ನಷ್ಟು ಹಿಗ್ಗಿಸಿಕೊಳ್ಳಲು
ಕಾದಿದ್ದಾನೆ.
ಎಂದಿನಹಾಗೆ ಈ ಸಲದ ಮಾಮರದಲ್ಲೂ
ಹಸಿರಿರುವುದಿಲ್ಲ.. ಮಣ್ಣಲ್ಲಿ ಅರಳಿದ ರಂಗೋಲಿಯಲ್ಲಿ
ರಕ್ತದ ಕಲೆ ಚೆಲ್ಲಿರುತ್ತದೆ..ಗೊತ್ತು ಅವಗೆ ಅದು ಹೀಗೇ ...ಅಂತ
ಅದೆಷ್ಟೋ ವಸಂತ ಅದೆಷ್ಟು ಸಂವತ್ಸರ ಉರುಳಿಹೋದವಿಲ್ಲಿ..
ನಾಡಿನ ದೊರೆ ಸಾಲುಮರದ ತಿಮ್ಮಕ್ಕನ ಕಾಲು ಮುಗಿಯುವ ಢೋಂಗಿಯಲ್ಲಿ..!
ದೂರದ ಜಪಾನ್ ನ ಅಂಗಡಿಯವ ಹಾಕಿದ ಬೋರ್ಡಿನ ಸುದ್ದಿ
ಓದಿ ಪಕ್ಕಕ್ಕಿಡುತ್ತಾನೆ..ಅದು ನಮಗೆ ಒಗ್ಗದು ಎಂದು.
ನಮಗಿದೇ ಭಾಗ್ಯ ಪ್ರಳಯದ ಭಯ, ಉದ್ರಿ ತಂದ ಬೇಳೆಯ ಹೋಳಿಗೆ
ಟಿವಿಯಲ್ಲಿ ಅದೇ ರಿಮೇಕಿನ ಸರಕು, ನಂಜಿಕೊಳ್ಳಲು ಸ್ವಲ್ಪ ಹರಟೆ..
ಎಲ್ಲ ಅದೇ ಇರುವಲ್ಲಿ ನಾಳೆ ಬಂದಿತಾದರೂ ಏಕೆ
ಮಾಮರ ಹಸಿರುಟ್ಟು ನಲಿವುದಾದರೂ ಏಕೆ..!

6 comments:

  1. ಉಮೇಶ,
    ಮೊದಲ ನುಡಿಯನ್ನು ಓದುತ್ತಿದ್ದಂತೆ ಸುಖದ ಹುರುಪು ಬಂದಿತು. ಕವನವನ್ನು ಮುಂದುವರಿಸಿದಂತೆ ವಾಸ್ತವತೆಯ ಕಾಠಿಣ್ಯ ಮುಖದ ಮೇಲೆ ಹೊಡೆದಂತಾಯಿತು.
    ನಮ್ಮ ಮನುಷ್ಯಪ್ರಪಂಚದಲ್ಲಿ, ನಿಮ್ಮ ಪ್ರಶ್ನೆ ಸರಿಯಾಗಿಯೇ ಇದೆ:
    "ಮಾಮರ ಹಸಿರುಟ್ಟು ನಲಿವುದಾದರೂ ಏಕೆ..!"
    ಬೇಂದ್ರೆಯವರ ಮಾತಿನಲ್ಲಿ ಹೇಳುವದಾದರೆ, ‘ಯುಗಾದಿಯು ನಮ್ಮನಷ್ಟೆ ಮರೆತಿದೆ!’

    ReplyDelete
  2. ಉಮೇಶ್ ದೇಸಾಯ್ ಸರ್,
    ವಸಂತನನ್ನು ಬರಮಾಡಿಕೊಳ್ಳುತ್ತಲೇ...ಅವನಿಗೆ ಇಂದಿನ ನಿತ್ಯ ಸತ್ಯ ಪರಿಸ್ಥಿತಿಯನ್ನು ಪರಿಚಯಿಸುವ ಪರಿ ಇಷ್ಟವಾಯಿತು. ಕವನದಲ್ಲಿರುವ ವಿಶಾಧ ನೋವು ಕಂಡರೂ ಕಾಣದಂತೆ ಹೇಳಿರುವುದು..ಚೆನ್ನಾಗಿದೆ..

    ReplyDelete
  3. ಉಮೇಶ್ ಸರ್,

    ನಿಮ್ಮ ಬ್ಲಾಗ್ ಗೆ ನನ್ನ ಪ್ರಥಮ ಭೇಟಿ...ಅನೇಕ ಉತ್ತಮ ಬರಹಗಳನ್ನು ಓದಿದೆ.....ಸುಂದರ ತಾಣ....ಧನ್ಯವಾದಗಳು...

    ReplyDelete
  4. ಕಾಕಾ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.ಹೋಳಿಗೆ ಮುರಿದು ಬಾಯಲ್ಲಿಡುವ ವೇಳೆ ಇಂಥಾ ವಿಚಾರಗಳು
    ಬರಬಾರದು ಅಲ್ಲ? ಏನು ಮಾಡುದು ನಮ್ಮ ಸುತ್ತಲಿನ ದುನಿಯಾ ಬದಲಾಗೇದ ಹೋಳಿಗಿನೂ ರುಚಿ ಹತ್ತವಲ್ತು
    ಈ ಕವಿತಾ ಹಿಂದ ಬರದಿದ್ದು ಸ್ವಲ್ಪ ರೂಪಾಂತರ ಆಗಿ ನಿಮ್ಮ ಮುಂದದ

    ReplyDelete
  5. ಶಿವು ಸರ್ ಕವಿತೆಅದರ ವಿಶಾದ ಎರಡೂ ನಿಮಗೆ ಮನದಟ್ಟಾದವು ಇದು ಕೇಳಿ ಸಂತೋಷ ಆತು

    ReplyDelete
  6. ಆಶೋಕ್ ಅವರಿಗೆ ಸುಸ್ವಾಗತ, ಹಿಂಗ ಬರತಿರ್ರಿ

    ReplyDelete