ಸಂಬಂಧದಲ್ಲಿ ಸುಂದ್ರಾಕಾಕು ನನಗೆ ದೊಡ್ಡವ್ವನಾಗಬೇಕು.ನನ್ನ ತಂದೆಯ ವೈನಿ ಅವಳು.
ಏನೋ ನಮ್ಮ ದೇಸ್ಗತಿಮನೆತನದಾಗ ಅಪ್ಪ ಅವ್ವ ಇವರನ್ನೂ ಕಾಕಾ ಕಾಕು ಅಂತ ಕರಿಯುವ ರೂಢಿ. ಈಗ ನಾನೂ
ನನ್ನ ತಂದೆಗೆ ಶಂಕರಕಾಕಾ ಅಂತಾನೇ ಹೇಳುತ್ತಿದ್ದುದು. ಸುಂದ್ರಾಕಾಕು ಮೂಲತಃ ಮಹಾರಾಷ್ಟ್ರದವಳು.
ಸಾಂಗಲಿ ಹತ್ತಿರದ ಬುದ್ ಗಾಂವ್ ದವಳು.ಅವಳು ಹೇಗೆ ವಾಡೆ ಸೊಸೆ ಯಾದಳು ಯಾರು ಪ್ರಸ್ತಾಪ ತಂದಿದ್ರು
ಇದೆಲ್ಲ ವಿವರ ಅಲಭ್ಯ.ನಾ ಹುಟ್ಟುವ ವೇಳೆಗಾಗಲೇ ಸುಂದ್ರಾಕಾಕು ನ ಗಂಡ --ಲಕ್ಷ್ಮಣರಾವ್ --- ತೀರಿಕೊಂಡಿದ್ರು,
ಬಿಳಿ ಸೀರೆ ಉಟ್ಟ ಸುಂದ್ರಾಕಾಕುನ್ನ ನೋಡುತ್ತಲೇ ದೊಡ್ಡವನಾದ ನನಗೆ ಅವಳು ಹೊಂದಿರಬಹುದಾದ ಸೌಂದರ್ಯದ
ಬಗ್ಗೆ ಕುತೂಹಲವಿತ್ತು. ಇರಲಿ.ಸುಂದ್ರಾಕಾಕುಗೆ ೬ ಜನ ಮಕ್ಕಳು ಅದರಲ್ಲಿ ನಾಲ್ಕು ಜನ ಹೆಣ್ಣುಮಕ್ಕಳು ಉಳಿದಿಬ್ಬರೂ
ಗಂಡುಮಕ್ಕಳು. ಎಲ್ಲರೂ ಈಗ ಸಂಸಾರಸಾಗರದಲ್ಲಿ ಈಜಿ ದಡಸೇರಿ ಮೊಮ್ಮಕ್ಕಳ ಜೊತೆ ಆರಾಮಾಗಿದ್ದಾರೆ.
ಸುಂದ್ರಾಕಾಕುನ ಹಿರಿಮಗ ಮೋಹನ ದೇಸಾಯಿಯ ಮೊಮ್ಮಗ ರೌನಕ್ ನ ನಾಮಕರಣ
ಅದಕೂ ಮುಖ್ಯವಾಗಿ ಸುಂದ್ರಾಕಾಕು ಮರಿಮೊಮ್ಮಗನನ್ನು ಎತ್ತಿಕೊಂಡು "ಹೂ ಹಾರಿಸುವ" ಕಾರ್ಯಕ್ರಮ ಹೀಗೆ
ಈ ಎರಡೂ ಕಾರ್ಯಕ್ರಮಗಳು ಪುಣೆಯಲ್ಲಿ ನಿಗದಿಯಾಗಿದ್ದವು. ಈ ಕಾರ್ಯಕ್ರಮದ ಹಿಂದಿನ ಸಂಜೆ ಆಯೋಜಿಸಿದ
"ದೇಸಾಯಿ ಫ್ಯಾಮಿಲಿ ಗೆಟ್ ಟು ಗೆದರ್" ಒಂದು ಅಪರೂಪದ ಕಾರ್ಯಕ್ರಮ. ವಾಡೆದಲ್ಲಿ ಆಡಿ ಬೆಳೆದ ಹೆಣ್ಣುಮಕ್ಕಳು,
ಸಂಪರ್ಕಕ್ಕೆ ಬಂದ ಅಳಿಯದೇವರು ಮೊಮ್ಮಕ್ಕಳು ಹೀಗೆ ಎಲ್ಲರೂ ವಾಡೆಯಲ್ಲಿ ಕಳೆದ ತಳೆದ ಅನುಭವ ಹಂಚಿಕೊಂಡರು. ಎಲ್ಲರಿಗಿಂತ ಸಣ್ಣವ ನಾ ಮಾತಾಡುವಾಗ ಭಾವಾವೇಶ ಉಕ್ಕಿ ಕಣ್ಣೀರು ಸುರಿಸುತ್ತಲೇ ಹೇಳಿದೆ
ವಾಡೆಯಲ್ಲಿ ನನ್ನ ಅಕ್ಕಂದಿರು ಅಣ್ಣಂದಿರು ಪಡೆದಷ್ಟು ಸುಖಾನುಭವ ನಾ ಪಡೆದಿರಲಿಲ್ಲ . ಆದರೂ ನನಗೆ ತೋಚಿದ್ದು
ನಾ ಹೇಳಿದೆ. ಇನ್ನೊಂದು ವಿಷಯ ಅಂದ್ರೆ ಸುಂದರಾಕಾಕು ಮಾಡಿದ ಜೀವನ ಸಂಗ್ರಾಮದ ಚಿತ್ರಣ ಕೊಡುವ ಒಂದು
ಕವಿತೆ ಬರೆದಿದ್ದೆ. ಅದನ್ನು ಅಲ್ಲಿ ಓದಿ ತೋರಿಸಿದೆ --ಇಲ್ಲಿಯೂ ಕೊಟ್ಟಿರುವೆ.
ಈ ಕಾರ್ಯಕ್ರಮ ನಡೆದಿದ್ದು ೨೨/೦೨/೨೦೦೩ ರಂದು. ನನ್ನ ಹತ್ತಿರ ಆ ಕವಿತೆಯ ಪ್ರತಿ ಇರಲಿಲ್ಲ.ಪುಣೆಗೆ ಸಂಪರ್ಕಿಸಿ
ಗೋಪಾಲ ದೇಸಾಯಿ(ಸುಂದ್ರಾಕಾಕುನ ಕಿರಿಮಗ) ಕವಿತೆಯನ್ನು ಮೇಲ್ ಮಾಡಿ ಹೀಗೆ ಈ ಕವಿತೆಗೂ ಒಂದು
ರೋಚಕ ಇತಿಹಾಸವಿದೆ....
ಕನ್ನಡಿ ಹೇಳಿದ ಕತೆ..
-------------------
ಬದುಕಿನ ಈ ಘಟ್ಟದಲಿ ಕನ್ನಡಿಯಲಿ
ಇಣುಕಿದಾಗ ಕಾಣುವುದು
ನೀರಿಗೆಗಟ್ಟಿದ ಮುಖ, ಬೆಳ್ಳಿಗೂದಲು..
ಎಲ್ಲ ಮೀರಿ ನಿಲ್ಲುವ ನಗು.
ಈ ನಗುವಿನ ಹಿಂದೆ ಒಂದು ಕತೆಯಿದೆ
ಚೆಹರೆಯ ಹಿಂದೆ ಇನ್ನೊಂದು ಮುಖವಿದೆ
ಬೆನ್ನ ಹಿಂದಿರುವ ಆ ಮುಖ ಅದೇಕೋ ನೆನಪಾಗುತಿದೆ.
ಸುಡುವ ಬಿಸಿಲಿಳಿದು ಬಂದಿತ್ತು ಅಂಗಳಕೆ..
ಆಸರೆಗೆಂದು ಒರಗಿದ ಮರ ಉರುಳಿತ್ತು..
ಬಾಳು ವೈಧವ್ಯದ ಪಟ್ಟ ಕಟ್ಟಿತ್ತು
ಹಂಗಿನರಮನೆಯ ಕೂಳು...
ಅನ್ನದ ಜೊತೆ ಕಣ್ಣೀರು ಕಲಸಿಕೊಂಡಿದ್ದೆ...
ಓರಗಿತ್ತಿಯರ ಬಳಿ ಚಾಕು ಭರ್ಚಿಗಳಿರಲಿಲ್ಲ..
ಮೊನಚು ಮಾತೇ ಸಾಕಾಗಿತ್ತಲ್ಲ.
ಮುಂದೇನು ಎನ್ನುವ ಪ್ರಶ್ನೆ ಕಾಡಿತ್ತು
ಉತ್ತರದ ಹಾದಿ ಗುಂಟ ಮುಳ್ಳು ಹಾಸಿತ್ತು.
ಮಕ್ಕಳಿಗೆ ಉಣಬಡಿಸಿದ್ದು ಪ್ರೀತಿ
ಅಂತಃಕರಣಗಳನ್ನು..ಅದರಿಂದ ಹೊಟ್ಟೆ
ತುಂಬದಿದ್ದಾಗ ಕೊಟ್ಟಿದ್ದು ನನ್ನ ಪಾಲಿನ ಅರ್ಧ ಭಕ್ಕರಿಯನ್ನು..
ಭವಿಷ್ಯದಲಿ ಭರವಸೆ ಇತ್ತು.
ಬೀಜ ಬಿತ್ತಿದೆ ,ಚಿಗುರು ಮೊಳೆತು
ಗಿಡದ ಹೂ ಕಾಯಾಗಿ ಮಾಗಿ
ಹಣ್ಣು ತಿಂದು ಸಂಭ್ರಮಿಸಿದೆ.
ಈದೀಗ ಕುಡಿಯೊಡೆಯುತಿರುವ
ಗರಿಕೆಯ ಚಿಗುರು ನೀನು..
ನಿನ್ನ ಹಾಲುಗಲ್ಲದಲಿ ಭವಿಷ್ಯದ ಹೊಸ ಕನಸಿದೆ
ನಗುವಲ್ಲಿ ಬೆಳಕಿದೆ....
ಅಂತೆಯೇ ನನ್ನ ಕರ್ಮಫಲದ ಸಾರ್ಥಕತೆ ಇದೆ.
==========================
ತುಂಬು ಜೀವನ ನಡೆಸಿದ ಸುಂದ್ರಾಕಾಕು ಈಗ ಇಲ್ಲ. ನನ್ನ ನೆನಪಿನ ಬುತ್ತಿಯಲ್ಲಿ ಅವಳದೂ
ಪಾಲಿದೆ.
ಹಿರಿಯ ಜೀವಗಳ ಸಾರ್ಥಕ ಜೀವನದ ಘಟನೆಗಳನ್ನು ನೆನಪಿಸಿಕೊಳ್ಳುವುದು ನಮ್ಮ ಜೀವನದಲ್ಲಿ ನಾವು ಮಾಡುವ ಸಾಧನೆಗಳಿಗೆ ಪ್ರೇರಣೆಯನ್ನು ಒದಗಿಸಬಲ್ಲುದು. ಹ೦ಚಿಕೊ೦ಡದ್ದಕ್ಕೆ ಧನ್ಯವಾದಗಳು ಉಮೇಶ್ ಸರ್.
ReplyDeleteಅನ೦ತ್
ದೇಸಾಯಿ ಸರ್..
ReplyDeleteಸು೦ದ್ರಾ ಕಾಕು ರವರ ಬದುಕಿನ ಬಗೆಯನ್ನ ಕವಿತೆಯಲ್ಲಿ ಕಟ್ಟಿಕೊಟ್ಟಿದ್ದೀರಿ.
ಆ ಹಿರಿ ಜೀವಕ್ಕೆ ನನ್ನ ನಮನಗಳು.
ದೇಸಾಯಿ ಸರ್;ಸುಂದರ ಕವನ.ಸುಂದ್ರಾ ಕಾಕುವಿನಂತಹ ಹಿರಿಯರ ತ್ಯಾಗ ಪೂರ್ಣ ಬದುಕಿಗೊಂದು ನಮನ.
ReplyDeleteಹೌದು, ಅ೦ಥ ಮಹಾತಾಯಿ ಬಹುತೇಕ ಪ್ರತಿಯೊಬ್ಬರ ಮನೆಯಲ್ಲೂ ಇರುತ್ತಾರೆ. ಆದರೆ ಗುರುತಿಸಿ ಆದರಿಸುವವರು ಕಡಿಮೆ. ನೀವು ತು೦ಬ ಚೆ೦ದನೆಯ ಕವನದ ಮೂಲಕ ಅವರು ಅನುಭವಿಸಿದ ನೋವು ಮತ್ತವರ ವ್ಯಕ್ತಿತ್ವ ಅನಾವರಣಗೊಳಿ ಸಿದ್ದೀರಿ.
ReplyDeleteಹಿರಿಯರನ್ನು ನೆನಸಿಕೊಂಡಾಗ, ನಮ್ಮ ಬಾಳಿಗೆ ಅವರು ನೀಡಿದ ಪ್ರೀತಿ ನೆನಪಾಗುತ್ತದೆ. ದೇಸಾಯರ, ನಿಮ್ಮ ನೆನಪಿನ ಬುತ್ತಿಯೊಳಗ ಸಿಹಿಯನ್ನು ತುಂಬಿಕೊಟ್ಟ ನಿಮ್ಮ ಕಾಕೂಗೆ ನನ್ನ ಪ್ರಣಾಮಗಳು. ನಿಮ್ಮ ಬುತ್ತಿಯನ್ನು ನಮಗೂ ಹಂಚಿದ ನಿಮಗೆ ಧನ್ಯವಾದಗಳು.
ReplyDeleteಹಿರಿಯರ ಜೀವನಾದರ್ಶವೇ ಹಾಗೆ. ಅನೇಕ ಹಿರಿಯ ಜೀವಗಳು ಎಲೆಮರೆಯ ಕಾಯಿಗಳು! ಇಲ್ಲಿ ತಮ್ಮ ಕಥನ-ಕವನ ಚೆನ್ನಾಗಿ ಮೂಡಿಬಂದಿದೆ,ಧನ್ಯವಾದಗಳು
ReplyDeleteನನ್ನ ಬ್ಲಾಗಿಗೆಬಂದು ನಿಮ್ಮ ಅನಿಸಿಕೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು..ಅನಂತ್ ರಾಜ್ ಅವರೆ..
ReplyDeleteವಿಜಯಶ್ರೀ ಅವರೆನಿಮ್ಮ ಅನಿಸಿಕೆಗೆ ಧನ್ಯವಾದಗಳು..
ReplyDeleteಡಾಕ್ಟರ್ ಅನಿಸಿಕೆಗೆ ಧನ್ಯೋಸ್ಮಿ
ReplyDeleteಪರಾಂಜಪೆ ಅವರೆ ಕವಿತೆ ೨೦೦೩ ರಲ್ಲಿ ಬರೆದಿದ್ದು ಮೆಚ್ಚಿಕೊಂಡಿದ್ದಕ್ಕೆ ಧನ್ಯ
ReplyDeleteಕಾಕಾ ಇದಕ್ಕ ಏನು ಅನ್ನಬೇಕು ಗೊತ್ತಿಲ್ಲ ನಮ್ಮ ದೇಸಾಯಿಮನೆತನದಾಗ ಹಿರೇತಲಿ ಭಾಳ ಕಮ್ಮಿ..ಹಿಂಗಾಗಿ ನೆನಪಿನ್ಯಾಗ ಅವರನ್ನು ನೆನೆಸೋಣ ಅಂತ ಈ ಕವಿತಾ ಬ್ಲಾಗಿಗೆ ಹಾಕಿದೆ
ReplyDeleteಭಟ್ ಸರ್ ಕವಿತೆಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು...
ReplyDeleteತುಂಬಾ ಆಪ್ತವಾಗಿ ಹಿರಿಚೇತನಗಳ ತ್ಯಾಗಭಾವವನ್ನ ಸುಂದ್ರಾಕಾಕು ಉದಾಹರಣೆ ಮೂಲಕ ವಿವರಿಸಿದ್ದಿರಾ..
ReplyDelete