Thursday, February 16, 2012

ಬೆಳದಿಂಗಳ ನೋಡ.....

ಮತ್ತೊಂದು ಕತಿ ಬರದೇನಿ....
ಈ ಕತಿ ಬರದು ಭಾಳ ದಿನಾ ಆಗಿತ್ತು..ಇದು ಇದರ ಮೊದಲ ಭಾಗ
ಎರಡನೇದಕ್ಕ ನಿರೀಕ್ಷಾ ಮಾಡ್ರಿ..

----------------------------------------------------------------------------------------------

ಕಮಲಾಬಾಯಿ ನಿರಾಳವಾದರು. ಎರಡು ದಿನಗಳಿಂದ ಬಹಳೇ
ತಳಮಳಿಸಿದ್ದರು. ತಾವು ನೋಡಿದ ವಿಷಯ ಮೊದಲು ಯಜಮಾನರಿಗೆ ತಿಳಿಸಿದ್ದರು..ಅವರ
ನೀರಸ ಪ್ರತಿಕ್ರಿಯೆ ಅವರನ್ನು ನಿರುತ್ಸಾಹ ಗೊಳಿಸಿರಲಿಲ್ಲ ತಪ್ಪು ನಡೆಯುತ್ತಿದೆ ಎಂದು ಗೊತ್ತಿದ್ದೂ
ನೋಡುತ್ತ ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ಅವರದಲ್ಲ. ಅದರಲ್ಲೂ ತಮ್ಮ ಪ್ರೀತಿಯ
ಮಂಗಲಾಳ ಮಗಳು ತಪ್ಪು ಹಾದಿ ತುಳಿಯುತ್ತಿದ್ದಾಳೆ ಇದರ ಬಗ್ಗೆ ಮಂಗಳಾಳಿಗೆ ಹೇಳಲೇಬೇಕು
ಎಂದು ನಿರ್ಧರಿಸಿದರು.
ಆಗಿದ್ದಿಷ್ಟೆ..ಎರಡು ದಿನದ ಹಿಂದೆ ಮಧ್ಯಾಹ್ನ ಕಮಲಾಬಾಯಿ
ಅಪಾರ್ಟಮೆಂಟಿನ ಮುಂದಿನ ಲಾನ್ ನಲ್ಲಿಕುಳಿತಾಗ ಮುಖ್ಯರಸ್ತೆಯ ತಿರುವಿಗೆ ಬೈಕ್ ನಿಂತ ಶಬ್ದ
ತಲೆ ಎತ್ತಿ ನೋಡಿದರೆ ಕಂಡಿದ್ದು-ಕುಳಿತವನನ್ನು ಅಪ್ಪಿ ಹಿಡಿದು ಕುಳಿತಿದ್ದ ಯುವತಿ ಮನಸ್ಸಿಲ್ಲದೇ
ಕೆಳಗಿಳಿದಂತಿತ್ತು.ಬೈಕ್ ಸವಾರ ನೀಡಿದ್ ಗಾಳಿಮುತ್ತಿಗೆ ಇವಳೂ ತನ್ನ ತುಟಿಗೆ ಕೈ ಸೋಕಿಸಿ
'ಉಫ್' ಎಂದು ಊದಿದಳು. ತಾನಿರುವುದು ರಸ್ತೆಯಲ್ಲಿ ಎಂಬ ಅರಿವೂ ಅವಳಿಗೆ ಇರಲಿಲ್ಲ.
ಕುಣಿಯುತ್ತಲೇ ಅಪಾರ್ಟಮೆಂಟು ಪ್ರವೇಶಿಸಿದವಳು ಮಂಗಲಾಳ ಮಗಳು ರಶ್ಮಿ ಎಂಬುದು ಅರಿವಾಗಿ
ಕಮಲಾಬಾಯಿ ಬೇಗುದಿಗೊಂಡರು.
ಕಮಲಾಬಾಯಿ ಅವರದು ಸಂತೃಪ್ತ ಕುಟುಂಬ, ಎರಡು ಬೆಡ್ ರೂಮಿನ ಫ್ಲಾಟ, ಮಗಳು ಬೆಂಗಳೂರಿನಲ್ಲಿ
ತನ್ನ ಸಂಸಾರದ ಜೊತೆ ಇದ್ದಾಳೆ,ಮಗ ಅಮೇರಿಕ ಸೇರಿಕೊಂಡಿದ್ದಾನೆ. ದಿನದ ಬಹುಪಾಲು ವೇಳೆ
ಕಮಲಾಬಾಯಿ ಜಪತಪ ಗಳಲ್ಲಿ ಕಳೆಯುತ್ತಾರೆ.ದೇವರ ಪೂಜೆ ಆಗದ ಹೊರತು ಒಂದು ಹನಿ ನೀರು
ಸಹ ಅವರು ಕುಡಿಯುತ್ತಿರಲಿಲ್ಲ. ರಾಮರಾಯರಿಗೆ, ಅಂದರೆ ಕಮಲಾಬಾಯಿಯವರ ಯಜಮಾನರಿಗೆ
ಈ ಅತಿ ಮಡಿವಂತಿಕೆ ಸೇರುತ್ತಿರಲಿಲ್ಲ. ಆಗಾಗ ಅವರಿಬ್ಬರ ನಡುವೆ ಈ ಬಗ್ಗೆ ವಾದ ಆಗುತ್ತಿತ್ತು.
ಇವರ ಫ್ಲಾಟ್ ಎದುರಿನದೇ ಮಂಗಲಾದ್ದು. ಗಂಡ ಶ್ರೀಪತಿ ಬ್ಯಾಂಕನಲ್ಲಿ ಆಫೀಸರ್ ಒಬ್ಬಳೇ ಮಗಳು
ರಶ್ಮಿಇಂಜಿನೀಯರಿಂಗ್ ಮೊದಲ ವರ್ಷದಲ್ಲಿದ್ದಾಳೆ ಮಂಗಲಾಳಿಗೆ ತಾಯಿ ಇಲ್ಲ ಕಮಲಾಬಾಯಿ ಅವರ
ಜೊತೆಗಿನ ಒಡನಾಟ ಆ ಕೊರತೆ ನೀಗಿಸಿದೆ. ಅವರಿಬ್ಬರು ಗುಡಿ, ಕಾಯಿಪಲ್ಯ ತರಲು ಜೊತೆಗೆ ಸುತ್ತಾಡುತ್ತಿದ್ದರು.
ಮಂಗಲಾ ತನಗೆ ತಿಳಿಯದ ಅನೇಕ ವಿಷಯಗಳ ಬಗ್ಗೆ ಕಮಲಾರಲ್ಲಿ ಹೇಳಿಕೊಳ್ಳುವುದಿತ್ತು. ತಮಗೆ
ತಿಳಿದ ಸಲಹೆ ಕೊಡುತ್ತಿದ್ದರು. ಶ್ರೀಪತಿಗೂ ಇವರ ಮೇಲೆ ಗೌರವ ಇತ್ತು.
----------------------------------------------------------------------------
ಮಂಗಲಾಳಿಗೆ ಅವಳ ಮಗಳು ಮಾಡಿದ ಕಿತಾಪತಿ ಬಗ್ಗೆ ಹೇಗೆ ಹೇಳುವುದು ಈ ಗೊಂದಲದಲ್ಲಿದ್ದರು.
ಬಾರಿ ಬಾರಿ ರಶ್ಮಿಯ ಗಾಳಿ ಚುಂಬನದ ದೃಶ್ಯ ತೇಲಿಬರುತ್ತಿತ್ತು.ಅವಳಿಗೆ ಅಚ್ಛಾ ಜಾಸ್ತಿ ಆಗೇದ ಸಲಿಗೆಯ
ದುರುಪಯೋಗ ತೆಗೆದುಕೊಳ್ಳುತ್ತಿದ್ದಾಳೆ... ಒಂದು ಮಧ್ಯಾಹ್ನ ಮಂಗಲಾಳಿಗೆ ಎಲ್ಲ ತಿಳಿಸಿದರು. ರಾದ್ಧಾಂತ
ಆಗುವ ಮೊದಲೇ ತಿದ್ದಿಕೊಳ್ಳಲು ತಿಳಿಸಿದರು. ರಶ್ಮಿಯ ನಡುವಳಿಕೆ ತಿದ್ದುವ ಕುರಿತು ತಮ್ಮ ಅರಿವಿಗೆ ಬಂದ
ಸೂಚನೆ ಕೊಟ್ಟರು.
ರಾಮರಾಯರಿಗೆ ಹೆಂಡತಿಯ ಕಾರಭಾರ ಸೇರಿರಲಿಲ್ಲ. ಹಾಗಂತ ನೇರವಾಗಿ ಹೇಳಿದರು.ಕಮಲಾರದ್ದು
ಒಂದೇ ವಾದ ತಮ್ಮ ಮಾತಿನಿಂದ ಮಂಗಲಾ ಶ್ರೀಪತಿ ಕಣ್ಣು ತೆರೆಯಲಿ, ರಶ್ಮಿ ಎಡುವುವ ಮೊದಲೇ
ಸುಧಾರಿಸಲಿ ಅಂತ. ದಿನವೂ ಭೇಟಿ ಕೊಡುವ ಮಂಗಲಾ ಎರಡು ದಿನ ವಾದರೂ ಬಂದಿರಲಿಲ್ಲ.ತಾಳಲಾರದೆ
ಅವರ ಮನೆ ಬಗಿಲು ಬಡಿದಾಗ ಎದಿರಾದದ್ದು ಮಂಗಲಾಳ ಸಪ್ಪೆ ಮುಖ.ಕೋಣೆ ಸೇರಿದ ರಶ್ಮಿ ಹಟ ಹಿಡಿದಿದ್ದಾಳೆ
ಎರಡು ದಿನದಿಂದ ಸರಿಯಾಗಿ ಮಾತೂ ಆಡುತ್ತಿಲ್ಲ ಊತಾನೂ ಮಾಡುತ್ತಿಲ್ಲ ..ಗಂಡ ಅವಳಿಗೆ ಹೊಡೆಯಲು
ಹೋಗಿದ್ದು ತಾನು ಬಿಡಿಸಿಕೊಂಡದ್ದು ಎಲ್ಲ ಮಂಗಲಾ ಹೇಳಿಕೊಂಡಳು.ರಜೆ ಹಾಕಿದ್ದ ಶ್ರೀಪತಿನೂ ಮಾತಿಗೆ ಸಿಕ್ಕ.
ಸಕಾಲದಲ್ಲಿ ಎಚ್ಚರಿಸಿದ್ದಕ್ಕೆ ಧನ್ಯವಾದ ಹೇಳಿದ. ಸಮಸ್ಯೆಗೆ ಪರಿಹಾರ ವಿಚಾರಾನೂ ಮುಂದಿಟ್ಟ.
----------------------------------------------------------------------------------
ಶ್ರೀಪತಿ ಗೊಂದಲದಲ್ಲಿದ್ದ.ಪಿಯುಸಿಯಲ್ಲಿ ಚೆನ್ನಾಗಿ ಮಾರ್ಕು ತೆಗೆದ ರಶ್ಮಿ ದೂರ ಕಳಿಸುವುದು ಬೇಡವಾಗಿ
ಹುಬ್ಬಳ್ಳಿಯಲ್ಲಿಯೇ ಪೇಮೆಂಟ್ ಸೀಟು ಕೊದಿಸಿದ್ದ.ಮಗಳು ಹೀಗೆ ಮಾಡಿದ್ದು ಅವನಿಗೂ ಅಸಮಾಧಾನವಾಗಿತ್ತು.
ತನ್ನ ಕೆಲಸದ ಒತ್ತಡದಲ್ಲಿ ಅವಳ ಬಗ್ಗೆ ಸರಿಯಾಗಿ ಗಮನ ಹರಿಸಲು ಆಗಿರಲಿಲ್ಲ ಇದು ಅವನಿಗೆ ವೇದ್ಯ ವಿಷಯ.
ಆದರೆ ಅದಕ್ಕೆ ಈ ಪರಿ ದಂಡ ಕೊಡಬೇಕಾಗುತ್ತದೆ ಇದು ನೋವಿನ ಸಂಗತಿ.ಬೆಳೆದು ನಿಂತ ಮಗಳ ಮೇಲೆ
ಕೂಗಾಡುವುದು,ಹೊಡೆಯುವುದು ಅವನಿಗೂ ಬೇಸರ ತಂದಿತ್ತು. ಹುದುಗನ ಬಗ್ಗೆ ವಿಚಾರಿಸಿದ್ದ ನಮ್ಮ ಜಾತಿಯವ
ಅಲ್ಲ, ಚಿಕ್ಕಮಗಳೂರು ಕಡೆಯವ.ತಮ್ಮಿಬ್ಬರ ನಡುವೆ ಇರೋದು ಸ್ನೇಹ ಮಾತ್ರ ರಶ್ಮಿ ಗೋಗರೆದಿದ್ದಳು.
ಕಮಲಾಬಾಯಿ ಕೊಟ್ಟ ಚಿತ್ರಣವೇ ಬೇರೆ ..ಪಾಪ ಕಳಕಳಿ ಇದೆಅವರಿಗೆ ಈಗಿನ ದಿನಗಳಲ್ಲಿ ಇಂಥಾವರು ಸಿಗೋದು
ಅಪರೂಪ. ಅದಕ್ಕೇ ಮನೆಗೊಂದು ಹಿರಿತಲೆ ಇರಬೇಕೆನ್ನುವುದು..ಅವರೇನೋ ಸರಿ ಆದರೆ ಅವರ ಯಜಮಾನರು
ಎಂಥಾ ವಿಚಿತ್ರ ಹಿರಿಯರು ಎಂದು ಗೌರವಿಸಿ ಸಲಹೆ ಕೇಳಿದರೆ ಕಡ್ಡಿತುಂಡು ಮಾಡುವಂತಿತ್ತು ಅವರ ವರ್ತನೆ..!
ಇದರಲ್ಲಿ ತಲೆ ಹಾಕುವುದಿಲ್ಲ ಎಂದು ನೇರವಾಗಿ ಹೇಳಿದರಲ್ಲ ಮಾರಾಯ. ಕಮಲಾಬಾಯಿ ರಶ್ಮಿಗೆ ಗಂಡು ನೋಡಲು
ಸಲಹೆ ಕೊಟ್ಟಿದ್ದಾರೆ ಇಷ್ಟು ಬೇಗ ಎಂಥಾ ಮದುವೆ ..ಗೊಂದಲದಲ್ಲಿದ್ದ. ಬಗೆಹರಿಯದ ಸಮಸ್ಯೆ ಇದು.
ಕಮಲಾಬಾಯಿ ಖುಶಿಯಲ್ಲಿದ್ದರು.ಮಂಗಲಾ-ಶ್ರೀಪತಿಗೆ ತನ್ನ ಉಪದೇಶ ಪಟಾಯಿಸಿದೆ ಅಂತ. ಮುಂದಿನ ಕೆಲ
ಅನಿರೀಕ್ಷಿತ ಘಟನೆಗಳು ಮಾತ್ರ ಅವರ ನಂಬಿಕೆಯನ್ನೇ ಅಲ್ಲಾಡಿಸಿದವು.....

Wednesday, February 1, 2012

ಚೋರ್ ಕೋ ಪಕಡೋ...

ಪುಣೆಯ ಪ್ರಸಿದ್ಧ ಹೊಟೆಲ್ ಗಿಜಿಗುಡುತ್ತಿತ್ತು.
ಸುರೇಶನೂ ಅಲ್ಲಿದ್ದ ರೇಶಿಮಿ ಪರಕಾರ ಪೋಲಕ ಹಾಕಿಕೊಂಡು ಅವನ ಮಗಳು ಓಡಾಡತಿದ್ಲು.
ಗೊಂಬಿಹಂಗ ಕಾಣಸತಿದ್ಲು. ಮಗಳ ಚೆಲುವನ್ನು ಕಣ್ಣಾಗ ತುಂಬಿಕೋತ ಅಲ್ಲೇ ಹೆಂಗಸೂರ ನಡುವೆ ಇದ್ದ
ಹೆಂಡತಿಕಡೆ ಆಗಾಗ ನೋಡಕೋತ ತನ್ನ ಮಾಮಾಗೋಳ ಜೋಡಿ ಬದಲಾದ ಹುಬ್ಬಳ್ಳಿ ಬಗ್ಗೆ ಹೇಳತಿದ್ದ ಸುರೇಶ.
ಸುರೇಶಗ ಸ್ವಂತದ್ದು ಅಂತ ಬಳಗ ಇಲ್ಲ ಸಾಲು ಸಾಲಾಗಿ ಅವನ ಅಪ್ಪ, ಅಕ್ಕ ಹಾಗೂ ಅವ್ವ ತೀರಿಕೊಂಡಿದ್ರು.
ಹಿಂಗಾಗಿ ಅವ ತನ್ನ ಕಾಕಾನ ಮಕ್ಕಳನ್ನ ಹಚ್ಚಿಕೊಂಡಿದ್ದ. ಅವರನ್ನ ತನ್ನ ಸ್ವಂತ ಅಕ್ಕ , ಅಣ್ಣ ಅಂತ ತಿಳಕೊಂಡಿದ್ದ.
ಇದೆಲ್ಲಾಕೂ ಮ್ಯಾಲೆ ಅಂದ್ರ ಇಂದ್ರಾಕಾಕುಇದ್ಲು. ಹೌದು ಸುರೇಶಗ ಅಕಿಮ್ಯಾಲ ಭಾಳ ಅಂತಃಕರಣ.
ತನ್ನ ಬಾಳು ತಿದ್ದಿದಾಕಿ ಅಕಿ, ಅಕಿಯಿಂದ ನಾ ಇವತ್ತು ಹಿಂಗ ಆಗೇನಿ ಇದು ಅವ ತನ್ನ ಹೆಂಡತಿಗೆ ಆಗಾಗ ಹೇಳತಿದ್ದ ಮಾತು.
ಆ ಇಂದ್ರಾಕಾಕು ಇವತ್ತಿನ ಸಮಾರಂಭದ ಮುಖ್ಯ ಆಕರ್ಷಣೆ ಆಗಿದ್ಲು. ಹೌದು , ಮರಿಮೊಮ್ಮಗ ಅಕಿಗೆ ಹುಟ್ಟಿದ್ದ ಹೂ ಹಾರಿಸಿಕೊಳ್ಳುವ
ಭಾಗ್ಯ ಅಕಿದಾಗಿತ್ತು. ಇಂಥಾದ್ದು ನೋಡಬೇಕಂತ ಸುರೇಶ ಕುಟುಂಬ ಸಮೇತ ಪುಣೆಬಸ್ಸು ಹತ್ತಿದ್ದ ಇಂದ್ರಾಕಾಕುಗ ಕೊಡಲಿಕ್ಕೆ ಅಂತ
ಸಾಲಾ ಮಾಡಿ ಬೆಳ್ಳಿ ಗಣಪತಿ ತಂದಿದ್ದ. ಇಂದ್ರಾಕಾಕುಗ ನಾಲ್ಕು ಹೆಣ್ಣುಮಕ್ಕಳು,ಎರಡು ಗಂಡು ಮಕ್ಕಳು. ಎಲ್ಲಾರೂ ಜೀವನ ಯಾನದಾಗ
ಭಾಳ ಯಶಸ್ಸು ಕಂಡಾರ. ದೇಸಾಯರ ಮನೆತನದಾಗ ಅಪರೂಪ ಅನ್ನಬಹುದು ಅಂಥಾ ಪ್ರಸಿದ್ಧಿ ಇಂದ್ರಾಕಾಕು ಹಾಗೂ ಅಕಿ ಮಕ್ಕಳು
ಗಳಿಸ್ಯಾರ. ಇವತ್ತು ಇಂದ್ರಾಕಾಕುನ ಮರಿಮೊಮ್ಮಗನ ಬಾರಸಾ ಹಂಗ ಅಕಿಗೆ ಹೂ ಹಾರಿಸೋ ಕಾರ್ಯಕ್ರಮ. ಸಂಭ್ರಮ ಎಲ್ಲೆಡೆ ತುಂಬಿತ್ತು.
ಇಂದ್ರಾಕಾಕುನ ತೊಡಿಮ್ಯಾಲ ಸುರೇಶ ಸಹ ಆಡಿಬೆಳೆದಿದ್ದ. ಇಂದು ಅಕಿ ತೊಡಿಮ್ಯಾಲ ಮರಿಮೊಮ್ಮಗ ಮಲಗಿದ್ದ.ಮೊಮ್ಮಗ ಹಾಗೂ ಅವನ ಅಪ್ಪ
ಇಬ್ಬರೂ ಬಂಗಾರದ ಹೂ ಜೋಡಿ ಮಲ್ಲಿಗಿ, ಶಾವಂತಿಗಿ,ಗುಲಾಬಿ ಹಿಂಗ ಅನೇಕ ಹೂ ಕಾಕುನ ತಲಿಮ್ಯಾಲ ಸುರದ್ರು. ಎಲ್ಲಾರೂ ಚಪ್ಪಾಳಿ ಹೊಡದ್ರು
ಇಂದ್ರಾಕಾಕುನ ಕಣ್ಣಾಗೂ ನೀರು ಜಿನುಗಿದ್ವು, ತನ್ನ ಕೆಮೆರಾದಾಗ ಈ ಅಪ್ರತಿಮ ಕ್ಷಣ ಸೆರಿಹಿಡದ ಸುರೇಶ ಹೆಮ್ಮೆಯಿಂದ ಬೀಗುತ್ತಿದ್ದ.
ಊಟದ್ದ ತಯಾರಿ ನಡೀತು. ಟೇಬಲ್ ಕುರ್ಚಿ ಮ್ಯಾಲಿನ ಊಟಾ ಪೂನಾಸಿಸ್ಟೆಮ್ ಅಂತ ಸುರೇಶನ ಹೆಂಡತಿ ಚಾಷ್ಟಿ ಮಾಡಿದ್ಲು.
ಇದ್ದಕ್ಕಿದ್ದಂಗ ಗದ್ಲಾ ಸುರು ಆತು. ಅಲ್ಲಿ ಇಲ್ಲಿ ಹರಿದಾಡಿದ ಸುದ್ದಿ ಸುರೇಶನ ಕಿವಿಮ್ಯಾಲನೂ ಬಿತ್ತು. ಇಂದ್ರಾಕಾಕುನ ಎರಡನೇಮಗಳು ಸುರೇಖಳ
ಪರ್ಸು ಕಳದದ ಅದರಾಗ ಬಂಗಾರದ ತೋಡೆ ಇದ್ವು ಅಂತ. ಪ್ರಶಾಂತವಾದ ನೀರಿನ್ಯಾಗ ಯಾರೋ ಕಲ್ಲು ಒಗದಂಗ ಆತು. ಹೊಟೆಲ್ ಸೆಕ್ಯುರಿಟಿ
ಬಂದ್ರು. ಪೋಲಿಸ ರನ್ನು ಕರೆಸುವ ಮಾತಾದ್ವು. ಇಂದ್ರಾಕಾಕುನ ಎರಡನೇ ಮಗ ಸುಭಾಶ ಎಲ್ಲಾರಿಕಿಂತ ದೊಡ್ಡ ಬಾಯಿ ಮಾಡತಿದ್ದ...
" ಇದ ಹಾಲಿನ್ಯಾಗ ಕಳ್ಳ ಇದ್ದಾನ ಎಲ್ಲೂ ಓಡಿ ಹೋಗಲಾರ ಅವ....". ಇಂದ್ರಾಕಾಕುನು ವಿಹ್ವಲ ಆಗಿದ್ಲು. ಅನಿರೀಕ್ಷಿತ ಘಟನಾ ಎಲ್ಲಾರಿಗೂ
ತ್ರಾಸು ಮಾಡಿಸಿತ್ತು. ಸುರೇಶ ಸಹ ನೊಂದಿದ್ದ.
ಸುಭಾಶ ಸುರೇಶನ ಕಡೆಬಂದ. ಅವನ ಕೈ ಹಿಡದು ಮೂಲಿಯೊಳಗ ಕರಕೊಂಡು ಹೋದ..
"ಸುರ್ಯಾ ಖರೇ ಹೇಳು ನಿಂದ ಹೌದಲ್ಲೋ ಈ ಕೆಲಸ ಇದಕ್ಕ ಬಂದೀಯೇನು ಮಗನ...." ದಾಳಿ ಯಿಂದ ಅಪ್ರತಿಭನಾದ ಸುರೇಶ ಮಾತೇ ಆಡದಾದ.
"ಇದು ನಿಂದ ಕರಾಮತ್ತು ಅದ, ನಾ ಸುಮ್ಮನಿರೂದಿಲ್ಲ ಪೋಲಿಸರಿಗೆ ಕರಸತೇನಿ..ಸುಮ್ಮನ ರಗಳಿ ಯಾಕ ಕೊಟ್ಟುಬಿಡು...."
"ಅಂದ್ರ ನಾ ಕಳೂ ಮಾಡೇನಿ ಅಂತ ನೀ ಅಂತಿ ನಾ ಯಾಕ ಹಂಗ ಮಾಡಲಿ .." ಸುರೇಶನ ದನಿ ಕಂಪಿಸುತ್ತಿತ್ತು.
"ನೀ ಏನು ಅನ್ನೂದು ನಮಗ ಗೊತ್ತ ಅದಮಗನ.. ನಮ್ಮವ್ವ ಹೇಳ್ಯಾಳು ಕೊಟ್ಟು ಹೊರಗ ನಡಿ ಪೋಲಿಸ್ರು ಬಂದ್ರ ಅನಾಹುತ ಆಗತದ.." ಸುಭಾಶ ಓತಪ್ರೋತ
ವಾಗಿ ಹೇಳತಿದ್ದ. ಅಸ್ತಿತ್ವ ಕುಸಿಯುತ್ತಿರುವಂಗ ಸುರೇಶ ಗಾಬರಿಯಾದ. ಇಂದ್ರಾಕಾಕುನ ಕಾಲು ಹಿಡಕೊಂಡ ಆಣಿ ಮಾಡದ ಅತ್ತ ಚೀರಾಡಿದ..
ಅವನ ಮಗಳು ಅಪ್ಪನ ಈ ವೇಷ ನೋಡಿ ಗಾಬರಿ ಆಗಿದ್ಲು. ಹೆಂಡತಿಗೆ ಮಾತು ಹೊರಡದಾಗಿದ್ವು. ಇಡೀ ಹಾಲಿನ ಜನಾ ತನ್ನ ವಿರುದ್ಧ ವೃತ್ತಾಕಾರವಾಗಿ
ತಿರುಗುವಹಾಗೆ ಸುರೇಶನಿಗೆ ಅವನ ಆರ್ತನಾದಕ್ಕೆ ಕೇಳುಗರೇ ಇಲ್ಲ,
ಸುಭಾಶ ಸುರೇಶನ ಮೇಲೆ ಮಾಡಿದ ಅಪವಾದಕ್ಕೆ ಒಂದು ಇತಿಹಾಸ ಅದ. ಅವು ಸುರೇಶನ ಕಾಲೇಜಿನ ದಿನಗಳು. ಸಿನೇಮಾ ನೋಡುವ ಚಟ ಅವನಿಗೆ
ಹುಬ್ಬಳ್ಳಿ ಟಾಕೀಸು ಯಾವವೂ ಬಿಟ್ಟಿರಲಿಲ್ಲ ಅವ. ಮನ್ಯಾಗ ಇವನ ಕಾಲೇಜು ಫೀಸು , ಪಾಸು ಅಂತ ಕಟಾನಕಟಿ ರೊಕ್ಕಾ ಕೊಡತಿದ್ರು. ಚಟಾ ತೀರಿಸಿಕೊಳ್ಳಲಿಕ್ಕೆ
ಅಲ್ಲಿಂದ ಇಲ್ಲಿಂದ ಹತ್ತಿಪ್ಪತ್ತು ರೂಪಾಯಿ ಕದೀಲಿಕ್ಕೆ ಶುರುಇಟ್ಟ. ಅಕ್ಕನ ಬಾಣಂತನ ಅಂತ ಇಂದ್ರಾಕಾಕು ಬಂದಿದ್ಲು. ಅಕಿ ಬ್ಯಾಗಿಗೂ ಅವ ಕೈ ಹಾಕಿದ. ಒಂದ್ಸಲ
ಸಿಕ್ಕಿಹಾಕಿಕೊಂಡ. ಇಂದ್ರಾಕಾಕು ಇವನ್ನ ಹತ್ರ ಕೂಡಿಸಿಕೊಂಡು ಬುದ್ಧಿ ಹೇಳಿದ್ಲು..ಇದು ತಪ್ಪು ಅಂತ ತೋರಸಿದ್ಲು. ಯಾಕೋ ಅವಳ ಮಾತು ನಾಟಿತ್ತು. ಸುರೇಶ
ಬದಲಾದ. ಕೆಲಸಕ್ಕ ಸೇರಿಕೊಂಡ. ಯಾರಿಗೂ ಹೇಳೂದಿಲ್ಲ ಅಂತ ಇಂದ್ರಾಕಾಕು ಅಂದಿದ್ಲು ಬಾಯಿತಪ್ಪಿ ಅಕಿ ಅಂದ ಮಾತು ಇಷ್ಟು ವರ್ಷದ ಮೇಲೆ ಇಂಥಾ
ಪರಿಸ್ಥಿತಿ ತಂದಿತ್ತು.
ಸುರೇಶ್ ಅತ್ತು ಅತ್ತು ಹೈರಾಣಾಗಿದ್ದ. ಯಾರೂ ಅವನ ಪರವಾಗಿ ಮಾತನಾಡಲಿಲ್ಲ. ಇಷ್ಟೋತ್ತನಾ ತಮ್ಮ ಜೊತಿ ಹರಟಿ ಹೊಡದ ಮನಿಶಾ ಹಿಂಗ ಕಳ್ಳತನ ಮಾಡ್ಯಾನ
ಇದು ಅಲ್ಲಿಯ ಚರ್ಚಾದ ವಿಷಯಆಗಿತ್ತು. ಸುರೇಶನ ಮಗಳು ಅವನ ತೊಡಿ ಏರಿ ಸುರಿಯುತ್ತಿದ್ದ ಕಣ್ಣೀರು ಒರಸತಿದ್ಲು. ಪೋಲಿಸರು ಬರುವ ಹಾದಿ ನೋಡತಿದ್ರು
ಅವರೂ ಬಂದರು ಸುರೇಶನ ಬೇಡಿಕೆಮಾತು ಕಿವುಡ ಕಿವಿಗೆ ಬೀಳತಿದ್ವು. ಅವರು ಹೇಳಿಕೆ ತಗೊಂಡು ಅವನ್ನ ಕರಕೊಂಡು ಹೊರಟರು.ಇಂದ್ರಾಕಾಕು ವಿಷಣ್ಣಳಾಗಿ
ಕೂತಿದ್ಲು. ಸುರೇಶ ಹಿಂಗ್ಯಾಕ ಮಾಡಿದ ಇದು ಅಕಿ ತಲಿ ಕೊರಿತಿತ್ತು. ವಿಶ್ವಾಸ ದ್ರೋಹ ಯಾಕ ಮಾಡಿದ ಅಂತ ಸುತ್ತಲಿದ್ದಾವರ ಜೊತಿ ಹೇಳಿಕೊಂಡು ಅಳತಿದ್ಲು.
ಸುರೇಶ್ ಪೋಲಿಸ್ ಜೀಪು ಏರಬೇಕು ಅಷ್ಟರಾಗ ಸುರೇಖಾನ ಮೊಮ್ಮಗಳು ಅಜ್ಜಿ ಬೀಳಿಸಿದ್ದ ಪರ್ಸು ಎತ್ತಿ ಕೊಟ್ಲು ಅದರಾಗ ತೋಡೆನೂ ಇದ್ವು... ಯಾರೋ ಪೋಲಿಸರಿಗೆ
ಹೇಳಿದ್ರು. ಸುರೇಶನ್ನ ಜೀಪ್ನಿಂದ ಇಳಿಸಿದ್ರು. ಧೂಳ ಎಬ್ಬಿಸಿಕೋತ ಜೀಪು ಹೋತು. ಇಂದ್ರಾಕಾಕು ದಡಬಡಾಯಿಸಿ ಬಂದ್ಲು ..ಸುರೇಶ ಮಗಳನ್ನು ಎತ್ತಿಕೊಂಡು ಹೊರಟಿದ್ದ
ಹೆಂಡತಿನೂ ಜೋಡಿ ಇದ್ಲು..ಸುರೇಶನ ಮಗಳು ಅಪ್ಪನ ಕಣ್ಣೀರು ಇನ್ನೂ ಒರಸತಿದ್ಲು. ಇಂದ್ರಾಕಾಕು ಕರೆದಿದ್ದು ಸುರೇಶಗ ಕೇಳಸಲೇ ಇಲ್ಲ. ...