Tuesday, June 28, 2011

ಜೋ ಜೋ ಲಾಲಿ..










ಈ ಜೀವಜಾತ್ರೆಯಲ್ಲಿ ನಾವು ನಿಜವಾಗಲೂ ಕಳೆದುಕೊಂಡಿದ್ದಂದರೆ ನಮ್ಮ ಬಾಲ್ಯ.
ಅದೆಂದೂ ಮರಳಿ ಬರಲಾರದು. ಬಾಲ್ಯದಲ್ಲಿ ಅನೇಕ ಸಂಗತಿಗಳು, ಗೆಳೆಯರ ಸಂಗ, ಆಟ ಅಮ್ಮನ
ಕೈತುತ್ತು ಅಕ್ಕರೆ. ಇವುಗಳಿಗೆ ಕಲಶವಿಟ್ಟಂತೆ ಅಮ್ಮ ಹಾಡುತ್ತಿದ್ದ ಲಾಲಿಹಾಡುಗಳು...!!
ನಿಜ ನಮ್ಮ ಮಲಗಿಸಲು ಅಮ್ಮ ಗುನುಗುತ್ತಿದ್ದ ಹಾಡಿನಲ್ಲಿ ಅದೆಂಥ ಇಂಪಿತ್ತು..ಹಾಗೆಯೇ ಒಂಥರಾ
ಸಮ್ಮೋಹನ ಆವರಿಸಿ ನಿದ್ದೆ ಕಣ್ಣು ತುಂಬಿಕೊಳ್ಳುತ್ತಿತ್ತು. ಅವಳ ಮಮತೆಯ ಮುಂದೆ ನಮ್ಮ ನೂರು ತಪ್ಪು
ಮಾಫ..! ಹೆತ್ತಮ್ಮಳ ಅಕ್ಕರೆ ಬಿಂಬಿಸಲು ಪದಗಳಿವೆಯೇ ಲಾಲಿ ಹಾಡು ನಮ್ಮ ಸಂಸ್ಕೃತಿಯ ಬಹು ಮುಖ್ಯ
ಅಂಗ. ಹೊರದೇಶದಲ್ಲಿ ಅದರಲ್ಲೂ ಪಾಶ್ಚಾತ್ಯರಲ್ಲಿ ಈ ಮಾರ್ದವತೆ ಇದೆಯೇ ನಾ ಅರಿಯೆ.
ನಮ್ಮ ಸಿನೆಮಾಗಳಲ್ಲಿ ಮಗು ಮಲಗಿಸುವಾಗ ನಾಯಕಿ ಅಥವಾ ಮತ್ತಾರೋ ಹಾಡಿಗೆ ದನಿಯಾಗಿದ್ದಾರೆ
ಕೆಲವೊಮ್ಮೆ ಪರಿಸ್ಥಿತಿಗೆ ಅನುಗುಣವಾಗಿ ನಾಯಕ ಸಹ ಲಾಲಿ ಹಾಡಿದ್ದಾನೆ..
ಈ ಹಾಡು ಸುಂದರ ಮಾತ್ರವಲ್ಲ ರಾತ್ರಿಯ ನೀರವತೆಯಲ್ಲಿ ಈ ಹಾಡು ಕೇಳಿದೆವಾದರೆ ಮುನಿಸಿಕೊಂಡ
ನಿದ್ದೆ ನಮ್ಮ ಅಪ್ಪುವುದರಲ್ಲಿ ಸಂಶಯ ವಿಲ್ಲ. ಅನೇಕ ಗೀತಕಾರರು ಈ ಹಾಡುಗಳ ಸಾಹಿತ್ಯದಲ್ಲಿ
ಅಂತಃಕರಣ ಉಣ್ಣಿಸಿದ್ದಾರೆ ಹಾಡಿದ ಗಾಯಕ/ಗಾಯಕಿಯರು ಅಮೃತ ಹರಿಸಿದ್ದಾರೆ ಅಂತೆಯೇ ಈ ಹಾಡುಗಳು
ಎಂದೆಂದೂ ಮರೆಯಲಾಗದುವು ಅವು ಅಮರ ಯಾಕೆಂದರೆ ತಾಯಿ ಎಂದಿಗೂ ಅಮರ ಅಲ್ಲವೇ..
ಈಗಲೂ ವಿವಿಧಭಾರತಿಯಲ್ಲಿ ಈ ಹಾಡು ತೇಲಿಬರುತ್ತದೆ. ಸೈಗಲ್ ನ ದನಿ ಮಾರ್ದವತೆ ಸೆಳೆಯುತ್ತದೆ..
"ಸೋ ಜಾ ರಾಜಕುಮಾರಿ ಸೋಜಾ..." ಅವನ ವಿಶಿಷ್ಟ ಕಂಠದಲ್ಲಿ ಈ ಹಾಡು ಇಂದಿಗೂ ಅಮರ.
ತಾಯಿ ಹೆಂಗಸು..ಹಾಗೆಯೇ ಲತಾಳ ದನಿ ನೂರೆಂಟು ತಾಯಿಯರಿಗೆ ದನಿಯಾಗಿದೆ. ಲಾಲಿಹಾಡು ಅವಳು
ಅನೇಕ ಹಾಡಿರಬಹುದು...ಎಷ್ಟೋಜನ ಮಕ್ಕಳು ರೇಡಿಯೋದಲ್ಲೋ,ರಿಕಾರ್ಡಿನಲ್ಲೋ ಅವಳ ಇಂಪಾದ ದನಿ
ಕೇಳಿ ನಿದ್ದೆಗೆ ಜಾರಿರಬಹುದು..ಅವಳ ಅಸಂಖ್ಯಾತ ಮುತ್ತುಗಳಲ್ಲಿ ಎರಡು ಲಾಲಿ ಹಾಡು ಆರಿಸಿರುವೆ--
"ಧೀರೆ ಸೆ ಆ ಜಾ ರೆ ಅಖಿಯನ್ ಮೆ ನಿಂದಿಯಾ ಆ ಜಾ " (ಚಿತ್ರ --ಅಲಬೇಲಾ--ಸಂಗೀತ ಚಿತಲಕರ್ ದು)
"ಆಜಾರಿ ಆಜಾ ನಿಂದಿಯಾ ತೂ ಆ.."(ಚಿತ್ರ-- ದೋ ಬಿಘಾ ಜಮೀನ್ -- ಸಂಗೀತ ಸಲೀಲ್ ದಾ).
ಗುಡಿಯಲಿರುವ ದೇವರಿಗೂ ಈ ಲಾಲಿಹಾಡು ಪ್ರಿಯ. ಸಾಮಾನ್ಯವಾಗಿ ದೇವರಿಗೆ ಕಾಕಡಾರತಿ, ಮಂಗಳಾರತಿ
ಮತ್ತು ಶೇಜಾರತಿ ಅಥವಾ ಶೈಯ್ಯಾರತಿ ಹೀಗೆ ಮೂರುವಿಧ ಆರತಿ ವಿಧಾನಗಳು. ದೇವರಿಗೂ ನಿದ್ದೆ ಬೇಕು
ಅನ್ನುವುದು ಒಂದು ಸುಂದರ ಭಾವ. ಮರಾಠಿಯಲ್ಲಿ ಅದರಲ್ಲೂ ಪ್ರಸಿದ್ಧ ದೇವರಿಗೆ ಈ ರೀತಿ ಶೈಯ್ಯಾರತಿ ಹಾಡಿ
ಮಲಗಿಸುವ ಪರಂಪರೆ ಇದೆ..ಅರ್ಚಕ ಶೇಜಾರತಿ ಹಾಡಿ ಗರ್ಭಗುಡಿ ಬಾಗಿಲು ಹಾಕಿದರೆಂದರೆ ದೇವರಿಗೆ ಅಂದು
ಸಲ್ಲುವ ಎಲ್ಲ ಸೇವೆ ಸಮಾಪ್ತ ಅಂತ ಲೆಕ್ಕ. ಶಿವಾಜಿ ಗುರು ರಾಮದಾಸ್ ಬರೆದ ಹಾಡಿನಿಂದ ಈಗಿನ ಸಿನೇಮಾ
ಹಾಡಿನವರೆಗೂ ಮರಾಠಿಯಲ್ಲಿ ಲಾಲಿಹಾಡು ಇವೆ..ದೇವರಿಗೆ ಹಾಡಿದ ಕೆಲವು ಶೈಯ್ಯಾರತಿಗಳು..
"ಬಾಳಾ ಜೋ ಜೋರೆ ರಘುರಾಯಾ ದಶರಥ ನಂದನ..."
"ನವಖಳಾಂಚ ಪಲ್ಲಂಗ ಶಾಂತೇ ಶೋಭತೋ ಭರಾ ಮಾತೆ ಶಯನ ಕರಾ..."(ದುರ್ಗಾದೇವಿ ಶೈಯ್ಯಾರತಿ)
ಮರಾಠಿಗರ ಪ್ರಭಾವದಿಂದ ನಮ್ಮಲ್ಲೂ ಅನೇಕ ಶೇಜಾರತಿಗಳಿವೆ ಮುಖ್ಯವಾಗಿ ದತ್ತಾತ್ರೇಯನನ್ನು ಕುರಿತು..
"ನರಸಿಂಹ ಸರಸ್ವತಿ ಧರಿಸಿ ಮನದಲಿಪ್ರೀತಿ ಭರದಿ ಬೆಳಗುವೆ ಶೈಯ್ಯಾರತಿ ಸ್ವೀಕರಿಸು ಯತಿಪತಿ..".
ಸಿನೇಮಾ ಹಾಡುಗಳ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಕನ್ನಡ ಹಿಂದಿ ಹಾಗೂ ಮರಾಠಿ ಹೀಗೆ ತಾಯಿಯ
ಲಾಲಿಗೆ ಭಾಷೆಯ ಬಂಧವಿಲ್ಲ.
೧)"ಲಲ್ಲಾ ಲಲ್ಲಾ ಲೋರಿ ದೂಧ್ ಕಿ ಕಟೋರಿ ದೂಧ ಮೆ ಬತಾಶಾ..." (ಮುಕೇಶ್)
೨) "ರಾಮ್ ಕರೆ ಐಸಾ ಹೋ ಜಾಯೆ ಮೇರಿ ನಿಂದಿಯಾ ತುಝೆ ಮಿಲ್ ಜಾಯೇ " (ಮುಕೇಶ್)
೩) "ಮೈ ಗಾವೂ ತುಮ್ ಸೋ ಜಾವೋ " (ರಫಿ)
೪) "ಆ ಜಾರಿ ಆ ನಿಂದಿಯಾ ತೂ ಆ " (ಕಿಶೋರ್)
೫) " ನಿಂಬೋಣೀಚಾ ಜಾಡಾ ಮಾಗೆ ಚಂದ್ರ ಝೋಪಲಾಗ ಬಾಯಿ.." (ಸುಮನ್ ಕಲ್ಯಾಣಪುರ್)
೬) " ಜೋ ಜೋ ಲಾಲಿ ನಾ ಹಾಡುವೆ ಚಿನ್ನ ನಿನ್ನ ಮುದ್ದಾಡುವೆ.."( ಜೇಸುದಾಸ್)
೭) "ಮಲಗು ಮಲಗು ಚಾರುಲತೆ ನಿನಗೂ ನೆರಳಿದೆ.."(ಎಸ್ ಪಿ ಬಿ)
೮) "ತುಸು ಮೆಲ್ಲ ಬೀಸು ಗಾಳಿಯೇ ಈ ಲಾಲಿ ಸುವ್ವಾಲಿ ಕಂದ ಕೇಳಲಿ"(ಚಿತ್ರ)
೯) "ಪವಡಿಸು ಪರಮಾತ್ಮ ಶ್ರೀ ವೆಂಕಟೇಶ..."(ಎಸ್ ಪಿ ಬಿ)
೧೦) "ಸುರಮಯಿ ಅಖಿಯೊಂಮೆ ನನ್ಹಾ ಮುನಾಃ ಸಪನಾ ದೇ ಜಾರೆ..(ಜೇಸುದಾಸ್ )
೧೧) 'ವಟಪತ್ರ ಶಾಲಕಿ ಭೂಮಾತ ಲಾಲಿ....(ಪಿ. ಸುಶೀಲ)
ಇದೆಲ್ಲವುಗಳಿಗೆ ಕಲಶ ಇಟ್ಟಹಾಗೆ ನಮ್ಮ ಕೆ ಎಸ್ ನ್ ಬರೆದ "ಅತ್ತಿತ್ತ ನೋಡದಿರು..
ಅತ್ತು ಹೊರಳಾಡದಿರು ನಿದ್ದೆ ಬರುವಳು ಹೊದ್ದು ಮಲಗು ಮಗುವೆ..."
ಈ ಹಾಡು ಮೂಲಗಾಯಕಿ ಸುಲೋಚನ ದನಿಯಲ್ಲಿತ್ತು. ಅದರ ಲಿಂಕ್ ಗಾಗಿ ಬಹಳ
ಕಷ್ಟ ಪಟ್ಟೆ ಸಿಗಲಿಲ್ಲ..
ಇನ್ನು ಅನೇಕ ಹಾಡುಗಳಿರಬಹುದು ನೆನಪಾದದ್ದು ಬರೆದಿರುವೆ. ಲಾಲಿ ಹಾಡು, ಅಮ್ಮ , ಹಿತವಾದ
ನಿದ್ದೆ ಎಲ್ಲ ಕಳಕೊಂಡು ಬಾಳುವ ಈ ಭಂಡ ಬಾಳು ಯಾಕಾಗಿ..??

Monday, June 13, 2011

ಕೇಳೆನ್ನ ಅರಸ...



ಈ ಕವಿತೆ ನನ್ನ ಫೇವರೇಟ್ ಗಳಲ್ಲೊಂದು.ಈ ಹಾಡು ಕೇಳಿದಾಗಲೆಲ್ಲ ಒಂದು ಗುಂಗಲ್ಲಿ
ತೇಲುವಂತಾಗುತ್ತದೆ. ಹಾಡು ಒಂದು ಪರಿಪೂರ್ಣತೆ ಸಾಧಿಸಲು  ಅದರ ಸಾಹಿತ್ಯ,
ಸಂಗೀತ ಸಂಯೋಜನೆ  ಜೊತೆಗೆ  ಹಾಡುವ ಗಾಯಕ(ಕಿ)ಯ ಆತ್ಮ ಅದರಲ್ಲಿ
ಬೆರೆಯಲೇಬೇಕು. ಪ್ರಸ್ತುತ ಹಾಡು ಅಂತುಹುದೇ ... ಇಲ್ಲಿ ಎಲ್ಲವೂ ಮಿಳಿತವಾಗಿದೆ
ಕೇಳುಗ ತಲೆದೂಗಲೇ ಬೇಕು..

ಇದು ಮರಾಠಿ ಭಾವಗೀತೆ. ಸುರೇಶ್ ಭಟ್ ಬರೆದಿದ್ದು. ಲತಾ ಳ ದನಿ ಹಾಗೆಯೇ
ಪಂಡಿತ್ ಹೃದಯನಾಥ ಮಂಗೇಶ್ಕರ್ ಸಂಗೀತ...

ನಾನು ಭಾವಾನುವಾದಕ್ಕೆ ಪ್ರಯತ್ನಿಸಿರುವೆ ..ಪರಿಣಾಮ ನೀವೇ ಹೇಳಬೇಕು


माळ्वून टाक दीप चेत्वून अंग अंग
राजसा किती दिसात लाभला निवांत संग

त्या तिथे फुलाफुलात पॆंग्ते अजून रात
हाय तु करू नकॊस एवढ्यात स्वप्न भंग

गार गार हवेत घेवुनि मला कवेत ..
मोकळे करून टाक एकवार अंतरंग

दूरदूर तारकात बैसलि पहाट ह्नात
सावकाश घे टिपून एक एक रूपरंग

का तुला कसे कळेल ? कॊण एकटे जळेल ?
सांग का कधि खरेच एक्टा जळे पतंग ?

काय हा तुजा श्वास  दरवळे इथे सुवास
बॊल रे ह्ळूत उठॆल चांदण्य़ावरी तरंग



            ಕೇಳೆನ್ನ  ಅರಸ...
        ------------------
 
        ನಂದಿಸಿಬಿಡು  ಆ  ದೀಪ....
        ಉರಿಹೊತ್ತಿಸು  ಅಂಗ ಅಂಗದಲಿ
        ಅರಸ, ಅದೆಷ್ಟು ಯುಗಗಳ ನಂತರ
        ಬಂದಿದೆ  ಏಕಾಂತ ಸಂಗ....

        ಮೊಗ್ಗುಗಳಲಿ   ಅದೋ
        ತೆವಳುತಿದೆ ಇನ್ನೂ ನಿಶಿಗಂಧ..
        ಸಡಿಲಿಸಿ ನಿನ್ನಪ್ಪುಗೆಯ ಪಟ್ಟ..
        ಮಾಡಬೇಡ ನೀ  ಸ್ವಪ್ನಭಂಗ.......!

        ಸುಂಯ ಗುಡುವ ತಂಗಾಳಿಯಲಿ
        ಹಿತವಾಗಿ ಅಪ್ಪುತ  ನೀ...
        ಆವಾಹಿಸಿಕೋ ನನ್ನ ನಿನ್ನಲ್ಲಿ ಪೂರ್ಣ
        ಬೆತ್ತಲಾಗಿಸು  ನನ್ನ  ಅಂತರಂಗ......!

        ದೂರದೂರ ತಾರೆಗಳ ಮರೆಯಲ್ಲಿ
        ಉಷೆ ಇನ್ನೂ ವಿರಮಿಹಿಸಿಹಳು....
        ನಿಧಾನವಾಗಿ ಸವಿ, ರುಚಿಕರ
        ನನ್ನ   ಪ್ರತಿ ರೂಪರಂಗ............!

     
        ಒಬ್ಬಳೇ  ಬೇಯುವ ನೋವು
        ನಿನಗರಿವಿಲ್ಲ  ಸಖ...
       ನೋಡಿಹೆಯಾ ಎಲ್ಲಿಯಾದರೂ
       ಒಂಟಿ ಸುಡುವ  ಪತಂಗ.....?

        ನಿನ್ನ ಉಸಿರಬಿಸಿ ಗಲ್ಲದ ತುಂಬ
        ಎಬ್ಬಿಸಿದೆ ಹಲವಾರು ಪುಳಕ....
        ಪಿಸು ನುಡಿಯಲು ನೀನು
         ಎದ್ದಿದೆ ಚಂದ್ರನಲ್ಲೂ  ತರಂಗ......!
 
























Sunday, June 5, 2011

ಕವಿತೆ-ಪ್ರಸವ

ಕವಿತೆ ಹುಟ್ಟುವುದು ಅಷ್ಟು
ಸುಲಭವಲ್ಲ ಬಿಡಿ..
ಛಂದ,ಲಯ, ಗೇಯತೆ ಹೀಗೆ
ನೂರೆಂಟು ತೆವಲುಗಳಿಗೆ ಈಡಾಗಿ
ಕವಿತೆ ಹಡೆಯುವುದಿದೆಯಲ್ಲ..
ಬಲು ಪ್ರಯಾಸದ ಕೆಲಸ.
ಸೂಲಗಿತ್ತಿ, ಡಾಕ್ಟರ್ ಹೇರುವ
ಸಿಸೇರಿಯನ್ ಬಿಲ್ಲಿನ ಭಯವಿಲ್ಲ
ಹೊರಗೆ ವಾರ್ಡಿನಲ್ಲಿ ಗಂಡ ಶತಪಥ
ತಿರುಗುವುದಿಲ್ಲ..
ಸಡಗರ ಆತಂಕ ಇಲ್ಲೂ ಇದೆ
ನೋವೂ ತಿನ್ನುವುದಿದೆ..
ಹಾಗೆಯೇ ಅಲ್ಲಿ ಇಲ್ಲಿ ಹಣಿಕಿ
ಸಾಲು ಜೋಡಿಸುವ ಹಿಕಮತ್ತಿದೆ
ಅಂತೂ ಇಂತೂ ಏನಕೇನವಾಗಿ
ಮೇಜಿನ ಮೇಲಿನ ಬಿಳಿಹಾಳೆ ಮೇಲೆ
ಕವಿತೆ ಅಕ್ಷರ ರೂಪವಾಗಿ ಬಿರಿಯುತ್ತದೆ..
ಖುಷಿ ನಿರಂತರವಲ್ಲ ನಿಂತಿದ್ದಾನೆ ಅಲ್ಲಿ
ವಿಮರ್ಶಕ ಮಹಾಶಯ ಕತ್ತಿ ಹಿರಿದು
ಕವಿತೆ ಮುಲುಗುಟ್ಟುತ್ತದೆ ತೆವಳುತ್ತದೆ..
ಅವನ ಮೊಗದಲ್ಲಿನ ನಗು
ಕತ್ತಿ ಅಂಚಿಗೆ ಜಿನುಗುವ ರಕ್ತ ಅದಾಗಲೇ
ಕವಿತೆಗೆ ಚರಮಗೀತೆ ಬರೆದಾಗಿರುತ್ತದೆ.....