Sunday, March 27, 2011

ಹೀಗೊಂದು ಪ್ರಶ್ನೆ..















ಮಾಗಿಯನ್ನು ಬಾಗಿಲಾಚೆ ಕಳಿಸಿಕೊಟ್ಟ
ಕವಿ ಬಾಗಿಲಿಗೆ ಬಂದು ನಿಂತಿದ್ದಾನೆ..
ಚೈತ್ರನ ನಿರೀಕ್ಷೆಯಲ್ಲಿ.
ಕೋಗಿಲೆ ಪಂಚಮ ತಳಿರು ಹಸಿರು ಹೋಳಿಗೆ
ನೂರೆಂಟು ಸಂಭ್ರಮಗಳ ಆಗಮನದಲ್ಲಿ
ತನ್ನ ಇರುವನ್ನು ಇನ್ನಷ್ಟು ಹಿಗ್ಗಿಸಿಕೊಳ್ಳಲು
ಕಾದಿದ್ದಾನೆ.
ಎಂದಿನಹಾಗೆ ಈ ಸಲದ ಮಾಮರದಲ್ಲೂ
ಹಸಿರಿರುವುದಿಲ್ಲ.. ಮಣ್ಣಲ್ಲಿ ಅರಳಿದ ರಂಗೋಲಿಯಲ್ಲಿ
ರಕ್ತದ ಕಲೆ ಚೆಲ್ಲಿರುತ್ತದೆ..ಗೊತ್ತು ಅವಗೆ ಅದು ಹೀಗೇ ...ಅಂತ
ಅದೆಷ್ಟೋ ವಸಂತ ಅದೆಷ್ಟು ಸಂವತ್ಸರ ಉರುಳಿಹೋದವಿಲ್ಲಿ..
ನಾಡಿನ ದೊರೆ ಸಾಲುಮರದ ತಿಮ್ಮಕ್ಕನ ಕಾಲು ಮುಗಿಯುವ ಢೋಂಗಿಯಲ್ಲಿ..!
ದೂರದ ಜಪಾನ್ ನ ಅಂಗಡಿಯವ ಹಾಕಿದ ಬೋರ್ಡಿನ ಸುದ್ದಿ
ಓದಿ ಪಕ್ಕಕ್ಕಿಡುತ್ತಾನೆ..ಅದು ನಮಗೆ ಒಗ್ಗದು ಎಂದು.
ನಮಗಿದೇ ಭಾಗ್ಯ ಪ್ರಳಯದ ಭಯ, ಉದ್ರಿ ತಂದ ಬೇಳೆಯ ಹೋಳಿಗೆ
ಟಿವಿಯಲ್ಲಿ ಅದೇ ರಿಮೇಕಿನ ಸರಕು, ನಂಜಿಕೊಳ್ಳಲು ಸ್ವಲ್ಪ ಹರಟೆ..
ಎಲ್ಲ ಅದೇ ಇರುವಲ್ಲಿ ನಾಳೆ ಬಂದಿತಾದರೂ ಏಕೆ
ಮಾಮರ ಹಸಿರುಟ್ಟು ನಲಿವುದಾದರೂ ಏಕೆ..!

Friday, March 4, 2011

ದಾಸ್ತಾನ್-ಎ-ಶಾಮ್ ...





















ಸಂಧ್ಯಾಕಾಲ --ಮುಸ್ಸಂಜೆ--ನಮ್ಮ ಧಾರವಾಡದ ಕಡೆ ಹೇಳೂದಾದ್ರೆ ಮೂರುಸಂಜಿ. ಈ ಘಳಿಗೆ ಅಥವಾ ಸಮಯ
ಒಂಥರಾ ಸಂಧಿಕಾಲದ್ದು. ಹಗಲು ರಾತ್ರಿಗೆ ಕೈ ಕುಲುಕಲು ಈ ಸಮಯ ಸೇತುವೆ ಆಗುತ್ತದೆ. ಇದನ್ನು ದಾಟಿಯೇ
ಅವರ ಮಿಲನವಾಗುತ್ತದೆ.ಅಂದರೆ ಸಾಯಂಕಾಲ ಬಹು ಮುಖ್ಯಕಾಲ. ಇಂತಹ ಸಾಯಂಕಾಲ ನಮ್ಮ ಅನೇಕ ಗೀತೆಗಳಿಗೆ ಹಾಡುಗಳಿಗೆ ವೇದಿಕೆಯಾಗಿದೆ.
ನನಗೆ ನನ್ನ ಬಾಲ್ಯದ ನೆನಪು. ಸಂಜೆ ಆಗುತ್ತಿದ್ದಂತೆ ಆಟ ಮುಗಿಸಿ ಕೈ ಕಾಲು ತೊಳೆದು ಅವ್ವ ದೇವರ ಮುಂದೆ ದೀಪ
ಹಚ್ಚುವಾಗ ಕೈ ಮುಗಿದು "ಶುಭಂಕರೋತಿ ಕಲ್ಯಾಣಂ..." ಹೇಳುವುದು ರೂಢಿ. ಮುಂದೆ ಅಭ್ಯಾಸದ ಸಮಯ. ಹಳ್ಳಿಕಡೆ  ಹೊಲಕ್ಕೆ ಹೋಗಿದ್ದ  ದನಕರುಗಳು ,ರೈತರು ವಾಪಸ್ ಮನೆಗೆ ಬರುವ ಸಮಯ.
 ಗೋಧೂಳಿ ಅಂತ ಹಿರಿಯರು ಭಾಳ  ಸೊಗಸಾಗಿ ಹೆಸರು ಇಟ್ಟಾರ.
 ಈಗ ದಿನಾ ಬದಲಾಗ್ಯವ. ದುಡಿಯೋ ಧಾವಂತದಾಗ ಅನೇಕ ಹಗಲು ಒಮ್ಮೆಲೆ ರಾತ್ರಿ  ಆಗಿಹೋದ್ವು.
 ನಡುವ ಬರುವ ಸಂಜೆ ತನ್ನ ಇರುವು ಸಾರದೇ ಹಾಗೆಯೇ ಕರಗಿ ಹೋತು. ನನ್ನಂಥ ಬಿಎಮ್ ಟಿಸಿ ಪಯಣಿಗರ ಕತಿ ಅಂತು ಕೇಳಬ್ಯಾಡ್ರಿ. ಡ್ರೈವರ್ ಬಸ್ಸಿನ್ಯಾಗಿನ ದೀಪ ಹಚ್ಚಿದಾಗ ಗೊತ್ತಾಗ್ತದ ಸಾಯಂಕಾಲ ಆತು ಅಂತ
ಮನಿ ಮುಟ್ಟಿದಾಗ ಸಂಜೆ ಆಗಲೇ ರಾತ್ರಿಯ ತೆಕ್ಕೆಯಲ್ಲಿ ಕರಗಿ ಹೋಗಿರತದ. ಇರಲಿ ವಾಸ್ತವದ ಕಹಿ ಇದ್ದಿದ್ದ. ಸ್ವಲ್ಪ
ಕಲ್ಪನಾ ಲೋಕಕ್ಕೆ ಹೋಗೋಣು. ಸಂಜೆ ನಮ್ಮ ಅನೇಕ ಗೀತೆಗಳಿಗೆ ವೇದಿಕೆ ಅಂತ ಮೊದಲೇ ಹೇಳಿದೆ...
ಅನೇಕ ಸಿನೇಮಾ ದಾಗ ನಾಯಕ ಮೂರುಸಂಜಿನ್ಯಾಗ ತನ್ನ ಗೆಳತಿಯನ್ನು ನೆನೆಯೋದು...ಹಳೇ ಸಿನೆಮ ಆದ್ರೆ
ಸ್ಟುಡಿಯೋ ದ ಕೃತಕ ಸೆಟ್ ನಲ್ಲಿ ಓಡಾಡುತ್ತ ಹಲಬುತ್ತಿರುತ್ತಾನೆ. ಹೊಸ ಸಿನೇಮಾದಾಗೂ ಬದಲಾಗಿಲ್ಲ. ಅವಳಿಲ್ಲದೆ
ಬಂದ " ಈ ಸಂಜೆ ಯಾಕಾಗಿದೆ..." ಅನ್ನುವ ಮೂಲಭೂತ ಪ್ರಶ್ನೆ ಎತ್ತುತ್ತಾನೆ.

ಈ ಸಂಜೆ ಬರೇ ಸಿನೇಮಾ ಹಾಡಿಗೆ ಸ್ಫೂರ್ತಿ ಅಲ್ಲ , ಅನೇಕ ಕವಿಗಳು ಈ ಸಾಯಂಕಾಲದ ಬೇಗೆಗಳಿಗೆ ದನಿಯಾಗಿದ್ದಾರೆ.ಪ್ರಕೃರ್ತಿ ವರ್ಣನಾ ಮಾಡುವುದರ ಜೊತೆಗೆ ಅನೇಕ ಭಾವಗಳಿಗೆ ಕನ್ನಡಿ ಹಿಡಿದಿದ್ದಾರೆ.
ವರಕವಿಯ
 "ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ ಆಗ ಸಂಜಿ ಆಗಿತ್ತ..".
 ಎಂಥಾ ಸೊಗಸಾದ ಚಿತ್ರ  ಕೆಂಪಡರಿದ ಆಕಾಶ "ನಂಜ" ಹಿಡಿದವರಂಗ ಕಾಣಸ್ತದ.
 ರಾಷ್ಟ್ರಕವಿ ಹಿಂದಿಲ್ಲ. ತಮ್ಮ ನೆಚ್ಚಿನ ಕವಿಶೈಲದಲ್ಲಿ ಕುಳಿತು
ಸಂಜೆ ಸೊಬಗು ಅನುಭವಿಸುತ್ತ ಹೇಳಿದ ಮಾತು
.."ಪಶ್ಚಿಮ ಗಿರಿಶಿಖರದಲಿ ಸಂಧ್ಯೆಯ ರವಿ;
 ನಿರ್ಜನ ಕವಿಶೈಲದೊಳಬ್ಬನೆ ಕವಿ;
 ಮಲೆನಾಡಿನ ಬುವಿ ಮೇಲರುಣಚ್ಛವಿ;
ವಸಂತ ಸಂಧ್ಯಾ ಸುವರ್ಣ ಶ್ರಾಂತಿ ಅನಂತ ಶಾಂತಿ".

 ನಮ್ಮ ಇನ್ನೊಬ್ಬ ಹೆಮ್ಮೆಯ ರಾಷ್ಟ್ರಕವಿ ಸಂಜೆಯ ಸೊಬಗನ್ನು ಹೇಳುವ ಪರಿಯೇ ವಿಶಿಷ್ಟ. ಸಾಯಂಕಾಲದ
ತಳಮಳ ವನ್ನು ಶಕುಂತಲೆಯ ಒಳಗುಗಿಗೆ ತಳುಕು ಹಾಕಿ
"ಸಂಜೆ ಬಾನಿನಂಚಿನಲ್ಲಿ ಬಿದ್ದ ಬಿದಿಗೆ ಚಂದಿರ.."   ಎಂದು ಹೇಳುತ್ತಾರೆ. ತಮ್ಮ ಇನ್ನೊಂದು ಕವಿತೆಯಲ್ಲಿ
" ಶ್ರೀ ಹರಿಪಾದ ಅಪೂರ್ವ ಪಕ್ಷಿಯ ಹಾಗೆತೋರಿರಲು
 ದಟ್ಟ ಪೊದೆಗಳ ನಡುವೆ ,
 ಕೂಡಲೇ ಹೂಡಿ ಬಿಲ್ಲಿಗೆಬಾಣ ಬಿಟ್ಟನು ಗುರಿಗೆ,
  ತಾಗಿದ್ದೆ ತಡ ಛಿಲ್ಲೆಂದು ಚಿಮ್ಮಿತು ರಕ್ತ..ಕೆಂಪಾಯಿತು
  ನೀಲಿಯ ಗಗನ".

 ಅದೆಂತಹ ಅದ್ಭುತ ಕಲ್ಪನೆ. ಜಯಂತ ಕಾಯಕಿಣಿ ತಮ್ಮ "ಈಗ" ಅನ್ನುವ ಕವಿತೆಯಲ್ಲಿ ಮುಂಬಯಿ ಮಹಾನಗರಿಯ
ಚಿತ್ರಣ ಅದೆಷ್ಟು ಸೊಗಸಾಗಿ ನೀಡಿದ್ದಾರೆ. ಈ ಕವಿತೆಯ ಕೊನೆಯ ಸಾಲು..
"ಅಲ್ಲಿ ಕಾಮಾಟಿಪುರದಲ್ಲಿ
ಹದಿನೇಳರ ಬಾಲೆಯ ಹೊಟ್ಟೆಗೆ ಅವರು ಒದೆಯುತ್ತಾರೆ
ಬಿಡಿಸಿಕೊಳ್ಳಲು ನಾವಾರೂ ಅಲ್ಲಿಲ್ಲ..".

ಸಂಜೆ ವಾಸ್ತವ ವೇನು. ಬರೀ ಪ್ರಕೃರ್ತಿ ಬಣ್ಣ ಬದಲಾಯಿಸುವುದಲ್ಲ. ಬಿರುಬಿಸಿಲಲಿ ಬೆಂದ ಭುವಿ ಅರೆಗಳಿಗೆ ಕನಸಿನಲ್ಲಿ
ಮೈಮರೆಯುವ ಸಮಯ. ಮರಾಠಿ ಕವಿಗಳೂ ಈ ಸಂಜೆಯ ವರ್ಣನೆ ಹೀಗೆ ಮಾಡಿದ್ದಾರೆ..
"ಸಾಂಜ್ ಹೀ ಗೋಕುಳಿ ಸಾವಲಿ ಸಾವಲಿ..
ಸಾವಳ್ಯಾಚಿ ಜಣು ಸಾವಲಿ.."(ಸುರೇಶ್ ಭಟ್)

"ರಂಗಾಚ್ಯಾ ಹಾ ಉಘಡೂನಿ ಪಂಖಾ ಸಾಂಜ್ ಕುಣಿ ಹಾ ಕೇಲಿ.."(ಮಂಗೇಶ್ ಪಾಡ್ ಗಾಂವಕರ್)
"ಯಾ ಚಿಮಣ್ಯಾಂನೋ ಪರತ ಫಿರಾರೆ ಘರಾ ಕಡೆ ಆಪುಲ್ಯಾ.."(ಗದಿಮಾ).

ಸಿನೇಮಾ ಹಾಡಿಗಂತೂ ಈ ಸಾಯಂಕಾಲದ ವ್ಯಾಳ್ಯಾ ಒಂಥರಾ ಹೇಳಿಮಾಡಿಸಿದಂಗ. ನಾಯಕ ಮಹಾಶಯ ಅವಳನ್ನು ನೆನೆಯುತ್ತ ತೋಟದಲ್ಲೋ, ಸಮುದ್ರ ದಂಡೆಯಲ್ಲೋ ಅಥವ ಮನೆ ಮಾಳಿಗಿ ಮ್ಯಾಲೋ ಕೂತು ಹಾಡು
ಹೇಳತಾನ. ಹಿಂದಿ ಸಿನೇಮಾದಾಗ ಈ "ಶಾಮ್-ಎ-ಗಮ್" ಹಾಡುಗಳಿಗೆ ಲೆಕ್ಕವಿಲ್ಲ. ಬಹಳಷ್ಟು ಹಾಡು ವಿರಹುದುರಿ
ಹೆಚ್ಚಿಗೆ ಮಾಡುವಂತಹವು. ಶಾಮ್ ಅಥವಾ ಸಂಜೆ ಈ ಶಬ್ದ ಹಾಡಿನಲ್ಲಿ ನುಸುಳದಿದ್ದರೂ ಆ ಹಾಡು ಆನಾಯಕನ
ವೇದನೆ ಒಂಥರಾ ದುಃಖದ ಮಾಹೌಲ್ ನಿರ್ಮಿಸುತ್ತಿತ್ತು. ಕೆಲವೊಮ್ಮೆ ಸಂಜೆ ತುಂಟ ಗೀತೆಗಳಿಗೂ ವೇದಿಕೆಯಾಗಿದೆ..
ಈ ತುಂಟ ಗೀತೆಯ ಕ್ಲಾಸಿಕ್ ಉದಾಹರಣೆ ಗೀತಾಬಾಲಿ ಹಾಗೂ ಭಗವನ್ ಮೇಲೆ ಚಿತ್ರಿತವಾದ..
"ಶಾಮ್ ಢಲೆ ಮೇರೆ ಖಿಡಕಿ ತಲೆ ತುಮ್ ಸೀಟಿ ಬಜಾನಾ ಛೋಡದೋ....". ಈ ಹಾಡು ಎಂದೂ ಮರೆಯಲಾರದ್ದು.

ನಾ ಮೊದಲೇ ಹೇಳಿದಂತೆ ಹಾಡುಗಳು ಅನೇಕವಿವೆ. ಎಲ್ಲದರ ಪಟ್ಟಿ ಇಲ್ಲಿ ಬರೆಯುವುದು ಅಪ್ರಸ್ತುತ, ನನಗೆ ತೀರ
ಸೇರಿದ ಐದಾರು ಹಾಡು ಅವುಗಳ ಪಟ್ಟಿ ಕೊಟ್ಟಿರುವೆ....
೧) ಶಾಮೆ ಗಮ್ ಕಿ ಕಸಮ್ ಆಜ್ ಗಮಗೀನ್ ಹಮ್ (ತಲತ್ )
೨) ಫಿರ್ ವಹಿ ಶಾಮ್ ವಹಿ ಗಮ್ ವಹಿ ತನಹಾತಿ ಹೈ....(ತಲತ್)
೩) ಹುಯಿ ಶಾಮ್ ಉನಕಾ ಖಯಾಲ್ ಆ ಗಯಾ.. ಉಸೀ ಜಿಂದಗಿ ಕಾ ಸವಾಲ್ ಆ ಗಯಾ...(ರಫಿ)
೪) ಯೇ ಶಾಮ್ ಕಿ ತನಹಾಯಿಯಾಂ ಐಸೆ ಮೆ ತೇರಾ ಗಮ್ (ಲತಾ)
೫) ಕಹಿ ದೂರ್ ಜಬ್ ದಿನ್ ಢಲ್ ಜಾಯೇ(ಮುಕೇಶ್)
೬) ಖಾಲಿ ಹಾತ್ ಶಾಮ್ ಆಯಿ ಹೈ ಖಾಲಿ ಹಾತ್ ಜಾಯೇಗಿ..(ಆಶಾ).

ಈ ಲೇಖನದ ನಾ ಮೆಚ್ಚಿದ ಶಾಮ್ ಕುರಿತಾದ್ ಹಾಡು ಹಾಕಿರುವೆ....