Wednesday, January 26, 2011

ಇವರು ಮಾತ್ರ ಅದ್ಯಾಕೆ ಹಾಗೆ....?

                                         ಶಾಲೆಯ ಪೆಪ್ಪರಮಿಂಟಿನ ಒಗರಿಗೆ ಮುಖ
                                        ಕಿವುಚಿದ ತರಳೆ..
                                        ಪ್ಲಾಸ್ಟಿಕ್ ಧ್ವಜ ಮಾರಿಬಂದ ದುಡ್ಡು ಎಣಿಸಿ
                                        ಸುಸ್ತಾದವ  " ನಮ್ಮ ಮೆಟ್ರೋ" ದ ಕೆಳಗೆ.
                                        ದಿಲ್ಲಿ ದರಬಾರಿನಲಿ  ಸ್ಟಾರ್ಚ ಹಾಕಿದ ಸೀರೆಯ
                                        ಚುಂಗಿನ ರಾಷ್ಟ್ರಪತಿ.. ಅಂತೂ ಈರುಳ್ಳಿ ಬೆಲೆ
                                        ಇಳಿದಿದ್ದಕ್ಕೆ ನಗುತ್ತಿರುವ ಪ್ರಧಾನಿ..
                                        ಹೀಗೆ ನಿನಗೆ ಅರವತ್ತೊಂದಾಯಿತೀಗ..
                                        ಆದರೇನು ತಾಯೇ ನಿನ್ನ ಹಸಿವೇ  ಹಿಂಗಿಲ್ಲ
                                        ನಿನ್ನ ಮಡಿಲಲಿ ಆಡಿದ ಕಂದಮ್ಮಗಳ ರಕ್ತ
                                         ಅಷ್ಟು ರುಚಿಯೇ...
                                         ಚಪ್ಪರಿಸಿ  ಬೀಗುತಿಹೆಯಲ್ಲ....!
                                         ನಿರಂಜನ ,ಯಶವಂತರಂತಹವರು..
                                         ಇರಬಹುದಿತ್ತು ಇವರೂ
                                         ಏಸಿರೂಮಿನ ತಂಪನುಭವಿಸುತ್ತ
                                         ಸ್ವಿಸ್ ಬ್ಯಾಂಕಿನ ಕೋಡನ್ನು ಗುಣಗುಣಿಸುತ್ತ
                                         ಇದ್ದಾರಲ್ಲವೇ   ಎಲ್ಲರೂ ಹೀಗೆ...
                                         ಇವರು ಮಾತ್ರ ಅದ್ಯಾಕೆ ಹಾಗೆ....?       

                  ನಿನ್ನೆ ಮಾಲೆಗಾಂವ್ ನಲ್ಲಿ ಯಶವಂತ್ ಸೋಲವಣೆ ಅನ್ನುವ ಅಧಿಕಾರಿಯನ್ನು  ಜೀವಂತದಹಿಸಿ ಕೊಲ್ಲಲಾಯಿತು. ಅವ ತೈಲ ಕಲಬೆರೆಕೆ (ಡಿಸೆಲ್,ಪೆಟ್ರೋಲ್) ವಿರೋಧಿಸಿದ್ದ. ಅವ  ಏಸಿ ಹುದ್ದೆ ಅಲಂಕರಿಸಿದ್ದ
ಕೊಂದವರು ಅಲ್ಲಿಯೇ ಇದ್ದಾರೆ ಅಲ್ಲಿಯ ಮುಖ್ಯಮಂತ್ರಿ ಅವರನ್ನು ಬಂಧಿಸುವುದಾಗಿ ಹೇಳಿದ್ದಾನೆ.
ಒಂದರೆ ಕ್ಷಣ  ನಿಲ್ಲೋಣ ಈ ಪ್ರಶ್ನೆ ಕೇಳೋಣ.." ಇವರು ಮಾತ್ರ ಅದ್ಯಾಕೆ ಹಾಗೆ....? "   
                        

Tuesday, January 11, 2011

ಹರಾಜಪ್ಪೋ ಹರಾಜು...



ಮೊನ್ನೆ ಶನಿವಾರ==ರವಿವಾರ ಎಲ್ಲ ಚಾನೆಲ್ ಗಳು ಒಂದೇ ರಾಗ ಹಾಡುತ್ತಿದ್ದವು.ಅದೆಂದರೆ ಐಪಿಎಲ್-೪ ರ
ಆಟಗಾರರ ಹರಾಜು. ಐಪಿಎಲ್ ಜ್ವರ ಅದಾಗಲೇ ಶುರುಆಗಿದೆ. ವಿಶ್ವಕಪ್ ಜ್ವರ ಏರಬೇಕಾಗಿತ್ತು ಆದ್ರೆ
ಐಪಿಎಲ್ ನ "ಝಣ ಝಣ"ದ ಮುಂದೆ ಅದು ಮಂಕಾಗಿದೆ. ಪುಣ್ಯ ಅಂದ್ರೆ ಐಪಿಎಲ್ ಸುರುಆಗೋವಾಗ ವಿಶ್ವಕಪ್
ಮುಗಿದಿರುತ್ತದೆ. ಒಂದುವೇಳೆ ಅವು ಏಕಪ್ರಕಾರದಲ್ಲಿ ನಡೆದಿದ್ದಾದರೆಅದೆಷ್ಟೋ ಆಟಗಾರರು ವಿಶ್ವಕಪ್ ಧಿಕ್ಕರಿಸಿ
ಐಪಿಎಲ್ಗೆ ಮುಗಿಬೀಳುತ್ತಿದ್ದರು. ಅದು ಸಹಜವೂ ಸರಿ.ಯಾಕಂದ್ರೆ ದುಡ್ಡು ಅದರ ಮುಂದೆ ಮತ್ತೇನಿದೆ...ಅಲ್ವೆ?
ನಮ್ಮ ಹುಡುಗ್ರು ಟ್ವೆಂಟಿ ಟ್ವೆಂಟಿ ವಿಶ್ವಕಪ್ ಗೆದ್ದಿದ್ದೆ ಬಂತು  ನಮ್ಮ ಬೋರ್ಡು ಚಿನ್ನದಮೊಟ್ಟೆ ಇಡುವ ಕೋಳಿ
ಐಪಿಎಲ್  ಕಂಡುಹಿಡಿದ್ರು ಮೋದಿ ಎನ್ನುವ ಹಪಾಪಿ ಆದರೆ ಬುದ್ಧಿವಂತ ಬಲೆ ನೇಯ್ದ . ಕೊಳ್ಳುವ ಆಟ ಸುರು ಆತು
ಪಟೌಡಿ, ಗವಾಸ್ಕರ್, ಶಾಸ್ತ್ರಿ ಮುಂತಾದ ಖ್ಯಾತನಾಮರು ಆಡಳಿತಮಂಡಳಿ ಸೇರಿದ್ರು. ಇಡೀ ವಿಶ್ವ ಬೆರಗಾಗುವಂತೆ
ಮೊದಲ ಟೂರ್ನಿ ಮುಗಿಯಿತು. ಚುನಾವಣೆ ನೆವ ಎರಡನೇ ಟೂರ್ನಿ ಆಫ್ರಿಕಾದಲ್ಲಾಯಿತು. ಮೂರನೇದು ಮತ್ತೆ ಸ್ವದೇಶದಲ್ಲಿ. ಈಗ ನಾಲ್ಕರ ಹೊಸಿಲಲ್ಲಿರುವೆವು. ಮೂರನೇದಕ್ಕಿಂತ ನಾಲ್ಕನೇದು ಮಿಗಿಲಾಗಿರುತ್ತದೆ..ಈಗ ಎಂಟರ
ಬದಲು ಹತ್ತು ಟೀಮು. ಡಾಲರ್ಗಳಲ್ಲಿ ಮೊನ್ನೆ ಬಿಕರಿಯಾದ ಆಟಗಾರರ ಕಿಸ್ಮತ್ ನ ಏನು ಬಣ್ಣಿಸಲಿ...!

ಹಾಗೆ ನೋಡಿದರೆ  ಸಾಕರ್ ಹಾಗೂ ಅದ ನಡೆಸುವ ಕ್ಲಬ್ಬುಗಳು ಹಣದ ಹೊಳೆ ಹರಿಸಿ ಖ್ಯಾತನಾಮರನ್ನು ಖರೀದಿಸುತ್ತವೆ.ಅಲ್ಲೂ ಆಟಗಾರರ ಪ್ರಾಮಾಣಿಕತೆ ಬಗ್ಗೆ ಅನೇಕ ಪ್ರಶ್ನೆಗಳಿವೆ. ಆದರೆ ಅದನ್ನು ನಿವಾಳಿಸಿ ಒಗೆಯುವಂತೆ ಐಪಿಎಲ್ ಬೆಳೆದಿದೆ.ಇಲ್ಲಿ ಕೋಟಿ ಕೊಟ್ಟು ಖರೀದಿಸುವುದು ತೀರ ಮಾಮೂಲಿ ವಿಷಯ. ದೇಶಕ್ಕಾಗಿ
ಒಂದೆರಡು ಪಂದ್ಯವಾಡಿದವ ಕೋಟಿ ಕೋಟಿ ಬಾಚಿಕೊಂಡ. (ಉದಾ : ತಿವಾರಿ) ಅದೇ ತರಹದ ಪ್ರತಿಭೆ ಇದ್ರೂ
ಆ ಆಡುವ ಅವಕಾಶ ಸಿಗದಿದ್ದುದಕ್ಕೆ ಕೇವಲ ಹತ್ತಿಪ್ಪತ್ತು ಲಕ್ಷದಲ್ಲಿ ತೃಪ್ತಿ ಪಡುವ ಅನಿವಾರ್ಯತೆ ಗೆ ಸಿಲುಕಿದ ನತದೃಷ್ಟರೂ (ಉದಾ: ಮನೀಷ್ ಪಾಂಡೆ) ಇದ್ದಾರೆ.  ತನ್ನ  ತಾಯ್ನಾಡು ಅದನ್ನು ನಾ ಪ್ರತಿನಿಧಿಸಬೇಕು ಎನ್ನುವ
ಮಹದಾಸೆ ತರುಣ ಕ್ರಿಕೆಟಿಗರಲ್ಲಿ ಈಗಿಲ್ಲ. ಅನ್ನ  ನೀಡುವ ಮಾಲೀಕರಿದ್ದಾರೆ ಅವರನ್ನು ತೃಪ್ತಿಪಡಿಸಿದರಾಯಿತು ಅನ್ನುವ ಧೋರಣೆ ಬೆಳೆಯುತ್ತಿದೆ  ಉದಾ: ಪೋಲಾರ್ಡ ಎಂಬ ದೈತ್ಯ ಪ್ರತಿಭೆ. ತನ್ನ  ದೇಶಕ್ಕಾಗಿ ಆಡುವಾಗ ಅವನದು ಶೂನ್ಯ ಸಾಧನೆ.. ಆದರೆ "ಮುಂಬೈ ಇಂಡಿಯನ್ಸ" ಅಥವಾ " ರೆಡ್ ಬ್ಯಾಕ್ "ಪರ ಆಡುವಾಗ ಅವನ
ಕರಾಮತ್ತು ವರ್ಣಿಸಲು ಸಾಧ್ಯವಿಲ್ಲ. ನಮ್ಮ  ದೇಶದ ಮುರಳಿ ವಿಜಯ್ , ರೈನಾ , ಉತ್ತಪ್ಪ್  ಎಲ್ಲ  ಇದೇ ಸಾಲಿನಲ್ಲಿ
ಬರ್ತಾರೆ..!  ಹಾಗಂತ ಇವರು ಮಾಡಿದ್ದು ತಪ್ಪಲ್ಲ  .ಬೆಂಕಿ ಹತ್ತಿದೆ ಅದರ ಶಾಖಕ್ಕೆ ಮೈ ಕಾಯಿಸಿಕೊಳ್ಳುತ್ತಿದ್ದಾರೆ.
ನಮ್ಮ  ಹಿರಿಯ  ಆಟಗಾರರು ನಿವೃತ್ತಿಯಾದಮೇಲೆ ಪಟ್ಟ ಅಥವಾ ಪಡುತ್ತಿರುವ ಪಾಡು ನಮ್ಮ ಮುಂದಿದೆ.
ಚಂದ್ರಶೇಖರ್ ಕಾಲು ಮುರಿದುಕೊಂಡು ವೀಲ್ ಚೇರ್ ವಾಸಿಯಾಗಿದ್ದು, ದೈತ್ಯ ಪ್ರತಿಭೆಯ ಸೋಳ್ಕರ್ ನ ಕೊನೆಗಾಲದ ದುರವಸ್ಥೆ ಎಲ್ಲ ಇದೇ ದೇಶದಲ್ಲಿ  ಆದಿದ್ದು. make hay when sun shines ಅನ್ನುವ ಹಾಗೆ
ತರುಣ ಆಟಗಾರರು ದುಡಿದುಕೊಳ್ಳುತ್ತಿದ್ದಾರೆ ಅಥವಾ ರಾಶಿ ರಾಶಿ ಹಣ ಬಾಚಿಕೊಳ್ಳುತ್ತಿದ್ದಾರೆ....

ಯಾಕೆಂದರೆ ಇದು ಪ್ರಸ್ತುತ ಭಾರತ ಪೆಪ್ಸಿ ಅನ್ನೋ ಹಾಗೆ "ಯಂಗಿಸ್ತಾನ್ ವಾವ್.."

Saturday, January 1, 2011

ಮುಂದಿನ ಪೀಳಿಗೆ ದೇವರಿಗೆ ಕೈ ಮುಗಿಯುವುದೆ...?

ಹೌದು ಈ ಪ್ರಶ್ನೆ ಕಾಡುತ್ತದೆ. ಧರ್ಮ ಅಥವಾ ಧಾರ್ಮಿಕ ನಂಬಿಕೆಗಳು ವ್ಯಕ್ತಿಗತ ಹಾಗಂತ ಜನ




ತೀರ್ಥಯಾತ್ರೆ ಅಥವಾ ಪುಣ್ಯಕ್ಷೇತ್ರಕ್ಕೆ  ಹೋಗುವುದು ಕಮಿಯಾಗಿಲ್ಲ. ಆದರೆ ಪುಣ್ಯಕ್ಷೇತ್ರಗಳಲ್ಲಿ ಬದಲಾವಣೆಯಾಗಿದೆಯೆ
ಇವು ನಮ್ಮ ನಂಬಿಕೆಗಳನ್ನು ಶ್ರದ್ಧೆಗಳನ್ನು ಇನ್ನೂ ಜಾಸ್ತಿ ಮಾಡಿವೆಯೇ  ಅಥವಾ ಅಲ್ಲಿರುವ ಅನಾಚಾರ, ಅವ್ಯವಸ್ಥೆ.
ಪೂಜಾರಿಗಳ ಹೊಟ್ಟೆಬಾಕತನ ಇವು ಮುಂದಿನ ಪೀಳಿಗೆಗಳು ಈ ಪುಣ್ಯಕ್ಷೇತ್ರಗಳತ್ತ ಮುಖಮಾಡುವುದನ್ನೇ ನಿಲ್ಲಿಸುವವೇ
ಇವೇ ಮುಂತಾದ ಪ್ರಶ್ನೆಗಳು ಹಿಂದೆಯೂ ಕಾಡಿದ್ದವು. ಮೊನ್ನೆ ಮಧುರೈ, ಕನ್ಯಾಕುಮಾರಿ,ರಾಮೇಶ್ವರ ಸುತ್ತಿದಾಗಲೂ
ಮತ್ತೆ ಮತ್ತೆ ಕಾಡಿವೆ
.

ನಾನು ಅನೇಕ ದೇವಸ್ಥಾನ (ನಮ್ಮ ಕರ್ನಾಟಕ ಹಾಗೂ ಮಹಾರಾಷ್ಟ್ರ)ಗಳನ್ನು ಸಂದರ್ಶಿಸಿರುವೆ. ದೇವಸ್ಥಾನ ಅವುಗಳ
ಪರಿಸರ ಅಲ್ಲಿಯ ವಾತಾವರಣ ಭೇಟಿಯ ಮೊದಲು ಅನೇಕ ನಿರೀಕ್ಷೆಗಳನ್ನು ಹುಟ್ಟು ಹಾಕುತ್ತದೆ. ಖಂಡಿತವಾಗಿ ಅಲ್ಲಿ
ಹೋಗುವುದರಿಂದ ಪುಣ್ಯಕಮಾಯಿಯ ಸ್ವಾರ್ಥ ಇಲ್ಲ ಹಾಗಂತ ಕುಟುಂಬಸಮೇತ ಹೋಗುವುದಾದರೆ ಈ ಸ್ಥಳಗಳು
ಪ್ರಶಸ್ತ ಅನಿಸುತ್ತವೆ. ದೇವರು ಆ ಪುಣ್ಯಕ್ಷೇತ್ರಗಳಲ್ಲಿ ನಿಜಕ್ಕೂ ಇದ್ದಾನೆಯೇ ಇದ್ದರೆ ಅದೇಃಗೆ ಕಣ್ಣುಮುಚ್ಚಿಕೊಂಡಿದ್ದಾನೆ..
ಎರಡು ಸೆಕೆಂಡು ಕೈ ಮುಗಿದು ನಿಲ್ಲಲು ಬಿಡದೆ ರಟ್ಟೆಗೆ ಕೈ ಹಾಕಿ ಎಳೆಯುವ "ಸೇವಾ ನಿರತ"ರನ್ನು ನೋಡಿ...!
ಜನರು ದುಡ್ಡುಖರ್ಚು ಮಾಡಿಕೊಂಡು ಬರುವುದು ದರುಶನಕ್ಕೆ..ಕೈ ಮುಗಿದು ಕಣ್ಣಲ್ಲಿ ಒಂದರೆಕ್ಷಣವಾದರೂ ಪ್ರತಿಮೆ
ಕಣ್ಣುತುಂಬಿಕೊಳ್ಳಲು.  ಆದರೆ ಅಲ್ಲಿಯ ಜನರಿಗಾಗಲಿ,ಪೂಜಾರಿಗಳಿಗಾಗಲಿ ಇದರ ಅರಿವೇ ಇಲ್ಲ. ಆ ದೇವಸ್ಥಾನ ತಮ್ಮ ಜಾಗೀರು ಎಂದು ಅವರು ತಿಳಿದಿರುವಂತಿದೆ. ಉದಾಹರಣೆಕೊಡುವುದಾದರೆ ತಿರುಪತಿಯಿಂದ ಹಿಡಿದು
ಉಡುಪಿ ವರೆಗೂ ಕೊಡಬಹುದು. ಹಲವು ದೇವಸ್ಥಾನಗಳಲ್ಲಿ ನಾವು ಕೊಡುವ ಹೂ,ಮಾಲೆ ಇತ್ಯಾದಿ ದೇವರಿಗೆ
ಸೇರದೆ ಮತ್ತೆ "ರಿ ಸೈಕಲ್" ಆಗಿ ಹೊರಗಿನ ಅಂಗಡಿಯಲ್ಲಿ ಮಾರಾಟಕ್ಕೆ ಹಾಜರಾಗುತ್ತವೆ. ಇದು ಯಾವುದಕ್ಕಾಗಿ
ಎಂಬುದು ಬಿಡಿಸಿ ಹೇಳಬೇಕಾಗಿಲ್ಲ.

೨೪/೧೨/೨೦೧೦ ರಿಂದ ೨೮/೧೨/೨೦೧೦ ರ ವರೆಗೆ ನಾನು ಹಾಗೂ ಹೆಂಡತಿ,ಮಗಳು ಮಧುರೈ,ಕನ್ಯಾಕುಮಾರಿ,
ರಾಮೇಶ್ವರ  ಹೀಗೆ ಸುತ್ತಾಡಿಬಂದೆವು. ಮಧುರೈಯ ಮೀನಾಕ್ಷಿ, ಕನ್ಯಾಕುಮಾರಿಯ "ಕುಮಾರಿಅಮ್ಮನ್", ರಾಮೇಶ್ವರದ ರಾಮನಾಥ ಎಲ್ಲ ಪ್ರಸಿದ್ಧರೇ. ಆದರೆಸುತ್ತಲಿನ ಅನ್ಯಾಯ ಅಕ್ರಮ ನೋಡಿ ನೋಡಿ ಕುರುಡಾಗಿದ್ದಾರೆ..!
ಇನ್ನೊಂದು ವಿಚಿತ್ರ ಸಂಪ್ರದಾಯ ಗಮನಿಸಿದೆ. ಅದೆಂದರೆ ಅಯ್ಯಪ್ಪ ಮಾಲಾಧಾರಿಗಳಿಗೆ ನೀಡುವ ವಿಶೇಷ ಸವಲತ್ತು.
ಅವರನ್ನು ಸ್ಪೆಶಲ್ ಆಗಿ ನೋಡಿಕೊಳ್ಳಲಾಗುತ್ತಿತ್ತು.ಅವರು ಕ್ಯೂ ಹಚ್ಚದಿದ್ದರೂ ಪರವಾಗಿಲ್ಲ,ದೇವರ ಮುಂದೆ ಅವರಿಗೆ ಜಾಸ್ತಿಹೊತ್ತು ನಿಲ್ಲಲು ಅವಕಾಶ ಹೀಗೆ... ಈ ಮಾಲಾಧಾರಿಗಳು ಮಾಲೆ ಧರಿಸಿದಾಗ ಹೇಗೆ ಮಾಲೆ ತಗೆದಮೇಲೆ ಹೇಗೆ ಇದು ಎಲ್ಲರಿಗೂ ಗೊತ್ತಿರುವ ಮಾತು. ಕನ್ಯಾಕುಮಾರಿಯಲ್ಲಿ ನಮ್ಮ ಟ್ಯಾಕ್ಸಿ ಡ್ರೈವರ್ ಹೇಳುತ್ತಿದ್ದ ಅಯ್ಯಪ್ಪ
ಮಾಲಾಧಾರಿಗಳಿಂದ ಹೇರಳ ಆದಾಯವಿದೆ ದೇವಸ್ಥಾನಗಳಿಗೆ..ದಾನ ಧರ್ಮ ಮಾಡುತ್ತಾರೆ ಇತ್ಯಾದಿ...ಹೀಗಾಗಿ ಅವರಿಗೆ ವಿಶೇಷ ಸವಲತ್ತು ಅಂತ ಇರಬಹುದೇನೋ....!

ಮಧುರೈ ಅಲ್ಲಿಯ ರಸ್ತೆ ಅದರ ಮೇಲಿನ ಧೂಳು ನೋಡಿ ರೇಜಿಗೆಯಾತು.ಕಸ ಗುಡಿಸಲು ಹಳೆಕಾಲದ ಕಸಬರಿಗೆ ಬಳಸಲಾಗುತ್ತಿತ್ತು. ಅಲ್ಲಿಯ ಚಹಾ ಅಂಗಡಿ ಅದನ್ನು ಮಾಡುವ ವಿಧಾನ ವಿಶಿಷ್ಟವಾದದ್ದು. ಇನ್ನೊಂದು ಮುಖ್ಯವಿಶಯ
ಅಂದರೆ ರಾತ್ರಿ ವೇಳೆ ಅಂದರೆ ಮಧ್ಯರಾತ್ರಿ ನಂತರವೂ ಸಿಟಿಬಸ್ ಸೇವೆ ಇತ್ತು. ಹಾಗೂ ನಮ್ಮ ಕರ್ನಾಟಕಕ್ಕೆ ಹೋಲಿಸಿದರೆ ರೇಟೂ ಕಮ್ಮಿ. ಬೆಂಗಳೂರು ಈ ನಿಟ್ಟಿನಲ್ಲಿ ತೀರ ಹಿಂದೆ ಬಿದ್ದಿದೆ ಅನಿಸಿತು.ಅಲ್ಲಿ ಸಿಗುವ ಇಡ್ಲಿ,ವಡೆ, ದೋಸೆ ಅವುಗಳ ರುಚಿ ಅಪರೂಪದ್ದು. ಮೀನಾಕ್ಷಿ ದೇಗುಲ ಪುರಾತನದ್ದು..ಸುತ್ತಲೂ ಆಧುನಿಕತೆ ಆಕ್ರಮಿಸಿಕೊಂಡಿದೆ.
ಮಧುರೈ ತಮಿಳುನಾಡಿನ ಎರಡನೇ ದೊಡ್ಡ ನಗರ ಅಂತೆ. ಆದರೆ ಸ್ವಚ್ಛತೆ ಇಲ್ಲ, ಇನ್ನೊಂದು ನಿರಾಶೆ ಕಾದಿತ್ತು..
ಗಾಂಧಿಮ್ಯುಸಿಯಂ ಬಂದಾಗಿತ್ತು  ಕಾರಣ ಕ್ರಿಸಮಸ್  ಆದರೆಅದೇ ಆವರಣದ ತಮಿಳುನಾಡು ಮ್ಯುಸಿಯಂ ತೆರೆದಿತ್ತು
ನಾನು ಕೇಳಿದೆ ಅದೇಕೆ ತಮಿಳಿಗರಿಗೆ ಕ್ರಿಸಮಸ್ ಇಲ್ವಾ ಅಂತ. ಅದನ್ನು ನೋಡಲು ಐದು ರೂಪಾಯಿ ಶುಲ್ಕಬೇರೆ..
ಆದರೆ ಅದಕ್ಕೆ ರಸೀತಿ ಇಲ್ಲ..ಆ ದುಡ್ಡು ಎಲ್ಲಿ ಹೋಗುತ್ತೆ ಅಂತ ಹೇಳುವ ಕಾರಣ ಇಲ್ಲ. ಊರನ್ನು ಇಬ್ಭಾಗಿಸಿ ಹರಿಯುವ "ವಾಯಿಗೈ" ನದಿ...ನದಿ ಸುತ್ತಲೂ ವ್ಯಾಪಿಸಿದ ಜೋಪಡಿಗಳು, ಕೊಳಚೆಗಳು  ಇಡೀ ಊರಿಗೆ ತಮ್ಮ
ಸುವಾಸನೆ ಹರಡುತ್ತಿದ್ದವು.

ಕನ್ಯಾಕುಮಾರಿ ಭಾಳ ಕೇಳಿದ್ದೆ ಊರು ಚಿಕ್ಕದು ಸಮುದ್ರದ ದಂಡೆ ಸುತ್ತ ವ್ಯಾಪಿಸಿರುವ ಹೊಟೆಲ್ಗಳು, ವಸತಿ ಪ್ರದೇಶಗಳು. ವಿವೇಕಾನಂದ ಸ್ಮಾರಕ ಅದರ ಸೊಗಸು ವರ್ಣನೆಗೆ ಮೀರಿದ್ದು. ಅಲ್ಲಿಯ ಪ್ರಶಾಂತತೆ ಸುತ್ತಲಿನ ಸಮುದ್ರದ ಮೊರೆತಕ್ಕೆ ಮರುಳಾಗಿ ತರುಣ ಸನ್ಯಾಸಿ ತಪಗೈದಿದ್ದು. ಆದರೆ ಈಗ ಅದೊಂದು ಪ್ರವಾಸಿ ಆಕರ್ಷಣೆ..
ತಲುಪಲು ಫೆರ್ರಿಯ ಸವಲತ್ತು. ಅದಕ್ಕೆ ಸ್ವಲ್ಪ ದೂರದಲ್ಲಿಯೇ ಇರುವ ಹೊಸದಾಗಿ ಸ್ಥಾಪಿತವಾಗಿರುವ ತಿರುವಳ್ಳವರ್
ಮೂರ್ತಿ..ಎತ್ತರ ೧೬೩ ಅಡಿ ಆಕಾರದಲ್ಲಿ ವಿವೇಕಾನಂದ ಸ್ಮಾರಕಕ್ಕಿಂತ ಎತ್ತರದ್ದು. ತಮಿಳರ ಹಿರಿಮೆ ಮತ್ತೊಮ್ಮೆ
ಮೆರೆಸುವ ಅವಕಾಶ. ವಿವೇಕಾನಂದ ಸಂತ  ತಿರುವಳ್ಳವರ್ ಕವಿ . ಯಾರು ಮೇಲು ಇದು ತಲೆಯಲ್ಲಿ ಹುಳಬಿಡೋ
ವಿಚಾರ.ತಮಿಳರು ದಾರಿ ತೋರಿದ್ದಾರೆ. ಕನ್ಯಾಕುಮಾರಿಯ ಪ್ರತಿಮೆಯ ತುಂಬ ಬಳಿದ ಅರಿಷಿಣ. ಹೊಳೆಯುವ ಮೂಗುತಿ ಕಾಣಲಿಲ್ಲ.ಕೇಳಲು ನಾವಿಕರಿಗೆ ಅದರ ಪ್ರಭೆಯಿಂದ ವ್ಯತಿರಿಕ್ತ ಪರಿಣಾಮ ಆಗಿದ್ದಕ್ಕೆ ಮೂಗುತಿ ತೆರೆದು ಆ ದಿಕ್ಕನ್ನು  ಗೋಡೆಯಿಂದ ಮುಚ್ಚಿದ್ದಾಗಿ ಹೇಳಿದರು. ಅಲ್ಲಿಯ ಸೂರ್ಯಾಸ್ತ ಹಾಗೂ ಮರುದಿನದ ಸೂರ್ಯೋದಯ ಅಪರೂಪ. ಒಂದೇ ಊರಲ್ಲಿ ಎರಡೂ ನೋಡುವ ಭಾಗ್ಯ ಬೇರೆ ಎಲ್ಲಿಯಾದ್ರೂ ಇದೆಯೇ 

ರಾಮೇಶ್ವರಕ್ಕೆ ಹೋಗುವಾಗಲೇ ಎದಿರಾದದ್ದು ದೈತ್ಯ "ಪಾಂಬನ್ ಸೇತುವೆ" .ರಾಮ ನಿಜಕ್ಕೂ ಸೇತುವೆ ಕಟ್ಟಿದ್ದನೋ
ಇಲ್ಲವೋ ಗೊತ್ತಿಲ್ಲ. ಆದರೆ ಇದು ಮಾನವ ನಿರ್ಮಿತವಾದದ್ದು. ಅವನ ಅಸೀಮ ಜಾಣತನಕ್ಕೆ ನಿದರ್ಶನವದು. ಗುಡಿಯ
ಎದಿರೇ ಸಮುದ್ರ...ಬಹುಷಃ ನಾ ಇದುವರೆಗೂ ನೋಡಿದ ಸಮುದ್ರ ತೀರದಲ್ಲಿ ಇದರಷ್ಟು ಹೊಲಸು ಮತ್ತಾವುದಿರಲಿಲ್ಲ.
ದೊಡ್ಡ ಗುಡಿ ಅಲ್ಲಿಯವರು ಹೇಳುವ ಹಾಗೆ ಎಕರೆ ಗಟ್ಟಲೇ ವಿಸ್ತೀರ್ಣ. ಅಲ್ಲಿ ಸುಮಾರು ೨೭ ಕುಂಡ/ಭಾವಿ ಅವುಗಳ ಸ್ನಾನ ಮಾಡಿಸಲು ಬಕೆಟ್ ಹಿಡಿದು ಕಾದುನಿಂತ ಪೂಜಾರಿಗಳು. ಒದ್ದೆಯಲ್ಲಿಯೇ ಭಾವಿ ಭಾವಿ ಸುತ್ತಿ ಅಂತೂ ದರ್ಶನದ ವೇಳೆ ಮುಗಿಯುವುದರಲ್ಲಿಯೇ  ಸೀತೆ ಪೂಜಿಸಿದ ಈಶ್ವರನನ್ನು ನೋಡಿದೆ. ಹೊರಗಡೆ ರಾಮ ಯುದ್ಧಕ್ಕೆ ಹೋಗುವ ಮೊದಲು ಪ್ರಾರ್ಥಿಸಿದ ಲಿಂಗವೂ ಇದೆ. ಹಾಗೆ ಊರ ಹೊರಗೆ ಸೀತಾ ಕುಂಡ, ತೇಲುವ ಕಲ್ಲುಗಳ ಗುಡಿ, ರಾಮಪಾದ  ಹೀಗೆ ಹತ್ತು ಹಲವಿವೆ. ನಂಬಿದವರಿಗೆ ಪರಮಾನ್ನ.

ಇದು ಪ್ರವಾಸ ಕಥನ ಅನ್ನಲೋ ಅಥವಾ ಆ ದಿನಗಳಲ್ಲಿ  ನನ್ನಲ್ಲಿ  ಎದ್ದ ತಾಕಲಾಟಗಳ ಪದರೂಪ ಅನ್ನಲೋ ತಿಳಿಯುತ್ತಿಲ್ಲ. ಇದು ನಿಮ್ಮ ಮುಂದಿದೆ. ಓದಿ ತಪ್ಪು ಒಪ್ಪು ತಿಳಿಸಿ...