Friday, November 11, 2011

ಯಯಾತಿ ಸಿಂಡ್ರೋಮು

"ಕೊಡು ಕೊಡು ಭಗವಂತ...."
ಇಲ್ಲ ಮಗಳ ಸಲುವಾಗಿ ವರ ಕೇಳಲಿಕ್ಕೆ ಹತ್ತಿಲ್ಲ ಅದಕಿನ್ನೂ ವ್ಯಾಳ್ಯೆ ಅದ. ಇದು ಏನಿದ್ರೂ ನಂದು ಡಿಮಾಂಡು.
ಯಾರಿಗೆ ಕೇಳಕೋಬೇಕು ಅಂತ ಗೊತ್ತಾಗಲಿಲ್ಲ ಹಿಂಗಾಗಿ ಆ ಜಾಗ..... ಅದ. ನಂದೇನೂ ಅಂಥಾ ಮಹತ್ವದ್ದು
ಕೋರಿಕೆ ಅಲ್ಲ ಆದ್ರ ಇದನ್ನು ಓದಿ ಯಾರಿಗರ ಕರುಣಾ ಬಂದು ,ಮುಂದಬಂದು ಸಹಾಯ ವಗೈರೆ ಮಾಡಾವ್ರಿದ್ರ
ನಂದೇನೂ ಅಭ್ಯಂತರ ಇಲ್ಲ.ಈ ವಿಷಯ ಮೊದ್ಲ ಹೇಳೂದು ಸರಿ ಅನಿಸ್ತು. ಅದಕ್ಕ ಹೇಳತೇನಿ.
ನೇರವಾಗಿ ಹೇಳತೇನಿ.ನನಗೂ ಈಗೀಗ"ಯಯಾತಿ ಸಿಂಡ್ರೋಮ್" ಸುರು ಆಗೇದ.ಇದೇನಿದು ಅಂತ ತಲಿಕೇಡಿಸ್ಕೊಬ್ಯಾಡ್ರಿ.
ಆ ಕತಿ ನಿಮಗೆಲ್ಲ ಗೊತ್ತಿದ್ದದ್ದ ಹಿಂಗಾಗಿ ಮತ್ತ ಅದನ್ನ ಏನು ಹೇಳೋದು.ಒಂದು ಬದಲಾವಣೆ ಅದ ನನಗ ಪುರೂರವ ನಂತ
ಮಗಾಇಲ್ಲ ಹಿಂಗಾಗಿ ಆ ಕತಿ ಇಲ್ಲಿ ರಿಪೀಟು ಆಗಲಾರದು. ಆದ್ರ ವಾಂಛ್ಹಾ ಮಾತ್ರ ಯಯಾತಿದು ನನ್ನೊಳಗ ಆವಾಹಿಸಿಕೊಂಡದ.
ಈ ಬದಲಾವಣೆ ನಾ ಫೀಲ್ ಮಾಡಲಿಕ್ಕೆ ಹತ್ತಿ ಭಾಳದಿನಾ ಆದ್ವು. ಸುರುಆಗಿದ್ದು ಮಾರಿಷಸ್ ನ್ಯಾಗ.ಅಲ್ಲೊಂದು ಬೀಚು ಅದರ
ದಂಡಿತುಂಬ ಲಾವಣ್ಯವತಿಯರ ದಂಡು..ಕೈಯಾಗ ಕೆಮರಾ ಇತ್ತು ಸುಂದರಿಯರನ್ನು ಕೆಮರಾದಾಗ ಸೆರಿಹಿಡಿಯೋ ಹಂಬಲ
ನಂದು.."ಏ ಅಂಕಲ್ ಕ್ಯಾ ಕರ್ ರಹೆ ಹೋ.." ಎನ್ನುವ ಕುಹಕ ಪ್ರಶ್ನೆ ಸಹೋದ್ಯೋಗಿಯದ್ದು ಹಾಗೆಯೇ ಇನ್ನೊಬ್ಬ ಸಹೋದ್ಯೋಗಿ
ಯ ಕಿಚಾಯಿಸುವ ಹಾಡು..."ಅಭಿ ತೋ ಮೈ ಜವಾನ್ ಹುಂ..". ಅಂಕಲ್ ಅನ್ನುವ ಪಟ್ಟ ದೊರೆತಿದ್ದು ಮಾರಿಷಸ್ ನೊಳಗ.
ಆ ಪದವಿಗೆ ಭೂಷಣ ಅನ್ನುವಹಂಗ ಹಣಿಕಿ ಹಾಕುವ ಬಿಳಿಕೂದಲ, ದಾಡಿ ಇತ್ಯಾದಿ.ಕೆಟ್ಟ ಅನಸ್ತದ ಯಾಕಂದ್ರ ವಯಸ್ಸಾತು ನನಗ
ಇದು ನನಗ ಬ್ಯಾರೆಯವ್ರು ಹೇಳಲಿಕ್ಕೆ ಸುರು ಮಾಡಿದ್ರು.ಏನು ಮಾಡುವುದು ತಿಳಿವಲ್ತು. ಡೈ ವಗೈರೆ ಭಾಳದಿನಾ ಟಿಕಾಯಿಸುವುದಿಲ್ಲ
ಮನಸ್ಸು ಇನ್ನೂ ರೆಕ್ಕಿಬಿಚ್ಚಿ ಹಾರಬೇಕಂತದ ಆಕಾಶಾನೂ ವಿಸ್ತಾರ ಅದ ಕಲರಫುಲ್ ಅದ ರೆಕ್ಕಿ ಬಡೀಲಿಕ್ಕೆ ಶಕ್ತಿ ಬೇಕಾಗೇದ
ನೀವು ಹೇಳಬಹುದು "ಶಕ್ತಿವರ್ಧಕ'ಔಷಧಿಗಳು ಬೇಕಾದಷ್ಟವ ಅಂತ ಆದ್ರ ನಾ ಹಪಾಪಿಸುವುದು ನಿಜವಾದ ಶಕ್ತಿಗೆ.
ಮೈಸೂರಾಗ ವಿಪ್ರೋ ಕ್ಯಾಂಪಸ್ಸಿನೊಳಗ ಎರಡುದಿನಾ ಆತು. ಸಿಂಡ್ರೋಮು ಇನ್ನೂ ಜಾಸ್ತಿಆಗೇದ. ಈಗಿನ ಪೀಳಿಗಿ ಭಾಳ ಚಾಲೂ.
ಓದತಿರಬೇಕಾದ್ರ ಒಬ್ಬರಿಗೊಬ್ಬರು ಪಟಾಯಿಸಿಕೊಳ್ತಾರ. ಅಕಸ್ಮಾತ ಒಂದ ಕಂಪನಿಯೊಳಗ ಕೆಲಸ ಸಿಕ್ತು ಅಂದ್ರಂತೂ ಕೇಳಬ್ಯಾಡ್ರಿ.
ಜೋಡಿನ ಊಟಾ ಮಾಡಬಹುದು..ನಗಾಡಬಹುದು ಇತ್ಯಾದಿ..! ಹೋಗಲಿ ಅದು ಅವರು ಪಡಕೊಂಡು ಬಂದಿದ್ದು ನೋಡಿ ನೋಡಿ
ಹೊಟ್ಟಿಉರಿ ಆಗಿ ಕಾಫಿ ಕುಡಿಯೋದು ಮಾತ್ರ ನಾ ಕೇಳಕೊಂಡು ಬಂದಿದ್ದು.ಏನುಮಾಡುವುದು ನಮ್ಮ ಕಾಲಕ್ಕ ಕಂಪ್ಯೂಟರ್ ಇರಲಿಲ್ಲ
ಕ್ಯಾಂಪಸ್ಸ ಇರಲಿಲ್ಲ ,ಗರ್ಲಫ್ರೆಂಡು ಇರಲಿಲ್ಲ , ಧೈರ್ಯಾನೂ ಇರಲಿಲ್ಲ. ಹಿಂಗ ಈ "ಇಲ್ಲ" ಅನ್ನುವುದರ ಪಟ್ಟಿ ಈಗ ಮಾಡಬಹುದು..
ಆಮ್ಯಾಲ ಒಂದು ವೇಳೆ ಇದ್ದಿದ್ರ ನಾ ಏನ ಮಾಡಬಹುದಾಗಿತ್ತು ಅನ್ನುವ ರಮ್ಯ ಕಲ್ಪನಾ ಮಾತ್ರ ನಾ ಈಗ ಮಾಡಬಹುದು.
ಸ್ವಲ್ಪ ಸೀರಿಯಸ್ ಆಗೂದಾದ್ರ ಈಗಿನ ಪೀಳಿಗೆ ನಮಕಿಂತಾನೂ ಸ್ವತಂತ್ರ ಅದ ,ಅವಲಂಬಿತ ಅಲ್ಲ ತಮ್ಮ ನಿರ್ಧಾರ ತಾವ ಮಾಡುವ
ಛಾತಿ ಅದ. ಹಿಂಗ ನೂರೆಂಟು ಪ್ಲಸ್ ಪಾಯಿಂಟ್ ಅವ.ಅದಕ್ಕ ಅವರಿಗೆ ಅಭಿನಂದನೆ ಹೇಳಬೇಕು.
ನನ್ನ ಸಮಸ್ಯಾ ಹಂಗ ಉಳದದ. ಪರಿಹಾರ ಸಿಗಬಹುದು ನಿಮ್ಮೊಡನೆ ಹಂಚಿಕೊಳ್ಳುವುದರಿಂದ ಅಂತ ಅನಿಸ್ತು.
ನೋಡ್ರಿ ಹಿರ್ಯಾರು, ಗೆಳ್ಯಾರು ಸಲಹಾ ಸೂಚನಾ ಕೊಡ್ರಿ. ಈ ಯಯಾತಿ ಸಿಂಡ್ರೋಮಿಗೆ ಏನರ ಔಷದಿ ಇದ್ರ ಹೇಳ್ರಿ..!!











Thursday, November 3, 2011

ಮಾರಿಷಸ್ ಕವಿತೆಗಳು.....

ಎರಡು ಕವಿತೆಗಳು ಹೊರಡಿಸುವ ದನಿ ಭಿನ್ನ .ಮೊದಲನೇಯದ್ದು ಬರೆದಾಗ ಅದಿನ್ನೂ ಕಿಚ್ಚು ಹೊತ್ತಿದ ಸಮಯ. ಎರಡನೇದು
ಬರೆವಾಗ ಸ್ಥಿತಿಬಗ್ಗೆ ಒಂಥರಾ ಒಪ್ಪಂದ ಆಗಿಹೋಗಿತ್ತು. ಇದಮಿತ್ಥಂ ಅಂದಹಾಗೆ. ಕವಿತೆಗಳು ನಿಮಗೆ ಇಷ್ಟಆದಲ್ಲಿ ನನ್ನ ಕಷ್ಟ
ಸಾಫಲ್ಯವಾಗಬಹುದೇನೋ..

೧)
ಮಾವಿನ ಗಿಡದಲ್ಲಿ ಇಲ್ಲೀಗ
ಹೂವಿನ ಒರತೆ..
ಒಂಟಿಹಾಸಿಗೆಯ ತುಂಬ ಹೊದೆಯಲು
ಇವೆ ನೂರೆಂಟು ಚಿಂತೆ.
ಅಪರಿಚಿತ ಮುಖ, ಭಾಷೆಗಳ ನಡುವೆ
ಬೇಯುತಿಹೆ ನಾನಿಲ್ಲಿ
ಮೊಬೈಲಿನಲಿ ಅವಿತ ದಾದಾಬರ್ಮನ್ ಕೂಡ
ನನ್ನ ವಿಷಾದ ಪ್ರತಿಫಿಲಿಸಿಹ...
"ಮಾಝಿ ಓ ರೇ ಮಾಝಿ...'
ಸುತ್ತ ಕವಿದ ಸಮುದ್ರ ಲಂಘಿಸಿ
ಹಾರದ ಒಂಟಿ ರಾಮ ನಾನು..
ಸೀತೆಯ ಛಾಯೆ ನಿನ್ನ ನಿಟ್ಟುಸಿರಲ್ಲಿದೆ
ಅರಿವು ನನಗೂ ಇದೆ.
ನಮ್ಮ ನೋವು ಮಾವಿಗಿಲ್ಲ
ಹೂ ತೊನೆದು ಪೀಚುಗಾಯಿ ನಕ್ಕಿವೆ
ಸಾಗರದ ಅಲೆಯಲ್ಲೂ ಅಬ್ಬರವಿಲ್ಲ
ನೀರವತೆ ನನ್ನಂತೆ ಅದೂ ಹೊದ್ದಿದೆ
ವಿರಹ ಅಂದರೆ ಇದೆಯೇ
ನೀರವ ಮನ ಖಾಲಿ ಮಧು ಪಾತ್ರೆ
ಹಸುರುಟ್ಟು ನಲಿಯುವ ಬುವಿ ಬಾನು
ಉಸಿರು ಉಸಿರಿಗೆ ತಾಕದೆ ಬೇಯುವ
ನಾನು ನೀನು.....!!


೨)
ಬದುಕಿನ ಗತಿ ಬದಲಿಸುವ ಛಲ ಇತ್ತು
ಪರಿಣಾಮ ಇದೇ ಅಂತ ಗೊತ್ತಿದ್ದರೆ
ಉಸಾಬರಿ ಮಾಡುತ್ತಿರಲಿಲ್ಲ..
ಹೊನ್ನ ಕೂಳಿನ ಆಸೆ ದೇಶ ಬಿಡಿಸಿತು
ಡಾಲರ್ರಿಗೆ ತಾಕತ್ತಿದೆ
ಇಡೀ ಜಗ ಅದರ ಕೆಳಗೆ ನಲುಗಿದೆ
ಗರಿ ಗರಿ ನೋಟುಗಳಿಗೆ ಗತ್ತಿದೆ ಠೀವಿದೆ
ನೋವು ಉಣ್ಣಿಸುವ ಖಯಾಲಿಯೂ ಇದೆ
ಬಂದಾಗಿದೆ ಈಗ ಎಲ್ಲ ತೊರೆದು
ದಿನ ಕಳೆಯುವುದಿದೆ ಹಾಗೂ ಹೀಗೂ
ರಾತ್ರಿ ಮಾತ್ರ ಬೆತ್ತಲಾಗಿ ನಿಲ್ಲುತ್ತದೆ
ಕನ್ನಡಿಯಲಿ ನನ್ನ ಇರುವು ಕರಗುತಿದೆ...!!