ಹೌದು ಈ ಪ್ರಶ್ನೆ ಕಾಡುತ್ತದೆ. ಧರ್ಮ ಅಥವಾ ಧಾರ್ಮಿಕ ನಂಬಿಕೆಗಳು ವ್ಯಕ್ತಿಗತ ಹಾಗಂತ ಜನ
ತೀರ್ಥಯಾತ್ರೆ ಅಥವಾ ಪುಣ್ಯಕ್ಷೇತ್ರಕ್ಕೆ ಹೋಗುವುದು ಕಮಿಯಾಗಿಲ್ಲ. ಆದರೆ ಪುಣ್ಯಕ್ಷೇತ್ರಗಳಲ್ಲಿ ಬದಲಾವಣೆಯಾಗಿದೆಯೆ
ಇವು ನಮ್ಮ ನಂಬಿಕೆಗಳನ್ನು ಶ್ರದ್ಧೆಗಳನ್ನು ಇನ್ನೂ ಜಾಸ್ತಿ ಮಾಡಿವೆಯೇ ಅಥವಾ ಅಲ್ಲಿರುವ ಅನಾಚಾರ, ಅವ್ಯವಸ್ಥೆ.
ಪೂಜಾರಿಗಳ ಹೊಟ್ಟೆಬಾಕತನ ಇವು ಮುಂದಿನ ಪೀಳಿಗೆಗಳು ಈ ಪುಣ್ಯಕ್ಷೇತ್ರಗಳತ್ತ ಮುಖಮಾಡುವುದನ್ನೇ ನಿಲ್ಲಿಸುವವೇ
ಇವೇ ಮುಂತಾದ ಪ್ರಶ್ನೆಗಳು ಹಿಂದೆಯೂ ಕಾಡಿದ್ದವು. ಮೊನ್ನೆ ಮಧುರೈ, ಕನ್ಯಾಕುಮಾರಿ,ರಾಮೇಶ್ವರ ಸುತ್ತಿದಾಗಲೂ
ಮತ್ತೆ ಮತ್ತೆ ಕಾಡಿವೆ.
ನಾನು ಅನೇಕ ದೇವಸ್ಥಾನ (ನಮ್ಮ ಕರ್ನಾಟಕ ಹಾಗೂ ಮಹಾರಾಷ್ಟ್ರ)ಗಳನ್ನು ಸಂದರ್ಶಿಸಿರುವೆ. ದೇವಸ್ಥಾನ ಅವುಗಳ
ಪರಿಸರ ಅಲ್ಲಿಯ ವಾತಾವರಣ ಭೇಟಿಯ ಮೊದಲು ಅನೇಕ ನಿರೀಕ್ಷೆಗಳನ್ನು ಹುಟ್ಟು ಹಾಕುತ್ತದೆ. ಖಂಡಿತವಾಗಿ ಅಲ್ಲಿ
ಹೋಗುವುದರಿಂದ ಪುಣ್ಯಕಮಾಯಿಯ ಸ್ವಾರ್ಥ ಇಲ್ಲ ಹಾಗಂತ ಕುಟುಂಬಸಮೇತ ಹೋಗುವುದಾದರೆ ಈ ಸ್ಥಳಗಳು
ಪ್ರಶಸ್ತ ಅನಿಸುತ್ತವೆ. ದೇವರು ಆ ಪುಣ್ಯಕ್ಷೇತ್ರಗಳಲ್ಲಿ ನಿಜಕ್ಕೂ ಇದ್ದಾನೆಯೇ ಇದ್ದರೆ ಅದೇಃಗೆ ಕಣ್ಣುಮುಚ್ಚಿಕೊಂಡಿದ್ದಾನೆ..
ಎರಡು ಸೆಕೆಂಡು ಕೈ ಮುಗಿದು ನಿಲ್ಲಲು ಬಿಡದೆ ರಟ್ಟೆಗೆ ಕೈ ಹಾಕಿ ಎಳೆಯುವ "ಸೇವಾ ನಿರತ"ರನ್ನು ನೋಡಿ...!
ಜನರು ದುಡ್ಡುಖರ್ಚು ಮಾಡಿಕೊಂಡು ಬರುವುದು ದರುಶನಕ್ಕೆ..ಕೈ ಮುಗಿದು ಕಣ್ಣಲ್ಲಿ ಒಂದರೆಕ್ಷಣವಾದರೂ ಪ್ರತಿಮೆ
ಕಣ್ಣುತುಂಬಿಕೊಳ್ಳಲು. ಆದರೆ ಅಲ್ಲಿಯ ಜನರಿಗಾಗಲಿ,ಪೂಜಾರಿಗಳಿಗಾಗಲಿ ಇದರ ಅರಿವೇ ಇಲ್ಲ. ಆ ದೇವಸ್ಥಾನ ತಮ್ಮ ಜಾಗೀರು ಎಂದು ಅವರು ತಿಳಿದಿರುವಂತಿದೆ. ಉದಾಹರಣೆಕೊಡುವುದಾದರೆ ತಿರುಪತಿಯಿಂದ ಹಿಡಿದು
ಉಡುಪಿ ವರೆಗೂ ಕೊಡಬಹುದು. ಹಲವು ದೇವಸ್ಥಾನಗಳಲ್ಲಿ ನಾವು ಕೊಡುವ ಹೂ,ಮಾಲೆ ಇತ್ಯಾದಿ ದೇವರಿಗೆ
ಸೇರದೆ ಮತ್ತೆ "ರಿ ಸೈಕಲ್" ಆಗಿ ಹೊರಗಿನ ಅಂಗಡಿಯಲ್ಲಿ ಮಾರಾಟಕ್ಕೆ ಹಾಜರಾಗುತ್ತವೆ. ಇದು ಯಾವುದಕ್ಕಾಗಿ
ಎಂಬುದು ಬಿಡಿಸಿ ಹೇಳಬೇಕಾಗಿಲ್ಲ.
೨೪/೧೨/೨೦೧೦ ರಿಂದ ೨೮/೧೨/೨೦೧೦ ರ ವರೆಗೆ ನಾನು ಹಾಗೂ ಹೆಂಡತಿ,ಮಗಳು ಮಧುರೈ,ಕನ್ಯಾಕುಮಾರಿ,
ರಾಮೇಶ್ವರ ಹೀಗೆ ಸುತ್ತಾಡಿಬಂದೆವು. ಮಧುರೈಯ ಮೀನಾಕ್ಷಿ, ಕನ್ಯಾಕುಮಾರಿಯ "ಕುಮಾರಿಅಮ್ಮನ್", ರಾಮೇಶ್ವರದ ರಾಮನಾಥ ಎಲ್ಲ ಪ್ರಸಿದ್ಧರೇ. ಆದರೆಸುತ್ತಲಿನ ಅನ್ಯಾಯ ಅಕ್ರಮ ನೋಡಿ ನೋಡಿ ಕುರುಡಾಗಿದ್ದಾರೆ..!
ಇನ್ನೊಂದು ವಿಚಿತ್ರ ಸಂಪ್ರದಾಯ ಗಮನಿಸಿದೆ. ಅದೆಂದರೆ ಅಯ್ಯಪ್ಪ ಮಾಲಾಧಾರಿಗಳಿಗೆ ನೀಡುವ ವಿಶೇಷ ಸವಲತ್ತು.
ಅವರನ್ನು ಸ್ಪೆಶಲ್ ಆಗಿ ನೋಡಿಕೊಳ್ಳಲಾಗುತ್ತಿತ್ತು.ಅವರು ಕ್ಯೂ ಹಚ್ಚದಿದ್ದರೂ ಪರವಾಗಿಲ್ಲ,ದೇವರ ಮುಂದೆ ಅವರಿಗೆ ಜಾಸ್ತಿಹೊತ್ತು ನಿಲ್ಲಲು ಅವಕಾಶ ಹೀಗೆ... ಈ ಮಾಲಾಧಾರಿಗಳು ಮಾಲೆ ಧರಿಸಿದಾಗ ಹೇಗೆ ಮಾಲೆ ತಗೆದಮೇಲೆ ಹೇಗೆ ಇದು ಎಲ್ಲರಿಗೂ ಗೊತ್ತಿರುವ ಮಾತು. ಕನ್ಯಾಕುಮಾರಿಯಲ್ಲಿ ನಮ್ಮ ಟ್ಯಾಕ್ಸಿ ಡ್ರೈವರ್ ಹೇಳುತ್ತಿದ್ದ ಅಯ್ಯಪ್ಪ
ಮಾಲಾಧಾರಿಗಳಿಂದ ಹೇರಳ ಆದಾಯವಿದೆ ದೇವಸ್ಥಾನಗಳಿಗೆ..ದಾನ ಧರ್ಮ ಮಾಡುತ್ತಾರೆ ಇತ್ಯಾದಿ...ಹೀಗಾಗಿ ಅವರಿಗೆ ವಿಶೇಷ ಸವಲತ್ತು ಅಂತ ಇರಬಹುದೇನೋ....!
ಮಧುರೈ ಅಲ್ಲಿಯ ರಸ್ತೆ ಅದರ ಮೇಲಿನ ಧೂಳು ನೋಡಿ ರೇಜಿಗೆಯಾತು.ಕಸ ಗುಡಿಸಲು ಹಳೆಕಾಲದ ಕಸಬರಿಗೆ ಬಳಸಲಾಗುತ್ತಿತ್ತು. ಅಲ್ಲಿಯ ಚಹಾ ಅಂಗಡಿ ಅದನ್ನು ಮಾಡುವ ವಿಧಾನ ವಿಶಿಷ್ಟವಾದದ್ದು. ಇನ್ನೊಂದು ಮುಖ್ಯವಿಶಯ
ಅಂದರೆ ರಾತ್ರಿ ವೇಳೆ ಅಂದರೆ ಮಧ್ಯರಾತ್ರಿ ನಂತರವೂ ಸಿಟಿಬಸ್ ಸೇವೆ ಇತ್ತು. ಹಾಗೂ ನಮ್ಮ ಕರ್ನಾಟಕಕ್ಕೆ ಹೋಲಿಸಿದರೆ ರೇಟೂ ಕಮ್ಮಿ. ಬೆಂಗಳೂರು ಈ ನಿಟ್ಟಿನಲ್ಲಿ ತೀರ ಹಿಂದೆ ಬಿದ್ದಿದೆ ಅನಿಸಿತು.ಅಲ್ಲಿ ಸಿಗುವ ಇಡ್ಲಿ,ವಡೆ, ದೋಸೆ ಅವುಗಳ ರುಚಿ ಅಪರೂಪದ್ದು. ಮೀನಾಕ್ಷಿ ದೇಗುಲ ಪುರಾತನದ್ದು..ಸುತ್ತಲೂ ಆಧುನಿಕತೆ ಆಕ್ರಮಿಸಿಕೊಂಡಿದೆ.
ಮಧುರೈ ತಮಿಳುನಾಡಿನ ಎರಡನೇ ದೊಡ್ಡ ನಗರ ಅಂತೆ. ಆದರೆ ಸ್ವಚ್ಛತೆ ಇಲ್ಲ, ಇನ್ನೊಂದು ನಿರಾಶೆ ಕಾದಿತ್ತು..
ಗಾಂಧಿಮ್ಯುಸಿಯಂ ಬಂದಾಗಿತ್ತು ಕಾರಣ ಕ್ರಿಸಮಸ್ ಆದರೆಅದೇ ಆವರಣದ ತಮಿಳುನಾಡು ಮ್ಯುಸಿಯಂ ತೆರೆದಿತ್ತು
ನಾನು ಕೇಳಿದೆ ಅದೇಕೆ ತಮಿಳಿಗರಿಗೆ ಕ್ರಿಸಮಸ್ ಇಲ್ವಾ ಅಂತ. ಅದನ್ನು ನೋಡಲು ಐದು ರೂಪಾಯಿ ಶುಲ್ಕಬೇರೆ..
ಆದರೆ ಅದಕ್ಕೆ ರಸೀತಿ ಇಲ್ಲ..ಆ ದುಡ್ಡು ಎಲ್ಲಿ ಹೋಗುತ್ತೆ ಅಂತ ಹೇಳುವ ಕಾರಣ ಇಲ್ಲ. ಊರನ್ನು ಇಬ್ಭಾಗಿಸಿ ಹರಿಯುವ "ವಾಯಿಗೈ" ನದಿ...ನದಿ ಸುತ್ತಲೂ ವ್ಯಾಪಿಸಿದ ಜೋಪಡಿಗಳು, ಕೊಳಚೆಗಳು ಇಡೀ ಊರಿಗೆ ತಮ್ಮ
ಸುವಾಸನೆ ಹರಡುತ್ತಿದ್ದವು.
ಕನ್ಯಾಕುಮಾರಿ ಭಾಳ ಕೇಳಿದ್ದೆ ಊರು ಚಿಕ್ಕದು ಸಮುದ್ರದ ದಂಡೆ ಸುತ್ತ ವ್ಯಾಪಿಸಿರುವ ಹೊಟೆಲ್ಗಳು, ವಸತಿ ಪ್ರದೇಶಗಳು. ವಿವೇಕಾನಂದ ಸ್ಮಾರಕ ಅದರ ಸೊಗಸು ವರ್ಣನೆಗೆ ಮೀರಿದ್ದು. ಅಲ್ಲಿಯ ಪ್ರಶಾಂತತೆ ಸುತ್ತಲಿನ ಸಮುದ್ರದ ಮೊರೆತಕ್ಕೆ ಮರುಳಾಗಿ ತರುಣ ಸನ್ಯಾಸಿ ತಪಗೈದಿದ್ದು. ಆದರೆ ಈಗ ಅದೊಂದು ಪ್ರವಾಸಿ ಆಕರ್ಷಣೆ..
ತಲುಪಲು ಫೆರ್ರಿಯ ಸವಲತ್ತು. ಅದಕ್ಕೆ ಸ್ವಲ್ಪ ದೂರದಲ್ಲಿಯೇ ಇರುವ ಹೊಸದಾಗಿ ಸ್ಥಾಪಿತವಾಗಿರುವ ತಿರುವಳ್ಳವರ್
ಮೂರ್ತಿ..ಎತ್ತರ ೧೬೩ ಅಡಿ ಆಕಾರದಲ್ಲಿ ವಿವೇಕಾನಂದ ಸ್ಮಾರಕಕ್ಕಿಂತ ಎತ್ತರದ್ದು. ತಮಿಳರ ಹಿರಿಮೆ ಮತ್ತೊಮ್ಮೆ
ಮೆರೆಸುವ ಅವಕಾಶ. ವಿವೇಕಾನಂದ ಸಂತ ತಿರುವಳ್ಳವರ್ ಕವಿ . ಯಾರು ಮೇಲು ಇದು ತಲೆಯಲ್ಲಿ ಹುಳಬಿಡೋ
ವಿಚಾರ.ತಮಿಳರು ದಾರಿ ತೋರಿದ್ದಾರೆ. ಕನ್ಯಾಕುಮಾರಿಯ ಪ್ರತಿಮೆಯ ತುಂಬ ಬಳಿದ ಅರಿಷಿಣ. ಹೊಳೆಯುವ ಮೂಗುತಿ ಕಾಣಲಿಲ್ಲ.ಕೇಳಲು ನಾವಿಕರಿಗೆ ಅದರ ಪ್ರಭೆಯಿಂದ ವ್ಯತಿರಿಕ್ತ ಪರಿಣಾಮ ಆಗಿದ್ದಕ್ಕೆ ಮೂಗುತಿ ತೆರೆದು ಆ ದಿಕ್ಕನ್ನು ಗೋಡೆಯಿಂದ ಮುಚ್ಚಿದ್ದಾಗಿ ಹೇಳಿದರು. ಅಲ್ಲಿಯ ಸೂರ್ಯಾಸ್ತ ಹಾಗೂ ಮರುದಿನದ ಸೂರ್ಯೋದಯ ಅಪರೂಪ. ಒಂದೇ ಊರಲ್ಲಿ ಎರಡೂ ನೋಡುವ ಭಾಗ್ಯ ಬೇರೆ ಎಲ್ಲಿಯಾದ್ರೂ ಇದೆಯೇ
ರಾಮೇಶ್ವರಕ್ಕೆ ಹೋಗುವಾಗಲೇ ಎದಿರಾದದ್ದು ದೈತ್ಯ "ಪಾಂಬನ್ ಸೇತುವೆ" .ರಾಮ ನಿಜಕ್ಕೂ ಸೇತುವೆ ಕಟ್ಟಿದ್ದನೋ
ಇಲ್ಲವೋ ಗೊತ್ತಿಲ್ಲ. ಆದರೆ ಇದು ಮಾನವ ನಿರ್ಮಿತವಾದದ್ದು. ಅವನ ಅಸೀಮ ಜಾಣತನಕ್ಕೆ ನಿದರ್ಶನವದು. ಗುಡಿಯ
ಎದಿರೇ ಸಮುದ್ರ...ಬಹುಷಃ ನಾ ಇದುವರೆಗೂ ನೋಡಿದ ಸಮುದ್ರ ತೀರದಲ್ಲಿ ಇದರಷ್ಟು ಹೊಲಸು ಮತ್ತಾವುದಿರಲಿಲ್ಲ.
ದೊಡ್ಡ ಗುಡಿ ಅಲ್ಲಿಯವರು ಹೇಳುವ ಹಾಗೆ ಎಕರೆ ಗಟ್ಟಲೇ ವಿಸ್ತೀರ್ಣ. ಅಲ್ಲಿ ಸುಮಾರು ೨೭ ಕುಂಡ/ಭಾವಿ ಅವುಗಳ ಸ್ನಾನ ಮಾಡಿಸಲು ಬಕೆಟ್ ಹಿಡಿದು ಕಾದುನಿಂತ ಪೂಜಾರಿಗಳು. ಒದ್ದೆಯಲ್ಲಿಯೇ ಭಾವಿ ಭಾವಿ ಸುತ್ತಿ ಅಂತೂ ದರ್ಶನದ ವೇಳೆ ಮುಗಿಯುವುದರಲ್ಲಿಯೇ ಸೀತೆ ಪೂಜಿಸಿದ ಈಶ್ವರನನ್ನು ನೋಡಿದೆ. ಹೊರಗಡೆ ರಾಮ ಯುದ್ಧಕ್ಕೆ ಹೋಗುವ ಮೊದಲು ಪ್ರಾರ್ಥಿಸಿದ ಲಿಂಗವೂ ಇದೆ. ಹಾಗೆ ಊರ ಹೊರಗೆ ಸೀತಾ ಕುಂಡ, ತೇಲುವ ಕಲ್ಲುಗಳ ಗುಡಿ, ರಾಮಪಾದ ಹೀಗೆ ಹತ್ತು ಹಲವಿವೆ. ನಂಬಿದವರಿಗೆ ಪರಮಾನ್ನ.
ಇದು ಪ್ರವಾಸ ಕಥನ ಅನ್ನಲೋ ಅಥವಾ ಆ ದಿನಗಳಲ್ಲಿ ನನ್ನಲ್ಲಿ ಎದ್ದ ತಾಕಲಾಟಗಳ ಪದರೂಪ ಅನ್ನಲೋ ತಿಳಿಯುತ್ತಿಲ್ಲ. ಇದು ನಿಮ್ಮ ಮುಂದಿದೆ. ಓದಿ ತಪ್ಪು ಒಪ್ಪು ತಿಳಿಸಿ...