Saturday, November 27, 2010

ಕುವೆಂಪು ಅಡ್ಡಾಡಿದ ಕುಪ್ಪಳಿಯಲ್ಲಿ...




ದಿ.೨೧ ರಿಂದ ೨೩ ರ ವರೆಗೆ ಕುಪ್ಪಳಿಯಲಿ ನಡೆದ ಕಥಾಕಮ್ಮಟದಲ್ಲಿ ಭಾಗವಹಿಸುವ
ಸದವಕಾಶ ಬಂದಿತ್ತು. ನನ್ನ ತಮ್ಮ ಚಾರುದತ್ತ ಈಗಾಗಲೇ ಇಂತಹ ಕಮ್ಮಟಗಳಲ್ಲಿ ಪಾಲ್ಗೊಂಡವ..ಮೊದಲೇ ಕಿವಿ ಮಾತು ಹೇಳಿದ್ದ ತೀರ ದೊಡ್ಡ ನಿರೀಕ್ಷೆ ಇಟ್ಟುಕೊಂಡು ಹೋಗಬೇಡ ಅಂತ. ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ಹೋಗುವ
ಬಸ್ಸು ಕುಪ್ಪಳಿಕ್ರಾಸ್ ಗೆ ನನ್ನ ಇಳಿಸಿದಾಗ ಗಂಟೆ ಮುಂಜಾನೆಯ ಒಂಬತ್ತಾಗಿತ್ತು. ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ, ಕುವೆಂಪು ಪ್ರತಿಷ್ಠಾನ, ಕುವೆಂಪು ಅಧ್ಯಯನ ಕೇಂದ್ರ ಕನ್ನಡ ವಿ.ವಿ ಹೀಗೆ ಮೂರು ಸಂಸ್ಥೆಗಳು  ಈ ಕಮ್ಮಟ
ಆಯೋಜಿಸಿದ್ದವು. ಹಾಗೂ ಇದು ಅವರ ಯಶಸ್ವಿ ಮೂರನೇ ವರ್ಷದ ಆಯೋಜನೆ.  ಊಟ ,ತಿಂಡಿ ಗಾಗಿ ತೀರ್ಥಹಳ್ಳಿಯಿಂದ ಬಂದ ಭಟ್ಟರು ಎಲ್ಲ ಶಿಬಿರಾರ್ಥಿಗಳ ತೂಕ ಎರಡು-ಮೂರುದಿನಗಳಲ್ಲಿ ಒಂದೆರಡು ಕೆಜಿ ಹೆಚ್ಚಿಗೆಯಾಗುವಂತೆ ನೋಡಿಕೊಂಡ್ರು....!

ನಮಗೆ ಓದಲು ಹಾಗೂ ನಮಗನಿಸಿದ ಟಿಪ್ಪಣಿ ಬರೆಯಲು ಮೊದಲೇ ಆಯ್ದ ಕತೆಗಳನ್ನು ಕಳಿಸಿಕೊಡಲಾಗಿತ್ತು.
  ಕೇವಲ ಮುವ್ವತ್ತು ಜನರಿಗೆ ಅವಕಾಶ ಅಂತ ಹೇಳಿದ ಆಯೋಜಕರು ಅವಕಾಶ ಕಲ್ಪಿಸಿದ್ದು ಸುಮಾರು ಐವ್ವತ್ತು ಜನರಿಗೆ. ನನ್ನಂತೆ ಪತ್ರಿಕೆ ಓದಿ ಅರ್ಜಿ ಹಾಕಿ
ಬಂದವರು ಕೇವಲ ಏಳೆಂಟು ಜನ ಉಳಿದೆಲ್ಲವರೂ ಆಹ್ವಾನಿತರು. ಅಂದರೆ ಕಾರ್ಯದರ್ಶಿಗಳ ಸ್ನೇಹಿತರು, ಅವರ ಶ್ರೀಮತಿಯರು  ಹೀಗೆ. ಬಹುಪಾಲು ಜನ ಅಧ್ಯಾಪಕರು. ಕತೆಗಳನ್ನು ಚರ್ಚೆ ನಡೆಯುವಾಗಲೇ ಓದುತ್ತಿದ್ದ ಮಹನೀಯರು. ಶಿಬಿರದ ನಿರ್ದೇಶಕರು  ಡಾ. ಕೆ ವಿ ನಾರಾಯಣ ಅವರು ಅವರ ಹೆಂಡತಿ (ದೋಪ್ದಿ ಕತೆಯ ಅನುವಾದಕಿ)ನೂ ಭಾಗವಹಿಸಿದ್ರು. ಉದ್ಘಾಟನೆ ಇತ್ಯಾದಿ ಮುಗಿದು ಶಿಬಿರದ ಆಶಯ ನಾರಾಯಣ ಅವರು ಹೇಳಿದ್ರು.
ಅವರ ಭಾಷೆ ತೂಕದ್ದು  ಬಳಸಿದ ಪದಗಳು ನನ್ನ ತಲೆಮೇಲಿಂದಲೇ ಹಾರಿಹೋದದ್ದೇ ಹೆಚ್ಚು. ನಾನು ಅರಿಕೆ ಮಾಡಿಕೊಂಡೆ..ಸಾದಾ ಸೀದಾ ಭಾಷೆ ಬಳಸಿ ಲೆಕ್ಕ ಪತ್ರ ಬರೆಯುವ/ನೋಡುವ ನನ್ನಂತಹದವರಿಗೆ ಇದು ಅರ್ಥ ಆಗೊಲ್ಲ ಅಂತ. ಬಹುಷ: ನಾರಾಯಣ ಅವರಿಗೆ ಇದು ಅಪಥ್ಯವಾಗಿತ್ತು..ಕಮ್ಮಟ ಮುಗಿಯುವವರೆಗೂ ಶೀತಲಸಮರ
ನಡೆದೇ ಇತ್ತು ನಮ್ಮಿಬ್ಬರ ನಡುವೆ. ನಾರಾಯಣ ಅವರೇ ಕತೆ ಆರಿಸಿದ್ದು ಆ ಕತೆಗಳ ಥೀಮ್ ಹೆಣ್ಣುತನ.ಇದನ್ನು ಬರೆದವರು ಲೇಖಕಿಯರು ಮಾತ್ರಅಲ್ಲ ಪುರುಷರು ಸಹ. ನಮ್ಮನ್ನು ಐದು ಆರು ಜನರ ಗುಂಪಾಗಿ ವಿಂಗಡಿಸಲಾಗುತ್ತಿತ್ತು. ಸುಮಾರು ಅರ್ಧಗಂಟೆ ನಮ್ಮನಮ್ಮಲ್ಲಿ ಚರ್ಚೆ ಮಾಡಿಕೊಂಡು ನಮ್ಮಲ್ಲಿಯೇ ಒಬ್ಬರು ಟಿಪ್ಪಣಿ
ಮಾಡಿಕೊಂಡು ನಮ್ಮ ಗುಂಪಿನ ನಿಲುವು ಕತೆಗಳ ಬಗ್ಗೆ ಹೇಳಬೇಕಾಗುತ್ತಿತ್ತು.ಪೂರಕವಾಗಿ ಉಳಿದವರು ಪ್ರಶ್ನೆ ಕೇಳುತ್ತಿದ್ದರು ಹಲವೊಮ್ಮೆ ನಾರಾಯಣ್ ಅವರೂ ಸಹ ಪ್ರಶ್ನೆಗಳ ಬಾಣ ಬಿಡುತ್ತಿದ್ದರು.ಪ್ರತಿಬಾರಿ ಚರ್ಚೆಗೆ  ಎರಡು ಕತೆ ಕೊಡಲಾಗುತ್ತಿತ್ತು. ನಮ್ಮ ಕನ್ನಡದ ಹೆಸರಾಂತರು ಬರೆದ ಕತೆಗಳು..ನಾ ಓದಿದಾಗ ನನಗನ್ನಿಸಿದ ಭಾವ ಬೇರೆ
ಆದರೆ ಗುಂಪಿನಲ್ಲಿ ಚರ್ಚಿಸಿದಾಗ ಅದು ಹೊಂದುವ ರೂಪವೇ ಬೇರೆ  ಈ ಮಾರ್ಪಾಟು ಅಚ್ಚರಿ ಗೊಳಿಸಿತ್ತು. ಆದರೆ
ಕಥೆಗಳನ್ನು ಮಥಿಸಿ ಮಥಿಸಿ ನೋಡಿದಾಗ ಸಿಗುವ ಆನಂದನೇ ಬೇರೆ...!

ನಾವು ಚರ್ಚಿಸಿದ ಕೆಲವು ಕತೆಗಳು ಹೀಗಿವೆ...

ಮೇಲೂರಿನ ಲಕ್ಷಮ್ಮ.....    ಮಾಸ್ತಿ
ಕರುಳ ಕತ್ತರಿ.......           ಶ್ಯಾಮಲಾ ಬೆಳಗಾಂವಕರ
ಹೊರಟು ಹೋದವನು---   ಡಾ. ವೀಣಾ ಶಾಂತೇಶ್ವರ್
ದೋಪ್ದಿ     -------         ಮೂಲ: ಮಹಾಶ್ವೇತಾ ದೇವಿ
ಕತೆಯಾದಳು ಹುಡುಗಿ--    ಯಶವಂತ  ಚಿತ್ತಾಲ
ದೇವರ ಹೂ------         ಡಾ. ಬೆಸಗರಹಳ್ಳಿ ರಾಮಣ್ಣ
ಶಕುಂತಲೆಯೊಂದಿಗೆ
ಕಳೆದ ಅಪರಾಹ್ನ-------   ವೈದೇಹಿ
ನಾಕನೇ  ನೀರು--           ನಾಗವೇಣಿ

ಕೊನೆಯ ಕತೆಯ ಲೇಖಕಿಯೂ ನಮ್ಮ ಜೊತೆಗಿದ್ರು.ನಮಗೆ ಮೂಡಿಬಂದ ಸಂದೇಹ ಅನುಮಾನ ಪ್ರಶ್ನೆಗಳಿಗೆ ಉತ್ತರಿಸಿದರು. ಹೀಗೆ ಬರೆದವರ ಜೊತೆ ಮುಖಾಮುಖಿ ಯಾಗುವುದು ಹೊಸ ಖುಷಿ ಕೊಟ್ಟಿತು.  ನಾಗವೇಣಿ ತಾವು
ಬೆಳೆದು ಬಂದ ಹಿನ್ನೆಲೆ ಮತ್ತು ಈಗಿನ ದಕ್ಷಿಣಕನ್ನಡ ಜಿಲ್ಲೆಯ ಪರಿಸ್ಥಿತಿ ಹೀಗೆ ವಿವರವಾಗಿ ಚರ್ಚಿಸಿದರು.ಕಮ್ಮಟದ
ಎರಡನೇ ದಿನ ಖ್ಯಾತ ಲೇಖಕ ಕುಂವಿ ಬಂದು ತಮ್ಮ ಅನುಭವ ಹಂಚಿಕೊಂಡಿದ್ದು ವಿಶೇಷವಾಗಿತ್ತು.ನಿರರ್ಗಳವಾಗಿ
ಮಾತಾಡೋ ಕುಂವಿ ಮಾತು ಕೇಳೋದು ಸೊಬಗು.

ಕೇವಲ ಧನಾತ್ಮಕ ಅಂಶ ಮಾತ್ರ ಹೇಳೋದಿಲ್ಲ.ಕಮ್ಮಟದಲ್ಲಿ ಹಲವಾರು ನ್ಯೂನತೆಗಳಿದ್ದವು.ಮುಖ್ಯವಾಗಿ ಅಭ್ಯರ್ಥಿಗಳ ಕೊರತೆ.ನಾ ಉಲ್ಲೇಖಿಸಿದ ಹಾಗೆ ಏಳೆಂಟು ಜನ ಅರ್ಜಿ ಗುಜರಾಯಿಸಿದವರು ಉಳಿದೆಲ್ಲ ಆಹ್ವಾನಿತರು.
ಹೀಗೆ ಬಂದವರು ತಾವೇ ಹೇಳಿಕೊಂಡಹಾಗೆ ಸಾಹಿತ್ಯದಲ್ಲಿ ಆಸಕ್ತಿಇದ್ದವರಲ್ಲ. ಸ್ನೇಹ ಪ್ರೀತಿಗೆ ಒತ್ತಾಯದಿಂದ ಮೂರುದಿನ ಚೇಂಜ್ ಅಂತ ಬಂದವ್ರು. ಕೆಲವರು ಕಾಲೇಜಿನ ಪ್ರೊಫೆಸರ್ರು. ಇನ್ನು ಚರ್ಚೆ ಏಕಮುಖವಾಗಿತ್ತು. ಯಾವಾಗ ಚರ್ಚೆಗೆ ತಳಹದಿಯಾಗಿ ಜಾತಿ ಮತ ಇರುತ್ತದೆಯೋ ಅಲ್ಲಿ ಅರ್ಥಪೂರ್ಣ ಚರ್ಚೆಯಾಗಲು ಸಾಧ್ಯವಿಲ್ಲ.
ಮೇಲಾಗಿ ನಾರಾಯಣ್ ಅವರು ಈಗಿನ ತಲೆಮಾರಿನ ವಸುಧೇಂದ್ರ,ಬೆಳಗೆರೆ,ಸುಮಂಗಲಾ ಮುಂತಾದವರ ಕೃತಿಗಳನ್ನು  ಸೀರಿಯಸ್ ಓದಿಗೆ ತಕ್ಕುದಲ್ಲ ಎಂದು ಅಪ್ಪಣೆ ಕೊಡಿಸಿದರು...! ಇನ್ನು ಭೈರಪ್ಪ ವೈಯುಕ್ತಿಕವಾಗಿ ಉದ್ಧಾರವಾದ್ರು.ನನ್ನ ಪರಿಸ್ಥಿತಿ ಅಭಿಮನ್ಯವಂತಾಗಿತ್ತು. ಕಾದಾಡುವುದು ವ್ಯರ್ಥ ಅಂತ ತಿಳಿದು ಮೌನಕ್ಕೆ ಶರಣಾಗಿದ್ದೆ.
ಓತಪ್ರೋತವಾಗಿ ದಲಿತ,ಸ್ತ್ರೀವಾದ, ಶೋಷಣೆ ಹೀಗೆ ಮಾತು ಹರಿದಿತ್ತು.ಅದು ಕಂಠ ಶೋಷಣೆಯೋ ಅಥವಾ ನನ್ನ
ಕರ್ಣಶೋಷಣೆಯೋ ಗೊತ್ತಾಗಲಿಲ್ಲ.

ಮೇಲಿನ ಎಲ್ಲ ಓರೆ ಕೋರೆಗಳ ನಡುವೆ ನಾ ಮೂರುದಿನ ಹಿತ ಅನುಭವಿಸಿದೆ. ಸುತ್ತ ಚಾಚಿದ ಹಸಿರು, ಆಹ್ಲಾದಕರ ಗಾಳಿ ವಾಹನಗಳ ಹೊಲಸಿಲ್ಲದೆ ನಳನಳಿಸುವ ರಸ್ತೆಗಳು. ಕುವೆಂಪು ಅಡ್ಡಾಡಿದ ದಾರಿ ಅವರ ಸಮಾಧಿ ಇರುವ
ಕವಿಶೈಲ. ಅಲ್ಲಿ ನಾವೆಲ್ಲ ಹಾಡುಹಾಡಿದ ಹುಣ್ಣಿಮೆಯರಾತ್ರಿ...ಮರುದಿನದ ಸೂರ್ಯೋದಯ. ಕುವೆಂಪು ಬಳಸೋ ಎಲ್ಲ ವಸ್ತುಗಳನ್ನು  ಜತನದಿಂದ ಕಾಪಾಡಿ ನೋಡುಗರಿಗೆ ಬೇರೆ ಲೋಕ ಪರಿಚಯಿಸೋ ಕವಿಮನೆ."ಬಾ ಫಾಲ್ಗುಣ ರವಿ...ದರ್ಶನಕೆ" ಬರೆದ ನವಿಲ್ ಗುಡ್ಡದ ಸೊಬಗು..,"ದೇವರು ರುಜು ಮಾಡಿದ" ಬರೆದ ಚಿಬ್ಬಲಗುಡ್ಡೆಯ ತುಂಗೆಯ
ಮನಮೋಹಕ ದೃಶ್ಯ...ಕಣ್ಣುತುಂಬ ತುಂಬಿಕೊಂಡು ನಲಿದೆ.

ಅಲ್ಲೆಲ್ಲೋ ದನಿಮೊಳಗುತ್ತಿತ್ತು..."ನೂರು ಮತದ ಹೊಟ್ಟ ತೂರಿ...ಎಲ್ಲ ತತ್ವದೆಲ್ಲೆ ಮೀರಿ...". ಅವರ ನೆಲದಲ್ಲಿ
ನೆರಳಬುಡದಲ್ಲಿ ಇದ್ದರೇನು..ಜಾತಿ ಪಂಥ ಹೀಗೆ ಭ್ರಾಂತಿಯ ಗೋಡೆ ಕಟ್ಟಿಕೊಂಡು..ಕಮ್ಮಟದ ನೆವದಲ್ಲಿ  ವಿಷಕಾರುತ
ಕುವೆಂಪು ಅವರ ನಿಜ ತತ್ವ ಅರಿಯದೇ ಇರುವ ದನಿಯೂ ಇತ್ತು.    

Saturday, November 13, 2010

ಎಂದೂ ಮರೆಯದ ಹಾಡು---೭



ಈ ಲೇಖನದ ಸರಣಿ ಬಹಳ ದಿನಗಳಿಂದ ಖಾಲಿ ಇತ್ತು.ಬಹುಷಃ ವಿಶೇಷವಾದ ಗೀತೆಗೆ ಕಾಯುತ್ತಿತ್ತೇನೋ... ಈ ಸಲ ನಾನು ಆರಿಸಿದ ಹಾಡು "ದೇವರ್ " ಚಿತ್ರದ್ದು.ಇದು ೧೯೬೬ ರಲ್ಲಿ ಬಂದಿದ್ದು. ಈ ಚಿತ್ರಕ್ಕೆ
ರೋಶನ್ ಸಂಗೀತವಿತ್ತು. ಹಿಂದಿ ಚಿತ್ರರಂಗದಲ್ಲಿ ಮದನಮೋಹನ್ ನಂತರ ಗಜಲ ಸಂಯೋಜಿಸಿದವರಲ್ಲಿ  ರೋಶನ್
ಹೆಸರು ಸಹ ಮೇಲ್ಪಂಕ್ತಿಯದು.ಈ ಹಾಡು ಮುಕೇಶ್ ಹಾಡಿದ್ದು. ಮುಕೇಶ್ ನೋವಿನ ಭಾವಗಳಿಗೆ ದನಿಯಾದವ.ಈ ಹಾಡಿನಲ್ಲಿ ನೋವಿನ ಜೊತೆಜೊತೆಗೆ ಒಂದು ತೆರನಾದ ಸಾತ್ವಿಕ ಆಕ್ರೋಶ ಇದೆ. ಈ ಗೀತೆಯ ಭಾವನೆಗಳ ಏರಿಳಿತಕ್ಕೆ
ಮುಕೇಶ್ ದನಿ ಮುಕುಟಪ್ರಾಯವಾಗಿದೆ.ಬಹುಷಃ ಹಿಂದಿ ಚಿತ್ರರಂಗದಲ್ಲಿ ಮುಕೇಶ್ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಂಡವರಲ್ಲಿ ರೋಶನ್ ಒಂದು ಕೈ ಮೇಲೆ ಅಂತ ಹೇಳಬಹುದು.ಈ ಹಾಡು ಬರೆದಿದ್ದು ಆನಂದ ಬಕ್ಷಿ. ಈ ಅಪ್ರತಿಮ ಗೀತಕಾರನ ಬಗ್ಗೆ ಒಂದೆರಡು ಸಾಲು..

ಆನಂದ್ ಬಕ್ಷಿ ಹುಟ್ಟಿದ್ದು ೨೧/೦೭/೧೯೩೦ ರಲ್ಲಿ..ರಾವಲ್ಪಿಂಡಿಯಲ್ಲಿ.  ಸ್ವಾತಂತ್ರ್ಯಪೂರ್ವದಲ್ಲಿ ನೇವಿಯಲ್ಲಿದ್ದ.ಬಟವಾರಾ
ನಂತರ ಅವರ ಕುಟುಂಬ ಭಾರತಕ್ಕೆ ಬಂತು.ಇಲ್ಲಿ ಸೈನ್ಯದಲ್ಲಿ ಕೆಲಸಕ್ಕೆ ಸೇರಿದ.ಬರೆಯುವ ,ಹಾಡುವ ಖಯಾಲಿ ಬಕ್ಷಿಗೆ. ೧೯೫೬ ರಲ್ಲಿ ಸುಮಾರು ಅರವತ್ತು ಗೀತೆಗಳ ಜೊತೆಗೆ ಮುಂಬಯಿಗೆ ಬಂದಿಳಿದ. ಸಂಘರ್ಷ ಫಲ ನೀಡಲಿಲ್ಲ
ಹಲವು ರಾತ್ರಿ ದಾದರ್ ಸ್ಟೇಶನ್ ನ ವೇಟಿಂಗ್ ರೂಮ್ ಗಳಲ್ಲಿ ಕಳೆದ.ಒಂದೆರಡು ಚಿತ್ರಗಳಿಗೆ ಹಾಡು ಬರೆಯುವ ಅವಕಾಶ ಸಿಕ್ಕಿತಾದರೂ ಅವು ಜನರ ನಾಲಿಗೆ ಮೇಲೆ ನೆಲೆಯೂರಲಿಲ್ಲ. ೧೯೬೫ ರಲ್ಲಿ ಎರಡು ಚಿತ್ರಗಳು--
"ಹಿಮಾಲಯ್ ಕಿ ಗೋದ್ ಮೇ",","ಜಬ್ ಜಬ್ ಫೂಲ್ ಖಿಲೆ " ಹಿಟ್ ಆದವು.ಹಾಡು ಮನೆಮಾತಾದವು.ಆನಂದಬಕ್ಷಿ
ಹಿಂತಿರುಗಿ ನೋಡಲಿಲ್ಲ. ಸುಮಾರು ೩೫೦೦ ಹಾಡು ಬರೆದ ಬಕ್ಷಿ ಹಿಂದಿಸಿನೇಮಾದ ಹೊಳೆಯುವ ನಕ್ಷತ್ರ.

ನಾ ಆರಿಸಿದ ಗೀತೆ ಅವರ ಪ್ರತಿಭೆಗೊಂದು ಉದಾಹರಣೆ. ಚರ್ವಿತಚರ್ವಣ ಅನ್ನಬಹುದಾದ ಸನ್ನಿವೇಶ. ನಾಯಕನಿಗೆ
ಮೋಸ ಆಗಿರುತ್ತದೆ.ತನ್ನ ದುಃಖ ತೋಡಿಕೊಳ್ಳಲು ಅವನಿಗೆ ಹಾಡೊಂದೇ ದಾರಿ.ಸರಿ ಹಾಡುತ್ತಾನೆ ತನ್ನೆದೆಯ ನೋವು ಹೊರಹಾಕುತ್ತಾನೆ. ಗೀತಕಾರ ಇಂತಹ ಮಾಮೂಲಿ ಸನ್ನಿವೇಶದಲ್ಲೂ ತನ್ನ ಪ್ರತಿಭೆ ತೋರಿಸಬೇಕು. ಆ ನೋವು ತಾನೇ ಅನುಭವಿಸಿದ ಹಾಗೆ ಬರೆಯಬೇಕು.ಬಕ್ಷಿ ಬರೆದ ಅಮರ ಗೀತೆಯಲ್ಲಿ ಇದೊಂದು.
www.mouthshut.com ದ ಸಮೀಕ್ಷೆ ಪ್ರಕಾರ ೨೦ ಸದಾಕಾಲದ ನೋವಿನ ದುಃಖದ ಹಾಡುಗಳಲಿ ಇದೂ ಒಂದು.
ಹಾಡಿನ ಪೂರ್ಣ ಪಾಠ ಕೊಟ್ಟಿರುವೆ. ಅಲ್ಪ ನಾದ ನಾನು ಈ ಗಜಲಿನ ಭಾವಾನುವಾದ ಸಹ ಮಾಡಿರುವೆ.
ನೋಡಿ ಓದಿ ತಿಳಿಸಿ ಹೇಗಿದೆ ಅಂತ....

ಮೊದಲು ಮೂಲ ಗೀತೆ.....

बहारोंने मॆरा चमन लूटकर खिजा को ये इलझाम क्युं दे दिया
किसीने चलॊ दुश्मनी की मगर इसे दोस्ति नाम क्युं  दे दिया

मै समझा नहिं ऐ मेरे हमनशिं सजा ये मीली है मुझे किसलिये
के साकीं ने लब से मेरे छीनकर किसि और को जाम क्युं दे दिया

मुझे क्या पता था कभि इश्क मे रकीबों कॊ कासिद बनाते नहीं
खता हॊ गई ए कासिद मेरे तेरे हाथ पैगाम क्युं दे दिया..

खुदाया यहां तेरे इनसाफ के बहुत मैने भी चर्चें सुने है मगर
सजा कि जगह एक खतावार कॊ भला तूने ईनाम क्युं दे दिया..


ನನ್ನ ಪ್ರಯತ್ನ  ಹೀಗಿದೆ.....

ನಾ ಬೊಗಸೆಯೊಡ್ಡಿದಾಗ ಮುಳ್ಳುಗಳನೇ ಸುರಿದ  ಆ ಚೈತ್ರ...
ಅಮಾಯಕ ಶಿಶಿರನ ಮೇಲೇಕೆ ಗೂಬೆ ಕೂರಿಸಿದ.

ನನ್ನಜೊತೆ ಹಗೆಸಾಧಿಸಿ ಕುಹಕಮಾಡಿದನು ಸಖ  ಆದರೆ
ಆ ನಾಟಕಕೆ.. ಗೆಳೆತನದ ಹೆಸರೇಕೆ  ಹೇಳಿದ..

ನನ್ನಾವ ತಪ್ಪಿಗೆ ಈ ಪರಿ ಶಿಕ್ಷೆ ವಿಧಿಸಿತು ವಿಧಿ ಗೊತ್ತಾಗಲೇ  ಇಲ್ಲ
ಮಧುಬಟ್ಟಲನು ನನ್ನಿಂದ ಕಸಿದು ಅದನು ನಿನಗೇಕೆ ಕುಡಿಸಿದ..

ನನಗರಿವಾಗಲೇ ಇಲ್ಲ ಪ್ರೀತಿಯಲಿ.. ಸಖನೂ ದಾಯಾದಿಯಾಗುವನೆಂದು
ತಪ್ಪಾಯಿತು ..ನೋಡಿ ಸಖನ ಕೈ ತುಂಬ ಇದೆ ಕಲೆ ನನ್ನದೇ ರಕ್ತದ...

ದೇವ ನಿನ್ನ ನ್ಯಾಯಪರತೆಯ ಬಗ್ಗೆ ನಾ  ಹಲವರಿಂದ ಕೇಳಿದ್ದೆ...
ನೋಡೀಗ ವಂಚಕನ ಕೊರಳಲಿ ಹೂಮಾಲೆ ರಾರಾಜಿಸುದುದ...

ಆನಂದ್ ಬಕ್ಷಿ ತನ್ನ ಗಜಲ್ ದಲ್ಲಿ "ರಕೀಬ್ " ಹಾಗೂ "ಕಾಸಿದ್" ಎಂಬ ಶಬ್ದಗಳನ್ನು  ಬಳಸಿಕೊಂಡಿದ್ದಾರೆ.
ನನಗೆ ಅವುಗಳ ಅರ್ಥ ಗೊತ್ತಿರಲಿಲ್ಲ. ಕೊನೆಗೆ "ಬಜ್" ನಲ್ಲಿ ಪ್ರಶ್ನೆ ಮುಂದಿಟ್ಟಾಗ ಶ್ರೀಯುತ ಗೋರೆ, ಆಜಾದ್ ಹಾಗೂ
ಸುರೇಶ್ ಹೆಗಡೆ ಯವರು ನೆರವಾದರು, ಅವರ ಸಹಾಯಕ್ಕೆ ವಂದನೆ ಹೇಳುವೆ.


  

Saturday, November 6, 2010

ಬ್ಲಾಗು ಕಾಮೆಂಟು ವಗೈರೆ..ವಗೈರೆ

ದಿ.೦೫/೦೩/೨೦೦೯ ರಂದು ನನ್ನ ಮೊದಲ ಬ್ಲಾಗು ಪ್ರಕಟವಾಯಿತು..ಅಥವಾನಾನೇ ಪೋಸ್ಟಮಾಡಿದ್ದೆ. ಆಗಿನ್ನೂ ಹೊಸದು ಯಾರಾದ್ರೂ ಕಾಮೆಂಟ ಹಾಕಿದ್ರೆ ಅವರಿಗೆ ಧನ್ಯವಾದ ಹೇಳೋದು ಒಂಥರಾ
ಖುಷಿಯ ಸಂಗತಿ. ನಿಧಾನವಾಗಿ ಹಿಂಬಾಲಕರ ಪಟ್ಟಿ ಬೆಳೀತು ಆದರೆ ಕಾಮೆಂಟಿಗರ ಸಂಖ್ಯೆ ನಮ್ಮ ಭಾಷಾದಾಗ
ಹೇಳೂದಾದ್ರ "ಕುಂಟಿಗ್ಯೋ ಕುರಿಗ್ಯೋ.." ಅನ್ನತಿತ್ತು. ಆದ್ರು ಬರೆಯುವುದು ನಿಲ್ಲಿಸಲಿಲ್ಲ. ಈಗ ಈ ತಿರುವಲ್ಲಿ ನಿಂತಿರುವೆ.ಸಾಗಿ ಬಂದ ದಾರಿ ಒಮ್ಮೆ ತಿರುಗಿ ನೋಡುವ ಮನಸ್ಸಾಗಿದೆ.

ಮೊದಲು ಧನಾತ್ಮಕ ಅಂಶ ಹೇಳಿಬಿಡುವೆ..
೧) ಈ ಬ್ಲಾಗ್ ನನಗೆ ಹೊಸ ಚೆಹರೆ ಅಂದರೆ ಹೊಸ ಅಸ್ತಿತ್ವ ದೊರಕಿಸಿಕೊಟ್ಟಿದೆ. ನಾನೇನಾದರೂ ಹೇಳಲು      ಬರೆಯಲು ಬಯಸಿದಾಗ ಬ್ಲಾಗ್ ನನಗೆ ಮಾಧ್ಯಮವಾಗಿದೆ.

೨) ಅಭಿವ್ಯಕ್ತಿ ಮಾಧ್ಯಮ. ಇಲ್ಲಿ ಯಾವ ಸಂಪಾದಕರ ಕಬು ದ ಹೆದರಿಕೆ ಇಲ್ಲ.  ನಮಗನಿಸಿದ್ದನ್ನು ನೇರವಾಗಿ
    ಹೇಳಬಹುದು ಹಾಗೆಂದು ನನ್ನ ಅನುಭವಕ್ಕೆ ಬಂದ ಯಾವ ಬ್ಲಾಗ್ ಬರಹದಲ್ಲೂ ಉಡಾಫೆ ಇಲ್ಲ.

೩) ಹೊಸ ಮಿತ್ರರು. ಹೌದು ಇದು ದೊಡ್ಡ ಉಪಲಬ್ಧಿ. ವಯಸ್ಸಿನ ಅಂತರ ಇಲ್ಲದೆ ಇಲ್ಲಿ ಮಿತ್ರರಾಗಬಹುದು.
    ನಾ ಈ ವಿಷಯದಲ್ಲಿ  ಲಕ್ಕಿ. ವಿಭಿನ್ನ ಸ್ತರದ ವೃತ್ತಿಯ ಜನ ಮಿತ್ರರಾಗಿದ್ದಾರೆ.

೪)  ನಾ ಬರೆದದ್ದು ಬೇರೆಯವರು ಮೆಚ್ಚಿ/ತೆಗಳಿ ದಾಗ ಸ್ಪಂದನ ಬೆಳೆಯುತ್ತದೆ.ಇದು ಬ್ಲಾಗ್ ನಿಂದ ಸಾಧ್ಯ.

ಇನ್ನು ಬ್ಲಾಗ್ ನಿಂದ ಋಣಾತ್ಮಕ ಅಂಶವೂ ಇವೆ...

೧) ಬ್ಲಾಗನಲ್ಲಿ ಬರೆದದ್ದು ಯಾವ ಪ್ರಕಾರದ ಸಾಹಿತ್ಯ. ಇದು ಬರೆದವನ ಆತ್ಮರತಿಯೇ.. ನನ್ನ  ಹಾಗೂ ಇತರೇ
    ಕೆಲವರ ಬ್ಲಾಗ್ ಬರಹ ನೋಡಿದರೆ ಈ ಮಾತು ನಿಜ ಅನಿಸಬಹುದೇನೋ..

೨)   ನಾವು ಬರೆದದ್ದು ಎಂದೂ ಶ್ರೇಷ್ಠ ವಲ್ಲ ಹೀಗಂತ ತಿಳದವ್ರು ಹೇಳ್ತಾರ. ನಾವು ಬರೆದ ಬುಕ್ಕು   ಮಾರಾಟಮಾಡಲಿಕ್ಕೆ  ಮಾರಾಟಗಾರ್ರು ತಯಾರಿಲ್ಲ. ಪ್ರಕಾಶಕರಲ್ಲಿ ಹಿಂಜರಿತವಿದೆ. ಇದು ವಾಸ್ತವ  ಐಬು ನಮ್ಮಲ್ಲಿಲ್ಲ
  ಅಂತ ಹೇಳಲು ಧೈರ್ಯ ಸಾಲುತ್ತಿಲ್ಲ.

೩) ಗುಂಪುಗಾರಿಕೆ. ಸಾಹಿತ್ಯದ ಇತರೇ  ಪ್ರಕಾರಗಳಂತೆ ಈ ಪಿಡುಗು ಇಲ್ಲೂ ಇದೆ, ನಿಜ ಈ  ಮಾತು ಹಲವರು
   ಅಲ್ಲಗಳೆಯುತ್ತಾರೆ.ಗೌತಮ್ ಹೆಗಡೆ ಈ ಬಗ್ಗೆ ಗಮನ ಸೆಳೆದಿದ್ರು.ನಾನೂ ಅದನ್ನು ಅಲ್ಲಗಳೆದು ಅವರ ಬ್ಲಾಗ್ ನಲ್ಲಿ
   ಕಾಮೆಂಟು ಹಾಕಿದ್ದೆ.  ಆದರೆ ಸ್ವಂತ ಅನುಭವ ಪಾಠ ಕಲಿಸಿದೆ.ಸತ್ಯ ಒಪ್ಪಿಕೊಂಡಿರುವೆ. ಇಲ್ಲಿ ತಮ್ಮ ಭಾಷೆ,ಪ್ರಾಂತ
   ಹೀಗೆ ಅವುಗಳದೇ  ಆದ  ವರ್ಗೀಕರಣಗಳಿವೆ..

೪) ಹಿಂಬಾಲಕರು.ಹಿಂಬಾಲಕರ ಸಂಖ್ಯೆ ನೂರಿದ್ದರೂ ಕಾಮೆಂಟು ಬರೋದು ಇಪ್ಪತ್ತು-ಮುವ್ವತ್ತು. ಇನ್ನು ಹಿಂಬಾಲಕರು ಐವ್ವತ್ತಿದ್ದ ನನ್ನಂಥವದರಿಗೆ  ಹತ್ತು ದಾಟೋಲ್ಲ. ಹಾಗಾದ್ರೆ ಹಿಂಬಾಲಕರು ಅದೇಕೆ ಕಾಮೆಂಟು ಹಾಕೋಲ್ಲ. ನನಗಂತೂ ಉತ್ತರ ಗೊತ್ತಿಲ್ಲ.

ಮೇಲಿನ ನನ್ನ ಮಾತು ಅರ್ಥ ಇಲ್ಲದ್ದು ಇಲ್ಲಿ  ಎಲ್ಲವೂ ಸರಿಯಿದೆ  ಇವೆಲ್ಲ ನನ್ನ ಕಲ್ಪನೆಗಳು ಮಾತ್ರ ಎಂದು  ಯಾರಾದರೂ ಹೇಳಿದರೆ ನಾ ತುಂಬಾ ಖುಷಿಪಡ್ತೇನೆ( ಅದು ನಿಜ ಆಗಿದ್ರೆ). ನನ್ನ ಕಳಕಳಿ ಇಷ್ಟೇ. ಈ ಬ್ಲಾಗ್ ಸಮೂಹದ ಅಳಿವು ಉಳಿವು ಒನಪು ಒಯ್ಯಾರ ನಾವೇ ಮಾಡಬೇಕು. ಯಾರಾದ್ರೂ ಬ್ಲಾಗ ಬರೆದರೆ ಆ ಬ್ಲಾಗಿನ
ತಿರುಳು ನೋಡಿ ಕಾಮೆಂಟಿಸೋಣ. ಅವನ/ಅವಳ ಭಾಷೆ,ಪ್ರಾಂತ ಇತ್ಯಾದಿ ಯಾಕೆ ಗಣನೆಗೆ ತಗೋಬೇಕು.
ಈಗಾಗಲೇ ಬ್ಲಾಗ್ ಹಾಗೂ ಬ್ಲಾಗ್ ಸಾಹಿತ್ಯದ ಬಗ್ಗೆ ಅನೇಕ ಮೇಧಾವಿಗಳು, ಸಂಪಾದಕರುಗಳು ತಮಗೇ
ತಿಳಿದ ರೂಪದಲ್ಲಿ ವರ್ಣಿಸುತ್ತಿದ್ದಾರೆ. ಈ ಒಂದು ಘಟ್ಟದಲ್ಲಿ ನಾವು ಸುಧಾರಿಸಿಕೊಳ್ಳೋಣ.ತಪ್ಪು ಒಪ್ಪು ಹಂಚಿಕೊಳ್ಳೋಣ. ನಮ್ಮ  ಈ ಬ್ಲಾಗ್ ವನ ನಳನಳಿಸೋಣ.

ಈ  ಲೇಖನ ಯಾವುದೇ ವ್ಯಕ್ತಿಯನ್ನು ಉದ್ದೇಶಿಸಿ ಬರೆದಿಲ್ಲ. ಗೌತಮ್ ಅವರ ಹೆಸರು ಬರೀ ಪ್ರಾಸ್ತಾವಿಕ ಮಾತ್ರ.  
 

Monday, November 1, 2010

ಮೊದಲ ಪ್ರಯತ್ನ..

ಹೌದು ಭಾವನುವಾದ ಈ ಪ್ರಕಾರದಲ್ಲಿ ಇದು ನನ್ನ ಮೊದಲ ಹೆಜ್ಜೆ.ಆರಿಸಿಕೊಂಡ ಕವಿತೆ ನನ್ನ ಮೆಚ್ಚಿನ  ಗದಿಮಾ-ಗಜಾನನ ದಿಗಂಬರ್ ಮಾಡಗುಲಕರ್- ಅವರ ಮರಾಠಿ ಗೀತೆ. ಮಿತ್ರ ಪರಾಂಜಪೆ
ಅವರಿಗೆ ತೋರಿಸಿದ್ದೆ ಅವರು ಹಸಿರು ಝಂಡಾ ತೋರಿದ್ದಾರೆ. ತಪ್ಪು ಒಪ್ಪು ಮುಕ್ತವಾಗಿ ಹೇಳಿರಿ..

ಗದಿಮಾ ಮರಾಠಿಗರ ಸಾಂಸ್ಕೃತಿಕ ದ್ಯೋತಕ. ಸುಮಾರು ೧೯೪೦ ಯಿಂದ ೧೯೭೭ ರವರೆಗೆ ಅವರು ಮರಾಠಿ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅಪಾರ.ಆದು ಮುಟ್ಟದ ಸೊಪ್ಪಿಲ್ಲ ಅನ್ನುವಂತೆ ಗದಿಮಾ ಕವಿತೆ, ಕಾದಂಬರಿ, ಭಾವಗೀತೆ.
ಕತೆ ಚಿತ್ರಕತೆ, ಸಿನೇಮಾದ ಸಂಭಾಷಣೆ ಹೀಗೆ ಅನೇಕ ಪ್ರಕಾರಗಳಲ್ಲಿ ಅವರು ಕೈ ಆಡಿಸಿದರು. ಅವರು ಬರೆದ
ಗೀತರಾಮಾಯಣವಂತೂ  ಜನಜನಿತ. ಸಿನೇಮಾಕ್ಕೆ ಬರೆದ ಗೀತೆಗಳಲ್ಲೂ ತಮ್ಮ  ಕವಿತ್ವದ ಛಾಪು ಒತ್ತಿದ್ದ ಮಹನೀಯ. ಅವರು ಹಾಗೂ ಸುಧೀರ್ ಫಡಕೆ ಮರಾಠಿ ಚಿತ್ರರಂಗಕ್ಕೆ ಹೊಸ ಆಯಾಮ ತಂದುಕೊಟ್ಟವರು.
ಇವರಿಬ್ಬರ ಸಂಗಮದಿಂದ ಅನೇಕ ಅಮರಗೀತೆಗಳು ಬಂದಿವೆ.

ನಾ ಪ್ರಸ್ತುತ  ಆಯ್ದ ಗೀತೆ  "ಜಗಾಚಾ ಪಾಠೀವರ್ " ಚಿತ್ರದ್ದು.ತೀರ ಸರಳ ಶಬ್ದಗಳಲ್ಲಿ  ವಿಸ್ತಾರ ಜೀವನದ ಕತೆ ಈ 
ಗೀತೆ  ಹೇಳುತ್ತದೆ. ಮರಾಠಿಯ ಮೂಲರಚನೆ ಸಹ ಕೊಟ್ಟಿರುವೆ.


      एक तारा सुखाचा शंबर धागे दुःखाचे        
      जरतारि आयुश्य माणसा तुझिया आयुष्याचे

      पांघरसि जरि असला कपडा, यॆसि उघडा जासि उघडा
      कपड्या साठि करिसि नाटक तीन प्रवेशांचे

       मुकि अंगडि बाल पणाचि,रंगीत वसने तारूण्याची
       जीर्ण शाल मग उरे शॆवटि, लॆणे वार्ध्क्याचे

       या वस्त्रा चे विणतॊ कॊण ? एक सारखि नसते दोन
       कुणात दिसले त्रीखंड्यात  हात विणकर्याचे...!

                        -------------

ನನ್ನ  ಭಾವಾನುವಾದ ಹೀಗಿದೆ.....

         ಹೇ ಮನುಜ ನಿ ಧರಸಿದ ದಿರಿಸಿನಲಿ...
          ಒಂದೆಳೆ ಸುಖದ್ದಾದರೆ ನೂರೆಳೆ ದುಃಖದ್ದು
          ನಿನ್ನೀಡೀ  ಆಯುಷ್ಯದ  ಕತೆಯಿದು...

         ಥಳಥಳಿಸುವ ವಸ್ತ್ರದ ಹಿಂದಡಗಿದೆ ಸತ್ಯ
         ಬಂದಾಗ ನೀ ಬೆತ್ತಲೆ ಹೋಗುವಾಗ ಅಂತೆಯೇ
         ವಸ್ತ್ರಕ್ಕಾಗಿ ಹೂಡಿದ ಮೂರಂಕದ ನಾಟಕವಿದು..

         ಸಾದಾಸೀದ ಅಂಗಿ ಬಾಲ್ಯ,ಜಗಮಗಿಸುವುದು ತಾರುಣ್ಯದ್ದು
         ಜೀರು ಜೀರು ಅಂಗಿ ಉಳಿದುದು ಕೊನೆಗೆ
        ಮುಪ್ಪಿನಾವಸ್ಥೆಯ  ಸಾಕ್ಷಿ  ಹೇಳುತಿಹುದು

          ಈ ವಸ್ತ್ರವ ನೇದವನಾರು? ಒಂದರ ಹಾಗೆ ಇನ್ನೊಂದಿಲ್ಲ
           ಮೂಜಗ  ತಿರುಗಿ ಹುಡುಕಿದರೂ....
         ನೇಕಾರನ  ಕೈಯ ಕರಾಮತು  ತಿಳಿಯದಿಹುದು...!   


ಮಿತ್ರರೇ  ಇನ್ನೊಂದು ಮಾತು ನಾ ಅವಶ್ಯ ಹೇಳಲೇ ಬೇಕು.ಮರಾಠಿ ಗೀತೆಯ ಅವತರಣಿಕೆ ನನಗೆ ಸಿಕ್ಕಿದ್ದು 
www.aathavanitli-gani.com/ ಈ ಸೈಟನಿಂದ.  ಈ  ಸೈಟು ಅದೆಷ್ಟು ಮಾಹಿತಿ ಒಳಗೊಂಡಿದೆ
ಕತೆ, ಕವಿತೆ,ನಾಟ್ಯ ಗೀತೆ  ಹೀಗೆ ಅನೇಕ ಭಾಗಗಳಿವೆ... ಮಾಹಿತಿಮೇಲಿಂದ ಮೇಲೆ ಅಪ್ ಡೇಟ ಆಗುತ್ತಿರುತ್ತದೆ.
ನಮ್ಮ ಕನ್ನಡದಲ್ಲೂ ಇಂತಹ ಸೈಟಿಲ್ಲ ಅನ್ನುವ ಕೊರಗು ಕಾಡಿದೆ...

ಚಿತ್ರ:  ಗದಿಮಾ
ಚಿತ್ರಕೃಪೆ: ಅಂತರ್ಜಾಲ.