Monday, August 30, 2010

ನಿರುತ್ತರ


ಆ ಸಸಿಗೆ ನೀರೆರೆದು ಕೈ ತೊಳೆದು
ಜನುಮ ಸಾರ್ಥಕವಾಯಿತೆಂಬ ಖುಷಿಯಲಿ
ನಾ ತೇಲಿದೆ.. ಅದರ ಸ್ಪರ್ಶದಿ ಆನಂದ ಹೊಂದಿ
ಗೆದ್ದವನಂತೆ ಬೀಗಿದೆ..

ತೇಲಿಹೊರಟವನನ್ನು ತಲೆಕೆಳಗು ಮಾಡಿತ್ತು
ಅವ್ವಳ ನಗು...ನಗುವದು ಕುಹಕದ್ದು..!
ನನ್ನ ಹಮ್ಮು ಬಿಮ್ಮು ಎಲ್ಲ ಕಳೆದು
ಬಟಾಬಯಲಲ್ಲಿ ಬೆತ್ತಲಾಗಿ ನಿಲ್ಲಿಸಿ ನಕ್ಕ
ಕೇಕೆಯ ನಗುವದು..

ಇದು ರುಣಸಂದಾಯದ ಮಾತಲ್ಲ..
ಅವ್ವಳ ಸಾಲ ಮರುಪಾವತಿಸುವನಾರಿಲ್ಲ
ಹಾಲುಣಿಸಿದವಳಿಗೆ ನೀರೆರೆದು ಸಾಗಿದವನೆ
ಈ ವೇಷವೇಕೆ...

ಪಡೆದುದು ಸಾಗರದಷ್ಟು..
ಮರಳಿಸಿದ್ದುದು ಬಿಂದು ಮಾತ್ರ..
ನಾಳಿನ ನೆರಳಿಗೆ ಇಂದು ಬೀಜ ಮೊಳೆಸಿರುವೆ..
ಮಗಳು ಹಸಿರು ನೋಡಲಿ ಎಂದೂ ಹಂಬಲಿಸಿರುವೆ..
ನನ್ನೆದೆಯ ಬಗೆದು ಬೆತ್ತಲಾಗಿಸಿ ತಿರುಗಿ ನೋಡದೆ ಹೋದವ ನೀನು
ಈಗ ಸಸಿಯೊಂದು ಮೊಳೆಸಿ ಬೀಗುವುದೇಕೆ...
ಕೇಳಿಸಲಿಲ್ಲ ನಿನಗೆ ನನ್ನ ಆರ್ತನಾದ..
ಅರಿಯಲಿಲ್ಲ ನನ್ನ ಬೆತ್ತಲೆಯ..
ಅದಾರೋ ಅಲ್ಲ ನೀನೆ ಅವನು , ಅಲ್ಲಿ ಇದ್ದೆ
ಉದ್ದುದ್ದ ಅಡ್ಡಡ್ಡ ವಾಗಿ ನನ್ನ ಸೀಳಿದ್ದೆ
ನನ್ನ ನೋವಿಗೆ ಮಿಡಿಯದೆ
ಮರಳಿ ನೋಡದೆಸಾಗಿಹೋಗಿದ್ದೆ
ನಾ ನಿನಗೆ ಬೇಡವಾಗಿದ್ದೆ.. ಅಂಬರವೇ ಅಮೃತ
ಸುರಿಸುವಾಗ ಕಪ್ಪು ಮೈಯ ನನ್ನ ಅಪ್ಪುಗೆಯ ಬಿಸಿ
ನಿನಗೆ ಬೇಕಿರಲಿಲ್ಲ..

ಅವ್ವಳ ಪ್ರಶ್ನೆಗೆ ನಿರುತ್ತರಿ ನಾನು
ನಾ ಕೊಟ್ಟಿದ್ದೇನು....
ಪಡೆದಿದ್ದೇನು..ಗೊಂದಲವಿದೆ,ದ್ವಂದ್ವವೂ ಇದೆ
ಆ ಗುಡ್ಡದಲ್ಲಿ ನಾ ನೆಟ್ಟ ಸಸಿ
ಗಾಳಿಗೆ ಓಲಾಡುತ್ತ ಅಣಕಿಸುತಿದೆ...!

Sunday, August 22, 2010

ಮಧುಶಾಲೆ ಮತ್ತು ಸಖಿ

೧)ಅವಳೊಡಲಲ್ಲಿ ಮಧುಕಲಶವಿತ್ತು
ತುಟಿಯಿಂದ ಜೇನೂ
ತೊಟ್ಟಿಕ್ಕುತ್ತಿತ್ತು... ಅದ್ಯಾಕೊ
ನನ್ನ ಮಧುಪಾತ್ರೆ ಮಾತ್ರ ಯಾವಾಗಲೂ
ಖಾಲಿ ಯಾಗಿಯೇ ಉಳಿಯಿತು...!

೨) ಬಸವಳಿದು ಬೆಂಡಾದ ಜೀವಕೆ
ಎರಡು ಹನಿ ಮಧು
ನಾಲಿಗೆಯ ಮೇಲೆ ಸುರಿದಳು ಸಖಿ..
ದಾಹ ಇಂಗಿತು...
ಸಮುದ್ರ ಕುಡಿದಂತಾಯಿತು...!

೩) ಕೊನೆಕಿರಣ.. ಕೊನೆಯ ಆಸೆಯೂ
ಕಮರಿದೆ..ಬಾಳ ಯುದ್ಧದಲಿ ಜಯ
ಮರೀಚಿಕೆ ಯಾಗಿದೆ...
ಸುರಿ ಸಖಿ ಮಧುವ ಎದೆಯ ಕಿಚ್ಚು
ತಂಪಾಗಲಿ..ನಾಳೆ ಇಂದಿನಂತಾಗದಿರಲಿ....!

೪) ಮಧು ಶಾಲೆಯ ಬಾಗಿಲು ಮುಚ್ಚಿದೆ
ಮನ ವಿನ್ನೂ ಹಂಬಲಿಸಿದೆ..
ವಿಷಾದ ಮಡುಗಟ್ಟಿದ ನಿಶೆ..ಈ ಹಾಳು
ಮನಸ್ಸು ಇನ್ನೂ ಆ ಬೆಳ್ಳಿಗೆರೆಗಾಗಿ
ಪರಿತಪಿಸುತಿದೆ....!

೫) ಅವಳು ತೋರಿದಳು ಕನಸಿನ ಸೌಧಕೆ ದಾರಿ
ಹೆಜ್ಜೆ ತಪ್ಪಿತೇನೋ ಹಿಡಿದೆನು
ಮಧುಶಾಲೆಯ ಹಾದಿ...
ಇಬ್ಬಂದಿ ಮನವೇ ನೀ ದಿಕ್ಕು ತೋರು...
ಮುಕ್ತಿಯ ಮಾರ್ಗವೇನು...?!

Thursday, August 12, 2010

ಬುತ್ತಿಗಂಟು---೨-- ಮೊಹ್ಮದ್ ರಫಿ


ಹಿಂದಿಯ ಪ್ರಸಿದ್ಧ ಕಲಾವಿದ ಮನೋಜ್ ಕುಮಾರ್ ಒಮ್ಮೆ ವಿವಿಧಭಾರತಿಯ ಜಯಮಾಲಾ ಕಾರ್ಯಕ್ರಮ ನಡೆಸಿಕೊಡುತ್ತ ಒಂದು ಮಾತು ಅಂದಿದ್ದ. ಭಾರತದಲ್ಲಿ ಹೇಗೆ ಮುಸಲ್ಮಾನರು ನಮ್ಮ ಸಂಸ್ಕೃತಿಯ ಜೊತೆಗೆ ಹಾಸು ಹೊಕ್ಕಾಗಿ ಬೆಳೆದಿದ್ದಾರೆ ಅಂತ.ಉದಾಹರಣೆಯಾಗಿ ಬೈಜು ಬಾವರಾ ಚಿತ್ರದ " ಮನ್ ತಡಪತ ಹರಿ ದರ್ಶನ ಕೊ ಆಜ್...." ಉಲ್ಲೇಖಿಸಿದ್ದ. ಅವ ಮುಂದುವರೆದು ಮೇಲಿನ ಹಾಡು ಬರೆದವ,ಹಾಡಿದವ ಹಾಗೂ ಸಂಗೀತ ನೀಡಿದವ
ಮೂರೂ ಜನ ಮುಸಲ್ಮಾನರು ಎಂದಿದ್ದ. ಹಾಡಿದವ ಮೊಹ್ಮದ್ ರಫಿ....ಎಂದೂ ನನಗೆ ಅಪರಿಚಿತ ಅಲ್ಲ ನನ್ನ ಅಂತರಂಗದ ನೋವಿಗೆ ನಲಿವಿಗೆ ರಫಿ ಸ್ಪಂದಿಸಿದ್ದಾನೆ.

ನಾ ಅತ್ತಾಗ " ರಾಹಿ ಮನವಾ ದುಖ ಕಿ ಚಿಂತಾ ಕ್ಯುಂ ಸತಾತಿ ಹೈ..." ಎಂದು ಸಾಂತ್ವನ ಹೇಳಿದ್ದಾನೆ. ನಾ ಯೌವ್ವನದ
ಮದದಲ್ಲಿ ಮೀಯುವಾಗ.."ಮಸ್ತ್ ಬಹಾರೊಂಕಾ ಮೈ ಆಶಿಕ್ ...." ಎಂದು ಕುಣಿದಿದ್ದಾನೆ. ನನ್ನವಳು ಮನೆತುಂಬಿದಾಗ
"ಬಹಾರೋ ಫೂಲ್ ಬರಸಾವೊ....."ಎಂದು ನನ್ನ ದನಿಯಾಗಿದ್ದಾನೆ. ನಿರಾಶೆ ಕವಿದು ಪರಿತಪಿಸುವಾಗ.."ಕಭಿ ನ ಕಭಿ
ಕೊಯಿ ನ ಕೊಯಿ ತೊ ಆಯೇಗಾ ಅಪನಾ ಮುಝೆ ಬನಾಯೇಗಾ.." ಅಂತ ಹೇಳಿ ನನ್ನ ನೋವಿಗೆ ಸಾಥ್ ನೀಡಿದ್ದಾನೆ.
ರಫಿ ನನ್ನ ದನಿ ನನ್ನ ನಲಿವಿನ ರಿಂಗಣ...ನನ್ನ ನೋವಿನ ಆಲಾಪ....!

ಮೊಹ್ಮದ್ ರಫಿಯ ಮೇಲೆ ನಾ ಮೋಹಿತನಾಗಿದ್ದು ೧೯೭೯ ರಲ್ಲಿ... ಕಾಲೇಜಿಗೆ ಚಕ್ಕರ್ ಹಾಕಿದ ನಾವು ನಮ್ಮೂರಿನ
ಅಜಂತಾ ಟಾಕೀಸಿಗೆ ಹೋಗಿದ್ದೆವು. ಅಲ್ಲಿ "ಸುನಹರಿ ಯಾದೆಂ" ಅನ್ನುವ ಡಾಕ್ಯುಮೆಂಟರಿ ಚಿತ್ರ ಇತ್ತು. ಅದರಲ್ಲಿ ಫಿಲ್ಮಫೇರ್ ಪ್ರಶಸ್ತಿ ಸಾಗಿಬಂದ ಇತಿಹಾಸ ದಾಖಲಾಗಿತ್ತು. ತೆರೆಮೇಲೆ ರಫಿ ಹಾಡುತ್ತಿದ್ದ ತೋರುಬೆರಳು,ಹೆಬ್ಬೆರಳು
ಕೂಡಿಸಿಕೊಂಡು ಲಯವಾಗಿ ಆಡಿಸುತ್ತ "ತೇರಿ ಪ್ಯಾರಿ ಪ್ಯಾರಿ ಸೂರತ್ ಕೊ....ಚಷ್ಮೆ ಬದ್ದೂರ್ " ಅಂತ ಅವನು ಹಾವಭಾವದಿಂದ ನಗುವ ಹಾಡುವ ಪರಿಗೆ ನಾ ಕ್ಲೀನ್ ಬೌಲ್ಡ್ ಆದೆ...!

ಅಂದಿನಿಂದ ರಫಿ ನನ್ನ ಅಂತರಂಗದ ಗೆಳೆಯನಾದ. ರಾತ್ರಿಯ ಪ್ರಶಾಂತತೆಯಲಿ ಅವನ ಹಾಡು ರೇಡಿಯೋದಲ್ಲಿ
ಕೇಳುವಾಗ ಸಿಕ್ಕ ಆನಂದ ಅಪರೂಪದ್ದು..ಅದು ಯಾವ ಸಂಪತ್ತಿಗೂ ಸಾಟಿಯಾಗಲಾರದ್ದು.ರಫಿ ಹಾಡದ ಹಾಡೆ ಇಲ್ಲ
ಶಮ್ಮಿ ಕಪೂರ್ ತೆರೆಮೇಲೆ ಹೇಗೆ ನರ್ತಿಸಬಹುದು ಅವನ "ಅದಾ" ಹೀಗೆಯೇ ಇರಬಹುದು ಎಂದು ಅಂದಾಜಿಸಿ ತನ್ನ
ದನಿಯಲ್ಲಿ ಆ ಲಚಕ್ ತೋರುತ್ತಿದ್ದನಂತೆ....! ರಫಿ ಸತ್ತಾಗ ತನ್ನ ಆವಾಜ್ ಹೋಯಿತು ಎಂದು ಶಮ್ಮಿ ಗೋಳಾಡಿದ್ದನಂತೆ. ಅದು ಭರತ್ ಭೂಷಣ ಮೇಲೆ ಚಿತ್ರಿತವಾದ ಹಾಡಿರಲಿ ಅಥವಾ ಜಾನಿವಾಕರ್ ಮೇಲೆ ಚಿತ್ರಿತವಾಗಿರಲಿ ಹಾಡಿಗೆ ಪೂರ್ಣ ನ್ಯಾಯ ಒದಗಿಸುತ್ತಿದ್ದ. ಹಾಡು ಭಾವಪೂರ್ಣ ವಾದಷ್ಟೂ ರಫಿಯ ಆವಾಜ್ ಕಳೆಗಟ್ಟುತ್ತಿತ್ತು. ಬಲರಾಜ್ ಸಹಾನಿಯ ಮೇಲೆ ಚಿತ್ರಿತವಾದ ನೀಲ್ ಕಮಲ್ ಚಿತ್ರದ "ಬಾಬುಲ್ ಕಿ ದುವಾಯೆಂ ಲೇತಿ ಜಾ....." ಈ ಹಾಡು ಹಾಡುವಾಗ ರಫಿ ಬಿಕ್ಕಿ ಬಿಕ್ಕಿ ಅತ್ತಿರಬೇಕು...ಕೇಳುಗರ ಎದೆ ಕಲಕುವ ಶಕ್ತಿ ಅಂತೂ ಆ ಹಾಡಿಗಿದೆ. ಸ್ವತಃ ಮದ್ಯ ಎಂದೂ ಸೇವಿಸದಿದ್ದರೂ "ಛಲಕಾಯೇ ಜಾಮ್ ಆಯಿಯೆ ಆಪಕೆ ಹೋಟೋಂಕೆ ನಾಮ್ " ಎಂದು ಹಾಡಿನತುಂಬ ಅಮಲು ಸುರಿಸಿದ್ದ ರೀತಿ ಅದ್ಭುತ. ಭಜನೆ ಹಾಡುವುದರಲ್ಲಿ ಅವನ ದನಿ ವಿಶೇಷ ಮೆರುಗು ಪಡೆಯುತ್ತಿತ್ತು. "ಪಾವ್ ಪಡೂ ತೋರೆ ಶಾಮ್....:", "ಬಡೀ ದೇರ್ ಭಯಿ ನಂದಲಾಲಾ..." ಒಂದೇ ಎರಡೇ !

ನನಗೆ ಅತ್ಯಂತ ಪ್ರಿಯವಾದ ಮೂರು ಹಾಡಿನ ಪಟ್ಟಿ ಕೊಡುವುದರೋಂದಿಗೆ ಈ ಬರಹ ಮುಗಿಸುತ್ತಿರುವೆ...

೧) ಮನರೆ ತೂ ಕಾಹೇನ ಧೀರ್ ಧರೆ....

೨) ಅಪನಿ ತೊ ಹರ್ ಆಹ್ ಏಕ್ ತೂಫಾನ್ ಹೈ....

೩) ಆಜ್ ಮೌಸಮ್ ಬಡಾ ಬೇಯಿಮಾನ್ ಹೈ ಬಡಾ...