Friday, March 26, 2010

ನೀನು


ಈ ಬಾಳ ಬಾಂದಳದಲಿ ಮಿನುಗುವ
ಚುಕ್ಕಿ ನೀನು....
ಅಂಗಳದಲಿ ಹರಡಿದ ರಂಗೋಲಿಯ
ಚಂದ ನೀನು....
ಕಾರ್ಮುಗಿಲ ನಡುವೆ ಮಿನುಗಿದ ಬೆಳ್ಳಿ
ಗೆರೆ ನೀನು...
ಶ್ರಾವಣದ ಒದ್ದೆ ಮುಂಜಾವಲಿ ಅರಳಿದ
ಹೂ ನೀನು...
ಬಾಳ ಹಾಲಾಹಲದಲೂ ಚಿಮ್ಮುವ ಅಮೃತ
ವಾಹಿನಿ ನೀನು....
ಧಮನಿ ಧಮನಿಗಳಲಿ ಉಕ್ಕುವ ಜೀವ
ತೇಜ ನೀನು....

Tuesday, March 16, 2010

ಚೈತ್ರ ಬರುವ ಕಾಲದಿ...


ನಿನ್ನೆ ಟಿವಿಯಲ್ಲಿ ಮಾಯಾವತಿ ನೋಟುಗಳ ಮಾಲೆ ಧರಿಸಿದ್ದನ್ನು ನೋಡಿದಾಗಿಂದ
ಈ ಯುಗಾದಿಯ ಸಂಭ್ರಮಕ್ಕೆ ಮಂಕುಬಡಿದಿದೆ. ಇದು ನಮ್ಮ ಸೋಲು ಅಂತಲೇ ನಾ ಅಂದುಕೊಳ್ಳೋದು ಯಾಕೆಂದರೆ
ಮಾಯಾವತಿ ಅಂತಹವರನ್ನು ಆರಿಸಿ ತಂದಿರೋದು ನಾವಲ್ಲವೆ..,ನಮ್ಮ ಈ ಮಂಪರು ಕಳೆದು ಹೊಸಾ ಯುಗಾದಿ ಬರೋದೆಂದು
ಅಥವಾ ಆ ನಿರೀಕ್ಷೆಯೇ ಹುಸಿಯೇ..... ಮಾಯಾವತಿ ದಲಿತ ದೀನರ ಹೆಸರು ಹೇಳಿಕೊಂಡು ಕುರ್ಚಿ ಗಳಿಸಿದಳು. ಆರಿಸಿ ಬಂದದ್ದೇ
ತಡ ತನ್ನ ಹಿರಿಮೆ ಸಾರುವ ಪ್ರತಿಮೆ ನಿರ್ಮಾಣಮಾಡಿದಳು. ಸರ್ವೋಚ್ಚ ನ್ಯಾಯಾಲಯಕ್ಕೂ ಕಿಮ್ಮತ್ತು ಕೊಡದೆ..... ನಿನ್ನೆ ನೋಡಿ
ಅವಳ ಪಕ್ಷ ಹುಟ್ಟಿ ೨೫ ವರ್ಷ ಮುಗಿಸಿದ ಸಂಭ್ರಮ. ದುಡ್ಡು ಸ್ವಂತದ್ದಲ್ಲ ಜನರದ್ದು ..ದುಡ್ಡು ಖರ್ಚಾಗಿದ್ದಕ್ಕೆ ಲೆಕ್ಕ ಇಟ್ಟವರಾದರೂ ಯಾರು....ಸಾವಿರ ನೋಟಿನ ಮಾಲೆ ಅದನ್ನು ಎತ್ತಿಅವಳ ಕೊರ‍ಳಿಗೆ ಹಾಕಲು ವಂದಿಮಾಗಧರು ಬೇರೆ...! ಬೇರೆ ದೇಶದಲ್ಲಿ ಹೀಗೆ
ನಡೆಯಲು ಸಾಧ್ಯವೆ...ಅಥವಾ ಸ್ವತಃ ಮಾಯಾವತಿಗೆ ಈ ಉತ್ಸವ ನಡೆಸಲು ಜನರ ಬೆಂಬಲ ಅಥವಾ ಪ್ರೀತಿ ಇದೆಯೇ
ಒಂದು ರಾಜ್ಯದ ಮುಖ್ಯಮಂತ್ರಿಗೆ ಈ ಸರ್ವಾಧಿಕಾರ ಕೊಡಬೇಕೆ ಅಥವಾ ಅದಕ್ಕೆ ಆತ ನಿಜವಾಗಿಯೂ ಅರ್ಹನೇ....
ಪ್ರಶ್ನೆ ಕೇಳುತ್ತಲೇ ಹೋಗಬಹುದು ಆದರೆ ನಿರುತ್ತರದ ಗೋಡೆಗಳಿಗೆ ಬಡಿದು ಪ್ರಶ್ನೆಯ ಚಂಡು ನಮಗೇ ಅಪ್ಪಳಿಸೀತು....!

ಮೊನ್ನೆ ತಾನೇ ಬರೇಲಿಯಲ್ಲಿ ಹಿಂಸಾಚಾರ ನಡೆದು ಜನ ನಲುಗಿದ್ದರು ಅವರ ಕಣ್ಣೀರು ತೊಡೆಯುವ ಕಾಯಕ್ಕೆ ಮಾಯಾವತಿ ಮುಂದಾಗಲಿಲ್ಲ. ಅಥವ ಕಾಲ್ತುಳಿತಕ್ಕೆ ಬಲಿಯಾದ ಕುಟುಂಬದ ಸದಸ್ಯರಿಗೆ ಪರಿಹಾರ
ಕೊಡಲು ನಕಾರ ಮಾಡಿದವಳು ಸ್ವಂತದ ಮೆರವಣಿಗೆಗೆ ಈ ಪರಿ ದುಡ್ಡು ಹಾಳೇಕೆ ಮಾಡಬೆಕು. ಈ ದೇಶದ ಸಂವಿಧಾನದ ಹೆಸರಲ್ಲಿ ಪ್ರತಿಜ್ನೆ ತಗೊಂಡು ದೀನ ದಲಿತರ ಉದ್ಧಾರ ಆಗೊದಿದ್ರೆ ಅದು ತನ್ನಿಂದಲೇ ಸಾಧ್ಯ ಎಂದು ಹೇಳುವ ಮಾಯಾವತಿಯ
ಎದೆಯಲ್ಲಿ ಸ್ವಲ್ಪವಾದರೂ ಬೇಸರ ಇಲ್ಲವೇ.....

ನಮ್ಮ ರಾಜ್ಯದ ಸ್ಥಿತಿಯೂ ಹಾಗೆಯೇ ಅಲ್ಲವೆ.... ಗಣಿಧಣಿ ಕೃಪೆಯಿಂದ ಈ ಸರಕಾರ ಸಾಗಿದೆ
ಅವರು ಹೇಳಿದರು ಅಂತ ಮಾಜಿರಾಜನ ಪಟ್ಟಾಭಿಷೇಕದ ಉತ್ಸವಕ್ಕೆ ನಮ್ಮ ದುಡ್ಡು ಸುರಿದಿದ್ದಾಯಿತು. ಇತ್ತ ನೆರೆ ಸಂತ್ರಸ್ತರಿಗೆ
ಸಂಗ್ರಹಿಸಿದ ದುಡ್ಡು ಎಲ್ಲಿ ಗೊತ್ತಿಲ್ಲ. ಗಣಿಧಣಿ ಮನೆಯಲ್ಲಿ ಪೂಜೆ ಅಂತ ಯಡ್ಯೂರಪ್ಪ ಬಳ್ಳಾರಿಗೆ ಹರಿ ಹೋಗ್ತಾರೆ...ಇತ್ತ ಬಿಎಂಟಿಸಿ
ಡ್ರೈವರ್ ಗಳಿಗೆ ಮಾತ್ರ ಇಂಧನದ ಮಿತವ್ಯಯದ ಬಗ್ಗೆ ಹೇಳಲಾಗುತ್ತದೆ.

ಯಾಕೆ ಹೀಗೆ ಉತ್ತರ ನಾವೇ ಕಂಡುಕೊಳ್ಳಬೇಕಾಗಿದೆ. ಈ ದೇಶದಲ್ಲಿ ಸರಕಾರ, ನ್ಯಾಯಾಂಗ
ಹಾಗೂ ಮೀಡಿಯಾ ಎಲ್ಲ ಗಬ್ಬೆದ್ದಿವೆ. ನಾವು ಜಡ್ಡುಗಟ್ಟಿ ,ಕೊಚ್ಚೆಯಲ್ಲಿ ಬಿದ್ದು ಇದೇ ಸ್ವರ್ಗ ಅಂತ ತಿಳ್ಕೊಂಡು ನಗುತ್ತಿದ್ದೇವೆ..
ಯುಗಾದಿಯ ಒಬ್ಬಟ್ಟು ತಿಂದು ಐಪಿಎಲ್ ನಲ್ಲಿ ಅದಾರೋ ವಿದೇಶಿ ಹುಡುಗಿ ಸೊಂಟ ಕುಣಿಸಿರುವುದನ್ನು ಆಸ್ವಾದಿಸುತ್ತಿದ್ದೇವೆ..
ಇಂಥ ಯುಗಾದಿ ಅನೇಕ ಬಂದಿವೆ ಗಿಡ ಬೆತ್ತಲಾಗಿ ಮತ್ತೆ ನಳನಳಿಸಿ ಹಸಿರಂಗಿ ಹೊದ್ದು ಸಂಭ್ರಮಿಸುತ್ತಿದೆ. ನಾವು ಮಾತ್ರ
ನಮ್ಮನ್ನು ಆವರಿಸಿರುವ ಜಡತೆ ತೆಗೆಯದೆ...ಚಿಗಿಯದೆ...ಹಿಗ್ಗದೆ ಇದ್ದೇವೆ.

ನಮಗೆ ಯಾವಾಗ ನಿಜವಾದ ಯುಗಾದಿ ಬರೋದು...
ವಿಕೃತಿ ಸಂವತ್ಸರದ ಶುಭಾಶಯಗಳು.....

Sunday, March 14, 2010

ಸದಾ ಕಾಡುವ ಹಾದು----೬



" ಯಾ ದಿಲ್ ಕಿ ಸುನೊ ದುನಿಯಾವಾಲೊಂ....."
ಈ ಹಾಡು ನನ್ನನ್ನು ಯಾವಾಗಲೂ ಕಾಡುತ್ತದೆ ಕಾರಣ ಇದೇ ಅಂತ ಹೇಳೋ ಹಾಗಿಲ್ಲ ಹಲವುಸಂಗತಿಗಳಿವೆ ಒಂದು ಉತ್ತಮ ಚಿತ್ರ---ಅನುಪಮಾ----ಹೆಸರಿಗೆ ತಕ್ಕಂತೆ ಉಪಮೆ ಮೀರಿದ್ದು. ಮನ ಕಲಕುವ
ಸಾಹಿತ್ಯ---ಕೈಫಿ ಅಜ್ಮಿ ದು----ಆಳ ಆದರೆ ಅಷ್ಟೇ ನಿರ್ವಿಕಾರವಾದ ದನಿಯ ಒಡೆಯ ಹೇಮಂತಕುಮಾರ್ ಗಾಯನ---
ಕುಂದಣವಿಟ್ಟಂತೆ ಹೇಮಂತದಾ ನದೇ ಸಂಗೀತ.

ಹೃಷಿಕೇಶ್ ಮುಖರ್ಜಿ ಹಿಂದಿಚಿತ್ರರಂಗದ ಸಂವೇದನಾಶೀಲ ನಿರ್ದೇಶಕ. ಹೆಣ್ಣು ಹಾಗೂ ಅವಳ ಭಾವ
ಲೋಕ ಅವರು ಚಿತ್ರಿಸಿದ ರೀತಿ ಅನನ್ಯ. ಅದು ಅನಾಡಿ ಚಿತ್ರದ ಮಿಸೆಸ್ ಡೀಸಾ ಆಗಿರಬಹುದು, ಅಥವಾ ಅನುಪಮ ಚಿತ್ರದ ಅನುಪಮಾಳ ಪಾತ್ರ ಆಗಿರಬಹುದು ಹೃಶಿದಾನ ಕುಸುರಿತನ ಹೊಳೆಯುತ್ತದೆ. ಸಂವೇದನೆ ಅವನ ಚಿತ್ರದ ಜೀವಾಳ ಆಗಿದ್ವು
೭೦ ರ ದಶಕದಲ್ಲಿ ಕಾಮೆಡಿ ಚಿತ್ರದತ್ತ ಅದ್ಯಾಕೆ ಹೊರಳಿದರೋ ಗೊತ್ತಿಲ್ಲ. ಅನುಪಮ ಒಂದು ನಿಷ್ಪಾಪ ಹುಡುಗಿಯ ಕತೆ ಅವಳನ್ನು
ಹೆತ್ತು ಅವಳ ತಾಯಿ ಪ್ರಾಣಬಿಡುತ್ತಾಳೆ. ಹೆಂಡತಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅಪ್ಪನಿಗೆ ಮಗಳನ್ನು ಕಂಡರೆ ಆಗೊಲ್ಲ...ಒಂಥರಾ
ಮುರುಟಿಕೊಂಡೇ ಬೆಳೆಯುತ್ತಾಳೆ ಅವಳ ಬಾಳಲ್ಲಿ ಯುವಕನ ಪ್ರವೇಶ ಅವಳ ನೋವಿಗೆ ಅವ ಸ್ಪಂದಿಸುತ್ತಾನೆ. ಕಪ್ಪು ಬಿಳುಪು ಚಿತ್ರ
ಆದರೂ ಮನದ ತುಂಬ ಅನೇಕ ಬಣ್ಣಗಳ ಚಿತ್ತಾರ ಬಿಡಿಸುತ್ತದೆ ಈ ಚಿತ್ರ. ಮುಖ್ಯಪಾತ್ರಗಳಲ್ಲಿ ಶರ್ಮಿಲಾ ಹಾಗೂ ಧರ್ಮೇಂದ್ರ
ಇದ್ದರು . ಧರಮ್ ಮಾಡಿದ ಚಿತ್ರಗಳಲ್ಲಿ ಅನುಪಮಾ ಪಾತ್ರದ ಬಗ್ಗೆ ಅವನಿಗೆ ಸ್ವತಃ ಅಭಿಮಾನವಿದೆ ಅವ ನೀಡಿದ ಸಂದರ್ಶನಗಳಲ್ಲಿ ಈ ಬಗ್ಗೆ ಅವನೇ ಹೇಳಿಕೊಂಡಿದ್ದಾನೆ...
ಇನ್ನು ಹಾಡಿನ ಬಗ್ಗೆ...ಈ ಹಾಡಿನ ತುಂಬ ಪ್ರಶ್ನೆಗಳಿವೆ ಉತ್ತರ ಬಯಸುತ್ತವೆ ಆದರೆ ಅವು ಒಂಥರಾ ನಿರುತ್ತರ ಪ್ರಶ್ನೆಗಳು. ಇಲ್ಲಿ
ಪ್ರತಿಭಟನೆ ಇದೆ ಸುತ್ತಲಿನ ಅನ್ಯಾಯದ ಬಗ್ಗೆ ಜಿಗುಪ್ಸೆ ಇದೆ ಆದರೆ ಹಾಡಿನಲ್ಲಿ ಆಕ್ರೋಶದ ಸುಳಿವಿಲ್ಲ ಬದಲು ತಣ್ಣಗೆಕೊರೆಯುವ
ಮಂಜುಗಡ್ಡೆ ಇದೆ ಇದು ನಮ್ಮ ಅಂತರಾಳವನ್ನು ಕೆದಕುತ್ತದೆ ...ಸಂಗೀತ ಸಂಯೋಜನೆಯೂ ಹಾಗೆ.. ಅದನ್ನು ಮೀರಿದ ನಿರಾಕಾರ ಹಾಗೂ ನಿರ್ವಿಕಾರದ ಧ್ವನಿ ಹೇಮಂತ್ ದಾನದು.ಈ ಹಾಡು ಅವನೊಬ್ಬನೇ ಹಾಡಬಹುದಾಗಿತ್ತು ಇದರಲ್ಲಡಗಿದ ನೋವಿಗೆ ಅವನ ಶೀತಲದನಿಯೇ ನ್ಯಾಯ ಕೊಟ್ಟಿತ್ತು ಅಂದರೆ ತಪ್ಪಲ್ಲ.
या दिल कि सुनॊ दुनियावालॊं
या मुझ्को अभी चुप रेहने दो
मै गम को खुशि कैसे केहदुं
जो केहते है उनको केहने दो...
ಸುತ್ತಲಿನ ಬಣ್ಣದ ಭ್ರಮೆಯ ಬದುಕಿನ ಬಗೆ ನೋಡಿ ನಾವೆಲ್ಲ ಖುಷಿಯಾಗಿದ್ದೇವೆ ಅಂತ ಅಂದುಕೊಂಡು ಜೀವನ ಸಾಗಿಸುತ್ತೇವೆ
ಮುಖವಾಡ ಹಾಕಿ ನಲಿಯುತ್ತೇವೆ..ಈ ಬದುಕಿನ ನಾಟಕದಲ್ಲಿ ಪಾತ್ರ ವಹಿಸುತ್ತೇವೆ...ಆದರೆ ನಿಜಕ್ಕೂ ನಾವು ಖುಷಿಯಾಗಿದ್ದೇವೆಯೇ ನಾವು ವಾಸ್ತವವನ್ನು ಕವಿ ಒಪ್ಪಿಕೊಂಡ ರೀತಿ ಒಪ್ಪಿಕೊಂಡಿಲ್ಲವೇಕೆ...?

ये फूल चमन मे कैसा खिला
मालि की नजर मे प्यार नही
हसते हुये क्याक्या देखलिया
अब बेहते है आंसु..बेहने दो....
ಹೂ ಮತ್ತು ಮಾಲಿ ನಡುವೆ ಪ್ರೀತಿ ಇರಬೇಕು ಹೂ ಅರಳಿ ನಗುವುದರ ಹಿಂದೆ ಮಾಲಿಯ ಪರಿಶ್ರಮಇದೆ ಆದರೆಕೆಲವು ಹೂ ಗಳು
ಆ ಪ್ರೀತಿಯಿಂದ ವಂಚಿತರಾಗಿಯೂ ಇವೆ.ಸುತ್ತಲಿನ ಜಗತ್ತನ್ನು ನಕ್ಕು ನೋಡಿ ಸಾಕಾಗಿ ಕವಿಯಕಣ್ಣಲ್ಲಿ ನೀರಿದೆ ಅದರಬಗ್ಗೆ ಅವನಿಗೆ
ನಿರ್ಲಿಪ್ತತೆಯೂ ಇದೆ....
एक खाब खुशि का दॆ खा नहि
देखा जॊ वो भूल गये..
मांगा हुवा तुम दे न सके..
जो तुमने दिया वो सेहने दो...
ಮೇಲಿನ ಸಾಲಿನಲ್ಲಿ ಅಡಗಿರುವ ನೋವು ಗಮನಿಸಿ. ಖುಷಿಯ ಕನಸು ಇಲ್ಲ ಹಾಗೆಯೇ ಆ ದೇವರ ಬಗ್ಗೆ ದೂರು ಇದೆ ಕೇಳಿದ್ದನ್ನು
ಕೊಡಲಾರದವ ಕೊಟ್ಟಿದ್ದನ್ನು ಸೈರಿಸುವ ಸಹನೆ ಕೊಡಲಿ.... ಈ ಸಾಲು ಎಲ್ಲಾ ಕಾಲಕ್ಕೂ ಪ್ರಸ್ತುತ ಅಲ್ಲವೆ....
क्या दर्द किसि का लॆगा कोइ...
इतना तो किसिमे दर्द नहि...
बेहते है आंसु और बहे..
अब झूठि तसल्लि रेहने दो..
ಇದಕ್ಕಿಂತ ನಿಷ್ಟುರಮಾತು ಇರಲಿಕ್ಕಿಲ್ಲ. ಮಂದಿಯ ದುಃಖವನ್ನು ಹಂಚಿಕೊಳ್ಳುವವರಿಲ್ಲ ಕಣ್ಣೀರು ಹರೆದರೆ ಒಣ ಸಮಾಧಾನದಿಂದ
ಏನೂ ಸಾಧ್ಯ ಇಲ್ಲ.

ಕ್ಕೈಫಿ ಆಜ್ಮಿ ಎಡಪಂಥೀಯ ನಿಲುವು ಹೊಂದಿದ್ದ. ಸಮಾಜ ಅದರ ಧೋರಣೆಯಬಗ್ಗೆಯೂ ಅವನಲ್ಲಿ ದ್ವೇಷ ಇತ್ತು.ಹಿಂದಿ ಚಿತ್ರರಂಗದಲ್ಲಿ ಸಿಕ್ಕ ಅಲ್ಪ ಅವಕಾಶದಲ್ಲಿಯೇ ಅವ ಮಿಂಚಿದ್ದ, ನೆನಪಿನಲ್ಲಿ ಉಳಿಯುವ ಹಾಡು ಕೊಟ್ಟಿದ್ದ. ಇದೇ ಅನುಪಮಾ ಚಿತ್ರದ
ಲತಾ ಹಾಡಿದ" ಕುಛ್ ದಿಲ್ ನೆ ಕಹಾ" ದ ಈ ಸಾಲು ಗಮನಿಸಿ.."कलियों से भी कोइ पूछता रॊति है या हसति है..."
ಹೇಮಂತಕುಮಾರ್ ಅಪರೂಪದ ಹಾಡು ನೀಡಿದ್ದಾನೆ. ದಾದಾ ಬರ್ಮನ್ ಇವನ ನಿರ್ಲಿಪ್ತ ದನಿಯ ಉಪಯೋಗ ಚೆನ್ನಾಗಿ ಮಾಡಿಕೊಂಡಿದ್ದ. ಹೇಮಂತ್ ದಾನದು ಅಪರೂಪದ ಧ್ವನಿ.