Saturday, May 30, 2009

ಸಂವಾದ

ಬೊಗಸೆ ಕಂಗಳವು ಉದಕ ಸುರಿಸಿ
ಕೇಳಿವೆ ಅದೇ ಪ್ರಶ್ನೆ
ನನ್ನಂತರಂಗದ ತಿದಿಯನೊತ್ತಿ ಕಾಡಿದ
ಪ್ರಶ್ನೆ......
"ವಂಶದ ಕುಡಿಯೋ ನಾನೆತ್ತಿ ತಂದ ಧೂಳೋ"
ಉತ್ತರ ತರವಲ್ಲ ಹೇಳಲು ಪದಗಳಿಲ್ಲ
ಭಾವನೆಗಳಿಗೆ ಭಾಷೆಯ ಬರಗಾಲವಿದೆ....
ಎರಡು ಜೀವ ತೇಯ್ದವು
ನಿನ್ನ ಬಾಳು ನಳನಳಿಸಲೆಂದು...
ಅವಳು ನಿನ್ನ ಬಿಟ್ಟು ಹೋದಳು..
ಅದಷ್ಟೇ ಅವಳಿಗೆ ಸಾಧ್ಯ ವಾಗಿದ್ದು...!
ಇವಳು ಬೇಡಿದ್ದಳು ಕೈ ಚಾಚಿ
ದೇವರು ಪತ್ರಿಸಿದ ನಿನ್ನ ನೇರವಾಗಿ..
ಇವಳ ವಿಳಾಸಕ್ಕೆ.....
ಅಂಗಳದಲ್ಲೇನೋ ಅವಳು ತಂದಳು..
ಇವಳು ನಿನ್ನ ಕೈ ಹಿಡಿದು ನಡೆಸಿದಳು.
ಕಪ್ಪು ರಾತ್ರಿಗಳಲಿ ಬೆಚ್ಚನೆ ಪ್ರೀತಿಗಾಗಿ
ನೀ ಹಪಾಪಿಸಿದಾಗ ಇವಳು ಪ್ರೀತಿ
ಉಡಿ ತುಂಬಿದಳು, ಉಣ್ಣಿಸಿದಳು...
ನಿನ್ನ ಮೊದಲ ನಗು ಅವಳು ಕಂಡಿದ್ದಳು
ನೀನೀಗ ಕಂಬನಿ ಮಿಡಿದಾಗ ಇವಳು ತೊಡೆದಳು.

ಹೇಳು ಕಂದ ಈಗ ಆ ಪ್ರಶ್ನೆ ತರವೇ
ಎರಡು ಜೀವ ಬಿತ್ತಿದ ಪ್ರೀತಿಯ ಸೆಲೆ ನೀನು..
ಬೇರು ಎಲ್ಲಿಯಾದರೇನು
ನನ್ನಂಗಳದ ನಗುವ ಹೂ ನೀನು....!

Sunday, May 24, 2009

ಹುಬ್ಬಳ್ಳಿ ಅಂದರೆ ಬಾಯಲ್ಲಿ ನೀರು

ಈ ಹಾಳು ಬೆಂಗಳೂರಿಗೆ ಬಂದು ಮೊನ್ನೆ ಜನೇವರಿಗೆ ಎರಡು ವರ್ಷ ಆದರೇನು ಹುಬ್ಬಳ್ಳಿ ಇನ್ನು ಮರೆತಿಲ್ಲ....

ಮುಖ್ಯವಾಗಿ ನೆನಪಾಗುವುದು ದುರಗದ ಬ್ಯೆಲಿನ ತಿನಿಸುಗಳು... ಆ ಗಿರ್ ಮಿಟ್ , ಆ ಮಿರ್ಚಿ , ಆ ಭಜಿ ಒಂದೇ ಎರಡೆ...
ಅದರಲ್ಲೂ ಆ ಮಾರ್ವಾಡಿ ಮಾಡುವ ಕಚೋರಿಯ ರುಚಿಯೋ ರುಚಿ.... ಹಳೆಯ ತಲೆಮಾರಿನವರು ಇನ್ನೂ ನೆನಪಿಡುವ
ಶಿವಲಾಲ್ ಅಮರಸಿಯ ಖಾರ,ಗುರೂನ ಅಂಗಡಿ ದೋಸೆ ಎಲ್ಲ ಈಗ ಇಲ್ಲ. ಆದರೇನು ಹೊರಗಿನಿಂದ ಬಂದವರು ತಂದ ಕಚೋರಿ,ಭೇಲ್, ಸಮೋಸಾ ಗಳು...... ಸಂಜೆ ಆದರೆ ಸಾಕು ಅಲ್ಲಿ ಹೊಸಲೋಕ ತೆಗೆದುಕೊಳ್ಳುತ್ತದೆ.
ಮುಗಿ ಬೇಳುವ ಗಿರಾಕಿಗಳು , ಕುಶಲ ಅಂಗಡಿಯವರು, ಸುತ್ತಲಿನ ಪರಿಸರ ಹೇಗೆ ಇರಲಿ ಬಾಯಲ್ಲಿ ನೀರು ಸೋರುವುದಂತೂ ನಿಜ ಅ ರುಚಿಗೆ.....
. ಇನ್ನು ಹೊಟೆಲ್ ಗಳ ವಿಶಯಕ್ಕೆ ಬಂದರೆ ಬಹಳ ಹಳೆಯ ಹೋಟೆಲ್ ಆದರೂ ಬ್ರಾಡ್ವೇದ ಕಾಮತ್ ಹೋಟೆಲ್ ತನ್ನ ರುಚಿ ಇನ್ನು
ಕಾಯ್ದುಕೊಂಡಿದೆ. ಇಲ್ಲಿ ಸಿಗುವ ಮಸಾಲೆ ದೋಸೆ ಯ ರುಚಿ ಅಪ್ರತಿಮ.....ಅಂತೆಯೇ ಮತ್ತೊಂದು ಹಳೆಯ ಹೊಟೆಲ್ ಕೋರ್ಟ್ ಆವರಣದ ಕ್ಯಾಂಟಿನಿನ ಪೂರಿ ಭಾಜಿ... ಈ ಭಾಜಿಗೆ ಒಂಥರಾ ಸಿಹಿ ಮಿಶ್ರಿತ ಖಾರದ ರುಚಿ ಖರೇ ಹೇಳಬೇಕು ಅಂದ್ರ ಯಾವ ಪಿಜ್ಜ , ಬರ್ಗರ್ ಈ ಭಾಜಿ ರುಚಿ ಮುಂದ ಮೂಲಿಸಮಾನ.....!
ಹುಬ್ಬಳ್ಳಿಯ ಸಾವಜಿ ಹೊಟೆಲ್ ನಲ್ಲಿ ಸಿಗುವ ಚಿಕನ್ ,ಖೈಮಾ,ಮಟನ್ ಗಳ ಗಮ್ಮತ್ತೇ ಬೇರೆ ಹಾಗೆಯೇ ಶೆಟ್ಟರ ಅಂಗಡಿಗಳ
ಮೀನಿನ ರುಚಿಯೂ ಮಜಾನೇ....
ಏನು ಮಾಡೋದು ಈ "ಬೆಂಗಾಡೆಂಬ ಬೆಂಗಳೂರಿನಲ್ಲಿ" ಮಸಾಲೆ ದೋಸೆಯೇ ಗತಿ ಇಲ್ಲಿ ಸಿಗುವ ಮುದ್ದೆ, ನಾಟಿಕೋಳಿಗೆ
ಹುಬ್ಬಳ್ಳಿಯ ದಮ್ ಇಲ್ಲ...ಈ ಮಾತಿಗೆ ಒಪ್ಪದವರು ಒಮ್ಮೆ ಹುಬ್ಬಳ್ಳಿಗೆ ಹೋಗಿ ಬರ್ರಿ ಆ ದುರ್ಗದ ಬೈಲಿನ್ಯಾಗ ಅಡ್ಡಾಡ್ರಿ..
ತಿನ್ರಿ ಆಮೇಲೆ ಹೋಲಸರಿ ಈ ಬೆಂಗಳೂರಿನ ಒಣ ತಿನಿಸು ಹಾಗೂ ಆ ಹುಬ್ಬಳ್ಳಿಯ ರಸಭರಿತ ತಿನಿಸುಗಳನ್ನು....!

Saturday, May 23, 2009

ರಾಧೆ ಹೇಳಿದ್ದು...

ಕ್ರಿಷ್ಣ ನೀ ಹೀಗೆ ಅಂತ ನಾ ತಿಳಿದಿರಲಿಲ್ಲ
ನಿನ್ನ ತಲೆಮೇಲೆ ಕಿರೀಟ ಇದೆ ಎಂದ ಮಾತ್ರಕ್ಕೆ
ರಾಧೆ ನಿನ್ನ ನೋಡುವ ರೀತಿ
ಬದಲಾಯಿಸಬೇಕೆಂದಿದೆಯೆ...?
ನಿನ್ನ ದೂತ ಉದ್ಧವ ಹೇಳುತ್ತಾನೆ
ಅವನ ಮರೆ ವ್ಯಾಮೋಹ ತ್ಯಜಿಸು ಎಂದು...!

ನಿಜ ಆ ಗಳಿಗೆಯಲ್ಲಿ ಕಾಲು ನಿನ್ನೆಡೆಗೆ
ಸೆಳೆದಿದ್ದವು...
ಬಳಸಿದ ಗಂಡನ ಕೈ ಕಿತ್ತೆಸೆದು ಬರುವ ಜೋರಿತ್ತು..
ದಾಹವದು ಬತ್ತದ ತೊರೆ ತೀರದ ತುಡಿತ
ಯಮುನೆಯ ಮರುಳು ನನ್ನ ಅನೇಕ ಬಳೆಗಳ
ಚೂರು ಜೀರ್ಣಿಸಿಕೊಂಡಿತ್ತು...
ಹಬ್ಬಿ ಹರಡಿದ ಮಲ್ಲಿಗೆ ಚಪ್ಪರ ಹೂ
ತೊನೆಯುತ್ತಿತ್ತು....

ಈಗ ಬರಿ ನಿನ್ನ ನೆನಪಿನ ಛಾಯೆ ಮಾತ್ರ
ಉಳಿದಿದೆ ಆದರೆ ಅದರ ಮೇಲೂ ನಿನ್ನ ಕಣ್ಣೇಕೆ...
ಹೇಳು ಕ್ರಿಷ್ಣ ಈ ವೇದಾಂತಿಯ ಸೋಗೇಕೆ...
ನಿನ್ನ ನೆನಪ ಸುರತದಲ್ಲೂ ವೈರಾಗ್ಯದ ಛಾಯೆ
ನುಸುಳಲೇಕೆ...
ನಿಜ ಹೇಳಲೇ... ನಿನ್ನ ನೆನಪು ಕೆಂಡಕ್ಕೆ ಬೂದಿ
ಮುಚ್ಚಿದಂತಿದೆ...ಅದ ಕಿತ್ತುಕೊಳ್ಳ ಬೇಡ
ಗಂಡ ಪಕ್ಕದಲ್ಲಿದ್ದರೂ ಅದು ಹಚ್ಚುವ
ಶಾಖದ ಮಜವೇ ಬೇರೆ.....

--------------------------------------------------------------------------------------------------------------------------------------------------

ನಾ ಮೊದಲೆ ಹೇಳಿ ಬಿಡುವೆ... ಮನು ಅವರು ಬರೆದ ಕತೆ ಇದಕ್ಕೆ ಪ್ರೇರಣೆ... ನಿಜವಾಗಿಯೂ ಆ ರಾಧೆ ಯ
ಭಾವನೆ ಹೇಗಿತ್ತು ನನಗೆ ಗೊತ್ತಿಲ್ಲ..... ಈ ರಾಧೆ ನನ್ನ ಕಲ್ಪನೆಯ ಕೂಸು ಮಾತ್ರ.

Sunday, May 17, 2009

ಚುನಾವಣೆ---ಪರಿಣಾಮ

ಪರಿಣಾಮ ಹೊರಬಂದಿದೆ ಮತದಾರ ಮತ್ತೊಮ್ಮೆ ತನ್ನ ಪ್ರಭುತ್ವ ತೋರಿದ್ದಾನೆ.. ಯಾವ ಜಾತಿ,ಧರ್ಮ,ರಾಮ
ಮಸೀದಿ ಅವನ ಮೇಲೆ ಪರಿಣಾಮ ಬೀರಿಲ್ಲ. ಅವನಿಗನಿಸಿದ್ದನ್ನು ನೇರವಾಗಿ ಹೇಳಿದ್ದಾನೆ ಅವನ ನೇರ ನುಡಿ ಹಲವ
ರನ್ನು ಬೆಚ್ಚಿ ಬೀಳಿಸಿದೆ...ಹಲವರಿಗೆ ಖುಷಿ ಕೆಲವರಿಗೆ ಕಳವಳ. ಈ ಪರಿಣಾಮ ಯಾಕೆ ಹೀಗೆ ಬಿಜೆಪಿ ತಲೆ ಕೆಡಿಸಿ
ಕೊಂಡಿದೆ ಆದರೇನು ಕೈ ಮೀರಿ ಹೋಗಿದೆ....

ನಾ ಇಲ್ಲಿ ಕೆಲ ವಿಷಯ ಚರ್ಚಿಸುತ್ತೇನೆ ನನ್ನ ನಿಲುವಲ್ಲಿ ಈ ಕೆಳಗಿನ ಸಂಗತಿಗಳು ನಿರ್ಣಾಯಕ ಎನ್ನಿಸಿದವು.

೧) ರಾಹುಲ್ ಗಾಂಧಿ:
-------------
ಈ ಹುಡುಗ ಬೆಳೆದು ನಿಂತ ಪರಿ ಹಲವು ಹಿರಿಯರ ನಿದ್ದೆ ಕೆಡಿಸಿದೆ. "ಈ ದೇಶದ ರಾಜಕೀಯ ಬದಲಾಯಿಸುವೆ " ಇದು ಅತ ಹೇಳಿದ ಮಾತು ಆದರೆ ಹೇಳಿದ್ದನ್ನು ಮಾಡಿ ತೋರಿಸಿದ್ದಾನೆ.
ಅವನ ಜತೆ ಒಂದು ದಂಡೆ ಇದೆ ದೇವ್ರಾ, ಪೈಲಟ್ ,ಸಿಂಧ್ಯಾ ಹೀಗೆ ...ಈ ಯುವಕರ ಕಡೆ ದೇಶ ಆಶೆಯಿಂದ
ನೋಡುತ್ತಿದೆ. ರಾಹುಲ್ ನ ಪ್ರಭಾವ ಉತ್ತರ ಪ್ರದೇಶದಲ್ಲಿ ನಿಖರವಾಗಿ ಗೋಚರ ವಾಗುತ್ತದೆ. ಜಾತಿ, ಮತ
ಹೀಗೆ ಹರಿದು ಹಂಚಿ ಹೋದ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದರೆ ಅದರ ಫಲ ರಾಹುಲ್ ಗೆ ಸೇರಬೆಕು.
ಜನರ ಜೊತೆ ಅವ ಬೆರೆಯುತ್ತಿದ್ದ ರೀತಿ ಬರೀ ನಾಟಕ ವಾಗಿರಲಿಲ್ಲ... ಅವರು ಅವನಿಗೆ ವೋಟೂ ಹಾಕಿದರು..!
ರಾಹುಲ್ ಪ್ರಭಾವ ಸೋತು ಸುಣ್ಣವಾದ ಕಾಂಗ್ರೆಸ್ ಗೆ ಸಂಜೀವಿನಿ ಯಾಯಿತು.

೨) ಬಿಜೆಪಿಯ ಪ್ರಚಾರ:
---------------------
ಆದ್ವಾನಿ ಹೇಳಿದ್ದರು. ನನಗೆ ಅತಿ ಆತ್ಮವಿಶ್ವಾಸ ತೋರುತ್ತಿದೆ...ಆದರೆ ಅ ಪಕ್ಷದ
ಕಾರ್ಯಕರ್ತರು ಕಿವುಡಾಗಿದ್ದರು. ಮನಮೋಹನ್ ಸಿಂಗ್ ರ ಬಗ್ಗೆ ಆಡಿದ ಮಾತು ಅತಿಯಾಯಿತು.
ಆದಾಯ ತೆರಿಗೆಯಲ್ಲಿ ವಿನಾಯಿತಿ, ಸ್ವಿಸ್ ಹಣ ಈ ದೇಶದ ಸಾಮಾನ್ಯರಿಗೆ ಅಪಥ್ಯ ವಾಯಿತು.ಯಾಕೋ ಈ ಸಲ ಬಿಜೆಪಿ ವೈಯುಕ್ತಿಕ ನಿಂದನೆ ಬಿಟ್ಟು ಹೊರಬರಲೇ ಇಲ್ಲ. ಕಸಬ್,ಅಫಜಲ್ ಗುರು ಬಗ್ಗೆ ತಳೆದ ಧೋರಣೆ
ಸಹ ಜನರಿಗೆ ಮುಟ್ಟಲಿಲ್ಲ.ಬಹುಷಃ ಎರಡನೇ ಪೀಳಿಗೆ ನಾಯಕರಿಲ್ಲದ ಕೊರತೆ ಆ ಪಕ್ಷಕ್ಕೆ ದೊಡ್ಡ ಏಟು ನೀಡಿದೆ. ಪ್ರಮೋದ್ ಮಹಾಜನ್ ಇಲ್ಲವಾದ ಮೇಲೆ ಆ ಜಾಗೆ ತುಂಬಲು ಪ್ರಯತ್ನ ಸಹ ಮಾಡಲಿಲ್ಲ...!

೩)ಲೆಫ್ಟ್ ಗೆ ರೈಟ್ :
----------------
ಈ ದೇಶಕ್ಕೆ ದೊಡ್ಡ ಪಿದುಗು ಈ ಕಮ್ಯುನಿಸಂ. ಅವರದೇ ಪರಿಧಿಯಲ್ಲಿ ಸುತ್ತುತ್ತ ತನ್ನ ಸುತ್ತಲೂ ಇರುವವರನ್ನೂ ಬೆಳೆಯಗೊಡದ ಇವರ ಧೋರಣೆಗೆ ಒಂದು ಅಂತ್ಯ ಹಾಡುವಲ್ಲಿ ದಿಟ್ಟ ಹೆಜ್ಜೆ ಇಟ್ಟಾಗಿದೆ.
ಇನ್ನು ಮಮತಾ ಕಮಾಲ್ ತೋರಿಸಿದರಾಯಿತು ಆ ಬಂಗಾಲದಿಂದ ಬಂಗಾಳಕೊಲ್ಲಿಗೆ ವರ್ಗಾವಣೆ ಆಗುತ್ತಾರೆ
ಕಮ್ಯುನಿಸ್ಟರು.

೪)ಯಾವ ಮುದ್ದಾ....?
-----------
ಈ ದೇಶದ ಮತದಾರ ಏನನ್ನು ನೋಡಿ ಮತಹಾಕಿದ. ಈ ಪ್ರಶ್ನೆಗೆ ಉತ್ತರ ಸುಲಭವಲ್ಲ. ಮುಖ್ಯವಾಗಿ
ಯುವಜನತೆಗೆ ಬೇಕಾಗಿದ್ದು ಕೈ ತುಂಬ ಕೆಲಸ, ನಾಳಿನ ಮಕ್ಕಳ ಭವಿಷ್ಯ. ಕಟ್ಟುಪಾಡು ಅವರಿಗೆ ಬೇಕಿಲ್ಲ
ಕಾಂಗ್ರೆಸಿಗರ ಅದರಲ್ಲೂ ಯುವ ನೇತಾರರ ಜೀವನಶೈಲಿ ಅವರಿಗೆ ಆಕರ್ಷಕವಾಗಿ ಕಂಡಿದೆ. ರಾಮ, ಮಸೀದಿ
ಅವರಿಗೆ ಈಗ ಆಕರ್ಷಣೆಯ ವಸ್ತುವಾಗಿ ಉಳಿದಿಲ್ಲ... ಈ ನಿಜ ಅರಿತ ಪಕ್ಷ ಮಾತ್ರ ಉಳಿಯಬಲ್ಲದು
ಬೆಳೆಯಬಲ್ಲದು.....!

ಈ ಚುನಾವಣೆ ನಮ್ಮ ರಾಜ್ಯದ ಮೇಲೆ ಯಾವ ಪರಿಣಾಮ ಬೀರಬಲ್ಲದು ಹತ್ತೊಂಬತ್ತು ಸಂಸದರು ವಿರೋದ ಸಾಲಿನಲ್ಲಿ ಕೂಡುವ ಅನಿವಾರ್ಯತೆ ಒಂದು ವೇಳೆ ಕಾಂಗ್ರೆಸ್ ತನ್ನ ಹಳೇ ಚಾಳಿ ಮುಂದುವರೆಸಿ ಈ ರಾಜ್ಯಕ್ಕೆ ಅನ್ಯಾಯ ಮುಂದುವರೆಸಿದ್ದೇ ಆದಲ್ಲಿ ಈ ರಾಜ್ಯದಿಂದ ಅದು ಹೆಸರಿಲ್ಲದೇ ಅಳಿಸಿಹೋಗುತ್ತದೆ
ಹಾಗೆಯೇ ಕಾಂಗ್ರೆಸ್ ನಿಂದ ಆರಿಸಿಹೋದ ಆರೂ ಜನ ಈ ಕರ್ನಾಟಕಕ್ಕೆ ನ್ಯಾಯವಾಗಿ ಸಿಗುವ ಸವಲತ್ತುಗಳಿಗಾಗಿ ಹೊಡೆದಾಡಬೇಕು...!

Tuesday, May 12, 2009

ಶಿವಕಾಶಿಯ ಹುಡುಗರು

೧) ಪಟಾಕಿಯ ಅಬ್ಬರದ ಗುಡುಗಲ್ಲಿ
ಶಿವಕಾಶಿಯ ಹುಡುಗರ ನರಳಿಕೆ ಇದೆ
ಸಪ್ಪಳದ ನಡುವೆ ಅಳುವ
ದನಿ ಕೇಳುತ್ತಿಲ್ಲ ಯಾರಿಗೂ...!


೨) ತನ್ನ ನಗು,ಬಾಲ್ಯ ತೇದು ಮದ್ದು
ಹೊಸೆದಿದ್ದಾನೆ ಆ ಹುಡುಗ
ಬೆಂಕಿ ತಾಗಿ ಮತಾಪು ಸಿಡಿದಾಗ
ನಕ್ಕಿದ್ದಾನೆ ಆವಿಯಾಗಿ......!


೩) ಕಣ್ಣ ತುಂಬ ಕನಸು ತುಂಬಿದ
ಬಾಲ್ಯ ಸಖ ಸಾವಿನ ಜತೆ
ಸರಸ ವಾಡುತ್ತಿದ್ದಾನೆ ನಿರ‍ಂತರ
ನಮ್ಮ ನಿಮ್ಮ ಪಟಾಕಿ ಢಮ್ ಎನ್ನಲು.....!

Monday, May 11, 2009

ಕಲ್ಪನಾ ವಿಲಾಸ

ನನ್ನ ಕಲ್ಪನೆ ಹರಿಬಿಡುವನಿದ್ದೇನೆ ನಾನು ಜ್ಯೋತಿಷಿ ಅಲ್ಲ ಆದರೂ ಮೇ ೧೭ ರಂದು ಪತ್ರಿಕೆಗಳ ಹೆಡ್ ಲೈನ್ ಏನಿರುತ್ತೆ
ಗೊತ್ತಿಲ್ಲ ಕಲ್ಪನೆ ಸಹ ಮಾಡಲಾಗುತ್ತಿಲ್ಲ ಏಕೆಂದರೆ ರಾಜಕೀಯ ಹಾಗೆ ತಾನೇ...! ಇರಲಿ ನಾನು ನಮ್ಮ ನೇತಾರರ ಪ್ರತಿಕ್ರಿಯೆ ಹೇಗಿರಬಹುದು ನಾ ಸಂದರ್ಶನ ಮಾಡಿದೆ ಅವರ ಹೇಳಿಕೆ ಹೀಗಿವೆ....!


ದೇವೇಗೌಡ್ರು : ಈ ಸಲ ಹೆಂಡ ,ಜಾತಿ ,ಹಣದ ಕಾರುಭಾರು ಗೆದ್ದಿದೆ ನಾ ಸೋತಿಲ್ಲ ಈ ಗೌಡ ಸೋಲು ಒಪ್ಪಿಕೊಳ್ಳುವುದಿಲ್ಲ.....

ಯಡಿಯೂರಪ್ಪ: ಅಪ್ಪ ಮಗನ ಪಕ್ಷ ಸೋತು ಧೂಳಿಪಟ ವಾಗಿದೆ ಜನತೆ ಬೆಂಬಲ ಕೊಟ್ಟಿದ್ದಾರೆ ಅಧಿಕಾರಿಗಳಿಗೆ
ಈಗಾಗಲೆ ಆದೇಶ ನೀಡಿದ್ದೇನೆ ವಿಜಯೋತ್ಸವ ಪ್ರತಿ ಹಳ್ಳಿಗೂ ಮುಟ್ಟಬೇಕು....!

ಕುಮಾರಸ್ವಾಮಿ: ನಾ ರಾಜೀನಾಮೆ ಕೊಡುತ್ತಿರುವೆ ಅಪ್ಪನ ಜತೆಗೆ ಸಂಸತ್ತು ಸೇರುವ ಆಸೆ ಇತ್ತು ಅವರಿಲ್ಲದ
ಸಂಸತ್ತೂ ನನಗೂ ಬೇಡ....!

ಲಾಲೂ: ಈ ಸಲ ಸೋಲಲು ಕಾರಣ ಸಿಂಪಲ್ ನಿತೀಶ್ ಕುಮಾರ್ ಕೊನೆ ಕ್ಷಣ ಈ ಸುಶೀಲ್ ಮೋದಿಬಿಟ್ಟು
ನರೇಂದ್ರ ಮೋದಿ ಜತೆ ಕೈ ಗೂಡಿಸಿದ್ದು....ಬಿಹಾರದ ಜನತೆ ಕೃತಘ್ನರು....!

ಅಡ್ವಾನಿ: ಜನತೆ ಮತ್ತೆ ಕೈ ಹಿಡಿದಿದ್ದಾರೆ ಆದರೆ ಪೂರ್ತಿಯಾಗಲ್ಲ ಇದೇ ಕಳವಳ....!

ಸೋನಿಯಾ: ಬಿಜೆಪಿಗೆ ಜನ ಬೆಂಬಲ ಕೊಟ್ಟಿಲ್ಲ ಸರ್ಕಾರ ರಚಿಸುವ ನಮ್ಮ ಪ್ರಯತ್ನ ನಿಂತಿಲ್ಲ.....!

ರಾಹುಲ್ : ಕೈ ಕತ್ತರಿಸುವವರ ಕೈ ನಮ್ಮದಲ್ಲ ಆದರೂ ಜನ ಕೈ ಕೊಟ್ಟರಲ್ಲ.....!

ಕಾರಟ್ : ಮಮತಾರಿಂದ ನಮಗೆ ಸೋಲಾಗಿದೆ ಎಂಬುದು ಸರಿ ಅಲ್ಲ ಜನ ಬದಲಾವಣೆ ಬೇಡುತ್ತಿದ್ದಾರೆ.....!

ಅನೇಕ ಜನ ಅಭಿಪ್ರಾಯ ಕೊಡದೇ ಸತಾಯಿಸಿದರು...ಕೆಲವರು ನನ್ನ ನೋಡಿ ಓಡಿಹೋದರು
ನಮ್ಮ ಪಾಸ್ವಾನ್ , ಅಮರ್ ಸಿಂಗ್ ಮುಂತಾದವರು ನನಗೆ ಹೊಡೆಯೋಕ್ಕೆ ಬಂದರು....!